ಡಾ.ಕೆ.ಸತ್ಯನಾರಾಯಣ ಅವರ ‘ಮನುಷ್ಯರು ಬದಲಾಗುವರೆ’ ಕಥಾಸಂಕಲನ ಕುರಿತು ಪ್ರೊ.ರಘುನಾಥ್ ಕೃಷ್ಣಮಾಚಾರ್ ಅವರು ಬರೆದ ಪುಸ್ತಕ ಪರಿಚಯ ತಪ್ಪದೆ ಓದಿ….
ಪುಸ್ತಕ : ಮನುಷ್ಯರು ಬದಲಾಗುವರೆ
ಲೇಖಕರು: ಕೆ.ಸತ್ಯನಾರಾಯಣ
ಪ್ರಕಾಶಕರು : ಗೀತಾಂಜಲಿ ಪ್ರಕಾಶನ
ವಿತರಕರು : ನುಡಿ ಪ್ರಕಾಶನ
ಬೆಲೆ : ೧೫೦
ಅಂಚೆ ವೆಚ್ಚ: ೨೦ರೂ
ಕನ್ನಡ ಕಥಾಸಾಹಿತ್ಯದಲ್ಲಿ ಸದಾ ತಮ್ಮ ಪ್ರಯೋಗಶೀಲತೆಗೆ ಹೆಸರಾದ ಕೆ.ಸತ್ಯನಾರಾಯಣ ಅವರ ಒಂಬತ್ತನೇ ಕಥಾಸಂಕಲನ ಇದು. “ಬದಲಾವಣೆ ಒಂದೇ ನಿತ್ಯ ಸತ್ಯ” ಎಂಬ ಮಾತನ್ನು ಪರೀಕ್ಷೆಗೆ ಒಳಪಡಿಸುವಂತೆ, ಕಥಾಸಂಕಲನದ ಹೆಸರಾದ “ಮನುಷ್ಯರು ಬದಲಾಗುವರೆ “ಎಂಬ ಶೀರ್ಷಿಕೆಯ ಧ್ವನಿಯನ್ನು ಪ್ರಧಾನ ವಸ್ತುವನ್ನಾಗಿರಿಸಿಕೊಂಡು, ಇಲ್ಲಿನ ಹಲವು ಕತೆಗಳು ರೂಪುಗೊಂಡಿವೆ. ಇದಕ್ಕೆ ಕಾರಣ ನಮ್ಮಲ್ಲಿ ಬದಲಾವಣೆ ಎನ್ನುವುದು ಮೇಲ್ಪದರದಲ್ಲಿ ಆದರೂ, ನಮ್ಮ ಅಂತರಂಗದ ಬದಲಾವಣೆ ಅಷ್ಟು ಸುಲಭದ ಕೆಲಸವಲ್ಲ ಎಂಬ ಲೇಖಕರ ಗ್ರಹಿಕೆ ( ಇದು ವಾಸ್ತವ ಕೂಡಾ ಹೌದು) ಇಲ್ಲಿನ ಕೆಲವು ಕತೆಗಳನ್ನು ಬಹುತೇಕ ನಿಯಂತ್ರಿಸುತ್ತದೆ. ಅದನ್ನು ಅವರು ವಿವಿಧ ಚೌಕಟ್ಟುಗಳ ಮೂಲಕ ಪರಿಶೀಲನೆಗೆ ಒಡ್ಡಿದ್ದಾರೆ. ಈ ಚೌಕಟ್ಟುಗಳನ್ನು ಮುಖ್ಯವಾಗಿ ಮೂರು ಭಾಗಗಳಲ್ಲಿ ಅಧ್ಯಯನ ಮಾಡಬಹುದು. ಮೊದಲನೆಯದು: ಅಂತರ್ಧರ್ಮೀಯ,( ಅಂತರರಾಷ್ಟ್ರೀಯ), ಎರಡನೆಯದು ಅಂತರ್ ಪ್ರಾಂತೀಯ ಮತ್ತು ಅಂತರ್ಜಾತೀಯ ವೈವಾಹಿಕ ಸಂಬಂಧಗಳು. ಮೊದಲ ಕತೆ ವಾಷಿಂಗ್ಟನ್ ಎದುರು. ಇದರಲ್ಲಿ ಬರುವ ಕನ್ನಡದ ಕಥಾನಾಯಕ ಮದುವೆ ಆಗಿರುವುದು ಕ್ರಿಶ್ಚಿಯನ್ ಧರ್ಮದ ಹೆಣ್ಣನ್ನು. ಅವನು ಹೇಳಿಕೊಂಡ ತನ್ನ ಕತೆಯಲ್ಲಿ ಯಾವುದೇ ವೈವಾಹಿಕ ಸಂಬಂಧ ನೂರರಲ್ಲಿ ಐವತ್ತೊಂದರಷ್ಟು ಮಾತ್ರ ಯಶಸ್ವಿಯಾಗಲು ಸಾಧ್ಯ. ಅದಕ್ಕಿಂತ ಕಡಿಮೆಯಾಗದಂತೆ ನೋಡಿಕೊಳ್ಳುವುದರಲ್ಲೆ ಅದರ ಸಾಫಲ್ಯವಿದೆ. ಅದಕ್ಕಿಂತ ಹೆಚ್ಚಿನದನ್ನು ನಿರೀಕ್ಷೆ ಮಾಡುವುದು ಅವಾಸ್ತವಿಕ ಎನ್ನುವ ನಿಲುವು ಅದರಿಂದ ಪ್ರಕಟವಾಗುತ್ತದೆ.

ಎರಡನೇ ಕತೆ ” ಪಂಜಾಬಿ ಸೊಸೆ” ಯಲ್ಲಿ ಕೂಡ ಇಡಿಯಾಗಿ ಅವಳನ್ನು ಅವರ ಕುಟುಂಬ ಒಪ್ಪಿಕೊಳ್ಳುವುದಿಲ್ಲ. ಮೇಲ್ನೋಟಕ್ಕೆ ಎಲೈಟ್ ಕುಟುಂಬದಂತೆ ಕಾಣಿಸಿಕೊಂಡರೂ ,ಅದರ ಪೊಳ್ಳುತನವನ್ನು,ಕಥಾನಾಯಕ ಅವಳನ್ನು ಕೂಡಲು ಹಿಂಜರಿಯುವ ಸಂದರ್ಭದಲ್ಲಿ ಎದ್ದು ಕಾಣುತ್ತದೆ.
ಮೂರನೆಯ ಕತೆ .’ಎರಡನೇ ಅಳಿಯ ‘ ತನ್ನ ಜಾತಿಯವನಾದ್ದರಿಂದ ಕೊನೆಗಾಲದಲ್ಲಿ ಅವನ ಮನೆಯಲ್ಲಿಯೇ ಇದ್ದು ಸಾಯಲು ಇಷ್ಟ ಪಡುವ ಕಥಾನಾಯಕನ ಮೂಲಕ ಇದು ಪ್ರಕಟವಾಗುತ್ತದೆ. ಮೇಲಿನ ಮೂರೂ ಕತೆಗಳು ಹೊರಡಿಸುವ ಧ್ವನಿ ಎಂದರೆ ತಮ್ಮ ತಮ್ಮ ಜಾತಿ, ಧರ್ಮ, ರಾಜ್ಯದವರಲ್ಲಿ ಮಾತ್ರ ಸಂಬಂಧಗಳು ಇಡಿಯಾಗಿ ಸಾಫಲ್ಯಗೊಳ್ಳುತ್ತವೆ. ಆದ್ದರಿಂದ ಆಧುನಿಕತೆ ತಂದಿರುವ ಬದಲಾವಣೆ ಮೇಲ್ಪದರದಲ್ಲಿ ಮಾತ್ರ ಎಂದು ಇವು ಸ್ಥಾಪಿಸುತ್ತವೆ.
ಎರಡನೇ ಬಗೆಯ ಕತೆಗಳಲ್ಲಿ ಯಾವ ಸಂಬಂಧಗಳು ಕೂಡ ಮೇಲ್ನೋಟಕ್ಕೆ ಕಾಣುವಂತೆ ಸರಳವಾದುದಲ್ಲ , ಸಂಕೀರ್ಣವಾದುದು ಎನ್ನುವ ನಿಲುವನ್ನು ಕಾಣಬಹುದು. ಇದನ್ನು ತಂದೆ ಮಕ್ಕಳ ಸಂಬಂಧಿಸಿದಂತೆ ಪರಿಶೀಲಿಸಲಾಗಿದೆ. ‘ಫೋಟೋ ವಲಸೆ ‘ಕತೆಯಲ್ಲಿ ಬರುವ ತಂದೆ ಮಗನ ಸಂಬಂಧದಲ್ಲಿ ಇದನ್ನು ನೋಡಬಹುದು. ಕೇವಲ ಒಂದು ವರ್ಷಕ್ಕೆ ತಂದೆಯನ್ನು ಕಳೆದುಕೊಂಡ ಮಗ ಅವರ ಕಾರ್ಯಗಳಲ್ಲಿ ಇಟ್ಟಿದ್ದ ಫೋಟೋವನ್ನು , ನಂಜನಗೂಡು ಜಯಮ್ಮ ಬಂದು ಕೇಳಿದಾಗ ಕೊಟ್ಟು ಬಿಡುತ್ತಾನೆ. ಇದಕ್ಕೆ ಕಾರಣ ತಂದೆಯ ಕುರಿತು ಉಳಿದ ಜನರು ಆಡುತ್ತಿದ್ದ ಹೀನಾಯದ ಮಾತುಗಳು. ಆದರೆ ತನ್ನ ತಂದೆಯ ಸಮಾಧಿ ಮಾಡುವ ಸಮಯದಲ್ಲಿ ಇದ್ದ ದಿಂಬನ್ನು ಮತ್ತೆ ಮತ್ತೆ ಸರಿಪಡಿಸಿ ಬರುವುದು ,ಅವನಿಗೆ ತಂದೆಯ ಕುರಿತು ಇದ್ದ ಒಂದು ಬಗೆಯ ಮೋಹದ ಅಭಿವ್ಯಕ್ತಿಯಾಗಿದೆ. ‘ಪುನರ್ ಮುದ್ರಣ’ ಕತೆಯಲ್ಲಿ ಬರುವ ಕಥಾನಾಯಕ ರಂಗಪ್ಪನವರು ತನ್ನ ತಂದೆಯನ್ನು ಕುರಿತು ಬರೆದ ಪುಸ್ತಕಕ್ಕೆ ಯಾವ ಹೊಸದನ್ನು ಅಳವಡಿಸಲು ಸಿದ್ದವಿಲ್ಲ ಮಾತ್ರವಲ್ಲ, ಅದರಲ್ಲಿ ತಾನು ಬರೆದಿರುವುದು ಅವರ ವ್ಯಕ್ತಿತ್ವದ ಒಂದು ಮುಖ ಮಾತ್ರ ಎಂದು, ಆದ್ದರಿಂದ ಅದರ ಪುನರ್ ಮುದ್ರಣಕ್ಕೆ ಕೂಡ ಅನುಮತಿ ನೀಡುವುದಿಲ್ಲ. ಬರಹದ ಮೂಲಕ ಸತ್ಯದ ಅನಾವರಣ ಸಾಧ್ಯವಿಲ್ಲ ಎಂಬ ನಿಲುವು ಇದರ ಮೂಲಕ ಪ್ರಕಟವಾಗುತ್ತದೆ. ಸಾವಿನಂತಹ ಸಾವನ್ನು ಕೂಡ ಮಾಧ್ಯಮಗಳು ಸೆಲೆಬ್ರಿಟಿಗಳನ್ನು ಬಳಸಿಕೊಂಡು ವಾಣಿಜ್ಯೀಕರಣಗೊಳಿಸುವ ಅಮಾನವೀಯ ನಡೆಯನ್ನು ಹನುಮಂತಾಚಾರ್ ಬರೆದ ವಿಲ್ ಮೂಲಕ ಅನಾವರಣ ಮಾಡಿದ್ದಾರೆ.

(‘ಮನುಷ್ಯರು ಬದಲಾಗುವರೆ’ ಕಥಾಸಂಕಲನ ಲೇಖಕ ಕೆ.ಸತ್ಯನಾರಾಯಣ)
‘ಶಿವಕಾಮಿ ಬದಲಾಗುವಳೆ’ ಕತೆ ವಿದ್ಯಾವಂತ ದಲಿತ ಜನಾಂಗ ಇಂದಿಗೂ ಎದುರಿಸುವ ಮಾನಸಿಕ, ಭೌತಿಕ ಸವಾಲುಗಳ ಪೃಥಕ್ಕರಣ ಮಾಡುತ್ತದೆ. ಯಶಸ್ವಿ ವಕೀಲೆಯಾದ ನಂತರ ಕೂಡ ತನ್ನ ಮಗನಿಗೆ ದಲಿತ ಎಂಬ ಕಾರಣಕ್ಕೆ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಅವಕಾಶ ದೊರೆಯುತ್ತಿಲ್ಲ ಎನ್ನುವ ಅವಳ ದೂರಿನಲ್ಲಿ ಇದನ್ನು ಗುರುತಿಸಬಹುದು. ಮೇಲ್ವರ್ಗದವರೆ ಅವಳ ನೆರವನ್ನು ಕೋರುವ ಸನ್ನಿವೇಶ ,ಬದಲಾದ ಸ್ಥಿತಿಗೆ ಕನ್ನಡಿ ಹಿಡಿಯುವ ಮೂಲಕ ಆಗಿರುವ ಪಲ್ಲಟವನ್ನು ದಾಖಲಿಸುತ್ತದೆ.
ಅವರ ‘ಸಲಿಂಗಕಾಮ ಮತ್ತು ಮುಷ್ಟಿ ಮೈಥುನ’ ಕತೆಯಲ್ಲಿ ಈಗ ಅದನ್ನು ಕಾನೂನು ಬದ್ಧಗೊಳಿಸಿದ ಹಿನ್ನೆಲೆಯಲ್ಲಿ , ಯಾವುದನ್ನು ನಾವು ಇಲ್ಲಿಯವರೆಗೂ ವಿಕೃತ ಎಂದು ಭಾವಿಸಿದ್ದೆವೊ, ಅದರ ಹಿಂದೆ ಕೂಡ ಪ್ರೀತಿಯೆ ಇರುವುದು ಎಂಬ ಸಕಾರಾತ್ಮಕ ನಿಲುವು ಪ್ರಕಟವಾಗುತ್ತದೆ.
ಶೀರ್ಷಿಕೆಯ ‘ಮನುಷ್ಯರು ಬದಲಾಗುವರೆ ‘ಎನ್ನುವ ಪ್ರಶ್ನೆಗೆ ಧನಾತ್ಮಕ ಋಣಾತ್ಮಕ ಎರಡೂ ಉತ್ತರಗಳು ಮೇಲಿನ ಕತೆಗಳು ಕೊಡುತ್ತವೆ. ಸಮಕಾಲೀನ ಭಾರತೀಯ ಸಮಾಜ ಎದುರಿಸುತ್ತಿರುವ ಕೆಲವು ತಲ್ಲಣಗಳನ್ನು ,ಸಂದಿಗ್ಧ ಸ್ಥಿತಿಯನ್ನು, ಮೇಲಿನ ಕತೆಗಳ ಮೂಲಕ ಸೆರೆಹಿಡಿದಿರುವುದು ಈ ಕಥಾಸಂಕಲನದ ವೈಶಿಷ್ಟ್ಯವಾಗಿದೆ.ನನ್ನ ಮೊದಲ ಓದಿಗೆ ಸಿಕ್ಕ ಕೆಲವು ಅಂಶಗಳನ್ನು ಮಾತ್ರ ಮೇಲಿನ ಟಿಪ್ಪಣಿ ಒಳಗೊಂಡಿದೆ.
ಪುಸ್ತಕ ಕಳಿಸುವ ಮೂಲಕ ಇಂತಹ ಒಳ್ಳೆಯ ಕಥಾಸಂಕಲನವನ್ನು ಓದುವ ಅವಕಾಶ ಕಲ್ಪಿಸಿದ ಗೆಳೆಯರಾದ ಡಾ.ಕೆ.ಸತ್ಯನಾರಾಯಣ ಅವರಿಗೆ ವಂದನೆ ಮತ್ತು ಅಭಿನಂದನ. ಇದನ್ನು ಗೀತಾಂಜಲಿ ಪ್ರಕಾಶನದವರು ಪ್ರಕಟಿಸಿದ್ದಾರೆ. ಪುಸ್ತಕಕ್ಕಾಗಿ 9886249762 , ಅಥವಾ ವಿತರಕರು ನುಡಿ ಪ್ರಕಾಶನ 80733321530 ಇವರನ್ನು ಆಸಕ್ತರು ಸಂಪರ್ಕಿಸಬಹದು.
- ಪ್ರೊ.ರಘುನಾಥ್ ಕೃಷ್ಣಮಾಚಾರ್ (ಪ್ರೊಫೆಸರ್ ರಾಮನಿರಂಜನ್ ಝುನ್ಝುನ್ವಾಲ ಕಾಲೇಜು)
