ಲೌಕಿಕ ಸಂಸಾರ ತ್ಯಜಿಸಿ ಅಲೌಕಿಕನಿಗೆ ಸತಿಯಾದೆ… ಭೀತಿ ಬೇಧಿಸಿ ನೀ ಅಕ್ಕಮಹಾದೇವಿಯಾದೆ…ಕವಿಯತ್ರಿ ಶಾರದಾ ಶ್ರಾವಣ ಸಿಂಗ್ ರಜಪೂತ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಹನ್ನೆರಡನೇ ಶತಮಾನದಲ್ಲೇ
ಸ್ತ್ರೀ ಸ್ವಾತಂತ್ರ್ಯದ ಬಾಗಿಲಿನ
ಮುದ್ರೆಯೊನ್ನೊಡೆದು ನೀ ದಿಟ್ಟೆಯಾದೆ ‘ಅಕ್ಕ’
ಬಂಧನಗಳನ್ನೆಲ್ಲಾ ಕಿತ್ತೊಗೆದು…….
ನಿನ್ನ ದಟ್ಟ ಕೂದಲ ರಾಶಿಯಿಂದ
ಕಾಮುಕರ ಕಣ್ಣಿಗೆ ಹಚ್ಚಿದೆ ನೀ ಕಪ್ಪ!!
ಲೌಕಿಕ ಸಂಸಾರ ತ್ಯಜಿಸಿ ಅಲೌಕಿಕನಿಗೆ ಸತಿಯಾದೆ
ಭೀತಿ ಬೇಧಿಸಿ ನೀ ಅಕ್ಕಮಹಾದೇವಿಯಾದೆ
ಮಧುರ ಕನ್ನಡದ ವಚನವಾಣಿಯಾದೆ
ಮಹಿಳಾ ಲೋಕದಲ್ಲಿ ನೀ ಅಮರತೆಯ ಪಡೆದೆ!!
ಹೀಗಳೆದವರೂ ಬದಲಾದರು
ನಿನ್ನ ಜ್ಞಾನ ಧೈರ್ಯ ಆತ್ಮಸ್ಥೈರ್ಯಕೆ
ನೀನಾದೆ ಸಬಲತೆಗೆ ಮೇರುಸಂಕೇತ
‘ಸ್ತ್ರೀಸ್ವಾತಂತ್ರ್ಯ’ ಚಿಗುರಿಗೆ ನೀ ಅಂತರ್ಜಲ!!
ಚಿಗುರಿದ ಕುಡಿ ಬೆಳೆದು ಮರವಾಗಿ
ಆಕಾಶದಂಗಳಕ್ಕೂ ನೀರೆಯರು ಸಾಗಿ
ಚಿಮ್ಮುತಿದೆ ಏಳಿಗೆ ಅದ ಕಂಡು ಕೈಮುಗಿವೆ
ಸಾಧನೆಗೆ ನೀನಿಟ್ಟ ಓಂಕಾರವೇ ದೀವಿಗೆ!!
- ಶಾರದಾ ಶ್ರಾವಣ ಸಿಂಗ್ ರಜಪೂತ, ಕೊಪ್ಪಳ
