ಡಾ.ಸಲೀಮ್ ನದಾಫ ಅವರು ವೃತ್ತಿಯಲ್ಲಿ ವೈದ್ಯರು. ಬಾಲ್ಯದಿಂದಲೂ ಸಾಹಸಿಗರು ಮತ್ತು ಅಷ್ಟೇ ಹಾಸ್ಯ ಪ್ರವೃತ್ತಿಯ ಅತ್ಯುತ್ತಮ ಕಥೆಗಾರರು. ಅವರ ‘ಲಡಾಖ್ ಡೈರಿ’ ಕುರಿತು ಡಾ.ಲಕ್ಷ್ಮಣ ವಿ ಎ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಲಡಾಖ್ ಡೈರಿ, ಬುಲೆಟ್ ವೈದ್ಯನ ಲಡಾಖ್ ಕತೆಗಳು
ಲೇಖಕರು : ಡಾ.ಸಲೀಮ್ ನದಾಫ
ಬೆಲೆ : 250 ರೂಪಾಯಿ.
ಪ್ರಕಾರ : ಪ್ರವಾಸ ಕಥನ
*ಹಿಮ ಕಂದಕದ ಒಂದು ಡಿಟೇಲ್ಡ್ ಪೋಸ್ಟ್ ಮಾರ್ಟಮ್*
ಈ ಪುಸ್ತಕಕ್ಕೆ ಮುನ್ನುಡಿ ಬರೆಯಲು ಕುಳಿತ ಈ ಕ್ಷಣದಲ್ಲಿ ಹಿಮಾಲಯದ ಉತ್ತರಕಾಶಿಯಲ್ಲಿ ಕಳೆದ ಹದಿನೈದು ದಿನಗಳಿಂದ ನಿರ್ಮಾಣ ಹಂತದ ಸುರಂಗ ಕುಸಿದ ಕಾರಣಕ್ಕೆ ಅದರೊಳಗೆ ಸಿಲುಕಿದ ನಲವತ್ತೊಂದು ಕಾರ್ಮಿಕರು ಬದುಕಿ ಉಳಿದು ಬಂದ ಗಳಿಗೆಯಲ್ಲಿ ಇಡೀ ಜಗತ್ತು ಒಂದು ದೀರ್ಘ ನಿಟ್ಟುಸಿರುಬಿಟ್ಟು ನಿರಾಳವಾಗಿದೆ. ಉತ್ತರ ಕಾಶಿ ಹಿಮಾಲಯದ ಒಂದು ಪುಟ್ಟ ಮಡಿಲು.ಜಗತ್ತಿನ ಅತಿ ಎತ್ತರದ ಹಿಮಾಲಯ ಮೇಲು ನೋಟಕ್ಕೆ ಹೊರ ಜಗತ್ತಿಗೆ ಮೈ ತುಂಬ ಐಸು ಹೊದ್ದ ತಣ್ಣನೆಯ ಕಡ್ಡೀ ಐಸ್ಕ್ರೀಮಿನಂತೆ ಗೋಚರಿಸಿದರೂ ಅದರ ಒಡಲಿನೊಳಗೊಂದು ಹಾಲಾಹಲವಿದೆ. ಅದರ ರಸ ತಳದಲ್ಲಿ ಕುದಿಯುವ ಲಾವಾ ಇದೆ ಕ್ಷಣ ಕ್ಷಣಕ್ಕೆ ಕದಲುವ ಭೂ ಪದರುಗಳ ಟೆಕ್ಟಾನಿಕ್ ಪ್ಲೇಟುಗಳು ಯಾವುದೇ ಕ್ಷಣದಲ್ಲಾದರೂ ಚಲನೆಗೊಂಡು ಕಂಪಿಸಿ ಈ ಕ್ಷಣಕ್ಕೆ ಇದ್ದ ಭೂ ಪದರಿನ ಚಿತ್ರಣವನ್ನೇ ಬದಲಿಸಿ ಇಡೀ ವಾತಾವರಣವನ್ನೇ ಅಲ್ಲೋಲ ಕಲ್ಲೋಲಗೊಳಿಸಿ ನುಂಗಿ ನೀರು ಕುಡಿದು ಮತ್ತೊಂದು ಕ್ಷಣದಲ್ಲಿ ಏನೇನೋ ನಡದೇ ಇಲ್ಲ ಎನ್ನುವ ಶಾಲೆಯ ಪುಂಡ ಬಾಲಕನಂತೆ ಸದ್ದಿಲ್ಲದೆ ಇರಬಲ್ಲದು. ಹೀಗಾಗಿ ಈ ಹಿಮ ಹೊತ್ತ ಎತ್ತರದ ಗಿರಿಯೊಂದು ರುದ್ರವೂ ಹೌದು ರಮಣೀಯವೂ ಹೌದು – ಥೇಟ್ ಶಿವನ ರುದ್ರ ತಾಂಡವ ನೃತ್ಯ ದಂತೆ.
ಜಗತ್ತಿನ ಬಹುತೇಕ ಸಾಹಸಿಗಳಿಗೆ ಜೀವನದಲ್ಲಿ ಒಮ್ಮೆಯಾದರೂ – ಈ ಎತ್ತರದ ಹಿಮಾಲಯ ಹತ್ತಿ ಅದರ ಮೇಲೆ ತಮ್ಮ ಪಾದವೂರಿ ತಮ್ಮ ದೇಶದ ಧ್ವಜ ನೆಟ್ಟು ತಮ್ಮ ಯಕಶ್ಚಿತ್
ಬದುಕನ್ನು ಸಾರ್ಥಕಗೊಳಿಸಿಕೊಳ್ಳುವ ಅದಮ್ಯ ಆಸೆ ಇದ್ದೇ ಇರುತ್ತದೆ ಎಂದು ಡಾ.ಸಲೀಂ ರ ಲಡಾಖ್ ಡೈರಿ ಓದಿದಾಗ ಮನದಟ್ಟಾಯಿತು.

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ.ಅದೊಂದು ಬದುಕಿನ ಪಯಣ.ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗೆದ್ದು ಬೀಗುವ ಉಮೇದಿ.ಮೈ ನಸ್ ಡಿಗ್ರಿಯ ಮರಗುಡುವ ಚಳಿಯಲ್ಲಿ ,ಏದುಸಿರಿನ ಏರು ದಾರಿ ಇಳಿಯುವಲ್ಲಿ ಜೀವ ಕೈಯೊಳಗೆ ಬಿಗಿ ಹಿಡಿದು ಹೀಗೆ ಹತ್ತಿ ಇಳಿಯುವ ಆಟದಲ್ಲಿ ಹಿಮಗಿರಿಯೊಂದು ಬದುಕಿನ ಅದ್ಭುತ ರೂಪಕವಾಗಿ ನಿಲ್ಲುತ್ತದೆ.
ಡಾ.ಸಲೀಂ ನನ್ನ ಸಹಪಾಠಿ ಮತ್ತು ವೈದ್ಯ. ಬಾಲ್ಯದಿಂದಲೂ ಇವನು ಸಾಹಸಿ ಪುಂಡ ಮತ್ತು ಅಷ್ಟೇ ಹಾಸ್ಯ ಪ್ರವೃತ್ತಿಯ ಅತ್ಯುತ್ತಮ ಕಥೆಗಾರ, ಸಾಹಿತಿ. ಸವಾಲುಗಳೆಂದರೆ ಇವನಿಗೆ ಅಚ್ಚುಮೆಚ್ಚು, ಹೀಗಾಗಿ ನನಗೆ ಯಾವಾಗಲೂ ಇವನೆಡೆಗೊಂದು ಮೆಚ್ಚುಗೆ ಮತ್ತು ಸಣ್ಣ ಹೊಟ್ಟೆ ಕಿಚ್ಚು.ಈ ಸಾಹಸ ಪ್ರವೃತ್ತಿ ಈ ನಡುವಸಿನಲ್ಲೂ ಮುಂದುವರೆಸಿಕೊಂಡು ನಡೆದುದರ ಬಗ್ಗೆ ಹೆಮ್ಮೆ ಮತ್ತು ಅಪಾರ ಬೆರಗು ಇದೆ.
ಡಾ.ಸಲೀಂ ‘ಲಡಾಕ್ ಡೈರಿ’ ಯಲ್ಲಿ ಲಡಾಖ್ ನ್ನು ಮೊಟ್ಟ ಮೊದಲ ಬಾರಿ ನೋಡುವ ಕುತೂಹಲಭರಿತ ಪ್ರವಾಸಿಯೂ ಹೌದು. ಮತ್ತು ವಿದೇಶಿ ಪ್ರವಾಸಿಗರ ಆರೋಗ್ಯ ಹದಗೆಟ್ಟಾಗ ಅದನ್ನು ಸರಿ ಪಡಿಸುವ ಪೇಡ್ ಡ್ಯೂಟಿ ಡಾಕ್ಟರ್ ಅಷ್ಟೇ ಅಲ್ಲ,ಆ ಯುರೋಪಿಯನ್ ಪರ್ವತಾರೋಹಿಗಳೊಡನೆ ತಾನು ವೈದ್ಯನೆಂಬ ಯಾವುದೇ ಹಮ್ಮು ಬಿಮ್ಮುಗಳಿಲ್ಲದ ಅವರೊಡನೆ ಒಂದಾಗಿ ಬೆರೆಯುವ ಸ್ನೇಹ ಜೀವಿ.ಈ ಕಾರಣದಿಂದಾಗಿಯೇ ಅವರು ಸಹಪಯಣಿಗರ ಜೊತೆ ಒಂದು ಅತ್ಯುತ್ತಮ ಸಂವಹನ ನಡೆಸುತ್ತ ಆ ದೇಶದ ಆಚಾರ ವಿಚಾರ ಅಡುಗೆ ಉಡುಗೆ ತೊಡುಗೆ ಮನುಷ್ಯನ ಸಂಬಂಧಗಳನ್ನು ಅರಿತು ಅದನ್ನು ಇಲ್ಲಿ ದಾಖಲಿಸುವುದರಿಂದ ಈ ಪುಸ್ತಕದ ಮೌಲ್ಯ ಹೆಚ್ಚಾಗುತ್ತದೆ.

ಲಡಾಖ್ ಆರೋಹಣ ಮಾಡುವಾಗ ಆ ದಾರಿಯಲ್ಲಿ ಎದಿರಾಗುವ ಹಿಮಾಲಯದ ಅತಿ ವಿಶಿಷ್ಟ ಪ್ರಾಣಿ ಮರ್ಮೆಟ್ಟುಗಳ ಜೊತೆ ನಿಂತು ಫೋಟೋ ತೆಗೆಯುವಾಗ ಅತಿ ವಿರಳ ಸಂಚಾರದ ದಾರಿಯಲ್ಲಿ ಸಿಗುವ ಯಾಕ್ ಗಳ ಬೆಣ್ಣೆಯಿಂದ ಮಾಡಿದ ‘ಗುರ್ ಗುರ್’ ಚಹಾ ಪರಿಚಯಿಸುವಾಗ ಗಿರಿಯನ್ನು ಹತ್ತುತ್ತಲೇ ಅಲ್ಲಿ ಸಿಗುವ ಅಪರೂಪದ ಮನುಷ್ಯನ ಮುಖಗಳನ್ನು ಅನಾವಣರಣಗೊಳಿಸಿ ಆ ಘಟನೆಗೊಂದು ತನ್ನ ಬಾಲ್ಯದ ಅನುಭವ ತಳಕು ಹಾಕಿ ನೋಡುವಾಗ ಒಬ್ಬ ನುರಿತ ಮನೋವಿಜ್ಞಾನಿಯಂತೆ ,ಪಳಗಿದ ಕಥೆಗಾರನಂತೆ ಕಾಣುತ್ತಾರೆ. ಅಲ್ಲಿನ ಮಣ್ಣ ಕಣ ಕಣವನ್ನು ಬಹು ಎಚ್ಚರಿಕೆಯಲ್ಲಿ ಕುತೂಹಲದಿಂದ ಗ್ರಹಿಸಿ ಆ ನೆಲದ ನರ ನಾಡಿಗಳನ್ನು ಪರೀಕ್ಷಿಸಿ ಡಿಟೇಲ್ಡ್ ಪೋಸ್ಟ್ ಮಾರ್ಟ್ಂ ವರದಿ ನೀಡುವ ನುರಿತ ವೈದ್ಯನಾಗುತ್ತಾರೆ. ದಾರಿ ಸಾಗುತ್ತ ಸಾಗುತ್ತ ಅಲ್ಲಿನ ಬೌದ್ಧ ಗುರು ಲಾಮಾಗಳ ಬದುಕನ್ನು ಚಳಿಗಾಲದಲ್ಲಿ ಆ ಜನರು ಎದುರಿಸುವ ಕಷ್ಟವನ್ನು ಕಲ್ಪಿಸುತ್ತ ಅದನ್ನು ದಾಖಲಿಸುವ ಈ ಪುಸ್ತಕ ಕೇವಲ ಪ್ರವಾಸ ಕಥನವಾಗದೆ ಏಕ ಕಾಲದಲ್ಲಿ ಕಾಲ ದೇಶಗಳಲ್ಲಿ ವಿಹರಿಸುತ್ತ ಚರಿತ್ರೆ ಮತ್ತು ವರ್ತಮಾನದಲ್ಲೂ ಸಂಚರಿಸುತ್ತದೆ.
ಹತ್ತು ಹನ್ನೆರಡು ಯುರೋಪಿಯನ್ ರ ಒಂದು ಗುಂಪು ,ಈ ಗುಂಪು ಸಾಗುವುದು ಐನೂರು ಸಿ.ಸಿ.ಯ ಬುಲೆಟ್ಟಿನ ಮೇಲೆ.ಈ ಗುಂಪಿನಲ್ಲಿ ಯುವ ಜೋಡಿಗಳೂ ಸೇರಿದಂತೆ ನಡುವಯಸಿನ ಘಾಟಿ ಹೆಂಗಸರೂ ಗಾಂಜಾ ಆಫೀಮನ್ನು ಕದ್ದು ಮುಚ್ಚಿ ಸೇದುವ ಮಾಜೀ ಹಿಪ್ಪಿಗಳೂ ಅತಿ ಕುಡುಕ ಮುದುಕ ಮುದುಕಿಯೂ ಇದ್ದಾರೆ.ಪ್ರವಾಸದ ಮಧ್ಯ ಮಧ್ಯ ಇವರೆಲ್ಲರ ಒಡನಾಟ ಈ ಅತಿ ಆತ್ಮೀಯವೆನ್ನುವ ಒಡನಾಟ ಕಷ್ಟ ಕಾಲದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡದೇ ಬದುಕಿ ಉಳಿಯಲು ಸಾಧ್ಯವೇ ಇಲ್ಲ ಎನ್ನುವಂತಹ ಬದುಕಿನ ಒಂದು ವಿಲಕ್ಷಣ ಕ್ಷಣಗಳಲ್ಲಿ ಗಡಿ ಗೆರೆ ದೇಶ ಭಾಷೆ ಸೀಮೆ ಮೀರಿ ತಾವೆಲ್ಲಾ ಈ ಕ್ಷಣದಲ್ಲಿ ಜೀವಕ್ಕೆ ಜೀವ ನೀಡುವ ಅತ್ಯಾಪ್ತ ಜೀವಗಳು ಎನ್ನುವ ಆ ದಿವ್ಯ ಕ್ಷಣವನ್ನು ಸ್ವತಃ ಅನುಭವಿಸಿ – ಓದುಗನಿಗೆ ಅದನ್ನು ದಾಟಿಸುವುದಿದೆಯಲ್ಲ ಈ ನಿಟ್ಟಿನಲ್ಲಿ ಡಾ.ಸಲೀಂ ಒಬ್ಬ ಅದೃಷ್ಟವಂತ ಎಂದೇ ಹೇಳಬೇಕಾಗುತ್ತದೆ.
ಲಡಾಖ್ ,ಸ್ಪಿಟಿ ವ್ಯಾಲಿ ಇದರ ನಡುವೆ ಒಂದಿಷ್ಟು ಕೇರಳದ ಪ್ರವಾಸದ ವಿವರಗಳ ನಡುವೆಯೇ ಬಹುಕಾಲದಲ್ಲಿ ನೆನಪುಳಿಯುವ ‘ಬಿಲ್ಲಿ’ ‘ರಾಮ್ಜೀ’ ಎಂಬ ಮೆಕ್ಯಾನಿಕುಗಳು ಸೂಜಿ ಎಂಬ ನಡುವಯಸಿನ ಹೆಂಗಸು,ಬ್ಯಾಂಕರ್ ನೆಂಬ ಸದಾ ಅಶ್ಲೀಲ ತಮಾಷೆ ಮಾಡುತ್ತಿದ್ದ ಪ್ರವಾಸಿ ಒಂದು ಬೀದಿ ಬದಿಯ ನಾಯಿಯ ಮೇಲೆ ಜೀಪು ಹತ್ತಿಸಿ ಕೊಂದಾಗ ಪಾಪ ಪ್ರಜ್ಞೆ ಯಲ್ಲಿ ಬಿಕ್ಕಿ ಬಿಕ್ಕಿ ಅಳುವಾಗ ಜಗತ್ತಿನಲ್ಲಿ ಮನುಷ್ಯನ ಭಾವನೆಗಳು ಎಲ್ಲಾ ಕಡೆ ಒಂದೇ ಎನಿಸಿಬಿಡುತ್ತದೆ.
ಚಳಿಗಾಲದ ಈ ರಾತ್ರಿಯಲ್ಲಿ ಈ ಪುಸ್ತಕ ಓದಿ ಮಡಚಿಡುವ ಹೊತ್ತಿಗೆ ನನ್ನ ಕನಸಿನಲ್ಲಿ ಆಗಾಗ ಬಂದು ಹೋಗುವ ಹಿಮಾಲಯವನ್ನು ಹಾದು ಬಂದ ಹಾಗೆ ಈ ಥಂಡಿಯಲ್ಲಿ ಗದಗುಟ್ಟುತ್ತಿದ್ದೇನೆ.ಮತ್ತು ಕೇವಲ ಬೆಂಗಳೂರಿನ ಟ್ರಾಫಿಕ್ಕಿನ ಈ ಕಿರಿ ಕಿರಿಯಲ್ಲಿ ಬದುಕು ಸವೆದು ಹೋಗುತ್ತಿರುವ ವಿಷಾದದಲ್ಲಿ ಹಿಮಾಲಯ ಹತ್ತದ ನನ್ನ ಮನಸಿನಲ್ಲಿ ನಾನು ದುಡಿದ ಮಡಿಚಿಟ್ಟ ಯಕಶ್ಚಿತ್ ನೋಟುಗಳು ಸಾದಾ ಕಚ್ಚಾ ಹಾಳೆಗಳಂತೆ ಕಾಣಿಸಲರಾಂಭಿಸಿವೆ.
ಒಂದು ಹ್ಯಾಪೀ ರೀಡಿಂಗ್ ಕೊಟ್ಟ ಖುಷಿಗೆ ನಿನಗೊಂದು ಹಗ್ಸ್ – ಡೀಯರ್ ಡಾಕ್ಟರ್ ಸಲಿಂ.
- ಡಾ.ಲಕ್ಷ್ಮಣ ವಿ ಎ (ಲಕ್ಷ್ಮಣ ವಿ ಅಟಪಟಕರ) – ಬೆಂಗಳೂರು
