ಮಾಮರದಲ್ಲಿ ಮರೆಯಾದ ಕೋಗಿಲೆ

ಖ್ಯಾತ ಗಾಯಕ ಲತಾ ಮಂಗೇಶ್ಕರ್ ತಾತ ದೀನಾನಾಥರ ತಂದೆ ಗೋವೆಯ ಸಮೀಪವಿದ್ದ ಮಂಗೇಶಿ ದೇಗುಲದಲ್ಲಿ ಅರ್ಚಕರಾಗಿದ್ದವರು. ಸತತ ನಾಟಕ, ಗಾಯನ, ಸುತ್ತಾಟಗಳಲ್ಲಿ ಬಸವಳಿದಿದ್ದ ದೀನಾನಾಥ್, ಆರ್ಥಿಕವಾಗಿ ತೀವ್ರ ಹೊಡೆತ ತಿಂದರು. ಸಾರಾಯಿಗೆ ಶರಣಾದ ದೀನಾನಾಥ್, ತಮ್ಮ ೪೧ರ ಅಲ್ಪವಯಸ್ಸಿನಲ್ಲಿ ಹೃದಯಸ್ಥಂಭನಕ್ಕೆ ಒಳಗಾದರು. ಪತ್ರಕರ್ತರಾದ ರಾಘವನ ಚಕ್ರವರ್ತಿ ಅವರು ಲತಾ ಮಂಗೇಶ್ಕರ್ ಅವರ ಬದುಕಿನ ಚಿತ್ರಣವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಲತಾರ ಬಗ್ಗೆ ಏನು ಬರೆಯುವುದು. ಬರೆಯದೇ, ತಿಳಿಯದೇ ಇರುವುದೇನಾದರೂ ಇದೆಯೇ? ಪ್ರಮುಖವಾಗಿ ‘ಬಾಲಿವುಡ್’ ಎಂದು ಕರೆದುಕೊಳ್ಳುವ ಹಿಂದಿ ಚಿತ್ರರಂಗದ ಧ್ವನಿಯಾಗಿದ್ದ. ಹಲವು ಭಾರತೀಯ ಭಾಷೆಗಳಲ್ಲಿ ಹಾಡಿದ, ದಶಕಗಟ್ಟಲೇ ತೆರೆಯ ಹಿಂದೆಯೇ ಇದ್ದು ಚಿತ್ರರಂಗವನ್ನು ಆಳಿದ, ಉಲಿದ, ಕೇಳುಗರನ್ನು ಗಂಧರ್ವಲೋಕಕ್ಕೆ ಕೊಂಡೊಯ್ದ, ಹಲವು ಬಾರಿ ಭಾವುಕರಾಗಿಸಿದ ಆ ಧ್ವನಿ, ಈಗ ಸ್ತಬ್ಧ..ಟೀವಿ ಬರುವ ಮುಂಚೆಯೇ ಅಶರೀರವಾಣಿಯಾಗಿ ದಿಗಂತಗಳನ್ನೆಲ್ಲಾ ವ್ಯಾಪಿಸಿದ, ದೇಶ, ಮತ, ಭಾಷೆಗಳ ಗಡಿ ದಾಟಿ, ವಿಶ್ವಸಂಚಾರ ಮಾಡಿ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿಕೊಂಡ ಆ ಧ್ವನಿಗೆ ಈಗ ’ಅಮರತ್ವ’ದ ಪಟ್ಟ. ಪ್ರಶ್ನಾರ್ಥಕ ಚಿಹ್ನೆ, ಅಚ್ಚರಿಯ ಚಿಹ್ನೆಗಳೆರಡೂ ಆಗಿಬಿಡುವ ವ್ಯಕ್ತಿತ್ವದ ಒಡತಿ ಲತಾ, ಇನ್ನು ನೆನಪು ಮಾತ್ರ.

೧೯೪೨ರಲ್ಲೇ ಗಾಯನಕೃಷಿ ಆರಂಭಿಸಿದ ಲತಾರ ಆ ಗಂಧರ್ವವಾಣಿ ಈಗ ಕೆಲ ವರ್ಷಗಳಿಂದ ಹೆಚ್ಚು ಕೇಳಲಿಲ್ಲ. ಅವರ ವಯೋಸಹಜ ಅನಾರೋಗ್ಯ, ಕ್ಷೀಣಿಸುತ್ತಿದ್ದ ಧ್ವನಿ ಅವರನ್ನು ಮೊದಲಿನಂತೆ ಹಾಡಲು ಬಿಡಲಿಲ್ಲ. ಲತಾರ ಪ್ರತಿಭೆಯನ್ನು ಸಾಧ್ಯವಾದಷ್ಟೂ ನಿಕಶಕ್ಕೆ ಒಡ್ಡಿ, ತಿದ್ದಿ, ತೀಡಿ, ಝಳಪಿಸಿದ ನೌಶಾದ್, ರಾಮಚಂದ್, ವಸಂತ ದೇಸಾಯಿ, ಮದನ್ ಮೋಹನ್, ಖಯ್ಯಾಮ್, ಬರ್ಮನ್, ರೋಷನ್, ಲಕ್ಷ್ಮೀಕಾಂತ್ ರೆಲ್ಲಾ ಕಾಲವಾಗಿದ್ದರು. ಮನದಾಳಕ್ಕಿಳಿಯುವ ಸಾಲುಗಳನ್ನು ಲೀಲಾಜಾಲವಾಗಿ ಬರೆಯುತ್ತಿದ್ದ, ಮಜ್ರೂಹ್ ಸುಲ್ತಾನ್ ಪುರಿ, ಶೈಲೇಂದ್ರ, ಸಾಹಿರ್, ಕವಿ ಪ್ರದೀಪ್, ಹಸ್ರತ್ ಜೈಪುರಿ, ಶಕೀಲ್ ಬದಾಯುನಿ, ಆನಂದ್ ಬಕ್ಷಿ ..ಮೊದಲಾದವರೆಲ್ಲಾ ಕಾಲದ ಮರೆಯಲ್ಲಿ ಸರಿದರು. ಅಂತಹ ಅದ್ಭುತ ಸಾಲುಗಳನ್ನು ಮತ್ತ್ಯಾರಿಗೂ ಬರೆಯಲಾಗಲಿಲ್ಲ. ಕಾಲದ ಹೊಡೆತಕ್ಕೆ ಸಿಕ್ಕದವರಾರು? ಬಾಲಿವುಡ್ ’ಕಮರ್ಷಿಯಲ್’ ಮಾಂತ್ರಿಕತೆ ಸೃಷ್ಟಿಸಿದ ಭೂತವನ್ನು ಆವಾಹಿಸಿಕೊಂಡಿತು. ಅಲಿಶಾ ಚಿನಾಯ್, ಕವಿತಾ ಕೃಷ್ಣಮೂರ್ತಿ, ಅನುರಾಧಾ ಪೌಡ್ವಾಲ್, ಶ್ರೇಯಾರ ಧ್ವನಿಗಳು (ಇವರೆಲ್ಲರೂ ಪ್ರತಿಭಾವಂತರೆಂಬುದು ನಿರ್ವಿವಾದ) ಲತಾರ ’ವಿನಯದ’, ಅಂತಃಕರಣ’ ಧ್ವನಿಗಿಂತ ಹೆಚ್ಚು ಪ್ರಾಮುಖ್ಯತೆ ಪಡೆಯಲಾರಂಭಿಸಿದವು. ಅವರ ಸೋದರಿಯರಲ್ಲೊಬ್ಬರಾದ ಉಷಾ ಬಹಳ ಹಿಂದೆಯೇ ’ಮೌನಿ’ಯಾದರು. ಆಶಾ ಭೋಸ್ಲೆ ತಮ್ಮ ತನ ಕಾದುಕೊಂಡರು. ಇವರೆಲ್ಲರ ಜೊತೆ ಸೆಣಸುವುದು ಲತಾರಿಗೆ ಕಷ್ಟದ ಕೆಲಸವಲ್ಲದಿದ್ದರೂ, ಬಾಲಿವುಡ್ ಹೊಸದರೆಡೆಗೆ ಸಂಕ್ರಮಣಗೊಳ್ಳುತ್ತಿತ್ತು. ಹೊಸಮುಖ, ಹೊಸಧ್ವನಿಗಳ ಅನ್ವೇಷಣೆ ಸಹಜವಾಗಿ ಆರಂಭವಾಯಿತು. ಅಲ್ಲದೇ ಸಿನಿಮಾ ಬಗ್ಗೆ ಉದ್ಯಮದ, ಜನರ ಮನೋಭಾವವೂ ಸಾಕಷ್ಟು ಬದಲಾಗಿತ್ತು.

ಫೋಟೋ ಕೃಪೆ : ಗೂಗಲ್

ಲತಾ, (ಮೂಲ ಹೆಸರು ಹೇಮಾ ಹರ್ಡೀಕರ್) ಈಗ ಮಧ್ಯಪ್ರದೇಶದಲ್ಲಿರುವ ಇಂದೋರ್ ನಲ್ಲಿ, ಮರಾಠಿ ತಂದೆ (ದೀನಾನಾಥ್), ಗುಜರಾತಿ ತಾಯಿ (ಶೆವಂತಿ)ಗೆ ೧೯೨೯ರಲ್ಲಿ ಜನಿಸಿದರು. ದೀನಾನಾಥ್ ಆಗಿನ ಕಾಲದಲ್ಲೇ ರಂಗಕಲಾವಿದರಾಗಿ, ಗಾಯಕರಾಗಿ ಪ್ರಸಿದ್ಧರಾಗಿದ್ದವರು. ಹಲವು ನಾಟಕಗಳನ್ನೂ ಬರೆದಿದ್ದರು. ದೀನಾನಾಥ್ ಮೊದಲು ನರ್ಮದಾ ಎಂಬಾಕೆಯನ್ನು ಮದುವೆಯಾಗಿದ್ದರು. ’ಲತಾ’ ಎಂಬ ಪುಟ್ಟ ಮಗಳಿದ್ದಳು. ಮಗಳೇ ಪ್ರಪಂಚವಾಗಿದ್ದ ದೀನಾನಾಥ್, ತಮ್ಮ ನಾಟಕದ ನಾಯಕಿಗೂ ’ಲತಾ’ ಎಂದೇ ಹೆಸರಿಟ್ಟಿದ್ದರು. ವಿಧಿಯಾಟ. ಮಗು ಕಾಯಿಲೆಯಿಂದ ತೀರಿಕೊಂಡಿತು. ದು:ಖ ಭರಿಸಲಾಗದ ನರ್ಮದಾ ಕೂಡಾ ಕೆಲದಿನಗಳ ನಂತರ ಮಗಳನ್ನು ಸೇರಿಕೊಂಡರು. ನರ್ಮದಾಳ ಸೋದರಿ ಶೆವಂತಿಯನ್ನು ದೀನಾನಾಥ್ ವರಿಸಿದರು. ನಾಲ್ವರು ಹೆಣ್ಣು ಮಕ್ಕಳು, ಒಬ್ಬ ಮಗನಿಗೆ ದೀನಾನಾಥ್ ತಂದೆಯಾದರು. ಮೊದಲ ಮಗಳಿಗೆ ’ಹೇಮಾ’ ಎಂದು ಹೆಸರಿಸಿದರು.

ದೀನಾನಾಥರ ತಂದೆ (ಲತಾರ ತಾತ) ಗೋವೆಯ ಸಮೀಪವಿದ್ದ ಮಂಗೇಶಿ ದೇಗುಲದಲ್ಲಿ ಅರ್ಚಕರಾಗಿದ್ದವರು. ದೀನಾನಾಥರಿಗೆ ತಮ್ಮ ಮೂಲ ಸ್ಥಳದ ಬಗ್ಗೆ ಅಪಾರ ಅಭಿಮಾನ. ತಮ್ಮ ಸ್ವಂತ ಸ್ಥಳ ಮಂಗೇಶಿ, ತಮ್ಮ ಹೆಸರುಗಳಲ್ಲೂ ಕಾಣಲೆಂಬ ಬಯಕೆ. ಅಲ್ಲದೇ ದೀನಾನಾಥರ ಸಾಮಾಜಿಕ ನಾಟಕ ‘ಭಾವ ಭಂದನ್ ’ ಆಗ ಬಹಳ ಜನಪ್ರಿಯವಾಗಿತ್ತು. ಆ ನಾಟಕದ ನಾಯಕಿ ‘ಲತಾ’. ದೀನಾನಾಥ್, ಮಗಳ ಹೆಸರನ್ನು ಲತಾ ಎಂದು ಬದಲಿಸಿದರು. ‘ಮಂಗೇಶ್ಕರ್’ ಇಬ್ಬರ ಹೆಸರಲ್ಲೂ ಅಂದಿನಿಂದಲೇ ಅಡಕವಾಯಿತು. ಹೇಮಾ ಹರ್ಡೀಕರ್ ಹೀಗೆ ’ಲತಾ ಮಂಗೇಶ್ಕರ್’ ಆದರು. ತಾಯಿಯಿಂದ ಗುಜರಾತಿ, ತಂದೆಯಿಂದ ಮರಾಠಿ ಕಲಿತ ಲತಾ, ಮೊದಲು ಹಾಡಲು ಕಲಿತದ್ದು ಗುಜರಾತಿ ಗೀತೆಗಳನ್ನೇ.

೧೯೪೨ರಲ್ಲಿ, ಲತಾ ತಮ್ಮ ಪ್ರೀತಿಪಾತ್ರ ತಂದೆಯನ್ನು ಕಳೆದುಕೊಂಡರು. ಸತತ ನಾಟಕ, ಗಾಯನ, ಸುತ್ತಾಟಗಳಲ್ಲಿ ಬಸವಳಿದಿದ್ದ ದೀನಾನಾಥ್, ಆರ್ಥಿಕವಾಗಿ ತೀವ್ರ ಹೊಡೆತ ತಿಂದರು. ಸಾರಾಯಿಗೆ ಶರಣಾದ ದೀನಾನಾಥ್, ತಮ್ಮ ೪೧ರ ಅಲ್ಪವಯಸ್ಸಿನಲ್ಲಿ ಹೃದಯಸ್ಥಂಭನಕ್ಕೆ ಒಳಗಾದರು. ೧೩ರ ಲತಾಗೆ ದಿಗ್ಭ್ರಮೆ. ಮನೆಯ ತುಂಬೆಲ್ಲಾ ಜನ. ಎಲ್ಲರೂ ಸಂತೈಸಲು ಸಿದ್ಧರಾಗಿ ಬಂದಿದ್ದವರು. ‘ಏಕೆ ಅಳಬೇಕು. ಹೇಗೆ ಅಳಬೇಕು ಎಂದೂ ನನಗೆ ತಿಳಿದಿರಲಿಲ್ಲ’ ಎಂದು ಆ ಕಾಲವನ್ನು ನೆನೆಯುತ್ತಾ ಲತಾ ಒಮ್ಮೆ ಭಾವುಕರಾಗಿ ನುಡಿದಿದ್ದರು. (ದೀನಾನಾಥರ ಹೆಸರಿನಲ್ಲಿ ಲತಾ ಕುಟುಂಬದವರು ಪುಣೆಯಲ್ಲಿ ಕಟ್ಟಿಸಿದ ’ದೀನಾನಾಥ್ ಮಂಗೇಶ್ಕರ್ ಆಸ್ಪತ್ರೆ’ ಎಂಬ ಸುಸಜ್ಜಿತ ಆಸ್ಪತ್ರೆ ೨೦೦೧ ರಿಂದ ಕಾರ್ಯಾರಂಭ ಮಾಡಿದೆ. ಮಹಾರಾಷ್ಟ್ರ ಸರ್ಕಾರ ಆರು ಎಕರೆ ಜಮೀನನ್ನು ಆಸ್ಪತ್ರೆಗಾಗಿ ಮಂಜೂರು ಮಾಡಿತ್ತು.)

ದೀನಾನಾಥರ ಅಕಾಲಮರಣಾದ ನಂತರ, ಲತಾ ಕುಟುಂಬಕ್ಕೆ ಒತ್ತಾಸೆಯಾಗಿ ನಿಂತವರು, ಕರ್ನಾಟಕ ಮೂಲದ ವಿನಾಯಕ ದಾಮೋದರ ಕರ್ನಾಟಕಿ (ಚಿತ್ರ ನಟಿ ನಂದಾರ ತಂದೆ). ಇವರು ಪ್ರಸಿದ್ಧ ಚಿತ್ರ ನಿರ್ದೇಶಕ ವಿ.ಶಾಂತಾರಾಂ ರ ಸೋದರಸಂಬಂಧಿ ಕೂಡಾ. ಲತಾರ ಕುಟುಂಬದವರನ್ನು ಒಡಹುಟ್ಟಿದವರಂತೆ ನೋಡಿಕೊಂಡ ವಿನಾಯಕ ಮಾಸ್ಟರ್ (ಅವರ ಪ್ರಸಿದ್ದ ಹೆಸರು), ಲತಾರನ್ನು ಸಿನಿಮಾ ಲೋಕಕ್ಕೆ ಪರಿಚಯಿಸಿದರು. ೧೯೪೨ರಲ್ಲಿ ಲತಾ ಎಂಬ ಕೋಗಿಲೆಯ ಪ್ರವೇಶವಾಯಿತು. ’ಕಿಟಿ ಹಸಾಲ್’ ಎಂಬ ಮರಾಠಿ ಚಿತ್ರಕ್ಕೆ ಲತಾ ಮೊದಲ ಗೀತೆ ಹಾಡಿದರು. ಆದರೆ ನಿರ್ದೇಶಕ ವಸಂತ ಜೋಗಳೇಕರ್ ಗೆ ಲತಾ ಹಾಡುಗಾರಿಕೆಯ ಬಗ್ಗೆ ಹಲವು ಅನುಮಾನ. ವಿನಾಯಕ ಮಾಸ್ಟರ್ ರ ದಾಕ್ಷಿಣ್ಯ. ಕೊನೆಗೂ ಚಿತ್ರದ ’ಫೈನಲ್ ಕಟ್’ನಲ್ಲಿ, ವಸಂತ್, ಲತಾರ ಹಾಡನ್ನು ಕಿತ್ತೆಸೆದೇ ಬಿಟ್ಟರು. ಲತಾಗೆ ಆಘಾತವಾಯಿತು. ದಿನಗಟ್ಟಲೇ ಅತ್ತರು. ವಿನಾಯಕ ಮಾಸ್ಟರ್ ಧೈರ್ಯ ತುಂಬಿದರು. ಕೆಲದಿನಗಳ ನಂತರ ಮತ್ತೊಂದು ಮರಾಠಿ ಚಿತ್ರಕ್ಕೆ ಲತಾರಿಗೆ ಒಂದು ಪುಟ್ಟ ಪಾತ್ರ ಕೊಟ್ಟರಲ್ಲದೇ ಐದು ನಿಮಿಷಗಳ ಒಂದು ಹಾಡನ್ನೂ ಹಾಡಿಸಿ ಚಿತ್ರಿಸಿದರು. ಲತಾರ ಸಂತೋಷಕ್ಕೆ ಪಾರವಿಲ್ಲ. ೧೯೪೩ರಲ್ಲೇ ಮರಾಠಿ ಚಿತ್ರವೊಂದರ ಹಿಂದಿ ಗೀತೆಯನ್ನು ಲತಾ ಹಾಡಿದ್ದರು.

೧೯೪೫ರಲ್ಲಿ ವಿನಾಯಕ ಮಾಸ್ಟರ್ ರ ಕುಟುಂಬ ಪುಣೆಯಿಂದ ಮುಂಬೈ (ಅಂದಿನ ಬಾಂಬೆ) ಗೆ ವಲಸೆ ಬಂತು. ಲತಾರ ಅದೃಷ್ಟದ ಬಾಗಿಲು ತೆರೆಯಿತು. ಲತಾ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಯಲು ಪ್ರಸಿದ್ಧ ವಿದ್ವಾಂಸರಾದ ಉಸ್ತಾದ್ ಅಮಾನ್ ಅಲೀಖಾನ್ ರ ಶಾಲೆ ಸೇರಿದರು. ಅಪಾರ ಪ್ರೀತಿ-ವಾತ್ಸಲ್ಯಗಳನ್ನು ತೋರಿದ ಉಸ್ತಾದ್ ಸಾಬರ ಮನೆಮಗಳೇ ಆದ ಲತಾ, ಅದೇ ವರ್ಷ ’ಆಪ್ ಕಿ ಸೇವಾ ಮೆ’ ಹಿಂದಿ ಚಿತ್ರಕ್ಕೆ ಅಧಿಕೃತವಾಗಿ ಹಾಡಿದರು. ಈ ಚಿತ್ರದ ನಿರ್ದೇಶಕರೂ ಸಹಾ ವಸಂತ ಜೋಗಳೇಕರ್. ಎರಡೇ ವರ್ಷದ ಹಿಂದೆ ಲತಾಗೆ ಬೇಸರ ತರಿಸಿದ್ದ ವಸಂತ್, ’ನೀನು ಗಾಯನ ಸಾಮ್ರಾಜ್ಞಿ ಆಗುತ್ತೀಯಾ’ ಎಂದು ಹರಿಸಿದರು.

ಫೋಟೋ ಕೃಪೆ : ಗೂಗಲ್

ದುರದೃಷ್ಟ ಹಿಂಬಾಲಿಸಿತು. ವಿನಾಯಕ ಮಾಸ್ಟರ್ ಕೆಲದಿನಗಳಲ್ಲೇ ತೀರಿಕೊಂಡರು. ಲತಾ ಅಪ್ರತಿಭರಾದಾಗ ಅವರನ್ನು ಮುನ್ನಡೆಸಿದ್ದು ಗುಲಾಮ್ ಹೈದರ್. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹೈದರ್ ಸಾಹೇಬರು, ಹಿಂದೂಸ್ಥಾನಿ ರಾಗಗಳಿಗೆ, ಪಂಜಾಬಿನ ಗ್ರಾಮೀಣ ಸೊಗಡಿನ ಲಯವನ್ನು ಬೆಸೆದು ಅದ್ಭುತ ಸಂಗೀತ ಸಂಯೋಜಿಸುವಲ್ಲಿ ಸಿದ್ಧಹಸ್ತರಾಗಿದ್ದರು. ಶಂಶದ್ ಬೇಗಂ ತರದ ಪ್ರತಿಭೆಗಳನ್ನು ಜನಪ್ರಿಯರಾಗಿಸಿದ ಹೈದರ್, ಮೂಲತಃ ದಂತವೈದ್ಯರು. ಅದು ಹೇಗೋ ಹಿಂದೂಸ್ಥಾನಿ ಸಂಗೀತದಲ್ಲಿ ಅವರಿಗೆ ಆಸಕ್ತಿ ಹುಟ್ಟಿಬಿಟ್ಟಿತು. ದೊಡ್ಡ ವಿದ್ಯೆ, ದೊಡ್ಡ ಕಸುಬನ್ನು ಬಿಟ್ಟ ಹೈದರ್, ಕುಟುಂಬದವರ ಕೋಪವನ್ನೂ ಲೆಕ್ಕಿಸದೇ ಲಾಹೋರ್ ಬಿಟ್ಟುಬಂದರು. ತಮ್ಮ ಸಹಪಾಠಿಗಳೂ ಅಚ್ಚರಿಪಡುವಂತೆ ಹಿಂದೂಸ್ಥಾನಿ ರಾಗಗಳನ್ನು ಕಲಿತರು. ಅವರ ಗುರುವಾಗಿದ್ದವರು ಬಾಬು ಗಣೇಶ್ ಲಾಲ್. ಸಿಂಧ್ ಪ್ರಾಂತ್ಯದಲ್ಲಿ ತಾವು ಕೇಳುತ್ತಿದ್ದ ಮೋಹಕ ವಾದ್ಯಸಂಯೋಜನೆಯಿಂದ ಪುಳಕಿತರಾಗಿದ್ದ ಹೈದರ್, ಅವೆರೆಡನ್ನೂ ಬೆಸೆದರು. ೪೦ ರ ಆ ದಶಕದಲ್ಲೇ ಸಂಗೀತ ನಿರ್ದೇಶನಕ್ಕೆ ₹.೨೫೦೦೦ ಬೇಡಿಕೆ ಇಡುವ ಮಟ್ಟಕ್ಕೆ ಬೆಳೆದರು. ಲತಾರ ಸಿರಿಕಂಠಕ್ಕೆ ಮಾರುಹೋದ ಹೈದರ್, ಆಕೆಗೆ ಒಳ್ಳೆಯ ಅವಕಾಶಗಳನ್ನು ಕೊಡಿಸಿದರು. ಎಸ್.ಕೆ.ಮುಖರ್ಜೀ ಎಂಬ ಆಗಿನ ಪ್ರಸಿದ್ಧ ನಿರ್ದೇಶಕರಿಗೆ ಲತಾರನ್ನು ಪರಿಚಯಿಸಿದರು. ಲತಾ ರ ಧ್ವನಿಪರೀಕ್ಷೆ ಮಾಡಿದ ಮುಖರ್ಜೀ, ’ಇನ್ನೂ ಸಾಲದು ಹೈದರ್..ಧ್ವನಿ ಕೆಲವೆಡೆ ಕ್ಷೀಣವಾಗಿಬಿಡುತ್ತೆ…ಈಗ ಬೇಡ’ ಎಂದು ಬಿಟ್ಟರು. ಹೈದರ್ ರೋಷಾವಿಷ್ಟರಾದರು. ಲತಾರ ಹಿನ್ನಲೆ, ಆಕೆಯ ಗುರುಗಳ ಬಗ್ಗೆ ಎಲ್ಲಾ ಹೇಳಿದ ಹೈದರ್, ’ನನ್ನ ಅನುಭವದಂತೆ ಆಕೆಯ ಧ್ವನಿಯಲ್ಲಿ ಯಾವ ಲೋಪವೂ ಇಲ್ಲ’ ಎಂದು ಲತಾರನ್ನು ಸಮರ್ಥಿಸಿಕೊಂಡರು. ಮುಖರ್ಜೀ ಬಗ್ಗಲಿಲ್ಲ. ಕೆರಳಿದ ಹೈದರ್ ’ಇಂದಲ್ಲಾ ನಾಳೆ, ಇಡೀ ಚಿತ್ರರಂಗ ಲತಾಳ ಕಾಲಿಗೆ ಬಿದ್ದು, ಆಕೆಯೇ ಹಾಡಬೇಕೆಂದು ಅಂಗಲಾಚುವ ಸ್ಥಿತಿ ಬರುತ್ತದೆ’ ಎಂದು ಗುಡುಗಿದರು. ಕೆಲವೇ ದಿನಗಳಲ್ಲಿ ’ಮಜ್ಬೂರ್’ ಚಿತ್ರ ಸೆಟ್ಟೇರಿತು. ಹೈದರ್ ಸಾಹೇಬರದ್ದೇ ಸಂಗೀತ. ಲತಾರ ಗಾಯನ. ಅದ್ಭುತ ಸಂಯೋಜನೆ, ಗಾಯನಗಳಿಂದ ಚಿತ್ರ ಅಪಾರ ಯಶಸ್ಸು ಗಳಿಸಿತು. ಆ ಚಿತ್ರ ಲತಾರ ಜೀವನದ ದೊಡ್ಡ ತಿರುವು. “ನನ್ನ ನಿಜವಾದ ಗಾಡ್ ಫಾದರ್ ಹೈದರ್ ಸಾಬ್…ನನ್ನ ಮೇಲೆ ಅವರಿಟ್ಟ ನಂಬಿಕೆಗೆ ನಾನು ಜೀವಮಾನ ಪೂರ್ತಿ ಋಣಿ” ಎಂದು ಲತಾ ಹೈದರ್ ರನ್ನು ನೆನೆಸಿಕೊಳ್ಳುತ್ತಿದ್ದರು. ಭಾರತ ಇಬ್ಬಾಗವಾದಾಗ ಹೈದರ್ ಅದೇಕೋ ಲಾಹೋರ್ ಗೆ ಮರಳಿದರು. ಪಾಕೀಸ್ತಾನಿ ಸಿನಿಮಾಗಳಲ್ಲಿ ತೊಡಗಿಕೊಂಡರು. ಹಲವು ಪ್ರಶಸ್ತಿಗಳು ಬಂದರೂ, ಭಾರತದಲ್ಲಿ ಸಿಕ್ಕ ಯಶಸ್ಸು ಅಲ್ಲಿ ಸಿಗಲಿಲ್ಲ. ಭಾರತಕ್ಕೆ ಮರಳುವ ಆಲೋಚನೆಯನ್ನೂ ಮಾಡಿದರು. ಆದರೆ ರಾಜಕೀಯವಾಗಿ ಎರಡೂ ದೇಶಗಳಲ್ಲಿ ಅಲ್ಲೋಲ-ಕಲ್ಲೋಲವಾಗಿತ್ತು. ಸಿನಿಮಾಗಳೂ ಸೋತವು. ಹೈದರ್ ೪೫ರ ವಯಸ್ಸಿನಲ್ಲಿ ಲಾಹೋರ್ ನಲ್ಲಿ ೧೯೫೩ರಲ್ಲಿ ತೀರಿಕೊಂಡರು. ಹಲವು ಪಂಜಾಬಿ ನಿರ್ದೇಶಕರನ್ನು ಹೈದರ್ ಪ್ರಭಾವಿಸಿದ್ದರು.

ಲತಾರಿಗೆ ಪ್ರತಿಭಾವಂತ ಸಂಗೀತಜ್ಞ ವಸಂತ ದೇಸಾಯಿಯವರ ಪರಿಚಯವಾಗಿತ್ತು. ೫೦ ರ ದಶಕದ ಆದಿಭಾಗದವರೆಗೂ ಲತಾ, ಆಗಿನ ಪ್ರಸಿದ್ದ ಗಾಯಕಿ ನೂರ್ ಜಹಾನ್ ರ ಧ್ವನಿ-ಶೈಲಿಯನ್ನು ಅನುಕರಿಸುತ್ತಿದ್ದರು. ಲತಾ ಧ್ವನಿಗೆ ತನ್ನದೇ ಅಸ್ಮಿತೆ ದೊರಕಿಸಿಕೊಟ್ಟವರಲ್ಲಿ ಪ್ರಮುಖರು ವಸಂತ ದೇಸಾಯಿ. ವಿ.ಶಾಂತಾರಾಂ ರ ಅಚ್ಚುಮೆಚ್ಚಿನ ಸಂಯೋಜಕ ದೇಸಾಯಿ, ಹುಟ್ಟಾ ಪ್ರತಿಭಾವಂತರು. ’ಏ ಮಾಲಿಕ್ ತೇರೆ ಬಂದೇ ಹಮ್’ ಎಂಬ ಚಿರನೂತನ ಗೀತೆಯ ರಾಗ ಸಂಯೋಜನೆ ದೇಸಾಯಿಯವರದ್ದೇ. ಕಂಚೀಮಠದ ಹಿರಿಯ ಸ್ವಾಮಿಗಳಾಗಿದ್ದ ಚಂದ್ರಶೇಖರೇಂದ್ರ ಸರಸ್ವತಿಯವರ ಕುರಿತಾದ ಭಕ್ತಿಗೀತೆಯೊಂದಕ್ಕೆ ಸಹಾ ದೇಸಾಯಿ ರಾಗ ಸಂಯೋಜಿಸಿದ್ದರು. ಅವರದ್ದು ವೈವಿಧ್ಯಮಯ ಪ್ರತಿಭೆ. ಸದಾ ಹೊಸದರನ್ನು ಆವಿಷ್ಕರಿಸುವ ದೇಸಾಯಿಯವರಿಗೆ ಲತಾರ ಪರಿಚಯದಿಂದ ಮತ್ತಷ್ಟು ರಾಗಗಳ ಆವಿಷ್ಕಾರಕ್ಕೆ ಸ್ಪೂರ್ತಿ ದೊರೆಯಿತು. ಬಾಕ್ಸ್-ಆಫೀಸನ್ನು ಚೆಂಡಾಡಿದ ’ಗೂಂಜ್ ಉಟೀ ಶಹನಾಯ್’ ನ ಹಾಡುಗಳನ್ನು ಕೇಳಿ ಮಾರುಹೋಗದವರಿಲ್ಲ. ಲತಾ ಹಾಡಿದ ’ತೇರೆ ಸುರ್ ಔರ್ ಮೇರೇ ಗೀತ್’ ಹಾಗೂ ’ದಿಲ್ ಕಾ ಖಿಲೋನ ಹಾಯ್ ಟೂಟ್ ಗಯಾ’ ಎಂಬೆರೆಡು ಗೀತೆಗಳು, ಅವರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದವು. ರಫಿ, ತಾವು ಸ್ಟಾರ್ ಹಾಡುಗ ಎಂದು ಮತ್ತೊಮ್ಮೆ ತೋರಿಸಿಕೊಟ್ಟರು. ವಸಂತ ದೇಸಾಯಿ, ಗೀತಕಾರ ಭರತ್ ವ್ಯಾಸ್, ಸ್ಟಾರ್ ಗಳಾಗಿಬಿಟ್ಟರು.
ಬಹುಶಃ ಈ ಸಂದರ್ಭದಲ್ಲೇ ಲತಾರಲ್ಲಿ ಈರ್ಷ್ಯೆ ಮೂಡತೊಡಗಿತೆಂದು ತೋರುತ್ತದೆ. ವಸಂತ್ ದೇಸಾಯಿ ಹೆಸರು ತುಸು ಹೆಚ್ಚು ಚಲಾವಣೆಯಾಯಿತು. ರಫ಼ಿ ಎಂದಿನಂತೆ ತಮ್ಮ ಪಾಲು ಪಡೆದರು. ಅದಕ್ಕವರು ಅರ್ಹರಾಗಿದ್ದರು ಸಹಾ. ದೇಸಾಯಿ-ಲತಾ ನಡುವೆಯೊಂದು ಶೀತಲ ಸಮರವೊಂದು ಆರಂಭವಾಯ್ತು. ೧೯೭೦ರ ವರೆಗೂ ಇದು ಮುಂದುವರೆಯಿತು. ೧೯೭೧ರಲ್ಲಿ ಹೃಷಿಕೇಶ್ ಮುಖರ್ಜೀಯವರ ಜನಪ್ರಿಯ ಚಿತ್ರ ’ಗುಡ್ಡಿ’ಗೆ (ಜಯಾಬಾಧುರಿಯವರ ಸಿನಿಮಾ ಜೀವನಕ್ಕೆ ತಿರುವು ನೀಡಿದ ಚಿತ್ರ) ವಾಣಿ ಜಯರಾಂ ರನ್ನು ದೇಸಾಯಿ ಆಯ್ಕೆ ಮಾಡಿಕೊಂಡರು. ವಾಣಿಜಯರಾಂ ಆಗ ಮುಂಬೈನಲ್ಲೇ ಇದ್ದರು. ಲತಾ-ವಸಂತದೇಸಾಯಿ ನಡುವಿನ ಅಂತರ ಇನ್ನಷ್ಟು ಹೆಚ್ಚಾಯಿತು.

ಲತಾ ಹಾಗೂ ಅವರ ಸೋದರಿಯರಿಗೆ ತೀಕ್ಷ್ಣ ಪೈಪೋಟಿ ಕೊಡುವ ಎಲ್ಲಾ ಸಾಮರ್ಥ್ಯ-ಪ್ರತಿಭೆಗಳೂ ವಾಣಿಜಯರಾಂ ರವರಲ್ಲಿತ್ತು ಎಂಬುದು ನಿರ್ವಿವಾದ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಿಯಾಗಿದ್ದ ವಾಣಿಜಯರಾಂ, ೬೦ರ ದಶಕದಲ್ಲಿ ಪತಿಯೊಂದಿಗೆ ಮುಂಬೈಗೆ ವರ್ಗಗೊಂಡರು. ಬ್ಯಾಂಕ್ ಉದ್ಯೋಗದಲ್ಲೇ ಕಳೆದುಹೋಗಲು ಇಚ್ಛಿಸದೇ, ಉಸ್ತಾದ್ ಅಬ್ಡುಲ್ ರಹಮಾನ್ ಖಾನ್ ರಲ್ಲಿ ಹಿಂದೂಸ್ತಾನಿ ಗಾಯನ ಕಲಿತರು. ವೆಲ್ಲೂರಿನ ಪಕ್ಕಾ ತಮಿಳು ಹುಡುಗಿ ವಾಣಿಜಯರಾಂ, ಲೀಲಾಜಾಲವಾಗಿ ಹಿಂದೂಸ್ಥಾನಿ ಕಲಿತು ಹಾಡುವುದನ್ನು ಕಂಡು ಅಚ್ಚರಿಗೊಂಡ ರಹಮಾನ್ ಸಾಹೇಬರು, ವಾಣಿಯವರ ಬಗ್ಗೆ ತಮ್ಮ ಪರಿಚಿತ ಹಲವರೊಂದಿಗೆ ಪ್ರಶಂಸಿಸಿ ಮಾತನಾಡಿದರು. ’ಒಂದು ಕಛೇರಿ ಮಾಡಬಹುದಲ್ಲಾ ವಾಣಿ ಬೆಹೆನ್’ ಎಂದು ರಹಮಾನ್ ಸಾಬರು ಹೇಳಿದಾಗ, ವಾಣಿಜಯರಾಂ ಸಂಕೋಚದಿಂದ ಒಪ್ಪಿದರು. ’ದಕ್ಷಿಣ’ದ ವಾಣಿಜಯರಾಂ, ದಕ್ಷಿಣದವರಿಗೆ ಕ್ಲಿಷ್ಟವೆನಿಸುವ (ಅಥವಾ ಹಾಗೆ ಹೇಳಲಾದ) ಹಿಂದೂಸ್ಥಾನಿಯ ಸಂಗೀತ ಕಛೇರಿ ನೀಡಿ ಮುಂಬೈರಿಗರನ್ನು ನಿಬ್ಬೆರಗಾಗಿಸಿದರು. ಕಛೇರಿಗೆ ಆಹ್ವಾನ್ವಿತರಾಗಿದ್ದ ವಸಂತ್ ದೇಸಾಯಿ, ಕುಮಾರ ಗಂಧರ್ವ, ವಾಣಿಯವರ ಗಾಯನವನ್ನು ಪ್ರಶಂಸಿದರು. ವಸಂತ ದೇಸಾಯಿಯವರಿಗೆ ಭವಿಷ್ಯದ ಗಾಯಕಿಯೊಬ್ಬಳು ಕಂಡಳು. ಬಾಲಗಂಧರ್ವರೊಂದಿಗೆ ಅವರು ತರಲು ಯೋಜಿಸಿದ್ದ ಮರಾಠಿ ಗೀತಗುಚ್ಛ (ಆಲ್ಬಮ್) ಕ್ಕೆ, ವಾಣಿಜಯರಾಂ ಆಯ್ಕೆ ಆದರು. ಲತಾಗೊಂದು ಅವಕಾಶ ತಪ್ಪಿತ್ತು. ಅಲ್ಲದೇ ಕುಮಾರ ಗಂಧರ್ವರೊಡನೆ ವಾಣಿಜಯರಾಂ ಹಾಡಿದ ಯುಗಳಗೀತೆಗಳೆಲ್ಲಾ ಮಹಾರಾಷ್ಟ್ರದ ಮನೆಮಾತಾದವು. ’ಮೀರಾ’ ಚಿತ್ರಕ್ಕೆ ಸಂಗೀತ ನಿರ್ದೇಶಕ, ಸಿತಾರ್ ಮಾಂತ್ರಿಕ ರವಿಶಂಕರ್, ವಾಣಿಜಯರಾಂ ರವರನ್ನೇ ಆಯ್ಕೆ ಮಾಡಿಕೊಂಡರು. (ಆದರೆ ಈ ಚಿತ್ರ ಬಿಡುಗಡೆಯಾಗಿದ್ದು ೧೯೭೯ ರಲ್ಲಿ) ಲತಾ ಮೀರಾಭಜನ್ ಗಳನ್ನು ಸುಲಲಿತವಾಗಿ, ಸುಶ್ರಾವ್ಯವಾಗಿ ಹಾಡಿ ಸಾಕಷ್ಟು ಜನಪ್ರಿಯತೆಗಳಿಸಿದ್ದರೂ, ’ಮೀರಾ’ ಚಿತ್ರಕ್ಕೆ ರವಿಶಂಕರ್ ಆಯ್ಕೆ ವಾಣಿಜಯರಾಂ ಆಗಿದ್ದು ಅಚ್ಚರಿ. ಹಿಂದಿ ಮಾತ್ರವಲ್ಲದೇ ಮರಾಠಿಯಲ್ಲೂ ವಾಣಿಜಯರಾಂ, ಲತಾರ ಪೈಪೋಟಿಗಿಳಿದಿದ್ದರು. ’ಗುಡ್ಡಿ’ ಚಿತ್ರದ ಆ ಮೋಹಕ ಗಾಯನಕ್ಕೆ ವಾಣಿಜಯರಾಂ ಗೆ ಪ್ರತಿಷ್ಟಿತ ’ತಾನ್ ಸೇನ್ ಸಮ್ಮಾನ್’ ಪ್ರಶಸ್ತಿ ದೊರೆಯಿತು. ಲತಾ ಹಾಗವರ ಸೋದರಿಯರಿಗೆ, ವಾಣಿ ಬಿಸಿತುಪ್ಪವಾದರು. ಲತಾರಿಗೊಂದು ಸ್ಥಾನ ಕಲ್ಪಿಸಿಕೊಟ್ಟ ವಸಂತ ದೇಸಾಯಿ ಕೂಡಾ ಲತಾಗೆ ಕ್ರಮೇಣ ಬೇಡವಾಗತೊಡಗಿದರು. ವಸಂತದೇಸಾಯಿ ಯವರ ಸಂಯೋಜನೆಗಳ ಬಗ್ಗೆ ಲತಾ ಮಾತನಾಡಿರುವುದೂ ಕಡಿಮೆಯೇ. ೧೯೭೫ರಲ್ಲಿ ತುರ್ತುಪರಿಸ್ಥಿತಿ ಹೇರಿ ಆರು ತಿಂಗಳುಗಳೇ ಕಳೆದಿದ್ದವು. ಎಚ್.ಎಮ್.ವಿ.ಸ್ಟೂಡಿಯೋದಲ್ಲಿ ರೆಕಾರ್ಡಿಂಗ್ ಮುಗಿಸಿ ತಮ್ಮ ಅಪಾರ್ಟ್ ಮೆಂಟ್ ತಲುಪಿದ ವಸಂತದೇಸಾಯಿಯವರಿಗಾಗಿ ವಿಧಿ ಕಾದಿತ್ತು. ಲಿಫ್ಟ್ ಒಳಗೆ ಕಾಲಿಡುತ್ತಿದ್ದಂತೆ ಇದ್ದಕ್ಕಿದ್ದಂತೆ ಮೇಲೇರಿದ್ದರಿಂದ ವಸಂತರ ದೇಹ ಗೋಡೆಗೆ ಸಿಲುಕಿ ಜರ್ಝರಿತವಾಯಿತು. ವರ್ಷಗಳಿಂದ ಬಳಸುತ್ತಿದ್ದ ಲಿಫ್ಟ್ ಎಂದೂ ಕೈಕೊಟ್ಟಿರಲಿಲ್ಲ. ಎಂದೂ ಕೆಟ್ಟಿರಲಿಲ್ಲ. ವಸಂತ್ ಬಹಳ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾದರು. ಭಾರತೀಯ ಸಿನಿಮಾಕಂಡ ಅದ್ಭುತಪ್ರತಿಭೆಯೊಂದನ್ನು ಕಾಲ ಕರೆದೋಯ್ದ.

ವಾಣಿಜಯರಾಂ ಬೇಸತ್ತರು. ಅವಕಾಶಗಳು ಒಮ್ಮಿಂದೊಮ್ಮೆಲೇ ಇಳಿಮುಖವಾಗತೊಡಗಿದವು. ಕೆ,ಬಾಲಚಂದರ್ ತಮ್ಮ ’ಅಪೂರ್ವ ರಾಗಂಗಳ್’ ನಲ್ಲಿ ಜೀವಮಾನದ ತಿರುವು ನೀಡುವುದರೊಂದಿಗೆ, ವಾಣಿಜಯರಾಂ ಅಧಿಕೃತವಾಗಿ ಮತ್ತೆ ’ದಕ್ಷಿಣ’ದವರಾದರು. ಎಂದೂ ಎಲ್ಲಿಯೂ ವಾಣಿಜಯರಾಂ, ಲತಾ ಅಥವಾ ಅವರ ಸೋದರಿಯರ ಬಗ್ಗೆಯಾಗಲೀ, ಹಿಂದೀ ಚಿತ್ರರಂಗದ ಬಗ್ಗೆ ಯಾಗಲೀ, ಕಟಕಿಯಾಡಿಲ್ಲ. ಇದು ಅವರ ದೊಡ್ಡತನ.

ಲತಾರಿಗಿಂತ, ಆಶಾ ವಾಣಿಜಯರಾಂರಲ್ಲಿ ಅನುಚಿತವಾಗಿ ವರ್ತಿಸಿದ್ದ ಹಲವು ಘಟನೆಗಳಿವೆ. ಅವುಗಳನ್ನೆಲ್ಲಾ ಸುಳ್ಳು ಎಂದು ಸಂಪೂರ್ಣವಾಗಿ ನಿರಾಕರಿಸಲು ಆಗಲಾರದು. ವಾಣಿಜಯರಾಂರೊಂದಿಗೆ ಹಾಡೊಂದನ್ನು ರೆಕಾರ್ಡ್ ಮಾಡಿದರೆಂದು ಹಿರಿಯ ಸಂಗೀತ ನಿರ್ದೇಶಕ ಜಯದೇವ್ ರನ್ನು ಆಶಾ ವಿಪರೀತ ಛೇಡಿಸಿದ್ದರು. ಅಲ್ಲದೇ ’ಆಯ್ನಾ’ ಚಿತ್ರಕ್ಕೆ ವಾಣಿಜಯರಾಂರೊಂದಿಗೆ ಹಾಡಬೇಕಿದ್ದ ಗೀತೆಯೊಂದನ್ನು ಆಶಾ ತಿರಸ್ಕರಿಸಿದ್ದರು. ಈ ಚಿತ್ರದ ನಿರ್ದೇಶಕ ಕೆ.ಬಾಲಚಂದರ್. ಇದು ಅವರದೇ ಯಶಸ್ವೀ ಚಿತ್ರ ’ಅರಂಗೇಟ್ರಂ’ ನ ಹಿಂದಿ ರೀಮೇಕ್. ಸಂಗೀತ ನಿರ್ದೇಶಕರು ನೌಶಾದ್. ನೌಶಾದ್ ಹಿರಿತನ-ಪ್ರತಿಭೆಗಳೆರೆಡರಲ್ಲೂ ಮೆಲ್ಮಟ್ಟದವರಾಗಿದ್ದರು. ಆಶಾ ಇದ್ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ಮೆಲುಮಾತಿನ, ಸಾತ್ವಿಕ ಗುಣದ ನೌಶಾದ್ ಅಸಹಾಯಕರಾದರು. ಕೊನೆಗೆ ಆಶಾ-ಲತಾರ ಹಾಡುಗಳನ್ನು ’ಫಿಲ್ಮ್ ಸೆಂಟರ್’ ಸ್ಟೂಡಿಯೋದಲ್ಲಿ ಧ್ವನಿಮುದ್ರಿಸಿದ ನೌಶಾದ್, ವಾಣಿಜಯರಾಂರ ಭಾಗದ ಗೀತೆಗಳನ್ನು ’ಮೆಹಬೂಬ್ ಸ್ಟೂಡಿಯೋ’ದಲ್ಲಿ ಮುದ್ರಿಸಬೇಕಾಯಿತು.

ರಾಜ್ ಕಪೂರ್-ಲತಾರ ಸ್ನೇಹ-ವಿರಸದ ಬಗ್ಗೆ ಹಲವು ಕಥೆಗಳಿವೆ. ಅವುಗಳನ್ನೆಲ್ಲಾ ಕೆದಕುವ ಅಗತ್ಯವಿಲ್ಲ. ಆಶಾರ ಬಲವಂತಕ್ಕೆ ಕಟ್ಟುಬಿದ್ದ ರಾಜ್ ಕಪೂರ್, ತಮ್ಮ ಜೀವಮಾನದ ದೊಡ್ಡ ಚಿತ್ರ ’ಮೇರಾ ನಾಮ್ ಜೋಕರ್’ ಗೆ ಆಶಾರ ಬಳಿ ಮಾತ್ರ ಹಾಡಿಸಿದರು. ಲತಾಗೆ ಅವಕಾಶ ಸಿಗಲಿಲ್ಲ. ಆದರೆ ಚಿತ್ರ ಹೀನಾಯವಾಗಿ ಸೋಲುಂಡಿತು. ’ಆಶಾ ಬದಲು ಲತಾ ಹಾಡಿದ್ದರೆ ಚೆನ್ನಾಗಿತ್ತು’ ಎಂಬ ಪ್ರತಿಕ್ರಿಯೆಯೊಂದು ಆರ್.ಕೆ ಸ್ಟೂಡಿಯೋ ಒಳಗೆ ಮಾತ್ರವಲ್ಲದೇ, ಕಪೂರ್ ಮನೆಯಲ್ಲೂ ಹರಿದಾಡಿತು. ರಾಜ್ ಕಪೂರ್ ಸುಮಾರು ಆಸ್ತಿ ಕಳೆದುಕೊಂಡರೂ ಕಲ್ಲಿನಂತೆ ನಿಂತರು. ಸಿನಿಮಾವನ್ನು ಕಲೆಯಾಗಿ ಮಾತ್ರವಲ್ಲದೇ ಜೂಜಾಟವಾಗಿಯೂ ಸ್ವೀಕರಿಸಿದ್ದ ರಾಜ್ ಕಪೂರ್, ’ಬಾಬಿ’ ಮಾಡಿದರು. ಲತಾರಿಂದಲೇ ಹಾಡಿಸಿದರು. ಚಿತ್ರ ಬಾಕ್ಸ್-ಆಫೀಸನ್ನು ಲೂಟಿಮಾಡಿತು. ’ಶೋಲೆ’ ಯ ನಂತರದ ಅಪಾರ ಯಶಸ್ಸು ಗಳಿಸಿದ ಚಿತ್ರವಾಯಿತು. ಲತಾ-ಶೈಲೇಂದ್ರ ಸಿಂಗ್ ಹಾಡಿದ ’ಬಾಬಿ’ ಚಿತ್ರದ ಗೀತೆಗಳು ಇಂದಿಗೂ ಗುನುಗಲ್ಪಡುತ್ತವೆ. ಲತಾ ಮುನಿಸಿಕೊಂಡು (ಹಲವು ಬಾರಿ ಅಕಾರಣವಾಗಿ) ಸ್ಟೂಡಿಯೋದಲ್ಲಿ ಕುಳಿತಾಗಲೆಲ್ಲಾ, ತಮ್ಮ ಅಪ್ರತಿಮ ಹಾಸ್ಯಪ್ರಜ್ಞೆ, ಸಮಯಪ್ರಜ್ಞೆ ಬಳಸಿ ಅವರಿಂದ ಉತ್ತಮ ಗಾಯನ ಹೊರತರುತ್ತಿದ್ದವರು ರಾಜ್ ಕಪೂರ್, ಮತ್ತೊಬ್ಬರು ಲಕ್ಷ್ಮೀಕಾಂತ್-ಪ್ಯಾರೇಲಾಲ್ ಜೋಡಿ.

ಲತಾ ಜೊತೆ ಜಗಳವಾಡಿಕೊಂಡ ಸಂಗೀತನಿರ್ದೇಶಕರೆಲ್ಲಾ ಆಶಾರನ್ನು ಆಶ್ರಯಿಸಿದರು. ಲತಾರನ್ನು ದೂರವಿರಿಸಿದವರಲ್ಲಿ ಒ.ಪಿ.(ಓಂಕಾರ್ ಪ್ರಸಾದ್) ನಯ್ಯರ್ ಪ್ರಮುಖರು. ಲತಾ ಸಮಕ್ಕೆ ಆಶಾರನ್ನು ತರುವ ಮೊರಡು ಸಾಹಸಕ್ಕೆ ನಯ್ಯರ್ ಕೈಹಾಕಿದರು. ಆಶಾರ ಮೊದಲು ಗೀತಾ ದತ್ ಆ ಸ್ಥಾನ ತುಂಬಿದ್ದರು. ತಮ್ಮ ಪತಿ ಗುರುದತ್, ವಹೀದಾರಹಮಾನ್ ರಲ್ಲಿ ಆಕರ್ಷಿತರಾಗಿ ತಮ್ಮನ್ನು ಕಡೆಗಣಿಸಲಾರಂಭಿಸಿದಾಗ, ಗೀತಾ ಕುಡಿತಕ್ಕೆ ಶರಣಾದರು. ನಂತರದ ದಿನಗಳಲ್ಲಿ ಗೀತಾ ಅವರ ಸಿರಿಕಂಠ ಸೊರಗಲಾರಂಭಿಸಿತು. ಗೀತರಚನೆಕಾರರು ಲತಾರನ್ನು ಸಂಪರ್ಕಿಸುವಂತೆ ಕೋರಿಕೊಂಡರೂ, ನಯ್ಯರ್ ಹಠಕ್ಕೆ ಬಿದ್ದಿದ್ದರು. ಆಶಾರ ಸ್ಥಾನ ಭದ್ರಗೊಳಿಸಿದ ಖ್ಯಾತಿಯ ಸಿಂಹಪಾಲು ನಯ್ಯರ್ ರವರದೇ..ಆದರೆ ಆಶಾ ಕೃತಘ್ನೆಯಂತೆ ವರ್ತಿಸಿದರು. ಮತ್ತೆ ಲತಾರನ್ನು ಸಂಪರ್ಕಿಸಲು ನಯ್ಯರ್ ಸ್ವಾಭಿಮಾನ ಒಪ್ಪಲಿಲ್ಲ. ನಯ್ಯರ್-ಲತಾ ನಡುವೆ ನಡೆದ ಆ ’ಸಮರ’ ಯಾವುದೆಂದು ಲತಾ ಹೇಳಿದ್ದಿಲ್ಲ. ೭೦ರ ದಶಕ ಅಂತ್ಯವಾಗುತ್ತಿದ್ದಂತೆ ನಯ್ಯರ್ ತೆರೆಮರೆಗೆ ಸರಿಯಲಾರಂಭಿಸಿದರು. ದಶಕಗಟ್ಟಲೇ ನಯ್ಯರ್ ಮುಖದರ್ಶನ ಮಾಡದ ಲತಾ, ೨೦೦೭ರಲ್ಲಿ ನಯ್ಯರ್ ನಿಧನರಾದಾಗ ಶ್ರದ್ಧಾಂಜಲಿ ಅರ್ಪಿಸಿದವರಲ್ಲಿ ಮೊದಲಿಗರಾದರು. ಎಸ್. ಡಿ.ಬರ್ಮನ್ ಕೂಡಾ ನಯ್ಯರ್ ರನ್ನೇ ಅನುಸರಿಸಿದರು. ಬರ್ಮನ್-ನಯ್ಯರ್ ಇಬ್ಬರೂ ಹಿಂದಿ ಚಿತ್ರರಂಗ ಕಂಡ ಚಿತ್ರಸಂಗೀತ ಪ್ರವರ್ತಕರೇ. ಆದರೆ ಅಹಮಿಕೆ-ಠೇಂಕಾರಗಳಿಂದ ಸಮಾನಾಂತರ ದಾರಿ ತುಳಿದರು. ಗೀತೆಯ ಸಾಹಿತ್ಯದಲ್ಲಿ ಅಶ್ಲೀಲತೆ ಅಥವಾ ದ್ವಂದ್ವಾರ್ಥಗಳೆನಾದರೂ ಇದ್ದರೆ ಲತಾ ಹಾಡಲು ನಿರಾಕರಿಸುತ್ತಿದ್ದರು. ಕುಚೋದ್ಯದ, ಮಾದಕ ಧ್ವನಿಯ ಹಾಡುಗಳನ್ನು (ಆದಷ್ಟೂ) ದೂರವಿಟ್ಟರು. ಆಶಾ ಇದರ ಪ್ರಯೋಜನ ಪಡೆದರು. ತಮ್ಮ ಧ್ವನಿಯಲ್ಲಿ ವೈವಿಧ್ಯತೆ ಇದೆ ಎಂಬುದನ್ನು
ಪ್ರಕಟಪಡಿಸುವ ಇರಾದೆಗಿಂತ, ಅಕ್ಕನನ್ನು ಮೀರಿಸುವ ಛಲವೇ ಆಶಾರಲ್ಲಿ ಮನೆಮಾಡಿತ್ತು. ಲತಾರ ’ಮಡಿವಂತಿಕೆ’ ಅವರ ಮಿತಿ.

ಎಸ್.ಡಿ.ಬರ್ಮನ್ ನಂತರ ಲತಾರೊಂದಿಗೆ ರಾಜಿ ಮಾಡಿಕೊಂಡರು. ಇದಕ್ಕೆ ಕಾರಣರಾದವರು ಬರ್ಮನ್ ರ ಅದ್ಭುತಪ್ರತಿಭೆಯ ಮಗ ರಾಹುಲ್ ದೇವ್ (ಆರ್.ಡಿ.) ಬರ್ಮನ್. ರಾಜಿಯ ನಂತರ ಹಿರಿಯ ಬರ್ಮನ್, ಲತಾರ ಹೆಸರು ಮತ್ತಷ್ಟು ಮೇಲೇರಲು ಕಾರಣರಾದರು. ಎಸ್.ಡಿ-ಕಿಶೋರ್ ಕುಮಾರ್-ಆಶಾ-ಮಜ್ರೂಹ್ ತಂಡದಿಂದ, ಆಶಾ ಹಾಗೂ ಮಜ್ರೂಹ್ ಹೊರಬಂದರು. ಆ ಜಾಗವನ್ನು ಲತಾ-ಆನಂದ್ ಬಕ್ಷಿ ತುಂಬಿದರು. ’ಆರಾಧನಾ’ ಚಿತ್ರ ಕಿಶೋರ್-ಲತಾ ಜೋಡಿ ಮಾಂತ್ರಿಕತೆಯೊಂದನ್ನು ಸೃಷ್ಟಿಸಿತ್ತು. ಜ಼ಿದ್ದಿ, ಬಂದಿನಿ, ತೀನ್ ದೇವಿಯಾನ್, ಗೈಡ್, ಆರಾಧನಾ ಚಿತ್ರಗಳು ಬರ್ಮನ್-ಲತಾ-ರಫಿ-ಕಿಶೋರ್ ಪ್ರತಿಭೆಯ ಹಲವು ಸ್ಥರಗಳನ್ನು ಪರಿಚಯಿಸಿತು. ನಂತರ ಇದೇ ತಂಡದ ತೇರೆ ಮೇರೆ ಸಪ್ನೆ, ಶರ್ಮೀಲಿ, ಅಭಿಮಾನ್, ಚುಪ್ಕೆ ಚುಪ್ಕೆ, ಮಿಲಿ ..ಈ ಎಲ್ಲಾ ಚಿತ್ರಗಳೂ ಲತಾರನ್ನು ಮನೆಮಗಳಾಗಿಸಿಬಿಟ್ಟವು. ಕಿಶೋರ್ ಕುಮಾರ್ ಗೆ ಆಗಿನ ಯುವಜನತೆ ಮಾರುಹೋಗಿತ್ತು.

ಆರ್.ಡಿ.ಬರ್ಮನ್, ತಂದೆಯವರಿಗಿಂತ ಹೆಚ್ಚು ವ್ಯವಹಾರಚತುರ, ಸೂಕ್ಷ್ಮಜ್ಞ. ಲತಾ-ಆಶಾ ಇಬ್ಬರ ನಡುವೆಯೂ ಸಮತೋಲನ ಕಾಪಾಡಿಕೊಂಡು ಬಂದರು. ಅರ್.ಡಿ ಸಂಯೋಜನೆಯ ಮೋಜಿನ, ಕಾಲಿನಲ್ಲೇ ತಾಳಹಾಕಿಸುವ ಗೀತೆಗಳು ಆಶಾ ಪಾಲಾದವು. ಸುಶ್ರಾವ್ಯ-ಅರೆಶಾಸ್ತ್ರೀಯ ಶೈಲಿಯ ಗೀತೆಗಳು ಲತಾ ಪಾಲಿಗೆ ಬಂದವು. ಆಶಾ ಮತ್ತೆಮತ್ತೆ ಗೊಣಗಲಾರಂಭಿಸಿದರು. ಕ್ಯಾಬರೆ ದೃಶ್ಯದ ಹಾಡುಗಳು ತಮಗೆ ಬೇಡವೆಂದರು. ಲತಾರಿಗೆ ಹಿಂದೂಸ್ಥಾನಿ ಪಾಠವಾಗಿತ್ತು. ಸಂಗೀತ ಪಟ್ಟುಗಳ ಆಳವಾದ ಪರಿಚಯವಿತ್ತು. ಆಶಾ ಶಾಸ್ತ್ರೀಯ ಸಂಗೀತವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆರ್.ಡಿ ಇದನ್ನು ಚೆನ್ನಾಗಿ ಬಲ್ಲವರಾಗಿದ್ದರು. ಆದರೆ ನೇರವಾಗಿ ಹೇಳಿಬಿಟ್ಟರೆ ರಾದ್ಧಾಂತ ನಿಶ್ಚಿತ. ಲತಾರ ರೆಕಾರ್ಡಿಂಗ್ ಮುಗಿಸಿ, ಆಶಾರನ್ನು ಸಮಾಧಾನ ಪಡಿಸುತ್ತಾ ’ಶಾಸ್ತ್ರೀಯ ಶೈಲಿ ಅರ್ಥಮಾಡಿಕೊಂಡು ತಲೆದೂಗುವವರ ಸಂಖ್ಯೆ ಕಡಿಮೆ. ಕ್ಯಾಬರೆ ದೃಶ್ಯಕ್ಕೆ ನೀನು ಹಾಡುವ ಮಾದಕ ಹಾಡಿಗೆ ಜನ ಈಗ ಬೇಗ ಮರುಳಾಗುತ್ತಾರೆ. ನೀನು ಮಾತ್ರ ಹಾಗೆ ಹಾಡಲು ಸಾಧ್ಯ. ಇಲ್ಲ ಎನ್ನುವ ಹಾಗಿದ್ದರೆ ಆ ದೃಶ್ಯವನ್ನೇ ತೆಗೆದುಬಿಡಲು ಹೇಳುತ್ತೇನೆ. ಅದೂ ಆಗದಿದ್ದರೆ ಲತಾ ದೀದಿಯನ್ನೇ ಅಂಗಲಾಚಬೇಕು..ಇನ್ನೇನು ಮಾಡೋದು?” ಎಂದು ಬಾಂಬ್ ಸಿಡಿಸುತ್ತಿದ್ದರು.

ರಫಿಯಂತಹ ರಫಿಸಾಹೇಬರಲ್ಲೂ, ಲತಾ ತೀವ್ರವಾಗಿ ಜಗಳಮಾಡಿಕೊಡರು. ಹಾಡುಗಳ ರಾಯಲ್ಟಿ ವಿಚಾರದಲ್ಲಿ, ರಫಿ-ಲತಾರ ವಾಗ್ವಾದ ತಾರಕಕ್ಕೇರಿತ್ತು. ರಫಿಸಾಹೇಬರು ದುಡುಕಿನ ಹೇಳಿಕೆ ನೀಡಿದ್ದರು. ಲತಾ ವಿರೋಧಿಸಿದರು. ದುಮ್ಮಾನ ತೋರಿದ ರಫಿ ’ಇನ್ನು ಮೇಲೆ ನಾನು ಲತಾ ಜೊತೆ ಹಾಡುವುದಿಲ್ಲ’ ಎಂದು ಕೂಗಾಡಿದರು. ’ನನಗೂ ನಿಮ್ಮ ಸಹವಾಸ ಬೇಡ’ ಎಂದ ಲತಾ ರೋಷಾವಿಷ್ಟರಾಗಿ ಸ್ಟೂಡಿಯೋದಲ್ಲಿದ್ದ ಸಂಯೋಜಕರಿಗೆಲ್ಲಾ ಕೇಳುವಂತೆ ’ರಫ಼ಿಯವರ ಜೊತೆ ಡ್ಯುಎಟ್ ಹಾಡಲು ಬೇರೆ ಯಾರನ್ನಾದರೂ ವ್ಯವಸ್ಥೆ ಮಾಡಿಕೊಳ್ಳಿ’ ಎಂದು ಬಿರುನುಡಿದು ಹೊರಟುಬಿಟ್ಟರು. ಸುಮಾರು ಮೂರು ವರ್ಷ, ರಫಿಯರವರ ಜೊತೆ ಸುಮನ್ ಕಲ್ಯಾಣಪುರ್ ಯುಗಳಗೀತೆಗಳಲ್ಲಿ ಪಾಲ್ಗೊಂಡರು. ಲತಾ, ಮಹೀಂದರ್ ಕಪೂರ್ ಜೊತೆಗೂಡಿದರು. ಶಂಕರ್-ಜೈಕಿಷನ್ ಜೋಡಿ ಕೊನೆಗೆ ರಫಿ-ಲತಾರಲ್ಲಿ ರಾಜಿಮಾಡಿಸಿದರು.

ಲತಾ ಹಾಡಿದ ಗೀತೆಗಳ ಪಟ್ಟಿ ಮಾಡಲಾಗದು. ಇದು ಅವರವರ ಅಭಿರುಚಿ, ಸಿನಿಮಾ ಪ್ರೀತಿ, ವೈಯಕ್ತಿಕ ಅನಿಸಿಕೆಗಳ ಮೇಲೆ ಅವಲಂಬಿತ. ಹಾಡಲಾರಂಭಿಸುವಾಗ ಅವರು ತೋರುತ್ತಿದ್ದ ಶ್ರದ್ಧೆ, ಏಕಾಗ್ರತೆ, ಹಾಡಿನ ಸನ್ನಿವೇಶದಲ್ಲೇ ಐಕ್ಯವಾಗಿಬಿಡುವ ತಾದಾತ್ಮ್ಯತೆ, ಅನುಕರಣೀಯ. ಅವರು ಹಾಡಿದ ಮೀರಾಭಜನ್ ಗಳು ಒಂದು ಉದಾಹರಣೆ. ಮತ್ತೆ ಮತ್ತೆ ನೆನಪಾಗುವುದು ಆಂಧಿಯ ’ತೇರೆ ಬಿನಾ ಜ಼ಿಂದಗಿ ಸೆ ಕೋಯಿ..’, ’ತುಮ್ ಆ ಗಯೇ ಹೋ’ , ಮೆಹಬೂಬ ಚಿತ್ರದ ’ಮೆರೆ ನೈನಾ ಸಾವನ್ ಭಾದೋ’, ಸೌತೇನ್ ಚಿತ್ರದ ’ಜ಼ಿಂದಗಿ ಪ್ಯಾರ್ ಕಾ ಗೀತ್ ಹೈ’, ಮಹಲ್ ಚಿತ್ರದ ’ಆಯೇಗಾ ಆನೇವಾಲಾ’, ದೋ ರಾಸ್ತೆ ಚಿತ್ರದ ’ಬಿಂದಿಯಾ ಚಮ್ಕೇಗಿ’, ಅಭಿಮಾನ್ ಚಿತ್ರದ ’ಪಿಯಾ ಬಿನಾ ಪಿಯಾ ಬಿನಾ’, ರುಡಾಲಿಯ ’ದಿಲ್ ಹೂಂ ಹೂಂ ಕರೆ’, ಚಿರಾಗ್ ಚಿತ್ರದ ’ತೇರಿ ಆಂಖೊನ್ ಕೆ ಸಿವಾ’, ಸಿಲ್ ಸಿಲಾದ ’ಯೆ ಕಹಾನ್ ಆ ಗಯೇ ಹಮ್’, ಹುಚ್ಚು ಹಿಡಿಸಿದ್ದ ದಿಲ್ವಾಲೇ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದ ಗೀತೆಗಳು, ಪಟ್ಟಿ ಅನಂತವಾಗಿ ಬೆಳೆಯುತ್ತಲೇ ಇರುತ್ತದೆ. ಬಿ.ಟಿ.ಅಥಣಿ, ಗುರುಬಾಲ ನಿರ್ದೇಶಿಸಿದ್ದ ಕನ್ನಡ ಚಿತ್ರ ’ಕ್ರಾಂತೀವೀರ ಸಂಗೊಳ್ಳಿರಾಯಣ್ಣ’ (೧೯೬೭)ದಲ್ಲೂ ಲತಾ ತಮ್ಮ ಮೋಡಿ ಮಾಡಿದ್ದರು. ಲಕ್ಷ್ಮಣ್ ಬೆರೆಳೇಕರ್ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ’ಬೆಳ್ಳನ ಬೆಳಕಾಯಿತು’ ಗೀತೆ ಲತಾ ಕಂಠದಲ್ಲಿ ಹೊಮ್ಮಿತ್ತು. ಈ ಚಿತ್ರದಲ್ಲಿ ಅವರ ಸೋದರಿಯರಾದ ಆಶಾ, ಉಷಾರಲ್ಲದೇ ಮನ್ನಾಡೇ ಕೂಡಾ ಹಾಡಿದ್ದರು. ತಮಿಳು, ಮಲಯಾಳಂನಲ್ಲೂ ಲತಾ ಹಾಡಿದರು. ಭಾರತದ ಬಹುತೇಕ ಭಾಷೆಗಳಲ್ಲಿ ಹಾಡಿದ ಲತಾ, ಐದಾರು ಮರಾಠಿ ಚಿತ್ರಗಳಿಗೆ ಸಂಗೀತವನ್ನೂ ಸಂಯೋಜಿಸಿದರು. ೫೦ರ ದಶಕದಲ್ಲೇ ಚಿತ್ರ ನಿರ್ಮಾಣದಲ್ಲೂ ತೊಡಗಿಕೊಂಡಿದ್ದರು. ತಾವು ಹಾಡಿದ ಹಾಡುಗಳ ಸಂಖ್ಯೆಯನ್ನು ಲತಾ ಎಂದೂ ಲೆಕ್ಕವಿಡಲಿಲ್ಲ. ಅವರ ಪ್ರಬುದ್ಧತೆಗೆ ಇದೊಂದು ನಿದರ್ಶನ.

ಕವಿ ಪ್ರದೀಪ್(ರಾಮಚಂದ್ರ ನಾರಾಯಣ್ ದ್ವಿವೇದಿ) ರ ದೇಶಭಕ್ತಿ ಗೀತೆ ’ಏ ಮೇರೆ ವತನ್ ಕೆ ಲೋಗೋ’ ದ ಗಾಯನ ಲತಾ ಹೆಸರನ್ನು ಅವಿಸ್ಮರಣೀಯವಾಗಿಸಿದೆ. ಚೀನಾ ವಿರುದ್ಧದ ಯುದ್ಧದಲ್ಲಿ ಭಾರತ ೧೯೬೩ರಲ್ಲಿ ಹೀನಾಯವಾಗಿ ಸೋತಾಗ, ನಮ್ಮ ಸೈನಿಕರಿಗೆ ನೈತಿಕವಾಗಿ ಬೆಂಬಲನೀಡುವ, ಅವರ ಸ್ಥೈರ್ಯಹೆಚ್ಚಿಸುವ ಮತ್ತು ಜೀವಕಳೆದುಕೊಂಡ ವೀರಸೈನಿಕರಿಗೆ ಅಶ್ರುತರ್ಪಣ ನೀಡುವ ಉದ್ದೇಶ್ಯದಿಂದ ಪ್ರದೀಪ್ ಬರೆದ ಗೀತೆಗೆ, ಸಂಗೀತ ನಿರ್ದೇಶಕ ರಾಮಚಂದ್ರ ಚಿತಾಲ್ಕರ್ (ಸಿ.ರಾಮಚಂದ್ರ) ಗಂಧರ್ವ ಸ್ಪರ್ಶ ನೀಡಿದ್ದರು. ಲತಾ, ಗೀತೆಯ ಒಂದೊಂದು ಸಾಲನ್ನೂ ಅನುಭವಿಸಿ ಹಾಡಿದರು. ’ಜನಗಣಮನ’, ’ವಂದೇಮಾತರಂ’, ’ಸಾರೆ ಜಹಾನ್ಸೆ ಅಚ್ಚಾ’ ಸಾಲಿಗೆ ಸೇರುವ ಈ ಗೀತೆಯನ್ನು ಮೊದಲಬಾರಿ ಲತಾ ೧೯೬೩ರ ಗಣರಾಜ್ಯದದಿನದಂದು ರಾಷ್ಟ್ರಪತಿ ರಾಧಾಕೃಷ್ಣನ್ ಮತ್ತು ಪ್ರಧಾನಿ ನೆಹರು ಸಮ್ಮುಖದಲ್ಲಿ ದೆಹಲಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಹಾಡಿದರು. ಸ್ವತಃ ನೆಹರು ಈ ಹಾಡು ಕೇಳಿ ಭಾವುಕರಾಗಿದ್ದರು. ಲತಾ ಈ ಹಾಡಿಗೆ ಹಣ ಪಡೆಯಲಿಲ್ಲ. ೧೯೯೮ರಲ್ಲಿ ಪ್ರದೀಪ್ ತೀವ್ರ ಖಾಯಿಲೆ ಮಲಗಿದ್ದಾಗ ಲತಾ ಒಂದು ಲಕ್ಷದ ಚೆಕ್ ಅನ್ನು ಕಳಿಸಿಕೊಟ್ಟರು. ’ನಿಮ್ಮ ಆ ಒಂದು ಗೀತೆಗೆ ನಾನು ಅನಂತಕಾಲವೂ ಋಣಿ ಪ್ರದೀಪ್ ಜಿ’ ಎಂದು ಕೃತಜ್ಞತಾಭಾವದಿಂದ ನುಡಿದಿದ್ದರು. ೯೮ರ ಡಿಸೆಂಬರ್ ನಲ್ಲಿ ಪ್ರದೀಪ್ ತೀರಿಕೊಂಡರು.

ರಾಜಕೀಯವಾಗಿ ಲತಾರದ್ದು ’ಬಲಪಂಥೀಯ’ ನಿಲುವುಗಳು. ಅದು ಅವರ ಆಯ್ಕೆ. ಹಿಂದೂ ಮಹಾಸಭಾ ವಿಚಾರದಲ್ಲೂ ಅವರಿಗೆ ಮೃದುಧೋರಣೆ. ೩೦ ರ ದಶಕದಲ್ಲಿ ಸಾವರ್ಕರ್ ಲತಾರ ತಂದೆಯವರ ನಾಟಕ ಕಂಪನಿಗೆ ಬರೆದುಕೊಟ್ಟ ನಾಟಕವೊಂದರಿಂದ ಅಪಾರ ಜನಪ್ರಿಯತೆ ದೊರಕಿತ್ತು. ನಾಟಕದ ಹಾಡುಗಳು ಮನೆಮಾತಾದವು. ಆರ್ಥಿಕ ಸಂಕಷ್ಟದಲ್ಲಿದ್ದ ಲತಾ ಕುಟುಂಬಕ್ಕೂ ಬಹಳ ಸಹಾಯವಾಗಿತ್ತು. ಈ ಅಭಿಮಾನವನ್ನು ಲತಾ ಕೊನೆಯವರೆಗೂ ಉಳಿಸಿಕೊಂಡರು. ೨೦೧೪ರ ಚುನಾವಣೆಗೆ ಮುಂಚೆ, ’ಮೋದಿ ಪ್ರಧಾನಿಯಾಗಲಿ’ ಎಂಬ ಹೇಳಿಕೆ ನೀಡಿದಾಗ, ಮುಂಬೈ ನಗರ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ್ ಚಂದೂರ್ಕರ್ ತೀವ್ರವಾಗಿ ಟೀಕಿಸಿದ್ದರು. ’ಲತಾಜಿಯವರಿಗೆ ಪ್ರಶಸ್ತಿಗಳನ್ನು ನಾವು ಕೊಡಬೇಕು…ಆದರೆ ಅವರಿಗೆ ಮೋದಿ ಪ್ರಧಾನಿಯಾಗಬೇಕಂತೆ.. ಪದ್ಮಪ್ರಶಸ್ತಿ, ಭಾರತರತ್ನವನ್ನೆಲ್ಲಾ ಆಕೆ ವಾಪಸು ಮಾಡಲಿ’ ಎಂದು ಗುಡುಗಿದ್ದರು. ಅಧಿಕಾರದಲ್ಲಿದ್ದ ಸೇನಾ-ಬಿಜೆಪಿ ಸರ್ಕಾರ ಚಂದೂರ್ಕರ್ ರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. “ಆ ಪ್ರಶಸ್ತಿಗಳಾವುದೂ ನಿಮ್ಮಪ್ಪನ ಮನೆ ಆಸ್ತಿಯಲ್ಲ. ಲತಾಜಿಯವರ ಸಾಧನೆ ಗುರುತಿಸಿ ಸರ್ಕಾರಗಳು ತೋರಿದ ಗೌರವವಷ್ಟೇ. ನಿಮಗೆ ಬೇಡವಾದರೆ ಅವರ ಹಾಡುಗಳನ್ನು ಕೇಳದೇ ತೆಪ್ಪಗಿರಿ’ ಎಂದು ಸಂಜಯ್ ರಾವುತ್ ತಿರುಗೇಟು ನೀಡಿದ್ದರು. ದೆಹಲಿಯ ತಮ್ಮ ಪಕ್ಷದ ಹಿರಿಯರಿಂದಲೂ ಚಂದೂರ್ಕರ್ ಗೆ ’ಬುದ್ಧಿವಾದ’ ವಾಯಿತು. ನಂತರ ಘಟನೆ ತಣ್ಣಗಾಯಿತು. ಕೇಂದ್ರದ ವಿವಾದಾತ್ಮಕ ಕೃಷಿ ಮಸೂದೆಯನ್ನು ಸಮರ್ಥಿಸುವ ದಾಟಿಯಲ್ಲಿ ಲತಾ ಮತ್ತು ಸಚಿನ್ ತೆಂಡೂಲ್ಕರ್ ಮಾಡಿದ ಟ್ವೀಟ್ ಒಂದು ವಿವಾದ ಸೃಷ್ಟಿಸಿತ್ತು. ಪ್ರಗತಿಪರರ ತೀವ್ರ ಆಕ್ರೋಶಕ್ಕೆ ತುತ್ತಾಯಿತು. ಅಲ್ಲದೇ ಉದ್ಧವ್ ಠಾಕರೆ ಸರ್ಕಾರ ಲತಾ-ಸಚಿನ್ ರ ಟ್ವೀಟ್ ವಿರುದ್ಧ ತನಿಖೆಯನ್ನು ಆದೇಶಿಸಿತ್ತು. ತೀವ್ರ ವಿರೋಧ ವ್ಯಕ್ತವಾದಾಗ, ಆಂದಿನ ಗೃಹ ಮಂತ್ರಿ ಅನಿಲ್ ದೇಶಮುಖ್, ’ಇದು ಅವರಿಬ್ಬರ ವಿರುದ್ಧದ ತನಿಖೆಯಲ್ಲ…ಈ ರೀತಿ ಟ್ವೀಟ್ ಮಾಡಲು ಅವರಿಗೆ ಬಿಜೆಪಿ ಪಕ್ಷದ ಒತ್ತಡವಿತ್ತೇ ಎಂಬುದರ ಬಗ್ಗೆ ತನಿಖೆ. ಆ ಪಕ್ಷದ ಐಟಿ ಸೆಲ್ ನವರನ್ನು ವಿಚಾರಿಸುತ್ತಿದ್ದೇವೆ.’ ಎಂಬ ’ಸಮಾಧಾನಕರ’ ಹೇಳಿಕೆ ಕೊಟ್ಟಿದ್ದರು.

ಫೋಟೋ ಕೃಪೆ : ಗೂಗಲ್

ಮಹಾ ಕ್ರಿಕೆಟ್ ಪ್ರೇಮಿ ಲತಾ, ಪ್ರತಿಷ್ಟಿತ ರಾಯಲ್ ಆಲ್ಬರ್ಟ್ ಹಾಲ್ ನಲ್ಲಿ ಹಾಡಿದ ಮೊದಲ ಭಾರತೀಯ ಗಾಯಕಿ. ರಾಜ್ಯಸಭೆಗೆ ನಾಮಕರಣಗೊಂಡರೂ ಯಾವುದೇ ಕಲಾಪಗಳಲ್ಲಿ ಭಾಗಿಯಾಗಲು ಅವರ ಸೊರಗುತ್ತಿದ್ದ ಆರೋಗ್ಯ ಅವಕಾಶ ಕೊಡಲಿಲ್ಲ. ಲತಾ ಒಂದು ಪೈಸೆ ಸಂಬಳವನ್ನೂ ಪಡೆಯಲಿಲ್ಲ. ದೆಹಲಿಯಲ್ಲಿ ಮನೆಯನ್ನೂ ನಿರಾಕರಿಸಿದ್ದರು.

೧೩ರ ಚಿಕ್ಕ ವಯಸ್ಸಿಗೆ ತಂದೆ ಕಳೆದುಕೊಂಡು, ಹಾಡಲಾರಂಭಿಸಿ ಸಂಸಾರದ ನೊಗ ಹೊತ್ತರು ಲತಾ. ಹಲವರ ದಾಕ್ಷಿಣ್ಯಕ್ಕೆ ಒಳಗಾದರೂ ಸ್ವಾಭಿಮಾನಿಯಾಗಿಯೇ ಉಳಿದರು. ಕಲಿಕೆಯನ್ನು ತಪಸ್ಸಾಗಿ ಸ್ವೀಕರಿಸಿದರು. ಹಲವು ಕೋಟಿಆಸ್ತಿಯ ಒಡತಿ ಯಾವುದೇ ಆಡಂಬರಕ್ಕೆ ಬಲಿಯಾಗಲಿಲ್ಲ. ಅವರ ಧ್ವನಿಯಂತೆಯೇ ಸರಳ-ಸುಂದರ ಬಾಳು ಬಾಳಿದರು. ಲತಾ-ಆಶಾ ಸೋದರಿಯರ ನಡುವೆ ಕಂದಕತೋಡಿದ್ದರಲ್ಲಿ ಉದ್ಯಮದವರ ಮನೆಹಾಳುತನ, ಮಾಧ್ಯಮಗಳ ಕಿಡಿಗೇಡಿತನದ ಪಾಲೂ ಇದೆ. ಲತಾರ ನೆರಳಾಗದೇ ತನ್ನತನ ಉಳಿಸಿಕೊಂಡು ಬೆಳೆದ ಆಶಾರ ಛಲವೂ ಶ್ಲಾಘನೀಯ.

೧೯೪೨ರಿಂದ ಇತ್ತೀಚಿನ ವರೆಗೂ ಎಲ್ಲಾ ಪ್ರಾಕಾರಗಳ ಸಂಗೀತನಿರ್ದೇಶಕರೊಂದಿಗೂ ಕೆಲಸಮಾಡಿದ, ಹಲವು ವಿಭಿನ್ನ ಪ್ರತಿಭೆಗಳ, ಭಾಷೆಗಳ, ಸಹಗಾಯಕರೊಂದಿಗೆ ದಶಕಗಟ್ಟಲೇ ಹಾಡಿದ ಲತಾ, ಮರಾಠಿ ಹೃದಯದ ಅಪ್ಪಟ ಭಾರತೀಯರು. ಹೃದಯವಂತಿಕೆಯಿಂದ ವರ್ತಿಸಿದ್ದೂ ಇದೆ. ತಮ್ಮ ಸ್ವಭಾವದಿಂದ ಹಲವರನ್ನು ದೂರಮಾಡಿಕೊಂಡಿದ್ದೂ ನಿಜ. ರಾಜಿ ಮಾಡಿಕೊಳ್ಳುವ ವಿಶಾಲತೆಯೂ ಅವರಲ್ಲಿತ್ತು. ಹಾಗೆಯೇ ಮುಖವನ್ನೂ ನೋಡದೇ ಇದ್ದುಬಿಡುವ ರೊಚ್ಚುತನವೂ ಇತ್ತು. ಅವರಿಗೆ ಅವರದೇ ಆದ ಇತಿ-ಮಿತಿಗಳಿತ್ತು. ಜಾನಕಿ-ಸುಶೀಲ-ವಾಣಿಜಯರಾಂ-ಚಿತ್ರ ರಂತೆ ಪ್ರತಿಭೆಗೆ ಸವಾಲೊಡ್ಡುವ ಸಂಯೋಜನೆಗಳ ಬಗ್ಗೆಯೂ ಲತಾ ಗಮನಕೊಡಬಹುದಿತ್ತು. ಜಿ.ಕೆ.ವೆಂಕಟೇಶ್-ಇಳಯರಾಜಾ-ಎಮ್.ಎಸ್.ವಿಶ್ವನಾಥನ್-ಹಂಸಲೇಖ ತರದ ರಾಗಗಾರುಡಿಗರು ಬಾಲಿವುಡ್ ಗೆ ದಕ್ಕಲಿಲ್ಲ.

ಸ್ವಭಾವ ವೈಪರೀತ್ಯ, ಇತಿ-ಮಿತಿಗಳೆನೇ ಇರಲಿ, ಲತಾ ಸ್ಮರಣಾರ್ಹರು. ೫೦-೬೦ರ ದಶಕದಿಂದಲೇ ಅವರ ಮಾಯೆಗೆ ಸಿಲುಕಿದ, ಅವರು ’ಪ್ರಶ್ನಾತೀತ’ರೆಂದು ಭ್ರಮಿಸಿದ ಮಂದಿಗೆ ಪ್ರಾತಃಸ್ಮರಣೀಯರು. ಲತಾ ನಿರ್ಗಮನದೊಂದಿಗೆ, ಭಾರತೀಯ ಸಿನಿಮಾದ ಮಹಾಪರ್ವವೊಂದು ಕೊನೆಗೊಂಡಿದೆ. ಅಂತಹ ಒಂದು ಪರ್ವಕಾಲ ಸನಿಹದಲ್ಲೆಲ್ಲೂ ಮತ್ತೊಮ್ಮೆ ಸಂಭವಿಸುವ ಲಕ್ಷಣಗಳಿಲ್ಲ.


  • ರಾಘವನ ಚಕ್ರವರ್ತಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW