ಅಧ್ಯಾಪಕರಿಗೆ ಅಭಿಮಾನಿ ಸಂಘಗಳು ಇರುತ್ತವೆ ಎಂದರೆ ಆಶ್ಚರ್ಯವಾಗಬಹುದು. ಹೌದು ಖಂಡಿತ ಸತ್ಯ. ಇವರು ಮಾಗಡಿ ರಂಗಯ್ಯನವರು. ಶಿಕ್ಷಕರಾದ ಮಾಗಡಿ ರಂಗಯ್ಯ ಅವರು ವಿದ್ಯಾರ್ಥಿಯ ಮೇಲೆ ಅಪಾರ ಪ್ರೀತಿಯನ್ನು ಉಳ್ಳವರಾಗಿದ್ದರು,ಅವರ ಕುರಿತು ಸ್ವತಃ ವಿದ್ಯಾರ್ಥಿನಿ, ಶಿಕ್ಷಕಿ ಅನುಸೂಯ ಯತೀಶ್ ಗುರುವಂದನೆ ಸಲ್ಲಿಸಿದ್ದಾರೆ, ತಪ್ಪದೆ ಮುಂದೆ ಓದಿ…
ನನ್ನ ಕಾಲೇಜು ಗುರುಗಳು. ಇವರ ಹೆಸರಿನಲ್ಲಿ ಒಂದು MR ಅಭಿಮಾನಿಗಳ ಸಂಘ ಇದ್ದು ಸದಾ ಗುರುಗಳೊಂದಿಗೆ ಸಂಪರ್ಕದಲ್ಲಿ ಇದೆ. ಅತ್ಯಂತ ಸರಳ ಹಾಗೂ ಪ್ರಬುದ್ಧ ಉಪನ್ಯಾಸಕರು. ಇವರ ಹೆಸರಿನಲ್ಲಿ ಅಭಿಮಾನಿ ಬಳಗ ಕಟ್ಟಿದ್ದಾರೆಂದರೆ ವಿದ್ಯಾರ್ಥಿಗಳ ಮೇಲೆ ಇವರ ಪ್ರೇರಣೆ ಹೇಗಿರಬಹುದು ಯೋಚಿಸಿ. ಇದು ಹುಚ್ಚು ಅಭಿಮಾನದ ಗುಂಪಲ್ಲ.
ಪ್ರಜ್ಞಾವಂತ ಜನಗಳ ಬಳಗ. ಹೌದು ಇವರು ನನ್ನಂತಹ ನೂರಾರು ವಿದ್ಯಾರ್ಥಿಗಳ ಪಾಲಿನ ದೇವರು. ಇವರ ಪ್ರೋತ್ಸಾಹ, ಪ್ರೀತಿ, ಕಾಳಜಿ, ಹಾರೈಕೆಗಳಿಂದ ಇಂದು ನೂರಾರು ಮಕ್ಕಳು ತಮ್ಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಇವರು ನೀಳ ಕಾಯದ ಹಸನ್ಮುಖಿ ಬೋಧಕರು. ಇವರು ತೋರಿದ ಮಾರ್ಗದಿಂದ ಇಂದು ಇವರ ವಿದ್ಯಾರ್ಥಿಗಳು ರಾಜ್ಯದ ವಿವಿಧೆಡೆ ಹಲವಾರು ಸರ್ಕಾರಿ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಉನ್ನತ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ. ಬಹುತೇಕರಿಗೆ ಇವರೇ ರೋಲ್ ಮಾಡೆಲ್ ಆಗಿ, ಶಿಕ್ಷಕರು ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತಷ್ಟು ಮಂದಿ ಸ್ವಂತ ಉದ್ಯೋಗ ಮಾಡುತ್ತಾ ಹಸನಾದ ಬದುಕು ಕಟ್ಟಿಕೊಂಡಿದ್ದಾರೆ. ನಮ್ಮೆಲ್ಲರ ಭವಿಷ್ಯ ಉಜ್ವಲವಾಗಲು ನಮ್ಮ ಮಾಗಡಿ ರಂಗಯ್ಯ ಸರ್ ಕಾರಣ. ಇವರು ಶ್ರೀ ಸಿದ್ದಗಂಗಾ ಪದವಿ ಪೂರ್ವ ಕಾಲೇಜು ಗುಡೇಮಾರನಹಳ್ಳಿ ಮಾಗಡಿ ತಾಲ್ಲೂಕ್ ನಲ್ಲಿ ತಮ್ಮ ದೀರ್ಘ ಕಾಲ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗಿದ್ದಾರೆ. ಈ ಬೀಳ್ಕೊಡುಗೆ ಸಮಾರಂಭ ಸಂಪೂರ್ಣವಾಗಿ ಅವರ ಹಳೆ ವಿದ್ಯಾರ್ಥಿಗಳಿಂದಲೇ ನಡೆಯಿತು.
ವಿದ್ಯಾರ್ಥಿಗಳೆಲ್ಲರ ಪ್ರೀತಿಯನ್ನು ಕಂಡು ಅವರು ಸಂತೋಷದಿಂದ ಕಣ್ಣೀರರಾದರು. ಒಂದು ಕಾಲೇಜು ಎಂದಾಗ ಅಲ್ಲಿ ಹಲವು ಉಪನ್ಯಾಸಕರು ಇರುತ್ತಾರೆ. ಆದರೆ ಎಲ್ಲರೂ ಎಲ್ಲರಿಗೂ ಇಷ್ಟವಾಗುವುದಿಲ್ಲ. ಕೆಲವರು ಮಾತ್ರ ವಿಶೇಷವಾದ ಪ್ರಭಾವ ಬೀರುತ್ತಾರೆ. ಅಂತಹ ವ್ಯಕ್ತಿತ್ವ ಮಾಗಡಿ ರಂಗಯ್ಯ ಸರ್ ಅವರದು. ಇಂದು ನಾನು ಏನಾಗಿದ್ದೇನೋ ಅದಕ್ಕೆ ಮೂಲ ಕಾರಣ ಇದೇ ಗುರುಗಳು. ನನಗೆ ಇಂದು ಸಮಾಜದಲ್ಲಿ ಒಂದು ಸ್ಥಾನಮಾನ ಇದೆ, ನನ್ನ ಬದುಕಿಗೊಂದು ನೆಲೆ ದೊರಕಿದೆ, ನಾನು ಅತಿ ಸುಖ ಜೀವನ ನಡೆಸುತ್ತೀನಿ ಎಂದರೆ ಕೌಟುಂಬಿಕವಾಗಿ ನನ್ನ ಅಕ್ಕ ರತ್ನ, ಶೈಕ್ಷಣಿಕವಾಗಿ ನನ್ನ ಗುರುಗಳಾದ ಮಾಗಡಿ ರಂಗಯ್ಯನವರೇ ಕಾರಣ. ನನ್ನ ತಮ್ಮ ಮೋಹನ್ ಕೂಡ ಇವರ ವಿದ್ಯಾರ್ಥಿ. ಅವನು ಇಂದು ಎರಡೆರಡು ಕಂಪನಿಗಳ HR ಮ್ಯಾನೇಜರ್ ಆಗಿ ಲಕ್ಷ ಲಕ್ಷ ಸಂಬಳ ಪಡೆಯುತ್ತಿದ್ದಾನೆ. ವಿಶೇಷವಾಗಿ ನನ್ನ ಮೇಲೆ ಇವರ ಪ್ರಭಾವ ಅತಿ ಮಹತ್ವದ್ದು. ನಾನು 80 ಮನೆಗಳಿದ್ದಂತಹ ಪುಟ್ಟ ಹಳ್ಳಿಯಿಂದ ಬಂದವಳು.
ವಾಹನ ಸೌಲಭ್ಯ ಕೂಡ ಇಲ್ಲದಂತಹ ಕುಗ್ರಾಮ ಅದು. ಹಿಂದೆ ಗ್ರಾಮೀಣ ಬದುಕು ಹೇಗಿತ್ತು ಎಂದು ಹೇಳುವಂತಿಲ್ಲ. ಹಲವು ಕಟ್ಟಪಾಡುಗಳಲ್ಲಿ ಬಂಧಿತವಾಗಿದ್ದ ನಮಗೆ ಪೂರ್ಣ ಪ್ರಮಾಣದ ಸ್ವಾತಂತ್ರ ಇರಲಿಲ್ಲ. ಹೆಣ್ಣು ಮಕ್ಕಳು ಹೀಗೆ ಇರಬೇಕು ಹಾಗೆ ಇರಬೇಕು ಎಂಬ ಸಮಾಜದ, ನೆರೆಹೊರೆಯ ಲಕ್ಷ್ಮಣ ರೇಖೆಗಳು ನಮ್ಮನ್ನು ಯಾವುದಕ್ಕೂ ಮುಂದೆ ಹೋಗದಂತೆ ಕಟ್ಟಿಬಿಟ್ಟಿದ್ದವು. ಜೊತೆಗೆ ಬಡತನದ ಕರಾಳ ಛಾಯೆ. ಅದೆಷ್ಟೇ ಕಷ್ಟ ಇದ್ದರೂ ಅಪ್ಪ ಊಟ ಬಟ್ಟೆ ಶಿಕ್ಷಣಕ್ಕೆ ಯಾವುದೇ ಕೊರತೆ ಮಾಡಿದವರಲ್ಲ. ಆದರೂ ಈ ಸಮಾಜದ ಶ್ರೀಮಂತ ವಿದ್ಯಾರ್ಥಿಗಳ ಮುಂದೆ ನನಗೆ ಹಿಂಜರಿಕೆ ಬೆಳೆದಿತ್ತು. ಅಂತಹ ಪರಿಸ್ಥಿತಿಯಲ್ಲಿ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಶಾಲೆಯಲ್ಲಿದ್ದ ನೂರ ಎಂಭತ್ತು ವಿದ್ಯಾರ್ಥಿಗಳ ಪೈಕಿ ಫಸ್ಟ್ ಕ್ಲಾಸ್ ನಲ್ಲಿ ಉತ್ತೀರ್ಣರಾದವರು ಕೇವಲ ನಾಲ್ಕು ಮಂದಿ. ಆ ನಾಲ್ವರಲ್ಲಿ ನಾನು ಎರಡನೆಯವಳಾಗಿದ್ದೆ. ಇಡೀ ಶಾಲೆಗೆ ದ್ವಿತೀಯ ಸ್ಥಾನ ಪಡೆದು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸ್ ಆಗಿ ಆ ಕಾಲದಲ್ಲಿ 200 ರೂಪಾಯಿಗಳ ಮೆರಿಟ್ ಬಹುಮಾನ ಪಡೆದಿದ್ದೆ. ಆದರೂ ಹೈಸ್ಕೂಲ್ ನಲ್ಲಿ ನಮಗೆ ಯಾವುದೇ ಐಡೆಂಟಿಟಿ ಇರಲಿಲ್ಲ. ನಾನು ರೈತನ ಮಗಳು. ಆಗೆಲ್ಲ ಶ್ರೀಮಂತ ಕುಟುಂಬದ ಮಕ್ಕಳು ಹಾಗೂ ಅಫಿಷಿಯಲ್ಸ್ ಮಕ್ಕಳದೇ ಹವಾ. ನಮ್ಮದೇನಿದ್ದರೂ ಶಾಲೆ ಒಂದು ಥರದ ದಿನಚರಿ. ಮನೆಯಲ್ಲಿ ಅಪ್ಪ ಅಮ್ಮನ ಒತ್ತಾಯಕ್ಕೆ ಶಾಲೆಗೆ ಹೋಗಿ ಬರುವ ಫಾರ್ಮಾಲಿಟಿ ಅಷ್ಟೇ. ಯಾವುದೇ ಪ್ರೋತ್ಸಾಹ ಇಲ್ಲದೆ ನನ್ನ ಜ್ಞಾನ ಕೇವಲ ಪುಸ್ತಕದ ಬದನೆಕಾಯಿ. ಒಂಚೂರು ಧೈರ್ಯವೇ ಇರಲಿಲ್ಲ . ಗುಡೇಮಾರನಹಳ್ಳಿ ನಮ್ಮ ಕಡೆ ಸ್ವಲ್ಪ ದೊಡ್ಡ ಊರು. ಆ ಕಾಲೇಜಿಗೆ ಹೋಗಬೇಕಾದರೆ ಒಂದು ಮುಖ್ಯ ರಸ್ತೆಯನ್ನ ದಾಟಿ ಕಾಲೇಜು ಸೇರಬೇಕಿತ್ತು. ನನಗೆ ಅದೇ ಒಂದು ದೊಡ್ಡ ಸಾಹಸ.

ಪ್ರತಿದಿನ ರಸ್ತೆ ದಾಟಿದ ಕೂಡಲೇ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದೆ. ಅಷ್ಟು ಭಯ ಆತಂಕ ನನ್ನೊಳಗಿತ್ತು. ಅಷ್ಟು ಮಾತ್ರವಲ್ಲದೆ ನನ್ನಲ್ಲಿ ಇದ್ದಂತಹ ಅತ್ಯಂತ ನಕಾರಾತ್ಮಕ ಗುಣವೆಂದರೆ ಕೇಳರಿಮೆ. ಇದಕ್ಕೆ ಕಾರಣ ಬಡತನ. ನನ್ನ ಜೊತೆಗಿರುವ ಸ್ನೇಹಿತರೆಲ್ಲರೂ ನನಗಿಂತ ಚಂದ ಚಂದದ ಬಟ್ಟೆಗಳನ್ನು ಹಾಕಿಕೊಂಡು ಬರುತ್ತಿದ್ದರು ಒಡವೆಗಳನ್ನು ಹಾಕಿಕೊಂಡು ಬರುತ್ತಿದ್ದರು. ಆ ಕಾಲದಲ್ಲಿ ನನ್ನ ಬಳಿ ಕೆಲವೇ ಕೆಲವು ಬಟ್ಟೆಗಳು ಮಾತ್ರ ಇದ್ದವು. ಅವನ್ನೇ ತೊಟ್ಟು ಕಾಲೇಜಿಗೆ ಹೋಗಬೇಕಿತ್ತು. ಆಗ ತುಂಬಾ ಮುಜುಗರಕ್ಕೆ ಒಳಗಾಗುತ್ತಿದ್ದೆನು. ಪ್ರತಿದಿನ ಪ್ರತಿಯೊಬ್ಬರು ಬೇರೆ ಬೇರೆ ಬಟ್ಟೆಗಳನ್ನು ಧರಿಸಿ ಬಂದಾಗ ಅವರ ಬಣ್ಣ ಬಣ್ಣದ ಬಟ್ಟೆಗಳನ್ನು ನೋಡಿ ನನ್ನ ಮನಸ್ಸು ತರೆವಾರಿ ನೋವು ಅನುಭವಿಸುತ್ತಿತ್ತು. ಹೀಗಿರುವಾಗ ಕಾಲೇಜಿಗೆ ಸೇರಿದೆ. ಕಾಲೇಜಿನ ಮೊದಲ ದಿನ ಕಾಲೇಜು ಆವರಣ ಪ್ರವೇಶಿಸುತ್ತಿದ್ದಂತೆ ಕೈಕಾಲುಗಳು ನಡುಗಲು ಆರಂಭಿಸಿದವು, ಅಷ್ಟೊಂದು ಜನ ವಿದ್ಯಾರ್ಥಿಗಳು. ಏನಪ್ಪಾ ನಾನು ಈ ಕಾಲೇಜಿನಲ್ಲಿ ಓದುವುದು ಎಂದು ಭಯವಾಯಿತು. ಆದರೂ ಕಾಲೇಜಿಗೆ ಹೋಗುವುದಿಲ್ಲ ಎಂದು ಮನೆಯಲ್ಲಿ ಹೇಳುವ ಧೈರ್ಯ ಇರಲಿಲ್ಲ. ಏಕೆಂದರೆ ನಾನು ಚೆನ್ನಾಗಿ ಓದಬೇಕು ಎಂಬುದು ಅಪ್ಪನ ಕನಸಾಗಿತ್ತು. ಬಾಲ್ಯದಿಂದಲೂ ಅಪ್ಪ ಸ್ವಾಭಿಮಾನವನ್ನು ತುಂಬುತ್ತಾ ಬೆಳೆಸಿದರು. ಇತರರನ್ನ ನೋಡಿ ಕೊರಗಬಾರದು. ನಮ್ಮ ಬಳಿ ಇರುವುದಕ್ಕೆ ನಾವು ಖುಷಿ ಪಡಬೇಕು. ಅವರಂತೆ ನಾವು ಆಗಬೇಕೆಂಬ ಹಠ ಛಲದಿಂದ ಸಾಧನೆ ಮಾಡಬೇಕೆ ವಿನಃ ಇತರರನ್ನು ಕಂಡು ಕುರುಬಬಾರದು ಎಂದು ಹಲವು ಸಲ ಹೇಳುತ್ತಿದ್ದರಾದರೂ ಅಂತಹ ಸಂದರ್ಭಗಳನ್ನು ಎದುರಿಸುವಾಗ ಪದೇಪದೇ ನಾನು ಸೋಲುತ್ತಿದ್ದೆ. ಭಾವನಾತ್ಮಕವಾಗಿ ತೊಳಲಾಟ ಉಂಟಾಗುತ್ತಿತ್ತು. ಅವರೆಲ್ಲರೂ ನನ್ನನ್ನು ಹೀಯಾಳಿಸುತ್ತಿದ್ದಾರೆ ಎನಿಸುತ್ತಿತ್ತು.
ಮೊದಲ ದಿನ ಕಾಲೇಜು ಆವರಣ ಪ್ರವೇಶಿಸಿದೆ. ನಮ್ಮ ಬಸ್ಸು ಬೇಗನೆ ಬರುವುದರಿಂದ ಅಂದು ಕಾಲೇಜಿಗೆ ನಾನೇ ಮೊದಲಿಗಳಾಗಿದ್ದೆ. ಆಗಿನ್ನು ಸೈನ್ಸು, ಕಾಮರ್ಸ್, ಆರ್ಟ್ಸ್ ತರಗತಿಗಳನ್ನ ವಿಂಗಡಿಸಿರಲಿಲ್ಲ. ಮೊದಲ 15 ದಿನ ಎಲ್ಲರನ್ನು ಒಟ್ಟಿಗೆ ಕೂಡಿಸುತ್ತಿದ್ದರು. ಅದೊಂದು ದೊಡ್ಡ ಹಾಲ್. ಎಲ್ಲ ವಿದ್ಯಾರ್ಥಿಗಳನ್ನು ಒಟ್ಟಿಗೆ ಕಂಬೈನ್ಡ್ ಮಾಡುತ್ತಿದ್ದರು. ಕಾಲೇಜು ಪ್ರವೇಶಿಸಿದೆ. ಅಲ್ಲಿ ಹತ್ತಾರು ಬೆಂಚ್ ಡಿಸ್ಟ್ರಿಕ್ ಗಳನ್ನು ಹಾಕಿದ್ದರು. ಮೊದಲ ಡೆಸ್ಕಿನ ಮೊದಲ ಸ್ಥಳದಲ್ಲಿ ಹೋಗಿ ಕುಳಿತೆನು. ಆಗ ಇತರ ಮಕ್ಕಳು ಬಂದು ಸ್ವಲ್ಪ ಜರುಗು ಎಂದಾಗ ನಾನು ಪಕ್ಕಕ್ಕೆ ಜರುಗಿದೆ. ಮತ್ತೊಬ್ಬರು ಬಂದು ಮತ್ತೊಮ್ಮೆ ಜರುಗಿಸಿದರು. ಮಗದೊಬ್ಬರು ಬಂದು ಮತ್ತೊಮ್ಮೆ ಜರುಗಿಸಿದರು. ಕೊನೆಗೆ ಮೊದಲನೇ ಸಾಲಿನಲ್ಲಿ ಜಾಗ ಸಾಲದೆ ಎರಡನೆ ಡೆಸ್ಕ್ ಗೆ ಕಳುಹಿಸಿದರು. ಎರಡನೇ ಡೆಸ್ಕ್ ನಲ್ಲಿ ಕುಳಿತಾಗ ಅಲ್ಲಿಗೆ ಬಂದವರು ಕೂಡ ಸ್ವಲ್ಪ ಪಕ್ಕಕ್ಕೆ ಸರಿ ಎನ್ನುತ್ತಾ ನನ್ನನ್ನು ಕೊನೆಗೆ ಕಳಿಸಿ ಬಿಟ್ರು. ಅಲ್ಲಿ ಬಂದವರು ಕೂಡ ಇದೇ ಕೆಲಸ ಮಾಡಿದರು. ನಾನು ಭಯಗೊಂಡು ಮತ್ತೆ ನಾಲ್ಕನೇ ಡೆಸ್ಕಿಗೆ ಹೋಗಿ ಕುಳಿತೆ.ಇದೇ ಪರಿಸ್ಥಿತಿಯನ್ನು ನಾನು ಎದುರಿಸಬೇಕಾಗಿತ್ತು. ಕೊನೆಗೆ ಆ ಕಾಲೇಜಿನ ಬೆಲ್ ಆಗುವಷ್ಟರಲ್ಲಿ ನಾನು ಇಡೀ ತರಗತಿಯ ಕೊನೆಯ ಡೆಸ್ಕ್ ನಾ ಕೊನೆಯ ವಿದ್ಯಾರ್ಥಿನಿಯಾಗಿರುತ್ತಿದ್ದೆ.
ಮಾರನೇ ದಿನ ಇದೇ ಕ್ರಿಯೆ ಮುಂದುವರೆಯಿತು. ಅಂದು ರಾತ್ರಿ ಮನೆಗೆ ಬಂದು ಹಾಸಿಗೆ ಮೇಲೆ ಮಲಗಿ ಒಂದೇ ಸಮನೆ ಮುಖ ಮುಚ್ಚಿಕೊಂಡು ಬಿಕ್ಕಿ ಬಿಕ್ಕಿ ಅತ್ತೆನು. ನನಗೆ ಕಾಲೇಜು ಅಂದ್ರೇ ಭಯ ನಾನು ಕಾಲೇಜಿಗೆ ಹೋಗುವುದಿಲ್ಲ ಎಂದು ಹೇಳಿಬಿಡಬೇಕು ಎಂದು ಅಮ್ಮನ ಬಳಿ ಬಂದೆ. ಅಮ್ಮ ಅಡುಗೆ ಮಾಡುತ್ತಿದ್ದರು. ಈ ಸಲ ಅವರೆಕಾಯಿ ಮಾರಿ ಅನುಗೆ ಎರಡು ಜೊತೆ ಬಟ್ಟೆ ಕೊಡಿಸಬೇಕು. ನಮಗೆ ಏನು ಕೊರತೆ ಆದ್ರೂ ಪರ್ವಾಗಿಲ್ಲ. ಮಕ್ಕಳು ಚೆನ್ನಾಗಿ ಓದಬೇಕು ಅದೇ ನನ್ನ ಕನಸು ಎಂದು ಅಪ್ಪ ಹೇಳುತ್ತಿದ್ದರು. ನನ್ನ ಬಾಯಿಂದ ಬಂದ ಮಾತುಗಳು ಬಾಯಲ್ಲೆ ಉಳಿದವು. ಪರಿಸ್ಥಿತಿಯ ಕೈಗೊಂಬೆಯಾಗಿ ಮೂರನೇ ದಿನ ಧೈರ್ಯಮಾಡಿ ಕಾಲೇಜಿಗೆ ಹೊರಟೆ. ಮುಂದೆ ಏನು ಮಾಡುವುದು ಎಂದು ಬಸ್ಸಿನಲ್ಲಿ ಯೋಚಿಸುತ್ತಾ ಹೋದೆ. ನಾನು ಮೊದಲನೇ ಸಾಲಿನಲ್ಲಿ ಕುಳಿತರೂ ಕೊನೆಗೆ ನನ್ನನ್ನು ಕೊನೆ ಸಾಲಿಗೆ ಅಟ್ಟುತ್ತಾರೆ. ಮತ್ತೆ ಪದೇ ಪದೇ ಎದ್ದು ಕೂರುವ ಕಷ್ಟ ಏಕೆ? ನಾನೇ ಇಂದು ಕೊನೆಯ ಜಾಗದಲ್ಲಿ ಕೂರಬೇಕು ಎಂಬ ಯೋಚನೆ ಮೂರನೇ ದಿನಕ್ಕಾದರೂ ಹೊಳೆಯಿತು. ಸರಿ ಅಂದಿನಿಂದ ನಾನು ಒಂದು ವಾರಗಳ ಕಾಲ ಇಡೀ ಕೋಣೆಯ ಕೊನೆಯ ವಿದ್ಯಾರ್ಥಿಯಾಗಿಯೇ ಕುಳಿತೆನು. ಆ ಒಂದು ವಾರದಲ್ಲಿ ಕಾಲೇಜಿನಲ್ಲಿ ಪೂರ್ವ ಪರೀಕ್ಷೆಗಳನ್ನು ಮಾಡಿ ಮುಗಿಸಿದ್ದರು. ಅದೊಂದು ದಿನ ನನ್ನ ನನ್ನ ಶೈಕ್ಷಣಿಕ ಬದುಕಿನಲ್ಲಿ ಮರೆಯಲಾಗದ ದಿನವಾಯಿತು. ಎಲ್ಲರ ಉತ್ತರ ಪತ್ರಿಕೆಗಳನ್ನು ಹಿಡಿದು ನನ್ನ ಗುರುಗಳಾದ ಮಾಗಡಿ ರಂಗಯ್ಯನವರು ತರಗತಿಯೊಳಗೆ ಪ್ರವೇಶಿಸಿದರು. ಎಲ್ಲ ಮಕ್ಕಳಿಗೂ ಅವರವರ ಉತ್ತರ ಪತ್ರಿಕೆಗಳನ್ನು ನೀಡಿದರು.
ಎಲ್ಲರಿಗೂ ಉತ್ತರ ಪತ್ರಿಕೆ ತಲುಪಿದೆಯೇ? ಯಾರಿಗಾದರೂ ಬಂದಿಲ್ವಾ? ಯಾರಿಗಾದರೂ ಬಂದಿಲ್ಲ ಅಂದ್ರೆ ದಯವಿಟ್ಟು ಕೇಳಿ ಎಂದರು. ಎಲ್ಲ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಬಂದಿದೆ ಎಂದರು. ನನಗೆ ಮಾತ್ರ ಉತ್ತರ ಪತ್ರಿಕೆ ಬಂದಿರಲಿಲ್ಲ. ಆದರು ಐದಾರು ಸಲ ಕೇಳಿದರೂ ಕೂಡ ನನಗೆ ಅಷ್ಟು ಮಕ್ಕಳ ಮುಂದೆ ಎದ್ದು ನಿಂತು ನನಗೆ ಉತ್ತರ ಪತ್ರಿಕೆ ಬಂದಿಲ್ಲ ಎಂದು ಹೇಳುವಷ್ಟು ಧೈರ್ಯವೂ ಇರಲಿಲ್ಲ. ಹಾಗೆ ಸುಮ್ಮನೆ ಕೂತುಬಿಟ್ಟೆ. ಸರ್ ಕೇಳಿ ಕೇಳಿ ಸಾಕಾದ ಮೇಲೆ ಅನುಸೂಯ ಯಾರು? ಎಂದರು. ಆಗ ನಾನು ಎದ್ದು ನಿಂತೆ. ನಿಮಗೆ ಉತ್ತರ ಪತ್ರಿಕೆ ಬಂದಿದೆಯಾ ಅಂದ್ರು. ಇಲ್ಲಾ ಸಾರ್ ಎಂದೆ. ಎಲ್ಲ ಮಕ್ಕಳು ಬಿದ್ದು ಬಿದ್ದು ನಕ್ಕರು. ಇದೆಂತ ಗುಗ್ಗು ಇದುವರೆಗೂ ಸರ್ ಎಷ್ಟು ಬಾರಿ ಕೇಳಿದರು ಪ್ರಶ್ನೆ ಪತ್ರಿಕೆ ಬಂದಿದೆಯಾ ಅಂತ ಹಾಗೆಲ್ಲ ಸುಮ್ನೆ ಕೂತಿದ್ಯಲ್ಲ ಇದ್ಯಾವುದೋ ಗೂಬೆ ಅಂತ ಮಾತಾಡಿದ್ದು ನನಗೆ ಕೇಳಿಸಿತು. ನನ್ನ ಭಯ ಮತ್ತಷ್ಟು ಹೆಚ್ಚಾಯಿತು. ಅಳುವುದೊಂದೇ ಬಾಕಿ. ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು. ಗಂಟಲು ಹಿಡಿದ ಅನುಭವವಾಗುತ್ತಿತ್ತು. ಸಣ್ಣಗೆ ಬೆವರಿದ್ದು ನನಗೆ ಗೊತ್ತಾಯಿತು. ಏನು ಮಾತನಾಡದೆ ಸುಮ್ಮನೆ ನಿಂತು ಬಿಟ್ಟೆ. ಯಾಕ್ರಮ್ಮ ನಿಮಗೆ ಉತ್ತರ ಪತ್ರಿಕೆ ಬಂದಿಲ್ವಾ ಅಂದ್ರು. ಇಲ್ಲ ಎನ್ನುವಂತೆ ತಲೆ ಅಲ್ಲಾಡಿಸಿದೆ. ಉಳಿದ ಮಕ್ಕಳೆಲ್ಲ ನೀನೇನು ಮುಗಿನಾ ಬಾಯಿ ಬಿಟ್ಟು ಹೇಳು ಜೋರಾಗಿ ಗದರಿದರು . ನನಗಂತೂ ಭೂಮಿ ಕುಸಿದ ಅನುಭವವಾಯಿತು. ಬಹುಶಃ ನನ್ನ ಗುರುಗಳಿಗೆ ನನ್ನ ಪರಿಸ್ಥಿತಿ ಅರ್ಥವಾಗಿರಬೇಕು ಎನಿಸುತ್ತದೆ. ಭಯ ಪಡಬೇಡಿ ಕಣಮ್ಮ. ಭಯ ಪಡುವಂತದ್ದು ಈಗ ಏನಾಗಿದೆ. ಇಲ್ಲಿ ನಾವು ಎಲ್ಲ ಮನುಷ್ಯರೇ ಅಲ್ವಾ ಎಂದರು. ನಿಮ್ಮೆಲ್ಲರಿಗೂ ಉತ್ತರ ಪತ್ರಿಕೆ ಬಂದಿದೆ. ಇನ್ನೂ ನನ್ನ ಬಳಿ ಒಂದು ಆನ್ಸರ್ ಶೀಟ್ ಇದೆ. ಅದು ಈ ಹುಡುಗಿದು. ಈ ಹುಡುಗಿಗೆ ಎಷ್ಟು ನಂಬರ್ ಬಂದಿರಬಹುದು ನೋಡೋಣ ಗೆಸ್ ಮಾಡಿ ಅಂದ್ರು. ಎಲ್ಲರೂ ಜೀರೋ ಎಂದು ಕಿರುಚಿದರು. ನನ್ನ ಪರಿಸ್ಥಿತಿಯನ್ನು ನೋಡಿದ ಯಾರಾದರೂ ಹಾಗೆ ಭಾವಿಸುವುದುಂಟು. ಅದರಲ್ಲಿ ಅವರ ತಪ್ಪು ತಾನೇ ಏನಿದೆ. ನಂತರ 25 ಅಂಕಗಳಿಗೆ ಮಾಡಿದ ಪರೀಕ್ಷೆಯಲ್ಲಿ 25 ಅಂಕಗಳನ್ನು ಯಾರು ತೆಗೆದುಕೊಂಡಿದ್ದೀರಾ ಅಂದರು. ಯಾರು ಕೈ ಮೇಲೆ ಎತ್ತಲಿಲ್ಲ.
24, 23, 22, 20, 19, 18 ಎಂದಾಗ ಒಂದ್ ನಾಲ್ಕೈದು ಜನ ವಿದ್ಯಾರ್ಥಿಗಳು ಕೈ ಎತ್ತಿ ನಮಗೆ 18 ಅಂಕಗಳು ಬಂದಿದೆ ಎಂದರು. ಆಮೇಲೆ ಅದೇ 17 ಅಂಕಗಳು ಒಂದು ವಿದ್ಯಾರ್ಥಿ, 16 ಅಂಕಗಳನ್ನು 20 ವಿದ್ಯಾರ್ಥಿಗಳು ಪಡೆದಿರುವುದಾಗಿ ಕೈ ಎತ್ತಿದರು. ನನಗಂತೂ ಜೀವವೇ ಬಾಯಿಗೆ ಬಂದಂತಾಯಿತು. ಇಷ್ಟು ದೊಡ್ಡ ತರಗತಿಯಲ್ಲಿ ಇಂತಹ ಮಕ್ಕಳೇ ಇಷ್ಟು ಕಡಿಮೆ ಅಂಕ ತೆಗೆದಿರಬೇಕಾದರೆ ಬಹುಶ ನನಗೆ ಜೀರೋ ಬಂದಿರಬಹುದು ಅನಿಸಿ ರಪ್ಪನೆ ಕುಳಿತುಬಿಟ್ಟೆ. ಗೆಸ್ ಮಾಡೋಕೆ ಸಾಧ್ಯನೇ ಇಲ್ಲ ಅನಿಸಿದಾಗ ನನ್ನ ಗುರುಗಳಿಗೆ ನಿಮಗೆ 24 ಅಂಕಗಳು ಬಂದಿವೆ ಕಣ್ರಮ್ಮ ಎಂದರು. ಒಮ್ಮೆ ಜನರ ನೋಟ ಒಮ್ಮೆಗೆ ನನ್ನ ಮೇಲೆ ಬಿದ್ದಿತು. ನನಗೆ ತುಸು ಗಾಬರಿಯಾದರೂ ಹೆಮ್ಮೆಯ ಭಾವ ಮೂಡಿತು. ಸದ್ಯ ಬದುಕಿತು ಬಡ ಜೀವ ಎನಿಸಿತು. ಆಗ ಮಕ್ಕಳು ಸರ್ ಇದನ್ನು ನಂಬಲು ಸಾಧ್ಯನೇ ಇಲ್ಲ. ಆ ಹುಡುಗಿ ಅಷ್ಟು ಅಂಕಗಳನ್ನು ತಗೋಳೋದಿಕ್ಕೆ ಹೇಗೆ ಸಾಧ್ಯ. ಎಲ್ಲೋ ಕಾಫಿ ಹೊಡದೈತೆ ಸರ್ ಅಂತ ಮಾತುಗಳು ತರಗತಿಯ ಮೂಲೆ ಮೂಲೆಗಳಿಂದ ಬಾಣದಂತೆ ಬಂದವು. ಆಗ ಮಾಗಡಿ ರಂಗಯ್ಯ ಸರ್ ವಿದ್ಯಾರ್ಥಿಗಳಿಗೆ ನನ್ನ ಉತ್ತರ ಪತ್ರಿಕೆಯನ್ನು ನೀಡಿ ಅದು ಪರೀಕ್ಷೆ ನಡೆದೇ ಹೋಗಲಿ ಯಾವುದಾದರೂ ಪ್ರಶ್ನೆಗಳನ್ನು ಕೇಳಿ ಎಂದರು. ನನ್ನ ಉತ್ತರ ಪತ್ರಿಕೆಯನ್ನು ಹಿಡಿದುಕೊಂಡು ಮಕ್ಕಳು ಪ್ರಶ್ನೆಗಳನ್ನ ಕೇಳತೊಡಗಿದರು. ಅದುವರೆಗೂ ಅಂಜುಬುರುಕಿಯಂತ್ತಿದ್ದ ನನಗೆ ಆ ಧೈರ್ಯ ಎಲ್ಲಿಂದ ಬಂತು ಗೊತ್ತಿಲ್ಲ. ಅವರು ಕೇಳಿದ ಪ್ರತಿ ಪ್ರಶ್ನೆಗೂ ಪಟಪಟನೆ ಹುರುಳಿ ಹುರಿದಂತೆ ಉತ್ತರಗಳನ್ನ ಹೇಳಿದೆ. ಎಲ್ಲರಿಗೂ ಪರಮಾಶ್ಚರ್ಯ ನನ್ನ ಗುರುಗಳಿಗೂ ಕೂಡ ಆಶ್ಚರ್ಯವಾಗದೆ ಇರಲಿಲ್ಲ.

ಆಗ ಇತರ ವಿದ್ಯಾರ್ಥಿಗಳನ್ನು ಕುರಿತು ಹೇಳಿದರು. ನೋಡಿ ನಾವು ಯಾರನ್ನು ಮುಖಭಾವ, ವೇಷಭೂಷಣ ನೋಡಿ ಜಡ್ಜ್ ಮಾಡಬಾರದು. ಈ ಹುಡುಗಿಯ ಮುಖವನ್ನು ನೋಡಿ ನೀವೆಲ್ಲರೂ ದಡ್ಡಿ ಎಂದು ಭಾವಿಸಿದ್ದೀರಿ. ಆದರೆ ಇಡೀ ತರಗತಿಗೆ ಮೊದಲಿಗಳಾಗಿ ಪಾಸ್ ಆಗಿದ್ದಾಳೆ. ಯಾರನ್ನು ಹೀಯಾಳಿಸಬೇಡಿ, ಅವಮಾನಿಸಬೇಡಿ. ಹೊರಗೆ ಕಾಣುವುದೇ ಸತ್ಯವಲ್ಲ. ಈಕೆಯೊಳಗೂ ಒಬ್ಬ ಪ್ರತಿಭಾವಂತೆ ಇದ್ದಾಳೆ. ಪ್ರತಿ ಪ್ರಶ್ನೆಗೂ ಸಮರ್ಪಕವಾದ ಉತ್ತರವನ್ನು ಬರೆದಿದ್ದಾಳೆ. ನನಗಂತೂ ಈ ಉತ್ತರ ಪತ್ರಿಕೆ ನೋಡಿ ತುಂಬಾ ಖುಷಿಯಾಯಿತು. ಇಂತಹ ವಿದ್ಯಾರ್ಥಿಗಳೇ ನಮ್ಮ ಹೆಸರು ಉಳಿಸುವುದು ಎಂದರು. ನಿಜವಾಗಿ ಆ ದಿನ ನನ್ನ ಜೀವಮಾನದ ಅವಿಸ್ಮರಣೀಯ ಕ್ಷಣ. ಕಾಲೇಜು ಓದುವಾಗ ಅಷ್ಟು ಹೆದರುತ್ತಿದ್ದ ನಾನು ಇಂದು ನೂರಾರು ಶಿಕ್ಷಕರಿಗೆ ನಿರ್ಭಯವಾಗಿ ಟ್ರೈನಿಂಗ್ ಕೊಡುತ್ತೇನೆ ಎಂದರೇ ನನ್ನನ್ನು ಆ ಹಂತಕ್ಕೆ ಕರೆದೋಯ್ದಿದ್ದು ನನ್ನ ಪ್ರೀತಿಯ ಗುರುಗಳಾದ ಮಾಗಡಿ ರಂಗಯ್ಯ ಸರ್. ಅದು ಕೊನೆಯ ಅವಧಿ ಆದ್ದರಿಂದ ಮತ್ತೆ ಯಾರು ಸಿಗಲಿಲ್ಲ. ಮನೆಗೆ ಬಂದಾಯಿತು. ಅಪ್ಪನ ಬಳ್ಳಿ ನಡೆದಿದ್ದನ್ನು ಹೇಳಿದೊಡನೆ ಅಪ್ಪ ಪಟ್ಟ ಸಂಭ್ರಮ ಅಷ್ಟಿಷ್ಟಲ್ಲ.
ಮೊದಲಿನಿಂದ ಸಣ್ಣ ಪುಟ್ಟ ಸಂಗತಿಗಳನ್ನು ಸಂಭ್ರಮಿಸುತಿದ್ದರು. ಈದೀಗ ಮಗಳು ಇಡೀ ಕಾಲೇಜಿಗೆ ಮೊದಲು. ಅದು ಇಷ್ಟೆಲ್ಲ ಘಟನೆ ನಡೆದಿದ್ದು ಕೇಳಿ ಖುಷಿ ಪಟ್ಟರು. ಮಾರನೇ ದಿನ ಯಾವುದೇ ಅಂಜು ಅಳುಕು ಇಲ್ಲದೆ ಕಾಲೇಜಿಗೆ ಹೋದೆನು. ಎಂದಿನಂತೆ ಮೊದಲೇ ನಿಗದಿಪಡಿಸಿಕೊಂಡಿದ್ದ ಕೊನೆಯ ಬೇಂಚಿಗೆ ಹೋಗಬೇಕೆಂದಿದ್ದೆ. ಆದರೆ ಮೊದಲ ಸೀಟಿನಲ್ಲಿರುವ ವಿದ್ಯಾರ್ಥಿನಿಯರು ಏ ಅನು ಇಲ್ಲಿ ಬಾ, ನಮ್ಮ ಜೊತೆ ಕೂರು ಎಂದು ಒತ್ತಾಯಿಸಿದರೇ, ಎರಡನೇ ಡೆಸ್ಕ್ ನವರು ನಮ್ಮ ಸಾಲಿಗೆ ಬಾ ಅಂದರು. ಎಲ್ಲರೂ ನಮ್ಮ ಪಕ್ಕ ಬಾ ಅಂದರು. ಅದುವರೆಗೂ ಕಸದಂತೆ ದೂಡುತ್ತಿದ್ದ ನನ್ನನ್ನು ಇಂದು ಎಲ್ಲರೂ ಆತ್ಮೀಯವಾಗಿ ಅವರ ಜೊತೆ ಕೂಡಿಸಿಕೊಳ್ಳಲು, ನನಗಾಗಿ ಜಾಗ ನೀಡಲು ಸಿದ್ದರಾಗಿದ್ದರು. ಅಂತಹ ಅವಕಾಶ ದೊರಕಿಸಿದ್ದು ನನ್ನ ಗುರುಗಳು. ಅದನ್ನು ಕಂಡು ಬಹಳ ಸಂತೋಷಪಟ್ಟೆನು. ಅಂದಿನಿಂದ ಎರಡು ವರ್ಷಗಳ ಕಾಲ ನಾನು ಅವರ ವಿದ್ಯಾರ್ಥಿನಿಯಾಗಿ ಪಡೆದ ಮಾರ್ಗದರ್ಶನ, ಪ್ರೋತ್ಸಾಹ ಇಂದು ನನ್ನನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ಅನಂತರ ಮಾಗಡಿ ರಂಗಯ್ಯ ಸರ್ ಅವರು ನನ್ನನ್ನು ಆಫೀಸು ರೂಮಿಗೆ ಕರೆದು ಮಾತನಾಡಿಸಿದರು. ನೀವು ಇಷ್ಟೊಂದು ಚೆನ್ನಾಗಿ ಓದುತ್ತೀರಿ, ಆದರೂ ಈ ಭಯ ಈ ಮುಜುಗರ ಯಾಕ್ರಮ್ಮಾ ಎಂದರು.
ಅವರು ಹೆಣ್ಣು ಮಕ್ಕಳಿಗೆ ಅತಿ ಹೆಚ್ಚು ಗೌರವ ಕೊಡುತ್ತಾರೆ. ನಾವು ಕಾಲೇಜು ಸೇರಿಕೊಂಡಾಗ ಅವರು ಆಗ ತಾನೇ ಕೆಲಸಕ್ಕೆ ಸೇರಿದ್ದರು. ಯುವಕ ಆದರೂ ಅವರ ನಡವಳಿಕೆಗಳು ಪ್ರಬುದ್ಧವಾಗಿದ್ದವು. ನಾನಾಗ ಮುಗ್ಧವಾಗಿ ಸರ್ ಇವರೆಲ್ಲ ಒಳ್ಳೊಳ್ಳೆಯ ಬಟ್ಟೆಗಳನ್ನ ಹಾಕೊಂಡು ಬರ್ತಾರೆ. ನಾನು ಮಾತ್ರ ಈ ಥರ ಹಳೆ ಬಟ್ಟೆ ಹಾಕೊಂಡ್ ಬರ್ತೀನಿ ಸರ್ ಅದಕ್ಕೆ ಸಂಕೋಚವಾಗುತ್ತೆ ಅವರ ಮುಂದೆ ಎಂದೆನು. ಆಗ ಅವರು ಹೇಳಿದ ಮಾತು, ಮನುಷ್ಯನ ವ್ಯಕ್ತಿತ್ವವನ್ನು ಅಳೆಯುವುದು ಬಟ್ಟೆಯಲ್ಲ. ಅವರ ಗುಣ ನಡತೆ ಮತ್ತು ಅವರ ಜ್ಞಾನ ಎಂದರು. ನಿಮ್ಮಲ್ಲಿ ಆ ಎಲ್ಲವೂ ಇದೆಯಮ್ಮ ಆತರ ಮನಸ್ಥಿತಿಯಿಂದ ಹೊರಗೆ ಬನ್ನಿ ಚೆನ್ನಾಗಿ ಓದಿ ಒಬ್ಬ ಶಿಕ್ಷಕಿಯಾಗಿ ಎಂದರು. ಆಗೆಲ್ಲ ಶಿಕ್ಷಕ ವೃತ್ತಿಗೆ ತುಂಬಾ ಡಿಮ್ಯಾಂಡ್ ಇದ್ದ ಕಾಲ. ಅದುವರೆಗೂ ಏನಾಗಬೇಕೆಂದು ಅಂದುಕೊಂಡಿರಲಿಲ್ಲ. ಮನೆಯಲ್ಲಿ ಅಪ್ಪ ಪದೇ ಪದೇ ಟೀಚರ್ ಆಗ್ಬೇಕು ಅಂತ ಹೇಳ್ತಿದ್ರು ಕೂಡ ಯಾವತ್ತು ಅದನ್ನು ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ.ಮೊದಲ ಬಾರಿಗೆ ನನ್ನ ಬದುಕಿಗೊಂದು ಗುರಿ ನಿಗದಿಯಾಯಿತು. ಆಯ್ತು ಸರ್ ಎಂದು ಅವರಿಗೆ ಮಾತು ಕೊಟ್ಟೆ. ಅಂದಿನಿಂದ ಎರಡು ವರ್ಷಗಳ ಕಾಲ ಅವರ ನಿರಂತರ ಪ್ರೋತ್ಸಾಹ ಸಾಗಿತ್ತು. ಅದನ್ನ ಮತ್ತೊಂದು ಲೇಖನದಲ್ಲಿ ಸವಿಸ್ತಾರವಾಗಿ ಬರೆಯುವೆ. ನನ್ನ ಗುರುಗಳ ಕನಸಿನಂತೆ ನಾನು ಶಿಕ್ಷಕಿಯಾಗಿ ಬಹುಬೇಗನೆ ನೇಮಕವಾದೆ. ಅದನ್ನು ನೋಡಿ ಅವರೆಷ್ಟು ಸಂಭ್ರಮಿಸಿದರು. ಅವರ ಹೆಂಡ್ತಿ ಶ್ರೀದೇವಿ ಮೇಡಂ ಕೂಡ ಪ್ರೌಢಶಾಲಾ ಶಿಕ್ಷಕಿ.
Continuous and Comprehensive Evaluation ಎಂಬ ಹೊಸ ಮೌಲ್ಯಮಾಪನ ಪದ್ಧತಿ ಜಾರಿಗೆ ಬಂದಾಗ ನಾನು ಹೈಸ್ಕೂಲ್ ಟೀಚರ್ಸ್ಗು ಕೂಡ ಈ ತರಬೇತಿಯನ್ನು ನೀಡಿದ್ದೆ. ಆಗ ಈ ಮೇಡಂ ಕೂಡ ಇದ್ದರು. ಅವರು ಮನೆಯಲ್ಲಿ ಹೋಗಿ ನಿಮ್ಮ ಸ್ಟೂಡೆಂಟ್ ಇಂದು ಟ್ರೈನಿಂಗ್ ಕೊಟ್ಟರು ಎಂದು ಹೇಳಿದಾಗ ನನ್ನ ಗುರುಗಳು ತುಂಬಾ ಸಂಭ್ರಮಿಸಿದರು. ನನ್ನ ವಿದ್ಯಾರ್ಥಿ ನನ್ನ ಹೆಂಡತಿಗೆ ಪಾಠ ಮಾಡಿದ್ದು ಕಂಡು ತುಂಬಾ ಹೆಮ್ಮೆ ಪಟ್ಟರು. ನೋಡು ಸಿರಿ ನಾನು ಎಂತಹ ವಿದ್ಯಾರ್ಥಿಗಳನ್ನು ಪಡೆದಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು. ಈಗಲೂ ಅಷ್ಟೇ ನಾನು ಬರೆಯುವ ಪ್ರತಿ ಬರಹವನ್ನು ಓದಿ ಪ್ರೋತ್ಸಾಹಿಸುವುದರ ಜೊತೆಗೆ ಅವರ ಕಾಲೇಜು ಗುಂಪುಗಳಲ್ಲಿ ಮತ್ತು ಅವರ ವಿದ್ಯಾರ್ಥಿ ಸಮೂಹಗಳಲ್ಲಿ ಇದನ್ನು ಶೇರ್ ಮಾಡಿಕೊಂಡು ನನ್ನ ಪ್ರೀತಿಯ ವಿದ್ಯಾರ್ಥಿನಿ ಬರೆದಿರೋದು ಎಂದು ಹೇಳುತ್ತಾರೆ. ಇಂತಹ ಗುರುಗಳು ಪ್ರತಿಯೊಬ್ಬರಿಗೂ ಸಿಗಬೇಕು. ಆಗ ಮಾತ್ರ ನನ್ನಂತಹ ನೂರಾರು ಜನರ ಬದುಕು ಬಂಗಾರವಾಗುತ್ತದೆ. ನನಗೆ ಟೀಚರ್ ಕೆಲಸ ಸಿಕ್ಕಿತು ಎಂದಾಗ ಸರ್ ಹೇಳಿದ ಒಂದು ಮಾತು ಈಗಲೂ ನೆನಪಿದೆ. ನೋಡ್ರಮ್ಮ, ಯಾವ ಮಕ್ಕಳಿಗೂ ಸಾಮಾಜಿಕ ಅಸಮಾನತೆ ಮತ್ತು ಆರ್ಥಿಕ ಅಸಮಾನತೆ ತೋರಬೇಡಿ. ಯಾವ ಮಕ್ಕಳನ್ನು ಕೀಳಾಗಿ ಕಾಣಬೇಡಿ. ಎಲ್ಲರನ್ನು ಸಮಾನವಾಗಿ ಕಾಣಬೇಕು ಎಂದರು. ನಾನು ಅವರಿಗೆ ಕೊಟ್ಟ ಮಾತಿನಂತೆ ಇಂದಿಗೂ ನಾನು ಯಾವುದೇ ವಿದ್ಯಾರ್ಥಿಗಳಿಗೆ ಯಾವುದೇ ಬೇಧ ಭಾವ ತೋರುವುದಿಲ್ಲ. ಎಲ್ಲಾ ಮಕ್ಕಳನ್ನು ಒಂದೇ ಎಂಬ ಭಾವದಲ್ಲಿ ಪ್ರೀತಿಸುತ್ತೇನೆ. ಮಕ್ಕಳು ಕೂಡ ನನ್ನನ್ನು ಅಷ್ಟೇ ಇಷ್ಟಪಡುತ್ತವೆ ಎಂಬುದು ಸತ್ಯ.
ಇದೀಗ ಅವರು ನಿವೃತ್ತರಾಗಿದ್ದಾರೆ. ಅವರ ಬೀಳ್ಕೊಡುಗೆ ಸಮಾರಂಭದ ದಿನವೇ ನನಗೆ “ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ” ನೀಡುವ ಕಾರ್ಯಕ್ರಮವು ಇತ್ತು. ನಾನು ನನ್ನ ಗುರುಗಳಿಗೆ ಆ ಕಾರ್ಯಕ್ರಮಕ್ಕೆ ನಾನು ಹೋಗುವುದಿಲ್ಲ. ನನಗೆ ನನ್ನ ಪ್ರಶಸ್ತಿಗಿಂತ ನಿಮಗೆ ಗೌರವ ಸಲ್ಲಿಸುವುದು ಮುಖ್ಯ ಎಂದೆ. ಆದರೇ ಅವರು ಒಪ್ಪಲಿಲ್ಲ. ಇಲ್ಲರಮ್ಮಾ ನನಗೆ ನೀವು ಪ್ರಶಸ್ತಿ ತಗೊಳ್ಳೋದೆ ನನಗೆ ಬಹಳ ಇಷ್ಟ. ನೀವು ಅಲ್ಲಿ ಹೋಗಿ ಆಮೇಲೆ ಬನ್ನಿ ಅಂದರು. ಗುರು ಅಂದ್ರೇ ಇದೇ ತಾನೆ.
ತನಗಿಂತ ಎತ್ತರದ ಸ್ಥಾನದಲ್ಲಿ, ಹೆಚ್ಚಿನ ಸಾಧನೆಯಲ್ಲಿ ನೋಡಲು ಬಯಸುವುದು. ಈದೀಗ ಅವರು ವಯೋ ನಿವೃತ್ತಿ ಹೊಂದಿದ್ದಾರೆ. ಅವರ ಮುಂದಿನ ವಿಶ್ರಾಂತ ಜೀವನ ಸುಖಕರವಾಗಿರಲಿ. ಅವರ ಹಾರೈಕೆಯ ನೆರಳಿನಲ್ಲಿ ನಾವು ಸದಾ ಚೆನ್ನಾಗಿರುತ್ತೇವೆ. ಸನ್ಮಾನ ಗುರುಗಳಿಗೆ ನೀವು ಯಾಕೆ ಹಾರ ಹಾಕಿಕೊಂಡಿದ್ದೀರಿ ಎಂದು ಕೇಳಬೇಡಿ. ಅದು ನಮ್ಮ ಗುರುಗಳು ಪ್ರೀತಿಯಿಂದ ದಂಪತಿಗಳಿಬ್ಬರೂ ಹೀಗೆ ನೂರ್ಕಾಲ ಸುಖವಾಗಿ ಖುಷಿ ಖುಷಿಯಾಗಿ ಇರಿ ಎಂದು ಹಾರ ಹಾಕಿ ಹಾರೈಸಿದ್ದು.
- ಅನುಸೂಯ ಯತೀಶ್ – ಬೆಂಗಳೂರು
