ಬಳ್ಳಿಗಾವಿಯ ಕೇದಾರೇಶ್ವರ ದೇವಸ್ಥಾನ

ಶಿವಮೊಗ್ಗ ಜಿಲ್ಲೆಯ, ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವ ಗ್ರಾಮವೇ ಪುರಾಣ ಪ್ರಸಿದ್ದ, ಐತಿಹಾಸಿಕ ಹಿನ್ನೆಲೆಯುಳ್ಳ ಬಳ್ಳಿಗಾವಿ. ಇಲ್ಲಿ ಕೇದಾರೇಶ್ವರ, ತ್ರಿಪುರಾಂತಕೇಶ್ವರ, ಸೋಮೇಶ್ವರ, ನೀಲಕಂಠೇಶ್ವರ, ಅಲ್ಲಮಪ್ರಭು ದೇವಾಲಯ, ಪಂಚಲಿಂಗೇಶ್ವರ, ಭೇರುಂಡೇಶ್ವರ ದೇವಾಲಯಗಳಲ್ಲಿ ಕಾಣಬಹುದಾಗಿದೆ. ಈ ಪುಣ್ಯ ಕ್ಷೇತ್ರದ ಮಹಿಮೆಯ ಕುರಿತು ಸೌಮ್ಯ ಸನತ್ ಅವರು ‘ಕ್ಷೇತ್ರದೊಳ್ ಸಾನಿಧ್ಯದೊಳ್’ ಅಂಕಣದಲ್ಲಿ ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

“ಹಸಿರಿನ ನಾಡು”, “ಗಂಧದ ಬೀಡು” ಎಂತೆಲ್ಲ ಕರೆಯಿಸಿಕೊಳ್ಳುವ ನಮ್ಮ ಕರ್ನಾಟಕದಲ್ಲಿ ಶಿಲ್ಪ ಕಲೆಯ ನೈಪುಣ್ಯತೆಯನ್ನು ಎತ್ತಿ ತೋರಿಸುವಂತಹ ಉದಾಹರಣೆಗಳಿಗೇನೂ ಕಮ್ಮಿ ಇಲ್ಲ. ಹಾಗೆ ಕರ್ನಾಟಕದ ಹೊಯ್ಸಳ ದೇವಾಲಯಗಳನ್ನು ಹುಡುಕುತ್ತಾ ಸಾಗಿದಾಗ ಸಿಗುವುದೇ ಅಪರೂಪದ ಕಲೆಗಳ ನಾಡು, ಅಲ್ಲಮಪ್ರಭು ಮತ್ತು ನಾಟ್ಯರಾಣಿ ಶಾಂತಲೆಯ ತವರೂರಾದ “ಬಳ್ಳಿಗಾವಿ”. ಶಿವಮೊಗ್ಗ ಜಿಲ್ಲೆಯ, ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವ ಗ್ರಾಮವೇ ಪುರಾಣಪ್ರಸಿದ್ದ, ಐತಿಹಾಸಿಕ ಹಿನ್ನೆಲೆಯುಳ್ಳ ಬಳ್ಳಿಗಾವಿ.

ಬಳ್ಳಿಗಾವಿಯಲ್ಲಿ ಅನೇಕ ಹೊಯ್ಸಳ ದೇವಸ್ಥಾನಗಳಿದ್ದು “ಶಿಲ್ಪಕಲೆಯ ಅಗಾಧತೆಯನ್ನು ಕೇದಾರೇಶ್ವರ, ತ್ರಿಪುರಾಂತಕೇಶ್ವರ, ಸೋಮೇಶ್ವರ, ನೀಲಕಂಠೇಶ್ವರ, ಅಲ್ಲಮಪ್ರಭು ದೇವಾಲಯ, ಪಂಚಲಿಂಗೇಶ್ವರ, ಭೇರುಂಡೇಶ್ವರ ದೇವಾಲಯಗಳಲ್ಲಿ ಕಾಣಬಹುದಾಗಿದೆ.

ಬಳ್ಳಿಗಾವಿಯ ಇತಿಹಾಸ

ದಕ್ಷಿಣ ಕೇದಾರವೆಂದೇ ಪ್ರಸಿದ್ಧ ವಾಗಿರುವ ಈ ಸ್ಥಳ ವಿಷ್ಣುವಿನ ಐದನೇ ಅವತಾರವಾದ ವಾಮನಾವತಾರದ ತ್ರಿವಿಕ್ರಮನಾಗಿ ಬೆಳೆದು ವಾಮನನಿಂದ ಪಾತಾಳಕ್ಕೆ ದೂಡಲ್ಪಟ್ಟ ಬಲಿಚಕ್ರವತ್ರಿಯ ರಾಜಧಾನಿಯಾಗಿದ್ದ ಜಾಗವಿದು ಎಂದು ಹೇಳುತ್ತಾರೆ. ಆದಕಾರಣ ಇದನ್ನು ಬಲಿಪುರವೆಂದು, ಅನಾಧಿರಾಜಧಾನಿಯೆಂದೂ, ಮಾತೃನಗರವೆಂದೂ ಕರೆಯಲಾಗುತ್ತಿತ್ತಂತೆ. ದಕ್ಷಿಣ ಕೇದಾರವೆಂದೂ ಪ್ರಸಿದ್ಧವಾಗಿದ್ದ ಬಳ್ಳಿಗಾವೆ ಕಾಲಾಂತರದಲ್ಲಿ ಬಳ್ಳಿಗಾವೆ, ಬೆಳಗಾಮಿ, ಬಳ್ಳಿಗಾಮೆ, ಬಳ್ಳಿಗ್ರಾಮವೆಂದೂ ಕರೆಯಲ್ಪಡುತ್ತಿತ್ತು ಎಂಬ ಉಲ್ಲೇಖಗಳಿವೆ. ಆರಂಭದಲ್ಲಿ ಚುಟು-ಶಾತವಾಹನರ ಆಳ್ವಿಕೆಗೂ, ನಂತರ ಬನವಾಸಿ ಕದಂಬರ ಆಳ್ವಿಕೆಗೂ, ನಂತರದಲ್ಲಿ ಬಾದಾಮಿ ಚಾಲುಕ್ಯರ, ಮಾಳಖೇಡದ ರಾಷ್ಟ್ರಕೂಟರ, ಕಲ್ಯಾಣಿ ಚಾಲುಕ್ಯರ, ಕಲಚೂರ್ಯರ, ದೇವರಿಗಿ ಯಾದವರ, ದೋರಸಮುದ್ರದ ಹೊಯ್ಸಳರ ಮತ್ತು ಕೊನೆಯಲ್ಲಿ ವಿಜಯನಗರದ ಆಳ್ವಿಕೆಗೂ ಒಳಪಟ್ಟಿತ್ತು ಎಂದು ತಿಳಿದುಬರುತ್ತದೆ.

ಕೇದಾರೇಶ್ವರ ದೇವಸ್ಥಾನ :

“ಬಳ್ಳಿಗಾವಿ” ಗ್ರಾಮದ ಕೆರೆದಂಡೆಯ ಮೇಲಿರುವ ಅದ್ಭುತ ವಾಸ್ತುಶಿಲ್ಪದ ಕಲಾವೈಭವದ ಶಿವನಿಗೆ ಸಮರ್ಪಿತವಾದ ದೇವಾಲಯವೇ “ಶ್ರೀ ಕೇದಾರೇಶ್ವರ ದೇವಾಲಯ.”

ಹೊಯ್ಸಳ-ಚಾಲುಕ್ಯ ಶಿಲ್ಪಕಲೆಗಳ ಸಂಗಮದಲ್ಲಿರುವ ಈ ದೇಗುಲ ಈ ಮಾದರಿಯಲ್ಲಿ ಅತೀ ಪ್ರಾಚೀನವಾದದ್ದು ಎಂದರೂ ಖಚಿತವಾಗಿ ಎಂದು ನಿರ್ಮಿತವಾಗಿದ್ದು ಎಂಬ ದಾಖಲೆಗಳಿಲ್ಲ. ಹನ್ನೆರಡನೆಯ ಶತಮಾನದ ವಿಷ್ಣುವರ್ಧನ ಮಹಾರಾಜನ ಕಾಲಕ್ಕಿಂತಲೂ ಹಳೆಯದೇ ಎಂದು ಹೇಳಲು ಈ ದೇಗುಲದಲ್ಲಿರುವ ಹೊಯ್ಸಳ ಶಿಲ್ಪವನ್ನು ಹೊಯ್ಸಳರ ರಾಜ ವಿನಯಾದಿತ್ಯ(೧೦೪೭-೧೦೯೮) ಶಾಲಿವಾಹನ ಶಕೆ ೧೦೬೮ರಲ್ಲಿ ಸೇರಿಸಿದನೆಂದು ತಿಳಿಸುವ ಉಲ್ಲೇಖಗಳು ನೆರವಾಗುತ್ತವೆ. ಹೊಯ್ಸಳರ ಪ್ರಸಿದ್ದ ರಾಜ ವಿಷ್ಣುವರ್ಧನನ ಆಳ್ವಿಕೆ ಶುರುವಾದದ್ದು ೧೧೦೮ರಲ್ಲಿ. ಮಧ್ಯ ಬಂದವರೆಂದರೆ ಎರೆಯಂಗ (೧೦೯೮-೧೧೦೨), ವೀರಬಲ್ಲಾಳ ೧(೧೧೦೨-೧೧೦೮).

ಹೊಯ್ಸಳರಿಂದ ನಿರ್ಮಿತವಾದ ಕೇದಾರೇಶ್ವರ ದೇವಾಲಯ ತ್ರಿಕೂಟಾಚಲ ಮಾದರಿಯಲ್ಲಿದೆ. ಪೂರ್ವ-ಪಶ್ಚಿಮವಾಗಿ ನಿರ್ಮಿತವಾಗಿರುವ ದೇಗುಲದಲ್ಲಿ ಪಶ್ಚಿಮದ ಗರ್ಭಗೃಹಕ್ಕೆ ಒಂದು ಸುಖನಾಸಿ ಇದೆ. ಇನ್ನೆರಡು ಗರ್ಭಗೃಹಗಳಿಗೂ ಅರ್ಧಮಂಟಪಗಳಿದ್ದು ಅವೆರಡೂ ಮಧ್ಯದಲ್ಲಿರುವ ಆರು ಕಂಬಗಳ ಮಹಾಮಂಟಪವನ್ನು ಸೇರುತ್ತವೆ. ಪಶ್ಚಿಮ ಮತ್ತು ದಕ್ಷಿಣ ಗರ್ಭಗೃಹಗಳಲ್ಲಿ ಶಿವಲಿಂಗಗಳಿದ್ದು ಉತ್ತರದಲ್ಲಿ ವಿಷ್ಣುವಿನ ಮೂರ್ತಿಯಿದೆ. ದಕ್ಷಿಣದ ಲಿಂಗವನ್ನು ಬ್ರಹ್ಮನೆಂದೂ ಕರೆಯುವುದರಿಂದ ಇದನ್ನು ತ್ರಿಮೂರ್ತಿಗಳ ಸಂಗಮಕ್ಷೇತ್ರವೆಂದೂ ನಂಬುತ್ತಾರೆ.

ಈ ದೇಗುಲದ ಹೊರಭಾಗದಲ್ಲಿ ಆಕರ್ಷಕ ವಿಮಾನಗೋಪುರವಿದೆ. ಇಲ್ಲಿರುವ ಕೆತ್ತನೆಗಳಲ್ಲಿ ತಾಂಡವೇಶ್ವರ, ನರಸಿಂಹ, ಭೈರವ, ವರಾಹ, ಲಕ್ಷ್ಮಿ ಮುಂತಾದ ಕೆತ್ತನೆಗಳಿವೆ. ಈ ದೇಗುಲದ ಒಳಚಾವಣಿಗಳಲ್ಲಿರುವ ನವಗ್ರಹಗಳ ಕೆತ್ತನೆ, ನಂದಿಮಂಟಪದಲ್ಲಿರುವ ಅಲಂಕೃತ ನಂದಿ, ತಕ್ಷಕ ಮುಂತಾದ ನಾಗಗಳ ಕೆತ್ತನೆಗಳು, ದೀಪಗಳನ್ನು ಇಡಲೆಂದೇ ಮಾಡಿರುವ ಬೇರೆ ಹೊಯ್ಸಳ ದೇಗುಲಗಳಲ್ಲಿ ಕಾಣದ ರಚನೆಗಳು ಬಹಳ ಆಕರ್ಷಕವಾಗಿವೆ.

ತ್ರಿಕೂಟ (ಮೂರು ಗೋಪುರ) ಶೈಲಿಯಲ್ಲಿರುವ ಈ ದೇವಾಲಯದ ಗರ್ಭಗುಡಿಯಲ್ಲಿ ಪೂಜಿಸಲ್ಪಡುವ ದೇವರು ಶ್ರೀ ಕೇದಾರೇಶ್ವರನೇ ಆದರೂ ಈ ದೇವಾಲಯದ ಪ್ರಮುಖ ಆಕರ್ಷಣೆ ಸುಮಾರು ಎಂಟು ಅಡಿ ಎತ್ತರದ ನಂದಿ ವಿಗ್ರಹ. ಇಲ್ಲಿನ ಇನ್ನೊಂದು ಆಕರ್ಷಣೆ ಗೋಪುರದಲ್ಲಿ ಹೊಯ್ಸಳರ ರಾಷ್ಟ್ರ ಲಾಂಛನವಾಗಿದ್ದ ಸಳ ಮಹಾರಾಜ ಹುಲಿಯೊಂದಿಗೆ ಸೆಣಸುತ್ತಿರುವ ಪ್ರತಿಕೃತಿ ಕೆತ್ತಿರುವುದು ಎಂತಹವರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಆಕರ್ಷಕವಾಗಿ ನವಿರಾಗಿ ಕೆತ್ತಿದ ನಲವತ್ತಕ್ಕಿಂತಲೂ ಹೆಚ್ಚು ಕಲ್ಲಿನ ಕಂಬಗಳಿಂದ ಕೂಡಿದ ದೇವಾಲಯದ ಸಭಾಂಗಣವಂತೂ ರಮಣೀಯ.

ಪಾಂಡವರು ಇಲ್ಲಿಗೆ ಬಂದು ಪಂಚಲಿಂಗವನ್ನು ಸ್ಥಾಪಿಸಿ ಶಿವಾರಾಧನೆಯನ್ನು ಮಾಡಿಹೋಗಿರುವ ಬಗ್ಗೆ ಪುರಾಣಗಳಲ್ಲಿ ಉಲ್ಲೇಖ ಇರುವುದು ಈ ಗ್ರಾಮದ ಬಗ್ಗೆ ಇನ್ನಷ್ಟು ಪೂಜ್ಯ ಭಾವನೆ ಮೂಡಿಸುತ್ತದೆ. ಇಂತಹ ಪವಿತ್ರ ಭೂಮಿಯಲ್ಲಿ ನಿರ್ಮಾಣಗೊಂಡಿರುವುದೇ ಶ್ರೀ ಕೇದಾರೇಶ್ವರ ದೇವಾಲಯ.

ಕೇದಾರೇಶ್ವರ ದೇವಾಲಯದ ಪಕ್ಕದಲ್ಲಿರುವುದೇ ಅಲ್ಲಮ ಪ್ರಭು ದೇವಾಲಯ. ಬಳ್ಳಿಗಾವೆ ಅಲ್ಲಮ ಪ್ರಭು ಜನಿಸಿದ ಸ್ಥಳ. ಈ ಗುಡಿಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದರೂ, ಪ್ರಖ್ಯಾತ ವಚನಕಾರ ಅಲ್ಲಮ ಪ್ರಭು ತನ್ನ ಹೆಚ್ಚಿನ ಸಮಯವನ್ನು ಇದೇ ಗುಡಿಯಲ್ಲಿ ಕಳೆಯುತ್ತಿದ್ದರಿಂದ ಆತನ ಹೆಸರಿಂದಲೇ ಈ ಗುಡಿಯನ್ನು ಗುರುತಿಸಲಾಗುತ್ತದೆ. ಅಲ್ಲಮ ಪ್ರಭು ದೇವಾಲಯ ಎಂದು ಕರೆಯುವ ಮೊದಲು, ಗೋಪುರರಹಿತ ತ್ರಿಕೂಟಾಚಲ ರಚನೆಯುಳ್ಳ ಈ ದೇವಾಲಯವನ್ನು ನಗರೇಶ್ವರ ದೇವಾಲಯವೆಂದು ಕರೆಯಲಾಗುತ್ತಿತ್ತು ಮತ್ತು ಬಳ್ಳಿಗಾವೆಯ ಮೂಲ ದೇವಸ್ಥಾನವೂ ಇದೇ. ಪಟ್ಟದಕಲ್ಲಿನ ವ್ಯಾಪಾರಿ ಸಮುದಾಯದವರಾದ ವೀರ ಬಣಂಜರು ೧೨ನೇ ಶತಮಾನದಲ್ಲಿ ನಗರೇಶ್ವರ ದೇವಾಲಯವನ್ನು ನಿರ್ಮಿಸಿದರು ಎಂದು ಶಾಸನಗಳು ತಿಳಿಸುತ್ತವೆ. ಪುಟ್ಟದಾಗಿರುವ ಈ ದೇಗುಲ ಮುಖಮಂಟಪ, ನವರಂಗ ಮತ್ತು ೩ ಗರ್ಭಗುಡಿಗಳನ್ನು ಹೊಂದಿದೆ.

ಮ್ಯೂಸಿಯಂ:

ದೇಗುಲದ ಪಕ್ಕದಲ್ಲೇ ಇರುವ ಮ್ಯೂಸಿಯಂನಲ್ಲಿ ಅನೇಕ ಪುರಾತನ ಶಿಲ್ಪಗಳನ್ನು ಸಂರಕ್ಷಿಸಿ ಇಡಲಾಗಿದೆ. ಅವುಗಳಲ್ಲಿ ಪ್ರಮುಖ ಶಿಲ್ಪಗಳೆಂದರೆ ವಿಷ್ಣು, ನಾಗ, ವೀರಭದ್ರ, ಮಹಿಷಾಸುರ ಮರ್ಧಿನಿ, ಸಪ್ತ ಮಾತೃಕೆಯರು, ಸರಸ್ವತಿ, ಕಾರ್ತಿಕೇಯ, ತ್ರಿಮೂರ್ತಿ, ಗಣೇಶ, ಉಮಾ ಮಹೇಶ್ವರ ಮುಂತಾದವುಗಳು. ಇಲ್ಲಿ ಇದುವರೆಗಿನ ಹೊಯ್ಸಳ ಶಿಲ್ಪಗಳಲ್ಲಿ ಕಾಣದಿದ್ದ ವಿಶೇಷವಾದ ಚತುರ್ಮುಖ ಶಿವಲಿಂಗವಿದೆ. ಜೈನ ತೀರ್ಥಂಕರರ ಸಮಾಧಿಯ ಮೇಲೆ ಇರುವ ನಿಷಿಧಿ ಎಂಬ ಕಲ್ಲುಗಳು, ವರುಣ, ಬೌದ್ಧ ಶಿಲ್ಪಗಳು, ಜಾಲಂಧ್ರ , ನಂದಿ, ಮಾಸ್ತಿಗಲ್ಲು, ಸತಿಗಲ್ಲು, ವೀರಗಲ್ಲುಗಳೇ ಮೊದಲಾದ ಶಿಲ್ಪಗಳನ್ನೂ ಇಲ್ಲಿ ಕಾಣಬಹುದು. ಮ್ಯೂಸಿಯಂನ ಹೊರಭಾಗದಲ್ಲೂ ಬಳ್ಳಿಗಾವೆ ಎಂಬ ಹೆಸರಿರುವ ಅನೇಕ ಶಾಸನಗಳನ್ನು ಕಾಣಬಹುದು.

ಬಳ್ಳಿಗಾಮೆಯು ಬೌದ್ಧಧರ್ಮ, ಜೈನಧರ್ಮ, ಹಿಂದೂಧರ್ಮ ಮತ್ತು ತಾಂತ್ರಿಕ ಶೈವಧರ್ಮದ ಸಂಗಮಸ್ಥಾನವಾಗಿರುವುದಕ್ಕೆ ಸಾಕ್ಷಿಯಾಗಿ ವೀತರಾಗ ಬುದ್ಧನ ದೇವಾಲಯ, ತಾರಾ ಭಗವತಿಯ ದೇವಾಲಯ, ಜೈನ ಬಸದಿಗಳು ಮತ್ತು ಶಿವ, ವಿಷ್ಣು ಮುಂತಾದವರ ದೇವಸ್ಥಾನಗಳು ಈ ಊರಿನಲ್ಲಿ ಒಂದೇ ಕಾಲದಲ್ಲಿ ನೆಲೆ ಪಡೆದಿದ್ದವು. ಇದು ಧಾರ್ಮಿಕ ಸಮನ್ವಯದ ಉತ್ತಮ ನಿದರ್ಶನ. ಕೇದಾರೇಶ್ವರ ದೇವಸ್ಥಾನದ ಪಕ್ಕದಲ್ಲಿ ಇಂದಿಗೂ ಇರುವ ಕೋಡಿ ಮಠವು, ಪ್ರಬಲ ತಾಂತ್ರಿಕಪಂಥವಾದ ಕಾಳಾಮುಖರ ನೆಲೆ. ಬಳ್ಳಿಗಾವೆಯು ಬಹಳ ಮುಖ್ಯವಾದ ಶಿಕ್ಷಣಕೇಂದ್ರವಾಗಿತ್ತು. ಲೌಕಿಕ ವಿದ್ಯೆ ಮತ್ತು ಆಧ್ಯಾತ್ಮವಿದ್ಯೆಗಳೆರಡನ್ನೂ ಇಲ್ಲಿ ಕಲಿಸುತ್ತಿದ್ದರು. ವಿಭಿನ್ನ ಧರ್ಮಗಳಿಗೆ ಸೇರಿದ ಜ್ಞಾನದ ಆಕರಗಳನ್ನು ವಸ್ತುನಿಷ್ಠವಾಗಿ ಅಧ್ಯಯನ ಮಾಡುವ ಕೆಲಸವು ಇಲ್ಲಿ ನಡೆಯುತ್ತಿತ್ತು. ಇದು ಕಲಾತ್ಕವಾದ ಚಟುವಟಿಕೆಗಳ ಕೇಂದ್ರವೂ ಹೌದು. ಭಾರತದ ಮೂಲೆಮೂಲೆಗಳಿಂದ ಬರುತ್ತಿದ್ದ ಪ್ರವಾಸಿಗಳಿಗೆ ಅವಶ್ಯಕವಾದ ಸೌಲಭ್ಯಗಳು ಇಲ್ಲಿ ದೊರೆಯುತ್ತಿದ್ದವು ಎಂಬ ಉಲ್ಲೇಖವಿದೆ. ಇಲ್ಲಿ ಒಂದು ಆಸ್ಪತ್ರೆಯೂ ಇತ್ತೆನ್ನುವುದಕ್ಕೆ ಪುರಾವೆಗಳು ಸಿಕ್ಕಿದೆಯೆನ್ನಾಲಾಗಿದೆ. ಅದಲ್ಲದೆ ಬನವಾಸಿಯ ಸಮೀಪದಲ್ಲಿರುವ ಬಳ್ಳಿಗಾವೆಯು ಧರ್ಮ, ವಾಣಿಜ್ಯ, ಶಿಕ್ಷಣ, ಕಲೆ ಮತ್ತು ವಾಸ್ತುಶಿಲ್ಪಗಳ ದೃಷ್ಟಿಯಿಂದ ಗಮನೀಯವಾದ ಸ್ಥಳವೆಂಬುದು ಗಮನಾರ್ಹ.

ತಲುಪುವ ಬಗೆ :

ಸಾಗರ ಮತ್ತು ಶಿವಮೊಗ್ಗದಿಂದ ಶಿರಾಳಕೊಪ್ಪಕ್ಕೆ ನೇರ ಬಸ್ಸುಗಳಿವೆ. ಅಲ್ಲಿಂದ ಬಳ್ಳಿಗಾವಿಗೆ ೨.೩ಕಿ.ಮೀ. ಅಲ್ಲಿಂದ ಆನವಟ್ಟಿಗೆ ಹೋಗುವ ಬಸ್ಸುಗಳೆಲ್ಲ ಬಳ್ಳಿಗಾವಿಯ ಮುಖಾಂತರ ಹೋಗುತ್ತವೆ. ಸಾಗರದಿಂದ ಬಳ್ಳಿಗಾವಿಗೆ ಹೋಗುವ ನೇರ ಬಸ್ಸಿದೆ. ಹಾವೇರಿಗೆ ಹೋಗುವ ಈ ಬಸ್ಸು ಬೆಳಗ್ಗೆ ೮:೦೫ ಕ್ಕೆ ಸಾಗರದಿಂದ ಹೊರಡುತ್ತದೆ. ತಲಾ ೫೦ ರೂ ಬೆಲೆ. ೯:೧೫ ಕ್ಕೆ ಶಿಕಾರಿಪುರ ತಲುಪುವ ಇದು ೯:೩೫ ಕ್ಕೆ ಶಿಕಾರಿಪುರ ಬಿಟ್ಟು ೯:೪೫ ರ ಹೊತ್ತಿಗೆ ಬಳ್ಳಿಗಾವಿ ತಲುಪುತ್ತದೆ. ಪುರಾತತ್ವ ಇಲಾಖೆಗೆ ಸೇರಿರುವ ಕೇದಾರೇಶ್ವರ ದೇಗುಲ ಬೆಳಗ್ಗೆ ಆರರಿಂದ ಸಂಜೆ ಆರರವರೆಗೆ ತೆರೆದಿದ್ದು ಇದರ ಪಕ್ಕದಲ್ಲಿರುವ ಪುರಾತತ್ವ ಇಲಾಖೆಯ ಮ್ಯೂಸಿಯಂ ಅನ್ನೂ ಸಂದರ್ಶಿಸಬಹುದು.

ಶೈವರ ಪ್ರಮುಖ ಹಬ್ಬಗಳಲ್ಲಿ ಒಂದಾದ ಶಿವರಾತ್ರಿಯ ದಿನ ಈ ದೇವಾಲಯದಲ್ಲಿ ವಿಶೇಷ ಪೂಜೆ,ಅಭಿಷೇಕ ಇರುತ್ತದೆ. ಭಕ್ತಾದಿಗಳು ರಾತ್ರಿಯಿಡೀ ಇಲ್ಲಿಯೇ ತಂಗಿದ್ದು ಪೂಜೆಯಲ್ಲಿ ಪಾಲ್ಗೊಂಡು ಅಹೋರಾತ್ರಿ ಜಾಗರಣೆ ಮಾಡಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಸಮೀಪದ ಊರುಗಳ ಭಕ್ತರು ಬರಿಗಾಲಲ್ಲಿ ಕಾಲ್ನಡಿಗೆಯಲ್ಲಿ ಬಂದು ಕೇದಾರೇಶ್ವರನಿಗೆ ಹಣ್ಣುಕಾಯಿಯ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ.

 

‘ಕ್ಷೇತ್ರದೊಳ್ ಸಾನಿಧ್ಯದೊಳ್’ ಅಂಕಣದ ಹಿಂದಿನ ಸಂಚಿಕೆಗಳು :


  • ಸೌಮ್ಯ ಸನತ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW