“ಮಹಾವಿನಾಶ” ಪುಸ್ತಕ ಪರಿಚಯ

ಡಾ. ಲಕ್ಷ್ಮಣ ಕೌಂಟೆ ಅವರ ಮಹಾವಿನಾಶ ಕೃತಿ ಇದೊಂದು ಬುದ್ಧನ ಕಾಲಾನಂತರದ ಕಥೆಯುಳ್ಳ, ಹೆಚ್ಚು ಬಳಸಲ್ಪಡದ ಕಥಾವಸ್ತುವನ್ನು ಹೆಣೆದುಕೊಂಡು ಅಧ್ಯಯನದ ಮುಖಾಂತರವೇ ರಚಿಸಲ್ಪಟ್ಟ ಐತಿಹಾಸಿಕ ಕಾದಂಬರಿ. ಇದು ಗೌತಮಬುದ್ಧನ ಪರಿನಿರ್ವಾಣದ ನಂತರ ಕಾಲದಿಂದ ಮುಂದಿನ ಐದು – ಆರು ನೂರು ವರ್ಷದ ಕಥಾ ಹಂದರವನ್ನು ಹೊಂದಿದೆ.

ಕೃತಿ: ಮಹಾವಿನಾಶ
ಲೇಖಕರು : ಡಾ. ಲಕ್ಷ್ಮಣ ಕೌಂಟೆ
ಮುಖಬೆಲೆ: 450/-
ರಿಯಾಯಿತಿ ಬೆಲೆ: 360/-
ಸಂಪರ್ಕ: 070221 22121 8861212172

‘ರಾಜಾ ಕಾಲಸ್ಯ ಕಾರಣಂ’ ಎಂಬ ಪ್ರಸಿದ್ಧ ಯುಕ್ತಿಯೊಂದಿದೆ. ಅದು ಅಕ್ಷರಶಃ ಸತ್ಯವಾಗಿದೆ. ಸಿದ್ಧಾರ್ಥ ರಾಜಕಾರಣವನ್ನು ತ್ಯಾಗ ಮಾಡಿ ಬೌದ್ಧ ಧರ್ಮದ ಮೂಲಕ ಬಹು ಹಿಂದಿನಿಂದ ನಡೆದುಕೊಂಡು ಬಂದಿದ್ದ ಯಜ್ಞ ಯಾಗಗಳನ್ನು ನಿಗ್ರಹಿಸುವಂತೆ ಮಾಡಿದ. ಅವನಿಂದ ಪ್ರಭಾವಶಾಲಿಯಾಗಿ ಬೆಳೆದ ಬೌದ್ಧ ಧರ್ಮ ಬಹುಬೇಗ ಜನರನ್ನು ತನ್ನೆಡೆಗೆ ಆಕರ್ಷಿತಗೊಂಡಿತು. ಸಾವಿರಾರು ಜನ ರಾಜಕುಮಾರರು ಅರಮನೆ ತೊರೆದು ಬೌದ್ಧ ಭಿಕ್ಷುವಾಗುವುದಕ್ಕಾಗಿ ಬುದ್ಧನೆಡೆಗೆ ದೌಡಾಯಿಸಿದರು. ಈ ಕಾರಣದಿಂದ ಅರಸೊತ್ತಿಗೆಗಳು ಕಂಪಿಸಿದವು.

ಬುದ್ಧ ಪರಿನಿರ್ವಾಣ ಹೊಂದಿದ ಮೇಲೆ (ಸಾವಿನ ನಂತರ) ಮಗಧ ಸಾಮ್ರಾಜ್ಯ ಮುಂದುವರೆಯಿತು. ಬಿಂಬಿಸಾರನಿಂದ ಬಿಂದುಸಾರನವರೆಗೆ ಸಿಂಹಾಸನಕ್ಕಾಗಿ ಅರಮನೆಗಳಲ್ಲಿ ಹಲವು ಕೊಲೆಗಳು ನಡೆದವು. ಚಂದ್ರಗುಪ್ತ ಮೌರ್ಯ ಮತ್ತು ಅವನ ಮೊಮ್ಮಗ ಅಶೋಕನ ಕಾಲದಲ್ಲೂ ಈ ಹತ್ಯೆಗಳು ನಡೆದವು. ಕಳಿಂಗ ಯುದ್ಧದ ಭೀಕರ ಪರಿಣಾಮದ ನಂತರ ಅಶೋಕ ಬೌದ್ಧ ಧರ್ಮದ ಅನುಯಾಯಿಯಾಗಿ ಯುದ್ಧವನ್ನು ತ್ಯಾಗ ಮಾಡಿದ. ಪ್ರಾಣಿವಧೆಯನ್ನು ಕನಿಷ್ಠಕ್ಕೆ ಮಿತಿಗೊಳಿಸಿದ. ಅವನು ಬೌದ್ಧ ಧರ್ಮದ ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದ. ಇಡೀ ಭರತಖಂಡದ ಬಹುಭಾಗವನ್ನು ಆಳುತ್ತಿದ್ದ ಅವನ ಕಾಲದಲ್ಲಿ ಯಜ್ಞ ಯಾಗಗಳು ಸ್ತಗಿತಗೊಂಡ ಕಾರಣ ಬ್ರಾಹ್ಮಣರು ತಮ್ಮ ವೃತ್ತಿಯನ್ನು ಕಳೆದುಕೊಂಡು ಅದನ್ನು ನಿಲ್ಲಿಸುವುದು ಅನಿವಾರ್ಯವಾಯಿತು. ಅವರು ನಿರುದ್ಯೋಗಿಗಳಾದರು. ಅಶೋಕ ಯುದ್ಧವನ್ನೇ ತ್ಯಾಗ ಮಾಡಿದ್ದರಿಂದ ಸೈನಿಕ ವೃತ್ತಿಯ ಮೂಲಕವೇ ಬದುಕು ಕಟ್ಟಿಕೊಳ್ಳುತ್ತಿದ್ದ ಕ್ಷತ್ರಿಯರು ಉದ್ಯೋಗವಿಲ್ಲದೆ ಅನಿವಾರ್ಯವಾಗಿ ಬಡತನಕ್ಕೆ ದೂಡಲ್ಪಟ್ಟರು. ಯುದ್ಧಗಳು ನಿಂತಿದ್ದರಿಂದ ಯುದ್ಧಕ್ಕೆ ಅಗತ್ಯವಾದ ದವಸ ಧಾನ್ಯಾದಿಗಳನ್ನು ಒದಗಿಸುತ್ತಿದ್ದ ವಣಿಕರು, ಕಂಭಾರಿಕೆ, ಬಡಿಗತನದಂತಹ ವೃತ್ತಿಯವರ ಕಾಯಕಗಳು ಸೊರಗಿದವು. ಉದ್ಯೋಗ ರಹಿತರು ಹೊಟ್ಟೆ ಹೊರೆಯುವುದಕ್ಕಾಗಿ ಬೇರೆಯವರು ನಿರ್ವಹಿಸುತ್ತಿದ್ದ ವೃತ್ತಿಗಳಲ್ಲಿ ಮೇಲು ಕೀಳು ಗಮನಿಸದೆ ದೊರೆಯುವ ವೃತ್ತಿಗಳತ್ತ ಹೊರಳುವಂತಾಯಿತು. ಈ ಕಾರಣದಿಂದ ವೃತ್ತಿಸಂಕರತೆ ಉಂಟಾಯಿತು.

ಅಶೋಕನ ಮರಣಾನಂತರ ಸಮಾಜ ಅಸ್ತವ್ಯಸ್ತಗೊಂಡಿತು. ರಾಜಕೀಯ ಕಾರಣಕ್ಕಾಗಿ ಉದ್ಯೋಗ ಕಳೆದುಕೊಂಡವರು ವ್ಯವಸ್ಥೆಯನ್ನು ಪುನಃ ಬುದ್ಧಪೂರ್ವ ಕಾಲಕ್ಕೆ ಕೊಂಡೊಯ್ಯಲು ಬಯಸಿದರು. ಆಗ ಮೌರ್ಯ ಸಾಮ್ರಾಜ್ಯವನ್ನು ಆಳುತ್ತಿರುವವನು ಬೃಹದ್ರಥ. ಅವನ ಸೇನಾಪತಿಯಾಗಿದ್ದ ಪುಷ್ಯಮಿತ್ರ ಶುಂಗನೆಂಬ ಬ್ರಾಹ್ಮಣನ ಮೂಲಕವೇ ಅರಾಜಕ ರಾಜಕಿಯ ವ್ಯವಸ್ಥೆಯನ್ನು ಕಿತ್ತೊಗೆಯಲು ಬ್ರಾಹ್ಮಣ ಪ್ರಮುಖರು ನಿರ್ಧರಿಸಿದರು. ಪುಷ್ಯಮಿತ್ರ ಶುಂಗ ಅವರ ಅಣತಿಗೆ ದಕ್ಕಿದ. ಅವನು ಬೃಹದ್ರಥನನ್ನು ಮೋಸದಿಂದ ಕೊಂದು ಶುಂಗವಂಶವನ್ನು ಸ್ಥಾಪಿಸಿ ತಾನೇ ಪ್ರಥಮ ದೊರೆಯಾದ. ಹದಗೆಟ್ಟ ಸಮಾಜ ವ್ಯವಸ್ಥೆಯನ್ನು ಪುನಃ ಶಿಸ್ತಿಗೆ ಒಳಪಡಿಸಲು ಅವನು “ಮನುಸ್ಮೃತಿ” ರಚನೆಗೆ ಇಂಬುಕೊಟ್ಟ. ಮತ್ತು ಅದನ್ನು ಜಾರಿಗೊಳಿಸಲು ಪ್ರತಿಬದ್ಧನಾದ.

ಇದು ‘ಮಹಾವಿನಾಶ’ದ ಕಥೆ. ಮೌರ್ಯವಂಶ ಅವನತಿಯ ದಾರುಣ ಕಥಾವಳಿ. ಈ ಕಾದಂಬರಿಯಲ್ಲಿ ಗ್ರೀಕ ದೊರೆ ವಿಶ್ವ ವಿಜಯಿ ಉದ್ದೇಶ ಹೊಂದಿದ ಅಲೆಗ್ಝಾಂಡರ್ ಭರತಖಂಡದ ಮೇಲೆ ದಾಳಿ ಮಾಡಿದ್ದು ಚಾಣಕ್ಯನ ನೆರವಿನಿಂದ ಚಂದ್ರಗುಪ್ತ ಮೌರ್ಯ ಅವನನ್ನು ನಿಗ್ರಹಿಸಿದ ಕಥೆಯೂ ಬರುತ್ತದೆ.

ಹಾಗೆಯೇ ಮಲತಾಯಿ ತಿಷ್ಯರಕ್ಷಿತಾಳ ಮೋಹಕ್ಕೆ ಬಲಿಯಾಗದ ಅಶೋಕ ಪುತ್ರ ಕುಣಾಲ ತನ್ನ ಸುಂದರವಾದ ಕಣ್ಣುಗಳನ್ನು ಕಳೆದುಕೊಂಡು ರಾಜಭ್ರಷ್ಟನಾಗಿ ಭಿಕ್ಷೆ ಬೇಡುತ್ತ ಅಲೆಯುವ ದಾರುಣ ಪ್ರಸಂಗವೂ ಈ ಕಾದಂಬರಿಯಲ್ಲಿ ಕಾಣುತ್ತದೆ.

ಒಟ್ಟಿನಲ್ಲಿ ಇದೊಂದು ತೀರ ವಿಶೇಷವಾದ ಓದುಗರಿಗೆ ವಿನೂತನ ಸಾಹಿತ್ಯ ವನ ವಿಹಾರಕ್ಕೆ ಕೊಂಡೊಯ್ಯುವ, ಹಲವು ಬಗೆಯ ವಿಷಯವನ್ನು ಹರಹುವ ಕಾದಂಬರಿಯಾಗಿದೆ. ಹಣ ಕೊಟ್ಟು ಕೊಂಡಿದ್ದಕ್ಕೆ ಹಲವು ಪಟ್ಟು ಸಾರ್ಥಕ್ಯವನ್ನು ಕೊಡುವ ಈ ಕೃತಿ ಸಂಗ್ರಹ ಯೋಗ್ಯವಾಗಿದೆ ಎನ್ನುವುದು ಓದಿದವರಿಗೆ ಮನದಟ್ಟಾಗಲಿದೆ.


  • ಡಾ. ಲಕ್ಷ್ಮಣ ಕೌಂಟೆ – ಕತೆಗಾರರು, ಕವಿಗಳು, ಲೇಖಕರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW