ಅಂತರಾಷ್ಟ್ರೀಯ ಖ್ಯಾತಿಯ ಸಸ್ಯ ವಿಜ್ಞಾನಿ, ಹಾಸ್ಯ ಲೇಖಕ, ಬಹು ಭಾಷಾ ವಿದ್ವಾಂಸ, ಪಿಟೀಲು ವಾದಕ ಹಾಗೂ ಶ್ರೇಷ್ಠ ಅಧ್ಯಾಪಕರಾದ ಬಿಜಿಎಲ್ ಸ್ವಾಮಿಯವರ ‘ಮೀನಾಕ್ಷಿಯ ಸೌಗಂಧ’ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ ಹೆಸರು: ಮೀನಾಕ್ಷಿಯ ಸೌಗಂಧ.
ಲೇಖಕರು: ಬಿ.ಜಿ.ಎಲ್ ಸ್ವಾಮಿ.
ವಸಂತ ಪ್ರಕಾಶನ ಬೆಂಗಳೂರು.
ಮುದ್ರಣದ ವರ್ಷ: ೨೦೧೮ & ೨೦೨೪.
ಪುಟಗಳು: ೨೪೪.
ಬೆಲೆ: ರೂ. ೨೫೦.
ಅಂತರಾಷ್ಟ್ರೀಯ ಖ್ಯಾತಿಯ ಸಸ್ಯ ವಿಜ್ಞಾನಿ, ಹಾಸ್ಯ ಲೇಖಕ, ಬಹು ಭಾಷಾ ವಿದ್ವಾಂಸ, ಪಿಟೀಲು ವಾದಕ ಹಾಗೂ ಶ್ರೇಷ್ಠ ಅಧ್ಯಾಪಕರಾದ ಬಿಜಿಎಲ್ ಸ್ವಾಮಿಯವರು ಅಮೆರಿಕಾದ ಹಾವರ್ಡ್ ವಿಶ್ವ ವಿದ್ಯಾಲಯದಲ್ಲೂ ಸಂಶೋಧಕರಾಗಿ ಕೆಲಸ ಮಾಡಿದ್ದರು. ಇವರು ಸಾಹಿತ್ಯ ದಿಗ್ಗಜರಾದ ಡಿ.ವಿ.ಜಿ ಅವರ ಸುಪುತ್ರರೂ ಹೌದು. ಪ್ರಸ್ತುತ ಈ ಕೃತಿಯು ಅವರು ಅನೇಕ ಪತ್ರಿಕೆಗಳಲ್ಲಿ ಬರೆದ ಬಿಡಿ ಲೇಖನಗಳ ಸಂಗ್ರಹವಾಗಿದೆ.
‘ಆದರ್ಶ ಗೆಳೆತನ’ ಎಂಬ ಕಥೆಯೊಂದನ್ನು ಇಲ್ಲಿ ಅವರು ಪ್ರಸ್ತಾಪಿಸಿದ್ದಾರೆ.ಒಬ್ಬ ಕುಂಟ ಹಾಗೂ ಕುರುಡ ಒಬ್ಬರ ನ್ನೊಬ್ಬರು ಸಂಧಿಸಿ, ತಮ್ಮ ಕಷ್ಟ- ಸುಖಗಳನ್ನು ಹೇಳಿ ಕೊಂಡರು. ಅದರ ನಿವಾರಣೋಪಾಯಗಳನ್ನೂ ಹುಡುಕಿ ಕೊನೆಗೆ ಈ ಮಾತಿಗೆ ಒಪ್ಪಿ ಕೊಂಡರು. ಕುರುಡನು ಕುಂಟನನ್ನು ಹೊತ್ತು ಕೊಂಡು ತಿರುಗುವುದು. ಇದಕ್ಕೆ ಪ್ರತಿಯಾಗಿ ಕುಂಟನು ಕುರುಡನಿಗೆ ತಿರುಗಾಡುವುದಕ್ಕೆ ದಾರಿ ತೋರಿಸುವುದು.! ಸಾಂಖ್ಯ ವೇದಾಂತದಲ್ಲಿ ಪ್ರಕೃತಿ -ಪುರುಷರ ಕಥೆಯೂ ಇದೇ ತರ ಎಂದು ವಿಧುರ ಹೇಳಿದ್ದನ್ನು ಸ್ಮರಿಸಿದ್ದಾರೆ.

ವೈಜ್ಞಾನಿಕನ ಕನ್ನಡಕವನ್ನು ಹಾಕಿಕೊಂಡು ‘ರಾಮಚಂದ್ರ ಚರಿತ ಪುರಾಣವನ್ನು ಓದಿ ತಾವು ಬರೆದ ಕೆಲವು ಉಪಮೆಗಳನ್ನು ಓದುಗರು ಟೀಕೆ ಎಂದು ಭಾವಿಸ ಬಾರದೆನ್ನುತ್ತಾ… ಹಾಸ್ಯವಾಗಿ ಗೆದ್ದಲು ಹುಳುವಿನ ಕಾಟಕ್ಕೆ ಏನು ಮದ್ದು ?ಅನ್ನುವ ವಿಷಯದ ಬಗ್ಗೆ ಹಾಗೂ ಅಂತರ ಬುಡಕಟ್ಟಿನವರ ಮದುವೆಗಳ ಕುರಿತು ಬರೆದಿದ್ದಾರೆ. ದೊಡ್ಡವರಾಗುತ್ತಿರುವಾಗ ವಿಕಾಸವಾಗುವ ಗುಣಗಳೆಲ್ಲವೂ ಆರ್ಜಿತ ಗುಣ. ಇಲ್ಲಿ ಎಲ್ಲವೂ ಕೂಡ ಅನುವಂಶೀಯತೆಯೂ ಅಲ್ಲ. ಅದು ಸನ್ನಿವೇಶ ಪ್ರಭಾವಗಳಿಂದಲೂ ಉಂಟಾಗ ಬಹುದು. ಸಂಪಾದಿಸಿದ ಗುಣಗಳು ಅದೊಂದು ಜೀವಿಯ ಸ್ವತ್ತು ಮಾತ್ರ. ಅದರ ಸಂತಾನಕ್ಕೆ ಅವು ಶೂನ್ಯ ಸಂಪಾದನೆಯಷ್ಟೇ ಎಂಬ ಅಂಶದ ಬಗ್ಗೆ ಸಸ್ಯ -ಕೀಟ ಹಾಗೂ ಮನುಷ್ಯ ಸಂತಾನದ ಕುರಿತು ಅನೇಕ ಅಚ್ಚರಿಯ ಮಾಹಿತಿಗಳನ್ನು ತೆರೆದಿಟ್ಟಿದ್ದಾರೆ.
ಜೀವಕೋಟಿಯಲ್ಲಿ ಹಸಿವಿಗಿರುವ ಪ್ರಾಮುಖ್ಯತೆ, ಒಂದನ್ನೊಂದು ತಿಂದು ಬದುಕುವ ವಿಶ್ವ ನಿಯಮ ಹಾಗೂ ಬೆಂಗಳೂರಿನ ಲಾಲ್ ಬಾಗ್ ಉದ್ಯಾನದಲ್ಲಿರುವ ಕದಂಬ ಗಿಡದ ಬಗ್ಗೆ ತಿಳಿಸುತ್ತಾ, ಪುರಾಣದ ಕೆಲವು ಶ್ಲೋಕದಲ್ಲಿ ಇರುವ ಈ ಗಿಡದ ಗುಣದ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ಬರೆದಿದ್ದಾರೆ. ಪಂಚಾವತಾರ ಎಂಬ ಲೇಖನದಲ್ಲಿ ಅವತಾರಗಳನ್ನೆತ್ತಿ ದವನು ವಿಷ್ಣು ಮಾತ್ರ ಅಲ್ಲ. ಸಸ್ಯಶಾಸ್ತ್ರದಲ್ಲೂ ಅವತರಿಸಿದ ಸೂರ್ಯಕಾಂತಿ ಹಾಗೂ ಇತರೇ ಬಗೆಯ ಹೂವುಗಳು, ನಾನಾ ಬಗೆಯ ತರಕಾರಿಗಳನ್ನು ಇಲ್ಲಿ ಉದಾಹರಿಸಿದ್ದಾರೆ.
ಪ್ರಜನನ ವಸ್ತುವು ಮೊದಲಿನಿಂದಲೂ ವಂಶವನ್ನನುಸರಿಸಿ ಬಂದಿದೆ. ಅದು ಮತ್ತೆ ಪ್ರತಿ ಸಂತಾನದಲ್ಲೂ ಹೊಸದಾಗಿ ಉತ್ಪನ್ನವಾಗುವುದಿಲ್ಲ ಎಂಬ ಸಿದ್ಧಾಂತವನ್ನು ಅವರು
ಪ್ರತಿಪಾದಿಸಿದ್ದಾರೆ.

ಹೆಂಗಸರು ಅಬಲೆಯರೆಂದೂ ಗಂಡಸರನ್ನು ಬಲಿಷ್ಠರೆಂದೂ ಅನಾದಿಕಾಲದಿಂದ ಹೇಳುತ್ತಿದ್ದಾರೆ. ಆದರೆ ಸಾವನ್ನು ಪ್ರತಿಭಟಿಸುವುದಕ್ಕೆ ಹೆಂಗಸರಿಗಿರುವಷ್ಟು ಶಕ್ತಿ ಸಾಮರ್ಥ್ಯಗಳು ಗಂಡಸಿಗಿಲ್ಲ ಎಂದು ವಿಜ್ಞಾನ ಹೇಳುತ್ತದೆ.! ಅವರು ಇಲ್ಲಿ ವಿಜ್ಞಾನದೊಡನೆ ಪುರಾಣ ಕಥೆಗಳ ಮೂಲಕ ಪ್ರಬಂಧ ಮಂಡಿಸಿರುವುದು ಸೊಗಸಾಗಿದೆ.
‘ಕೊಂಗು ದೇಶದ ರಾಜರು’ ಎಂಬ ಕೃತಿಯಲ್ಲಿನ ಗಂಗರ ವಂಶಾವಳಿ, ಶಿಲಾಶಾಸನಗಳಲ್ಲಿ ಕಂಡು ಬಂದ ಕನ್ನಡ ಹೀಗೆ ಚರಿತ್ರೆಯ ಮತ್ತು ಸಾಹಿತ್ಯದ ಬಗ್ಗೆಯೂ ಚರ್ಚಿಸಿದ್ದಾರೆ.
ಇಲ್ಲಿ ವಿಜ್ಞಾನ- ಚರಿತ್ರೆ- ಕಲೆ -ಸಾಹಿತ್ಯ ಹೀಗೆ ಎಲ್ಲಾ ವಿಚಾರಗಳ ಲೇಖನಗಳಿದೆ.
ಇಲ್ಲಿ ‘ಮೀನಾಕ್ಷಿಯ ಸೌಗಂಧ’ ಎಂಬ ಶೀರ್ಷಿಕೆಯ ಒಂದಷ್ಟು ಪದ್ಯಗಳಿಗೆ ಅವರದೇ ರಾಗವನ್ನೂ ಸಂಯೋಜಿಸಿದ್ದಾರೆ.!
ಉದಾ: ರಾಗ- ಮಾಯಾ ಮಾಳವ ಗೌಳ.
ಗೌರೀ ಪೂಜೆಯ ಗೊಡವೆಯ ದುಃಖ ಗಂಡಸಿಗೇತಕ್ಕೆ
ಆನೆಯ ಮೂತಿಯ ಗಣಪನ ದುಃಖ ಹೆಂಗಸಿಗೇತಕ್ಕೆ
(ಈ ರೀತಿಯ ಸಾಲುಗಳು ಮುಂದುವರೆದಿದೆ)
ರಾಗ -ಮಾಂಡ್
ಮೂರು ತಿಂಗಳಿಗೆ ಮೀನಾಕ್ಷಿ.
ಮಾಮಾ ಎಂದಳು ಮೀನಾಕ್ಷಿ
ಆರು ತಿಂಗಳಿಗೆ ಮೀನಾಕ್ಷಿ
ಅಮರವ ಕಲಿತಳು ಮೀನಾಕ್ಷಿ
ಹತ್ತು ತಿಂಗಳಿಗೆ ಮೀನಾಕ್ಷಿ
ಗುರುತಿಸಿದಳು ಹೂ ರುದ್ರಾಕ್ಷಿ.
ಇಲ್ಲಿ ಬಾಲ್ಯದಿಂದ ಮೀನಾಕ್ಷಿಯ ಹರೆಯದವರೆಗಿನ ಚಟುವಟಿಕೆಗಳ ಚಿತ್ರಣವನ್ನು ಅವರು ಹಾಸ್ಯದಲ್ಲಿ ಕಟ್ಟಿ ಕೊಟ್ಟಿದ್ದಾರೆ.
ಇನ್ನುಳಿದಂತೆ ಸಜ್ಜನಿಕೆಯ ಸಾಕಾರ ಮೂರ್ತಿ ಬಿಜಿಎಲ್ ಸ್ವಾಮಿ ಅವರ ಕುರಿತು ಡಾ. ಎಚ್. ಎಸ್.ಗೋಪಾಲ ರಾವ್ ಅವರು ಬರೆದ ವಿಶೇಷ ಲೇಖನ ಹಾಗೂ ಸ್ವಾಮಿಯವರ ಹಸ್ತಾಕ್ಷರದ ಒಂದಿಷ್ಟು ಪತ್ರಗಳೂ ಇಲ್ಲಿವೆ. ಅವರ ಜನ್ಮ ಶತಾಬ್ಧಿಯ ಸಂದರ್ಭದಲ್ಲಿ ಸಮಾನ ಮನಸ್ಕರು ಅವರಿಗೆ ಗೌರವ ಸಲ್ಲಿಸಲು ಈ ಕೃತಿಯನ್ನು ಸಂಪಾದಿಸಿ ಓದುಗರ ಮುಂದಿಟ್ಟಿದ್ದಾಗಿ ಇಲ್ಲಿ ತಿಳಿಸಲಾಗಿದೆ.
- ಮಾಲತಿ ರಾಮಕೃಷ್ಣ ಭಟ್
