‘ಮಾರಿಮುತ್ತುರವರ ಹಿಂದಿ ಪ್ರೇಮ’ ಸಣ್ಣಕತೆ

ಮೂರು-ನಾಲ್ಕು ತಲೆಮಾರಿನ ಯುವಕರು ಹಿಂದಿ ಬಗ್ಗೆ ಅಸಡ್ಡೆ ಬೆಳೆಸಿಕೊಂಡರು. ಸರಿಯಾಗಿ ಓದಲಿಲ್ಲ. ಕನಿಷ್ಠ ಹಿಂದಿಯನ್ನು ಕೂಡ ಕಲಿಯಲಿಲ್ಲ. ಇದರಿಂದ ತುಂಬಾ ಉದ್ಯೋಗಾವಕಾಶಗಳು ತಮಿಳು ಯುವಕರಿಗೆ ತಪ್ಪಿ ಹೋದವು. ತಮಿಳು ನಾಡಿಗೇ ದೀರ್ಘಾವಧಿಯಲ್ಲಿ ನಷ್ಟವಲ್ಲವೇ ಎಂದು ಕೇಳಿದರು ಮಾರಿಮುತ್ತು ಅವರು, ಕೆ. ಸತ್ಯನಾರಾಯಣ ಅವರ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…

ತಿರುನಲ್ವೇಲಿ ಪ್ರಾಂತ್ಯದ ರಾಜಪಾಳ್ಯಂ ಸೀಮೆಯ ಜಮೀನ್ದಾರರು ರಾಜಕಾರಣಿಗಳ ಪೈಕಿಯವರಾದ ಮಾರಿಮುತ್ತು ಹಿರಿಯರು, ವಿದ್ಯಾವಂತರು, ಅನುಭವಿಗಳು. ಮೊದಲ ತಲೆಮಾರಿನ ದ್ರಾವಿಡ ಚಳುವಳಿಯ ನಾಯಕರಿಗೆ ಆಪ್ತರಾಗಿದ್ದವರು. ಮನಸ್ಸು ಮಾಡಿದ್ದರೆ, ಶಾಸಕರಾಗಬಹುದಿತ್ತು, ಮಂತ್ರಿಯಾಗಬಹುದಿತ್ತು, ಸಚೇತಕರಾಗಬಹುದಿತ್ತು. ದಕ್ಷಿಣ ತಮಿಳು ನಾಡು, ಗುಜರಾತ್‌, ಸೌರಾಷ್ಟ್ರದ ತುಂಬಾ ಹರಡಿದ್ದ ಜವಳಿ ಉದ್ಯಮ, ಸಿಮೆಂಟ್‌ ಕಾರ್ಖಾನೆಗಳಿಗೆಲ್ಲ ನಾಯಕತ್ವ, ಮಾರ್ಗದರ್ಶನ ನೀಡಲು ಕೂಡ ಒಬ್ಬರು ಬೇಕಲ್ಲ. ಅಲ್ಲದೆ, ವರ್ಷದಲ್ಲಿ ಮೂರು ತಿಂಗಳು ಮಾರಿಮುತ್ತುರವರು ಯುರೋಪಿಗೆ ಕಡ್ಡಾಯವಾಗಿ ಹೋಗಲೇಬೇಕು, ವಿಶ್ವಕಪ್‌ ಫುಟ್‌ಬಾಲ್‌ ಪಂದ್ಯಗಳನ್ನು ನೋಡಲೇಬೇಕು.

ನಾನು ಮಧುರೈ ಕಡೆ ಪ್ರವಾಸಕ್ಕೆ ಹೋದಾಗಲೆಲ್ಲ, ಅವರಿಗೆ ಬಿಡುವಿದ್ದರೆ ಸಂಜೆಯ ಭೋಜನ, ಪಾನಗೋಷ್ಠಿಗೆ ಸಿಗುತ್ತಿದ್ದರು. ರಾಜಕೀಯ ಸಂಪರ್ಕದ ಬಲವಿದ್ದರೂ ಎದುರು ಪಾರ್ಟಿಯವರ ಪ್ರತಿಭೆ, ಸಾಧನೆಗಳನ್ನು ವ್ಯವಧಾನವಾಗಿ ಗಮನಿಸುವಷ್ಟು ಸೂಕ್ಷ್ಮತೆ ಮಾರಿಮುತ್ತು ಅವರಿಗಿತ್ತು. ದ್ರಾವಿಡ ಪಕ್ಷಗಳ ರೀತಿ-ನೀತಿ, ರಾಷ್ಟ್ರೀಯ ಪಕ್ಷಗಳ ರೀತ-ನೀತಿ ಮಾತುಕತೆಯಲ್ಲಿ ಬರುತ್ತಿತ್ತು. ನನ್ನ ಬಹುಪಾಲು ಅಭಿಪ್ರಾಯಗಳನ್ನು ಅವರು ಒಪ್ಪುತ್ತಿರಲಿಲ್ಲ. ಅದರಿಂದೇನು ಸ್ನೇಹ-ವಿಶ್ವಾಸಕ್ಕೆ ಚ್ಯುತಿ ಬಂದಂತೆ ಕಾಣಲಿಲ್ಲ.

ಇಂತಹ ಮಾರಿಮುತ್ತುರವರು ನನಗೆ ಒಂದು ದಿನ ಬಲವಾದ ಶಾಕ್‌ ಕೊಟ್ಟರು. ಭಾಷಾ ನೀತಿಯ ಬಗ್ಗೆ ಮಾತನಾಡುತ್ತಿದ್ದೆವು. ಹಿಂದಿ ಚಳುವಳಿ, ಭಾಷಾ ವಿರೋಧ, ಎಲ್ಲವೂ ಒಂದು ಹಂತದ ನಂತರ ನಮಗೇ ಪೆಟ್ಟು ಕೊಟ್ಟಿತು ಎಂದುಬಿಟ್ಟರು. ವ್ಯಂಗ್ಯಕ್ಕೇನಾದರೂ ಈ ಮಾತು ಹೇಳುತ್ತಿರಬಹುದೇ ಎಂದು ನಾನು ಅವರನ್ನು ಸೂಕ್ಷ್ಮವಾಗಿ ಗಮನಿಸಿದೆ. ಮುಖದಲ್ಲಿ ವಿಷಾದ ಭಾವವಿತ್ತು. ಅವರ ಗಮನವೆಲ್ಲ ಗ್ಲಾಸಿನಲ್ಲಿದ್ದ ವಿಸ್ಕಿಯೊಳಗೆ ಕರಗುತ್ತಿದ್ದ Ice Cube ಕಡೆಗಿತ್ತು. ಅವರು ವ್ಯಂಗ್ಯಕ್ಕೇ ಹೇಳಿರಲಿ, ಯಾವುದೇ ಕಾರಣಕ್ಕಾದರೂ ಹೇಳಿರಲಿ, ಮಾನ್ಯರ ಮನಸ್ಸಿನ ಆಳದಲ್ಲಿರುವುದನ್ನು ತಿಳಿದುಕೊಳ್ಳಬೇಕು ಅನ್ನುವ ಆಸೆಯಲ್ಲಿ ನಾನೇ ಸಮಾಧಾನವಾಗಿ ವಿನಯದಿಂದ ವಿವರಿಸಲು ಕೇಳಿದೆ.

ನೋಡಿ, ಮೂರು-ನಾಲ್ಕು ತಲೆಮಾರಿನ ಯುವಕರು ಹಿಂದಿ ಬಗ್ಗೆ ಅಸಡ್ಡೆ ಬೆಳೆಸಿಕೊಂಡರು. ಸರಿಯಾಗಿ ಓದಲಿಲ್ಲ. ಕನಿಷ್ಠ ಹಿಂದಿಯನ್ನು ಕೂಡ ಕಲಿಯಲಿಲ್ಲ. ಇದರಿಂದ ತುಂಬಾ ಉದ್ಯೋಗಾವಕಾಶಗಳು ತಮಿಳು ಯುವಕರಿಗೆ ತಪ್ಪಿ ಹೋದವು. ಉದ್ಯೋಗ ಸಿಕ್ಕ ಕೆಲವರು ಡೆಲ್ಲಿ, ಪಂಜಾಬ್‌ ಕಡೆ ಕೆಲಸ ಮಾಡುವಾಗ ಅವರ ಸ್ವಘೋಷಿತ ಹಿಂದಿ ವಿರೋಧದಿಂದಾಗಿ ಬಡ್ತಿ, ವರ್ಗಾವಣೆಯಲೆಲ್ಲ ತೊಂದರೆ ಅನುಭವಿಸಬೇಕಾಯಿತು. ಒಟ್ಟಾಗಿ ಇದರಿಂದ, ತಮಿಳು ನಾಡಿಗೇ ದೀರ್ಘಾವಧಿಯಲ್ಲಿ ನಷ್ಟವಲ್ಲವೇ ಎಂದು ಕೇಳಿದರು.

ಹಾಗೇಕೆ ನೋಡಬೇಕು? ಉತ್ತರ ಭಾರತದಲ್ಲಿ ದಕ್ಷಿಣದವರ ಅಸ್ಮಿತೆ ಹರಡಲು, ಬೇರೂರಲು, ದ್ರಾವಿಡ ಪಕ್ಷಗಳವರ ಕಾಣಿಕೆ ತುಂಬಾ ಇದೆ ಎಂಬ ನನ್ನ ಸಮಾಧಾನದ ಮಾತನ್ನು ಮಾರಿಮುತ್ತುರವರು ಒಪ್ಪಲೇ ಇಲ್ಲ.

ನೋಡಿ, ನಾನು ಯಾವ ದೃಷ್ಟಿಕೋನದಿಂದ ಹೇಳುತ್ತಿದ್ದೇನೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳುತ್ತಿಲ್ಲ. ನೀವು ಹೇಳುವುದು ನಿಜವಿರಬಹುದಾದರೂ, ಇದಕ್ಕೆಲ್ಲ ಬೆಲೆ ಕೊಡಬೇಕಾದವರು, ಕೊಟ್ಟವರು ಯಾರು? ತಮಿಳರೇ ಅಲ್ಲವೇ? ಈ ಕಾಲಾವಧಿಯಲ್ಲಿ ನಮಗಾದ ನಷ್ಟವನ್ನು ಕೂಡ ನೀವು ಗಮನಿಸಬೇಕಲ್ಲವೇ? ಎಂದು ನನ್ನನ್ನು ದೃಷ್ಟಿಸಿ ನೋಡಿದಾಗ, ಅವರ ಕಣ್ಣುಗಳಲ್ಲಿ ಅಸಹಾಯಕತೆ ಮತ್ತು ಸುಸ್ತು ಇಣುಕುತ್ತಿತ್ತು.


  • ಕೆ. ಸತ್ಯನಾರಾಯಣ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading