ಪ್ರೀತಿ ಎಂದರೆ ಹೀಗೆ : ಶಿವಕುಮಾರ್ ಬಾಣಾವರ

ಪ್ರೀತಿ ಎಂಬುದು ಮರದ ಹಾಗೆ. ಕಾಣುವ ಕೊಂಬೆಗಳು ದಿಗಂತದವರೆಗೆ ಚಾಚಿರುತ್ತವೆ. ಅದರಲ್ಲಿ ಚಿಗುರು, ಹೂವು, ಹಣ್ಣು ಇರಬಹುದು. ಓ ಪ್ರೀತಿಯೇ, ನಿನ್ನನ್ನು ಸಾವಿರ ಮಂದಿ ಸಾವಿರ ರೀತಿ ಕರೆಯುತ್ತಾರೆ. ಹಾಗಾದರೆ ಪ್ರೀತಿಯ ಅರ್ಥವೇನು? ಶಿವಕುಮಾರ್ ಬಾಣಾವರ, ತಪ್ಪದೆ ಮುಂದೆ ಓದಿ…

ಪರ್ಷಿಯಾದ ಅಮರ ಪ್ರೇಮ ಕವಿ ಜಲಾಲುದ್ದೀನ್ ಮೊಹಮದ್ ರೂಮಿ ಜಗತ್ತಿಗೆ ಪ್ರೀತಿಯ ಅರ್ಥ ಕಲಿಸಲು ಹೆಣಗಾಡಿದ ವ್ಯಕ್ತಿ. ಒಂದು ಹುಡುಗ ಹುಡುಗಿಯ ಕಥೆಯೇ ಎಲ್ಲಾ ಪ್ರೀತಿಗಳಿಗೆ ಸಂಕೇತ ಎಂದು ಸುಲಭಕ್ಕೆ ಭಾವಿಸುವವರು ನಾವು. ಆದರೆ ಅದಕ್ಕೂ ಮೀರಿದ ಪ್ರೀತಿಗಳು ನಮ್ಮ ಸಮಾಜದಲ್ಲಿ ಇದ್ದೇ ಇವೆ. ಇವುಗಳ ಉಲ್ಲೇಖ ಕೆಲವು ಕಡೆ ಇಲ್ಲದಿರಬಹುದು, ಕೆಲವು ಕಡೆ ಇರಬಹುದು. ಮನುಷ್ಯನೊಬ್ಬ ಯಾವ ಸ್ವಾರ್ಥವೂ ಇಲ್ಲದೆ ತನ್ನ ಸುತ್ತಲ ಪರಿಸರದ ಜೀವಜಾಲಕ್ಕೆ ತೋರುವ ನಿಷ್ಕಲ್ಮಶ ಮಮತೆಯೇ ಪ್ರೀತಿ. ಪ್ರೀತಿಗೆ ನಿರೀಕ್ಷೆಯ ಭಾರವಿರುವುದಿಲ್ಲ. ತ್ಯಾಗ ಮಾಡಲು ಹಾತೊರೆಯುವ ಮನಸ್ಥಿತಿಯೇ ಪ್ರೀತಿ.

ರೂಮಿ ಹೇಳುತ್ತಾನೆ. ಪ್ರೀತಿ ಎಂಬುದರಲ್ಲಿ ಎಂದೂ ಖಿನ್ನತೆ ಇರುವುದಿಲ್ಲ. ಖಂಡಿತ ಅದು ಪುಸ್ತಕದಲ್ಲಿ ವರ್ಣಿಸಿದಂತೆ ಇರುವುದಿಲ್ಲ. ಅಥವಾ ಹಾಳೆಯ ಮೇಲೆ ಬರೆದು ತೋರುವಂಥದ್ದೂ ಅಲ್ಲ. ಪ್ರೀತಿ ಎಂಬುದು ಮರದ ಹಾಗೆ. ಕಾಣುವ ಕೊಂಬೆಗಳು ದಿಗಂತದವರೆಗೆ ಚಾಚಿರುತ್ತವೆ. ಅದರಲ್ಲಿ ಚಿಗುರು, ಹೂವು, ಹಣ್ಣು ಇರಬಹುದು. ಅದರ ನೋಟ, ಸವಿ, ರುಚಿಕರವೂ ಅನ್ನಿಸಬಹುದು. ಇಷ್ಟಕ್ಕೆಲ್ಲಾ ಕಾರಣವಾದ ಬೇರು ಮಾತ್ರ ಕಾಣದೆ ಅಮರತ್ವಕ್ಕೆ ಒಡ್ಡಿಕೊಂಡಿರುತ್ತದೆ. ಮೇಲಿನ ಸಕಲವನ್ನೂ ಕಾಪಾಡಲು ಬೇರು, ಮಣ್ಣಿನ ಜೊತೆ ಗುದ್ದಾಡುತ್ತಿರುತ್ತದೆ. ತನ್ನ ಮುಖವನ್ನು ಹೊರ ಜಗತ್ತಿಗೆ ಎಂದೂ ತೋರಿಸುವುದಿಲ್ಲ. ಒಳಗೊಳಗೇ ಜೀವಾಮೃತವ ಸೃಷ್ಟಿಸಿ ಮೇಲೆ ಕಾಯುವ ಚಿಗುರು, ಎಲೆ, ಹೂವು, ಹಣ್ಣು, ಎಲೆಗಳಿಗೆ ರವಾನಿಸಿ ತಾನು ಮಾತ್ರ ಇಳೆಯ ಆಳಕ್ಕೆ ಇಳಿಯುತ್ತಲೇ ಹೋಗುತ್ತದೆ. ಪ್ರತಿಫಲವನ್ನು, ಪ್ರಶಂಸೆಯನ್ನು ಅದು ಎಂದೂ ಬಯಸುವುದಿಲ್ಲ. ತಾಯಿ ಎದೆ ಹಾಲ ಬಸಿವ ನಿಶ್ಕಾಮ ರಕ್ತನಾಳಗಳಂತೆ, ಯಾವ ಶರತ್ತನ್ನೂ ಒಡ್ಡುವುದಿಲ್ಲ. ಕಾಪಾಡುವುದಷ್ಟೇ ಅದರ ಕಾಯಕ. ಬೇರಿನ ಈ ಸ್ವಭಾವವೇ ನಿಜವಾದ ಪ್ರೀತಿಯನ್ನು ಧರಿಸಿರುತ್ತದೆ.

ಓ ಪ್ರೀತಿಯೇ, ನಿನ್ನನ್ನು ಸಾವಿರ ಮಂದಿ ಸಾವಿರ ರೀತಿ ಕರೆಯುತ್ತಾರೆ. ನಿನಗೆ ಪ್ರತ್ಯೇಕವಾಗಿ ಒಂದು ರೂಪವೆಂಬುದು ಇಲ್ಲ ಎಂಬುದು ನನಗೆ ಗೊತ್ತು. ಸಾವಿರ ರೂಪಗಳ ಸಮೂಹವು ನೀನು. ಮೋಡ ತನ್ನ ಕಣ್ಣೀರು ಸುರಿಸದೇ ಹೋದರೆ, ಹೂದೋಟದ ತುಟಿಯ ಮೇಲೆ ನಗು ಹೇಗೆ ಚಿಗುರುತ್ತದೆ? ಮಗುವಿನ ನಗುವಿನಲ್ಲಿ, ತಾಯ ನೋಟದಲ್ಲಿ, ಸಾಂತ್ವನ ಹೇಳುವ ಗೆಳೆಯನ ಮಾತಿನಲ್ಲಿ, ಹಸಿವಿನಲ್ಲಿ ಅನ್ನವಿಕ್ಕುವ ಹೃದಯದಲ್ಲಿ, ಹಕ್ಕಿಯ ರೆಕ್ಕೆ ಬಣ್ಣದಲ್ಲಿ ನೀನಿರುವೆ ಎನ್ನುತ್ತಾನೆ ರೂಮಿ.

ತನಗೂ ಹೆಚ್ಚೆಚ್ಚು ಪ್ರೀತಿ ಬೇಕೆಂಬ ಹಂಬಲಿಕೆಯಲ್ಲೇ ಪ್ರತಿಯೊಬ್ಬರೂ ಬದುಕುತ್ತಿದ್ದೇವೆ. ಆಸ್ತಿ, ಅಂತಸ್ತು, ಅಧಿಕಾರ ಎಲ್ಲ ಪಡೆದವನೂ ಪ್ರೀತಿ ಸಿಗದ ಹಸಿವಲ್ಲಿ ನರಳುತ್ತಿರುತ್ತಾನೆ. ಪ್ರೀತಿಯೆಂಬುದು ಬರೀ ಪಡೆಯಲು ಮಾತ್ರ ಇರುವ ಉಡುಗೊರೆಯಲ್ಲ. ಅದು ಹಂಚಿದಷ್ಟೂ ಸಿಗುವ ಅಮೃತ. ಬೇಡಿ ಪಡೆಯುವ ಭಿಕ್ಷೆಯಲ್ಲ. ಸುತ್ತಲಿನ ಮನಸ್ಸುಗಳ ಗೆದ್ದು ಗಳಿಸುವ ಸಂಪತ್ತು.


  • ಶಿವಕುಮಾರ್ ಬಾಣಾವರ –  ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್, ಶಿವಮೊಗ್ಗ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW