ಮನುಷ್ಯ ಹಾಗೂ ಪಕ್ಷಿಗಳಿಗೆ ಇರುವ ವ್ಯತ್ಯಾಸ ಇಷ್ಟೇ ಪಕ್ಷಿಗಳು ತನಗೆಷ್ಟು ಬೇಕೋ ಅಷ್ಟೇ ಆಹಾರ ತಿನ್ನುತ್ತದೆ, ಕೂಡಿಡುವ ಕೆಲಸವಿಲ್ಲ. ಮನುಷ್ಯ ತಾನು ತಿಂದು ಮರಿಮಕ್ಕಳಿಗೂ ಕೂಡಿಡುತ್ತಾನೆ, ಹಂಚಿ ತಿನ್ನುವ ಗುಣವಿಲ್ಲ. ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣದಲ್ಲಿ ‘ಹಕ್ಕಿಯಂತಲ್ಲ ಮಾನವನ ಬದುಕು….’.. ತಪ್ಪದೆ ಓದಿ…
ಹೀಗೆ ಒಂದು ಸಂಜೆ ನಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ಅಲ್ಲಿ ಇಲ್ಲಿ ನೋಡುತ್ತಾ ನಿಂತಿದ್ದೆ. ಮುಸ್ಸಂಜೆಯ ಸಮಯ, ಸುಮಾರು ಆರು ಗಂಟೆ ಇರಬಹುದು, ಅಲ್ಲೇ ಪಕ್ಕದ ಮರದ ಕೊಂಬೆಯ ಮೇಲೆ ಒಂದು ಹಕ್ಕಿ ಬಂದು ಕುಳಿತುಕೊಂಡಿತು. ಹೀಗೆ ಗಮನಿಸಿ ನೋಡಿದೆ, ಅದು ಹದ್ದಿನ ಮರಿ. ನೋಡುತಿದ್ದಂತೆ ಕತ್ತಲಾಯಿತು ಆ ಮರಿ ಅಲ್ಲೇ ಕುಳಿತು ಕೊಂಡಿತ್ತು. ನಾನು ಘಳಿಗಿಗೊಮ್ಮೆ ಗಮನಿಸುತಿದ್ದೆ, ಅದು ಕೂತಲ್ಲೇ ಕುಳಿತಿತ್ತು. ಅಂದು ನಾನು ಅಂದುಕೊಂಡೆ ಬಹುಶಃ ದಾರಿ ತಪ್ಪಿ ಬಂದು ಕೂತಿರಬಹುದು. ಕತ್ತಲಾದಂತೆ ಅದಕ್ಕೆ ಕಣ್ಣು ಕಾಣಲ್ವೇನೋ ಅದಕ್ಕೆ ಹಾರಿ ಹೋಗಿಲ್ಲ ಅಂದುಕೊಂಡುಬಿಟ್ಟೆ.

ಫೋಟೋ ಕೃಪೆ : google
ದಿನಾ ನಾನು ಬೆಳಿಗ್ಗೆ 5 ಗಂಟೆಗೆಲ್ಲಾ ಎದ್ದಿರುತ್ತೇನೆ ಮತ್ತದೇ ಕುತೂಹಲದಿಂದ ಬಾಲ್ಕನಿಯ ಬಾಗಿಲು ತೆಗೆದು ನೋಡಿದೆ ಹದ್ದಿನ ಮರಿ ಅಲ್ಲೇ ಕೂತಿದ್ದ ಜಾಗದಲ್ಲೇ ಕೂತಿತ್ತು. ನಾನು ನನ್ನ ಪತಿರಾಯರಿಗೆ ತಿಂಡಿ ಹಾಗು ಡಬ್ಬಿಗೆ ಅಡಿಗೆ ಮಾಡುತಿದ್ದೆ, ಮತ್ತೆ ಹೊರ ಹೋಗಿ ನೋಡಲು ಹಕ್ಕಿ ಹಾರಿ ಹೋಗಿತ್ತು.
ಹೀಗೆ ಒಂದು ವಾರದಿಂದ ಮರಿ ಹಕ್ಕಿ ಸರಿಯಾಗಿ ಆರು ಗಂಟೆಗೆ ಬಂದು ಕುಳಿತು ಬೆಳಿಗ್ಗೆ ಬೆಳಕು ಹರಿಯೋ ಹೊತ್ತಿಗೆ ಹಾರಿ ಹೋಗುತಿತ್ತು….ನನಗೂ ಅದನ್ನು ಗಮನಿಸುವ ದಿನಚರಿಯಾಯಿತು. ಸುಮಾರು ಇಪ್ಪತ್ತೈದು ದಿನಗಳು ಹೀಗೆ ನಡೆಯಿತು. ಈಗ ಹಕ್ಕಿ ಬರುತಿಲ್ಲ, ನನಗೆ ಮನಸಿಗೆ ಬಹಳ ಬೇಸರವಾಯಿತು. ಅದು ಮತ್ತೆಲ್ಲೋ ನೆಲೆ ಕಂಡುಕೊಂಡಿರಬೇಕು ಅಂದುಕೊಂಡೆ.
ಇದನ್ನು ಗಮನಿಸುತಿದ್ದ ನನಗೆ ಅನಿಸಿದ್ದು…
ಹಕ್ಕಿಗಳು ಗೂಡು ಕಟ್ಟಿ, ಮೊಟ್ಟೆ ಇಟ್ಟು, ಕಾವು ಕೊಟ್ಟು ಮರಿ ಮಾಡುತ್ತದೆ. ಈ ಮರಿ ಹಕ್ಕಿಗೆ ರೆಕ್ಕೆ ಪುಕ್ಕ ಬಲಿತು ಗೂಡು ಬಿಟ್ಟು ಹಾರಿಹೋಗುತ್ತದೆ. ಹಾರಿ ಎಲ್ಲಿಗೆ ಹೋಗುತ್ತದೆ ಎಂದು ಅದರ ತಾಯಿ ಹಕ್ಕಿ ಹುಡುಕುವುದಿಲ್ಲ. ಬೆಳಿಗ್ಗೆಯಿಂದ ಸಂಜೆವರೆಗೂ ಆಹಾರಕ್ಕಾಗಿ ಹಾರಾಟ ಮಾಡಿ ತನ್ನ ಜೀವನ ಸಾಗಿಸಿ ಸಂಜೆ ಆಗುತಿದ್ದಂತೆ ಒಂದು ಮರದಲ್ಲಿ ಬಂದು ಕುಳಿತು, ಬೆಳಕು ಹರಿಯುತಿದ್ದಂತೆ ಮರದಿಂದ ಹಾರಿಹೋಗಿ ತನ್ನ ಜೀವನ, ಯಾನ ಸಾಗಿಸುತ್ತದೆ.
ಇದು ಪಕ್ಷಿಗಳ ಪಾಡಾಯಿತು ಆದರೆ ಮನುಜ ಕುಲ ತನ್ನ ಜೀವನವಲ್ಲದೆ ತನ್ನ ನಂಬಿದವರಿಗೆ ಆಹಾರ, ವಸತಿ ವ್ಯವಸ್ಥೆ ಮಾಡಲೇ ಬೇಕು. ಅವಲಂಬನೆಯ ಬದುಕು ಮಾನವನದು.(ಪಕ್ಷಿಗಳದೂ ಸಹ ಅವಲಂಬನೆಯ ಬದುಕು, ಆಹಾರಕ್ಕಾಗಿ ಮಾತ್ರ) ಹಕ್ಕಿಯ ಹಾಗೆ ಸ್ವೆಚ್ಛಾಚಾರದ ಬದುಕು ಮನುಷ್ಯನದಲ್ಲ. ಅದರಂತೆ ಶಿಸ್ತು ಪಾಲಿಸಲು ಮನುಜನ ಕೈಲಿ ಸಾಧ್ಯವಿಲ್ಲ. ನಿರಂತರ ದುಡಿತ, ಮಕ್ಕಳ ಪೋಷಣೆಯ ಹೊಣೆ, ತಂದೆ ತಾಯಿಯ ಪಾಲನೆಯ ಕರ್ತವ್ಯ, ಒಂದೆರಡಲ್ಲ ಅವನ ಪಾಡು.

ಫೋಟೋ ಕೃಪೆ : google
ವಯಸ್ಸಿಗೆ ಬಂದ ಮಕ್ಕಳ ಮೇಲೆ ಗಮನವಿರಬೇಕು, ಹಾದಿ ತಪ್ಪುತ್ತಾರೆಂಬ ಭಯ, ಮನೆ ಕಟ್ಟುವ ಬಯಕೆ, ಒಳ್ಳೆಯ ಸಂಪಾದನೆ ಹಾಗು ಹೆಸರುಗಳಿಸಬೇಕೆಂಬ ಹಂಬಲ, ಸಮಾಜದಲ್ಲಿ ತಾನು ಉನ್ನತವಾಗಿ ಬದುಕಬೇಕೆಂಬ ಆಸೆ. ಆದರೆ ಹೊಂದಿಕೊಳ್ಳುವ ಸ್ವಭಾವವಿಲ್ಲ, ಹಂಚಿ ತಿನ್ನುವ ಗುಣವಿಲ್ಲ, ಕೂಡಿ ಬಾಳುವ ಮನಸಿಲ್ಲ (ಕೆಲವರಲ್ಲಿ ಮಾತ್ರ ಈ ಗುಣಗಳು ಇರುತ್ತದೆ).
ಮಕ್ಕಳು ದೂರಾಗುತ್ತಾರೆಂದರೆ ಮನಸಿಗೆ ಎಷ್ಟು ಬೇಸರವಾಗುತ್ತದೆ ಆದರೆ ಅವರನ್ನು ಹಿಡಿದಿಡುವ ಹಕ್ಕು ನಮಗಿಲ್ಲ. ಅವರ ಜೀವನ ಅವರು ಕಟ್ಟಿಕೊಂಡು ಹೋದ ಮೇಲೆ ದೂರದಿಂದಲೇ ಅವರಿಗೆ ಹರಸಬೇಕು. ನಮ್ಮ ಹೊರೆ ಹೇರಬಾರದು. ಇದು ಕಹಿ ಎನಿಸಿದರೂ ಕಟು ಸತ್ಯ.
ಅದಕ್ಕಾಗಿಯೇ ಇರಬೇಕು ಅವನ ಮನಸ್ಸು ಹಕ್ಕಿಯಾಗಬೇಕೆಂದು ಬಯಸುವುದು. ಹಕ್ಕಿ ಆದರೇನು ಅದಕ್ಕೂ ಶಿಸ್ತು ಹಾಗು ನಿಯಮಗಳಿರುತ್ತದೆ. ತನಗೆಷ್ಟು ಬೇಕೋ ಅಷ್ಟೇ ಆಹಾರ ತಿನ್ನುತ್ತದೆ, ಕೂಡಿಡುವ ಕೆಲಸವಿಲ್ಲ, (ತನ್ನ ಮರಿಯನ್ನು ಇತರೆ ಪ್ರಾಣಿಗಳು ಅಥವಾ ಮನುಷ್ಯರು ಯಾರಾದರೂ ಮುಟ್ಟಿದರೆ ಅದು ಆ ಮರಿಯನ್ನು ತಮ್ಮ ಗುಂಪಿನಿಂದ ಹೊರ ಹಾಕುತ್ತದೆ ಅಥವಾ ಕುಕ್ಕಿ ಕುಕ್ಕಿ ಸಾಯಿಸುತ್ತದೆ. ಅದಕ್ಕೆ ಭಯದಿಂದ ತನಗೂ ಎಲ್ಲಿ ಆಪತ್ತು ಬರುತ್ತದೋ ಎಂದು ಈ ರೀತಿ ಮಾಡುತ್ತದೆ). ಎಲ್ಲಿದ್ದರೂ ಸಮಯಕ್ಕೆ ಸರಿಯಾಗಿ ಹಾರಿ ಬಂದು ಅದರ ಜಾಗ ತಲುಪುತ್ತದೆ. ಮತ್ತೆ ದಿನಚರಿ ಶುರುವಾಗುತ್ತದೆ.
ಈ ಪ್ರಕೃತಿಯ ಮಡಿಲಲ್ಲಿ ಪಕ್ಷಿ ಸಂಕುಲ, ಪ್ರಾಣಿ ಸಂಕುಲ, ಮನುಕುಲ ಎಲ್ಲಾ ಆಶ್ರಯದಾತರೆ, ಅವಲಂಬನೆಯ ಬದುಕೇ. ಆದರೆ ಮನುಜನಿಗೆ ಕೂಡಿಡುವ ಬುದ್ಧಿ, ತೊರಿಸುತ್ತಾನೆ ಅತೀ ಬುದ್ಧಿ. ಪ್ರಾಣಿ ಪಕ್ಷಿಗಳಿಗೆ ಕೂಡಿ ಬಾಳುವ ಬುದ್ಧಿ ಅಷ್ಟೇ ವ್ಯತ್ಯಾಸ.
ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು:
- ಚಂಪಾ ಚಿನಿವಾರ್ (ಆಪ್ತ ಸಮಾಲೋಚಕಿ) ಪರಿಚಯ
- ಮಾನಸ….ಇದು ಮನಸಿನ ಮಾತು (ಭಾಗ-೧)
- ಮಾನಸ….ಇದು ಮನಸಿನ ಮಾತು (ಭಾಗ-೨)
- ಮಾನಸ….ಇದು ಮನಸಿನ ಮಾತು (ಭಾಗ-೩)
- ಮಾನಸ….ಇದು ಮನಸಿನ ಮಾತು (ಭಾಗ-೪)
- ಮಾನಸ….ಇದು ಮನಸಿನ ಮಾತು (ಭಾಗ-೫)
- ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.
