‘ಮಿಸ್ಸಿನ ಡೈರಿ’ ಕೃತಿ ಪರಿಚಯ

ಶಿಕ್ಷಕಿ ಮತ್ತು ಲೇಖಕಿ ಮೇದಿನಿ ಕೆಸವಿನಮನೆ ಅವರ ‘ಮಿಸ್ಸಿನ ಡೈರಿ’ ಪುಸ್ತಕ ಓದಿ ಮುಗಿಸಿದಂತೆ ಬಹುಶಃ ಶಾಲೆಯ ಟೀಚರ್ ಆಗುವುದು ಸಾಧ್ಯವಾಗದಿದ್ದರೂ ನಾನು ನನ್ನ ಮಕ್ಕಳಿಗೆ ಇನ್ನೂ ಒಂದಿಷ್ಟು ಉತ್ತಮ ತಾಯಿ ಆಗಬಹುದು ಎನ್ನಿಸಿದ್ದು ಪುಸ್ತಕದ ಹೆಚ್ಚುಗಾರಿಕೆ. ಲೇಖಕಿ ರಶ್ಮಿ ಉಳಿಯಾರು ಅವರು ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಮಿಸ್ಸಿನ ಡೈರಿ
ಲೇಖಕರು : ಮೇದಿನಿ ಕೆಸವಿನಮನೆ
ಪ್ರಕಾಶನ : ವೀರಲೋಕ ಬುಕ್ಸ್ (ಮೇ ೨೦೨೪)
ಪುಟಗಳು : ೧೬೪
ಬೆಲೆ : ೨೦೦.00

ಈ ಪುಸ್ತಕದ ಮುಖಪುಟವೇ ಅತ್ಯಾಕರ್ಷಕ. ಅದುವೇ ನನ್ನನ್ನು ಮೊದಲು ಸೆಳೆದದ್ದು. ಪುಸ್ತಕದ ಸಾರವನ್ನು ತುಂಬ ಸುಂದರವಾಗಿ ಪ್ರತಿಬಿಂಬಿಸುವ ಇದಕ್ಕಿಂತ ಚಂದದ ಮುಖಪುಟ ಈ ಪುಸ್ತಕಕ್ಕಿರಲು ಸಾಧ್ಯವಾ ಗೊತ್ತಿಲ್ಲ! ನಮ್ಮ ದೇಶದ ಧ್ವಜ ಹಾರಾಡುತ್ತಿರುವ ಹಂಚಿನ ಮಾಡಿನ‌ ಆ ಶಾಲೆ, ಓಡಿ ಬರುವ ಮಕ್ಕಳು, ಎದುರು ನಾಲ್ಕು ಮಕ್ಕಳೊಂದಿಗೆ ಆತ್ಮೀಯವಾಗಿ ಕುಳಿತ ಮಿಸ್ಸು(ನಮ್ಮಲ್ಲಿ ಟೀಚಾ, ಟೀಚರ್), ಪಕ್ಕದಲ್ಲೇ ಒಂದು ದೊಡ್ಡ ಮರ, ಅದನ್ನು ಸರಿಯಾಗಿ ಗಮನಿಸಿದರೆ ಅಲ್ಲೂ ಮೇದಿನಿ ಮಿಸ್ಸಿನ ಮುಖ, ನೀಲಾಕಾಶದ ಹಿನ್ನೆಲೆ… ಓದುಗರಿಗೆ ಮೊದಲು ಮೋಡಿ ಮಾಡಲು ಇಷ್ಟು ಸಾಕು ಅಲ್ವೇ…!? ರಚಿಸಿದ ಕಲಾವಿದರಿಗೆ ಶ್ಲಾಘನೆ ಸಲ್ಲಬೇಕು. ಮೇದಿನಿಯವರ ಪರಿಚಯ ನನಗೆ ಪುಸ್ತಕ ಅವಲೋಕನ ಬಳಗದಲ್ಲಿ ಅವರು ಬರೆಯುತ್ತಿದ್ದ ವಿಮರ್ಶೆಗಳ ಮೂಲಕ ಆಗಿದ್ದು. ಸತ್ವಪೂರ್ಣ ನಿರೂಪಣೆ ಅವರ ವಿಮರ್ಶೆಗಳ ಕಸುವನ್ನು ಹೆಚ್ಚಿಸುತ್ತಿದ್ದುದನ್ನು ಗಮನಿಸಿದ್ದೆ.

ಯಾವುದೇ ಪುಸ್ತಕದ ಪರಿಚಯ ಬರೆಯುವಾಗ ಅದರ ಸಾರಾಂಶವನ್ನು ಸಂಕ್ಷಿಪ್ತವಾಗಿ ಬರೆಯುತ್ತೇವೆ. ಮೂವತ್ತೆರಡು ಪುಟ್ಟ ಅಧ್ಯಾಯಗಳ ಈ ಪುಸ್ತಕವನ್ನು ಓದುತ್ತಾ ಹೋದಂತೆ ನಮ್ಮ ಬಾಲ್ಯ, ಶಾಲೆ, ಅದರ ಶಿಕ್ಷಕರು, ಸ್ನೇಹಿತರು, ತುಂಟಾಟ, ಊರು… ಹೀಗೆ ನೆನಪುಗಳು ದಾಂಗುಡಿಯಿಡಲು ಶುರು ಮಾಡುವುದು ಖಂಡಿತ. ಹಾಗಾಗಿ ಪರಿಚಯದಲ್ಲಿ ನಮ್ಮ ವೈಯಕ್ತಿಕ ಅನುಭವಗಳು ಇಣುಕು ಹಾಕುತ್ತವೆ. ಕೃತಿಯ ಸರಳ ಸುಂದರ ಶೈಲಿಯ ನಿರೂಪಣೆ ಮನಕ್ಕಿಳಿಯುತ್ತದೆ. ನನಗೆ ಪುಸ್ತಕವು ಲೇಖಕಿಯವರ ಪ್ರಾಮಾಣಿಕ ನಿವೇದನೆ ಅನ್ನಿಸಿತು. ಒಬ್ಬ ಸಹೃದಯ, ಸಮರ್ಪಣಾ ಮನೋಭಾವದ, ಮಕ್ಕಳಿಗಾಗಿ ತುಡಿಯುವ ಮನಸ್ಸಿನ ಶಿಕ್ಷಕಿಯು ಒಂದು ಶಾಲೆಗೆ, ಒಂದು ಊರಿಗೆ ಹೇಗೆ ಆಸ್ತಿಯಾಗಬಲ್ಲರು ಎನ್ನುವುದನ್ನು ಅವರದೇ ಬರವಣಿಗೆಯಲ್ಲಿ ನಾನು ಕಂಡುಕೊಂಡೆ.

ನಮ್ಮೂರಿನ ಶಾಲೆಯಲ್ಲಿ ಮೂವತ್ತಾರು ವರ್ಷಗಳ ಸೇವೆಯ ಅನಂತರ ಈಗ ನಿವೃತ್ತ ಜೀವನದಲ್ಲಿರುವ, ಪುಸ್ತಕಗಳನ್ನು ಓದುವ ಹವ್ಯಾಸವಿರುವ ನನ್ನಮ್ಮನಿಗೆ ಮೊದಲು ಈ ಪುಸ್ತಕ ಕೊಟ್ಟು ಓದಲು ಹೇಳಿದೆ. ಹಳ್ಳಿಯ ಪುಟ್ಟ ಶಾಲೆಯಲ್ಲಿ ಕಲಿಸಿ ಇಂತಹ ಅನುಭವಗಳೂ ನನಗೂ ಆಗಿವೆ. ಅದನ್ನು ಚಂದವಾಗಿ ನಿರೂಪಿಸಿದ್ದಾರೆ ಎಂದರು. ಅಮ್ಮ ನನಗೆ ಒಂದರಿಂದ ಮೂರರ ತರಗತಿಗೆ ಕ್ಲಾಸ್ ಟೀಚರ್ ಅಲ್ಲದೇ ಏಳನೆಯ ತರಗತಿಗೆ ಕನ್ನಡ ಟೀಚರ್ ಸಹ. ಕನ್ನಡಾಕ್ಷರಗಳ ಓ ನಾಮ ಹೇಳಿ ಕೊಟ್ಟವರು, ನಾನಿಂದು ಒಂದಿಷ್ಟಾದರೂ ಬರೆಯುತ್ತಿದ್ದೆನೆಂದರೆ ಕಾರಣ ನನ್ನ ಜನನಿಯೇ ಈ ಮೂಲಕ ಮೊದಲ ಗುರು ಸಹ. ಇಲ್ಲಿ ಮೇದಿನಿಯವರ ಮಗಳ ತಕರಾರು ನನ್ನದೂ ಆ ದಿನಗಳಲ್ಲಿ ಆಗಿತ್ತು. “ಅಮ್ಮಾ ನಿಮಗೆ ನನಗಿಂತ ನಿಮ್ಮ ಶಾಲೆಯ ಮಕ್ಕಳೇ ಹೆಚ್ಚು, ಅವರನ್ನೇ ನೀವು ಜಾಸ್ತಿ ಪ್ರೀತಿಸೋದು” ಅಂತ. ಉಳಿದ ಮಕ್ಕಳ ಹಾಗೆ ನನ್ನಮ್ಮನೂ ಮನೆಯಲ್ಲೇ ಗೃಹಿಣಿ ಆಗಿ ಸದಾ ನನಗಷ್ಟೇ ಲಭ್ಯವಾಗುವಂತೆ ಇರಬೇಕಿತ್ತು ಅನ್ನುವುದು ಆಗಿನ ಆಸೆ. ಆದರೆ ಮೇದಿನಿಯವರು ಬರೆದಂತೆ ತನ್ನ ಕುಟುಂಬಕ್ಕೆ, ಮಗಳಿಗೆ ಕೊಡುವುದಕ್ಕಿಂತ ಹೆಚ್ಚಿನ ಸಮಯವನ್ನು ಶಾಲೆಗೆ ನೀಡಿದ, ಎಲ್ಲ ಮಕ್ಕಳ ಇಷ್ಟದ ಅಧ್ಯಾಪಿಕೆಯಾಗಿದ್ದ ಅವರಿಗೆ ತಮ್ಮೆಲ್ಲ ಸಮಸ್ಯೆಗಳು ಶಾಲಾ ಗೇಟಿನ ಒಳಗೆ ಕಾಲಿಟ್ಟಂತೆ ಮಕ್ಕಳ ಒಡನಾಟದಲ್ಲಿ ಮರೆತು ಹೋಗುತ್ತಿತ್ತಂತೆ.

ಈ ಪುಸ್ತಕ ಓದುವವರೆಲ್ಲರನ್ನೂ ತಮ್ಮ ಬಾಲ್ಯಕ್ಕೆ ಕರೆದೊಯ್ದು ನೆನಪುಗಳ ಮೆರವಣಿಗೆ ಮಾಡಿಸುವುದು ಸುಳ್ಳಲ್ಲ. ನನಗೆ ತುಷಾರದಲ್ಲಿ ಪ್ರತೀ ತಿಂಗಳೂ ಧಾರಾವಾಹಿಯಾಗಿ ಬರುತ್ತಿದ್ದ ಅಣಶಿಯ ಶಾಲಾ ಶಿಕ್ಷಕಿಯೋರ್ವರ ಅಂಕಣ ಬರಹ ಓದಿದ್ದು ಸ್ಮರಣೆಗೆ ಬಂದಿತು. ಮಿಸ್ಸಿನ ಡೈರಿಯಲ್ಲಿ ಮಕ್ಕಳ ವೈಯಕ್ತಿಕ ಕೆಲಸಗಳನ್ನು ಸಹ ಪ್ರೀತಿಯಿಂದ ಮಾಡಿ ಈ ಮಿಸ್ಸು ಅವರಮ್ಮನೇ ಆಗಿದ್ದಾರೆ.

ಈ ಕೃತಿಯು ಮಿಸ್ಸಿನ ವೃತ್ತಿ ಬದುಕಿನ ಬಗ್ಗೆ ಮಾತ್ರವಲ್ಲದೇ ಅವರ ಬಾಲ್ಯ, ಶಾಲಾ ಬದುಕಿನ ಸಿಹಿ ಕಹಿಗಳು, ಕುಟುಂಬದ ಸಹಕಾರ… ಎಲ್ಲ ವಿಷಯಗಳನ್ನು ಆವರಿಸಿದೆ. ಲೇಖಕಿ ತಾನು ತರಬೇತಿಯ ಸಮಯದಲ್ಲಿ ಓದಿದ ತೊತ್ತೊಚಾನ್ ಎಂಬ ಪುಸ್ತಕ ತನ್ನ ಮೇಲೆ ಬೀರಿದ ಪ್ರಭಾವದ ಬಗ್ಗೆ ಬರೆದಿದ್ದಾರೆ. ಇತ್ತೀಚೆಗಷ್ಟೇ ಅದನ್ನು ಓದಿದ ನನಗಿಲ್ಲಿ ಅಲ್ಲಿಯ ಸೃಜನಶೀಲ ಮುಖ್ಯೋಪಾಧ್ಯಾಯರಾದ ಸೊಸಾಕು ಕೊಬಾಯಾಶಿ ಅವರ ಪಡಿಯಚ್ಚು ಕಂಡಂತಾಯಿತು. ತಮ್ಮ ಬಾಲ್ಯದ ಹೆಚ್ಚಿನ ಸಮಯ ಶಾಲೆಯಲ್ಲಿ ಕಳೆಯುವ ಮಕ್ಕಳನ್ನು ಮಕ್ಕಳಾಗಿಯೇ ಉಳಿಸಿ ಉತ್ತಮತೆಯ ಹಾದಿಯಲ್ಲಿ ಕೊಂಡೊಯ್ಯುವ ಅವರ ಪ್ರಯತ್ನ ಮಾದರಿ. ಮಲೆನಾಡಿನ ಶಿವಮೊಗ್ಗದ ಕಲ್ಕುರ್ಚಿಯೆಂಬ ಶಾಲಾ ಮಕ್ಕಳ ಆ ಲವಲವಿಕೆಯ ಆಡುಭಾಷೆಯೇ ಚಂದ. ಮುಗ್ಧತನದಲ್ಲಿ, ಕಲಿಕೆಯ ಉತ್ಸಾಹದಲ್ಲಿ, ಮಿತಿಯಾಚೆಗೆ ಯೋಚಿಸುವ ಸ್ವಭಾವದಲ್ಲಿ ಲೇಖಕಿ ತಮ್ಮ ಪ್ರಭಾವವನ್ನು ಗಾಢವಾಗಿ ಮೂಡಿಸಿದ್ದಾರೆ. ಆ ಮಕ್ಕಳು ನಿಜವಾಗಿ ಪುಣ್ಯವಂತರು ಎನ್ನಿಸಿತು. ನಗರದಲ್ಲಿ ನಿಯಂತ್ರಿತವಾಗಿ ಕಲಿಯುವ ಅನಿವಾರ್ಯತೆ ಇರುವ ನನ್ನ ಮಗಳ ಶಾಲಾ ಬದುಕಿನ ಬಗ್ಗೆ ಒಂದಿಷ್ಟು ವಿಷಾದ ಅಹ ಮೂಡಿತು.

ಪುಸ್ತಕದ ಓದುವ ಮೊದಲು ಲೇಖಕಿಯವರ ಎರಡು ಮಾತುಗಳು ಇರಬೇಕಿತ್ತಲ್ಲಾ… ಮೊದಲ ಪುಸ್ತಕ ಅಂದ ಮೇಲೆ ಅವರ ಅನಿಸಿಕೆಗಳನ್ನು ಓದುವ ಅನುಭವ ಚೆನ್ನಾಗಿರುತ್ತಿತ್ತು ಅಂದುಕೊಂಡೆ. ಕೊನೆಯ ಅಧ್ಯಾಯವು ಅದನ್ನು ಪೂರೈಸಿತು. ಅವರು ತಮ್ಮ ಅಂತರಂಗವಿಲ್ಲಿ ಬಿಚ್ಚಿಟ್ಟ ಪರಿಗೆ ನನ್ನ ಕಣ್ತುಂಬಿ ಬಂದಿತು. ಧನ್ಯತೆ, ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡುವ, ಪುಟ್ಟ ಮಕ್ಕಳ ಸಹವಾಸದಲ್ಲಿ ಬದುಕಿನ ಸಾರ್ಥಕತೆ ಕಂಡುಕೊಳ್ಳುವ, ಮಕ್ಕಳೊಡನೆ ಮಗುವೂ, ಗುರುವೂ ಆಗಿ, ಸದಾ ಅವರಿಂದ ಕಲಿಯುವ ಲೇಖಕಿಯ ಸಹೃದಯತೆ ಇಷ್ಟವಾಯಿತು. ಅಲ್ಲಲ್ಲಿ ಲೇಖಕಿ ತಮ್ಮ ಬಾಲ್ಯದ ಶಾಲಾ ಅನುಭವಗಳನ್ನು ಬರೆದಿದ್ದಾರೆ. ಅದರಲ್ಲಿ ಶಿಕ್ಷೆ ಭಯ ಪ್ರೀತಿ ಎಂಬ ಅಧ್ಯಾಯದಲ್ಲಿ ಗಣಿತ ಶಿಕ್ಷಕರ ಬಗ್ಗೆ ಬರೆದದ್ದು ಓದಿ ಕಲಿಕೆಯಲ್ಲಿ ಮೊದಲಿಗಳಾಗಿಯೂ ಅಕಾರಣವಾಗಿ ಪೆಟ್ಟುಗಳನ್ನು ತಿನ್ನುತ್ತಿದ್ದ ನನ್ನ ಕಹಿ ನೆನಪೂ ಸಹ ಮತ್ತೆ ತಾಜಾವಾಯ್ತು. ಬದುಕಿಡೀ ನೆನಪಿಡುವಂತಹ ಉತ್ತಮ ಶಿಕ್ಷಕರು ಬಹಳ ಜನರಿದ್ದರೆ, ಬೆರಳೆಣಿಕೆಯ ಕೆಲವರು ಮಕ್ಕಳ ನಡುವೆ ತಾರತಮ್ಯ ಎಸಗಿ, ಕ್ಷುಲ್ಲಕ ಕಾರಣಕ್ಕೆ ದ್ವೇಷ ಸಾಧಿಸುವವರೂ, ಪುಟ್ಟ ಮನಸ್ಸುಗಳ ಮೇಲೆ ಎಂದೂ ಮಾಸದ ಗಾಯ ಮೂಡಿಸುವವರೂ ಇರುತ್ತಾರೆ.

ಮೆಚ್ಚಿನ ಶಿಕ್ಷಕಿಗೆ ಹೂವು, ಮನೆಯಲ್ಲಿ ಮಾಡಿದ ತಿಂಡಿಗಳನ್ನು/ಹಣ್ಣುಗಳನ್ನು ತಂದು ಕೊಡುವ ಬಾಲ್ಯದ ಸವಿ ನೆನಪುಗಳು ಮರುಕಳಿಸಿದವು. ಇಲ್ಲಿ ಲೇಖಕಿ ಓದುಗರಿಗೆ ಗುರು ಸಹ ಆಗಿದ್ದಾರೆ. ಅಧ್ಯಾಯವೊಂದರಲ್ಲಿ ಕಂದ ಎನ್ನುವುದು ಏಕೆ ಕನ್ದ ಎಂದು ಉಚ್ಚರಿಸಲ್ಪಡುತ್ತದೆ ಮತ್ತು ಏಕೆ ಕಮ್ದ ಅಲ್ಲ… ಎನ್ನುವುದನ್ನು ಮತ್ತಿತರ ಉದಾಹರಣೆಗಳೊಂದಿಗೆ ವಿವರಿಸುತ್ತಾರೆ. ನಮ್ಮ ಶಾಲೆಯ ಪ್ರವಾಸಕ್ಕೆ ಜಯವಾಗಲಿ ಎನ್ನುತ್ತಿದ್ದ ಆ ವಾರ್ಷಿಕ ಶಾಲಾ ಪ್ರವಾಸದ ಹುರುಪಿನ ನೆನಪು ಸಹ ಮರುಕಳಿಸಿತು. ಎಲ್ಲರ ಒಟ್ಟಿಗೆ ತಿನ್ನುವಾಗ ಸಸ್ಯಾಹಾರಿಗಳಿಗೆ ಎದುರಾಗುವ ಸಮಸ್ಯೆಗಳು ಅದಕ್ಕೆ ತಮ್ಮ ನಿಲುವನ್ನು ನಿರೂಪಿಸಿದ ಪರಿ ಹಿಡಿಸಿತು. ನಮ್ಮ ಹಳ್ಳಿಯಲ್ಲಿ ಇದು ಸಮಸ್ಯೆಯಾಗಿರಲಿಲ್ಲ. ಆದರೆ ಈ ನಗರದಲ್ಲಿ ನನ್ನ ಮಗಳಿಗೆ ಇಂತಹ ಸಂಗತಿಗಳನ್ನು ಅರ್ಥ ಮಾಡಿಸುವಾಗ ಸವಾಲು ಎನ್ನಿಸುತ್ತದೆ. ಪುಸ್ತಕ ಓದಿ ಮುಗಿಸಿದಂತೆ ಬಹುಶಃ ಶಾಲೆಯ ಟೀಚರ್ ಆಗುವುದು ಸಾಧ್ಯವಾಗದಿದ್ದರೂ ನಾನು ನನ್ನ ಮಕ್ಕಳಿಗೆ ಇನ್ನೂ ಒಂದಿಷ್ಟು ಉತ್ತಮ ತಾಯಿ ಆಗಬಹುದು ಎನ್ನಿಸಿದ್ದು ಪುಸ್ತಕದ ಹೆಚ್ಚುಗಾರಿಕೆ.

ಪ್ರತೀ ಪುಸ್ತಕವೂ ನಮ್ಮೊಳಗೆ ಏನನ್ನಾದರೂ ಇಳಿಸುತ್ತದೆ, ಕಲಿಸುತ್ತದೆ. ಪ್ರತೀ ಪುಸ್ತಕಗಳೊಂದಿಗೆ ನಾವು ಜೀವಿಸುತ್ತೇವೆ. ಈ ಪುಸ್ತಕದಿಂದ ಬಹಳಷ್ಟು ದಕ್ಕಿದಂತಾಯಿತು. ಅದಕ್ಕಾಗಿ ಮೇದಿನಿಯವರಿಗೆ ಧನ್ಯವಾದಗಳು. ಮಲೆನಾಡಿನ ಸಮೃದ್ಧ ಅನುಭವ, ಉತ್ತಮ ಭಾಷಾ ಹಿಡಿತ ಇರುವ ನಿಮ್ಮ ಮುಂದಿನ ಎಲ್ಲ ಪ್ರಯತ್ನಗಳಿಗೆ ಮುಂಗಡವಾಗಿ ಶುಭಾಶಯಗಳು.


  • ರಶ್ಮಿ ಉಳಿಯಾರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading