ಮನೆಯ ಮುಂದೆ ನಾಯಿ ಇರಬೇಕು. ಅದು ರಕ್ಷಣೆಗೆ ಇರಬೇಕು ಮತ್ತು ನೋಡಲು ಸುಂದವಾಗಿಯೂ ಇರಬೇಕು. ಅದರ ಬೆಲೆ ಎಷ್ಟೇ ಇದ್ದರೂ ಶ್ವಾನ ಪ್ರಿಯರು ದುಡ್ಡುಕೊಟ್ಟು ಕೊಳ್ಳುತ್ತಾರೆ. ಶ್ವಾನ ಕೊಳ್ಳುವ ಮುಂಚೆ ಈ ಲೇಖನವೊಮ್ಮೆಓದಿ. ಇದು ಭಾಗ ೨. ಶ್ವಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಶುವೈಧ್ಯಾಧಿಕಾರಿ ಡಾ. ಎನ್.ಬಿ.ಶ್ರೀಧರ ಅವರು ನೀಡಿದ್ದಾರೆ.

ಫೋಟೋ ಕೃಪೆ : vetstreet
ಡಾಲ್ ಮೇಷಿಯನ್ : ನೋಡಿದ ತಕ್ಷಣ ಮನದಾಳಕ್ಕಿಳಿದು ಬಿಡುವಂತಹ ಸುಂದರ ನಾಯಿ ಡಾಲ್‍ಮೇಷಿಯನ್. ಬಿಳಿ ಹಿನ್ನೆಲೆಯಲ್ಲಿಕಪ್ಪುಅಥವಾಕಂದು ಚುಕ್ಕೆಗಳನ್ನು ಹೊಂದಿ ಬಹು ಮೋಹಕವಾಗಿ ಕಾಣುತ್ತದೆ. ಯುಗೋಸ್ಲೋವಿಯಾದ ‘ಡಾಲ್ ಮೇಷಿಯಾ’ ಎಂಬ ಪ್ರಾಂತ್ಯಇದರ ಮೂಲವಿರಬಹುದೆಂದು ಊಹಿಸಲಾಗಿದೆ. ೧೯೧೨ – ೧೩ ರ ಬಾಲ್ಕನ್‍ಯುದ್ಧದಲ್ಲಿಇದು ಬಹುವಾಗಿ ದೂತಕಾರ್ಯಕ್ಕೆ ಉಪಯೋಗಿಸಲ್ಪಟ್ಟಿತ್ತು. ಅಲ್ಲದೇ ಕಳೆದ ಮೂರು ಶತಮಾನಗಳಿಂದಲೂ ಈ ತಳಿಯ ನಾಯಿಗಳು ಕಾವಲು ಕಾಯಲು, ಕುರಿಮಂದೆಗುಂಪುಗೂಡಿಸಲು, ಗಾಡಿ ಎಳೆಯಲು ಮತ್ತು ಬೇಟೆಯಾಡಲು ಉಪಯೋಗಿಸಲ್ಪಡುತ್ತಿವೆ. ಇಲಿ ಹಿಡಿಯುವಲ್ಲಿ ಸಹ ಇವು ಉಪಕಾರಿ. ರಾಜ ಮನೆತನದವರಿಗೆ ಈ ನಾಯಿ ಬಲು ಇಷ್ಟ. ಅವರ ಕುದುರೆ ಮತ್ತು ಕೋಚ್ ಗಾಡಿಯೊಂದಿಗೆಯಾವಾಗಲೂ ಒಂದೆರಡು ಡಾಲ್‍ಮೇಷಿಯನ್‍ಗಳ ಸವಾರಿಯೂ ಹೊರಡುತ್ತಿತ್ತು. ಅಗ್ನಿ ಶಾಮಕದಳದವರಿಗಂತೂ ಅಚ್ಚುಮೆಚ್ಚಿನ ಸಂಗಾತಿ ಇದು.
ಈಗ ಜೊತೆಗಾರ ನಾಯಿಯಾಗಿ ಸಾಕಲ್ಪಡುತ್ತಿರುವ ಡಾಲ್‍ಮೇಷಿಯನ್ ತುಂಬಾ ಸಹನಾಮಯಿ ಮತ್ತು ಕರುಣಾಮಯಿ. ಹೊಸಬರನ್ನು ಸಂದೇಹದಿಂದ ನೋಡುವಇದುಒಡೆಯನಆಜ್ಞಾಪಾಲಕ. ಮಕ್ಕಳನ್ನು ಕಂಡರಂತೂಇದಕ್ಕೆ ಬಲು ಪ್ರೀತಿ.
ಸುಮಾರು ೨೧ ರಿಂದ ೨೪ ಅಂಗುಲ ಎತ್ತರ ಬೆಳೆಯುವ ಡಾಲ್‍ಮೇಷಿಯನ್‍ನತೂಕ ೨೨ ರಿಂದ ೨೫ ಕಿಲೋಗ್ರಾಂ. ಇದಕ್ಕೆ ಸಾಕಷ್ಟು ವ್ಯಾಯಾಮದಅಗತ್ಯವಿದೆ. ಇದು ಸ್ವಲ್ಪಅಪರೂಪದ ತಳಿಯಾದ್ದರಿಂದ “ಇನ್-ಬ್ರೀಡಿಂಗ್” ಆಗಿರುವ ಸಾಧ್ಯತೆಗಳು ಹೆಚ್ಚು. ಅಂತಹ ಮರಿಗಳಲ್ಲಿ ಅನುವಂಶಿಕ ಕಿವುಡುತನ ಬರಬಹುದು.
ನವಜಾತ ಡಾಲ್‍ಮೇಷಿಯನ್ ಮರಿಯ ಮೈಮೇಲೆ ಚುಕ್ಕೆಗಳಿರುವುದಿಲ್ಲ!ಎರಡು ವಾರಗಳ ನಂತರ ಅವು ಕಾಣಿಸಿಕೊಂಡು ಒಂದು ವರ್ಷದವರೆಗೂ ಅಭಿವೃದ್ಧಿ ಹೊಂದುತ್ತವೆ.

ಫೋಟೋ ಕೃಪೆ : laufschuhe
ಲ್ಹಾಸಾಪ್ಸೋ : ಕಣ್ಣೇ ಕಾಣಿಸದಂತೆ ಮುಖದ ತುಂಬಾ ಮತ್ತು ಮೈಯೆಲ್ಲಾ ಕೂದಲನ್ನು ಹೊಂದಿರುವ ಚುರುಕು ನಾಯಿಯೊಂದನ್ನು ನೀವು ನೋಡಿರಬಹುದು. ಅದುವೇ ಲ್ಹಾಸಾಪ್ಸೋ. ಟಿಬೆಟಿಯನ್ನರ ಧಾರ್ಮಿಕ ಕೇಂದ್ರವಾದ ‘ಲ್ಹಾಸಾ’ ನಗರ ಈ ತಳಿಯ ತವರೂರು. ಅಲ್ಲಿಯ ದೇವಸ್ಥಾನಗಳಲ್ಲಿ ಮತ್ತು ಮಠಗಳಲ್ಲಿ ಎರಡು ಸಾವಿರ ವರ್ಷಗಳಿಂದ ಕಾಪಾಡಲ್ಪಟ್ಟ ಈ ತಳಿಯನ್ನು ಟಿಬೆಟಿಯನ್ನರು ದೈವ ಸ್ವರೂಪಿ ಎಂದು ಭಾವಿಸುತ್ತಾರೆ. ಏಕೆಂದರೆ ಒಡೆಯನ ಮರಣಾನಂತರ ಆತನಆತ್ಮ ಲ್ಹಾಸಾಪ್ಸೋ ನಾಯಿಯ ದೇಹವನ್ನು ಸೇರುತ್ತದೆ ಎಂಬ ನಂಬಿಕೆ ಅವರಲ್ಲಿದೆ. ಈ ತಳಿಯನ್ನು ಹೊಂದಿರುವುದು ಅದೃಷ್ಟದಾಯಕ ಎಂದೂ ಪರಿಗಣಿಸಲ್ಪಟ್ಟಿದೆ. ಆದ್ದರಿಂದ ಟಿಬೆಟಿಯನ್ನರು ಲ್ಹಾಸಾಪ್ಸೋ ನಾಯಿಗಳನ್ನು ಬೇರಾರಿಗೂಕೊಟ್ಟಿರಲಿಲ್ಲ. ಈ ಶತಮಾನದ ಆದಿಯಲ್ಲಿ ಟಿಬೆಟ್‍ನ ರಾಜರು ಮತ್ತುಧಾರ್ಮಿಕ ಮುಖಂಡದಲಾಯ್ ಲಾಮಾರವರು ಸ್ನೇಹ ಪೂರ್ವಕಕಾಣಿಕೆಯೆಂದು ಇವುಗಳನ್ನು ಕೊಟ್ಟಿದ್ದರಿಂದ ಈಗ ಅನೇಕ ದೇಶಗಳಲ್ಲಿ ಈ ತಳಿ ನೆಲೆಗೊಂಡಿದೆ.
ಎವರೆಸ್ಟ್‍ವೀರತೇನ್ ಸಿಂಗರಿಗೂ ಅಚ್ಚುಮೆಚ್ಚಿನದಾಗಿದ್ದ ಈ ತಳಿಯ ಮುಖ್ಯ ಗುಣಗಳು ಜಾಣ್ಮೆ, ಚುರುಕುತನ ಮತ್ತು ಕಷ್ಟ ಸಹಿಷ್ಣುತೆಗಳು. ಒಡೆಯನೊಂದಿಗೆ ಸ್ನೇಹದಿಂದಿದ್ದರೂಆತನಒರಟು ವರ್ತನೆಯನ್ನು ಸಹಿಸಿಕೊಳ್ಳುವುದಿಲ್ಲ. ಹೊಸಬರನ್ನು ಸಂಶಯದಿಂದಕಂಡು ಬೊಗಳುತ್ತವೆ. ಹೆಚ್ಚು ವ್ಯಾಯಾಮ ಬೇಕಾಗಿಲ್ಲವಾದ್ದರಿಂದ ಮನೆಯೊಳಗೆ ಮತ್ತುಅಪಾರ್ಟ್‍ಮೆಂಟ್ ವಾಸಕ್ಕೆ ಯೋಗ ಈ ತಳಿ.
ಲ್ಹಾಸಾಪ್ಸೋಗಳು ೧೦ -೧೧ ಅಂಗುಲ ಎತ್ತರವಿದ್ದು ೬ – ೭ ಕಿಲೋ ತೂಗುತ್ತವೆ. ಬಣ್ಣ ಬಿಳಿ, ಕಪ್ಪು, ಕಂದು ವರ್ಣಗಳ ವಿವಿಧ ಮಿಶ್ರಣದಲ್ಲಿರಬಹುದು. ಸಣ್ಣಗಾತ್ರದ ಇವು ದೀರ್ಘಾಯುಷಿಗಳು. ಸಾಮಾನ್ಯವಾಗಿ೧೨ – ೧೫ ವರ್ಷ ಕಾಲ ಬದುಕುತ್ತವೆ.
ಈ ನಾಯಿಗಳ ಕೂದಲನ್ನು ದಿನವೂ ಬಾಚುವುದು ಅತ್ಯಗತ್ಯ.

ಫೋಟೋ ಕೃಪೆ : snowypineswhitelabs
ಲ್ಯಾಬ್ರಡಾರ್‍ರಿಟ್ರೈವರ್ : ಅತ್ಯಂತ ಸ್ನೇಹಜೀವಿ ಲ್ಯಾಬ್ರಡಾರ್ ನಾಯಿ. ನ್ಯೂ ಫೌಂಡ್‍ಲ್ಯಾಂಡ್‍ನಲ್ಲಿ ಅಭಿವೃದ್ಧಿ ಪಡಿಸಲ್ಪಟ್ಟು ಮೀನುಗಾರರ ಮೂಲಕ ಇಂಗ್ಲೆಂಡ್ ಸೇರಿದ ಈ ತಳಿ ತನ್ನ ಹೊಂದಾಣಿಕೆ ಮನೋಭಾವಕ್ಕೆ ಹೆಸರುವಾಸಿ. ಬಹಳ ಬುದ್ಧಿಶಾಲಿಯಾದಇದಕ್ಕೆ ಸುಲಭವಾಗಿತರಬೇತಿ ನೀಡಬಹುದು.
ಲವಲವಿಕೆ, ಸಹನೆ ಮತ್ತುಒಡೆಯನನ್ನು ಖುಷಿ ಪಡಿಸುವಂತಹ ಗುಣಗಳನ್ನು ಹೊಂದಿದ ಲ್ಯಾಬ್ರಡಾರ್ ಮನೆಯಲ್ಲಿ ಸಾಕಲು ಬಲು ಯೋಗ್ಯವಾದದ್ದು. ಮಕ್ಕಳಿಗಂತೂ ಇದು ಮುದ್ದಿನ ಸಂಗಾತಿ. ಅವರು ಎಷ್ಟೇ ಚೇಷ್ಟೆ ಮಾಡಿದರೂ ಸಹಿಸಿಕೊಂಡು ಅವರೊಡನೆಆಟವಾಡುತ್ತದೆ. ಇದುಅತ್ಯುತ್ತಮಘ್ರಾಣಶಕ್ತಿ ಹೊಂದಿರುವುದರಿಂದ ಅಪರಾಧಿಗಳನ್ನು ಗುರುತಿಸಲು ಮತ್ತು ಮಾದಕ ವಸ್ತುಗಳ ಶೋಧನೆಯಲ್ಲಿ ಹೆಚ್ಚಾಗಿ ಉಪಯೋಗಿಸಲ್ಪಡುತ್ತಿದೆ. ನೀರಿನಲ್ಲಿ ಈಸು ಬಿದ್ದು ಮೀನು ಹಿಡಿಯುವುದು ಮತ್ತು ಬೇಟೆಯನ್ನು ಹೆಕ್ಕಿ ತರುವುದುಇದಕ್ಕೆ ಪ್ರಿಯವಾದ ಕೆಲಸಗಳು. ಈ ಕಾರ್ಯಕ್ಕೆ ಅನುಕೂಲವಾಗುವಂತೆ ಲ್ಯಾಬ್ರಡಾರ್ ನಾಯಿಯುಒತ್ತಾದ ತುಂಡುಗೂದಲುಗಳನ್ನು ಹೊಂದಿದೆ. ದೇಹರಚನೆ ಸಹ ದೃಢವಾಗಿದೆ.
ಚರ್ಮದ ಬಣ್ಣಕಪ್ಪುಅಥವಾ ಹಳದಿ ಮಿಶ್ರಿತ ಕಂದು.
ಈ ನಾಯಿಗಳು ೨೨ -೨೪ ಅಂಗುಲ ಎತ್ತರವಿದ್ದು ೨೭ – ೩೪ ಕಿಲೋ ತೂಕವಿರಬಹುದು.
ಬಹುಬೇಗ ದಪ್ಪಗಾಗುವಗುಣ ಇವುಗಳಿಗಿರುವುದರಿಂದ ಇವುಗಳ ಆಹಾರ ಮತ್ತು ವ್ಯಾಯಾಮದ ವಿಷಯದಲ್ಲಿ ಹೆಚ್ಚು ನಿಗಾವಹಿಸಬೇಕು.
ಕುರುಡರಕಣ್ಣಾಗಿಅವರಿಗೆದಾರಿತೋರಲು ಹೆಚ್ಚಾಗಿ ಉಪಯೋಗಿಸುತ್ತಿರುವುದು ಲ್ಯಾಬ್ರಡಾರ್ ನಾಯಿಗಳನ್ನೇ.

ಫೋಟೋ ಕೃಪೆ : askideas
ಗ್ರೇಟ್‍ಡೇನ್ : ಹೆಸರೇ ಹೇಳುವಂತೆ ಇವು ಗ್ರೇಟ್‍ಅಂದರೆದೈತ್ಯಾಕಾರದ ನಾಯಿಗಳು. ಆದರೆ ಇವುಗಳ ಮೂಲ ಡೆನ್ಮಾಕ್‍ಅಲ್ಲ. ಜರ್ಮನಿ ದೇಶದಲ್ಲಿಅಭಿವೃದ್ಧಿಪಡಿಸಲ್ಪಟ್ಟ ತಳಿ ಇದು. ಆರ್ಮನಿಯಲ್ಲಿ ಈ ನಾಯಿಯನ್ನು “ಜರ್ಮನ್ ಮಾಸ್ಟಿಫ್” ಎಂದುಕರೆಯುತ್ತಾರೆ. ೧೮೨೬ ರಲ್ಲಿ ಮೊದ ಬಾರಿಗೆ ಹಂಬರ್ಗ್‍ನ ಶ್ವಾನ ಪ್ರದರ್ಶನದಲ್ಲಿಗ್ರೇಟ್‍ಡೇನ್ ನಾಯಿಯು ಪ್ರದರ್ಶಿಸಲ್ಪಟ್ಟಿತು. ಕೆಲವೇ ವರ್ಷಗಳಲ್ಲಿ ಇದುಎಷ್ಟೊಂದುಜನಪ್ರಿಯವಾಯಿತೆಂದರೆ ೧೮೭೬ ರಲ್ಲಿ ಇದುಜರ್ಮನಿಯರಾಷ್ಟ್ರೀಯ ನಾಯಿ ಎಂದು ಘೋಷಿಸಲ್ಪಟ್ಟಿತು. ಅಧ್ಯಕ್ಷ ಬಿಸ್ಮಾರ್ಕ್ ಸಹ ಗ್ರೇಟ್ ಡೇನ್‍ಗಳನ್ನು ರಕ್ಷಣೆಗೆಂದುಇಟ್ಟುಕೊಂಡಿದ್ದರು. ಮೊದ ಮೊದಲುತುಂಬಾಕ್ರೂರವಾಗಿದ್ದ ಈ ನಾಯಿಗಳನ್ನು ಸೌಮ್ಯಗುಣಕ್ಕೆಒತ್ತುಕೊಟ್ಟು ವಂಶಾಭಿವೃದ್ಧಿ ಮಾಡಿದ್ದರಿಂದ ಇಂದಿನ ಗ್ರೇಟ್ ಡೇನ್‍ಗಳು ಮೃದು ಸ್ವಭಾವದವಾಗಿವೆ. ಯಜಮಾನನ ಬಗ್ಗೆ ನಿಷ್ಟೆ, ಮಕ್ಕಳ ಬಗ್ಗೆ ಸಹನೆ, ಸ್ನೇಹಿತರೊಂದಿಗೆ ಪ್ರೀತಿ ಮತ್ತುಅಪರಿಚಿತರ ಬಗ್ಗೆ ಅಸಹನೆಯನ್ನು ಮೈಗೂಡಿಸಿಕೊಂಡು ಬೆಳೆದಿವೆ. ಉತ್ತಮ ಮೈಕಟ್ಟು, ಶಕ್ತಿಶಾಲಿಯಾದ ಸ್ನಾಯುಗಳು ಮತ್ತುಆಕರ್ಷಕ ನಡಿಗೆಯಿಂದಾಗಿ ಗ್ರೇಟ್‍ಡೇನ್.
ಸುಮಾರು ೨೮ ರಿಂದ ೪೨ ಅಂಗುಲ ಎತ್ತರವಿರುವ ಈ ನಾಯಿಗಳು ೪೫ ರಿಂದ ೫೫ ಕಿಲೋ ತೂಗುತ್ತವೆ.
ಬಣ್ಣಕಪ್ಪು, ಹಳದಿ, ನೀಲಿ ಅಥವಾ ಈ ವರ್ಣಗಳ ಮಿಶ್ರಣದಲ್ಲಿ ಪಟ್ಟೆ ಪಟ್ಟೆಯಾಗಿ (ಬ್ರಿಂಡಲ್) ಅಥವಾ ಬಿಳಿ ವರ್ಣದ ಮೇಲೆ ಕರಿ ಮಚ್ಚೆಗಳಿಂದ ಕೂಡಿದಂತೆ (ಹರ್ಲಕ್ವಿನ್) ಇರಬಹುದು.
ಮನೆಯಲ್ಲಿ ಹೆಚ್ಚಿನ ಸ್ಥಳಾವಕಾಶ ಮತ್ತು ಈ ನಾಯಿಯನ್ನು ಸಾಕಲು ಉಂಟಾಗುವಖರ್ಚನ್ನು ಭರಿಸುವ ಶಕ್ತಿಯಿದ್ದಲ್ಲಿ ಮಾತ್ರ ಗ್ರೇಟ್‍ಡೇನ್ ಮರಿಯನ್ನು ತನ್ನಿ. ಇವುಗಳಿಗೆ ಹೊರಾಂಗಣದ ವ್ಯಾಯಾಮ ಮತ್ತು ಶಿಸ್ತುಬದ್ಧ ತರಬೇತಿ ಅತ್ಯಗತ್ಯ. ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅವರು ನಾಯಿಯ ಬಳಿ ಹೋಗುವಾಗ ಎಚ್ಚರವಹಿಸಿ. ನಾಯಿಗೆ ಯಾವುದೇ ದುರುದ್ದೇಶವಿಲ್ಲದಿದ್ದರೂ ಸಹ ಅದರ ಅಗಾಧ ಗಾತ್ರದಿಂದಾಗಿಯೇ ಏನಾದರೂ ಆಕಸ್ಮಿಕ ಸಂಭವಿಸಬಹುದು.
ಗ್ರೇಟ್‍ಡೇನ್ ನಾಯಿಮರಿಗಳು ಬಹ ಬೇಗ ಬೆಳೆಯುತ್ತವೆ. ಬೆಳವಣಿಗೆಯ ಅವಧಿ ೧೮ ರಿಂದ ೨೦ ತಿಂಗಳವರೆಗೆ. ಅಲ್ಲಿಯವರೆಗೂಅದಕ್ಕೆ ಒಳ್ಳೆಯ ಆಹಾರಕೊಡಬೇಕು. ಉತ್ತಮ ಬೆಳವಣಿಗೆ ಬರಲು ಮಾಂಸಾಹಾರಅಥವಾ ಸಿದ್ದ ಶ್ವಾನಆಹಾರವನ್ನುಕೊಡಬೇಕಾಗುತ್ತದೆ. ಊಟವಾದತಕ್ಷಣ ಇವುಗಳಿಗೆ ವ್ಯಾಯಾಮ ಮಾಡಿಸಬಾರದು. ಹಾಗೇ ಮಾಡಿಸಿದಲ್ಲಿ ನಾಯಿಯ ಹೊಟ್ಟೆ ತಿರುಚಿಕೊಳ್ಳುವ ಸಂಭವಇರುತ್ತದೆ.
ಇವು ಹೆಚ್ಚು ಕೂದಲಿಲ್ಲದ ನಾಯಿಗಳಾದ್ದರಿಂದ ಇವುಗಳ ಪಾಲನೆ ಸುಲಭ. ವಾರಕ್ಕೊಮ್ಮೆ ಬ್ರಷ್ ಮಾಡಿಎರಡು ವಾರಕ್ಕೊಮ್ಮೆ ಬೆಚ್ಚನೆಯ ನೀರಿನಿಂದ ಸ್ನಾನ ಮಾಡಿಸಿದರೆ ಸಾಕು.
ಈಜಿಪ್ಟ್‍ನಲ್ಲಿಕ್ರಿ.ಪೂ. ೨೨೦೦ ರಷ್ಟು ಹಳೆಯವಾದ ಗೋರಿಗಳಲ್ಲಿ ಗ್ರೇಟ್‍ಡೇನ್ ನಾಯಿಗಳನ್ನು ಹೋಲುವ ಚಿತ್ರಗಳಿವೆ. ಅಂದಿನಿಂದ ಇಂದಿನವರೆಗೂಜನಪ್ರಿಯ ಈ ಮೃದು ಮನಸ್ಸಿನ ದೈತ್ಯ!.

ಫೋಟೋ ಕೃಪೆ : AZ animals
ಪೂಡಲ್ : ನಾಯಿಯ ವಿವಿಧ ತಳಿಗಳ ಯಾವುದೇಚಿತ್ರಪಟವನ್ನು ನೋಡಿ, ಅದರಲ್ಲಿ ವಿಭಿನ್ನವಾಗಿಎದ್ದುಕಾಣುವುದು ಪೂಡಲ್ ತಳಿಯ ಚಿತ್ರ. ಪ್ರದರ್ಶನಕ್ಕೆಂದುಅದರಕೂದಲನ್ನು ಕಣ್ಸೆಳೆಯುವ ರೀತಿಯಲ್ಲಿಕತ್ತರಿಸುವುದರಿಂದಾಗಿ ಪೂಡಲ್ ನಾಯಿ ಒಂಥರಾತಮಾಷೆಯಾಗಿಕಾಣುತ್ತೆ. ಈ ತಳಿ ಜರ್ಮನ್ ಮೂಲದ್ದಾದರೂ ಹೆಚ್ಚಾಗಿ ಪ್ರಸಿದ್ಧಿಗೆ ಬಂದದ್ದು ಫ್ರಾನ್ಸ್‍ದೇಶದಲ್ಲಿ. ಜರ್ಮನ್ ಭಾಷೆಯಲ್ಲಿ ‘ಪೂಡೆಲ್’ ಎಂದರೆ, ನೀರಿನಲ್ಲಿ ಶಬ್ದ ಮಾಡುವುದುಎಂದರ್ಥ.
ಇಂದಿನ ಪೂಡಲ್‍ಗಳು ಮೂರು ವಿವಿಧಗಾತ್ರದಲ್ಲಿ ಲಭ್ಯವಿವೆ. ಸ್ಟಾಂಡರ್ಡ್ (೧೫ ಅಂಗುಲಕ್ಕಿಂತಲೂಎತ್ತರ), ಮಿನಿಯೇಚರ್ (೧೦ – ೧೫ ಅಂಗುಲ), ಮತ್ತುಟಾಯ್ ( ೧೦ ಕ್ಕಿಂತಲೂ ಕಡಿಮೆ). ಬಹಳ ಪುಟ್ಟದಾಗಿರುವ ಪೂಡಲ್‍ಗಳಿಗೆ ‘ಟೀಕಪ್’ ಎಂದೂಕರೆಯುತ್ತಾರೆ. ಒಂದೇ ನಾಯಿಗೆ ವಿವಿಧಗಾತ್ರದ ಮರಿಗಳೂ ಹುಟ್ಟಬಹುದು.
ಈ ರೀತಿಯ ಪೂಡಲ್‍ಗಳೂ ವಿವಿಧ ಬಣ್ಣದ್ದಾಗಿರಬಹುದು. ಬಿಳಿ, ಬೆಳ್ಳಿ, ಬೂದು, ನೀಲಿ, ಕಂದು, ಕೆಂಪು, ಕೆನೆ ಅಥವಾಕಪ್ಪು ಬಣ್ಣದವಾಗಿರಬಹುದು.
ದೊಡ್ಡಗಾತ್ರದ ಪೂಡಲ್‍ಗಳು ಸಾಧು ಸ್ವಭಾವದವಾಗಿದ್ದು ಮಕ್ಕಳೊಂದಿಗೆ ಹೊಂದಿಕೊಳ್ಳುತ್ತವೆ. ಅವು ಕಾವಲು ನಾಯಿಗಳಾಗಿಯೂ ಉಪಯೋಗವಾಗಬಲ್ಲವು. ಹೆಚ್ಚು ಜನಪ್ರಿಯವಾದ ಸಣ್ಣಗಾತ್ರದ ಪೂಡಲ್‍ಗಳು ಕೋಪಿಷ್ಟ ಸ್ವಭಾವದಾಗಿದ್ದು, ಮುದ್ದು ಮಾಡಿಸಿಕೊಳ್ಳಲು ಇಷ್ಟಪಡುತ್ತವೆ. ಈ ನಾಯಿಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಈ ಸ್ವಭಾವಜನ್ಮಜಾತವಾಗಿ ಬಂದಿರುವುದರಿಂದ ಮರಿ ಕೊಳ್ಳುವಾಗ ತಂದೆ-ತಾಯಿಯರನ್ನು ಗಮನಿಸಿಕೊಳ್ಳುವುದೊಳಿತು.
ಪೂಡಲ್ ನಾಯಿ ಪಾಲಕರ ಬಹುಮುಖ್ಯ ಕೆಲಸವೇನೆಂದರೆಅದರಕೂದಲನ್ನುಓರಣ ಮಾಡುವುದು. ದೇಹದ ಕೆಲವೆಡೆಗಳಲ್ಲಿ ಕೂದಲನ್ನು ಕತ್ತರಿಸಿ, ಕೆಲವೆಡೆ ಪೂರ್ತಿಯಾಗಿ ಶೇವ್ ಮಾಡಬೇಕಾಗುತ್ತದೆ. ಈ ಕತ್ತರಿಸುವಿಕೆಯಲ್ಲೂ ನಾಲ್ಕು ವಿಧದ ಕೇಶವಿನ್ಯಾಸಗಳಿವೆ. ಪಪ್ಪಿ, ಸ್ಫೋರ್ಟಿಂಗ್, ಇಂಗ್ಲೀಷ್ ಸ್ಯಾಡಲ್ ಮತ್ತುಕಾಂಟಿನೆಂಟಲ್ ಎಂಬ ಈ ವಿನ್ಯಾಸಗಳಲ್ಲಿ ಮೊದಲೆರಡು ಹೆಚ್ಚು ಜನಪ್ರಿಯ.

ಫೋಟೋ ಕೃಪೆ : marshallspetzone
ಪಗ್ : ಪಗ್ ತಳಿಯನ್ನು ನೋಡದವರಾರು? ಟಿ.ವಿ.ಯಲ್ಲಿ ಹಚ್ (ವೋಡಾಫೋನ್) ಮೊಬೈಲ್ ಫೋನಿನ ಜಾಹೀರಾತನ್ನು ನೋಡಿದವರಿಗೆಲ್ಲಾ ಬಾಲಕನನ್ನು ಬೆಂಬಿಡದೆ ಹಿಂಬಾಲಿಸುವ ನಾಯಿ ಚಿರಪರಿಚಿತ. ಅದುವೇ ‘ಪಗ್’ ನಾಯಿ. ಈ ಜಾಹೀರಾತಿನಿಂದಜನಪ್ರಿಯವಾದ ಪಗ್ ನಾಯಿಗಳ ಬೆಲೆ ಗಗನಕ್ಕೇರಿದೆ!
ಪಗ್ ತಳಿಯ ಮೂಲ ಚೀನಾದೇಶ. ಕ್ರಿಸ್ತಪೂರ್ವ ೪೦೦ ರಲ್ಲೇ ಈ ತಳಿಯ ಬಗ್ಗೆ ಉಲ್ಲೇಖಗಳಿವೆ. ನಂತರ ವ್ಯಾಪಾರಿಗಳ ಮೂಲಕ ಯುರೋಪನ್ನು ಪ್ರವೇಶಿಸಿದ ಪಗ್‍ಅಲ್ಲಿ ಬಹಳ ಜನಪ್ರಿಯವಾಯಿತು. ಹಾಲೆಂಡ್‍ನಆರೆಂಜ್ ಪ್ರಾಂತ್ಯದಲ್ಲಿಇದುರಜಕುಮಾರನ ಪ್ರಾಣ ಉಳಿಸಿದ್ದರಿಂದ ಅಲ್ಲಿಯಅಧಿಕೃತ ನಾಯಿಯೆಂಬ ಮನ್ನಣೆಯನ್ನು ಪಡೆಯಿತು.
ಪಗ್‍ಚಿಕ್ಕದೇಹವನ್ನು ಹೊಂದಿದ್ದರೂ ಬಲಿಷ್ಟವಾಗಿದೆ. ಇದರಎತ್ತರ ೧೦ -೧೧ ಅಂಗುಲವಿದ್ದುತೂಕ ೬ – ೮ ಕೆ.ಜಿ. ಇರಬಹುದು. ಬಣ್ಣ ಬೆಳ್ಳಿ ಅಥವಾ ಕೆನೆ ಬಣ್ಣದ್ದಾಗಿದ್ದು ಕಪ್ಪು ಮುಸುಡಿ ಹೊಂದಿರುತ್ತದೆ. ಬೆನ್ನಿನ ಮೇಲೂ ಕಪ್ಪುಛಾಯೆಇರಬಹುದು.
ಮನೆಗಳಲ್ಲಿ ಮತ್ತು ಅಪಾರ್ಟ್‍ಮೆಂಟ್‍ಗಳಲ್ಲಿ ಸಾಕಲು ಯೋಗ್ಯವಾದ ನಾಯಿ ಪಗ್. ಮಕ್ಕಳೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಅಪರಿಚಿತರನ್ನುಕಂಡು ಬೊಗಳುತ್ತವಾದರೂ ಉತ್ತಮ ಕಾವಲು ನಾಯಿ ಅಲ್ಲ. ಗಿಡ್ಡ ಮೂತಿ ಹೊಂದಿರುವುದರಿಂದ ಉಷ್ಣ ಪ್ರದೇಶಗಳಿಗೆ ಸೂಕ್ತವಾದದ್ದಲ್ಲ. ಬಿರು ಬಿಸಿಲಿಗೊಡ್ಡದೆ ನೆರಳಿನಲ್ಲಿ ಸಾಕಬೇಕು.

ಫೋಟೋ ಕೃಪೆ : Vetstreet
ಬಸೆಟ್ ಹೌಂಡ್ : ಪುಟ್ಟ ಕಾಲುಗಳ, ಮಾಟದೇಹದ ಈ ನಾಯಿ, ಉದ್ದವಾದ, ಇಳಿಬಿದ್ದ ಕಿವಿ, ಸುರುಳಿಯಾಕಾರದ, ಕೊನೆಯಲ್ಲಿ ಬಿಳಿ ಬಣ್ಣವಿರುವ ಬಾಲ ಹೊಂದಿದೆ. ಇದೂ ಹೌಂಡ್‍ಜಾತಿಗೇ ಸೇರಿದ್ದು ಫ್ರೆಂಚ್ ಮೂಲದ್ದು, ಬ್ಲಡ್‍ಹೌಂಡ್‍ನಷ್ಟೇ ನಿಖರವಾದಗ್ರಹಣ ಶಕ್ತಿ ಹೊಂದಿದೆ,
ಈ ಹಿಂದೆ ಬಸೆಟ್ ಹೌಂಡ್ ನಾಯಿಗಳ ದಂಡನ್ನು ಮೊಲಗಳ ಬೇಟೆಗೆ ಬಳಸುತ್ತಿದ್ದರು. ಹಿಂಡಿನಲ್ಲೇಇರುವ ಸ್ವಭಾವದಕಾರಣ ಅವು ಒಬ್ಬಂಟಿಯಾಗಿರಬಯಸುವುದಿಲ್ಲ. ಅಂದ ಹಾಗೆ ಹಷ್ ಪಪ್ಪಿ ಶೂಸ್‍ಜಾಹೀರಾತಿನಲ್ಲಿ ಬಳಸಲಾಗಿರುವ ನಾಯಿ ಬಸೆಟ್ ಹೌಂಡ್. ಅದರ ಹೆಸರುಜಾಸನ್.
ಎತ್ತರ ೧೩ – ೧೪ ಅಂಗುಲ ತೂಕ ೨೩ – ೨೮ ಕಿಲೋ.

ಫೋಟೋ ಕೃಪೆ : wikipedia
ಬ್ಲಡ್ ಹೌಂಡ್ : ಇದು ಪ್ರಬಲ ಆಘ್ರಾಣ ಶಕ್ತಿ ಹೊಂದಿರುವ ಹೌಂಡ್. ನಾಯಿಗಳಲ್ಲೇ ಅತ್ಯಂತ ಪ್ರಬಲ ವಾಸನಾ ಶಕ್ತಿಯನ್ನುಇದು ಹೊಂದಿದೆ. ಅಲ್ಲದೇಅತ್ಯಂತ ಶಕ್ತಿಯುತ ಪತ್ತೆ ನಾಯಿ ಇದು. ಅನೇಕ ದೇಶಗಳ ಭದ್ರತಾ ಸಿಬ್ಬಂದಿ ಕಳ್ಳರನ್ನು ಪತ್ತೆ ಹಚ್ಚಲು, ನಾಪತ್ತೆಯಾದ ಮಕ್ಕಳನ್ನು ಹುಡುಕಲು ಮತ್ತು ಭೂಕಂಪದಿಂದಾಗಿ ಅವಶೇಷಗಳಡಿಯಲ್ಲಿ ಸಿಲುಕಿರುವ ಜನರನ್ನು ಪತ್ತೆ ಹಚ್ಚಲು ಈ ನಾಯಿಯನ್ನು ಬಳಸುತ್ತಾರೆ.
ಸಾಧಾರಣ ನಾಯಿಗಳಿಗಿಂತ ಎತ್ತರದ ನಿಲುವು ಈ ನಾಯಿಗಳದ್ದು. ತುಟಿಯ ಮತ್ತುಗಲ್ಲದ ಕೆಳಗೆ ಸುಕ್ಕಾದ ಚರ್ಮ ಹೊಂದಿದೆ. ತನ್ನ ಉದ್ದವಾದ ಕಿವಿಗಳನ್ನು ಈ ನಾಯಿ ಪತ್ತೆ ಕಾರ್ಯಗಳಿಗೆ ಬಳಸುತ್ತದೆ.
ಈ ನಾಯಿಗಳು ಬೇಟೆಯಲ್ಲಿ ಪ್ರಾಣಿಗಳನ್ನು ಅಟ್ಟಾಡಿಸಿ ದಾಳಿ ಮಾಡಿಕೊಲ್ಲುತ್ತವೆಎನ್ನುವ ನಂಬಿಕೆಯಿದೆ. ಆದರೆ, ವಾಸ್ತವದಲ್ಲಿ ಇವು ಬೇಟೆಯನ್ನು ಸುತ್ತುವರಿದು ಮಾಲೀಕನ ಗಮನ ಸೆಳೆಯುತ್ತವೆ.
ಎತ್ತರ ೨೪ – ೨೬ ಅಂಗುಲ ತೂಕ ೪೦ – ೫೦ಕಿಲೋ.

ಫೋಟೋ ಕೃಪೆ : Dogtimes
ಬಸೆಂಜಿ: ಕೇಂದ್ರ ಆಫ್ರಿಕಾ ಮೂಲದ ಬಸೆಂಜಿ ತಳಿಯ ನಾಯಿ ಜಗತ್ತಿನಅತಿ ಪುರಾತನ ತಳಿಗಳಲ್ಲೊಂದು. ಈಜಿಪ್ಟಿನ ಪಳೆಯುಳಿಕೆಗಳಲ್ಲಿ ಬಸೆಂಜಿಯ ಚಿತ್ರಗಳನ್ನು ಸಾವಿರಾರು ವರ್ಷಗಳ ಹಿಂದೆಯೇಕೆತ್ತಿರುವುದನ್ನು ನೋಡಬಹುದು.
ಈ ನಾಯಿಯ ವೈಶಿಷ್ಟ್ಯವೇನೆಂದರೆ, ಇದು ಬೊಗಳುವುದಿಲ್ಲ ಬದಲಿಗೆ ವಿಚಿತ್ರವಾದ ಸದ್ದನ್ನುಮಾಡುತ್ತದೆ. ಸುಕ್ಕಾದ ಹಣೆ ಹೊಂದಿರುವ ಈ ತಳಿಯ ನಾಯಿಯ ಬಾಲ ಬಿರುಸಾಗಿ ಸುತ್ತಿಕೊಂಡಿರುತ್ತದೆ. ಅಷ್ಟೆ ಅಲ್ಲ, ಇದು ನಡವಳಿಕೆಗಳಲ್ಲಿ ನಾಯಿಗಿಂತ ಬೆಕ್ಕನ್ನು ಹೆಚ್ಚು ಹೋಲುತ್ತದೆ. ಹೆಚ್ಚು ನೀರನ್ನುಇಷ್ಟಪಡದ ಈ ನಾಯಿ ನೀರಿನಿಂದದೂರವಿರಲು ಎಷ್ಟು ಕಿ.ಮೀ. ದೂರ ಬೇಕಾದರೂಓಡುತ್ತದೆ.
ಎತ್ತರ ೧೬ -೧೭ ಅಂಗುಲ ತೂಕ ೯ – ೧೦ ಕಿಲೋ.

ಫೋಟೋ ಕೃಪೆ : American kannel Club
ಶಾರ್ ಪೀ
ಅತ್ಯಂತ ಪುರಾತನ ನಾಯಿ ತಳಿಗಳಲ್ಲೊಂದಾದ ಶಾರ್ ಪೀ ಚೀನಾ ಮೂಲದ್ದು. ರಾಜ ಮನೆತನದರಕ್ಷಕ ಹಾಗೂ ಹೋರಾಟಕ್ಕಾಗಿಇದನ್ನುಅಭಿವೃದ್ಧಿಪಡಿಸಲಾಗಿತ್ತು. ಶಾರ್‍ಪೀ ನಾಯಿಯ ನಿಷ್ಠೆ ವಿವಾದಾತೀತ. ಆದರೆ ಮುನ್ನುಗ್ಗುವ ಸ್ವಭಾವದ್ದಲ್ಲ, ಆದ್ದರಿಂದ ಹೋರಾಡುವಕಲೆಯನ್ನು ಕಲಿಸಬೇಕಾದಂಥ ಪರಿಸ್ಥಿತಿ. 1949ರಲ್ಲಿ ಚೀನಾದಲ್ಲಿಕಮ್ಯುನಿಸ್ಟ್ ಆಡಳಿತ ಮೊದಲಾದ ಮೇಲೆ ರಾಜಮನೆತನಕೊನೆಗೊಂಡಿತು. ಹಾಗೆಯೇ ಶಾರ್ ಪೀ ನಾಯಿಯಕತೆಯೂ ಮುಗಿದೇ ಹೋಗುವಂಥ ಪರಿಸ್ಥಿತಿ.
ಹೀಗಾಗಿ ಒಂದು ಕಾಲಕ್ಕೆ ಈ ತಳಿಯ ನಾಯಿಗಳನ್ನು ಅಳಿವಿನಂಚಿಗೆ ಬಂದಂಥವು ಎಂಬ ಪಟ್ಟಿಗೆ ಸೇರಿಸಲಾಗಿತ್ತು. ಇದರಚÀರ್ಮತುಂಬ ಒರಟು, ಹಾಗೂ ನೆರಿಗೆಯಿಂದಕೂಡಿರುವಕಾರಣ ಶಾರ್ ಪೀ ಎಂದು ಹೆಸರಿಸಲಾಯಿತು.
ಈ ಚೀನಿ ಶಬ್ದದ ಅರ್ಥ “ಮರಳು ಚರ್ಮ” ಅಂತ. ಅಂದಹಾಗೇ, ಗಾರ್ನಿಯರ್‍ರಿಂಕಲ್‍ಲಿಫ್ಟ್‍ಕ್ರೀಮ್‍ಜಾಹೀರಾತಿನಲ್ಲಿರುವ ರೂಪದರ್ಶಿ ಇದೇ “ಶಾರ್ ಪೀ”.
ಎತ್ತರ ೧೬ – ೨೪ ಅಂಗುಲ ತೂಕ ೧೬ – ೨೫ ಕಿಲೋ.

ಫೋಟೋ ಕೃಪೆ : American kannel Club
ಸಲೂಕಿ : ಮಧ್ಯಪ್ರಾಚ್ಯದ ಈ ನಾಯಿ ಅರಬ್ಬರಿಗೆಅತಿಪ್ರಿಯ. ಅವರಿಗೆ ನಾಯಿಗಳು ಅಸ್ಪøಶ್ಯವಾಗಿದ್ದರೂ ಸಹ ಸಲೂಕಿಗಳನ್ನು ಹಾಗೆಂದು ಪರಿಗಣಿಸುತ್ತಿರಲಿಲ್ಲ. ತಮ್ಮ ನಿವಾಸದಲ್ಲೇ ಇರಿಸಿಕೊಂಡಿದ್ದು ಪಾಲಿಸುತ್ತಿದ್ದರು. ತಮಗೆ ಸಹಾಯ ಮಾಡಿದವರಿಗೆಒಂದು ಮರಿಯನ್ನುಉಡುಗೊರೆಯಾಗಿಕೊಡುತ್ತಿದ್ದರು. ಯಾವಕಾರಣದಿಂದಲೂ ಮಾರುತ್ತಿರಲಿಲ್ಲ.
ಕ್ರಿ.ಪೂ. ೬೦೦೦ ವರ್ಷಗಳ ಹಿಂದೆಯೇ ಈ ನಾಯಿ ತಳಿ ಇತ್ತುಎನ್ನುವುದಕ್ಕೆ ದಾಖಲೆಗಳಿವೆ. ಈಜಿಪ್ಟಿನ ಕೆಲವು ಗೋರಿಗಳಲ್ಲಿ ಇದರರಕ್ಷಿತ ಶವ ದೊರೆತಿದೆ. ಅಂದಿನಿಂದ ಇಂದಿನವರೆಗೂ ಬೇಟೆಗಾಗಿಯೇ ಬಳಸಲ್ಪಡುತ್ತಿರುವ ನಾಯಿ ತಳಿ ಇದು. ದೃಷ್ಟಿ ಬೇಟೆಯ ನಾಯಿಯಾದಇದು ಬಹುದೂರಅನಾಯಾಸವಾಗಿಓಡಬಲ್ಲದು.
ಸಲೂಕಿ ನಾಯಿ ಒಂದೇ ನೆಗೆತಕ್ಕೆಐದು ಅಡಿ ಎತ್ತರ ಮತ್ತುಇಪ್ಪತ್ತನಾಲ್ಕು ಅಡಿ ದೂರ ನೆಗೆದದಾಖಲೆಯಿದೆ.
ಬಣ್ಣ : ಬಿಳುಪು, ಕೆನೆ, ಬಂಗಾರ, ಕೆಂಪು, ಕಪ್ಪು-ಕಂದು
ಎತ್ತರ : ೨೩ – ೨೮ ಅಂಗುಲ
ಇದು ಬೇಟೆನಾಯಿಯಾದ್ದರಿಂದ ಹೆಚ್ಚಾಗಿ ಮುಟ್ಟಿತಟ್ಟಬಾರದು. ಮೇಲೆರಗುವ ಸಾಧ್ಯತೆ ಇರುತ್ತದೆ.

ಚೌ ಚೌ
ಚೌ ಚೌಎಂದರೆ ಬೆರಕೆಎಂದರ್ಥ. ಸ್ಪಿಟ್ಜ್ ಪಂಗಡದ ಅನೇಕ ನಾಯಿಗಳ ಮಿಶ್ರಣದಿಂದಉತ್ಪನ್ನವಾಗಿರುವ ನಾಯಿಯಾದುದರಿಂದ ಆ ಹೆಸರು ಬಂದಿರಬಹುದು. ಚೈನಾ ಮೂಲದ ಈ ನಾಯಿ ಕ್ರಿ.ಪೂ.2ನೇ ಶತಮಾನದಿಂದಲೂ ಬೇಟೆನಾಯಿಯಾಗಿ ಪ್ರಸಿದ್ಧಿ ಹೊಂದಿದೆ. ಬಾಲವನ್ನು ಮೇಲೆತ್ತಿ ಹಿಡಿದುತಿರುಗಾಡುವ ಬಲಿಷ್ಠ ನಾಯಿಗಳಿವು. ಕತ್ತಿನ ಬಳಿ ಹೆಚ್ಚು ಕೇಸರ ಹೊಂದಿದ್ದು ಸಿಂಹದಂತೆ ಕಾಣುತ್ತವೆ. ಒಬ್ಬಯಜಮಾನನಲ್ಲಿ ಪೂರ್ಣ ನಿಷ್ಠೆಯುಳ್ಳ ನಾಯಿಗಳಿವು. ನಾಲಿಗೆ, ಬಾಯಿಯಂಗಳ ಮತ್ತುಒಸಡು ನೀಲಿ ವರ್ಣದ್ದಾಗಿರುವುದು ಈ ತಳಿಯ ವೈಶಿಷ್ಟ್ಯ.
ಬಣ್ಣ : ಕಪ್ಪು, ಕೆಂಪು, ಕಂದು, ಕೆನೆ, ಬಿಳುಪು
ಎತ್ತರ : ಹದಿನೆಂಟು ಅಂಗುಲಕ್ಕಿಂತಲೂ ಹೆಚ್ಚು

ಫೋಟೋ ಕೃಪೆ : AZ Animals
ಶಿಟ್ಜು
ಟಿಬೆಟ್ ಮೂಲದ ಈ ನಾಯಿಗಳು ಚಟುವಟಿಕೆ ಮತ್ತುಎಚ್ಚರಿಕೆಯಿಂದಿರುವಂತಹವು. ದುಂಡಾದತಲೆತುಂಬಾಕೂದಲಿದ್ದು, ಕಣ್ಣುಗಳನ್ನು ಮುಚ್ಚುವಂತೆ ಕೆಳಗೆ ಜೋತಾಡುತ್ತದೆ. ಟಿಬೆಟ್‍ನಲ್ಲಿಇದನ್ನು ‘ಸಿಂಹ-ನಾಯಿ’ ಎಂದುಕರೆಯುತ್ತಾರೆ.
ಬಣ್ಣ : ಯಾವುದೇ ವರ್ಣವಿರಬಹುದು. ಮುಖ ಮಧ್ಯೆ ಬಿಳಿ ಪಟ್ಟೆ ಮತ್ತು ಬಾಲದತುದಿಯಲ್ಲಿ ಬಿಳಿಬಣ್ಣ ಅಪೇಕ್ಷಿತ.
ಎತ್ತರ : ೧೦ -೧೧ ಅಂಗುಲ
ತೂಕ : ೮ ಕಿಲೋ

ಫೋಟೋ ಕೃಪೆ : Rover
ಹಸ್ಕಿ
ಇತ್ತೀಚೆಗೆ ನಮ್ಮದೇಶದಲ್ಲಿ ಹೆಚ್ಚು ಜನಪ್ರಿಯವಾಗಿರುವ ನಾಯಿ ತಳಿಯಿದು, ಶೀತವಲಯದಲ್ಲಿ ಹಿಮದ ಮೇಲೆ ಜಾರುಬಂಡಿಗಳನ್ನೆಳೆಯುವ ಶಕ್ತ ನಾಯಿ. ಒಂಭತ್ತು ನಾಯಿಗಳನ್ನು ಕಟ್ಟಿರುವ ಬಂಡಿಯಲ್ಲಿ ೪೫೦ ಕಿಲೋ ತೂಕದ ಸಾಮಾನು ಹೇರಬಹುದು. ಆಹಾರ ಸಮರ್ಪಕವಾಗಿದ್ದಲ್ಲಿ ಹಲವು ತಿಂಗಳ ಕಾಲ ಸತತವಾಗಿ ಎಳೆಯುತ್ತ ಸಹಸ್ರಾರು ಮೈಲಿ ದೂರಕ್ರಮಿಸಬಲ್ಲವು. ಇವುಗಳಿಗೆ ಪ್ರತ್ಯೇಕವಾಗಿ ನೀರಿನಅಗತ್ಯವಿಲ್ಲ. ಹಿಮವನ್ನೇತಿಂದುದಾಹ ತಣಿಸಿಕೊಳ್ಳುತ್ತವೆ.
ಎತ್ತರ : ೨೫ ಅಂಗುಲ
ತೂಕ : ೩೫ -೪೫ ಕಿಲೋ
ಬಣ್ಣ : ಬೂದು, ಕಪ್ಪು, ಬಿಳುಪು

ಫೋಟೋ ಕೃಪೆ : DOGstar
ಚಿಹುವಾಹುವಾ : ಈ ತಳಿ ಮೆಕ್ಸಿಕೋದೇಶದಚಿಹುವಾಹುವಾ ಪ್ರದೇಶದಲ್ಲಿಅಭಿವೃದ್ಧಿಪಡಿಸಲ್ಪಟ್ಟಂತಹದ್ದು. ಅತ್ಯಂತ ಸಣ್ಣ ಸುಂದರ ನಾಯಿಗಳಿವು. ಅಝ್‍ಟೆಕ್ ಸಂಸ್ಕøತಿಯಲ್ಲಿ ಇವುಗಳನ್ನು ದೇವತೆಗಳಿಗೆ ಬಲಿ ಕೊಡಲೂ ಹಾಗೂ ಕೊಬ್ಬಿಸಿ ತಿನ್ನಲೂ ಬಳಸುತ್ತಿದ್ದರು ಎಂದು ಕೆಲ ಇತಿಹಾಸಕಾರರುಅಭಿಪ್ರಾಯ ಪಡುತ್ತಾರೆ. ಕೆಲವರು ಇವು ಚೀನ ಮೂಲದವೆಂದೂಅಥವಾ ಮೆಕ್ಸಿಕೋದಇನ್ನೊಂದು ತಳಿ ಪಾಪಿಲಾನ್ ನಾಯಿಗಳಿಂದ ಉತ್ಪನ್ನವಾಗಿರಬಹುದೆಂದೂ ಹೇಳುತ್ತಾರೆ. ಇವುಗಳಲ್ಲಿ ಎರಡು ವಿಧ. ನೀಳ ಕೂದಲಿನವು ಮತ್ತು ನುಣುಪುಗಿಡ್ಡಕೂದಲಿನವು.
ಬಣ್ಣ : ಬಿಳುಪು, ಕಪ್ಪು, ಸುವರ್ಣ
ಎತ್ತರ : ೬ -೮ ಅಂಗುಲ
ತೂಕ : ೨ .೫ ಕಿಲೋ
ಫ್ಲೋರಿಡಾದ ಕಿಸ್ಸಿಮೀಯಲ್ಲಿರುವ ಮಿರಾಕಲ್ ಮಿಲಿ ಹೆಸರಿನಆರು ವರ್ಷದ ವಯಸ್ಸಿನ ಚಿಹುವಾಹುವಾ ನಾಯಿಯೊಂದು ವಿಶ್ವದಲ್ಲೇಅತ್ಯಂತಚಿಕ್ಕಗಾತ್ರ ಹಾಗೂ ಅತ್ಯಂತ ಹೆಚ್ಚು ಸಲ ಕ್ಲೋನಿಂಗ್ ಮಾಡಲ್ಪಟ್ಟ ಶ್ವಾನಎನ್ನುವಡಬಲ್ ವಿಶ್ವದಾಖಲೆಯನ್ನು ಹೊಂದಿದೆ. ಇದರಎತ್ತರ ಕೇವಲ 9.65 ಸೆಂ.ಮೀ. ಹಾಗೂ ತೂಕಒಂದು ಪೌಂಡ್‍ಗಿಂತತುಸು ಜಾಸ್ತಿ.
ಇತರ ನಾಯಿಗಳು (ದೇಶಿ ನಾಯಿ) – ಯಾವಜಾತಿಗೂ ಸೇರದ ಬೆರಕೆ ನಾಯಿಗಳಿವು. ಪ್ರಪಂಚದಎಲ್ಲೆಡೆ ಇವುಗಳನ್ನು ಕಾಣಬಹುದು. ಗಡಸು ಸ್ವಭಾವದ ಇವುಗಳಿಗೆ ಸಹಿಷ್ಣುತೆ ಹೆಚ್ಚು. ಸಾಕುವುದು. ಸುಲಭ. ಒಳ್ಳೆಯ ಕಾವಲುಗಾರ ನಾಯಿಗಳು. ನಾಯಿಪ್ರಿಯರುಇಂತಹ ನಾಯಿಗಳನ್ನೇ ಹೆಚ್ಚು ಸಾಕುವುದರಿಂದ ಸಾಮಾಜಿಕ ಪಿಡುಗಾಗಿರುವ ಬೀದಿನಾಯಿಗಳ ಉಪಟಳವನ್ನು ತಪ್ಪಿಸಿದಂತಾಗುತ್ತದೆ.
- ಡಾ.ಎನ್.ಬಿ.ಶ್ರೀಧರ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ
