ಜೀವನದುದ್ದಕ್ಕೂ ನಾವು ನಮ್ಮನ್ನು ನೋಡುವುದಕ್ಕಿಂತ ಇನ್ನೊಬ್ಬರನ್ನು ನೋಡುವುದರಲ್ಲೇ ಹೆಚ್ಚು ಸಮಯವನ್ನು ಕಳೆಯುತ್ತೇವೆ. ಬೇರೆಯವರ ಐಷಾರಾಮಿ ಮನೆ ನೋಡಿ, ನಾವು ಕೂಡಾ ಇಂಥದ್ದೇ ಮನೆ ಕಟ್ಟಬೇಕೆಂದು ಇದ್ದ ಬದ್ದ ಸಾಲ ಪಡೆದು ಜೀವನ ಪರಿಯಂತ ಬ್ಯಾಂಕ್ ಲೋನ್ ಕಟ್ಟುವುದರಲ್ಲಿ ಜೀವನ ಸವೆದುಬಿಡುತ್ತೇವೆ. ಇದೂ ಒಂದು ಜೀವನವೇ ? ಮುಷ್ತಾಕ್ ಹೆನ್ನಾಬೈಲ್ ಅವರ ಮನಮುಟ್ಟುವ ಲೇಖನ. ಓದಿ ಜೀವನವನೊಮ್ಮೆ ಅರ್ಥೈಸಿಕೊಳ್ಳಿ…
ಬಹುದಿನಗಳಿಂದ ಬೇಟೆ ಸಿಗದೆ ಹಸಿವಿನಿಂದ ಬಳಲುತ್ತಿದ್ದ ಸಿಂಹವೊಂದು ಜಿಂಕೆಯನ್ನು ಅಟ್ಟಿಸಿಕೊಂಡು ಹೋಗುತ್ತದೆ. ಜೀವಭಯದಿಂದ ಶಕ್ತಿಮೀರಿ ಓಡಿದ ಜಿಂಕೆ ತಪ್ಪಿಸಿಕೊಳ್ಳುತ್ತದೆ. ಬೇಟೆ ತಪ್ಪಿದ್ದಕ್ಕೆ ಬೇಸರಗೊಂಡ ಸಿಂಹ ಜಿಂಕೆ ತಪ್ಪಿಸಿಕೊಂಡ ದಿಕ್ಕನ್ನೇ ದಿಟ್ಟಿಸುತ್ತಾ”ಛೇ…ಇದೂ ಒಂದು ಜೀವನವೇ ? ಹೊಟ್ಟೆ ತುಂಬಿಸಿಕೊಳ್ಳಬೇಕಿದ್ದರೆ ಅದೆಷ್ಟು ಕಷ್ಟ? ನಾವು ತಿನ್ನುವ ಪ್ರಾಣಿಗಳೆಲ್ಲವೂ ನಮಗಿಂತ ಹೆಚ್ಚು ವೇಗವಾಗಿ ಓಡಿ ತಪ್ಪಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಮಾಂಸಾಹಾರಿಯಾಗುವುದಕ್ಕಿಂತ ಸಸ್ಯಾಹಾರಿಯಾಗಿದ್ದರೆ ಎಲ್ಲಾ ಕಡೆ ಹೇರಳವಾಗಿ ಆಹಾರ ಸಿಗುತ್ತಿತ್ತು.

ಫೋಟೋ ಕೃಪೆ : theguardian
ಎಲ್ಲಿಯೂ ಓಡುವ ಅವಶ್ಯಕತೆ ಇರುವುದಿಲ್ಲ. #ಸಸ್ಯಾಹಾರಿ ಪ್ರಾಣಿಗಳು ನಿಜಕ್ಕೂ ಪುಣ್ಯ ಮಾಡಿವೆ”ಎಂದು ಮರುಗುತ್ತದೆ. ಅತ್ತ ಸಿಂಹದಿಂದ ತಪ್ಪಿಸಿಕೊಂಡ ಜಿಂಕೆ ಎತ್ತರದ ಜಾಗವೊಂದರಲ್ಲಿ ನಿಂತು ಓಡಿ ಬಂದ ದಾರಿಯ ತುದಿಯಲ್ಲಿ ನಿಂತಿದ್ದ ಸಿಂಹವನ್ನು ಮರೆಯಿಂದ ನೋಡುತ್ತಾ”ಎಷ್ಟು ದಿನ ಹೀಗೆ ತಪ್ಪಿಸಿಕೊಂಡು ಓಡುವುದು. ಈ ನಡು ಪ್ರಾಯದಲ್ಲಿ ಹೇಗಾದರೂ ಪಾರಾಗಬಹುದು. ಆದರೆ ವಯಸ್ಸಾದ ಮೇಲೆ ಹೀಗೆ ಓಡಲು ಸಾಧ್ಯವೇ? ಹುಟ್ಟಿದರೆ ಸಿಂಹವಾಗಿ ಹುಟ್ಟಬೇಕು.ಜಿಂಕೆಯಾಗಿ ಹುಟ್ಟಿದರೆ ಇದೇ ಅವಸ್ಥೆ “ಎಂದು ಬೇಸರಿಸಿಕೊಳ್ಳುತ್ತದೆ. ಕಾಡಿನಲ್ಲಿದ್ದ ಜಿರಾಫೆಯೂ ಕೂಡ,ತಾನು ಏಕಿಷ್ಟು ಉದ್ದ? ನಡೆಯುತ್ತಿದ್ದರೆ ಕಾಡಿನ ಸಕಲ ಪ್ರಾಣಿಗಳು ತನ್ನನ್ನೇ ನೋಡಿ ಕೂಗುತ್ತವೆ.ಏಕಾಂತವೆಂಬುದೇ ಇಲ್ಲ. ಮಳೆ ಗಾಳಿ ಬಿಸಿಲು ಬಂದರೆ ಎಲ್ಲರಿಗೂ ಒಂದು ಸೂರಿನಡಿಯಲ್ಲಿ ಆಶ್ರಯ ಪಡೆಯಬಹುದು. ಮೊಲ, ಆಮೆ, ಅಳಿಲು ಮುಂತಾದ ಜೀವಿಗಳು ಎಲ್ಲಿ ಬೇಕೋ ಅಲ್ಲಿ ತೂರಿಕೊಂಡು ಬದುಕುತ್ತಿವೆ.ತನಗೆ ಮಾತ್ರ ಅಂಥ ಭಾಗ್ಯವಿಲ್ಲ. ಯಾವ ಸೂರಿನಡಿಯಲ್ಲಿ ತಾನಿದ್ದರೂ ತನಗಿಂತ ಆ ಸೂರು ಚಿಕ್ಕದಿರುತ್ತದೆ ಎಂದು ನಿರಾಶೆ ವ್ಯಕ್ತಪಡಿಸುತ್ತದೆ. ಅಲ್ಲಿದ್ದ ಸಣ್ಣ ಮೊಲ ಜಿರಾಫೆಯನ್ನು ನೋಡಿ, ಜಿರಾಫೆ ಅದೆಂತಹ ಭಾಗ್ಯಶಾಲಿ. ನಡೆಯುತ್ತಿದ್ದರೆ ಇಡೀ ಕಾಡು ಅದನ್ನೇ ನೋಡುತ್ತದೆ. ಕಾಡಿನ ಎತ್ತರದ ಮರಗಳ ಶುದ್ಧವಾದ ಎಲೆಗಳನ್ನು ತಿನ್ನುವ ಅವಕಾಶ ಅದಕ್ಕಿದೆ. ತಾನು ಬಹಳ ಚಿಕ್ಕವ,ಯಾರಿಗೂ ಕಾಣಿಸುವುದಿಲ್ಲ.ಕೆಳಗಿರುವ ಪ್ರಾಣಿಗಳ ಮಲ ಮತ್ತು ಮಣ್ಣು ಮಿಶ್ರಿತ ಎಲೆಗಳನ್ನು ತಿನ್ನಬೇಕು. ತನ್ನನ್ನು ಯಾರೂ ಗಮನಿಸುವವರೇ ಇಲ್ಲ. ಇದ್ದೂ ಸತ್ತ ಹಾಗೆ ಎಂದು ಭಾವಿಸುತ್ತದೆ. ಇಂತಹ ಜೀವ- ಜೀವನ ಮತ್ತು ಭಾವನೆಗಳ ವ್ಯತ್ಯಾಸ ಮನುಷ್ಯನೂ ಸೇರಿದಂತೆ ಭೂಮಿಯ ಮೇಲಿನ ಪ್ರತೀ ಜೀವಿಗಳಿಗೂ ಇದ್ದೇ ಇರುತ್ತದೆ. ಇದಕ್ಕೆ ವಾಸ್ತವಕ್ಕಿಂತ ಹೆಚ್ಚಾಗಿ, ಕಾಣುವ ನೋಟ, ಬೌದ್ಧಿಕ ಬರಡುತನ ಮತ್ತು ತಮ್ಮತನದ ಮೇಲೆ ಮೂಡುವ ವೈರಾಗ್ಯವೇ ಕಾರಣ.

ಜೀವನದುದ್ದಕ್ಕೂ ನಾವು ನಮ್ಮನ್ನು ನೋಡುವುದಕ್ಕಿಂತ ಇನ್ನೊಬ್ಬರನ್ನು ನೋಡುವುದರಲ್ಲೇ ಹೆಚ್ಚು ಸಮಯವನ್ನು ಕಳೆಯುತ್ತೇವೆ. ಜೀವನವು ಜಗತ್ತನ್ನು ನಾವು ಹೇಗೆ ನೋಡಿ ಅರ್ಥೈಸುತ್ತೇವೆ ಮತ್ತು ಅನುಸರಿಸುತ್ತೇವೆ ಎನ್ನುವುದರ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ಸುಂದರವಾದ ಐಷಾರಾಮಿ ಮನೆ ಕಟ್ಟಿದವನೊಬ್ಬ ಸುಖವಾಗಿ ಬದುಕುತ್ತಿದ್ದಾನೆ ಎಂದು ಭಾವಿಸುತ್ತೇವೆ. ಯಾರದ್ದೋ ಮಾತು ಕೇಳಿ ಒಂದೊಂದೆ ಕೋಣೆಗಳನ್ನು ಹೆಚ್ಚಿಸಿಕೊಂಡು ಅಗತ್ಯಕ್ಕಿಂತ ಹೆಚ್ಚು ದೊಡ್ಡ ಮನೆ ಕಟ್ಟಿ, ಕೊಡುತ್ತಾರೆ ಎಂಬ ಒಂದೇ ಕಾರಣಕ್ಕೆ ಕೊಟ್ಟಷ್ಟೂ ಲೋನ್ ತೆಗೆದುಕೊಂಡು, ಆಮೇಲೆ ಲೋನ್ ಕಟ್ಟಲಾರದೆ ಒದ್ದಾಡುವ ಮನೆಯ ಮಾಲಿಕನ ಪಾಡು ಅವನಿಗಷ್ಟೆ ಗೊತ್ತಿರುತ್ತದೆ.ತನ್ನ ಅಂತಸ್ತನ್ನು ಇನ್ನೊಬ್ಬರಿಗೆ ತೋರಿಸುವ ಭರಾಟೆಯಲ್ಲಿ ಆದಾಯಕ್ಕಿಂತ ಹೆಚ್ಚು ಬರುವ ತಿಂಗಳ ಕಂತು ಕಟ್ಟಿಯೇ ಅವನ ಜೀವನ ಹೈರಾಣಾಗಿರುತ್ತದೆ.ಆ ಹೊತ್ತಿನಲ್ಲಿ ಅವನಿಗೆ ಅರಮನೆಯಂತಹ ಮನೆಗಿಂತ ಹುಲ್ಲಿನ ಗುಡಿಸಲಿನ ಮನೆಯೇ ಹೆಚ್ಚು ಸುಖಕ್ಕೆ ಸೂಕ್ತವಿತ್ತು ಎನಿಸುತ್ತದೆ. ಆ ಚಿಂತೆಯಲ್ಲೇ ಪ್ರಾಯವಲ್ಲದ ಪ್ರಾಯದಲ್ಲಿ ದೇಹದೊಳಗೆ ಬಿಪಿ-ಶುಗರ್ ಸೇರಿಕೊಂಡು ಅದರಿಂದ ಪ್ರೇರಿತವಾದ ಇತರ ರೋಗಗಳ ಗೂಡಾಗಿ,ಬದುಕಬೇಕಾದ ಪ್ರಾಯದಲ್ಲಿ ಪ್ರಾಯಶ್ಚಿತಕ್ಕೂ ಪುರುಸೊತ್ತಿಲ್ಲದೆ ಚಟ್ಟವೇರುತ್ತಾನೆ.ಕಟ್ಟಿದ ಮನೆಯಲ್ಲಿ ಯಾರಿಗೂ ಸುಖವಿಲ್ಲ.ಐಷಾರಾಮಿತನದಲ್ಲಿ ಬದುಕುವವನ ಅವಸ್ಥೆ ಹೀಗಾದರೆ,ಗುಡಿಸಲಲ್ಲಿ ಬದುಕುವವನೂ ಐಷಾರಾಮಿ ಜೀವನದ ಬಯಕೆಯಲ್ಲೇ ಜೀವನವಿಡೀ ಕೊರಗುತ್ತಾನೆ.ಶ್ರೀಮಂತನು ಎಲ್ಲವನ್ನು ಪಡೆದು ಪಡಬಾರದ ಪಾಡುಪಟ್ಟರೆ,ಪಾಮರನು ಪಡೆಯದೆ ಪಡೆಯಲಿಲ್ಲವೆಂದು ವ್ಯಥೆಪಡುತ್ತಿರುತ್ತಾನೆ.ಎಲ್ಲರಿಗೂ ಅವರವರ ಸಮಸ್ಯೆಗಳೇ ದೊಡ್ಡದೆಂದು ತೋರುತ್ತದೆ.ಇನ್ನೊಬ್ಬರು ಸುಖವಾಗಿದ್ದಾರೆ ಎಂದೇ ಭಾವಿಸಿ ಅವರ ಸುಖವನ್ನು ತಾವೂ ಬಯಸುತ್ತಾರೆ.ಅವರ ಸುಖದ ಒಳಮರ್ಮಗಳ ಅರಿವು ಹಾಗೆ ಆಲೋಚಿಸುವವರಿಗೆ ಇರುವುದಿಲ್ಲ.ಕಾಣುವ ಸುಖವು ಸುಖದಂತೆ ಕಾಣುತ್ತದೆ ಬಿಟ್ಟರೆ ಅದು ಸುಖವಲ್ಲ ಎಂಬುದು ಆ ಕಷ್ಟ ಅನುಭವಿಸಿದವನಿಗೆ ಮಾತ್ರ ಗೊತ್ತಿರುತ್ತದೆ.

ಫೋಟೋ ಕೃಪೆ : vistapointe
ಇನ್ನೊಬ್ಬರಂತೆ ತಾವಾಗಬೇಕೆಂಬ ಹಪಾಹಪಿಕೆಯಿರುವವರು ಸುಖ-ನೆಮ್ಮದಿಗಿರುವ ನೂರು ದಾರಿ ಬಿಟ್ಟು ಇನ್ನೊಬ್ಬರ ದಾರಿಯನ್ನು ಅನುಸರಿಸುವುದು,ಅನುಕರಿಸುವುದು ಮತ್ತು ಆಶಿಸುವುದು ಸುಖ ಕಳೆದುಕೊಳ್ಳುವುದರ ಮೂಲ ಕಾರಣ.ಜೀವನವನ್ನು ರೂಪಿಸಿಕೊಳ್ಳಬೇಕಿದ್ದರೆ ಮೊದಲು ಜೀವ ಮತ್ತು ಜೀವನದ ವೈವಿಧ್ಯತೆಗಳನ್ನು ಅರಿಯಬೇಕು.ಸಾಲು ಸಾಲು ಸವಾಲುಗಳ ಸಂಭಾವ್ಯತೆಯ ಜ್ಞಾನ ಅತ್ಯಗತ್ಯ.ಸಮಸ್ಯೆಗಳ ಸಹಚರ್ಯವನ್ನು ಹೊಂದದೆ ಭೂಮಿಯ ಮೇಲೆ ಯಾವ ಜೀವಿಯೂ ಮರಣಿಸಿಲ್ಲ ಮತ್ತು ಮರಣಿಸುವುದೂ ಇಲ್ಲ ಎಂಬ ವಾಸ್ತವ ಅರಿತಾಗ ಸಮಸ್ಯೆಗಳು ಸಮಸ್ಯೆಗಳಾಗದೆ ಪ್ರತಿಯೊಂದಕ್ಕೂ ಪರಿಹಾರ ಪ್ರಜ್ಞೆ ಮೂಡುತ್ತದೆ.ಭಿನ್ನತೆಯೊಂದಿಗೆ ಸೌಹಾರ್ದ ಸಾಧಿಸುವ ಗುಣ ಅಮೂಲ್ಯವಾದುದು.ಯಾರು ಜೀವ ಭಾವ ಭಿನ್ನತೆಯೊಂದಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಬದುಕು ಸವೆಸುತ್ತಾನೋ ಅವನೇ ನೈಜ ಜ್ಞಾನಿ. ಜ್ಞಾನದ ಪ್ರಾಯೋಗಿಕತೆ ಬದುಕಿನ ಪರ್ವಗಳಲ್ಲಿ ಗೋಚರಿಸಿದರೆ ಅಂತಹವರ ಹುಟ್ಟು ಸಾರ್ಥಕ ಮತ್ತು ಯಶಸ್ವಿ.ಅದೆಷ್ಟೋ ದೊಡ್ಡ ದೊಡ್ಡ ಜ್ಞಾನಿಗಳು ಬದುಕಿನ ಸಮಸ್ಯೆಗಳ ಪ್ರಾಥಮಿಕ #ಜ್ಞಾನ ಇಲ್ಲದೆ ಅಜ್ಞಾನಿಗಳಾಗಿ ವರ್ತಿಸಿದ್ದಾರೆ.ಅತೀ ಅಗತ್ಯದ ಜ್ಞಾನವೇ ಜೀವಿಸುವ ಮತ್ತು ಜೀವಿಸುವಂತೆ ಮಾಡುವ ಜ್ಞಾನ.ಸಮಸ್ಯೆಗಳಿಗೆ ಒಂದು ನಿರ್ದಿಷ್ಟ ಮೂಲ, ರೂಪ,ಸಮಯ,ಸಾಂದ್ರತೆಗಳೆಂಬುದಿಲ್ಲ.ಕೆಲವೊಂದು ಗೋಚರವಾದರೆ ಹಿಡಿತಕ್ಕೆ ಸಿಗದ ಅಷ್ಟೇ ಅಗೋಚರ ಸಮಸ್ಯೆಗಳೂ ಇವೆ.
ಬೆಳೆಯುವ ತೆಂಗಿನ ಮರವು ಇನ್ನೊಂದು ಮರದ ನೆರಳಿನ ದಿಕ್ಕನ್ನು ಧಿಕ್ಕರಿಸುತ್ತದೆ. ನೆರಳೇ ಸಮಸ್ಯೆ ಅದಕ್ಕೆ.ಅದೆಷ್ಟೋ ಜೀವಿಗಳಿಗೆ ಮರದ ನೆರಳೇ ಆಶ್ರಯ.ನೆರಳು ಸಮಸ್ಯೆಯೂ ಹೌದು ಪರಿಹಾರವೂ ಹೌದು.ಸಮಸ್ಯೆಗಳ ಬಹುಮುಖಿತ್ವ ಅರಿತು ಬದುಕಿ ಸಹಜತೆಯಿಂದ ಸ್ವೀಕರಿಸಿದರೆ ಸಮಸ್ಯೆಗಳು ಸಮಸ್ಯೆಗಳಾಗುವುದಿಲ್ಲ.ಮಾನಸಿಕ ನೆಮ್ಮದಿಯಿಂದಿರಲು,ಸಮಸ್ಯೆಗಳು ಸಾರ್ವಕಾಲಿಕವಾದ ಪ್ರತಿಯೊಂದು ಜೀವಿಗಳ ಸಜೀವತನದ ಸಾಕ್ಷಿಗಳು ಎಂಬ ವಾಸ್ತವತೆಯೆ ಅರಿವೇ ಸಾಕು.ಇನ್ನಿರುವುದು ಸಮಸ್ಯೆಗಳನ್ನು ದಾಟುವುದು ಹೇಗೆಂಬ ಪ್ರಶ್ನೆ. ಕಾಲಕಾಲಕ್ಕೆ ಸಮಸ್ಯೆಗಳನ್ನು ನಿರೀಕ್ಷಿಸಿಯೇ ಇರುವುದು ಮತ್ತು ಬದುಕಿನ ಭಾಗವೆಂದು ಪರಿಗಣಿಸಿದಾಗ ಅರ್ಧ ಸಮಸ್ಯೆ ಪರಿಹಾರವಾದಂತೆ.ಇನ್ನುಳಿದ ಅರ್ಧವನ್ನು ಇಡೀ ಜೀವನದಲ್ಲಿ ಸಭ್ಯತೆ,ಸೌಹಾರ್ದ ಮತ್ತು ಸಕಲ ರೀತಿಯ ಸಾಂಗತ್ಯಗಳ ಮೂಲಕ ಸರಾಗವಾಗಿ ಜಯಿಸಬಹುದು.ಸಮಸ್ಯೆಗಳು ಅದೆಷ್ಟೇ ಬಹುಸಂಖ್ಯೆ, ಬಹುರೂಪಿಯಾದರೂ ಜೀವ ಸಾಂಗತ್ಯಗಳು ಸೂಸುವ ಸುಗಂಧವನ್ನು ದುರ್ಗಂಧವಾಗಿಸಲಾರವು. ಸಮಸ್ಯೆಗಳಿಂದ ದೂರ ಹೋಗಲು ಸರ್ವಸಂಗ ಪರಿತ್ಯಾಗದ ಅವಶ್ಯಕತೆಯಿಲ್ಲ.ಸರ್ವ ಸಂಬಂಧಗಳಿಗೆ ಸದ್ಭಾವನೆ,ಸೌಹಾರ್ದದ ಸುಸ್ಪಷ್ಟ ಭಾವ ಸಮ್ಮಿಶ್ರಣಗೊಳಿಸಿದರಾಯಿತು.ಇನ್ನೊಬ್ಬರಂತೆ ತಾವಾಗಬೇಕೆನ್ನುವ ಸ್ಪರ್ಧೆಗೆ ಎಂದಿಗೂ ಒಡ್ಡಿಕೊಳ್ಳಬಾರದು.
- ಮುಷ್ತಾಕ್ ಹೆನ್ನಾಬೈಲ್ (ಚಿಂತನಕಾರರು, ಲೇಖಕರು )ಕುಂದಾಪುರ
