ಲೇಖಕಿ ಅಪರ್ಣ ಲಹರಿ ಅವರ ‘ಲಾಂದ್ರ’ ಎರಡನೇ ಕಾದಂಬರಿಯಾಗಿದ್ದು, ಪುಸ್ತಕಗಾರ ಅವರ ಪ್ರಕಾಶನದ ಮೊದಲ ಪುಸ್ತಕವಾಗಿದೆ. ಈ ಕೃತಿಯ ಕುರಿತು ವಿಧಿ ಹೇಮಂತ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….
ಪುಸ್ತಕ : ಲಾಂದ್ರ
ಲೇಖಕರು : ಅಪರ್ಣ ಲಹರಿ
ಪ್ರಕಾಶಕರು : ಪುಸ್ತಕಗಾರ
ಪುಟಗಳು : 218
ಬೆಲೆ : 250/-
ರೋಚಕ ಕಥೆಯ ಜೊತೆಗೆ ಪ್ರೀತಿಯ ಎಳೆ ತುಂಬಿರುವ ಕಾದಂಬರಿ. ನಮ್ಮನ್ನು ಹಿಂದಿನ ದಶಕಗಳಿಗೆ ಎಳೆದೊಯ್ಯುವುದರ ಜೊತೆಗೆ ನಮ್ಮ ಹಳ್ಳಿಯ ಜನರ ಜೀವನ, ದೈನಂದಿನ ಬದುಕನ್ನು ತೆರೆದಿಡುತ್ತದೆ.
ಲಾಂದ್ರ ಕರೆಂಟು ಬರುವ ಮೊದಲು ಎಲ್ಲ ಜೀವನದ ಒಂದು ಅಂಗವಾಗಿಯೇ ಹೋಗಿದ್ದ ವಸ್ತು. ಆದ್ರೆ ಈಗ ಈಗಿನ ಕಾಲದ ಕಥೆಗೆ ಈ ಹೆಸರಿಡಲು ಕಾರಣ ಕಥೆಯಲ್ಲಿರುವ ಹಳ್ಳಿಯ ವಾತಾವರಣ.

ಕಥೆ ಶುರುವಾಗುವ ಮೊದಲು ಪ್ರೀತಿಯ ಎಳೆಯಿಂದ ಶುರುವಾದರೆ ಹೋಗುತ್ತಾ, ಹೋಗುತ್ತಾ ಒಂದು ಗ್ರಿಲ್ಲರ್ ಸಸ್ಪೆನ್ಸ್ ಕಥೆಗೆ ಎಳೆದುಕೊಂಡು ಹೋಗುತ್ತದೆ. ನಮ್ಮ ನಡುವೆಯೇ ನರಭಕ್ಷಕ ಜನರಿದ್ದು, ಜನರೇ ಜನರನ್ನು ಕೊಂದು ತಿಂದು ಬದುಕುವ ಒಂದು ಸಮುದಾಯದ ನಡುವೆ ಊರಿನ ಜನರ ಬದುಕು ಇಲ್ಲಿ ಎಳೆ ಎಳೆಯಾಗಿ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ರೋಚಕತೆ ನಮ್ಮನ್ನು ಬಿಡದಂತೆ ಓದಿಸಿಕೊಂಡು ಮುಂದೆ ಸಾಗುತ್ತದೆ. ಇಲ್ಲಿ ಎರಡು ಜೋಡಿಗಳನ್ನು ನಾವು ಕಥಾ ನಾಯಕ ಹಾಗೂ ನಾಯಕಿ ಎಂದು ಕರೆಯಬಹುದು.
ಹಳ್ಳಿಗೆ ಹೋಗಲು ಇಷ್ಟವಿರದೇ ಅಮ್ಮನ ಬಲವಂತಕ್ಕೆ, ಒತ್ತಾಯಕ್ಕೆ ಕಟ್ಟು ಬಿದ್ದು ಸ್ನೇಹಿತ ಸಿದ್ಧಾಂತ್ ನನ್ನು ಕರೆದುಕೊಂಡು ಹಳ್ಳಿಗೆ ಹೋಗುತ್ತಾನೆ ಆದಿತ್ಯ. ಸಣ್ಣ ವಯಸ್ಸಿನಿಂದ ಅತ್ತೆ ಮಗ ಆದಿತ್ಯನನ್ನು ಮನದಲ್ಲೇ ಪ್ರೀತಿಸುತ್ತಾ ಆರಾಧಿಸುತ್ತಾ ಇರುವ ಅವನ ಮಾವನ ಮಗಳು ಅರುಂಧತಿಯ ಪ್ರೀತಿಯ ಎಳೆ ಓದುವಾಗ ಅವಳ ಮುಗ್ಧತೆ ಬಹಳ ಇಷ್ಟವಾಗುತ್ತದೆ. ಆದರೆ ಇಲ್ಲಿ ಆದಿ ಎರಡು ದಿನಗಳ ದಿಢೀರ್ ಬದಲಾವಣೆ ಓದುಗನಿಗೆ, ಸ್ವಲ್ಪ ಕಥೆಗೆ ವಿಪರೀತ ವೇಗ ನೀಡಿತು ಅನಿಸುತ್ತದೆ.

ಆದರೆ ಸಿದ್ದಾಂತ್ ಹಾಗೂ ಪಾರಿಜಾತ ಜೋಡಿಯ ಪ್ರೀತಿಯ ಪರಿ ಚೆನ್ನಾಗಿದೆ. ಪಾರಿಜಾತಳ ಹಿಂದಿನ ಕಥೆ, ಅವಳ ವನವಾಸದ ಜೀವನ, ಊರಿನ ಜನರಿಗಾಗಿ ಅವಳ ತ್ಯಾಗ, ಊರಿನ ಇತಿಹಾಸ ಎಲ್ಲವೂ ಕಥೆಯ ಒಳಗುಟ್ಟುಗಳು.
ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋದಂತ ಪುಸ್ತಕವಿದು. ಕಥೆಯ ಮೇಲೆ ಇನ್ನು ಸ್ವಲ್ಪ ವರ್ಕ್ ಮಾಡಬಹುದಿತ್ತು ಎನಿಸುತ್ತಿದೆ ಬಿಟ್ಟರೆ, ಕಥೆ ಚೆನ್ನಾಗಿ ಮೂಡಿಬಂದಿದೆ. ಹೊಸದೊಂದು ವಿಷಯ ಹಾಗೂ ಹೊಸ ಆಯಾಮದಿಂದ ಓದಿದರೆ ಖಂಡಿತ ಇಷ್ಟವಾಗುತ್ತದೆ.
- ವಿಧಿ ಹೇಮಂತ್
