ಬಾಲ್ಯದಲ್ಲಿ ತಂದೆ ತಾಯಿ ಆಸರೆ, ಯೌವನದಲ್ಲಿ ಗಂಡನ ಆಸರೆ, ವೃದ್ಯಾಪ್ಯದಲ್ಲಿ ಮಗನ ಆಸರೆ …ಪ್ರತಿ ಹಂತದಲ್ಲಿಯೂ ಹೆಣ್ಣಿಗೆ ಆಗಲಿ ಅಥವಾ ಗಂಡಿಗೆ ಆಗಲಿ ಒಬ್ಬರ ಆಸರೆ ಬೇಕು. ಅದನ್ನು ವಿರೋಧಿಸಿ ನಡೆದರೆ ಜೀವನ ಶೂನ್ಯ ಅನ್ನುತ್ತಾರೆ ಲೇಖಕಿ ಶೋಭಾ ನಾರಾಯಣ ಹೆಗಡೆ ಅವರು, ತಪ್ಪದೆ ಮುಂದೆ ಓದಿ…
ಹೌದು, ಇವತ್ತಿನ ಕಾಲದಲ್ಲಿ ಗಂಡುಮಕ್ಕಳಿಗೆ ಮದುವೆ ಆಗೋದೇ ತುಂಬಾ ಕಷ್ಟ. ಬಡತನ, ಕೃಷಿ ಕೆಲಸ, ಕೂಡು ಕುಟಂಂಬ, ಒಂದಾ ಎರಡಾ? ಅಡೆತಡೆಗಳು. ಹಾಗೇ ಹೆಣ್ಣು ಮಕ್ಕಳು ಹೆಚ್ಚಿನ ಓದು, ಶಿಕ್ಷಣ, ಕೆರಿಯರ್ ಅಂತ ಮದುವೆ ಮುಂದೂಡಿ, ನಂತರ ವಯಸ್ಸು ಹೆಚ್ಚಿದಂತೆ ಒಂಟಿಯಾಗೇ ಇರಲು ಇಚ್ಚಿಸಿ ಬಿಡುತ್ತಾರೆ. ಆದರೆ ವಿಷಯ ಇದಲ್ಲ, ಬಿಸಿ ರಕ್ತ ಇದ್ದಾಗ, ಇದು ಒಂದು ವಿಷಯವೇ ಅಲ್ಲ. ಕೈಯಲ್ಲಿ ಕೆಲಸ, ಹಣ, ವಯಸ್ಸು ಇದ್ದಾಗಿನ ಖದರ್ ಬೇರೆ, ಜೊತೆಯಲ್ಲಿ ಇರುವವರು, ಮನೆ ಮಂದಿ, ಎಲ್ಲಾ ಕೇರ್ ಮಾಡುವಾಗ ಏನೂ ಅನಿಸದು.
ಆದರೆ ವಯಸ್ಸು ಹೆಚ್ಚಿದಂತೆ ಮನೆ ಮಂದಿ ಅವರವರ ಸಂಸಾರ, ಕಾರ್ಯಗಳ ಜೊತೆಯಲ್ಲಿ ಅವರವರ ಬದುಕಿನಲ್ಲಿ ಬಿಜಿ ಆದಾಗ ಜೊತೆಯಲ್ಲಿ ಇರುವವರು ಕೂಡ ಅವರವರ ಬದುಕಿನ ದಾರಿ ಕಂಡುಕೊಂಡಾಗ, ಏಕಾಂತ ಕಾಡೋಕೆ ಶುರು ಆಗುತ್ತದೆ. ಯಾರೇ ಇದ್ದರೂ ಜೊತೆಯಲ್ಲಿ ಸಂಗಾತಿಯ ಸಾಂಗತ್ಯವಿಲ್ಲದ ಜೀವನ ಉಪ್ಪು ಇಲ್ಲದ ಅಡುಗೆಯಂತೆ.”ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ” ಎಂಬ ಗಾದೆಯೇ ಇದೆ. ಸಂಸಾರ ಎಂದ ಮೇಲೆ, ಸರಸ, ವಿರಸದ ಸಮರಸ ತುಂಬಿದ ಸಾಗರವದು. ಹೊಂದಾಣಿಕೆ ಇರಲೀ, ಇಲ್ಲದೆಯೂ ಇರಲಿ, ಆದರೂ ನಡುವೆ ಮಧುರತೆಯ ಅನುಬಂಧದ ಗಂಟಿನ ನಂಟು ಇದ್ದೇ ಇರುತ್ತದೆ…ಖಂಡಿತವಾಗಿಯೂ,ಗಂಡಿಗೆ ಹೆಣ್ಣು, ಹೆಣ್ಣಿಗೆ ಗಂಡು ಅತ್ಯವಶ್ಯಕ… ಮಾನಸಿಕವಾಗಿಯೂ ಕೂಡ ತನ್ನ ಗಂಡ,ಅಥವಾ ತನ್ನ ಹೆಂಡತಿ ತನ್ನ ಜೊತೆಯಲ್ಲಿ ಇದಾಳೆ ಎಂಬ ಒಂದು ನೆಮ್ಮದಿಯ ಅನಿಸಿಕೆಯೇ,ಬದುಕಿನಲ್ಲಿ ಚಂದವಾಗಿ ಬಾಳಿಬಿಡಬಹುದು…
ಫೋಟೋ ಕೃಪೆ : google
ಅಂದ, ಚಂದ, ಹಣ ಏನೂ ಮಾಡದು. ಗುಣ ಮುಖ್ಯ. ವಯಸ್ಸು ಮುಗಿದು ಹೋಗುವ ಮುನ್ನ, ಅಹಂಕಾರ, ಹಠ,ಬಿಟ್ಟು, ಸರಿ ಹೊಂದುವ ಸಂಗಾತಿ ಆರಿಸಿಕೊಂಡು ಬಾಳು ಕಟ್ಟಿಕೊಂಡು ಬದುಕುವ ತೀರ್ಮಾನ ತುಂಬಾ ಅತ್ಯುತ್ತಮವಾದುದು. ಹೀಗೇ ಇರಬೇಕು, ಹಾಗೇ ಇರಬೇಕು, ಅದು ಸರಿ ಇಲ್ಲ, ಇದು ಸರಿ ಇಲ್ಲ.. ಎನ್ನುವ ಮೊಂಡು ವಾದದ ಬದುಕು, ಕೊನೆಯಲ್ಲಿ ಏನೂ ಇಲ್ಲದಂತೆ ಕೊರಗುವ ಹಾಗೇ ಮಾಡಿ ಬಿಡುತ್ತದೆ. ಹೇಳುವವರು, ಉಪದೇಶ ನೀಡುವವರು, ತುಂಬಾ ಸಿಗುತ್ತಾರೆ. ಆದರೆ ಕೊನೇತನಕ ಜೀವನದ ಜೊತೆಯಲ್ಲಿ ಯಾರೂ ನಿಲ್ಲರು. ಮದುವೆ ಆಗದೆಯೇ ಏಕಾಂತ ಜೀವನ ತುಂಬಾ ಕಷ್ಟಕರವಾದುದು. ವಯಸ್ಸು ಹೆಚ್ಚಿ, ವೃದ್ಧಾಪ್ಯ ಸಮೀಪಿಸಿದಂತೆ, ಖಾಯಿಲೆ ಬಿದ್ದಾಗಲೂ ಅನಿಸುತ್ತದೆ. ಗಂಡ ಇದ್ದರೆ ಅಥವಾ ಹೆಂಡತಿ ಇದ್ದರೆ ಅದೆಷ್ಟು ಚೆನ್ನಾಗಿ ನನ್ನ ನೋಡಿಕೊಳ್ತಾ ಇದ್ರು ಅಂತ. ತನ್ನದು ನನ್ನದು ಎಂಬ ಭಾವದ ಆಪ್ತತೆ ಗಂಡ, ಹೆಂಡತಿಯ ನಡುವಿನ ಚಂದದ ನಂಟಿನಲ್ಲೇ ಕಾಣ ಸಿಗುವುದು.
ಇದು ಓದುವಾಗ ತುಂಬಾ ಉಪದೇಶದ ಮಾತು ಎನಿಸಬಹುದೇನೋ. ಆದರೆ ಸ್ವತಃ ನೋಡಿದಾಗ ಹುಟ್ಟಿದ ಬರಹವಿದು. ನಮ್ಮ ಪಕ್ಕದ ಮನೆಯ ಮಹಿಳೆ ಮಧ್ಯಮ ವಯಸ್ಸು. ಸುಮಾರು 45 ರ ಎಡಬಲವಿರಬಹುದು. ಮದುವೆ ಆಗಿಲ್ಲ. ಅವರ ಮನೆ, ಬಂಧು ಬಳಗ ಬೇರೆ ರಾಜ್ಯದಲ್ಲಿ ಇರುವುದು. ಇಲ್ಲಿ ಅವರು ನೌಕರಿಯ ಸಲುವಾಗಿ ಇದ್ದಾರೆ . ಅಂದು ತುಂಬಾ ಮಳೆ ಹೊಯ್ದಿದ್ದರಿಂದ ವಾತಾವರಣ ತುಂಬಾ ಕೋಲ್ಡ್ ಇತ್ತು. ಅವರು ಅಸ್ತಮಾ ಖಾಯಿಲೆಯಿಂದ ಬಳಲುವವರು .ಅವರ ನಿರ್ಲಕ್ಷ್ಯದಿಂದ Inhalers ಸ್ಪ್ರೇ ಬೇರೆ ಅವರ ಬಳಿ ಖಾಲಿ ಆಗಿತ್ತು. ಉಸಿರಾಡೋಕೆ ತುಂಬಾ ಕಷ್ಟ ಪಡ್ತಾ ಇದ್ರು, ರಾತ್ರಿ ಎರಡು ಗಂಟೆ ಆಗಿರಬಹುದು. ನಮ್ಮ ಮನೆಯ ಕದ ತಟ್ಟಿದಾಗ ಅವರಿಗೆ ಮಾತನಾಡಲೂ ಶಕ್ತಿ ಇರಲಿಲ್ಲ. ಅವರ ಅವಸ್ಥೆ ಕಂಡು ಎದ್ನೋ ಬಿದ್ನೋ ಅಂತ ನಾನು, ನನ್ನ ಯಜಮಾನರು ನಮ್ಮ ಕಾರಿನಲ್ಲಿ ಅವರು ಸದಾ ಟ್ರೀಟ್ಮೆಂಟ್ ಗೆ ಹೋಗ್ತಾ ಇದ್ದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಡ್ಮಿಟ್ ಮಾಡಿದೆವು. ಅಲ್ಲಿ ಸರಿಯಾದ ಸಮಯಕ್ಕೆ ಅವರಿಗೆ ಆಕ್ಸಿಜನ್ ಟ್ರೀಟ್ಮೆಂಟ್ ದೊರಕಿ ಇಳಿದು ಹೋದ ಫಲ್ಸ್ ಕೂಡ ಏರಿ, ಒಂದು ತಹಬಂಧಕ್ಕೆ ಬರೋತನಕ ಬರೋಬ್ಬರಿ ಬೆಳಿಗ್ಗೆ ಆರು ಗಂಟೆ ಆಗಿತ್ತು. ಅಂತೂ ಸರಿ ಹೋದರಲ್ಲ ಎನ್ನುವ ತೃಪ್ತಿ ನಮಗೆ. ನಾವು ಮಾಡಿದೀವಿ ಎನ್ನುವ ಅಹಂಕಾರದ ಮಾತಲ್ಲ ಅಥವಾ ಕೊಚ್ಚಿ ಕೊಳ್ಳುವ ಕೆಟ್ಟ ಸಾಹಸ ಕೂಡ ಇದಲ್ಲ. ಜಸ್ಟ್ ನಮ್ಮ ಕರ್ತವ್ಯ, ನಾವು ಮಾಡಿದೀವಿ. ಬೆಂಗಳೂರು ಅಂತಲ್ಲ ಯಾವುದೇ ಸಿಟಿಯಲ್ಲಿ ಆದರೂ ಅಕ್ಕಪಕ್ಕದ ನಂಟು ತುಂಬಾ ಕಡಿಮೆಯೇ. ಯಾರೂ, ಯಾರನ್ನೂ ಹಚ್ಚಿ ಕೊಳ್ಳರು. ಅವರವರ ಬದುಕಿನ ಧಾವಂತ ಅವರವರಿಗೇ. ನಾವು ಹಳ್ಳಿಯಿಂದ ಬಂದವರಾಗಿದ್ರಿಂದ ದಿಲ್ಲಿಗೆ ಹೋದರೂ ಹಳ್ಳಿ ಬುದ್ಧಿ ಬಿಡೆವು. ಹಾಗಾಗಿ ಆವತ್ತು ಅವರ ಪ್ರಾಣ ಉಳಿಯಿತು. ದೇವರ ದಯೆ ಕೂಡ…
ಮದುವೆ ಅನ್ನುವುದು ಒಂದು ಪವಿತ್ರ ಬಂಧನ, ದೈಹಿಕ, ಮಾನಸಿಕ, ಬದುಕಿನ ಎಲ್ಲಾ ಮಜಲುಗಳಿಗೂ ಒಂದು ಚಂದದ ಪಿಲ್ಲರ್ ಎನ್ನಬಹುದು. ಯೌವ್ವನದ ಬಿಸಿ ರಕ್ತದ ಸೊಕ್ಕಿನಲ್ಲಿ ಕಳೆದು ಹೋಗುವ ಬದುಕು, ಮುಪ್ಪಿನ ಕಾಲದಲ್ಲಿ ಬೇಕೆಂದರೂ ಮರಳಿ ಬಾರದು. ನಮಗೆ ಒಪ್ಪಿತವಾದ ಅಥವಾ ಕೆಲವೊಂದು ಹೊಂದಾಣಿಕೆ ಮೇರೆಗೆ ಆದರೂ ಮದುವೆ ಆಗಿ, ಸಂಗಾತಿ ಜೊತೆಯಲ್ಲಿ ಬಾಳಿದರೆ ಎಲ್ಲಾ ರೀತಿಯಲ್ಲೂ ಒಳ್ಳೆಯದು.
ಫೋಟೋ ಕೃಪೆ : google
ನನ್ನ ಪರಿಚಿತರ ಮಗಳು ಓದಿ, ನೌಕರಿ ಹಿಡಿದು ಬೆಂಗಳೂರು ನಗರದಲ್ಲಿ ವಾಸ ಮಾಡತೊಡಗಿದಳು.ವಯಸ್ಸು ಈಗ ಮೂವತ್ತು, ಮೂವತ್ತೈದು.. ಮದುವೆಯೇ ಬೇಡ ಎಂಬ ಹಠ. ಹೆತ್ತವರು ತುಂಬಾ ಬೇಡಿಕೊಂಡಾಯಿತು. ಆದರೂ ಅವಳಿಗೆ ಮದುವೆಯ ಒಲವಿಲ್ಲ. ಕಾರಣ ಗೊತ್ತಿಲ್ಲ. ಅವಳ ಬದುಕೀಗ ತುಂಬಾ ಚಂದ. ಹೆತ್ತವರಿದಾರೆ ಜೊತೆಯಲ್ಲಿ. ಆದರೆ ಆನಂತರದ ಬದುಕು? ಹೇಗೆ ? ಎಷ್ಟು ದಿನ ಜೊತೆಯಲ್ಲಿ ಇದ್ದಾರು ಹೆತ್ತವರು ? ಕಾಲನ ಕರೆ ಬರುವ ತನಕ ಮಾತ್ರ ಅಮೇಲೇ?.
ಹಾಂ…ಕೆಲವರು ಕೇಳಬಹುದು, ಮದುವೆ ಆದಮೇಲೆ ನಟ್ಟ ನಡುವೆ ತೀರಿ ಹೋದರೆ?. ಒಂಟಿ ಬಾಳೇ ಅಲ್ಲವೇ? ಅಥವಾ ಡಿವೋರ್ಸ್ ಆದರೆ?. ನಿಜ…ಅದು ಹಣೆಯ ಬರಹದ ಮೇಲೆ ಅವಲಂಬಿತ. ಎಕ್ಸಿಡೆಂಟ್ ಆಗುತ್ತೆ ಅಂತ ಬಸ್ ಪ್ರಯಾಣ ನಿಲ್ಲಿಸಿ ಬಿಡ್ತೀವಾ?. ಇಲ್ಲ ಅಲ್ವಾ?…ಒಂದು ನಂಬಿಕೆ ನಮಗೆ, ಎಕ್ಸಿಡೆಂಟ್ ಆಗೋದು ಬಿಡೋದು ನಮ್ಮ ಹಣೇಬರಹ. ಹಾಗೇ ಮುಂದಿನ ಬದುಕಿನ ಆಗುಹೋಗುಗಳ ಅರಿವು ಯಾರಿಗೂ ಇಲ್ಲ. ಆದರೆ ಒಂದು ನಂಬಿಕೆಯ ಮೇಲೆ ಬದುಕು ಕಟ್ಟಿಕೊಂಡು ನಡೆಯಬೇಕು. ನಂಬಿಕೆಯೇ ಜೀವನಕ್ಕೆ ಭದ್ರಬುನಾಧಿ ಕೂಡ ಮದುವೆ ಎನ್ನುವುದು ಒಂದು ಋಣಾನುಬಂಧದ ಅಡಿಯಲ್ಲಿ ನಿಂತ ಪವಿತ್ರ ಬಂಧ. ಕೆಲವೊಮ್ಮೆ ಅದು ಬಳಿ ಸುಳಿಯದು. ಇನ್ನೊಮ್ಮೆ ಅದು ಸುಳಿದರೂ ಕಾಲಿನಿಂದ ಒದೆದು ದೂರ ತಳ್ಳುವರು.
- ಶೋಭಾ ನಾರಾಯಣ ಹೆಗಡೆ