ಕ್ಯಾನ್ಸರ್ ನಿಂದ ನನ್ನನ್ನು ನಾನು ಅರಿತ ಮೇಲೆ



ಕ್ಯಾನ್ಸರ್ ಚಿಕಿತ್ಸೆಗೆ ಒಳಗಾದ ರೋಗಿಯೊಬ್ಬ ಕ್ಯಾನ್ಸರ್ ಗೆದ್ದು ಬಂದು… ತಮ್ಮ ಅನುಭವವನ್ನು ಕತೆಯಾಗಿಸಿ ಓದುಗರ ಮುಂದಿಟ್ಟಾಗ, ಇನ್ನೊಬ್ಬರಿಗೆ ಅದು ಸ್ಫೂರ್ತಿಯ ಕತೆಯಾಗುತ್ತದೆ. ಅಂತಹ ಕತೆಯನ್ನು ಲಕ್ಷ್ಮಣ ಕೌಂಟೆಯವರು ಓದುಗರ ಮಂದಿ ಹಂಚಿಕೊಂಡಿದ್ದಾರೆ, ಓದುವಾಗ ಕಣ್ಣುಗಳು ತೇವವಾದವು. ನೀವು ಓದಿ…

2013ರಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾದ ಮೇಲೆ ನಾನೀಗ ನನ್ನ ದೇಹದ ಮಾತುಗಳನ್ನು ಮಾತ್ರ ಕೇಳುತ್ತಿರುವೆ. ಹೌದು, ಇದು ನಿಜವೇ!! ಮುಂಚೆ ನಾನು ದೇಹವೆಂಬ ಕುದುರೆಯನ್ನು ಸರಿಯಾಗಿ ದುಡಿಸುತ್ತಿದ್ದೆ. ನನ್ನ ಬದುಕಿನಲ್ಲಿ ಒಕ್ಕಲುತನ, ಉಪನ್ಯಾಸ ಮತ್ತು ಸಾಹಿತ್ಯ ಕೃಷಿ ನನ್ನ ಮೂರು ಮುಖ್ಯವಾದ ವೃತ್ತಿಗಳು. ಕಾಲೇಜೊಂದರಲ್ಲಿ ಉಪನ್ಯಾಸಕನಾಗಿದ್ದ ನಾನು ಅದನ್ನೂ ಪ್ರಾಮಾಣಿಕವಾಗಿಯೇ ನಿರ್ವಹಿಸುತ್ತ ಬಂದವನು. ಹಿಂದಿನಿಂದಲೂ ಓದುವ ಬರೆಯುವ ಹುಚ್ಚೂ ಬಹಳವೇ. ರಾತ್ರಿ ನಿದ್ರೆ ಬಾರದೆ ಇದ್ದಾಗ ಹಾಸುಗೆಯಿಂದ ಮೇಲೆದ್ದು ಬರೆದ ಪುಸ್ತಕಗಳೇ ಹೆಚ್ಚು. ವಾರದ ರಜಾ ದಿನ, ಇತರೆ ರಜಾ ದಿನಗಳು, ಬೇಸಿಗೆ ದಸರಾ ಇತ್ಯಾದಿ ಬಿಡುವಿನ ದಿನಗಳಲ್ಲಿ ನಾನು ಕೃಷಿ ಭೂಮಿಯೆಡೆಗೆ ದೌಡು ಹೊಡೆಯುತ್ತಿದ್ದೆ. ಒಕ್ಕಲುತನ ಅಷ್ಟೇನು ಲಾಭದಾಯಕವಲ್ಲದ ಉದ್ಯೋಗವಾದರೂ ಅದು ನನ್ನ ಪೂರ್ವಿಕರ ವೃತ್ತಿಯಾದ್ದರಿಂದ ಅದನ್ನು ನಾನು ಇಂದಿಗೂ ನಿರ್ವಹಿಸಿಕೊಂಡು ಬಂದಿದ್ದೇನೆ. ಜೊತೆಗೆ ಚಿಕ್ಕವನಿದ್ದಾಗಲೇ ಶಾಲೆಯ ಮುಕ್ತಾಯದ ಗಂಟೆ ಹೊಡೆದ ಕೂಡಲೇ ಮನೆಗೆ ಓಡಿ ‘ಪಾಟಿ ಚೀಲ’ ಒಳಗೆ ಎಸೆದು ಹೊಲಕ್ಕೆ ಓಡುವ ಚಟ ಬೆಳಸಿಕೊಂಡಿದ್ದೆ. ರಜಾ ದಿನಗಳಲ್ಲಿ ಹಸು ಎಮ್ಮೆಗಳನ್ನು ಮೇಯಿಸಲು ಹೊಲಕ್ಕೆ ಹೋಗುತ್ತಿದ್ದೆ. ಹೀಗಾಗಿ ಕೃಷಿ ಹವ್ಯಾಸ ಕಾಲೇಜು ಉಪನ್ಯಾಸಕನಾದಾಗಲೂ ಯಥಾರೀತಿ ಮುಂದುವರೆಯಿತು.

2012 ನನಗೆ ಆಘಾತಕಾರಿ ವರ್ಷ. ಆ ವರ್ಷ ಎಪ್ರಿಲ್ 25ರಂದು ನನ್ನಿಬ್ಬರ ಮಕ್ಕಳ (ಮಗ ಮತ್ತು ಮಗಳು) ವಿವಾಹ ಮಾಡಲು ನಿಶ್ಚಯಿಸಲಾಗಿತ್ತು. ಆದರೆ ಅದೇ ಮಾಸದಲ್ಲಿ, ಎಪ್ರಿಲ್ 10, 14 ಮತ್ತು 24ರಂದು ನನ್ನ ನಾಲ್ಕು ಜನ ಬಂಧುಗಳು ಮರಣ ಹೊಂದಿದರು. 10ರಂದು ನನ್ನ ಚಿಕ್ಕಪ್ಪ ಮರಣ ಹೊಂದಿದರೆ, 14 ರಂದು ನನ್ನ ಮಗನಿಗೆ ಕನ್ಯೆಯನ್ನಿತ್ತ ಮಾವ ತನ್ನ ಚಿಕ್ಕಪ್ಪನೊಂದಿಗೆ ಅಪಘಾತವೊಂದರಲ್ಲಿ ಸಾವಿಗೀಡಾದರು. ಲಗ್ನ ಪತ್ರಿಕೆಗಳನ್ನು ನೆಂಟರಿಷ್ಟರಿಗೆ ಅದಾಗಲೇ ವಿತರಣೆ ಮಾಡಲಾಗಿತ್ತು. ಮದುವೆಗೆ ಅಗತ್ಯವಾದ ಎಲ್ಲ ಸಿದ್ಧತೆಗಳನ್ನೂ ಪೂರ್ಣಗೊಳಿಸಲಾಗಿತ್ತು. ಹೀಗಾಗಿ ವಿವಾಹ ಮಾಡಿ ಮುಗಿಸಲು ನಿರ್ಧರಿಸಿದೇವು. ಮದುವೆಯ ಮುನ್ನಾದಿನ, 24 ರಂದು ಬೆಳಿಗ್ಗೆ ನನ್ನನ್ನು ಹೆತ್ತ ತಾಯಿ ತೀರಿಕೊಂಡಳು. ಎಲ್ಲ ನೋವು ಶೋಕಗಳನ್ನು ಒಳಗೊಳಗೇ ನುಂಗಿಕೊಂಡು ಮಗನ ಮತ್ತು ಮಗಳ ಮದುವೆ ಮಾಡಿ ಮುಗಿಸಿದ್ದಾಯಿತು.

ಮುಂದೆ ಅದೇ ವರ್ಷದ (2012) ಅಕ್ಟೋಬರ್ ತಿಂಗಳಲ್ಲಿ ನನಗೆ ಅನಾರೋಗ್ಯ ಕಾಡಿತು. ಉಂಡಿದ್ದೆಲ್ಲವೂ ವಾಂತಿಯಾಗುತ್ತಿತ್ತು. ಡೈಗ್ನೋಸ್ ಮಾಡಿದಾಗ ನನಗೆ ಅನ್ನ ನಾಳದ ಕ್ಯಾನ್ಸರ್ ಇರುವುದು ತಿಳಿಯಿತು. ನನ್ನ ಬಂಧುಗಳು, ಮನೆಯವರು, ಆಪ್ತರು, ಮಿತ್ರರು ಮತ್ತಿತರರು ನಾನು ಬದುಕಿ ಉಳಿಯಲಾರೆ ಅಂತ ಅಂದುಕೊಂಡರು.

ಬೆಂಗಳೂರಿಗೆ ಅಲೆದಾಟ ಆರಂಭವಾಯಿತು. ತಿಂಗಳಿಗೊಮ್ಮೆ ಮೂರು ದಿನಗಳ ಖಿಮೋ ಚಿಕಿತ್ಸೆ ನಡೆದು ಅಂತಿಮವಾಗಿ ಫೆ.8, 2013 ರಂದು ಬೆಂಗಳೂರಿನ HCG ಆಸ್ಪತ್ರೆಯಲ್ಲಿ ನನಗೆ ಆಪರೇಶನ್ ಆಯಿತು. ಅನ್ನ ನಾಳ ಪೂರ್ತಿಯಾಗಿ ಕತ್ತರಿಸಿ ತಗೆದು, ಜಠರವನ್ನೇ ಸಣ್ಣ ಕೊಳವೆಯಾಕಾರ ಮಾಡಿ ಗಂಟಲಿಗೆ ಜೋಡಿಸಲಾಯಿತು.

HCG Cancer Hospital launches state- of-the-art Day Care Centre in Bengaluru

ಫೋಟೋ ಕೃಪೆ : google

ಅಂದಿನಿಂದ ನಾನು ದೇಹ ಹೇಳುವ ಮಾತು ಕೇಳುವುದು ಅನಿವಾರ್ಯವಾಗಿದೆ. ಅದು ಮಾಡು ಅಂದಿದ್ದನ್ನೇ ಮಾಡುವುದು, ಬೇಡ ಅಂದಿದ್ದನ್ನು ಬಿಡುವುದು.. ಹೀಗೆಯೇ ನಡೆದಿದೆ.

ಆಪರೇಶನ್ ಆದ ಮೇಲೆ ನಾನು ಬದುಕಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಅನಿವಾರ್ಯವಾಯಿತು. ಮುಖ್ಯವಾಗಿ ನಿತ್ಯದ ಪ್ರತಿ ಊಟದಲ್ಲಿ
75% ಕಡಿತ ಮಾಡಬೇಕಾಯಿತು. ಹಾಗೆಯೇ ತೀರ ಸರಳವಾಗಿ ಜೀರ್ಣವಾಗುವ, ಹುಳಿ ಖಾರ ಕಡಿಮೆ ಇರುವ, ಗಟ್ಟಿಯಲ್ಲದ ಆಹಾರ ಸೇವಿಸುವುದು ಕಡ್ಡಾಯವಾಯಿತು. ಹೀಗಾಗಿ ನನ್ನ ತೂಕ 74 ಕೆಜಿ ಇಂದ 62 ಕೆಜಿಗೆ ಇಳಿಯಿತು.

ಫೋಟೋ ಕೃಪೆ : google ಸಾಂದರ್ಭಿಕ ಚಿತ್ರ

ಮಲಗುವ ಪದ್ಧತಿಯನ್ನು ಬದಲು ಮಾಡಿಕೊಳ್ಳಬೇಕಾಯಿತು. ಮೊದಲಿನಂತೆ ಹೇಗೆ ಬೇಕೋ ಹಾಗೆ ಮಲಗುವುದನ್ನು ಬಿಡುವುದು ಅನಿವಾರ್ಯವಾಯಿತು. ಸೆಮಿ ಸ್ಲೀಪರ್ ಕೋಚ್ ಬಸ್ ನಲ್ಲಿ ಮಲಗಿದಂತೆ ತಲೆ ಎಡೆಗೆ 45 ಡಿಗ್ರಿಯ ಹಾಸುಗೆಯ ಮೇಲೆ ಬೆನ್ನು ಆಸರೆ (bed chair) ಹಾಕಿಕೊಂಡು ಮಲಗುವುದನ್ನುರೂಢಿ ಮಾಡಿಕೊಳ್ಳಬೇಕಾಯಿತು. ಮನಸ್ಸಿಗೆ ಬಂದಂತೆ ಓಡಾಡುವುದನ್ನು ನಿಲ್ಲಿಸ ಬೇಕಾಯಿತು. ನಡೆದು ಹೋಗುವುದಾದರೆ ಅರ್ಧ ಕಿ.ಮಿ. ಮಾತ್ರವೇ, ಅದೂ ನಿಧಾನಕ್ಕೆ ನಡೆಯುವಂತಾಯಿತು. ಇನ್ನು ದೂರದ ಪ್ರಯಾಣಕ್ಕೆ ಅನಿವಾರ್ಯವಾದರೆ ರೈಲು ಮಾತ್ರ ಬಳಸುವಂತಾಯಿತು. ಬಸ್ ಮೂಲಕವಾದರೆ ಐವತ್ತು ಅರವತ್ತು ಕಿ.ಮಿ. ಒಳಗೆಯೇ ನನ್ನ ಪ್ರಯಾಣ. ಈ ಕಾರಣದಿಂದ ನಾನು ಹಲವು ಬಗೆಯ ಕಾರ್ಯಕ್ರಮಗಳಿಂದ ವಂಚಿತನಾಗುವಂತಾಯಿತು. ಆ ಕುರಿತ ಖೇದ ನನ್ನಲ್ಲಿ ಉಳಿದಿದೆ. ಏಕೆಂದರೆ ನಾನು ವೈವಿಧ್ಯಮಯವಾಗಿ ಬರೆದದ್ದು ಬಹಳ. ಆದರೆ ಸಾರಸ್ವತ ಲೋಕದಲ್ಲಿ ಬಹುವಿಶಾರದ ದೃಷ್ಟಿಯಲ್ಲಿ ಅಜ್ಞಾತ ಬರಹಗಾರನಾಗಿಯೇ ಉಳಿದಿರುವೆ.

ಇನ್ನು ನೀರಡಿಸಿದರೂ ನಾನು ಒಮ್ಮೆಗೆ ಒಂದು ಗ್ಲಾಸ್ ನೀರು ಕುಡಿಯುವುದು ಸಾಧ್ಯವಿಲ್ಕ. ಗುಟುಕು ಗುಟುಕು ಕುಡಿಯ ಬೇಕಿರುವುದರಿಂದ ಎತ್ತ ಹೊರಟರೂ ನೀರಿನ ಬಾಟಲ್ ಜೊತೆಗೆ ಇರಿಸಿಕೊಳ್ಳುವಂತಾಯಿತು. ಎಲ್ಲಿಗೇ ಹೋದರು ಸುಮಾರು ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಇರುವಂತಿಲ್ಲದ ಸ್ಥಿತಿಗೆ ಬರುವಂತಾಯಿತು. ಹೆಚ್ಚು ಹೆಚ್ಚು ವಿಶ್ರಾಂತಿ ಸ್ಥಿತಿಯಲ್ಲೇ ಇರುವುದು ನನಗೆ ಇಂದೂ ಅನಿವಾರ್ಯವಾಗಿದೆ.



ಆಗಾಗ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಹ್ವಾನಗಳು ಬರುತ್ತವೆ. ಆದರೆ ಕಾರ್ಯಕ್ರಮಗಳು ಸಮಯ ಸೂಚಿ ಪ್ರಕಾರ ಆರಂಭವಾಗುವುದೂ ಇಲ್ಲ, ಮುಕ್ತಾಯಗೊಳ್ಳುವುದೂ ಇಲ್ಲ. ಹೀಗಾಗಿ ನಾನು ಆ ತರಹದ ಕಾರ್ಯಕ್ರಮಗಳಿಂದ ತಪ್ಪಿಸಿಕೊಳ್ಳುವುದು ಅನಿವಾರ್ಯವಾಗಿದೆ. ಅದೇ ತರಹ ಪ್ರಶಸ್ತಿಗಳ ಕುರಿತು. ಪ್ರಶಸ್ತಿಗಳಿಗಾಗಿ ಪುಸ್ತಕಗಳನ್ನು ಕಳುಹಿಸಿಕೊಡುವ ಪ್ರಕ್ರಿಯೆಯನ್ನೇ ನಿಲ್ಲಿಸಿರುವೆ. ಮೊದಲು ಆ ತರಹ ಕಳುಹಿಸಿ ಪ್ರಶಸ್ತಿಗಳನ್ನು ಪಡೆದದ್ದೂ ಉಂಟು. ಎಂದೋ ಯಮಲೋಕಕ್ಕೆ ಹೊರಟಿದ್ದ ನನ್ನನ್ನು ಉಳಿಸಿದ್ದು ಈ ಬರವಣಿಗೆಗಾಗಿ ಅಂತ ಅಂದುಕೊಂಡು ಆ ಕಾರ್ಯದಲ್ಲಿಯೇ ನಾನು ಮುಂದುವರೆದಿರುವೆ. ನಿದ್ರೆ ಬಂದಾಗ ಮಲಗುತ್ತೇನೆ, ಎಚ್ಚರವಾದಾಗ ಓದು ಬರಹ ಮಾಡುತ್ತೇನೆ. ಹಸಿವೆ ಆದಾಗ ಸರಳ, ಅಲ್ಪ ಆಹಾರ ಸೇವಿಸುತ್ತೇನೆ. ಆ ಸಮಯ ಈ ಸಮಯ ಅನ್ನುವ ಗೊಡವೆಯೇ ಇರಿಸಿಕೊಂಡಿಲ್ಲ. ಅದೇ ಬೇಕು, ಇದು ಏಕೆ ಅಡುಗೆ ಮಾಡಿದಿರಿ? ಎಂದು ಕೇಳುವುದನ್ನೂ ನಿಲ್ಲಿಸಿ ಬಿಟ್ಟಿರುವೆ. ಕೊಟ್ಟದ್ದನ್ನು ಎಷ್ಟು ಬೇಕೋ ಅಷ್ಟೇ ಉಂಡು ಬಿಡುವುದು ನನಗೆ ರೂಢಿಯಾಗಿದೆ.

ಸಿಟ್ಟು ಕಡಿಮೆಯಾಗಿದೆ, ಹೋಗಲಿ ಬಿಡು ಎನ್ನುವ ಭಾವ ಹೆಚ್ಚಾಗಿದೆ. ಜನರನ್ನು ಎಷ್ಟು ಬೇಕೋ ಅಷ್ಟು ಹಚ್ಚಿಕೊಳ್ಳುವೆ. ಕೆಡುಕರ ಸನಿಹವೂ ಹೋಗುವುದಿಲ್ಲ. ಪದವಿ ಪ್ರಶಸ್ತಿಗಳ ಆಶೆ ಕಳೆದುಕೊಂಡಿದ್ದೇನೆ. ಸಂಪಾದಿಸಿದ್ದೆಲ್ಲ ಮನೆಯವರಿಗೆ ಒಪ್ಪಿಸಿದ್ದೇನೆ. ನಾನು ಮನೆಯಲ್ಲಿ ಇದ್ದೂ ಇಲ್ಲದಂತೆ ಇದ್ದೇನೆ. ಅಂತೆಯೇ ಯಾವುದೇ ಕ್ಷಣ ಮರಣ ಬಂದರೂ ಇನ್ನೊಂದಿಷ್ಟು ಕಾಲ ಬದುಕಿರಬೇಕು ಎನ್ನುವ ಆಶೆಯನ್ನು ತೊರೆದಿದ್ದೇನೆ. ಮತ್ತು ಅದನ್ನಪ್ಪಿಕೊಳ್ಳಲು ಸಿದ್ಧನಾಗಿದ್ದೇನೆ. ಮರಣಾ ನಂತರ ದೇಹದಾನಕ್ಕೆ ಇದಾಗಲೇ ನೊಂದಣಿ ಮಾಡಿಸಿದ್ದೇನೆ.

ಇದು ನನ್ನ ಬದುಕಿನ ಕಥೆಯ ಒಂದು ಭಾಗ. ಹೇಳಿಕೊಳ್ಳಬೇಕು ಅನ್ನಿಸಿತು, ಹೇಳಿಕೊಂಡೆ.


  • ಡಾ.ಲಕ್ಷ್ಮಣ ಕೌಂಟೆ (ಹಿರಿಯ ಲೇಖಕರು, ಕವಿ) ಕಲಬುರಗಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW