‘ಮೌನ’ ವೆಂಬ‌ ಬೆಚ್ಚನೆಯ ಸಂಗಾತಿ – ಹಿರಿಯೂರು ಪ್ರಕಾಶ್



” ಮೌನ ” ಮನುಷ್ಯನ ಅಸಹಾಯಕತೆಯಲ್ಲ, ಅದೊಂದು ಶಕ್ತಿ. ಮಾತಿಗೆ ಒಂದೇ ಅರ್ಥ ನೀಡಿದರೆ, ಮೌನ ನೂರಾರು ಅರ್ಥ ನೀಡುತ್ತದೆ. ಮೌನದ ಕುರಿತು ಲೇಖಕರಾದ ಹಿರಿಯೂರು ಪ್ರಕಾಶ್ ಅವರು ವಿಶ್ಲೇಷಿಸಿ ಬರೆದ ಈ  ಲೇಖನವನ್ನು ಎಲ್ಲರೂ ಓದಬೇಕು.ಆಗ ಮೌನದ ಮೌಲ್ಯ ಅರ್ಥವಾಗುವುದು. ಮುಂದೆ ಓದಿ…

ಕೆಲವೊಮ್ಮೆ ದುಃಖ ಒತ್ತರಿಸಿ ಬಂದಾಗ…ನೀವು ಹೇಳುವ ಮಾತುಗಳು ಎದುರಿನಲ್ಲಿರುವವರಿಗೆ ಅರ್ಥವಾಗದಾಗ, ಅನಾವಶ್ಯಕವಾದ -ವಿವಾದಗಳು- ತಾರಕಕ್ಕೇರಿದಾಗ,  ಜಿಗುಪ್ಸೆಯ ಭಾವ ಎದೆ ಮಟ್ಟಕ್ಕೇರಿದಾಗ, ನಿಮ್ಮ ಭಾವನೆಗಳನ್ನರಿಯುವ ಹೃದಯ- ಜೊತೆಯಲ್ಲಿಲ್ಲದಾಗ, ಸಂವೇದನಾ ಶೂನ್ಯರೊಡನೆಯೇ ಬದುಕು- ಸವೆಸಬೇಕಾಗಿ ಬಂದಾಗ, ಮನಸಿಗೆ ಅಸಹನೀಯವಾದ ಘಟನೆಗಳೇ- ಕಣ್ಣಮುಂದೆ ನೆಡೆಯುತ್ತಿರುವಾಗ, ನಿಮ್ಮ ಮಾತನ್ನು ಯಾರೂ ಕೇಳದಿದ್ದಾಗ ಅಥವಾ ಕೇಳುತ್ತಿಲ್ಲವೆಂದು ಅನಿಸಿದಾಗ, ನಿಮ್ಮ ನೆರವಿಗೆ ಬರುವ ಏಕೈಕ ಸಂಗಾತಿ ” ಮೌನ “.

ಹಾಗೆಯೇ ಗಮನಿಸಿ

” ನಾನು ಸೈಲೆಂಟ್ ಆಗಿದ್ರೆ ರಾಮ , ವೈಲೆಂಟ್ ಆದ್ನೋ… ರಾವಣ !!!

ಮೌನ ಕುರಿತಾದ ಎಂತಹಾ ಪವರ್ ಫ಼ುಲ್ ಡೈಲಾಗ್ ಇದು. ಸೈಲೆಂಟ್ ಅನ್ನು ರಾಮನಿಗೆ, ವೈಲೆಂಟನ್ನು ರಾವಣನಿಗೆ ಹೋಲಿಸುವ ಅಕ್ಷರಗಳ ಸುಂದರ ಚಿತ್ತಾರವಿದು. ಬಹುಶಃ ಇದಿಷ್ಟೇ ಸಾಕು ಮೌನದ ಮಹತ್ವವನ್ನು ತೆರೆದಿಡಲು.

ಆದರೂ…

ಸೈಲೆಂಟ್ ನಲ್ಲಿರೋ ಸೆಂಟಿಮೆಂಟ್, ಕಮಿಟ್ ಮೆಂಟ್ ಹಾಗೂ ಭಾವನೆಗಳ ವೇರಿಯೆಂಟ್ಸ್ ಅನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಕೆಲವರು ಹೀಗೂ ” ಡಾಂಟ್ ” ಕೊಡಬಹುದಲ್ಲವೇ?

” ಅವನು ಏನೊಂದೂ ಮಾತನಾಡದೇ ಸದಾ ಮೌನಿಯಾಗೇ ಅದು ಹೇಗಿರುತ್ತಾನೋ‌?. ಅವನಿಗೇನು ಗರ ಬಡಿದಿದೆಯಾ ? ಅವರು‌ ಅಷ್ಟು ಮಾತನಾಡಿದ್ರೂ ಅದಕ್ಕೆ ಮೌನವಾಗೇ ಇದ್ದಾನಲ್ಲ ? ನೀನು ಆ ಸಂದರ್ಭದಲ್ಲಿ ಮೌನ ಗೌರಿಯಾಗಿದ್ದಿದ್ದಕ್ಕೆ ಇಂದು ಇದೆಲ್ಲಾ ಕಷ್ಟಗಳನ್ನು‌ ಅನುಭವಿಸುತ್ತಿದ್ದೀಯಾ. ನಿನ್ನ ಮೌನದ ಸ್ವಭಾವವೇ ನಿನ್ನ ಜೀವನವನ್ನು ಹಾಳು ಮಾಡಿತು. ಮತ್ತೆ ಕೆಲವರ ಪಾಲಿಗೆ ಸೈಲೆಂಟ್ ಅನ್ನೋದು ಡೀಸೆಂಟ್ ಆಗಿಯೂ, ಪ್ರಾಮಿನೆಂಟ್ ಆಗಿಯೂ ಈ ರೀತಿಯ ಮಾತುಗಳಲ್ಲಿ ಕಾಣಿಸಿಕೊಳ್ಳುತ್ತೆ. ಅವನು ಎಷ್ಟೊಂದು ಡೀಸೆಂಟ್ ಅಪ್ಪಾ, ಯಾವಾಗಲೂ ಸೈಲೆಂಟ್ ಆಗೇ‌ ಇರ್ತಾನೆ ! ಒಬ್ಬರ ವಿಷಯದಲ್ಲಿ ಮಾತಾಡಲ್ಲ. ತುಂಬಾ ಮೌನಿ ಕಣ್ರೀ ! ತುಂಬಿದ ಕೊಡ ತುಳುಕುವುದಿಲ್ಲ ನೋಡಿ. ಹಾಗಾಗಿ ಅವರೊಬ್ಬ ತೂಕವಾಗಿ ಮಾತನಾಡುವ ಮನುಷ್ಯ. ಎಲ್ಲರ ಹಾಗೆ ಸದಾ ವಟಗುಟ್ಟುವುದಿಲ್ಲ’‘.

“ಮಾತು ಬೆಳ್ಳಿ, ಮೌನ‌ ಬಂಗಾರ.
“ಮೌನವೆಂದರೆ ಸಮ್ಮತಿಯ ಲಕ್ಷಣ….
“ಮಾತಿಗೆ ಒಂದೇ ಅರ್ಥ, ಆದರೆ ಮೌನಕ್ಕೆ ನೂರಾರು ಅರ್ಥ”

ಹೀಗೆ ಮೌನವನ್ನು, ಮೌನಿಗಳನ್ನು‌ ಕುರಿತು ನಾನಾ‌ ಮಾತುಗಳು ವಿಮರ್ಶೆಗಳು ಕಂಡು ಬರುತ್ತವೆ. ಅನೇಕ ಬರಹಗಾರರು, ಕವಿ – ಸಾಹಿತಿಗಳು ಮೌನದ ಆಳಕ್ಕಿಳಿದೇ ಬರೆದಿದ್ದಾರೆ. ಹಾಗಾದರೆ, ನಿಜಕ್ಕೂ ಮೌನದಿಂದಿರುವುದು ನಮಗೆ ಒಳ್ಳೆಯದೇ..? ಅಲ್ಲವೇ ? ಎಂಬ‌ ಪ್ರಶ್ನೆಗೆ‌ ಎಲ್ಲಾ‌ ಕಾಲಕ್ಕೂ ಎಲ್ಲಾ ಸಂಧರ್ಭಕ್ಕೂ ಸ್ಪಷ್ಟವಾದ ಉತ್ತರ ಹೀಗೇ ‌ಎಂದು ಹೇಳಲು ಬರುವುದಿಲ್ಲ.

ಪಟ ಪಟ ಎಂದು ಸ್ಫುಟವಾಗಿ ಹರಳು ಹುರಿದಂತೆ ಮಾತನಾಡಿ, ಮಾತನ್ನೇ ಬಂಡವಾಳ ವಾಗಿರಿಸಿಕೊಂಡು, ಮಾತಿನಿಂದಲೇ ಇಡೀ ದೇಶವನ್ನೇ ಆಳುವಂತಹಾ ಮತ್ತು ಮಾತಿನ ಮೋಡಿಯಿಂದಲೇ ಮನುಕುಲವನ್ನು ಮರುಳು ಮಾಡುವ ಇಂದಿನ ಮಹಾನ್ ಮಾತಿನ ಮಲ್ಲರೆಂಬ ಸಕಲ ಕಲಾವಂತರ ಮಧ್ಯೆ ಮೌನವಾಗಿರುವವರು ವೇಸ್ಟ್ ಬಾಡಿಗಳು ಅಂತಾನೂ ಅನ್ಸಿದ್ರೆ ಅದು ತಪ್ಪಲ್ಲ. ಯಾಕೆಂದ್ರೆ ಚೆನ್ನಾಗಿ ಮಾತನಾಡುವವರ ನಡುವೆ ಮೌನಿಗಳು ಕಳೆದೇ ಹೋಗಿ ಬಿಡ್ತಾರೆ…..ಅಲ್ವೇ..?

ಫೋಟೋ ಕೃಪೆ : London School of Economics

ಆದರೆ ಈ ರೀತಿಯ ಫ಼ೀಲಿಂಗ್ ಇದ್ರೆ ಅದನ್ನು ಮೊದಲು ಕಿತ್ತು ಬಿಸಾಕಿ . ಏಕೆಂದರೆ ಖಾಲಿ ಡಬ್ಬಗಳೇ ಹೆಚ್ಚು ಸೌಂಡ್ ಮಾಡೋದಲ್ಲವೇ ! ಕೆಲವೊಮ್ಮೆ ಮೌನ ಅದಕ್ಕಿಂತ ಜಬರ್ ದಸ್ತಾಗಿಯೇ ಶಬ್ಧ -ಅರ್ಥ ಎರಡನ್ನೂ ಧ್ವನಿಸುತ್ತೆ.! ಹಾಗಂತ ಕೇವಲ ಪೋಸಿಗಾಗಿ ಮೌನಿಯಾದರೆ ದಡ್ಡನಾಗಿ ಪರಿಗಣಿಸುವ ವಾಸ್ತವಕ್ಕೆ ಹತ್ತಿರವಾಗಬಹುದು. ಸ್ವಲ್ಪ ಹುಷಾರು ! ಸೋ….. ಸಂದರ್ಭಗಳಿಗನುಸಾರವಾಗಿ ಕೆಲವೊಮ್ಮೆ ಮೌನಿಯಾಗುವುದನ್ನೂ ಕಲಿಯಬೇಕು ಹಾಗೆಯೇ ಸ್ಪಷ್ಟವಾಗಿ ಮಾತನಾಡಲೂ ಬೇಕು ಎನ್ನುವುದು ಮೋಸ್ಟ್ ಬ್ಯಾಲೆನ್ಸ್ ಡ್ ಮಾತು…!

ಕೆಲವು ಪ್ರಶ್ನೆಗೆ ನಿಖರವಾದ ಉತ್ತರವನ್ನು ಮಾತಿನಲ್ಲಿ ಕೊಟ್ಟು ನಮ್ಮ ಅನಿಸಿಕೆ ವ್ಯಕ್ತ ಪಡಿಸಬಹುದು. ಅದೇ ಪ್ರಶ್ನೆಗೆ ಅಥವಾ ಸಂದರ್ಭಕ್ಕೆ ಏನೊಂದೂ ಹೇಳದೇ ಮೌನಿಯಾಗಿದ್ದರೆ ಅದು ಹಲವಾರು ಅರ್ಥ- ಅನರ್ಥಗಳಿಗೆ ದಾರಿ‌ಮಾಡಿಕೊಡುತ್ತೆ ಅಲ್ವೇ ? ಅದರಿಂದ ಒಳ್ಳೆಯದು – ಕೆಟ್ಟದ್ದು…. ಏನು‌ ಬೇಕಾದರೂ ಆಗಬಹುದು. ಹೀಗಾಗಿ ಮೌನದ ಮಾತಿಗೆ‌ ಮೈಲುದ್ದ ಆಯಾಮಗಳಿರುತ್ತವೆ . ಆದರೆ ಮಾತನಾಡುವ ಸಮಯದಲ್ಲಿ ಮೌನವಹಿಸುವುದು, ಮೌನವಾಗಿರಬೇಕಾದ‌ ಸಂದರ್ಭದಲ್ಲಿ ಮಾತನಾಡುವುದು ಅಥವಾ ನೆಗ್ಲಿಜೆಂಟ್ ಆಗಿರೋದು ತರವಲ್ಲವಾದರೂ…..‌‌‌. ಇಂದಿನ ಒತ್ತಡದ ಬದುಕಿನಲ್ಲಿ ಮೌನವೇ ಆಭರಣ ಅನ್ನೋ ಮಾತು ಬಹುತೇಕ ಸತ್ಯ ಕಣ್ರೀ….

ಮನಸ್ಸಿಗೆ ತುಂಬಾ ಬೇಸರವಾದಾಗ ಅದರಿಂದ ಹೊರಗೆ ಬರಲು ಸಾಮಾನ್ಯವಾಗಿ ಒಬ್ಬೊಬ್ಬರೂ ಒಂದೊಂದು ಬಗೆಯ ದಾರಿಗಳನ್ನು ಹುಡುಕುತ್ತಾರೆ. ಸಂಗೀತ, ಸಾಹಿತ್ಯ, ಮನರಂಜನೆ, ಓದು, ಪ್ರವಾಸ, ಕಲೆ- ಚಿತ್ರಕಲೆ, ಸಮಾಜ ಸೇವೆ, ಕ್ರಿಯಾಶೀಲ ಚಟುವಟಿಕೆ…ಇತ್ಯಾದಿ. ಆದರೆ ಎಂದಾದರೂ ಒಮ್ಮೆ ಬದುಕಿನ ಎಲ್ಲಾ ಜಂಜಾಟಗಳಿಂದ ದೂರವಿದ್ದು , ಸ್ನೇಹಿತರು, ಕುಟುಂಬ, ಬಂಧು ಬಳಗ, ಮೈಲ್, ಮೊಬೈಲ್, ನೆಟ್ ಎಲ್ಲವನ್ನೂ ಬಿಟ್ಟು ಒಬ್ಬರೇ ನಿಮ್ಮೊಳಗೆ ನೀವು ಮೌನಿಯಾಗಿ ಇರಲು ಪ್ರಯತ್ನಿಸಿದ್ದೀರಾ ? ಮೌನದ ಸುಖವನ್ನು ಅದು ನೀಡುವ ಚೈತನ್ಯವನ್ನು ಅನುಭವಿಸಿದ್ದೀರಾ ? . ಮೌನದ ಬೆಚ್ಚನೆಯ ಅನುಭವದ ಆಶ್ರಯದಲ್ಲಿ ಅನೇಕ ಹೊಸ ಹೊಸ ಅಲೆಯ ಕನಸುಗಳ‌ ಹಕ್ಕಿಗಳು ಸೃಜನಶೀಲತೆಯ ರೆಕ್ಕೆಯೊಂದಿಗೆ ಬದುಕಿನ ದಿಗಂತದೆಡೆಗೆ ಸ್ವಚ್ಚಂದವಾಗಿ ಹಾರಾಡುವ ಪರಿಗೆ ಮನಸೋತಿದ್ದೀರಾ..??

ಫೋಟೋ ಕೃಪೆ : Art lounge

ರಾತ್ರಿಯಲ್ಲಿ ಮನೆಯ ಟೆರೇಸ್ ಮೇಲೆ ಮೌನವಾಗಿ ಕುಳಿತು ಬಾನೆಲ್ಲಾ ಹರಡಿಕೊಂಡಿರುವ ನಕ್ಷತ್ರಗಳತ್ತ ತದೇಕವಾಗಿ ದಿಟ್ಟಿಸಿ ಅದು ಬಿಂಬಿಸುವ ನಾನಾರ್ಥಗಳ ಅಂತರಂಗವನ್ನು ಹೊಕ್ಕಿದ್ದೀರಾ..?? ಜನರಹಿತ ವಾತಾವರಣದಲ್ಲಿ , ಪ್ರಕೃತಿಯ ಮಧ್ಯದಲ್ಲಿ, ಹಸಿರು ಗಿಡ ಮರ ಬಳ್ಳಿಗಳ ಕಾಡು ಮೇಡಿನಲ್ಲಿ ಮೌನ‌ ಕೊಡುವ ಅನುಭವವನ್ನು ಆಸ್ವಾದಿಸಿದ್ದೀರಾ..? ಝುಳು ಝುಳು ಹರಿಯುವ ನದಿಗಳ ಮಾರ್ದವತೆಯ ಮುಂದೆ ಮೌನವಾಗಿ ಮಂಡಿಯೂರಿ ಶರಣಾಗತರಾಗಿದ್ದೀರಾ..??

ಹಾಗಿದ್ದಲ್ಲಿ ಮೌನದ ನೈಜ ತಾಕತ್ತು, ಸೌಂದರ್ಯ ಹಾಗೂ ಆಂತರ್ಯ ಅರ್ಥವಾದೀತು ! ಪ್ರಾಯಶಃ ನಿಮಗೆ ಗೊತ್ತಿಲ್ಲದೆಯೂ ಜೀವನ‌ ಅನ್ನೋದು ಈ ಅನುಭವಕ್ಕೆ ನಿಮ್ಮನ್ನು ದೂಡಿದ್ದಿರಬಹುದು. ಆದರೆ ಅದರ ಸ್ವಾರಸ್ಯವನ್ನು , ರಸಾನುಭವವನ್ನು ನಾವು ಸೂಕ್ಷ್ಮ ವಾಗಿ ಅರಿತಿರುವುದಿಲ್ಲವಷ್ಟೇ !

ಮನುಷ್ಯ ಮೌನದೊಂದಿಗೆ‌ ಸಂವಹನ ಮಾಡುವ ವಾಸ್ತವ ಕಲೆಯನ್ನು ಅರಿತಾಗ ಮಾತ್ರ ಮೌನದ ನಿಜಾರ್ಥ‌ ಕಂಡುಕೊಳ್ಳಬಹುದೇನೋ ? ಯಾಕೆಂದರೆ ಮಾತಿಗಿಂತಲೂ ಮೌನದೊಂದಿಗೆ ಮಾತನಾಡುವ ಭಾಷೆ ಹೆಚ್ಚು ಪರಿಪೂರ್ಣ ಹಾಗೂ ಪರಿಣಾಮಕಾರಿ. ಅದರಲ್ಲೂ ನನ್ನೊಂದಿಗೇ ನಾನು ಮೌನವಾಗಿ ಸಂವಹಿಸಿದಾಗ ನಾನೇನೆಂಬುದರ ಸ್ಪಷ್ಟ ಅರಿವು ಉಂಟಾದೀತೇನೋ..?

ಗಂಡ ಹೆಂಡತಿ ನಡುವೆ ಜಗಳವಾದಾಗ, ತಂದೆ- ಮಕ್ಕಳ ನಡುವೆ ವಾದ- ವಿವಾದವಾದಾಗ, ಆಫ಼ೀಸ್ ನಲ್ಲಿ ಬಾಸ್ ವಿನಾಕಾರಣ ರೇಗಾಡಿದಾಗ, ಸ್ನೇಹಿತರು- ಬಂಧುಗಳ ಮಧ್ಯೆ ಭಿನ್ನಾಭಿಪ್ರಾಯ ಬಂದಾಗ, ನಿಮ್ಮ ಮನಸ್ಸಿಗೆ ವಿರುದ್ಧದ ಆರ್ಗ್ಯುಮೆಂಟ್ ಗಳನ್ನು ನೀವು ಕೇಳಬೇಕಾಗಿ ಬಂದಾಗ, ಮನಸ್ಸು ನೆಮ್ಮದಿಯಿಂದ ದೂರ ಸರಿಯುತ್ತಿದೆ ಎಂದೆನಿಸಿದಾಗ , ಒತ್ತಡ ಹೆಚ್ಚಾದಾಗ, ಆ ಕಡೆಯಿಂದ ಮತ್ತೊಬ್ಬ ವಿನಾಕಾರಣ ಕೂಗಾಡುತ್ತಿದ್ದಾಗ…….ಒಮ್ಮೆ ಮೌನದ ಸಾನ್ನಿಧ್ಯಕ್ಕೆ ನಿಮ್ಮನ್ನು ನೀವು ಒಪ್ಪಿಸಿಕೊಂಡು ನೋಡಿ…! ಕೆಲವು ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲಾ ಕಡೆ ಮೌನದ ಶಕ್ತಿ ಪಾಸಿಟಿವ್ ಆಗಿ ಅನಾವರಣವಾಗೋದು ಗ್ಯಾರಂಟೀ ಕಣ್ರೀ !



ಮರೆಯುವ ಮುನ್ನ

ಆದರೆ ನೆನಪಿಡಿ, ಈ ಮೌನವನ್ನು ನಮ್ಮೊಂದಿಗೆ ನಾವು ಎಂಜಾಯ್ ಮಾಡುವ ಹಂತದಲ್ಲಿಟ್ಟು ಕೊಳ್ಳುವುದು ಅತ್ಯವಶ್ಯಕ. ಮೌನ ನಮ್ಮ ನಿಯಂತ್ರಣ ಮೀರಿ ಅನರ್ಥಗಳಿಗೆ ದಾರಿ ಮಾಡಿಕೊಡುವ ಹಂತಕ್ಕೆ ಅದನ್ನು ಬಿಡಲೇ ಬಾರದು. ಆಗ ಮಾತೆಂಬ ಕಲ್ಲನ್ನು ಮೌನದ ಖಾಲೀ ಡಬ್ಬದೊಳಕ್ಕೆ ಹಾಕಲೇಬೇಕು. ! ಇಲ್ಲವಾದಲ್ಲಿ‌ ಅದು ಅನೇಕ ತರವಲ್ಲದ ಯೋಚನೆಗಳಿಗೆ ಅಥವಾ ಖಿನ್ನತೆಗೆ ನಿಮ್ಮ ಮನಸ್ಸಿಗೆ ದಾರಿ ಮಾಡಿಕೊಟ್ಟೀತು !

ಖುಷಿಗಾಗಿ ಮೌನದ ಕದ ತಟ್ಟಿ, ಆದರೆ ಖಿನ್ನತೆಗಾಗಿ ಅಲ್ಲ.!

ಒಟ್ಟಾರೆ, ಮೌನದ ಶಕ್ತಿಯನ್ನು ಅದರ ಅನಂತತೆಯನ್ನು ಹಾಗೂ ಮಾತಿನ ಕ್ಷಣಿಕತೆಯನ್ನು ಅರಿತವರಿಗೆ ಜೀವನ ಕಲೆ ನಿರ್ವಹಣೆ ಸುಲಭ ಅನ್ಸುತ್ತೆ!

ಏಕೆಂದರೆ

” ಮಾತು ಕಾಲದಷ್ಟೇ ಕ್ಷಣಿಕ, ಆದರೆ ಮೌನ ಅನಂತದಷ್ಟು ಆಳ ”

ಲಾಸ್ಟ್ ಪಂಚ್

ನಿಮ್ಮ ಮೌನ ಅರ್ಥವಾಗದವರಿಗೆ,  ನಿಮ್ಮ ಮಾತುಗಳೂ ಅರ್ಥವಾಗದು…!!

ಪ್ರೀತಿಯಿಂದ…


  • ಹಿರಿಯೂರು ಪ್ರಕಾಶ್ (ಲೇಖಕರು, ಚಿಂತಕರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW