‘ಮಂಡೇಲಾ’ ಸಿನಿಮಾ ಪರಿಚಯ – ಕಾರ್ತಿಕಾದಿತ್ಯ ಬೆಲಂಗೋಡುಇದು ತಮಿಳಿನ ಮಂಡೇಲಾ ಸಿನಿಮಾದ ಕತೆಯಾಗಿದ್ದು, ನೋಡುಗನನ್ನು ಒಂದಿಂಚೂ ಆಚೀಚೆ ಕದಲದಂತೆ ಸಿನಿಮಾ ಆವರಿಸಿಕೊಂಡು ನೋಡಿಸಿಕೊಳ್ಳುತ್ತದೆ. ಈ ಸಿನಿಮಾದ ಬಗ್ಗೆ ಲೇಖಕ ಕಾರ್ತಿಕಾದಿತ್ಯ ಬೆಲಂಗೋಡು ಅವರು ಬರೆದ ಪರಿಚಯವನ್ನು ಮುಂದೆ ಓದಿ…

ಆ ಊರಿನ ಕ್ಷೌರಿಕನಾಗಿದ್ದ ಆತನಿಗೆ ಕ್ಷೌರ ಪೆಟ್ಟಿಗೆಯನ್ನುಳಿದು ಸ್ವಂತದ್ದೆಂಬುದು ಏನೂ ಇಲ್ಲ. ಬೆಳಗಾದರೆ ಮರದಡಿಯಲ್ಲಿ ಮುರುಕು ಖುರ್ಚಿ, ಮಾಸಲು ಕನ್ನಡಿ ಹಳೆಯ ಪೆಟ್ಟಿಗೆಯೊಂದಿಗೆ ಕೆಲಸ. ಸೂರಿಲ್ಲದ ಅಂಗಡಿಯ ಜೊತೆಗೆ ಕರೆದವರ ಮನೆಗೇ ಹೋಗಿ ಕ್ಷೌರ. ಕೆಲಸಕ್ಕೆ ಪ್ರತಿಯಾಗಿ ಹಣವೇ ಸಿಗುತ್ತದೆಂಬ ಖಾತ್ರಿಯೇನಿಲ್ಲ. ಕೆಲವರ ಮನೆಯಲ್ಲಿ ಹಳಸಿದನ್ನ, ಇನ್ನು ಕೆಲವೆಡೆ ಪುಡಿಗಾಸು. ರಾತ್ರಿಯಾದರೆ ಅದೇ ಮರವೇರಿ ಜೋಕಾಲಿಯೊಳಗೆ ರೇಡಿಯೊ ಆಲಿಸುತ್ತಾ ನಿದ್ರೆ. ಇಂಥಾ ಕ್ಷೌರಿಕನಿಗೆ ಸ್ವಂತದ್ದೊಂದು ಅಂಗಡಿಯನ್ನು ಹೊಂದುವ ಮಹತ್ವಾಕಾಂಕ್ಷೆ. ಅದಕ್ಕಾಗಿ ಹಣ ಒಟ್ಟುಗೂಡಿಸುವ ಪ್ರಯತ್ನ ಹಾಗೂ ಅದನ್ನು ಜತನಗೊಳಿಸುವ ತಲೆನೋವು. ಕಡೆಗೆ ಯಾರದೊ ಸಲಹೆಯಂತೆ ಪೋಸ್ಟಾಫೀಸಿನಲ್ಲಿ ಹಣ ಇಡಲು ಹೋಗುವ ಆತ ಪೋಸ್ಟಾಫೀಸಿನ ಹಿಂಬಾಗಿಲು ಕಾಣದೇ ಗೊಂದಲಗೊಂಡು ಹಿಂಬಾಗಿಲನ್ನು ಹುಡುಕುತ್ತಾ ನಿಲ್ಲುತ್ತಾನೆ!

ಫೋಟೋ ಕೃಪೆ : google

ಕಛೇರಿಯ ಒಳಹೊಕ್ಕ ಅವನಲ್ಲಿ ಖಾತೆ ತೆರೆಯಲು ಬೇಕಾದ ಯಾವ ದಾಖಲೆಗಳೂ ಇರದಿದ್ದನ್ನು ಕಂಡ ಪೋಸ್ಟ್ ಮಾಸ್ಟರ್ ಆತನಿಗೊಂದು ಚುನಾವಣಾ ಗುರುತಿನ ಪತ್ರ ಮಾಡಿಸಲು ಹೊರಡುತ್ತಾಳೆ. ಆದರೆ ಆತನ ಹೆಸರು ಕೇಳಿದರೆ ಆತನಿಗೆ ಸ್ವಂತದ್ದೆನ್ನುವ ಹೆಸರೂ ಇಲ್ಲ! ಕಡೆಗೆ ಅವಳೇ ಹತ್ತಾರು ಹೆಸರುಗಳನ್ನು ಹುಡುಕಿ ಅವನಿಗೆ ‘ನೆಲ್ಸನ್ ಮಂಡೇಲಾ ‘ ಎಂದು ನಾಮಕರಣ ಮಾಡುತ್ತಾಳೆ.‌ ಅವನಿಗೆ ಹೊಸ ಹೆಸರಿನೊಂದಿಗೆ ಸಾಮಾಜಿಕ ಗುರುತೂ ದೊರೆಯುತ್ತದೆ. ಆ ನಂತರದ ಕತೆಯೇ ಗಮ್ಮತ್ತು…

ಇದು ತಮಿಳಿನ ಮಂಡೇಲಾ ಸಿನಿಮಾದ ಕತೆ. ವ್ಯವಸ್ಥೆಯೊಳಗಿನ ಅವ್ಯವಸ್ಥೆಗಳನ್ನೆಲ್ಲಾ ಸೇರಿಸಿ ಹ್ಯೂಮರಸ್ ಧಾಟಿಯಲ್ಲಿ ನೋಡುಗನನ್ನು ಒಂದಿಂಚೂ ಆಚೀಚೆ ಕದಲದಂತೆ ಸಿನಿಮಾ ಆವರಿಸಿಕೊಂಡು ನೋಡಿಸಿಕೊಳ್ಳುತ್ತದೆ. ಚುನಾವಣಾ ಕಾಲದಲ್ಲಿ ಓಟು ಹೊಂದಿದ ನಿಕೃಷ್ಟ ವ್ಯಕ್ತಿಯೊಬ್ಬ ಕೂಡಾ ಹೇಗೆ ರಾಜಕಾರಣಿಗಳಿಗೆ ಉತ್ಕೃಷ್ಟವೆನಿಸುತ್ತಾನೆ ಎಂಬ ನಿರಂತರ ಸತ್ಯವನ್ನು ಅದ್ಭುತವಾಗಿ ಸಿನಿಮಾ ಹೇಳುತ್ತದೆ.

ಫೋಟೋ ಕೃಪೆ : Netflix

ಇಡೀ ಸಿನಿಮಾದಲ್ಲಿ ನನಗೆ ಹೆಚ್ಚು ತಾಕಿದ್ದು ಎರಡು ದೃಶ್ಯಗಳು. ಒಂದು, ಹೆಸರೇ ಇಲ್ಲದ ಮನುಷ್ಯ. ಮತ್ತೊಂದು, ಅವನು ನಿತ್ಯಭ್ಯಾಸದಂತೆ ಪೋಸ್ಟಾಫೀಸಿನಲ್ಲೂ ಹಿಂದಿನ ಬಾಗಿಲನ್ನು ಹುಡುಕುವುದು.

ನಮ್ಮಲ್ಲಿ ಹಿಂದೆ ದನ ಕಾಯುತ್ತಿದ್ದ ಹಲವು ಹುಡುಗರಿಗೆ ಹೆಸರೇ ಇರುತ್ತಿರಲಿಲ್ಲ.! ಆತನಿಗೊಂದು ಹೆಸರು ಬೇಕೆಂದು ಊರಿನ ಜನರಿಗೂ ಅನ್ನಿಸುತ್ತಿರಲಿಲ್ಲ ಹಾಗೂ ಸ್ವತಃ ಅವನಿಗೂ ಇದು ಹೊಳೆಯುತ್ತಿರಲಿಲ್ಲ. ಬಹುತೇಕ ಕಡೆ ಅಂಥಾ ಹುಡುಗರ ಖಾಯಂ ಹೆಸರು ‘ ದನಿನ ಹುಡುಗ’ ಅಂತಲೇ…! ಜೊತೆಗೆ ಇಂಥಾ ಬಹುತೇಕ ಹುಡುಗರಿಗೆ ದನ ಕಾದದ್ದಕ್ಕೆ ಸಂಬಳವಿರುತ್ತಿರಲಿಲ್ಲ. ಮೂರು ಹೊತ್ತು ಊಟ, ವರ್ಷಕ್ಕೆರಡು ಜೊತೆ ಹಳೆಯ ಬಟ್ಟೆ ಕೊಟ್ಟರೆ ಮುಗಿಯಿತು. ಇದು ಜೀತ ಪದ್ದತಿಯ ಮತ್ತೊಂದು ಮುಖ.
ಮತ್ತೊಂದು ಹಿಂಬಾಗಿಲ‌ ಪ್ರವೇಶ. ತಳಸಮುದಾಯದವರು, ಕೂಲಿ ಕಾರ್ಮಿಕರು ಮುಂಬಾಗಿಲಿಗೆ ಬರುವ ಅವಕಾಶವಿರಲಿಲ್ಲ. ಅದೇನೇ ವ್ಯವಹಾರವಿದ್ದರೂ ಹಿಂಬಾಗಿಲಿಗೇ ಬರಬೇಕಿತ್ತು.
ಈಗ ಇವೆಲ್ಲಾ ಸುಧಾರಣೆಯಾಗಿವೆ. ಆದರೆ ಈ ಸಿನಿಮಾ ಅಂದಿನ ಈ ವ್ಯವಸ್ಥೆಗೆ ಸಶಕ್ತವಾಗಿ ಕನ್ನಡಿ ಹಿಡಿಯುತ್ತದೆ. ತಮಿಳು ಹಾಸ್ಯನಟ ಯೋಗಿ ಬಾಬುವಿನದ್ದು ಪರಕಾಯ ಪ್ರವೇಶ.
ಸಿನಿಮಾ Netflix ನಲ್ಲಿದೆ.


  • ಕಾರ್ತಿಕಾದಿತ್ಯ ಬೆಲಂಗೋಡು (ಸಾಫ್ಟ್ ವೆರ್ ಉದ್ಯೋಗಿ, ಲೇಖಕರು, ಸಾಹಿತ್ಯ ಪ್ರಿಯರು)

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW