ಕೆಲವೊಮ್ಮೆ ಆಶ್ಚರ್ಯವಾಗುತ್ತದೆ. ಗಾಂಧಿಯನ್ನು ಆರಂಭದಿಂದಲೂ ವಿರೋಧಿಸುವ, ಧಿಕ್ಕರಿಸುವ ವ್ಯವಸ್ಥಿತ ಪಡೆಯೇ ಕಾಲಕಾಲಕ್ಕೆ ಹರಿದು ಬಂದಿದ್ದರೂ, ವರ್ತಮಾನದಲ್ಲಿ ಮತ್ತು ಭವಿಷ್ಯದಲ್ಲಿ ನಿಸ್ಸಂಶಯವಾಗಿ ಗಾಂಧಿಯವರ ಚಿಂತನೆ, ಆದರ್ಶ ಮತ್ತು ಧ್ಯೇಯಗಳು ಭಾರತವನ್ನು ಇನ್ನಷ್ಟು ಸಧೃಡವಾಗಿಸುವತ್ತ ಕೊಂಡೊಯ್ಯುತ್ತವೆ ಎನ್ನುವ ನಂಬಿಕೆ ನನ್ನದು. – ಮೋಹನ್ ಕುಮಾರ್ ಡಿ ಎನ್, ಮುಂದೆ ಓದಿ…
ಪುಸ್ತಕ : ಗಾಂಧಿ ಪ್ರಪಂಚವನ್ನು ಬದಲಾಯಿಸಿದ ಆ ವರ್ಷಗಳು 1914 – 1948
ಸಂಪುಟ 1 ಮತ್ತು 2
ಮೂಲ : ರಾಮಚಂದ್ರ ಗುಹಾ
ಅನುವಾದಕರು : ಎಂ ಸಿ ಪ್ರಕಾಶ್
ಪ್ರಕಾಶನ : ವಸಂತ ಪ್ರಕಾಶನ
ಪುಟಗಳು : 1284,
ಬೆಲೆ : 1120/-
ಗಾಂಧಿಯ ಬಗ್ಗೆ ಹೆಚ್ಚು ಅರಿಯುವ ನನ್ನ ಆಸಕ್ತಿಯ ಮುಂದುವರೆದ ಭಾಗವಾಗಿ ಆರಿಸಿಕೊಂಡಿದ್ದು ಈ ಬೃಹದ್ ಗ್ರಂಥವನ್ನು. ವರ್ಷದ ಆರಂಭದಲ್ಲಿ ನಾಗಭೂಷಣ ಅವರ “ಗಾಂಧಿ ಕಥಾನಕ”ವನ್ನು ಓದಿದ್ದೇ ಬಂತು; ಗಾಂಧಿ ನನ್ನನ್ನು ನಿಧಾನವಾಗಿ ಆವರಿಸಿಕೊಳ್ಳುತ್ತಾ ಹೋದರು. ಅವರ ಬಗ್ಗೆ ಇನ್ನಷ್ಟು ತಿಳಿಯಬೇಕೆನ್ನುವ ಹಂಬಲ ಹೆಚ್ಚಾಗುತ್ತಲೇ ಹೋಯ್ತು. ಗಾಂಧಿಯವರ ಸಾರ್ವಜನಿಕ ಮತ್ತು ರಾಜಕೀಯ ಜೀವನಕ್ಕೆ ನೇರವಾಗಿ ಅಥವಾ ಹೊಂದಾಣಿಕೆಯಾಗುವಂತೆ ಹಲವು ಪುಸ್ತಕಗಳನ್ನು, ರಾಜಕೀಯ ಇತಿಹಾಸಗಳನ್ನೂ ಓದಿದೆ. ಆದರೂ ದಾಹ ಇಂಗಲಿಲ್ಲ. ಇದು ಕೇವಲ ಗಾಂಧಿಯ ಜೀವನವನ್ನು ಸಾವಿರಾರು ಆಯಾಮಗಳಲ್ಲಿ, ಹಲವರು ಬರೆದಂತೆ, ಓದಿ ಮನನ ಮಾಡಿಕೊಂಡು, ಅವರ ಬದುಕಲ್ಲಿ ನಡೆದ ಘಟನೆಗಳನ್ನು ಸರಣಿ ಕ್ರಮದಲ್ಲಿ ನೆನಪಿಟ್ಟುಕೊಂಡು ಗಾಂಧಿಯನ್ನು ಸಂಪೂರ್ಣವಾಗಿ ಅರಿತೆ ಎಂದು ಬೀಗುವುದಕ್ಕಾಗಿ ಗಾಂಧಿಯನ್ನು ಇಷ್ಟೆಲ್ಲಾ ಓದುತ್ತಿಲ್ಲ ಎನ್ನುವ ಅರಿವು ನನ್ನ ಪ್ರಜ್ಞೆಯಲ್ಲಿದೆ. ಇದರ ಹೊರತಾಗಿ ಬದುಕನ್ನು ಇನ್ನೊಂದು ಆಯಾಮದಿಂದ ನೋಡಲು ಗಾಂಧಿಯ ಬದುಕು ಬರಹ ಮತ್ತು ಚಿಂತನೆಗಳು ಕಾರಣವಾಗಬಹುದೇನೋ ಎನ್ನುವ ಆಲೋಚನೆ ನನ್ನದು.

(ಗಾಂಧಿ ಪ್ರಪಂಚವನ್ನು ಬದಲಾಯಿಸಿದ ಆ ವರ್ಷಗಳು ಮೂಲ ಬರಹಗಾರರು ರಾಮಚಂದ್ರ ಗುಹಾ)
ಎಲ್ಲ ದೇಶಗಳಯುಗಪುರುಷದ ಪುಟಗಳಲ್ಲಿ ಆಯಾ ದೇಶದ ಕೀರ್ತಿಪುರುಷ ಸ್ಥಾಯಿಯಾಗಿ ನೆಲೆಸಿರುತ್ತಾನೆ. ಅಮರತ್ವಕ್ಕೆ ಸಮಾನವಾದ ಸ್ಥಾನಿಕ ಅಂಶ ಅವನದಾಗಿರುತ್ತದೆ. ಭೂಮಿ ಇರುವ ತನಕ ಅವನ ಜೀವಿತಗಾಥೆಯನ್ನು ಮುಂದಿನ ಜನಾಂಗ ಅರಿಯುತ್ತಲೇ ಇರುತ್ತದೆ. ಆದರೆ ಗಾಂಧಿ, ಕೇವಲ ಒಂದು ದೇಶಕ್ಕೆ ಮಾತ್ರ ಸಲ್ಲುವ ಶತಮಾನ ಪುರುಷರಲ್ಲ; ಯುಗಕ್ಕೊಮ್ಮೆ ಅವತರಿಸುವ, ಸರ್ವಾಂತರ್ಯಾಮಿ ಗುಣವುಳ್ಳ ಯುಗಪುರುಷ! ಅಂತಹ ಯುಗಪುರುಷ ಸ್ವಾತಂತ್ರ್ಯ ಬಂದ ಕೆಲವೇ ವರ್ಷಗಳಲ್ಲಿ ಹೇಗೆ ಅಪ್ರಸ್ತುತವಾಗುವತ್ತ ಹೋಗುತ್ತಾರೆ? ತನ್ನಿಡೀ ಬದುಕನ್ನು ಕೇವಲ ಸ್ವಾತಂತ್ರ್ಯಕ್ಕಾಗಿಯಲ್ಲದೆ ಹಿಂದೂ ಮುಸ್ಲಿಂ ಕೋಮು ಸೌಹಾರ್ದತೆಗಾಗಿ, ಅಸ್ಪೃಶ್ಯರಿಗಾಗಿ, ಕೃಷಿ ರೈತರು, ಖಾದಿ ಗ್ರಾಮೋದ್ಯೋಗ, ಮಹಿಳಾ ಸಬಲೀಕರಣ, ಶಾಂತಿ ಸೌಹಾರ್ದತೆ ಅಹಿಂಸೆಗಳಿಗಾಗಿ ಮೀಸಲಿಟ್ಟ ಮಹನೀಯನ ಬದುಕು ಇತಿಹಾಸವನ್ನು ಅರಿಯುವ ಮತ್ತು ದಾಖಲಿಸುವ ಪ್ರಕ್ರಿಯೆಯಲ್ಲುಂಟಾದ ಪ್ರಮಾದದಿಂದ ಹೇಗೆ ಅವಾಸ್ತವವಾಗಿಬಿಡುತ್ತದೆ? ಅಥವಾ ಇತಿಹಾಸವನ್ನು ದಾಖಲಿಸುವ ಪ್ರಕ್ರಿಯೆ ದುರುದ್ದೇಶದಿಂದ ಕೂಡಿದಾಗ ಆಯಾ ಕಾಲಘಟ್ಟದ ಜನಾಂಗದ ಮಾನಸದಿಂದ ಹೇಗೆ ಮರೆಯಾಗಿ ಉಳಿದುಬಿಡುತ್ತಾನೆ? ಎನ್ನುವ ಜಿಜ್ಞಾಸೆ ನನ್ನನ್ನು ಕಾಡಲಾರಂಭಿಸಿದೆ. ಅನೇಕ ಕಾರಣಗಳನ್ನು ಕೊಡಬಹುದಾದರೂ, ನನ್ನ ಸೀಮಿತ ಅರಿವಿನ ಮಟ್ಟದಲ್ಲಿ ಹೇಳಬೇಕೆಂದರೆ, ಭಾರತದ ಮಣ್ಣಿನ ಮೂಲ ಸೆಲೆಯಲ್ಲೇ ಅಡಕವಾಗಿರುವ ಬಹುತ್ವ ಗುಣವು ಇದಕ್ಕೆ ಕಾರಣವಿದ್ದೀತು.

(ಗಾಂಧಿ ಪ್ರಪಂಚವನ್ನು ಬದಲಾಯಿಸಿದ ಆ ವರ್ಷಗಳು ಕನ್ನಡಕ್ಕೆ ಅನುವಾದಕರು ಎಂ ಸಿ ಪ್ರಕಾಶ್)
ಬಹುಶಃ ಗಾಂಧಿಯವರಲ್ಲದಿದ್ದರೆ ಸ್ವರಾಜ್ಯಕ್ಕಾಗಿ ನಡೆದ ಶತಮಾನಗಳ ಕಾಲದ ಮಹಾಯಜ್ಞವನ್ನು, ನೂರಾರು ಸಾವಿರಾರು ಅಡೆತಡೆಗಳ ಹೊರತಾಗಿಯೂ, ಲಕ್ಷಾಂತರ ಮಂದಿಯ ತ್ಯಾಗ ಬಲಿದಾನದ ಹೊರತಾಗಿಯೂ ದಡ ತಲುಪಿಸುವ ಗುಣವುಳ್ಳ ಭಾರತೀಯನೊಬ್ಬ ಸಿಗುತ್ತಿರಲಿಲ್ಲ. ಕೇವಲ ಸ್ವರಾಜ್ಯಕ್ಕಾಗಿ ಬದುಕನ್ನು ಮೀಸಲಿಟ್ಟರೇ ಗಾಂಧಿ ಎನ್ನುವುದು ಮುಖ್ಯವಲ್ಲ; ಅವರ ಬದುಕನ್ನು ಹಲವು ಕಾಲಘಟ್ಟದಲ್ಲಿ ಆಮೂಲಾಗ್ರವಾಗಿ ಪರಿಶೀಲಿಸಿದಾಗ ಅವರ ಚಿಂತನೆಗಳು ಅವರಷ್ಟೇ ವಿಕ್ಷಿಪ್ತವೂ ವಿರಳವೂ ಮತ್ತು ಪ್ರಸ್ತುತವಾಗಿದ್ದವು ಎನ್ನುವ ಸಾರ್ವಕಾಲೀಕ ಸತ್ಯದ ಅರಿವಿದೆಯೆಲ್ಲ? ಅದು ಮುಖ್ಯ. ಪರದೆಯ ಹಿಂದಿನ ವಾಸ್ತವತೆಯನ್ನು ಅರಿಯದೇ ಹೋದರೆ ಕೆಡುಕಾಗುವುದು ನಮಗೇ. ಒಬ್ಬ ಮಹಾತ್ಮನ ಬದುಕು, ರಾಷ್ಟ್ರಪಿತನ ಆದರ್ಶಗಳು, ಭವಿಷ್ಯ ಭಾರತವನ್ನು ಮುನ್ನಡೆಸಲು ಹಾಕಿಕೊಟ್ಟ ಸುಸ್ಥಿರ ಚಿಂತನೆಗಳು ನಮ್ಮ ಈಗಿನ ರಾಜಕೀಯ ನೀತಿ ನಿಯಮದಂತೆಯೇ ತಳಮಟ್ಟದಿಂದಲೂ ಪ್ರಬಲವಾಗಿರಬೇಕು. ಆದರೆ ಆಗಿರುವುದಾದರೂ ಏನು? ಪ್ರಾಜ್ಞರು, ಹಿರಿಯರು, ವಿದ್ಯಾವಂತರು, ಸುಸಂಸ್ಕೃತರು ಬಿಡಿ; ಆಡುವ ಮಕ್ಕಳು ಕೂಡ ಗಾಂಧಿ ಎಂದರೆ ಗೇಲಿ ಮಾಡುತ್ತಾರೆ. ಇದು ನಿಜವಾದ ದುರಂತ.
ಗಾಂಧಿಯನ್ನು ಅರಿಯುವ ಯಾವ ಹಂತದಲ್ಲಿ ನಮ್ಮ ಕಾಲಘಟ್ಟ ಎಡವಿದೆಯೋ ತಿಳಿದಿಲ್ಲ. ಯಾವ ಪ್ರಕ್ರಿಯೆಯಲ್ಲಿ ಪ್ರಮಾದವಾಯಿತೋ ವಿಶ್ಲೇಷಿಸಲು ಸಾಧ್ಯವಿಲ್ಲ. ನಮ್ಮೆಲ್ಲರ ಬದುಕು, ಚಿಂತನೆ ಮತ್ತು ಕಾರ್ಯಗಳು ಕಾಲದ ಹೊಡೆತಕ್ಕೆ ಸಿಕ್ಕಿವೆ ಮತ್ತು ಊಹೆಯೇ ಮಾಡಿಕೊಳ್ಳಲಾರದಷ್ಟು ಬದಲಾಗಿದೆ. ಏನೆಲ್ಲಾ ಪ್ರಗತಿ ಮತ್ತು ಅಧೋಗತಿಗಳ ನಡುವೆ ನಾವಿವತ್ತು ಜೀವಿಸುತ್ತಿದ್ದರೂ, ಬದುಕಿನ ಮೂಲಭೂತ ಅವಶ್ಯಕತೆಗಳಂತೆಯೇ, ಗಾಂಧಿಯವರ ಬದುಕಿನ ಅನುಕ್ರಮವನ್ನು ಕಾರ್ಯಗತ ಮಾಡಿಕೊಳ್ಳದ, ಚಿಂತನೆಗಳನ್ನು ದೈನಂದಿನ ಭಾಗವಾಗಿಸಿಕೊಳ್ಳದ, ಆದರ್ಶಗಳನ್ನು ಮೈಗೂಡಿಸಿಕೊಳ್ಳದ ರಾಜಕೀಯ ನೀತಿಗಳ ಹೊರತಾಗಿ ಭಾರತಕ್ಕೆ ಭವಿಷ್ಯವಿಲ್ಲ. ಮೇಲುನೋಟಕ್ಕೆ ಇದೊಂದು ಬೀಸು ಹೇಳಿಕೆಯಂತೆ ಕಂಡರೂ ಇದು, ಇದು ಮಾತ್ರವೇ, ಸತ್ಯ.
ಆದರೂ ಕೆಲವೊಮ್ಮೆ ಆಶ್ಚರ್ಯವಾಗುತ್ತದೆ. ಗಾಂಧಿಯನ್ನು ಆರಂಭದಿಂದಲೂ ವಿರೋಧಿಸುವ, ಧಿಕ್ಕರಿಸುವ ವ್ಯವಸ್ಥಿತ ಪಡೆಯೇ ಕಾಲಕಾಲಕ್ಕೆ ಹರಿದು ಬಂದಿದ್ದರೂ, ವರ್ತಮಾನದಲ್ಲಿ ಮತ್ತು ಭವಿಷ್ಯದಲ್ಲಿ ನಿಸ್ಸಂಶಯವಾಗಿ ಗಾಂಧಿಯವರ ಚಿಂತನೆ, ಆದರ್ಶ ಮತ್ತು ಧ್ಯೇಯಗಳು ಭಾರತವನ್ನು ಇನ್ನಷ್ಟು ಸಧೃಡವಾಗಿಸುವತ್ತ ಕೊಂಡೊಯ್ಯುತ್ತವೆ ಎನ್ನುವ ನಂಬಿಕೆ ನನ್ನದು. ಪ್ರಬಲ ವಿರೋಧಿಗಳು ಹುಟ್ಟಿಕೊಂಡಷ್ಟೂ ಅವರ ಬದುಕು ಅಷ್ಟೇ ಪ್ರಬಲವಾಗಿ ಜ್ವಲಿಸುತ್ತದೆ.

ಗಾಂಧಿಯವರ ಬೆಳವಣಿಗೆಯನ್ನು ಹತ್ತಿರದಿಂದ ಗಮನಿಸಿದ್ದ ಲಂಡನ್ನಿನ ಸ್ನೇಹಿತರೊಬ್ಬರು 1934ರಲ್ಲಿ ಹೀಗೆ ಹೇಳುತ್ತಾರೆ: “ಗಾಂಧಿಯವರು ಒಂದು ಸಮಸ್ಯೆ. ಆಳುವವರಿಗೆ ಮತ್ತು ಗವರ್ನರುಗಳಿಗೆ ಅವರು ಪಕ್ಕೆಯ ಮುಳ್ಳು. ತರ್ಕವಾದಿಗಳಿಗೆ ಅವರೊಬ್ಬ ಮೂರ್ಖ. ಆರ್ಥಿಕ ತಜ್ಞರ ದೃಷ್ಟಿಯಲ್ಲಿ ಅವರೊಬ್ಬ ನಿಷ್ಪಯೋಜಕ, ಹೆಡ್ಡ. ಭೌತವಾದಿಗಳಿಗೆ ಅವರೊಬ್ಬ ಕನಸುಗಾರ. ಕಮ್ಯುನಿಷ್ಟರ ದೃಷ್ಟಿಯಲ್ಲಿ ಅವರು ಪ್ರಗತಿಗೆ ವಿರೋಧಿ. ಇನ್ನು ಸಂವಿಧಾನವಾದಿಗಳಿಗೆ ಅವರು ಉಗ್ರಕ್ರಾಂತಿಯ ಪ್ರತಿನಿಧಿ. ಮುಸ್ಲಿಂ ನಾಯಕರಿಗೆ ಅವರು ಕೋಮುವಾದಿಯಾದ ಹಿಂದೂ. ಹಿಂದೂ ತೀವ್ರವಾದಿಗಳಿಗೆ ಅವರು ಮುಸ್ಲಿಮರನ್ನು ಓಲೈಸುವುದರಲ್ಲಿ ಕುಖ್ಯಾತ. ಅಸ್ಪೃಶ್ಯರಿಗೆ ಅವರು ಮೇಲ್ಜಾತಿಯವರ ಸಂಪ್ರದಾಯವಾದಿತ್ವದ ಸಮರ್ಥಕ. ಬ್ರಾಹ್ಮಣರಿಗೆ ಅವರು ಅತಿ ಅವಸರದ ಸುಧಾರಕ” ಎಷ್ಟೆಲ್ಲಾ ವೈದೃಶ್ಯಗಳು, ಪಾತ್ರಗಳು, ವ್ಯಕ್ತಿತ್ವಗಳು! ಒಬ್ಬ ವ್ಯಕ್ತಿ ತನ್ನ ಜೀವಿತದಲ್ಲಿ ಇಷ್ಟೆಲ್ಲಾ ಪಾತ್ರಗಳನ್ನು ಪೋಷಿಸಲು ಸಾಧ್ಯವೇ? ಮತ್ತು ಆ ಪಾತ್ರಗಳು ಕೇವಲ ವಾಗಾಡಂಬರವಾಗಿರದೆ ಅದಕ್ಕಾಗಿ ತನ್ನಿಡೀ ಬದುಕನ್ನು ನೇತ್ಯಾತ್ಮಕ ರೀತಿಯಲ್ಲಿ ಮೂಡುಪಾಗಿಟ್ಟ ಇನ್ನೊಬ್ಬ ಸಂತ ಅಖಂಡ ಭೂಮಿಯಲ್ಲೆಲ್ಲೂ ನಮಗೆ ಕಾಣಸಿಗುವುದಿಲ್ಲ. ಹೀಗಾಗಿ ಗಾಂಧಿಯವರ ಚಿಂತನೆಗಳು ಕಾಲನ ಅಧೀನಕ್ಕೆ ಒಳಪಡದೆ ಕಾಲಾತೀತವಾಗಿವೆ. ಬ್ರಿಟನ್ನಿನ ಪ್ರತಿ ಪೀಳಿಗೆಯೂ ಚರ್ಚಿಲ್‌ರನ್ನು ಹೇಗೋ ಹಾಗೆ ಫ್ರಾನ್ಸಿನ ಪ್ರತಿ ಪೀಳಿಗೆಯೂ ಡಿ ಗಾಲ್‌ರನ್ನು ಬೆಲೆಕಟ್ಟುವಂತೆ, ಮತ್ತು ಅಂತೆಯೇ ಅಮೆರಿಕಾದ ಪ್ರತಿ ಪೀಳಿಗೆಯೂ ಫ್ರಾಂಕ್ ರೂಸ್‌ವೆಲ್‌ರನ್ನು ಪುನರ್ವಿಮರ್ಶೆಗೆ ಒಡ್ಡುವಂತೆ, ಭಾರತದ ಪ್ರತಿ ಪೀಳಿಗೆಯೂ ಗಾಂಧಿಯವರನ್ನು ತನ್ನದೇ ರೀತಿಯಲ್ಲಿ ಮೌಲ್ಯಮಾಪನ ಅಥವಾ ಪುನರ್ಮೌಲ್ಯಮಾಪನಕ್ಕೆ ಒಡ್ಡುವ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚು ನಡೆಯಬೇಕಾಗಿದೆ.
ಗಾಂಧಿ ಇಪ್ಪತ್ತನೆಯ ಶತಮಾನದ ಮಹಾನ್ ಚೇತನಗಳಲ್ಲೊಬ್ಬರು; ಆ ಶತಮಾನದ ಶ್ರೇಷ್ಠ ಬದುಕನ್ನು ಬದುಕಿದವರು. ವಿಶ್ವದಾದ್ಯಂತ ಲಕ್ಷಾಂತರ ಪುರುಷರಿಗೆ ಮತ್ತು ಮಹಿಳೆಯರಿಗೆ ಗಾಂಧಿ ಸ್ಪೂರ್ತಿಯಾಗಿದ್ದಾರೆ. ಅವರ ಸಿಟ್ಟಿಗೆ ಕಾರಣವಾಗಿದ್ದಾರೆ. ಅವರಿಗೆ ಸಂತೋಷ ನೀಡಿದ್ದಾರೆ. ಅವರಿಗೆ ಸವಾಲಾಗಿದ್ದಾರೆ. ಅವರು ಬಹುತೇಕ ಬ್ರಿಟಿಷ್ ಸಾಮ್ರಾಜ್ಯದ ನೆರಳಿನಲ್ಲಿಯೇ ಬದುಕಿದವರು. ಅವರ ಬಾಳಿನ ಹೆಚ್ಚಿನ ಅವಧಿಯಲ್ಲಿ ಅದು ಶಾಶ್ವತ ವಾಸ್ತವದಂತೆ ಕಾಣುತ್ತಿತ್ತು. ಆದರೆ ಅದನ್ನು ಕೆಳಗುರುಳಿಸಲು ಇನ್ನೆಲ್ಲರಿಗಿಂತ ಹೆಚ್ಚಿನ ಪ್ರಯತ್ನ ಮಾಡಿದವರು ಗಾಂಧಿ. ಹಿಂಸೆ, ಯುದ್ಧ, ಫ್ಯಾಸಿಸ್ಟ್ ಮತ್ತು ಕಮ್ಯುನಿಸ್ಟ್ ಸರ್ವಾಧಿಕಾರದಿಂದ ಕೂಡಿದ ಜಗತ್ತಿನಲ್ಲಿ ಗಾಂಧಿಯ ಬಳಿ ಇದ್ದ ಆಯುಧವೆಂದರೆ ತನ್ನ ತತ್ತ್ವ ಮತ್ತು ನಿದರ್ಶನ ಮಾತ್ರ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಲೇ ಅವರು ಜಾತಿ ಮತ್ತು ಲಿಂಗ ತಾರತಮ್ಯವನ್ನು ವಿರೋಧಿಸಿದರು. ಅಂತರಧರ್ಮೀಯ ಸಾಮರಸ್ಯಕ್ಕಾಗಿ ಹೋರಾಡಿದರು ಮತ್ತು ಅದಕ್ಕಾಗಿ ಪ್ರಾಣತೆತ್ತರು. ಹೀಗೆ ಹೇಳುತ್ತಾ ಹೋದರೆ ಅನವರತ ಅಸಂಖ್ಯಾತ ವಸ್ತುನಿಷ್ಠತೆಯನ್ನು ಹೇಳಬಹುದು. ಆದರೆ ಹಾಗೆ ಹೇಳುವುದಕ್ಕಿಂತಲೂ ಸರಿಯಾದ ಕ್ರಮಬದ್ಧತೆಯೊಂದಿಗೆ, ತೆರೆದ ಪುಟದಂತಿರುವ ಗಾಂಧಿಯ ಜೀವತವೆಲ್ಲವನ್ನೂ ತೆರೆದಂತೆಯೇ ಯುವ ಜನಾಂಗಕ್ಕೆ ಸಾದರಪಡಿಸಬೇಕಾದ ಅವಶ್ಯಕತೆಯಿದೆ.
ಅದ್ಭುತವಾದ ಈ ಪುಸ್ತಕವು ಗಾಂಧಿ ದಕ್ಷಿಣ ಆಫ್ರಿಕಾವನ್ನು ಬಿಟ್ಟುಬಂದ ಕಾಲದಿಂದ 1948ರಲ್ಲಿ ಆದ ಅವರ ನಾಟಕೀಯ ಹತ್ಯೆಯವರೆಗಿನ ಕಥೆಯನ್ನು ಹೇಳುತ್ತದೆ. ಅಂಬೇಡ್ಕರ್, ಜಿನ್ನಾ, ಚರ್ಚಿಲ್ ಮತ್ತು ಇತರರೊಂದಿಗೆ ಗಾಂಧಿಯವರ ಚರ್ಚೆಗಳ ಹೊಸ ಓದೇ ಅಲ್ಲದೆ ನಮ್ಮ ಸ್ವಾತಂತ್ರ್ಯ ಹೋರಾಟದ ಬಗ್ಗೆ ಹೊಸ ಒಳನೋಟಗಳನ್ನು ಹಾಗೂ ಅದರ ಹಲವು ಎಳೆಗಳನ್ನು ತೆರೆದಿಡುವ ಈ ಗ್ರಂಥಕ್ಕೆ ಟಾಲ್ಸ್ಟಾಯ್‌ನ ಪ್ರಭಾವವೂ ಇದೆ. ಅಲ್ಲದೆ ಗಾಂಧಿಯವರ ಸಮಕಾಲೀನರು ಅವರನ್ನು ಅರ್ಥಮಾಡಿಕೊಂಡ ರೀತಿಯನ್ನೂ ತೋರಿಸಿಕೊಡುತ್ತದೆ. ಇದುವರೆಗೂ ಪರಿಶೀಲಿಸದ ಆಕರಗಳನ್ನು ಆಧರಿಸಿ ಈ ಗ್ರಂಥ ರಚಿತವಾಗಿದೆ ಎನ್ನುವುದು ಮೂಲ ಲೇಖಕ ರಾಮಚಂದ್ರ ಗುಹಾರ ಅಂಬೋಣ. ಎರಡು ಬೃಹತ್ ಸಂಪುಟಗಳಲ್ಲಿ ಮೂಡಿ ಬಂದಿರುವ ಕನ್ನಡಾನುವಾದ ಮೊದಲ ಸಂಪುಟ ಹೇಳಿಕೊಳ್ಳುವ ಮಟ್ಟದಲ್ಲಿಲ್ಲ. ಪ್ರತಿ ಪುಟದಲ್ಲೂ ಮುದ್ರಣ ದೋಷಗಳಿವೆ. ಎರಡನೆಯ ಸಂಪುಟ ಪರವಾಗಿಲ್ಲ.
ಬರೋಡಾದ ಆಗಿನ ಮುಖ್ಯನ್ಯಾಯಾಧೀಶರಾಗಿದ್ದ ಅಬ್ಬಾಸ್ ತ್ಯಾಬ್ಜಿಯವರ ಮಗಳು ರೈಹಾನಾ ತ್ಯಾಬ್ಜಿ ಗಾಂಧಿಯವರನ್ನು ಕುರಿತಂತೆ ಒಂದು ಪತ್ರವನ್ನು ಬರೆಯುತ್ತಾಳೆ. ಅದನ್ನಿಲ್ಲಿ ಹೇಳುವ ಮೂಲಕ ಈ ಬರಹವನ್ನು ಇಲ್ಲಿಗೆ ಕೊನೆಗಳಿಸುತ್ತಿದ್ದೇನೆ: “ನಾವು ಗುಲಾಮರಾಗಿದ್ದೆವು. ನೀವು ನಮ್ಮನ್ನು ಸ್ವತಂತ್ರರನ್ನಾಗಿ ಮಾಡಿದ್ದೀರಿ. ನಮ್ಮ ಹೃದಯಗಳು ಬರಿದಾಗಿದ್ದವು. ನೀವು ಅವುಗಳನ್ನು ದೇಶಪ್ರೇಮ ಮತ್ತು ಮನೋದಾರ್ಡ್ಯದಿಂದ ತುಂಬಿದ್ದೀರಿ. ನಮ್ಮ ಮನಸ್ಸುಗಳು ಬರಿದಾಗಿದ್ದವು. ನೀವು ಅವುಗಳನ್ನು ಮಾತೃಭೂಮಿಯ ಸೇವೆ ಎಂಬ ಏಕಮಾತ್ರ ಶ್ರೇಷ್ಠ ಚಿಂತನೆಯಿಂದ ತುಂಬಿದ್ದೀರಿ. ನಮ್ಮದೇ ಕೀಳರಿಮೆ ಮತ್ತು ನಿಷ್ಟ್ರಯೋಜಕತೆಯ ಖಾಲಿತನದಿಂದ ನಾವು ಕೈಕಾಲುಕಟ್ಟಿಸಿಕೊಂಡಿದ್ದೆವು. ನಾನು ಇಂಗ್ಲಿಷ್ ಹೆಣ್ಣು ಮಕ್ಕಳನ್ನು ಕಂಡು ಅಸೂಯೆಪಡುತ್ತಿದ್ದ ಕಾಲವನ್ನು ನೆನೆಸುತ್ತೇನೆ. ಏಕೆಂದರೆ, ಅವರು ಸ್ವತಂತ್ರರಾಗಿದ್ದರು ಮತ್ತು ಅವರ ಚರ್ಮ ಬಿಳಿಯದಾಗಿತ್ತು. ನಾವು ಯಾರಿಗೂ ಯಾವ ರೀತಿಯಲ್ಲಿಯೂ ಕಡಿಮೆಯಲ್ಲ ಎಂಬುದನ್ನು ಕಂಡುಕೊಳ್ಳುವಂತೆ ನೀವು ಮಾಡಿದ್ದೀರಿ. ನೀವು ನಮ್ಮನ್ನು ಮತ್ತೆ ಮನುಷ್ಯರನ್ನಾಗಿಸಿದ್ದೀರಿ. ನಮ್ಮ ದೇಹಗಳು ಬಂಧನದಲ್ಲಿರಬಹುದು. ಆದರೆ ನಮ್ಮ ಆತ್ಮಗಳು ಸ್ವತಂತ್ರ ಭಾರತೀಯರ ಆತ್ಮಗಳಾಗಿವೆ”.
- ಮೋಹನ್ ಕುಮಾರ್ ಡಿ ಎನ್
