ಬೀಸಿದಷ್ಟು ಚಳಿ, ಸುಳಿದಷ್ಟು ಕಾವು…ಯುವ ಕವಿ ಸಿದ್ದು ಚಲವಾದಿ ಅವರ ಪ್ರೇಮ ಕವಿತೆಯ ಸಾಲುಗಳು ಓದುಗರಿಗಾಗಿ, ಮುಂದೆ ಓದಿ…
ಪ್ರೀತಿಯ ಬಾಗಿಲು ಮುಚ್ಚಿ,
ನೆನಪಿನ ಕಿಟಕಿಯ ತೆರೆದಿರುವೆ ಗೆಳತಿ,
ಗಾಳಿಯ ಬದಲು ಬರಿ ನೋವಿನ ದಾಳಿ;
ಬೀಸಿದಷ್ಟು ಚಳಿ, ಸುಳಿದಷ್ಟು ಕಾವು;
ಚಳಿಗಾಲದಲ್ಲಿ ಬಿಸಿ ಕಂಬನಿ
ಒಣಗಿದ ತುಟಿ, ಸೀಳು ಇಂಬಡ
ಒಂಟಿ ತೋಳಲಿ, ಕಾವಿಲ್ಲದ ಕಾ(ಪ್ರೇ)ಮ
ನೀ ಹೋಗದ ದಾರಿಯಲಿ
ಪರಿಮಳ ಬೀಸದ ಹೂವುಗಳು
ಒಣಗಿ ನಿಂತ ಹಸಿರು ಮರ
ಕಾಗೆಯಂತೆ ಕೂಗುವ ಕೋಗಿಲೆ
ಚಿರತೆಯಂತೆ ಓಡುವ ಆಮೆ
ಸುಡುತ್ತಿರುವ ಪ್ರೇಮ ಚಿಟ್ಟೆಗಳು
ನಿಂಗೆ ತಲುಪದೆ ಪರ್ಸಲ್ಲಿ ಉಳಿದು
ಹರಿದ ಪ್ರೇಮ ಪತ್ರಗಳು
ಹೆಸರಿಲ್ಲದ ಊರಿಗೆ ನಡೆದು ಹೋಗುವೆ ಗೆಳತಿ
ಗೊತ್ತಿಲ್ಲದ ಹೂವುಗಳಿಗೆ ನಿನ್ನ ಹೆಸರಿಡುವೆ
- ಸಿದ್ದು ಚಲವಾದಿ (ಯುವ ಕವಿ, ‘ನಾಯಿ ಗುತ್ತಿ’ ಕಾವ್ಯನಾಮ)
