ಮಾನಿನಿಯ ಮಾರ್ದನಿ : ಪದ್ಮನಾಭ. ಡಿ

ಫೋಟೋ ಸೆಷನ್ ಅಂತೂ ಮಾನಿನಿಯರದೇ ಸಿಂಹಪಾಲು. ಭಜನಾಮಂಡಲಿ, ಗಾಯನ ಸಮಾಜ, ಸಾಹಿತ್ಯದ ಕಾರ್ಯಕ್ರಮ, ಅಥವಾ ಇನ್ನಾವುದೇ ವೇದಿಕೆಯ ಕಾರ್ಯಕ್ರಮಗಳನ್ನು ನೋಡಿ ಫೇಸ್ಬುಕ್ ಬಳಗಗಳಲ್ಲೂ ಮಹಿಳೆಯರದೇ ಪಾಲ್ಗೊಳ್ಳುವಿಕೆ ಜಾಸ್ತಿ. ಹೆಣ್ಣು ಕೇವಲ ಆಕರ್ಷಣೆಯ ಕೇಂದ್ರವಾಗದೆ ಗೌರವದ ಕೇಂದ್ರವಾಗಬೇಕು. ಮಹಿಳಾ ದಿನದ ಪ್ರಯುಕ್ತ ಪದ್ಮನಾಭ. ಡಿ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…

ಮಹಿಳಾ ದಿನಾಚರಣೆ ಅಂದ ಕೂಡಲೇ ಪುರುಷ ಪ್ರಧಾನ ವ್ಯವಸ್ಥೆಯೇ ಇದೆ. ಮಹಿಳೆಯರ ಭಾವನೆಗಳಿಗೆ ಮನ್ನಣೆ ದೊರೆತಿಲ್ಲ. ಪ್ರಾತಿನಿಧ್ಯ ಇಲ್ಲ ಎನ್ನುವ ಬರಹಗಳು ಒಂದೆರಡಾದರೂ ಹರಿದಾಡುತ್ತವೆ. ಮಹಿಳೆ ಕಾಲಿಡದ ಕ್ಷೇತ್ರವೇ ಇಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರಿದ್ದರೂ ಇಂತಹ ಪೋಸ್ಟ್ ಗಳು ಒಂದೆರಡಾದರೂ ಇರುತ್ತವೆ.

ಹಾಗೆ ಸುಮ್ಮನೆ ಆಲೋಚಿಸಿ ನೋಡಿ ಯಾರದೇ ಮನೆಯಲ್ಲಿ ಇಂದು ತಿಂಡಿ ಏನು ಅಡುಗೆ ಮಾಡಬೇಕು ಎನ್ನುವ ತೀರ್ಮಾನವೂ ಮಹಿಳೆಯದೇ. ಮನೆಯ ಆಡಳಿತ ಬಹುತೇಕ ಹೆಂಗಸರ ಕೈಯಲ್ಲಿಯೇ. ಹಬ್ಬಹರಿದಿನಗಳ ಸಂಭ್ರಮ, ಓಡಾಟ ಎಲ್ಲಾ ಹೆಂಗಸರ ಕೈಯಲ್ಲಿ ಅಂದರೆ ಮಾನಿನಿಯರ ಮಾರ್ದನಿಯೇ ಗೋಚರಿಸುವುದು. ಹೊರಗಿನಿಂದ ಬಂದವರೂ ಆಂಟೀ ಇದ್ದಾರ ಅಂದುಕೊಂಡೇ ಒಳಗೆ ಬರುವುದು ಅಮ್ಮ ಎಲ್ಲಿ ಅಂತ ಕೇಳಿಕೊಂಡೇ ಮಕ್ಕಳು ಬರುವುದು.

ವಿವಾಹ ನಿಷ್ಕರ್ಷೆ ಶುಭ ಸಮಾರಂಭಗಳ ಮಾತುಕತೆಯಲ್ಲಿ ಮಹಿಳೆಯರದೇ ಅಗ್ರಪಾಲು. ಶಾಸ್ತ್ರ ಸಂಪ್ರದಾಯಗಳ ಆಚರಣೆ ಹೀಗಿರಬೇಕು ಎಂದು ಒತ್ತಿ ಹೇಳಿ ಅಂತೆಯೇ ನಡೆಸುವುದು ಮಹಿಳೆಯರೇ. ಫೋಟೋ ಸೆಷನ್ ಅಂತೂ ಮಾನಿನಿಯರದೇ ಸಿಂಹಪಾಲು. ಭಜನಾಮಂಡಲಿ, ಗಾಯನ ಸಮಾಜ, ಸಾಹಿತ್ಯದ ಕಾರ್ಯಕ್ರಮ, ಅಥವಾ ಇನ್ನಾವುದೇ ವೇದಿಕೆಯ ಕಾರ್ಯಕ್ರಮಗಳನ್ನು ನೋಡಿ ಫೇಸ್ಬುಕ್ ಬಳಗಗಳಲ್ಲೂ ಮಹಿಳೆಯರದೇ ಪಾಲ್ಗೊಳ್ಳುವಿಕೆ ಜಾಸ್ತಿ. ಹಾಗಾಗಿ ಪ್ರತಿದಿನವೂ ಮಹಿಳಾದಿನವೇ ಅಲ್ಲವೇ?

ಈ ಸಂದರ್ಭದಲ್ಲಿ ಇನ್ನೊಂದು ಮಾತು ಹೇಳಬೇಕೆನಿಸುತ್ತಿದೆ. ಹೆಣ್ಣು ಕೇವಲ ಅಲಂಕಾರಪ್ರಿಯೆ ಅಥವ ಸೌಂದರ್ಯದ ಸಂಕೇತವಲ್ಲ. ಬದಲಾಗಿ ಜೀವನೋತ್ಸಾಹದ ಪ್ರತೀಕವೂ ಹೌದು. ತನ್ನ ಕೈ ಹಿಡಿದ ಪತಿ ಕುಡುಕನೇ ಆಗಿರಲಿ ಇನ್ನಾವುದೇ ದುಶ್ಚಟಗಳಿಗೆ ಬಲಿಯಾಗಿರಲಿ ಹೆಣ್ಣು. ತನ್ನ ಕರ್ತವ್ಯ ಹಾಗೂ ಜವಾಬ್ದಾರಿಗಳಿಂದ ನುಣುಚಿಕೊಳ್ಳುವುದಿಲ್ಲ. ಮನೆಯ ನಿರ್ವಹಣೆಗೆ ಮಗವಿನ ಬೆಳವಣಿಗೆಗೆ ಟೊಂಕ ಕಟ್ಟಿ ನಿಲ್ಲುತ್ತಾಳೆ. ಕಷ್ಟಕಾರ್ಪಣ್ಯಗಳಿಗೆ, ವಿಫಲತೆಗೆ ಹೆದರಿ ಆತ್ಮಹತ್ಯೆಯ ದಾರಿ ಹಿಡಿಯುವುದಿಲ್ಲ. ಬೇಸರ ಕಳೆಯಲು ಕೂಡಿತ ಧೂಮಪಾನದಂತಹ ದುಷ್ಚಟಗಳಿಗೆ ಹೆಂಗಸರು ಬಲಿಯಾಗಿರುವುದು ಕಡಿಮೆ ಬಹುತೇಕ ಇಲ್ಲವೆಂದೇ ಹೇಳಬಹುದು.

ಹಿಂದಿನ ಕಾಲದಲ್ಲಿ ಅಂದಿನ ಸಾಮಾಜಿಕ ಪರಿಸ್ಥಿತಿಗಳಿಗನುಸಾರವಾಗಿ . ಕೆಲವೊಂದು ಕಟ್ಟುಪಾಡುಗಳನ್ನು ವಿಧಿಸಿದ್ದರೂ ಪೂಜ್ಯ ಭಾವನೆಯಿಂದಲೇ ಹೆಣ್ಣನ್ನು ನೋಡಿದ್ದಾರೆ. ಆ ಕಾಲದಲ್ಲೂ ತಮ್ಮ ಪ್ರತಿಭೆ ಸಾಮರ್ಥ್ಯಗಳಿಂದ ಒಂದು ವಿಶೇಷ ಸ್ಥಾನವನ್ನು ಗಳಿಸಿದವರಿದ್ದಾರೆ. ಉದಾಹರಣೆಗೆ ಕಿತ್ತೂರು ಚೆನ್ನಮ್ಮ , ಒನಕೆ ಓಬವ್ವ, ಬೆಳವಡಿ ಮಲ್ಲಮ್ಮ, ಅತ್ತಿಮಬ್ಬೆ.
ಇತ್ತೀಚಿನ ದಿನಗಳಲ್ಲಿ ಬದಲಾದ ಕಾಲಘಟ್ಟದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಮಾನಿನಿಯರ ಸಾಮರ್ಥ್ಯದ ಮಾರ್ದನಿ ಕೇಳುತ್ತಲೇ ಇದೆ. ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ ಮಹಿಳೆಯರಿದ್ದಾರೆ. ಇದಕ್ಕೆ ಮನೆಯವರ ಪ್ರೋತ್ಸಾಹದ ಜೊತೆಗೆ ಆವರ ಶ್ರಮ, ಕಷ್ಟ ಸಹಿಷ್ಣುತೆ ಮತ್ತು ಮನೋದಾರ್ಢ್ಯತೆಗಳೂ ಕಾರಣವಾಗಿವೆ.

ಹೆಣ್ಣು ಕೇವಲ ಆಕರ್ಷಣೆಯ ಕೇಂದ್ರವಾಗದೆ ಗೌರವದ ಕೇಂದ್ರವಾಗಬೇಕು ಎಂಬ ಅರಿವು ಮಹಿಳೆಯಲ್ಲೂ ಮತ್ತು ಪುರುಷರಲ್ಲೂ ಮೂಡಿದಾಗ ಮಹಿಳಾ ದಿನಾಚರಣೆ ಹೆಚ್ಚು ಸಾರ್ಥಕವಾಗುತ್ತದೆ/ ಎಲ್ಲ ಮಹಿಳಾಮಣಿಗಳಿಗೂ. ಅವರ ಅಂತರ್ವಾಣಿಗಳಿಗೂ ಮಹಿಳಾದಿನಾಚರಣೆಯ ಶುಭಹಾರೈಕೆಗಳು.


  • ಪದ್ಮನಾಭ. ಡಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW