ವಿಮರ್ಶಕ ಎಂದರೆ..? – ಡಾ.ಯಲ್ಲಮ್ಮ.ಕೆ

ವಿಮರ್ಶಕ ಎಂದರೆ ಯಾರು..? ವಿಮರ್ಶಕನಿಗೆ ಇರಬೇಕಾದ ಅರ್ಹತೆ ಯಾವುದು? ಕವಿ ಕೃತಿಯನ್ನು ಹೊಗಳುವದೂ ಅಲ್ಲ, ತೆಗಳುವುದೂ ಅಲ್ಲ. ಮತ್ತೇನು? ಡಾ.ಯಲ್ಲಮ್ಮ.ಕೆ ಅವರ ಚಿಂತನ ಲೇಖನವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ವಿಮರ್ಶೆ ಎಂದರೆ..? ಜಿ.ವೆಂಕಟಸುಬ್ಬಯ್ಯನವರು ತಮ್ಮ ‘ಇಗೋ ಕನ್ನಡ’ ಸಾಮಾಜಿಕ ನಿಘಂಟುವಿನಲ್ಲಿ ಉಲ್ಲೇಖಿಸಿದಂತೆ ‘ಯಾವುದಾದರೂ ಒಂದು ಕೃತಿಯ ಯೋಗ್ಯತೆಯನ್ನು ಪರಾಮರ್ಶಿಸುವ ಕಾರ್ಯ’ ಎಂದಿದ್ದಾರೆ. ವಿಮರ್ಶಕ ಎಂದರೆ..? ‘ಸಾಹಿತ್ಯ, ಕಲೆ ಮುಂತಾದವುಗಳ ಗುಣ-ದೋಷಗಳನ್ನು ಪರಿಶೀಲಿಸುವವನು’ ಎಂದು ಕನ್ನಡ ಸಾಹಿತ್ಯ ಪರಿಷತ್ ನ ನಿಘಂಟು ತಿಳಿಸುತ್ತದೆ. ಸ್ಥೂಲವಾಗಿ ವಿವೇಚಿಸುವುದಾದರೆ ವಿಮರ್ಶಕ ಎಂದರೆ ಯಾರು..? ವಿಮರ್ಶಕನಿಗೆ ಇರಬೇಕಾದ ಅರ್ಹತೆ ಯಾವವು..? ವಿಮರ್ಶಕ ಒಳಗೊಳ್ಳಲೇಬೇಕಾದ ಅಂಶಗಳಾವವು..? ಒಬ್ಬ ಉತ್ತಮ ವಿಮರ್ಶಕನನ್ನು ಗುರುತಿಸುವುದು ಹೇಗೆ..? ಹೀಗೆ ಹುಟ್ಟುವ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಬೇಕಾಗುತ್ತದೆ.

ಸಾಮಾನ್ಯವಾಗಿ ವಿಮರ್ಶಕ ಎಂದೊಡನೆ ಮೂಗು ಮುರಿಯುವವರೇ ಹೆಚ್ಚು. ಏನನ್ನೂ ಬರೆಯಲಾಗದವನು ವಿಮರ್ಶಕನಾಗುತ್ತಾನೆ ಎಂದು ಸಾರಾಸಗಟಾಗಿ ಆರೋಪಿಸಲಾಗುತ್ತದೆ. ತಾವೇನು ಕಮ್ಮಿ ಎಂಬಂತೆ ಹಠಕ್ಕೆ ಬಿದ್ದು ಸಾಹಿತ್ಯಿಕ ಕೃಷಿಗೈದ ವಿಮರ್ಶಕ ಮಹನೀಹರುಗಳನ್ನೂ ಕಾಣುತ್ತೇವೆ. ಕವಿ ವಿರೋಧಿ ಎಂದೇ ಬಿಂಬಿಸುತ್ತ ಬಂದಿರುವುದನ್ನು ನಾವು ಸಾಹಿತ್ಯ ಚರಿತ್ರೆಯುದ್ದಕ್ಕೂ ಕಾಣುತ್ತೇವೆ. ನಿಜಕ್ಕೂ ವಿಮರ್ಶಕ ಕಾರ್ಯ ಕತ್ತಿಯ ಅಲಗಿನ ಮೇಲೆ ನಡೆದಾಡುವ ಅನುಭವವಾಗಿದೆ.

ವಿಮರ್ಶೆಯಲ್ಲಿ ಕವಿ ಮತ್ತು ವಿಮರ್ಶಕ ಪೂರ್ವಗ್ರಹಗಳಿಂದ ಮುಕ್ತನಾಗಿರಬೇಕು. ಸ್ವೀಕೃತಭಾವವುಳ್ಳವರಾಗಿರಬೇಕು. ಇರ್ವರ ವ್ಯಕ್ತಿತ್ವ ಗೌಣವಾಗಿರಬೇಕು. ವ್ಯಕ್ತಿನಿಷ್ಠವಲ್ಲದೆ ; ವಸ್ತುನಿಷ್ಠವಾಗಿರಬೇಕು. ಮುಖಸ್ತುತಿಗೆ – ವ್ಯಕ್ತಿನಿಂದೆಗೆ ಅವಕಾಶವಿಯ್ಯಬಾರದು. ರಾಗ-ದ್ವೇಷ, ಅಸೂಯೆ ಸಲ್ಲದು. ಒಬ್ಬ ಉತ್ತಮ ವಿಮರ್ಶಕನೊಳಗೆ ಕವಿ, ಸಹೃದಯಿ ನೆಲೆಗೊಂಡಿರಬೇಕು.

ಒಟ್ಟಂದದಲ್ಲಿ ವಿಮರ್ಶಕನ ಕಾರ್ಯ : ಕವಿ ಕೃತಿಯನ್ನು ಹೊಗಳುವದೂ ಅಲ್ಲ, ತೆಗಳುವುದೂ ಅಲ್ಲ ; ಸಂದೃಹಿಣಿಯೊಬ್ಬಳು ಅನ್ನ ಮಾಡಬೇಕಾದರೆ ಮೊರದಲ್ಲಿ ಅಕ್ಕಿ ಹಾಕಿಕೊಂಡು ಅಕ್ಕಿಯಲ್ಲಿನ ಸಣ್ಣಸಣ್ಣ ಕಲ್ಲುಗಳನ್ನು ಹುಡುಕಿ ತೆಗೆದು ಸ್ವಚ್ಛಗೊಳಿಸಿ ಅನ್ನ ಮಾಡುತ್ತಾಳೆ ವಿನಃ ಅಕ್ಕಿಯನ್ನು ಬಿಸುಡುವುದಿಲ್ಲ. ಈ ಕಾರ್ಯದಲ್ಲಿ ಭೇದ ಹುಡುಕಲು ಸಾಧ್ಯವೇ..? ಅಷ್ಟಾಗಿಯೂ ಅನ್ನದೊಳಗೆ ಸಣ್ಣಕಲ್ಲುಗಳು ಅವಳ ಕಣ್ತಪ್ಪಿನಿಂದಾಗಿ ನುಸುಳಿಕೊಂಡುಳಿದರೆ ಅದು ಊಟದ ಸವಿಯನ್ನೇ ಕಳೆದುಬಿಡುತ್ತದೆ. ‘ಭತ್ತವನ್ನೇನೂ ಆಕಾಶದಲ್ಲಿ ಬೆಳೆಯುವುದಿಲ್ಲ. ನೆಲದ ಮೇಲೇನೇ ಬೆಳೆಯುವುದು’ ಆದರೂ ಕೂಡ ಊಟದ ಮಧ್ಯೆ ಒಂದರಳು ಕಡಿದರೂ ಸಹಿಸಲಸಾಧ್ಯವಾದ ನೋವು, ಇರುಸು-ಮುರುಸನ್ನುಂಟುಮಾಡುತ್ತದೆ. ‘ಜೀವ ಅಳ್ಳ ಕಡಿದಂಗಾಯ್ತು’ ಅಂತ ಜನಪದರು ಕಟ್ಟಿರುವ ನುಡಿಗಟ್ಟು ಅನುಭವವೇಧ್ಯ ಸಂಗತಿಯಾಗಿದೆ. ಅಂತೆಯೇ ವಿಮರ್ಶಕ ಕೃತಿಯಲ್ಲಿನ ಲೋಪ-ದೋಷಗಳನ್ನು ಹುಡುಕಿ ತೆಗೆಯುತ್ತಾನೆ. ಕವಿಯಾದವನು ಸ್ವೀಕರಿಸಿ ತಿದ್ದಿಕೊಳ್ಳುವುದರಿಂದ, ಸಹೃದಯಿ ಓದುಗನಿಗೆ ಕೃತಿ ಓದಿನಲ್ಲಿ ಒದಗಬಹುದಾದ ಸಾಕಷ್ಟು ರಸಭಂಗಗಳನ್ನು ನಿವಾರಣೆಮಾಡಿದಂತಾಗುತ್ತದೆ. ವಿಮರ್ಶೆಯ ಅಂತಿಮ ಫಲಿತಾಂಶ ಉತ್ತಮೊತ್ತಮವಾಗಿರುತ್ತದೆ.

ನಾಡಿನ ಖ್ಯಾತ ವಿಮರ್ಶಕರಾದ ಡಾ.ಗಿರಡ್ಡಿ ಗೋವಿಂದರಾಜರವರ ಅಭಿಮತದಂತೆ : ‘ವಿಮರ್ಶಕನಾದವನು ಪಾಕಪ್ರವೀಣನಲ್ಲದಿರಬಹುದು ; ಆದರೆ ಮಾಡಿದಡುಗೆಯ ರುಚಿ ಹೇಗಿದೆ..? ಎಂದು ಹೇಳಬಲ್ಲ ಉತ್ತಮ ರಸಗ್ರಾಹಿ, ಗುಣಗ್ರಾಹಿಯಾಗಿರುತ್ತಾನೆ’ ಎನ್ನುವ ಮಾತು ವಿಮರ್ಶಕನ ಮಹತ್ವ ಮತ್ತು ಅಗತ್ಯತೆಯನ್ನು ಸಾರುತ್ತದೆ. ಹಾಗಾದರೆ ವಿಮರ್ಶಕ ಯಾರು..? ಎನ್ನು ಪ್ರಶ್ನೆಗೆ ಉತ್ತರ : ಕವಿಯೇ ತನ್ನ ಕೃತಿಯ ಮೊದಲ ವಿಮರ್ಶಕನಾಗಿರುತ್ತಾನೆ. ಅಗಿರಬೇಕು ಕೂಡ. ಅದೇ ಸದ್ಗ್ರಹಿಣಿ ಅನ್ನಕ್ಕೆ ಉಪ್ಪು ಸರಿಯಾಗಿದೆಯೆ..? ಇಲ್ಲವೇ ಎಂದು ಮೊದಲು ತಾನೇ ರುಚಿ ನೋಡಿ ಅಡುಗೆ ಸಿದ್ಧಪಡಿಸಿ ಮನೆಮಂದಿಗೆಲ್ಲ ಉಣಬಡಿಸಿ, ನಂತರ ತಾನುಂಡು ಸುಖಿಸುತ್ತಾಳೆ. ರುಚಿ ನೋಡಲು ಪಕ್ಕದ ಮನೆಯವರ ನೆರವು ಅವಳಿಗೆ ಬೇಕಾಗದು. ಇದನ್ನು ವಿಶಾಲಾರ್ಥದಲ್ಲಿ ಗ್ರಹಿಸುವುದಾದರೆ ಮದುವೆ-ಮುಂಜಿಗೆಂದು ದೊಡ್ಡಡುಗೆ ಮಾಡಿ ಉಣಬಡಿಸುವಾಗ ತಾ ರುಚಿ ನೋಡಿ ಸಮಂಜಸ ಅನ್ನಿಸಿದರೂ ಕೂಡ ಮತ್ತೊಬ್ಬರನ್ನು ಕರೆದು ರುಚಿ ನೋಡಿ ಹೇಳಿ ಎಂದು ಕೇಳುತ್ತೇವೆ. ಬಂದವರ ಮುಂದೆ ನಗೆಪಾಟಲಿಗೆ ಗುರಿಯಾಗಬಾರದೆಂದು ಜಾಗೃತಿಯನ್ನುವಹಿಸುತ್ತೇವೆ. ಅಂತೆಯೇ ಕವಿಯಾದವನು ತನ್ನ ಕೃತಿಯನ್ನು ಲೋಕಾರ್ಪಣೆ ಮಾಡುವ ಮುನ್ನ ಕೃತಿಯಲ್ಲಿ ಉಳಿದಿರಬಹುದಾದ ಲೋಪ-ದೋಷಗಳನ್ನು ಗಮನಿಸುವಂತದ್ದು ಬಹುಮುಖ್ಯ ಸಂಗತಿ. ಆದಾಗ್ಯೂ ಎಲ್ಲರೂ ಚಿನ್ನವೆಂದು ಒಪ್ಪುವದನ್ನೂ ಕೂಡ ಉಜ್ಜಿ, ತಿಕ್ಕಿ ಪರೀಕ್ಷಿಸಿ ನೋಡಿ ನಿರ್ಣಯಿಸುವ ಅಕ್ಕಸಾಲಿಗನಂತೆ, ಇದ್ದದ್ದನ್ನು ಇದ್ದಂತೆ ತೋರುವ ಕನ್ನಡಿಯಂತೆ, ರೋಗಪೀಡಿತ ರೋಗಿಗೆ ವೈದ್ಯ ಚುಚ್ಚುಮದ್ದು ಹಾಕಿ, ಕಹಿಮಾತ್ರೆಗಳನ್ನು ನೀಡಿ, ತೆಗೆದುಕೊಳ್ಳುವ ವಿಧಾನವನ್ನು ತಿಳಿಸುತ್ತಾನೆ. ಅದನ್ನನುಸರಿಸುವ ರೋಗಿಯ ಮೇಲೆ ಪರಿಣಾಮ ಬೀರಿ ರೋಗ ವಾಸಿಯಾಗಿ ಗುಣಮುಖನಾಗುತ್ತಾನೆ. ಚಿಕಿತ್ಸಿಕಾ ಗುಣ-ಸ್ವಭಾವ ವಿಮರ್ಶಕನದ್ದಾಗಿರುತ್ತದೆ.

ಕವಿಯೊಳಗೊಬ್ಬ ವಿಮರ್ಶಕನಿರುವಂತೆ, ವಿಮರ್ಶಕನೊಳಗೆ ಕವಿ ಮತ್ತು ಸಹೃದಯಿ ಓದುಗ ನೆಲೆಗೊಂಡಿರುತ್ತಾನೆ. ಕವಿ ಮತ್ತು ವಿಮರ್ಶಕನದ್ದು ಒಂದೇ ಉದ್ದೇಶವಾಗಿರುತ್ತದೆ. ಹೇಳುವ ವಿಷಯ, ಇನ್ನಷ್ಟು ಕರಾರುವಕ್ಕಾಗಿ, ನಿಖರವಾಗಿ, ಅದು ಒಳಗೊಳ್ಳುವ ಅರ್ಥಸಾಧ್ಯತೆಗಳನ್ನು, ಪ್ರಸ್ತತ ಸಂದರ್ಭಕ್ಕೆ ಮುಖಾಮುಖಿಯಾಗಿಸುವುದಾಗಿದೆ.

‘ಕದಿಯದ ವರ್ತಕ, ಕವಿ ಇಲ್ಲ’ವೆನ್ನುವ ನಯಸೇನನ ಮಾತಿನಂತೆ. ಒಬ್ಬ ಕವಿ, ಸಾಹಿತಿ, ಲೇಖಕರಾಗುವವರು, ಅನ್ಯಮೂಲಗಳಿಂದ ಸಂಗ್ರಹಿಸಿದ ಮಾಹಿತಿ, ವಸ್ತು-ವಿಷಯ, ಸಂಗತಿಗಳನ್ನು, ವ್ಯಾಖ್ಯಾವಗಳನ್ನು, ಭಾವಗಳ ಅಭಾವದಿಂದಾಗಿ ಕವಿಭಾವಗಳನ್ನು ತಮ್ಮದೆಂಬಂತೆಯೇ ಬಳುಸುವ ಪದ್ಧತಿಯನ್ನು ಪ್ರಸ್ತುತ ಹೆಚ್ಚಾಗಿ ಕಾಣುತ್ತಿದ್ದೇವೆ. ಸೌಜನ್ಯ, ಕೃಪೆ, ಪರಾಮರ್ಶನ, ಆಧಾರ ಗ್ರಂಥಗಳ, ಹಿರಿಯಕವಿ ಕಾವ್ಯ-ಕೃತಿಗಳ ಉಲ್ಲೇಖ ನೀಡುವುದರೊಂದಿಗೆ ಉಪಕಾರ ಸ್ಮರಣೆಯನ್ನು ಮಾಡುವ ಮನೋಭಾವವನ್ನು ನಾವಿಂದು ಬೆಳೆಸಿಕೊಳ್ಳಬೇಕಾಗಿದೆ.


  • ಡಾ.ಯಲ್ಲಮ್ಮ.ಕೆ – ಸಹಾಯಕ ಪ್ರಾಧ್ಯಾಪಕರು, ಕನ್ನಡ ಅಧ್ಯಯನ ವಿಭಾಗ, ಜಿ.ವಿ.ವಿ.ಪಿ.ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಗರಿಬೊಮ್ಮನ‌ಳ್ಳಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading