ಜೀವನದ ಜಂಜಾಟದ ನಡುವೆ ಒಂದಷ್ಟು ಹಾಸ್ಯ ಇದ್ರೆ ಮನಸ್ಸಿಗೆ ಹಾಗು ಆರೋಗ್ಯಕ್ಕೆ ಒಳ್ಳೆಯದು. ಹಾಸ್ಯ ಜೀವನದಲ್ಲಿ ಇಲ್ಲದೆ ಹೋದರೆ ಜೀವನ ಒಂದು ರೀತಿ ಮರುಭೂಮಿಯಂತೆ ಅನಿಸೋದು ಸಹಜ. ತಮ್ಮ ಲೇಖನದಲ್ಲಿ ಹಾಸ್ಯಕ್ಕೆ ಹೆಚ್ಚು ಒತ್ತು ಕೊಟ್ಟು ಓದುಗರ ಗಮನ ಸೆಳೆಯುತ್ತಿರುವ ಉದಯೋನ್ಮುಖಿ ಹಾಸ್ಯ ಬರಹಗಾರ್ತಿ ಸುಮ ಉಮೇಶ್ ಅವರು ತಮ್ಮ ಮನದಾಳದ ಮಾತನ್ನು ಕವಿ ನಾರಾಯಣಸ್ವಾಮಿ ಅವರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಇತ್ತೀಚೆಗೆ ಕನ್ನಡ ಸಾಹಿತ್ಯಲೋಕದಲ್ಲಿ ಹಾಸ್ಯಬರಹಗಳು ಬಹಳಷ್ಟು ಮರೆಯಾಗುತ್ತಿವೆ. ಹಿಂದಿನ ಕಾಲದಲ್ಲಿ ಹಲವಾರು ಲೇಖಕರು ಹಾಸ್ಯದ ಬರಹಗಳನ್ನು ಬರೆದು ಓದುಗರ ಮನಸ್ಸಿಗೆ ಒಂದಷ್ಟು ಖುಷಿಯನ್ನು ಕೊಡುತ್ತಿದ್ದರು. ಅದರೆ ಇತ್ತೀಚಿನ ದಿನಮಾನಗಳಲ್ಲಿ ಹಾಸ್ಯಬರಹ ಕಣ್ಮರೆಯಾಗುತ್ತಿದೆ ಎಂಬುದು ನನ್ನ ವೈಯಕ್ತಿಕ ಭಾವನೆ.
ಹಾಸ್ಯ ಮನುಷ್ಯನಿಗೆ ಒಂದಷ್ಟು ಖುಷಿಯನ್ನು ಕೊಡುತ್ತದೆ ಮತ್ತು ಕೆಲವೊಂದು ಕ್ಷಣಗಳಾದರೂ ನೋವು ಮರೆಸುವ ಔಷಧಿಯಾಗಿ ಮನುಷ್ಯನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ಮುಖಪುಟದಲ್ಲಿ ಹಲವಾರು ಹಾಸ್ಯಬರಹಗಳನ್ನು ಬರೆಯುತ್ತಾ, ತಾನು ಬರೆದ ಸುಬ್ಬ-ಸುಬ್ಬಿ ಯೆಂಬ ಹಾಸ್ಯದ ನಾಟಕವನ್ನು ಒಂದೆರಡು ವೇದಿಕೆಗಗಳಲ್ಲೂ ಪ್ರದಶ೯ನ ನೀಡಿ, ಅನೇಕ ಓದುಗರಿಗೆ ಚಿರಪರಿಚಿತವಾಗಿರುವ ಹೆಸರೇ ಸುಮ ಉಮೇಶ್.
ಶ್ರೀಮತಿ ಸುಮಾರವರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಬೊಮ್ಮೇನಹಳ್ಳಿಯಲ್ಲಿ. ಇವರ ತಂದೆ ತಾಯಿ ಶ್ರೀ ಶ್ರೀರಂಗಸ್ವಾಮಿ ಶ್ರೀಮತಿ ರುಕ್ಮಿಣಿಯವರು. ತಂದೆಯವರ ಸ್ವಂತ ಜಿಲ್ಲೆ ಕೂಡ ಚಿತ್ರದುರ್ಗವಾದರೂ ಉದ್ಯೋಗ ನಿಮಿತ್ತ ಐವತ್ತು ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿದ್ದರು.

ಸುಮಾರವರ ಸಂಪೂರ್ಣ ಶಿಕ್ಷಣ ಇಂಗ್ಲಿಷ್ ಮಾಧ್ಯಮದಲ್ಲಿ ನಡೆಯಿತು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಬೆಂಗಳೂರಿನ ಜಯನಗರದ ಜೆಪಿಎ ಶಾಲೆಯಲ್ಲಿ ಮುಗಿಸಿ, ಪದವಿಪೂರ್ವ ಮತ್ತು ಪದವಿಯನ್ನು ಜಯನಗರದ ಭಾರತ್ ಎಜುಕೇಷನ್ ಸೊಸೈಟಿಯಲ್ಲಿ ಬಿ ಕಾಂ ಪದವಿಯನ್ನು ಮುಗಿಸಿದರು.
ಸಾವಿರ ಒಂಬೈನೂರ ತೊಂಬತೈದರಲ್ಲಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಮುಖ್ಯ ಅಭಿಯಂತರರಾಗಿದ್ದ ಶ್ರೀಯುತ ಉಮೇಶ್ ಬಿ.ಪಿ.ಯವರನ್ನು ವಿವಾಹವಾಗಿ ಗೃಹಿಣಿಯಾಗಿ ಜೀವನ ಪಯಣವನ್ನು ಆರಂಭಿಸಿದರು.
ಇವರು ಓದಿದ್ದು ಆಂಗ್ಲ ಮಾಧ್ಯಮವಾದರೂ ಕೂಡ ಕನ್ನಡದ ಬರಹಗಳನ್ನು ಚಿಕ್ಕಂದಿನಿಂದ ವಿಪರೀತ ಓದುವ ಗೀಳನ್ನು ಬೆಳಸಿಕೊಂಡಿದ್ದರು. ಇವರ ಮನೆಯಲ್ಲಿ ಸದಾ ಕನ್ನಡಮಯ ವಾತಾವರಣ. ಮಾಸಿಕ, ಪಾಕ್ಷಿಕ, ಸಾಪ್ತಾಹಿಕ ಹೀಗೆ ಆಗ ಚಾಲ್ತಿಯಲ್ಲಿದ್ದ ಸುಮಾರು ಎಲ್ಲಾ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದರು. ಶಾಲೆಯಲ್ಲಿ ಕನ್ನಡದ ಪಠ್ಯಪುಸ್ತಕದಲ್ಲಿದ್ದ ಪಾಠಗಳನ್ನು, ನಾಟಕಗಳನ್ನು , ಹಳೆಗನ್ನಡ ಕವನಗಳನ್ನು ರಸವತ್ತಾಗಿ ವರ್ಣಿಸುತ್ತಿದ್ದ ಕನ್ನಡ ಶಿಕ್ಷಕಿಯರಾದ ಶ್ರೀಮತಿ ಸುಧಾಮಣಿ ಮೇಡಂ ಮತ್ತು ಶ್ರೀಮತಿ ಉಷಾ ಮೇಡಂರವರು ಇಂದಿನ ನನ್ನ ಬರಹಕ್ಕೆ ಪ್ರೇರಣೆಯೆಂದು ಸದಾ ಅವರನ್ನು ನೆನೆಯುತ್ತಾರೆ.
ಬೆಂಗಳೂರಿನ ಬಿ ಇ ಎಸ್ ಕಾಲೇಜಿನ ಬಿಕಾಂ ವಿದ್ಯಾರ್ಥಿಯಾಗಿದ್ದಾಗ, ಆಗಲೇ ಚಿತ್ರನಿರ್ದೇಶಕರಾಗಿ ಮನ್ನಣೆ ಪಡೆದಿದ್ದ ಶ್ರೀಯುತ ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಚಿತ್ರನಟ ಶ್ರೀಯುತ ಮಾನಪ್ಪನವರು (ಮಾನು) ಇವರ ಕನ್ನಡದ ಪ್ರಾಧ್ಯಾಪಕರಾಗಿದ್ದರು. ಅವರ ಪಾಠಗಳನ್ನು ಕೇಳುತ್ತಾ , ಕನ್ನಡ ಪರೀಕ್ಷೆಗಳಲ್ಲಿ ಅತ್ಯುತ್ತಮವಾಗಿ ಬರೆದು ನಾಗತಿಹಳ್ಳಿ ಮೇಷ್ಟ್ರಿಂದ ಸೈ ಎನಿಸಿಕೊಂಡ ಭಾಗ್ಯಶಾಲಿ ಸುಮಾ ಉಮೇಶ್ ರವರು.

ಮನೆಯಲ್ಲಿ ಸಮಯವನ್ನು ಕಳೆಯಲು ಸುಮಾ ಉಮೇಶ್ ರವರು ಅಯ್ದಕೊಂಡ ವೃತ್ತಿ ಮನೆಯಲ್ಲಿ ಮಕ್ಕಳಿಗೆ ಮನೆ ಪಾಠ ಹೇಳಿಕೊಡುವುದು. ಮನೆಪಾಠಕ್ಕೆ ಬರುತ್ತಿದ್ದ ಮಕ್ಕಳಿಗೆ ಶಾಲೆಯ ಚಟುವಟಿಕೆಗಳಿಗೆ ಬೇಕಾದ ಭಾಷಣ ಬರೆದು ಕೊಡುತ್ತಾ, ಪ್ರಬಂಧ ರಚನೆಯಲ್ಲಿ ಅತೀವ ಆಸಕ್ತಿ ತೋರುತ್ತಿದ್ದ ಇವರಿಗೆ ಹೊಸ ಪ್ರಪಂಚ ಕಂಡಿದ್ದು ಫೇಸ್ಬುಕ್ ನ ಸಾಹಿತ್ಯದ ಗುಂಪುಗಳಿಗೆ ಸೇರಿದಾಗ. ಇಲ್ಲಿ ಬರಹಗಾರಳಾಗಿ ಸೇರಿಕೊಂಡು, ನಂತರ ನಿವಾ೯ಹಕಿಯಾಗಿ ಬಹಳಷ್ಟು ಬರಹಗಾರರ ಬರಹಕ್ಕೆ ಪ್ರೇರಣೆಯಾದರು.
ಚಿಕ್ಕ ಕವನ, ಲೇಖನ, ಸಣ್ಣ ಕಥೆ ಬರೆಯಲು ಪ್ರಾರಂಭಿಸಿ, ನಂತರ ಧಾರಾವಾಹಿ ಬರೆದು ಅಪಾರ ಮೆಚ್ಚುಗೆ ಗಳಿಸಿದರು. ಸುಬ್ಬ- ಸುಬ್ಬಿ ಎಂಬ ನಾಟಕವನ್ನು ಬರೆದು ನಿರ್ದೇಶನ ಮಾಡಿ ವೇದಿಕೆಯಲ್ಲಿ ಪ್ರದರ್ಶಿಸಿ ಭೇಷ್ ಎನಿಸಿಕೊಂಡಿದ್ದಾರೆ. ಈಗಲೂ ಕೂಡ ಹಲವಾರು ಸಾಹಿತ್ಯದ ಗ್ರೂಪ್ ಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ , ನಿವಾ೯ಹಕಿಯಾಗಿ ಕಾಯ೯ ನಿವ೯ಹಿಸುತ್ತಿದ್ದಾರೆ.
ಕಳೆದ ವರುಷ “ಬಾಂಧವ್ಯ”ವೆಂಬ ಚೊಚ್ಚಲ ಕಾದಂಬರಿಯನ್ನು ಬರೆದು ಲೋಕಾರ್ಪಣೆ ಮಾಡಿದ್ದಾರೆ. ಈ ಕೃತಿಯು ಹಲವಾರು ಓದುಗರ ಮನ ಗೆದ್ದಿದೆ
ಇವರ ಏಕಮಾತ್ರ ಪುತ್ರರತ್ನ ಚಿ. ಬಿ. ಯು. ಸುಹಾಸ್ ಅಮೇರಿಕದ Seattle ನ ಸಂಸ್ಥೆಯಲ್ಲಿ ಕನ್ಸಲ್ಟಿಂಗ್ ಇಂಜಿನೀಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಕೃತಿಗಳನ್ನು ಕನ್ನಡಮ್ಮನ ಮಡಿಲು ಸೇರಿಸಿಲು ಯೋಜನೆ ಹಾಕಿಕೊಂಡು ಸಿದ್ಧತೆಯಲ್ಲಿ ತೊಡಗಿರುವ ಶ್ರೀಮತಿ ಸುಮಾ ಉಮೇಶ್ ರವರಿಗೆ ಪತ್ರಿಕೆಯ ಪರವಾಗಿ ಮತ್ತು ವೈಯಕ್ತಿಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಾ, ಇನ್ನಷ್ಟು ಕೃತಿಗಳನ್ನು ಹೊರತರಲಿ, ಹಾಸ್ಯ ಬರಹಗಳು ಹೆಚ್ಚಾಗಲಿ ಮತ್ತು ಬರೆವ ಬರಹಗಳು ಮಹಿಳೆಯರ ಪರವಾದ ಕಾವ್ಯ ಸಂವೇದನೆಯನು ಚಿಂತಿಸುವ ಕೃತಿಗಳಾಗಲಿ, ಕನ್ನಡ ಸಾಹಿತ್ಯದ ಬರವಣಿಗೆಯಿಂದ ಅವರಿಗೆ ಗೌರವ ಪ್ರಶಸ್ತಿ ಪುರಸ್ಕಾರಗಳು ಸಿಗಲಿ ಎಂದು ಆಶಿಸುವೆ ಶುಭವಾಗಲಿ.
ಹಿಂದಿನ ಸಂಚಿಕೆಗಳು :
- ನಾರಾಯಣಸ್ವಾಮಿ .(ನಾನಿ) – ವಕೀಲರು, ಲೇಖಕರು , ಬಂಡಹಟ್ಟಿ ಮಾಸ್ತಿ ಮಾಲೂರು ತಾಲ್ಲೂಕು
