ಜೂಜಾಟದ Appಗಳ ಸಂಘದವರು ಸರ್ಕಾರ ವಿರುದ್ಧವಾಗಿ ಮಾರ್ಕೆಟಿಗಿಳಿದು online ಜೂಜಾಟದ Appಗಳನ್ನು ಮಾಡಿ ತಮ್ಮ ತಮ್ಮ App promotionಗೆ ಪಡ್ಡೆಹೈಕ್ಳು ಫಾಲೋ ಮಾಡೋ ನಾಯಕ ನಟ, ನಟಿ, ಕ್ರಿಕೇಟ್ ಆಟಗಾರರನ್ನು ಬಳಸಿಕೊಳ್ಳುತ್ತಿದೆ. ಸೆಲೆಬ್ರೆಟಿಗಳು ಎನ್ನಿಸಿಕೊಂಡವರು ಸಾಮಾಜಿಕ ಕಳಕಳಿಯಿಲ್ಲದೆ, ಹಣದ ಆಸೆಗೆ Advertise ಮಾಡುತ್ತಾರೆ. ಮುಂದೆ ಓದಿ… ಡಾ.ಪ್ರಕಾಶ ಬಾರ್ಕಿ ಅವರ ಸಾಮಾಜಿಕ ಕಳಕಳಿ ಲೇಖನ…
ನನ್ನ ಮಗ್ಗಲು ಕೂತವನ ಕಣ್ಣಲ್ಲಿ ಅದೇನೋ “ಕಾತರ”, ಮೊಬೈಲ್ ನೋಡುತ್ತ ನಗುತ್ತಲೆ ಜೋರಾಗಿ ಎದುರು ಸೀಟಿನ ಹಿಂಭಾಗಕ್ಕೆ ಗುದ್ದುತ್ತಿದ್ದ, ಅರೆಕ್ಷಣದಲ್ಲಿ ಮಂಕಾಗಿ ಮುಖದ ತುಂಬಾ ಸ್ಮಶಾನ ಮೌನ… ಆವಾಗಾವಾಗ “ಛೇ.. ಇವನೌನ!!” ಎನ್ನುವ ಹತಾಶೆ. ನಿಮಿಷ ನಿಮಿಷಕ್ಕೂ “ನಾಗವಲ್ಲಿ” ಹೊಕ್ಕಿದ್ದ ಸೌಂದರ್ಯಳ ಮುಖಭಾವದಂತೆ ಬದಲಾಗುವ ಮನಸ್ಥಿತಿ.
ಇವನ ನರನಾಡಿಗಳಲ್ಲಿ ಕ್ಷಣಕ್ಷಣಕ್ಕೆ ನವರಸಗಳ ಹಾವಭಾವ ರೂಪಾಂತರವಾಗುತ್ತಾ ಚಿಮ್ಮುತ್ತಿತ್ತು. ನನಗೋ “ಕುತೂಹಲ” ತಾಳದೆ “ಅದೇನು? ಏಕೆ?” ಎನ್ನುತ್ತಾ ಆತನ ಮೊಬೈಲ್ ಪರದೆಯತ್ತ ಸನ್ನೆ ಮಾಡಿದೆ.
“2000 ಹಾಕೇನ್ರಿ ಸರ್ರಾ, ಆರ್ಸಿಬಿ ಗೆದ್ರ ಫುಲ್ ಲಾಭರ್ರಿ!!. ಇಲ್ದಿದ್ರ ಅಪೂಟ ರೊಕ್ಕ ಇಲ್ದಂಗ ಮಾಡ್ತಾರ್ರಿ..!!”
ಇನ್ನೋ ಏನೇನೋ ಹೇಳ್ತಿದ್ದ. ಹಣ ಕಳೆದುಕೊಂಡಿದ್ದರ ಪರಿಣಾಮ ಇರಬಹುದು.

ಫೋಟೋ ಕೃಪೆ : google
ನನಗೆ ಮೊದಮೊದಲು ಅರ್ಥ ಆಗಲಿಲ್ಲವಾದರೂ ಕೊನೆಗೆ ಹೊಳೆದಿದ್ದು “ಈತ” online ಜೂಜಾಡ್ತಿದ್ದ ಅನ್ನೋದು.
ಮೊನ್ನೆ ಕಾರ್ಯನಿಮಿತ್ತ ಪುತ್ತೂರಿಗೆ ಹೋಗಿದ್ದೆ, ವಾಪಸ್ಸು ಬರುವಾಗ KSRTC ಕೆಂಪು ಬಸ್ಸೇರಿದೆ, ಆವಾಗಲೆ ನನ್ನ ಪಕ್ಕದ ಸೀಟಿಗೆ ವಕ್ಕರಿಸಿದ “ಈ ಜೂಜಾಟದ ಆಸಾಮಿ”. “ಈತ”ನ ಮುಖದ ಮೇಲೆ ನವರಸಗಳು ಜೂಟಾಟ ಆಡುತ್ತಿದ್ದವು.
ಕ್ರಿಕೆಟ್ ಜಗತ್ತಿಗೂ, ಬೆಟ್ಟಿಂಗ್ ದಂಧೆಗೂ ಇನ್ನಿಲ್ಲದ ನಂಟು. ಗಳಸ್ಯ ಕಂಠಸ್ಯ ಸಂಬಂಧ. ಕೆಲವರಿಗೆ, ಸಿಟಿಗಳಿಗೆ ಮಾತ್ರ ಎಟಕುವಂತಿದ್ದ ಕ್ರಿಕೇಟ್ “ಜೂಜಾಟ”, ಇವಾಗ ಪ್ರತಿ ಊರು, ಹಳ್ಳಿ, ಮನೆ ಮನೆಯ ಪಡಸಾಲೆಯನ್ನೂ ಹೊಕ್ಕಿದೆ. ಜೂಜಾಟದ ಯ್ಯಾಪ್ಗಳು ಪ್ರತಿಯೊಬ್ಬರ ಮೊಬೈಲ್ಗಳ Google Play Store ನಲ್ಲಿ ಬೆರಳತುದಿಗಿವೆ. ಹಲವರ ಮೊಬೈಲ್ ಪರದೆಗಿಳಿದು “ಆಟ” ಆಡಿಸುತ್ತಿವೆ. ಇದರಲ್ಲಿ ಹೆಚ್ಚಿನವರು ದಿನಗೂಲಿ ದುಡಿಯುವವರು, ಕಾಲೇಜು ಹುಡುಗರು, ಊರ ಕಟ್ಟೆ ಮೇಲೆ ಫಾಲ್ತು ಹರಟೆ ಹೊಡೆಯುವ ಮೈಗಳ್ಳರು, ಸಣ್ಣಪುಟ್ಟ ವ್ಯಾಪಾರಿಗಳು. ಆದರೆ ಎಲ್ಲರೂ ಅಕ್ಷರಸ್ಥರು ಎಂಬುದು ಖೇದಕರ.

ಫೋಟೋ ಕೃಪೆ : newstore88
Dream11, Rummyculture, my11circle ಮುಂತಾದ ಜೂಜಾಟ ಆಪ್’ಗಳು, ಇನ್ನೂ ಕೆಲವು ಅನಧಿಕೃತ ಲಿಂಕ್’ಗಳ ಮೂಲಕ download ಆಗುವ Appಗಳು ಪ್ರತಿ ಟಾಸ್’ಗೆ, ನಿರ್ಧಿಷ್ಟ ಓವರ್ Run ಅಂದಾಜಿಸಲು, ತಂಡದ ಗೆಲುವಿಗೆ, ಪ್ರತಿ ಆಟಗಾರನ ಆಟೋಟ ಅಂದಾಜಿಸಲು ಬೆಟ್ಟಿಂಗ್ ನಡೆಸುತ್ತವೆ.
ಒಮ್ಮೇ… ಇಂತಹ App ಗಳನ್ನು install ಮಾಡಿಕೊಂಡು ಆಟವಾಡಲು ಶುರುಮಾಡಿದರೆ ಮುಗೀತು. ಮೊದಲು ರೂಪಾಯಿಯಿಂದ ಶುರುವಾಗಿ ಲಾಭದಾಯಕ ಅನ್ನಿಸಿದ ತಕ್ಷಣವೆ ಸಾವಿರದ ಗಡಿಗೆ ಜಿಗಿಸಿ ಬಿಡುತ್ತದೆ. ಒಮ್ಮೆ ಜೂಜಾಟದ ಬಲೆಗೆ ಬಿದ್ದರೆ ಮುಗೀತು ದುರ್ಬಲ ಮನಸ್ಸುಗಳು ಮರಳುವುದು ಸುಲಭವಲ್ಲ. ಇದೊಂದು ಕೊನೆಯಿರದ ಕತ್ತಲು ಸುರಂಗ. ಕೆಲವು ಗೆಲುವುಗಳು ಲೋಭ ಹೆಚ್ಚಿಸಿ ಶೀಘ್ರ, ಸುಲಭ ಹಣ ಮಾಡುವಂತೆ ಪ್ರೇರೆಪಿಸುತ್ತವೆ. ಇದ್ದ ಹಣವನ್ನೆಲ್ಲಾ ಕಳೆದುಕೊಂಡು, ಬಡ್ಡಿ ಸಾಲ ಮಾಡಿ ಅಸಲು ರೊಕ್ಕವನ್ನಾದರೂ ಗೆಲ್ಲಲೂ ಹೋಗಿ, ಆ ಸಾಲವೂ ಹೆಗಲೇರಿ, ನೆತ್ತಿಯ ಮೇಲೆ ತೂಗುಗತ್ತಿಯಂತೆ ತೂಗಾಡಲು ಶುರುಮಾಡುತ್ತದೆ. ಶೀಘ್ರ ಹಣ ಮಾಡಲು ದುಡಿಮೆ ಹೊರತುಪಡಿಸಿ ಅನ್ಯ ಮಾರ್ಗಗಳಿಲ್ಲ, “ಜೂಜು” ಹಣ ಗಳಿಸುವ ಮಾರ್ಗವಂತೂ ಅಲ್ಲವೇ ಅಲ್ಲಾ.
ಇಂದಿನ ಯುವಪೀಳಿಗೆಯ ಬಹುಪಾಲರನ್ನು online gambling app ಗಳು ಆಳುತ್ತಿವೆ. Online ಜೂಜಾಟ ಪ್ರೇರೆಪಿಸಲೆಂದೆ ಹಲವು ಟಿಪ್ಸ್ ಕೊಡುವ YouTube video ಗಳು ಲಭ್ಯ, ಅಂದಾಜು ಗೆಲುವು ನಿರ್ಧರಿಸುವ Telegram group, whatsapp group ಗಳು ಇರುವುದು ಅಚ್ಚರಿ. ಅಭಿಮಾನಿ ದೇವರುಗಳಿಗೊಸ್ಕರ Facebook Live ಬರುವ
ದಢೂತಿ ದೇಹದ ಸ್ವಯಂಘೋಷಿತ ಸಂಖ್ಯಾಶಾಸ್ತ್ರ, ಜ್ಯೋತಿಷ್ಯರತ್ನಗಳು “ನಿಖರ ಗೆಲುವು ಯಾವ ಟೀಮಿನ ಪಾಲು” ಎಂದೂ ಅಂದಾಜಿಸಿ, ಪರೋಕ್ಷವಾಗಿ ಜೂಜಾಡಲು ಪ್ರೇರೆಪಿಸುವರು. (ಇವಾಗ ಧಡೂತಿ ಸಂಖ್ಯಾಶಾಸ್ತ್ರದ ಆ ದೇವರು ಕಾಣಿಸ್ತಿಲ್ಲ). Offline gambling ಅಂತೂ ರಾಜಾರೋಷವಾಗಿ ನಡೆಯುತ್ತಿದೆಯಾದರೂ ಪೋಲಿಸರ ಗಮನಕ್ಕೆ ಬರದೆ ಇರಲಾರದು.
Online ಜೂಜಾಟ ಅಪರಾಧವಲ್ಲ, offline ಜೂಜಾಟ ಅಪರಾಧ.

ಫೋಟೋ ಕೃಪೆ : engadget
ಕಳೆದ ವರ್ಷ ಅಕ್ಟೋಬರ್’ನಲ್ಲಿ ಕರ್ನಾಟಕ ಸರ್ಕಾರ “ಆನ್ಲೈನ್ ಜೂಜು ನಿಷೇಧ ಕಾಯ್ದೆ ತಿದ್ದುಪಡಿ”ಯನ್ನು ಜಾರಿಗೊಳಿಸಿ, online app ಗಳನ್ನು ಕಾನೂನು ಬಾಹಿರಗೊಳಿಸಿತ್ತು. ಆದರೆ ಜೂಜಾಟದ Appಗಳ ಸಂಘದವರು “ಸರ್ಕಾರದ ನಿರ್ಧಾರ ಕಾನೂನು ಬಾಹಿರ” ಅಂತ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿ ಗೆದ್ದು ಬಂದರು.
ಸರ್ಕಾರದ ಕಾಯ್ದೆ ರದ್ದಾಯಿತು.
ಸರ್ಕಾರಕ್ಕೆ ತೊಡೆತಟ್ಟಿ ಮತ್ತೆ ಮಾರ್ಕೆಟಿಗಿಳಿದ online ಜೂಜಾಟದ Appಗಳು ತಮ್ಮ ತಮ್ಮ App promotionಗೆ ಪಡ್ಡೆಹೈಕ್ಳು ಫಾಲೋ ಮಾಡೋ ನಾಯಕ ನಟ, ನಟಿ, ಖಳನಾಯಕ, ಕ್ರಿಕೇಟ್ ಆಟಗಾರ, ಇತರೆ ಆಟಗಾರರ ಹಣದ ತೈಲಿ, ಜೇಬು ತುಂಬಿಸಿ Advertise ಮಾಡಿಸುತ್ತಿವೆ. ಹಣದ ತೆವಲಿಗೆ ಬಿದ್ದು ಜಾಹೀರಾತು ಮಾಡುವವರಿಗೆ ಕನಿಷ್ಠ ಸಾಮಾಜಿಕ ಕಳಕಳಿಯಂತೂ ಇಲ್ಲ.
ಯಾರು ಏನೇ ಮಾಡಲಿ.. ಅದೆಷ್ಟೇ ಜೂಜಾಟದ ಯ್ಯಾಪ್’ಗಳು ಬರಲಿ. ನಮ್ಮ ಬುದ್ದಿ, ವಿಚಾರ ಸ್ಥಿಮಿತ ಕಳೆದುಕೊಳ್ಳದೆ ನಮ್ಮ ಹಿಡಿತದಲ್ಲಿದ್ದರೆ ಸಾಕು.
ಐಪಿಎಲ್ ಮುಗಿದ ನಂತರ ಸುಮಾರು ಜನ ತಮ್ಮ ತಮ್ಮ ಹಣದ ಚೀಲ ಖಾಲಿ ಮಾಡಿಕೊಂಡು, ಸಾಲ ಬೆಳೆದು, ಬಡ್ಡಿ ಗಗನಕ್ಕೇರಿ… ಪಲಾಯನ, ಆತ್ಮಹತ್ಯೆಗೆ ಶರಣಾಗುವುದು ಶತಸಿದ್ಧ. ಹಲವು ಮನೆ-ಮನಸ್ಸುಗಳು ಕಣ್ಣೀರು ಹಾಕುವುದು, ಬೀದಿಗೆ ಬೀಳುವುದು ಬಾಕಿ ಇದೆ.
Online app ಮೂಲಕ ಜೂಜಾಡುವವರು ಇವಾಗಲಾದರೂ ಎಚ್ಚರಗೊಳ್ಳಿ. ನೀವು ಬೀದಿಗೆ ಬಿದ್ದರೆ, ಆತ್ಮಹತ್ಯೆ ಮಾಡಿಕೊಂಡರೆ… ಓಡಿ ಹೋದರೆ.. ಎಲ್ಲರೂ ಶಪಿಸುವುದು
ನಿಮ್ಮನ್ನು, ನೀವೆ ಹೊಣೆ. ನಿಮ್ಮ ಮನೆ ಬೀದಿಗೆ ಬೀಳದಿರಲಿ. ( ಜೂಜಾಟದ Appಗಳು, ಹೈಕೋರ್ಟ್ ತೀರ್ಪು, ಜಾಹೀರಾತು ಶಿರೋಮಣಿಗಳು, ಭಂಡ ಜ್ಯೋತಿಷಿ, ಬಾಬಾಗಳು ಯಾರೆಂದರೆ ಯಾರೂ ಆಕ್ಷೇಪಣೆಗೆ ಒಳಗಾಗಲ್ಲ. ನೀನು ಮತ್ತು ನೀನಷ್ಟೇ ಹೊಣೆಗಾರ.)
“ರಾಜ ಮಹಾರಾಜರಿಗೆ ಮಣ್ಣು ಮುಕ್ಕಿಸಿದ ಜೂಜಾಟ, ನಮ್ಮನ್ನು ಬಿಟ್ಟೀತೆ??”………
- ಡಾ.ಪ್ರಕಾಶ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ
