ಕುಂಭಮೇಳದ ‘ಮೋನಾಲೀಸಾಳ ‘ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿದೆ, ಪರ ವಿರೋಧ ಏನೇ ಇರಲಿ. ಆದರೆ ಕವಿಕಣ್ಣಿಗೆ ಕಂಡ ಮೊನಾಲಿಸಾ ಹೇಗಿದ್ದಾಳೆ, ತಪ್ಪದೆ ಮುಂದೆ ಓದಿ…
ಇಂದ್ರನ ನಂದನದಿಂದ
ಉದುರಿದೆರಡು ಅಪರೂಪದ ನಕ್ಷತ್ರಗಳು
ಇವಳ ಎರಡೂ ಕಣ್ಣುಗಳು!
ಯಾರೋ ಹೇಳಿದರು
ಇವಳು ಕಾಡು ಮಲ್ಲಿಗೆ ಎಂದು
ನನಗಾಗನಿಸುವುದಿಲ್ಲ
ಇನ್ನು ಮೋನಾಲೀಸ !?
ಇವಳ ಸ್ನಿಗ್ದ ಆರ್ಗಾನಿಕ್ ನಗುವ ಮುಂದೆ
ಆ ಫೋಟೋ ಮೋನಾಲೀಸಳ ನಗು ಪೇಲವ
ಮನ ಒಪ್ಪುವುದಿಲ್ಲ
ಇವಳು ಕವಿಗೆ ಬೇಕಾದ
ಕಾವ್ಯ ಕನ್ನಿಕೆ!
ಭಾವದ ಖನಿ
ಕುಂಚ ಹಿಡಿದ ಕಲಾವಿದನಿಗೆ!
ಆಗಸದಲ್ಲಿ ಹುಣ್ಣಿಮೆ ಶಶಿ ಮುನಿದಾಗ
ಕವಿಗಿವಳ ನಗುವೇ ಬೆಳದಿಂಗಳು
ನಗುವ ಚುಕ್ಕಿ ಮರೆಯಾದಾಗ
ಇವಳ ಕಣ್ಣ ನಗುವೇ ಸ್ಫೂರ್ತಿಯ ಬೆಳಕು
ಕವಿ-ಕವಿತೆಗೆ!
ಕುಂಭ ಮೇಳದ ತುಂಬೆಲ್ಲ ಇವಳು
ನಡೆದಾಡುವ ರಸ ಕಾವ್ಯ!
ಇವಳ ಸಹಜ ಸೌಂದರ್ಯ ಕಾವ್ಯ
ಓದಿಕೊಳ್ಳದವರೇ ಇಲ್ಲ!
ಬಂದವರಿಗೆರಡು ರುದ್ರಾಕ್ಷಿ ಸರ ಕೊಟ್ಟು
ಸಂಯಮದ ಪಾಠ ಮಾಡುತ್ತಿದ್ದಳೆ !?
ಗೊತ್ತಿಲ್ಲ
ಹಣ ಪಡೆದು ಮಂದ ನಗೆ ಚೆಲ್ಲಿ
ಮುಂದೆ ಸಾಗುವಳು!
ನನಗನಿಸುತ್ತದೆ
ನಮ್ ಕಣ್ಣಿಗೆ ಮಣ್ಣಿರಚಿ ಆ ದೇವ
ದೇವಲೋಕದಿಂದ
ರಂಬೆಯೊ ಮೇನಕೆಯೊ ಇಲ್ಲ
ಊರ್ವಶಿಯನೊ ಇವಳ ರೂಪದಲಿ
ಕಳಿಸಿರಬೇಕು ಅಷ್ಟೆ
ಮನಗಳನು ಚಂಚಲ ಗೊಳಿಸಿ ಕೊಲ್ಲಲು!
ಒಟ್ಟಿನಲಿ ನದಿಯಲಿ
ಮಿಂದೆದ್ದು ಬಂದವರೆಲ್ಲ
ಅವಳ ಕಾಡಿಗೆ ಕಣ್ಣುಗಳ ಆಯಸ್ಕಾಂತಕೆ
ಸಿಲುಕಿ ಕ್ಷಣ ಮನ ಮೈಲಿಗೆ
ಮಾಡಿಕೊಂಡವರೆ ಎಲ್ಲ!!
- ಹೆಚ್. ಪಿ. ಕೃಷ್ಣಮೂರ್ತಿ, ಬೆಂಗಳೂರು
