ನೊಂದ ಮನುಷ್ಯ ಪರಿಹಾರ ಅರಸಿ ತನ್ನ ಸಮಸ್ಯೆಯನ್ನು ಬೇರೆಯವರ ಬಳಿ ಹೇಳಿಕೊಳ್ಳುವುದಿಲ್ಲ, ಆಲಿಸುವ ಕಿವಿಗಳಿದ್ದರೆ ಅಷ್ಟೇ ಸಾಕು ಸಾಂತ್ವನ ಸಿಕ್ಕಂತೆ, ಪಶುವೈದ್ಯರಾದ ಡಾ. ಎನ್.ಬಿ.ಶ್ರೀಧರ ಅವರ ಬರೆದಿರುವ ‘ಸಮಸ್ಯೆಗೊಂದು “ಕಿವಿ” ಬೇಕು’ ತಪ್ಪದೆ ಮುಂದೆ ಓದಿ…
ಇದು ನಾನು ಪಶುವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿನಿಲಯದಲ್ಲಿ ಸುಮಾರು 5 ವರ್ಷಗಳ ಕಾಲ ಮುಖ್ಯ ಕ್ಷೇಮ ಪಾಲಕನಾಗಿದ್ದಾಗ ನಡೆದ ಘಟನೆ. ಪ್ರತಿ ತಿಂಗಳು ಎಂದಿನಂತೆ ಸಂಬಳವನ್ನು ಇರುವ ಸುಮಾರು 40 ನೌಕರರಿಗೆ ವಿತರಣೆ ಮಾಡಿ ಯಾವುದೋ ಕಚೇರಿ ಕೆಲಸದಲ್ಲಿ ತಲ್ಲೀನನಾಗಿದ್ದೆ. ಸ್ವಲ್ಪ ಹೊತ್ತು ಬಿಟ್ಟು ತಲೆ ಎತ್ತಿ ನೋಡಿದರೆ ಬಾಗಿಲ ಪಕ್ಕ ಯಾರೋ ಸರಿದಾಡಿದ ಹಾಗಾಯಿತು. ವಿದ್ಯಾರ್ಥಿಗಳು ಅವರ ವಿವಿಧ ಪರಿಹಾರವಿಲ್ಲದ ಸಮಸ್ಯೆಗಳನ್ನು ಹೇಳಿಕೊಳ್ಳುವುದು ಸಹಜ. ” ಯಾರದು… ಬನ್ರೀ ಒಳಗೆ.. ಅಂದೆ. ಮಧ್ಯಮ ವಯಸ್ಸಿನ ಮಹಿಳೆಯೊಬ್ಬಳು ನಿಧಾನವಾಗಿ ಅಳುಕುತ್ತಾ ಒಳಗೆ ಬಂದಳು. ಮಹಳೆಯು ಧರಿಸಿದ ಭಟ್ಟೆ ಬರೆ, ವೇಷ ಭೂಷಣ ನೋಡಿದರೇ ಗೊತ್ತಾಗುತ್ತಿತ್ತು ಅವಳು ಬಡವಿ, ನಮ್ಮ ವಿದ್ಯಾರ್ಥಿನಿಲಯದಲ್ಲಿ ಇತ್ತೀಚೆಗೆ ಪಾತ್ರೆ ತೊಳೆಯಲು ನಮ್ಮ ವಿದ್ಯಾರ್ಥಿ ನಿಲಯದ ಆಡಳಿತ ಸಮಿತಿಯವರು ನೇಮಿಸಿದವಳೆಂದು. ಅದರಲ್ಲೂ ಆಕೆಯ ಒಬ್ಬನೇ ಮಗ ಯಾವುದೋ ಅಪಘಾತದಲ್ಲಿ ನಿಧನನಾಗಿದ್ದ ಎಂದು ಯಾರೋ ನೌಕರರು ಹೇಳಿದ್ದರಿಂದ ಆಯಮ್ಮನ ಮೇಲೆ ಎಲ್ಲರಿಗೂ ಒಂತರಾ ಅನುಕಂಪ ಇತ್ತು. “ಏನಮ್ಮಾ.. ನನ್ನಿಂದ ಏನಾಗಬೇಕಿತ್ತಮ್ಮಾ…? .. ಏನಾದರೂ ದುಡ್ಡು ಬೇಕಿತ್ತಾ ..??… ಅಂದೆ.
ಈ ರೀತಿ ಬರುವವರು ಸಾಮಾನ್ಯವಾಗಿ ಯಾವುದೋ ಹಣಕಾಸು ಸಹಾಯಕ್ಕೆ ಬರುವವರು ಎಂದೇ ನಮ್ಮೆಲ್ಲಾ ಭಾವನೆ. ಅಲ್ಲದೇ ನಮ್ಮ ಅನೇಕ ನೌಕರರಲ್ಲಿ ಕೆಳಸ್ಥರದಲ್ಲಿ ಕೆಲಸ ಮಾಡುವವರು ಅವರ ಇವರ ಹತ್ತಿರ ಕೈಸಾಲ ಮಾಡಿ, ಸಂಬಳ ಬಂದಾಗ ಅವರಿಗೆಲ್ಲಾ ನೀಡಿ ಪುನ: ಹಣ ಪಡೆದು ಮುಂದಿನ ತಿಂಗಳಿಗೆ ಅಡ್ವಾನ್ಸ್ ಸಾಲಗಾರರಾಗುವುದು ನನಗೆ ಸಾಮಾನ್ಯ. “ಆ ತರಾ ದುಡ್ಡೇನೂ ಬೇಡಾ ಸಾರ್… ನಿಮ್ ಹೆಲ್ಪ್ ಬೇಕಿತ್ತು.. ಅಂದಳು. ಸರಿ, ಹೇಳಮ್ಮಾ.. ಅಂದೆ. ” ಸಾರ್… ನನ್ನ ಗಂಡ ಎಲ್ಲಾ ದುಡ್ಡು ತೆಗೆದು ಕೊಂಡು ಹೋಗ್ಬಿಟ್ಟಾ ಸಾರ್.. ಅದಕ್ಕೆ…….. ಅಂದ್ಳು. ಹಾಗಿದ್ರೆ ದುಡ್ ಬೇಕಾ? ಅಂದೆ. ಇಲ್ಲ ಸಾರ್.. ನನ್ನ ಖರ್ಚಿಗೆ ಇಟ್ಕಂಡಿದ್ದಿನಿ.. ತೊಂದ್ರೆ ಇಲ್ಲ ಸಾರ್.. ಊಟ ತಿಂಡಿ ಇಲ್ಲೇ ಕಳಿತದಲ್ಲಾ ಸಾರ್.. ಮಗಾ ಬ್ಯಾರೆ ಇಲ್ಲಾ…. ಎನು ಖರ್ಚು ನಂಗೆ ? ಎಂದು ಕಣ್ಣೀರಾದಳು.
ಫೋಟೋ ಕೃಪೆ : healthplace
” ತಗಂಡೋಗಿರೋ ದುಡ್ನಿಲ್ಲಿ ನನ್ ಗಂಡ ಕುಡಿತಾನೆ ಸಾರ್.. ಸಂಜೆ ಮನೆಗೆ ಬಂದು ಹೊಡಿತಾನೆ ಸಾರ್… ಅಂದಳು. ನನಗೆ ನಖ ಶಿಖಾಂತ ಉರಿದುಹೋಯ್ತು. ಬಡ್ಡಿ ಮಗ!!.. ಹೆಂಡತಿ ದುಡ್ ತೆಗೆಂಡು ಹೋಗೋದಲ್ದೇ ಕುಡಿತಾನಾ.. ಕುಡಿದು ಹಾಳಾಗ್ ಹೋಗ್ಲಿ.. ದುಡಿಯುವ ಹೇಂಡ್ತಿನ ಹೊಡಿತಾನಾ? ಏನ್ಮಾಡೋಣ ಇವಂಗೆ. ಮುಂದಿನ ತಿಂಗಳಿ0ದಾ ಸಂಬಳ ನೀನೇ ಇಟ್ಕೋ.. ಹಾಸ್ಟೆಲ್ ಹತ್ರ ಬಂದ್ರೆ ಕಾಲ್ ಮುರಿತೀವಿ ಅಂದ್ ಹೇಳು ಅವಂಗೆ!!” ಅಂತ ರೇಗಿದೆ.
ತುಸು ಗಾಬರಿಯಾದ ಆಕೆ ” ಅಯ್ಯಯ್ಯೋ ಸಾರ್.. ಹಾಗ್ ಮಾಡ್ಬೇಡಿ . ಪಾಪ ಅವ ಒಳ್ಳೆಯವ ಸಾರ್.. ಮಗೀಗ್ ತೀರ್ಕಂಡ್ತಲ್ಲ ಅಂತ ಬೇಜಾರು ಸಾರ್.. ಸ್ವಲ್ಪ ಹಾಕಿ ಮರಿಲೀ ಸಾರ್.. ಎಂದು ಎಲ್ಲಾ ಭಾರತೀಯ ನಾರಿಯರ ಉದಾರತೆ ತೋರಿದಳು. “ಸರಿಯಮ್ಮಾ .. ನೀನೇ ಹೀಗೆ ಹೇಳಿದ ಮೇಲೆ ಹೇಗೆ? ಆದ್ರೂ ಆತ ಕುಡಿದು ತೆಪ್ಗೆ ಬಿದ್ಕಳದು ಬಿಟ್ಟು ಹೊಡಿತಾನಲ್ಲ! .. ಮನುಷ್ಯಾನ ಅವ..! ಅಂತ ಸರ್ ಅಂತ ಸಿಟ್ಟಾದೆ.
ಸಾರ್ … ಆತ ಮೊದಲು ಹೊಡಿತಿರ್ಲಿಲ್ಲಾ … .. ಆತ ಒಳ್ಳೆಯವನೇ.. ನಾನೇ ಅವಂಗೆ ಪಿರಿ ಪಿರಿ ಮಾಡ್ತೀನಿ.. ಸಿಟ್ಟಲ್ಲಿ ಎರಡು ಬಾರಿಸಿ ಬಿದ್ಕಳ್ತಾನೆ.. ನನ್.. ಮೇಲೆ ಕೋಪ ತೋರಿಸೋದ್ ಬಿಟ್ ಇನ್ನರ್ ಮೇಲೇ ಕೋಪ ತೋರಿಸ್ತಾನೆ ಸಾರ್. ಪಾಪ ಒಳ್ಳೆಯವನು ಸಾರ್.. ಅಂದಳು. ಸರಿ.. ನನ್ ಕೆಲಸ ಏನಿಲ್ಲವಲ್ಲಾ. ಪಾತ್ರೆ ತೊಳೆಯಲು ಹೋಗಮ್ಮಾ ಅಂದೆ. ಆಯಮ್ಮ ನಿಂತ ಜಾಗದಲ್ಲಿ ಸ್ವಲ್ಪವೂ ಕದಲದೆ….” ಸಾರ್ ಇನ್ನೊಂದ್ ವಿಷಯ.. ಯಾರಲ್ಲೂ ಹೇಳ್ಬಾರದು ಸಾರ್. ಅಂದ್ಳು.. ಯಾರದೋ ನೌಕರರ ಮೇಲೆ ಇವಳ ಕಂಪ್ಲೇ0ಟ್ ಅಂದು ಕೊಂಡು .. ಬೇಗ ..ಬೇಗ.. ಹೇಳಮ್ಮಾ ಅಂದೆ. ಸಾರ್.. ನನ್ನ ಗಂಡ0ಗೆ ಕುಡಿಯುವ, ಹೊಡೆಯುವ ಚಟ ಸರಿ ಸಾರ್.. ಆದ್ರೆ ಮತ್ತೊಬ್ಳ ಸಾವಾಸ ಮಾಡಿದ್ದನೆ ಸಾರ್ !! .. ಅದಕ್ಕೆ ನನ್ ಕಂಡ್ರೆ ಆಗ್ದು ಅವಂಗೆ ಅಂದ್ಳು.. ಇದು ಯಾಕೋ ವೈಯಕ್ತಿಕ ಮಟ್ಟಕ್ಕೆ ಇಳಿತಲ್ಲಾ… ಸರಿ ಹೇಳಮ್ಮಾ ನನ್ನಿಂದ ಏನಾಗಬೇಕು? .. ಅವನ್ ಒದ್ದು ಸಂಜಯ ನಗರ ಪೋಲೀಸ್ ಠಾಣೆಗೆ ಹಾಕಾಕ್ಕೆ ಹೇಳಲೆ?.. ಇನ್ಸ್ಪೆಕ್ಟರು ಗೊತ್ತಿದ್ದಾರೆ.. ಅಂದೆ.. ಅಯ್ಯಯ್ಯೋ !!!.. ಸಾರ್ … ಎಲ್ಲಾದರೂ ಉಂಟೆ? ನನ್ ಗಂಡ ಅಲ್ವಾ ಅವ್ನು.. ಇಪ್ಪತ್ತು ವರ್ಷದಿಂದ ನೋಡ್ಕಂಡು ಬಂದಿದ್ದೀನಿ.. ಅವನದೇನು ತಪ್ಪಿಲ್ಲಾ ಸಾರ್.. ಆ ಮುಂಡೆ ಅವಳಲ್ಲಾ… ಅವಳೇ ಮಾಟಗಾತಿ..!!!.. ಅವಳೆ ಮಂತ್ರ ಹಾಕವ್ಳೇ.. ಕೆಟ್ ಹೆಂಗ್ಸು.. ಅಂದು ತಪ್ಪೆಲ್ಲಾ ಅವಳದೇ ಅಂತ ಕಥೆ ಹೇಳ್ತಾ ಹೋದಳು…
ಫೋಟೋ ಕೃಪೆ : healthplace
ಇದ್ದಕ್ಕಿದ್ದ ಹಾಗೇ ನನಗೆ ಸಹಸ್ರ ಕ್ಯಾಂಡಲ್ ಬಲ್ಬು ಉರಿದ ಹಾಗೇ ಜ್ಞಾನೋದಯವಾಯಿತು !!!. ಈ ಅಮ್ಮನಿಗೆ ಬೇಕಿದ್ದು ಅವಳ ಸಮಸ್ಯೆಗೆ ಪರಿಹಾರವಲ್ಲ. ಬದಲಿಗೆ ಅವಳ ಸಮಸ್ಯೆ ಕೇಳಲು ಒಂದು ಕಿವಿ.. ಅಷ್ಟೇ.. ಅದಕ್ಕೇ ನಾನು ಪರಿಹಾರದ ದಾರಿ ಹುಡುಕಲು ಪ್ರಯತ್ನಿಸ್ತಿದ್ದ ಹಾಗೇ ಅವಳೇ ಅದಕ್ಕೆ ಉತ್ತರ ಹೇಳುತ್ತಾಳೆ ಅಂತ..
ಹೌದಲ್ಲವೇ!!??. ಅನೇಕರು ನಮ್ಮ ಹತ್ತಿರ ಸಮಸ್ಯೆ ಹೇಳಿಕೊಳ್ಳುತ್ತಾರೆ.. ಅದಕ್ಕೆ ಅವರಿಗೇನೂ ಪರಿಹಾರ ಬೇಕಿರುವುದಿಲ್ಲ. ನಮ್ಮಲ್ಲಿ ಅದಕ್ಕೆ ಪರಿಹಾರವೂ ಇರುವುದಿಲ್ಲ. ಯಾರದೋ ಒಬ್ಬರ “ಕಿವಿ” ಗೆ ಹಾಕಿದರೆ ಅದೆ ಅವರಿಗೆ ಸಮಾಧಾನ. ಇದನ್ನು ನಾವು ಆಸಕ್ತಿಯಿಂದ ಕೇಳಿಸಿ ಕೊಳ್ಳಬೇಕು ಅಷ್ಟೇ!!. ಮುಂದೆ ನಾನು ಪ್ರತಿ ತಿಂಗಳು ವೇತನ ನೀಡುವಾಗ ಕಾಲು ಗಂಟೆ ನನ್ನ “ಕಿವಿ”ಯನ್ನು ಅವಳಿಗೆ ಮೀಸಲು ಇಡುತ್ತಿದ್ದೆ. ಅವಳ “ಪರಿಹಾರ” ಬೇಕಾಗದ ಅನೇಕ ಸಮಸ್ಯೆಗಳಿಗೆ ಕಿವಿಯಾದೆ. ಮುಂದೊAದು ಆಕೆ ಕೆಲಸ ಬಿಟ್ಟಳು ಅಂತ ಮೂರ್ತಿ ಹೇಳಿದ.. ನಂತರದ ವಿಷಯ ನಾನರಿಯೆ..
ನಿಮಗೂ ಈ ರೀತಿಯ ಒಂದಲ್ಲ ಒಂದು ರೀತಿಯ ಅನುಭವವಾಗಿರಬೇಕಲ್ಲವೇ?… ಆಗಿರಲೇ ಬೇಕು!!. ಯಾಕೆಂದರೆ ನೀವೆಲ್ಲಾ ನನ್ನ ಹಾಗೇ ಸಾಮಾನ್ಯ ಮನುಷ್ಯರು…. ಯಾಕೋ ಇದನ್ನು ನಿಮ್ಮ ಹತ್ತಿರ ಹೇಳಬೇಕೆನಿಸಿತು.. ಹೇಳಿದೆ.. ನೀವೆಲ್ಲರೂ ಪ್ರತಿ ದಿನ ಯಾರಿಗೋ “ಒಳ್ಳೆ ಕಿವಿ” ಯಾಗ್ತಿರಾ ತಾನೇ!!!.
ಡಾ. ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ ,ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.