ಮಾನಸ….ಇದು ಮನಸಿನ ಮಾತು (ಭಾಗ-೫೫)

ಗರ್ಭಿಣಿಯಾದ ಅತ್ತಿಗೆ, ನಾದಿನಿ ಒಂದೇ ಬಾಗಿಲಲ್ಲಿ ಓಡಾಡಬಾರದು?ಎನ್ನುವ ಸಂಪ್ರದಾಯ ಹಿಂದಿನ ತಲೆಮಾರಿನವರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಅದಕ್ಕೆ ನಿರ್ದಿಷ್ಟ ವೈಜ್ಞಾನಿಕ ಕಾರಣಗಳನ್ನು ಅವರು ಹೇಳುತ್ತಿರಲಿಲ್ಲ . ಅಂಕಣಕಾರ್ತಿ ಚಂಪಾ ಚಿನಿವಾರ್ ಅವರ ಅಂಕಣವನ್ನು ತಪ್ಪದೆ ಮುಂದೆ ಓದಿ…

ಗೆಳತಿಯೊಬ್ಬಳ ಮನೆಗೆ ಹೋದಾಗ ಲೋಕರೂಢಿ ಮಾತನಾಡಿಕೊಂಡು ಕೂತಿದ್ದ ನನಗೆ ಅವಳ ಮಕ್ಕಳ ಬಗ್ಗೆ ಕೇಳಿದೆ. ಸೊಸೆಗೆ ಗಂಡು ಮಗು ಆಯಿತು, ಮಗಳು ಈಗ ಬಸುರಿ ಎಂದಳು. ಸೊಸೆ ಮಗಳು ಇಬ್ಬರೂ ಒಟ್ಟಿಗೆ ಗರ್ಭಿಣಿ ಆಗಿದ್ದರು. ಬಸಿರಾದ ಅತ್ತಿಗೆ ನಾದಿನಿ ಒಟ್ಟಿಗೆ ಇರಬಾರದಂತೆ, ಅವಳ ತಾಯಿ ಹೇಳಿದರು ಎಂದು ಹೇಳಿದಳು.

ಮನೆಗೆ ಬಂದು ಯೋಚಿಸತೊಡಗಿದೆ, ಏಕೆ ಹಿರಿಯರು ಈ ರೀತಿ ಹೇಳುತ್ತಿದ್ದರು ಎಂದು ಯೋಚಿಸುವಾಗ ನನ್ನ ಮನಸಿನ ಬಂದ ವಿಚಾರಗಳು ಹೀಗೆ ಅನಿಸಿತು. ಬಹಳ ಹಿಂದಿನಿಂದಲೂ ನಡೆದುಕೊಂಡುಬಂದಿರುವ, ಶಾಸ್ತ್ರ, ಸಂಪ್ರದಾಯ ಎಂದು ಹೇಳುವ ಕೆಲವು ಪದ್ಧತಿಗಳು ನೋಡುವುದಕ್ಕೆ ಹಗುರ, ಹಾಸ್ಯ ಅನಿಸಿದರೂ ಅದರ ಆಳ ಹೊಕ್ಕು ನೋಡಿದಾಗ ಅದರ ಹಿಂದಿನ ಉದ್ದೇಶ ತಿಳಿದುಕೊಂಡಾಗ ಆ ರೀತಿಯ ಸಂಪ್ರದಾಯ ಎಷ್ಟು ಸತ್ಯವಾದದ್ದು ಅನಿಸುತ್ತದೆ.

ಹಿಂದಿನ ತಲೆಮಾರಿನವರು ಕಾರಣವಿಲ್ಲದೆ ಈ ಶಾಸ್ತ್ರಗಳನ್ನು ಮಾಡುತ್ತಿರಲಿಲ್ಲ. ಅವರಿಗೆ ವ್ಯಜ್ಞಾನಿಕವಾಗಿ ಹೇಳಲು ಬರುತ್ತಿರಲಿಲ್ಲ ಹಾಗು ಹಿರಿಯರು ಏನೇ ಹೇಳಿದರೂ ಕಿರಿಯರು ಮರುಮಾತನಾಡದೆ ಕೇಳುತಿದ್ದರು.

ಮೊದಲೆಲ್ಲ ಒಟ್ಟು ಕುಟುಂಬ ಇತ್ತು, ಮನೆಯೂ ದೊಡ್ಡದಾಗಿ ಇರುತಿತ್ತು, ಎಲ್ಲರೂ ಅಲ್ಲಿಯೇ ಇರಬೇಕಿತ್ತು. ಗರ್ಭಿಣಿಯಾದ ಮಗಳು ಬಾಣಂತನಕ್ಕೆ ಬರುವವಳಿದ್ದರೆ, ಸೊಸೆಯೂ ಸಹ ಗರ್ಭಿಣಿಯಾಗಿದ್ದು ಸ್ವಲ್ಪ ಗೊಂದಲವೇ ಆಗುತಿತ್ತು. ಸೊಸೆಯನ್ನು ತನ್ನ ತಾಯಿಯ ಮನೆಗೆ ಕಲಿಸುವಷ್ಟು ದೊಡ್ಡ ಮನಸು ಕೆಲವರಿಗೆ ಇರುತ್ತಿರಲಿಲ್ಲ. ಒಟ್ಟಿಗೆ ಇರುವ ಬದಲು ಮಗಳನ್ನು ಒಂದು ಕಡೆ, ಸೊಸೆಯನ್ನು ಒಂದು ಕಡೆ ಇರಿಸಿ ಒಬ್ಬರನ್ನು ಒಬ್ಬರು ನೋಡದಲೇ ಇರುವ ಹಾಗೆ ವ್ಯವಸ್ಥೆ ಆಗುತಿತ್ತು.

ಎಷ್ಟೇ ಆದರೂ ಮಗಳಿಗೆ ಮನೆಯವರಿಂದ ಉಪಚಾರ ನಡೆಯುತ್ತಿತ್ತು, ಎಲ್ಲರೂ ಬಂದು ಹೋಗಿ ವಿಚಾರಿಸಿಕೊಳ್ಳುವವರೇ. ಅಣ್ಣನೂ ಸಹ ತಂಗಿಯ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದನು. ಒಟ್ಟಿಗೆ ಬೆಳೆದ ಒಡಹುಟ್ಟಿದವರ ಪ್ರೀತಿ ಹೆಚ್ಚಾಗಯೇ ಇರುತಿತ್ತು.

ಒಬ್ಬರಿಗೆ ಒಂದು ತಿಂಡಿ ಅಡಿಗೆ ಇಷ್ಟವಾದರೆ, ಮತ್ತೊಬ್ಬರಿಗೆ ಅದು ಬೇಡ ಅನಿಸುತಿತ್ತು, ಇಬ್ಬರಿಗೂ ಅವರಿಗೆ ಬೇಕಾದ್ದು ಮಾಡಲು ಸಮಯ, ಪದಾರ್ಥ ಇರಬೇಕು ಆದರೆ ಈಗಿನಂತೆ ಹಿಂದೆ ಅನುಕೂಲ ಕಡಿಮೆ ಇದ್ದು ಸುಲಭವಾಗಿ ಪದಾರ್ಥಗಳಾಗಲಿ, ವಸ್ತು ಸಿಗುತ್ತಿರಲಿಲ್ಲ. ತನ್ನ ಅಣ್ಣ ಅತ್ತಿಗೆಗೆ ಸೀರೆ ತಂದರೆ ತಂಗಿ/ ಅಕ್ಕ ನಿಗೆ ಬೇಸರವಾಗಬಹುದು, ತಂಗಿ/ಅಕ್ಕ ನಿಗೆ ತಂದರೆ ಹೆಂಡತಿಗೆ ಬೇಸರವಾಗಬಹುದು ಹೀಗೆ ಅನೇಕ ವಿಷಯಗಳು ದುಃಖಕ್ಕೆ ಕಾರಣವಾಗುತಿತ್ತು.

ಅದೇ ಅಣ್ಣನ ಹೆಂಡತಿ ಮನೆಯ ನಿರ್ವಹಣೆ ಜೊತೆಗೆ ಎಲ್ಲರ ಉಪಚಾರ ಮನೆಯ ಸೊಸೆಯ ಮೇಲೆ ಇದ್ದಿದ್ದರಿಂದ ಅವಳಿಗೆ ಆದ್ಯತೆ ಕಡಿಮೆ ಇರುತಿತ್ತು (ಕೆಲವು ಮನೆಗಳಲ್ಲಿ). ಅಕಸ್ಮಾತ್ ಆಗಿ ಅಣ್ಣ ತನ್ನ ಹೆಂಡತಿಗೆ ಸ್ವಲ್ಪ ಆದರಣೆ, ಆತಿಥ್ಯ ತೋರಿಸಿದರೆ, ಮಗಳಿಗೆ ನೋಡು ಅಣ್ಣ ತನ್ನ ಹೆಂಡತಿಗೆ ಬಹಳ ಮುತುವರ್ಜಿ ಮಾಡುತ್ತಾನೆ ಎಂದೂ, ಸೊಸೆಗೆ, ನೋಡು ತನ್ನ ತಂಗಿಗೆ/ ಅಕ್ಕನಿಗೆ ಎಷ್ಟು ಮಹತ್ವ ಕೊಡುತ್ತಾರೆ ನನ್ನ ಕಡೇಕಾಣಿಸುತ್ತಾರೆ ಎಂದು ಅನಿಸುತಿತ್ತು.

ಇಬ್ಬರೂ ಎದುರು ಬದುರು ಬಂದಾಗ ಒಬ್ಬರ ಮುಖ ಒಬ್ಬರು ನೋಡಬೇಕು ಅನ್ನುವಾಗ ಇಬ್ಬರ ಮನಸಲ್ಲೂ ಅಸಮಾಧಾನ ಇದ್ದಾಗ ಅಲ್ಲಿ ಪ್ರೀತಿ, ವಿಶ್ವಾಸಕ್ಕಿಂತ ದ್ವೇಷ, ಅಸೂಯೆ ಭಾವ ಮೂಡಬಹುದು, ಒಬ್ಬರಿಗೊಬ್ಬರು ನೋಡಲೂ, ಮಾತನಾಡಲೂ ಸಹ ಇಷ್ಟ ಪಡದವರು ಇನ್ನು ಒಟ್ಟಿಗೆ ಇರಲು ಬಹಳ ಕಷ್ಟ ಹಾಗು ಹಿಂಸೆ ಆಗುತ್ತದೆ.

ಫೋಟೋ ಕೃಪೆ : ಅಂತರ್ಜಾಲ

ಕೆಲವು ಗರ್ಭಿಣಿಯರಿಗೆ ಶುರುವಿನಿಂದಲೂ ವಾಂತಿ, ಆಯಾಸ, ಅತೀ ರಕ್ತದೊತ್ತಡ, ಗರ್ಭಾವಸ್ಥೆಯ ಮಧುಮೇಹ (gestational diabetes) ಹೀಗೆ ಹಲವಾರು ಸಮಸ್ಯೆಗಳು ಇರುತ್ತದೆ. ಇದು ಎಲ್ಲರಿಗೂ ಬರಬೇಕೆಂದು ಇಲ್ಲ, ಒಂದೇ ಮನೆಯಲ್ಲಿ ಇದ್ದ ಇಬ್ಬರು ಗರ್ಭಿಣಿಯರಲ್ಲಿ ಒಬ್ಬರಿಗೆ ಇದ್ದು, ಮತ್ತೊಬ್ಬರಿಗೆ ಇರದಿದ್ದಾಗ, ಅಸೂಯೆ ಭಾವ ಮೂಡುತ್ತದೆ. ಇದೂ ಸಹ ಮನಸಿನ ಮೇಲೆ ಪರಿಣಾಮವಾಗಿ, ನೇರವಾಗಿ ಮಗುವಿನ ಮೇಲೆ ಪರಿಣಾಮ ಬೀರುತ್ತದೆ.

ಉಡುವ ಬಟ್ಟೆ, ತಿನ್ನುವ ಆಹಾರ, ಊಟೋಪಚಾರ, ಮನೆಯ ವಾತಾವರಣ, ಮನೆಯವರೊಂದಿಗಿನ ಒಡನಾಟ, ಮನೆಯ ಮಕ್ಕಳೊಂದಿಗಿನ ಆಟ ಪಾಠ ಎಲ್ಲವೂ ಪರಿಣಾಮ ಬೀರುತ್ತದೆ.

ಇದೆಲ್ಲ ಮೇಲುನೋಟಕ್ಕೆ ಸಾಧಾರಣ ಅನಿಸಿದರೂ ಗರ್ಭಿಣಿಯರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಒಬ್ಬರಿಗೊಬ್ಬರಿಗೆ ಹೋಲಿಸಿಕೊಂಡು ವ್ಯಥೆ ಪಡುವ ಸಂಭವ ಹೆಚ್ಚು. ಇದೆಲ್ಲ ಮನಸಿನ ಮೇಲೆ ಪರಿಣಾಮ ಬೀರಿ, ಹೊಟ್ಟೆಯಲ್ಲಿರುವ ಮಗುವಿನ ಮೇಲೇಯೂ ಪರಿಣಾಮ ಬೀರುತ್ತದೆ. ಇದೇ ನಿಜವಾದ ಕಾರಣ. ಹಾಗಾಗಿ ಒಂದೇಮನೆಯಲ್ಲಿ ಗರ್ಭಿಣಿಯಾದ ಅತ್ತಿಗೆ, ನಾದಿನಿ ಒಟ್ಟಿಗೆ ಇರಬಾರದು ಎಂದು ಹಿರಿಯರು ಶಾಸ್ತ್ರ, ಸಂಪ್ರದಾಯದ ಕಾರಣ ಕೊಟ್ಟು ಹೇಳುತಿದ್ದರು.

ಏನೇ ಇರಲಿ ಒಂದು ವಿಷಯದ ಹಿಂದೆ ವೈಜ್ಞಾನಿಕ ಕಾರಣ ಇದ್ದೇ ಇರುತ್ತದೆ. ಆದರೆ ನಮ್ಮ ಹಿರಿಯರುಗೆ ಹೇಗೆ ಅದನ್ನು ಜನರಿಗೆ ತಲುಪಿಸಬೇಕೆಂದು ತಿಳಿಯುತ್ತಿರಲಿಲ್ಲದ ಕಾರಣ ಶಾಸ್ತ್ರದ ಹೆಸರು ಹೇಳಿ ಕಾರ್ಯಕ್ರಮಗಳನ್ನು, ಹಬ್ಬ ಹರಿದಿನಗಳನ್ನು ಆಚರಿಸುತಿದ್ದರು. ಕಾರಣ ಏನೇ ಇರಲಿ ಎಲ್ಲವೂ ಮನಸಿನ ಮೇಲೆ ಪರಿಣಾಮ ಬೀರುತ್ತದೆ. ಮನಸು ಸಂತೋಷವಾಗಿರಲು ಹಿರಿಯರ ದಾರಿ ಅನುಸರಿಸುವುದರಲ್ಲಿ ತಪ್ಪಿಲ್ಲ ಅಲ್ಲವೇ?


  • ಚಂಪಾ ಚಿನಿವಾರ್ –  ಆಪ್ತಸಮಾಲೋಚಕಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW