ಬಾಯಿ ಕಳೆದಿದೆ ಪ್ರಾಣ ಉಳಿದಿಲ್ಲ ತ್ರಾಣ…ನಿವೃತ್ತ ಶಿಕ್ಷಕಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಬಾ ಮಳೆಯೆ ಬಂದಿಲ್ಲಿ
ಇಳೆಯನಾವರಿಸು
ಬೆಂದ ಬಾಳಿಗೆ ತುಸು
ಸಾಂತ್ವನವ ವರ್ಷಿಸು
ನೀನಿಲ್ಲದೇ ಆ ವಿರಹದಿ
ತಪ್ತವಾಗಿದೆ ಜೀವ
ನೀರುಳಿದ ಮೀನಿನಂತೆ
ಉಸಿರಿಗಾಗಿ
ಚಡಪಡಿಸುತಿಹುದು ದೇಹ
ವಿದಹದುರಿಯಲಿ ನವೆವ
ಪ್ರಣಯಿಗಳ ತೆರದಿ
ಬಾಯಿ ಕಳೆದಿದೆ ಪ್ರಾಣ
ಉಳಿದಿಲ್ಲ ತ್ರಾಣ
ಬಂಜೆಯಾಗಿದೆ ಭಾವ
ನೀರಿಲ್ಲದೆ ಬರುವ ಸಾವ
ಊಹಿಸಲಾಗದೆ ಮೊರೆದಿದೆ
ಬರುವನೇನೋ ದೇವ
ಸಾಕಿನ್ನು ನಿಲ್ಲಿಸು
ಈ ಧರೆಯ ಕಾವ
ಸಂತೈಸು ಬೇಡುವೆನು
ನಿನ್ನ ತೆಕ್ಕೆಯೊಳಗಿರಿಸಿ
ಈ ಬಡ ಮೇದಿನಿಯ ಬಾಳ
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ, ಕೊಡಗು
