ಡಾರ್ಲಿಂಗ್ ಕೃಷ್ಣ ನಿರ್ದೇಶನದಲ್ಲಿ ಮೂಡಿ ಬಂದಿರುವ “ಲವ್ Mocktail -೩” ಸಿನಿಮಾದಲ್ಲಿ ಅವರೇ ನಾಯಕನಾಗಿ ಮನೋಜ್ಞ ಅಭಿನಯ ನೀಡಿದ್ದಾರೆ. ಬಾಲ ನಟಿ ಸಂವೃತಾ ಮನ ಸೆಳೆಯುತ್ತಾಳೆ. ಈ ಸಿನಿಮಾದ ಕುರಿತು ಲೇಖಕರಾದ ಎನ್.ವಿ.ರಘುರಾಂ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಎಲ್ಲಾ ಕಡೆ ಯುದ್ಧದ ಸುದ್ದಿ, ಎಲ್ಲಾ ಸುದ್ದಿ ವಾಹಿನಿಗಳಲ್ಲಿ ತೋರಿಸುತ್ತಿರುವ ಹತ್ತಿ ಉರಿಯುತ್ತಿರುವ ತೈಲ ಬಾವಿಗಳು, ಹತ್ತು ದಿನಗಳಿಂದ ಬರದ ಗ್ಯಾಸ್ ಸಿಲಿಂಡರ್ ಇತ್ಯಾದಿ ಬೇವುಗಳಿಂದ ಕಹಿಯಾಗಿರುವ ಮನಸ್ಸಿಗೆ ಒಂದಿಷ್ಟು ಬೆಲ್ಲವಾಗಿ ಈ ಯುಗಾದಿಗೆ “ಲವ್ Mocktail-3” ಸಿನಿಮಾ ಬಂದಿದೆ.
ಈ ‘ಮಾಕ್ ಟೈಲ್’ ಪದ ಈಗ ಎಲ್ಲರಿಗೂ ಚಿರಪರಿಚಿತ. ವಿವಿಧ ರೀತಿಯ ಹಣ್ಣಿನ ರಸವನ್ನು ಒಂದು ‘ಡಿಜೈನರ್ ಗ್ಲಾಸ್’ ಲೋಟದಲ್ಲಿ ಹಾಕಿ, ಕಂಠದ ಬಳಿ ತುಳಸಿ ಅಥವಾ ಪುದಿನ ದಳವೊಂದು ಸಿಕ್ಕಿಸಿಕೊಂಡು ಬರುವ ಈ ಪೇಯವನ್ನು ಪದಗಳಲ್ಲಿ ವರ್ಣಿಸಲು ಪ್ರಯತ್ನಿಸಿದರೆ ಅದಕ್ಕೆ ನ್ಯಾಯ ಸಲ್ಲುವುದಿಲ್ಲ. ಆ ಬಣ್ಣ, ಬಣ್ಣದ ಪೇಯವನ್ನು ಎದುರುಗಡೆ ಇಟ್ಟುಕೊಂಡು ನೋಡುತ್ತಾ ಕಣ್ಣು ತುಂಬಿಸಿ ಕೊಳ್ಳಬೇಕು ಮತ್ತು ಸ್ವಲ್ಪ, ಸ್ವಲ್ಪವಾಗಿ ‘ಸಿಪ್’ ಮಾಡುತ್ತಾ ಆನಂದಿಸಬೇಕು. ಜೊತೆಯಲ್ಲಿ ಸ್ನೇಹಿತರು ಅಥವಾ ಕುಟುಂಬ ವರ್ಗದವರು ಇದ್ದರೆ ಅದು ಇನ್ನೂ ಚೆನ್ನ. ಈಗ ಕೃಷ್ಣ ‘ಲವ್ವಿನ ಮಾಕ್ ಟೈಲ್’ ಮಾಡಿ ನಮ್ಮ ಮುಂದೆ ಸಿನಿಮಾದ ರೂಪದಲ್ಲಿ ಇಟ್ಟಿದ್ದಾರೆ. ಈ ಸಿನಿಮಾ ನೋಡಿದವರು, ತಮ್ಮ ಇಷ್ಟದ ಮಾಕ್ ಟೈಲ್ ‘ಕೆಫೆ’ಯೊಂದರಲ್ಲಿ ಆಸ್ವಾದಿಸಿದಂತೆ, ಮೆಚ್ಚಿದಂತೆ, ಸಂತೋಷ ಪಟ್ಟಂತೆ ಅನುಭವ ಹೊಂದುವುದರಲ್ಲಿ ಆಶ್ಚರ್ಯವಿಲ್ಲ.

ಮೇಲು ನೋಟಕ್ಕೆ ಇಲ್ಲಿ ಕೃಷ್ಣ ಬಟ್ಟಲಿನಲ್ಲಿ ತುಂಬಿ ಕೊಟ್ಟಿರುವುದು ಅಪ್ಪ ಮತ್ತು ಮಗಳ ಪ್ರೀತಿಯನ್ನು. ಅಪ್ಪ ಎಂದರೆ ಆಕಾಶವೆಂದು ಹೇಳಿ, ಹೇಳಿ ಮಕ್ಕಳನ್ನು ಅಪ್ಪನಿಂದ ದೂರ ಇಟ್ಟಿರುವ ಕಥೆ ಇದಲ್ಲ! ಬದಲಾಗಿ, ಅಪ್ಪ ಮಗಳಿಗೆ ಸಾಮಾನ್ಯವಾಗಿ ಕೊಡುವ ಧೈರ್ಯ ಮತ್ತು ತೋರಿಸುವ ಕಾಳಜಿಯ ಜೊತೆಗೆ ತಾಯಿಯ ಮಮತೆ ಮತ್ತು ವಾತ್ಸಲ್ಯ ಕೂಡ ಹರಿಸಿರುವುದು ಇಲ್ಲಿಯ ವಿಶೇಷ. ಹಾಗಾಗಿ ಈ ಪ್ರೀತಿಯ ‘ಮಾಕ್ ಟೈಲ್’ ರುಚಿಕರವಾಗಿದೆ.
ಮೊದಲ ಹತ್ತು ನಿಮಿಷಗಳಲ್ಲಿ ನಮ್ಮನ್ನು ಸಿನಿಮಾ ತನ್ನೊಳಗೆ ಸೆಳೆದುಕೊಳ್ಳಲು ಯಶಸ್ವಿಯಾಗುತ್ತದೆ. ನಂತರ ಮಕ್ಕಳನ್ನು ಶಿಸ್ತಿನಿಂದ ಬೆಳೆಸ ಬೇಕು ಎನ್ನುವ ಅಮ್ಮ, ಮಕ್ಕಳನ್ನು ಅವರ ಪಾಡಿಗೆ ಅವರನ್ನು ಅರಳಲು ಬಿಡಬೇಕು ಎನ್ನುವ ಅಪ್ಪನ ಮಾತುಕಥೆಯ ಮೂಲಕ ಕಥೆ ಪ್ರಾರಂಭವಾಗುತ್ತದೆ. ಮೊದಲ ಭಾಗದಲ್ಲಿ ತಂದೆ ತನ್ನ ಮಗಳು ‘ನಿಧಿ’ಯನ್ನು ಬೆಳಸಿದ ರೀತಿಯ ಚಿತ್ರಿಣವಿದೆ. ಆಗ ನಿಧಿ ಶಾಲೆಗೆ ಹೋಗುವಾಗ ನಾವು ಅವಳ ಜೊತೆಗೆ ಹೋಗಿ, ಅವಳು ನಕ್ಕಾಗ ನಾವು ನಕ್ಕು, ಆಕೆಗೆ ನೋವಾದಾಗ ನಮಗೂ ‘ಪಾಪ’ ಅನಿಸುವಂತೆ ಇರುವ ಈ ಭಾಗ ಅತ್ಯಂತ ಸುಂದರವಾಗಿದೆ. ಆ ಸಮಯದಲ್ಲಿ ಶಾಲೆಯಲ್ಲಿ ನಡೆಯುತ್ತಿರುವ ಸುಂದರ ಸಮಾರಂಭದ ಕೊನೆಯಲ್ಲಿ ‘ಸಿವಿಲ್ ಡ್ರೆಸ್’ನಲ್ಲಿರುವ ಪೋಲಿಸ್ ಇನ್ಸ್ಪೆಕ್ಟರ್ ಪ್ರವೇಶವಾಗುತ್ತದೆ. ಆತ ಏಕೆ ಬಂದ, ಮುಂದೇನಾಯಿತು ಎಂದು ಸಿನಿಮಾದಲ್ಲಿ ನೋಡಿ ತಿಳಿದರೆ ಚೆನ್ನ.
ಎರಡನೇ ಭಾಗದಲ್ಲಿ ಪ್ರತಿ ಗುಟುಕಿಗೂ ಒಂದೊಂದು ತಿರುವು ಕೊಡುತ್ತಾ ಸಾಗುವ ‘ಮಾಕ್ ಟೈಲ್’ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಆಗ ನಡೆಯುವುದೇ ಪ್ರೀತಿಯ ಪರೀಕ್ಷೆ. ಇಲ್ಲಿ ಭಾವನಾತ್ಮಕ ಮತ್ತು ಕಾನೂನಿನ ಅಂಶಗಳ ಜಗ್ಗಾಟದ ನಡುವೆ ಗೆಲ್ಲುವುದು ಏನು? ಅದನ್ನು ಸಿನಿಮಾ ನೋಡಿ ತಿಳಿದರೆ ಚೆನ್ನ.
ಡಾರ್ಲಿಂಗ್ ಕೃಷ್ಣ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಅವರೇ ನಾಯಕನಾಗಿ ಮನೋಜ್ಞ ಅಭಿನಯ ನೀಡಿದ್ದಾರೆ. ಬಾಲ ನಟಿ ಸಂವೃತಾ ಮನ ಸೆಳೆಯುತ್ತಾಳೆ. ಮಿಲನಾ ನಾಗರಾಜ್ ನಾಯಕಿಯಾಗಿ ಮತ್ತು ದಿಲೀಪ್ ರಾಜ್ ಪ್ರಮುಖ ಪಾತ್ರದಲ್ಲಿ ಇದ್ದಾರೆ. “ಜಗ್ಗ ಮಮ್ಮಿ” ಪಾತ್ರದಲ್ಲಿ ಜಗದೀಶರ ಹಾಸ್ಯ ಮತ್ತು ನಕುಲ್ ಅಭ್ಯಂಕರ್ ಅವರ ಸಂಗೀತ ಚಿತ್ರದ ಆಕರ್ಷಣೆಗಳಲ್ಲಿ ಸೇರಿವೆ.

ಪ್ರತಿ ಬಾರಿ ಪೋಷಕರೊಬ್ಬರು ಶಾಲೆಗೆ ಭೇಟಿ ಕೊಟ್ಟಾಗ ಪ್ರತ್ಯಕ್ಷವಾಗುವ ಎರಡು ಬಿಸ್ಕೆಟ್ ಮತ್ತು ಕಾಫೀ ಕೂಡ ಚಿತ್ರದ ಪಾತ್ರಗಳು ಎನ್ನುವಂತೆ ಮಾಡಿರುವುದು ನಿರ್ದೇಶಕರಿಗೆ ಮಾಧ್ಯಮದ ಮೇಲಿನ ಹಿಡಿತವನ್ನು ತೋರಿಸುತ್ತದೆ. ಹಾಗಾಗಿ ಕೃಷ್ಣ ಮತ್ತೊಮ್ಮೆ ನಮಗೆ “ಡಾರ್ಲಿಂಗ್” ಆಗುತ್ತಾರೆ. ಇದು “ಮಾಕ್ ಟೈಲ್” ಸರಣಿಯಲ್ಲಿ ಮೂರನೇ ಮತ್ತು ಕೊನೆಯ ಭಾಗವಾಗಿ ಬಂದಿದ್ದರೂ, ಮೊದಲೆರಡು ಭಾಗ ನೋಡದವರೂ ನೋಡಿ ಸಂಪೂರ್ಣವಾಗಿ ಆನಂದಿಸಬಹುದು.
ಉತ್ತಮ ಸಿನಿಮಾ ಕೊಟ್ಟ “ಡಾರ್ಲಿಂಗ್ ಕೃಷ್ಣ”ರಿಗೆ ಅಭಿನಂದನೆಗಳು. ಮನೆಗೆ ಬಂದ ಮೇಲೂ ಬೆಲ್ಲದ ಸಿಹಿ ಮನಸ್ಸಿನಲ್ಲಿ ಉಳಿಯುವ ಸಿನಿಮಾ ನೋಡಲು ತಡಮಾಡದೆ ಚಿತ್ರ ಮಂದಿರಕ್ಕೆ ಹೋಗಿ. ಬೆಳ್ಳಿ ಪರದೆಯ ಮೇಲೆ ನೋಡಿ ಆನಂದಿಸಿ.
ಭಿತ್ತಿದ್ದನ್ನ ಬೆಳೆಯುತ್ತೇವೆ ಎನ್ನುವ ಮಾತು ಅನಾದಿ ಕಾಲದಿಂದಲೂ ಇದೆ. ಭಿತ್ತಿರುವುದು ಪ್ರೀತಿಯೇ ಆದರೆ? ಆಗ ಪ್ರೀತಿಯೇ ತಾನೆ ಬೆಳೆಯುವುದು? ಈ ವಿಷಯ ಜಗತ್ತಿನ ನಾಯಕರಿಗೆ ಅರಿವು ಮೂಡಿಸುವವರು ಯಾರು? ಈ ಪ್ರಶ್ನೆ ಸಿನಿಮಾ ನೋಡಿದ ಮೇಲೆ ನಮಗೆ ಮೂಡಿದರೆ ಆಶ್ಚರ್ಯವಿಲ್ಲ.
- ಎನ್.ವಿ.ರಘುರಾಂ – ಕೆಪಿಸಿಎಲ್ ನಿವೃತ್ತ ಅಧಿಕಾರಿ, ಲೇಖಕರು, ಬೆಂಗಳೂರು
