ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ತ್ವಾಕಾಂಕ್ಷಿ ಯೋಜನೆ ‘ಮನೆಗೊಂದು ಗ್ರಂಥಾಲಯ’. ಅದಕ್ಕೆ ಈಗ ವರುಷ ದಾಟಿದ ಹರುಷ: ಸಾರ್ಥಕ ಸಂಭ್ರಮ.ಖ್ಯಾತ ಲೇಖಕರಾದ ಕೆ.ರಾಜಕುಮಾರ್ ಅವರು ‘ಮನೆಗೊಂದು ಗ್ರಂಥಾಲಯ’ದ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
5 ತ್ರೈಮಾಸಿಕಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗೃಹಕಚೇರಿಯಲ್ಲಿ ಮೊದಲ ಗ್ರಂಥಾಲಯದ ಆರಂಭ. ಜನೆವರಿ 13,2025 ರಂದು ನಡೆದ ಆ ಪ್ರತಿಷ್ಠಿತ ಕಾರ್ಯಕ್ರಮದ ಸೀಮಿತ ಆಹ್ವಾನಿತರಲ್ಲಿ ನಾನೂ ಒಬ್ಬನಾಗಿದ್ದೆ. ಇಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಪ್ರಾಧಿಕಾರ ಒಂದು ಕಾರ್ಯಕ್ರಮವನ್ನು ಆಯೋಜಿಸಿದೆ: ಪುಸ್ತಕಗಳೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಟಿ.ಎ.ಪಿ. ನಾಗರಾಜ ಅವರ ವಾಸಸ್ಥಾನದಲ್ಲಿ ಈ ಯೋಜನೆಯ ಅನುಷ್ಠಾನದ ಮುಂದುವರಿಕೆಯ ಭಾಗ. ನಾನು ಇಂದಿನ ಈ ಕಾರ್ಯಕ್ರಮದ ಓರ್ವ ಮುಖ್ಯ ಅತಿಥಿ.
ನನ್ನ ಬದುಕಿಗೆ ಮತ್ತು ಭಾವಕ್ಕೆ ಆಸರೆ ಪುಸ್ತಕ. ನನ್ನ ಅರಿವಿನ ಪರಿಧಿಗಳನ್ನು ವಿಸ್ತರಿಸಿದ್ದು ಪುಸ್ತಕ. ಹಾದಿಯಲ್ಲಿ, ಬೀದಿಯಲ್ಲಿ, ಊರೂರಲ್ಲಿ, ಕೇರಿ ಕೇರಿಯಲ್ಲಿ ಕನ್ನಡ ಪುಸ್ತಕಗಳನ್ನು ಮಾರಿ ಬದುಕನ್ನು ಕಟ್ಟಿಕೊಂಡವನು ನಾನು. ಕನ್ನಡವನ್ನು ಕಟ್ಟಲು, ಅಂತೆಯೇ ಕನ್ನಡಪರ ಸಂಘಟನೆಗಳನ್ನು ಆರ್ಥಿಕವಾಗಿ ಪೊರೆಯಲು ಅದೇ ಹಾದಿಯಲ್ಲಿ ಕ್ರಮಿಸಿದೆ. ಏಕಾಂಗಿಯಾಗಿ, ಏಕಮಾತ್ರ ಪುಸ್ತಕ ಡಾ. ಎಂ. ಚಿದಾನಂದಮೂರ್ತಿ ಅವರ ‘ಕನ್ನಡ ಸಂಸ್ಕೃತಿ ನಮ್ಮ ಹೆಮ್ಮೆ’ ಎಂಬ 32 ಪುಟಗಳ, ರೂ. 3/- ಮುಖಬೆಲೆಯ ಕೃತಿಯ 52, 000 ಪ್ರತಿಗಳನ್ನು ಮಾರಿ ಅದರಿಂದ ಬಂದ ಹಣದಿಂದ ಬೆಂಗಳೂರಿನ ಲಾಲ್’ಬಾಗ್ ಮುಂದೆ ಕುವೆಂಪು ಪ್ರತಿಮೆ ಹಾಗೂ ನ್ಯಾಷನಲ್ ಕಾಲೇಜು ವೃತ್ತದಲ್ಲಿ ಬಿಎಂಶ್ರೀ ಪ್ರತಿಮೆ ಸ್ಥಾಪನೆಗೊಳ್ಳಲು ಕಾರಣನಾದೆ. ಹಾಗಾಗಿ ಅದು ಇಂದಿಗೂ ಧನ್ಯತೆಯ ಭಾವ. ತಮ್ಮ ಸ್ವಂತ ದುಡಿಮೆಯಿಂದ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಡಿವಿಜಿ ಪ್ರತಿಮೆಯನ್ನು ಹಾಕಿಸಿದ ಪುಸ್ತಕ ಸಂತ ನಮ್ಮ ಟಿಎಪಿ ನಾಗರಾಜ್. ಇಂದಿನ ಕಾರ್ಯಕ್ರಮ ದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ನಮ್ಮೀರ್ವರನ್ನೂ ಜೊತೆಗೂಡಿಸಿದೆ.
ಕನ್ನಡ ಪುಸ್ತಕ ಪ್ರಾಧಿಕಾರದಂತಹ ಸರ್ಕಾರಿ ಸಂಸ್ಥೆ ಭಾರತದ 28 ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಬಿಟ್ಟರೆ ಬೇರೆಲ್ಲೂ ಇಲ್ಲ. ಇದರ ಮೂಲ ಪರಿಕಲ್ಪನೆ ಜಿ. ನಾರಾಯಣ ಅವರದು. ಅದನ್ನು ಅನುಷ್ಠಾನಕ್ಕೆ ತರಲು ಡಾ. ಎಂ. ಚಿದಾನಂದಮೂರ್ತಿ ಅವರು ಪ್ರಧಾನ ಸಂಚಾಲಕರಾಗಿದ್ದ ಸಾಹಿತಿಗಳ ಕಲಾವಿದರ ಬಳಗದ ಪಾತ್ರ ದೊಡ್ಡದು. ನಾನು ಆ ಬಳಗದ ಸಂಚಾಲಕನಾಗಿದ್ದೆ. ನಾವು ಜೊತೆಗೂಡಿ ಶಾಸಕರ ಭವನದ ಕದ-ಕದ ಬಡಿದು ಪುಸ್ತಕ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತರಬೇಕೆಂದು ಸರ್ಕಾರವನ್ನು ಒತ್ತಾಯಿಸುವ ನಮ್ಮ ಪತ್ರಕ್ಕೆ 54 ಶಾಸಕರ ಸಹಿ ಹಾಕಿಸಿದ್ದು ಇದೀಗ ಸವಿನೆನಪು. ಸರ್ಕಾರ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತರುವವರೆಗೆ ನಾವು ವಿರಮಿಸಲಿಲ್ಲ. ಅನುಚರಣಕ್ರಿಯೆ ನಡೆದೇ ಇತ್ತು.
ಏಪ್ರಿಲ್ 23ರಂದು ವಿಶ್ವ ಪುಸ್ತಕ ದಿನಾಚರಣೆ. ಅದರ ಹೊಸ್ತಿಲಲ್ಲಿ ಇಂದಿನ ಸಮಾರಂಭ ಆಯೋಜನೆಗೊಂಡಿದೆ. ನಾವೆಲ್ಲರೂ ಪುಸ್ತಕಗಳಿಗೆ ತೆರೆದುಕೊಳ್ಳೋಣ. ಅವು ಚಿಮ್ಮವ ಬೆಳಕಿನಿಂದ ಮನದ ಅಂಧಕಾರವನ್ನು ನೀಗಿಸಿಕೊಳ್ಳೋಣ. ಪುಸ್ತಕವೆಂದರೆ ಗಾಳಿ-ಬೆಳಕು. ಪುಸ್ತಕವೆಂದರೆ ಎದೆ ತೋಯಿಸುವ ತೊರೆ; ಮನ ಮೀಯಿಸುವ ಮಡು. ಪುಸ್ತಕವೆಂದರೆ ಹೊಸಬಾಳು. ಹೊಸಭಾವ; ಹೊಸಚೇತನ. ಪುಸ್ತಕವೆಂದರೆ ರಸಜೀವ.
ಮುದ್ರಿತ ಕೃತಿಗಳ ಎಡೆಗಿನ ಭಾವನಾತ್ಮಕ ನಂಟು ನಮ್ಮ ತಲೆಮಾರಿನವರಿಗೆ ಹೆಚ್ಚಿಗೆ ಇದೆ. ತಂತ್ರಜ್ಞಾನದಿಂದಾಗಿ ಇದೀಗ ಪುಸ್ತಕಕ್ಕೆ ಒಂದು ಹೊರಳು, ಒಂದು ಚಿಮ್ಮು ಎನ್ನುವ ಪರ್ವಕಾಲ; ಅಂತೆಯೇ ಸಂದಿಗ್ಧ ಕಾಲವೂ ಹೌದು. ಮುದ್ರಿತ ಪುಸ್ತಕವು ಇ ಪುಸ್ತಕ, ಧ್ವನಿಪುಸ್ತಕ, ಚಿತ್ರಪುಸ್ತಕ ಹೀಗೆ ಅಸೀಮ ರೂಪಗಳನ್ನು ಧಾರಣೆ ಮಾಡುತ್ತಿದೆ. ಭಾವನೆಗಳಿಗೆ ತುಸು ಕಡಿವಾಣ ಹಾಕಿ “ಅಂತಾದರು ಬಾ, ಇಂತಾದರು ಬಾ, ಎಂತಾದರು ಬಾ ಬಾ ಬಾ” ಎನ್ನೋಣ. “ಆವ ರೂಪದೊಳು ಬಂದರು ಸರಿಯೇ, ಆವ ವೇಷದೊಳು ನಿಂದರು ಸರಿಯೇ” ಅದು ಪುಸ್ತಕವೇ. ಪುಸ್ತಕವೆಂದರೆ ತಿಂಗಳ ಬೆಳಕು; ಪುಸ್ತಕವೆಂದರೆ ಬೆಳದಿಂಗಳ ಹೊಳಪು.
- ಕೆ. ರಾಜಕುಮಾರ್ – ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿಗಳು, ಬೆಂಗಳೂರು.
