ಮಕ್ಳು, ಮರಿ ಅನ್ನೋದೆಲ್ಲಾ ನಮ್ಮ ಭ್ರಮೆ. ಯಾರಿಗೆ ಯಾರೂ ಇಲ್ಲಎಂದು ರಾಮ್ಮಣ್ಣ ಹೇಳುತ್ತಿದ್ದಾಗ ಜಾನಕಿ ” ಹೂಂ .. .” ಗುಡುತ್ತಿದ್ದಳಷ್ಟೇ. ಕಡಿಮೆ ಉಂಡರೆ ಒತ್ತಾಯ ಮಾಡಲು ಮಕ್ಕಳೆನ್ನಿಸಿಕೊಂಡವರು ಹತ್ತಿರ ಇರುತ್ತಿರಲಿಲ್ಲ.
ಆದರೆ ಜಾನಕಿಗೆ ಹಾಗೆ ಅನ್ನಿಸುತ್ತಿರಲಿಲ್ಲ . ” ಸುಮ್ನೆ ಡಾಕ್ಟ್ರಿಗೆ ದುಡ್ಡು ಸುರೀಬೇಕಲ್ಲಪ್ಪಾ ಎನ್ನುವ ಸಂಶಯದಲ್ಲಿ ಅವಳು ತೀರಾ ಅನಿವಾರ್ಯವೆನ್ನಿಸಿದಾಗ ಮಾತ್ರ ಮಾತ್ರೆ ನುಂಗುವ ಅಭ್ಯಾಸ ಮಾಡಿಕೊಂಡಿದ್ದಳು. ಮೂರು ಕಾಸಿಗೂ ಕಂಡೋರ ಮುಂದೆ ಹಲ್ಲು ಗಿಂಜೋ ಸ್ಥಿತಿ ಅವಳ ಸ್ವಾಭಿಮಾನಕ್ಕೆ ಒಗ್ಗುವಂತದ್ದಾಗಿರಲಿಲ್ಲ. ಹೀಗಿದ್ದೂ ಮಗ ಕೈಬಿಟ್ಟ ಎಂದು ದೋಷಾರೋಪಣೆ ಮಾಡುವ ಹಾಗೂ ಇರಲಿಲ್ಲ. ಜಾನಕಿಯ ಆರೋಗ್ಯ ತೀರಾ ಕೆಟ್ಟಾಗ ಅವನು ಕಾರು ಮಾಡಿ ಅವಳನ್ನು ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗಿದ್ದೂ ಇತ್ತು. ಪ್ರೀತಿ ಇಲ್ಲ ಅಂತಲ್ಲ, ಇದೆ ಎಂದು ಹೇಳುವಂತೆಯೂ ಇಲ್ಲ.

ಫೋಟೋ ಕೃಪೆ : The Indian Express
ಸೊಸೆಯೂ ಅಂತದೇ. ಮಾತಿಲ್ಲ ಕತೆಯಿಲ್ಲ. ಹೊಟ್ಟೆಗೆ ಹಾಕುವುದಕ್ಕೆ ಕಡಿಮೆ ಮಾಡುವುದಿಲ್ಲ. ಕಡಿಮೆ ಉಂಡರೆ ಒತ್ತಾಯವೂ ಇಲ್ಲ. ಒಟ್ಟಿನಲ್ಲಿ ಏನೋ ಸರಿಯಿಲ್ಲ. ಎಲ್ಲಿ ಎಂದು ಹೇಳಲು ಬರುವುದಿಲ್ಲ. ಅಂತೂ ರಾಮಣ್ಣ ಜಾನಕಿಯ ಮನಸ್ಸಿನಲ್ಲಿ ನಿಶ್ಚಿಂತೆಯ ಸುರಕ್ಷಿತತೆಯ ಭಾವನೆ ಇರಲಿಲ್ಲ. ಎಲ್ಲೋ ಏನೋ ತಪ್ಪಾಗಿದೆ ಎನ್ನುವ ಅಸಹನೆ. ಇದೇನು ತಲೆಮಾರುಗಳ ಅಂತರವೋ? ತಮ್ಮ ಮನೆಯಲ್ಲಿ ಮಾತ್ರ ಹೀಗೋ…? ಅಥವಾ ಎಲ್ಲರ ಮನೆಯಲ್ಲೂ ಹೀಗೇನೋ ..? ರಾಮಣ್ಣನಿಗೆ ಅರ್ಥವಾಗುತ್ತಿರಲಿಲ್ಲ .
ಎರಡನೆಯವನು ಅಪರೂಪಕ್ಕೊಮ್ಮೆ ಮನೆಗೆ ಬರುತ್ತಿದ್ದ. ಬಂದಾಗ ತನ್ನ ಕರ್ತವ್ಯ ಎನ್ನುವಂತೆ ನೂರೋ, ಇನ್ನೂರೋ ಕೈಗೆ ಕೊಡುತ್ತಿದ್ದ. ಅವನಿಗೆ ಅವನದೇ ತಾಪತ್ರಯ. ಸೈಟ್ ಕೊಳ್ಳುವುದು, ಮನೆ ಕಟ್ಟಿಸುವುದು ಎಂದು ಅವನು ಅವನ ರಗಳೆಗಳಲ್ಲಿ ಮುಳುಗಿ ಹೋಗಿದ್ದಾನೆ. ಇನ್ನು ಮಗಳು ಬಂದರೆ ಅವಳೂ ಕೆಲ ದಿನಗಳ ಅತಿಥಿ. ಮಗ, ಸೊಸೆಯ ಕಣ್ಣು ತಪ್ಪಿಸಿ ಇವರು ಏನಾದರೂ ಗುಸು ಗುಟ್ಟಿದರೆ ಕೇಳಿದಂತೆ ಮಾಡುತ್ತಿದ್ದಳು. ಮುಖ ಸಣ್ಣ ಮಾಡಿದಂತೆ ಮಾಡುತ್ತಿದ್ದಳು. ಆಮೇಲೆ ತನ್ನ ಪಾಡಿಗೆ ತಾನು ಹೊರತು ಹೋಗುತ್ತಿದ್ದಳು. ಅವಳಿಂದ ಇವರು ನಿರೀಕ್ಷೆ ಮಾಡುವುದಾದರೂ ಏನು? ಏನೂ ಇಲ್ಲಾ. ಆದರೂ ರಾಮಣ್ಣ ಜಾನಕಿಯೊಡನೆ ಹೇಳುತ್ತಿದ್ದುದಿತ್ತು. ” ಮಕ್ಳು, ಮರಿ ಅನ್ನೋದೆಲ್ಲಾ ನಮ್ಮ ಭ್ರಮೆ. ಯಾರಿಗೆ ಯಾರೂ ಇಲ್ಲ ….”. ” ಹೂಂ .. .” ಗುಡುತ್ತಿದ್ದಳು ಜಾನಕಿ. ಮನಸ್ಸಿಗೆ ಮುಜುಗರವೆನ್ನಿಸುವ ಎಂತದೇ ಸಂದರ್ಭ ಬಂದರೂ ಒಬ್ಬರು ಇನ್ನೊಬ್ಬರೊಡನೆ ಹೇಳಿಕೊಂಡು ಹಗುರಾಗುತ್ತಿದ್ದರು. ನೋವ ಮರೆಯುತ್ತಿದ್ದರು. ಆದರೆ ಈಗ ಹಠಾತ್ತನೆ ತಾನು ಆಧರಿಸಿಕೊಂಡು ಬಂದಿದ್ದ ಅವಲಂಬನೆಯೇ ಕಡಿದು ಬಿದ್ದು ರಾಮಣ್ಣ ತತ್ತರಿಸಿದ್ದಾನೆ. ತಡವರಿಸುತ್ತಿದ್ದಾನೆ.

(ಏಣಗಿ ಬಾಳಪ್ಪ ಅವರ ನಾಟಕದ ಒಂದು ದೃಶ್ಯವನ್ನು ಕತೆಗೆ ಸಂದರ್ಭಿಕವಾಗಿ ಬಳಸಲಾಗಿದೆ)
ಜಾನಕಿ ಪಂಚಭೂತಗಳಲ್ಲಿ ಲೀನವಾಗಿ ನಾಲ್ಕೈದು ತಿಂಗಳು ಕಳೆಯುವಷ್ಟರಲ್ಲಿ ರಾಮಣ್ಣ ಗುರುತು ಸಿಗದಷ್ಟು ಬದಲಾಗಿ ಹೋದ. ಎಲುಬು, ಚರ್ಮದ ಕೋಲಾದ. ತಟ್ಟನೆ ಕೂತಲ್ಲಿಂದ ಎದ್ದರೆ ತಲೆ ಗಿರ್ ಎನ್ನತೊಡಗಿ, ಕಣ್ಣು ಮಂಜಾಗಿ ನಡೆದು ಹೋದರೆ ಹಿಂದಿನಿಂದ ಯಾರೋ ದೂಡುತ್ತಿದ್ದಾರೆಂಬಂತೆ ಮುಗ್ಗರಿಸಿ ಬಿದ್ದೇನೆನ್ನುವ ಅಂಜಿಕೆ. ಬಿಚ್ಚಿದ ಹಾಸಿಗೆ ಮಡಿಸುವುದು ನಿಂತು ಹೋಯ್ತು. ಮೂರು ಹೊತ್ತೂ ಹಾಸಿಗೆ ಹಿಡಿದು ಮಲಗಿರುವ ನಿತ್ರಾಣಿ ಅಪ್ಪ, ಮಗನ ತಲೆ ನೋವಾದ. ತಮ್ಮನಿಗೆ ಬುಲಾವ್ ಹೋಯ್ತು. ತಮ್ಮ ರಜೆ ಹಾಕಿ ಬಂದ. ” ಈ ಹಳ್ಳೀ ಮನೇಲಿ ಇವನ್ನ ಇಟ್ಕಂಡಿದ್ರೆ ಇನ್ನು ಹೆಚ್ಚು ದಿನ ಕಳೆಯಲ್ಲ. ನಾಳೆ ಪೂರಾ ಹಾಸಿಗೆ ಹಿಡಿದ್ರೆ ಏನು ಗತಿ?. ನೀನಾದ್ರೆ ಪೇಟೇಲಿದ್ದಿ. ಸಾವಿರ ಜನ ಡಾಕ್ಟರ್ಸ್ ಇದ್ದಾರೆ. ಅಪ್ಪನ್ನ ಕರ್ಕೊಂಡ್ ಹೋಗಿ ಸರಿಯಾದ ಡಾಕ್ಟರ್ ಹತ್ತಿರ ತೋರಿಸು. ನಂಗಂತೂ ತಲೆ ಕೆಟ್ಟು ಹೋಗಿದೆ ….” ಡಾಕ್ಟರ್ ಇರೋದೂ ಹೌದು ….. ಆದ್ರೆ ಮನೇಲಿ ಅಪ್ಪನ್ನ ನೋಡ್ಕೊಳ್ಳೋರು ಯಾರು …..? ” ಎಂದು ಸಣ್ಣವನ ಸಂಕಟ. ” ಏನಾದ್ರೂ ಮಾಡಬೇಕು. ಯಾರಿಲ್ಲಿದ್ರಿ ಜನ ಇಟ್ಕೋಬೇಕು ಎಂದು ಅಣ್ಣ ಅನ್ನುತ್ತಾನೆ.
ಜನ ಸಿಗೋದು ಅಷ್ಟು ಸುಲಭನಾ ?. ಯಾರ್ಯಾರನ್ನೋ ಇಟ್ಟಕೊಂಡು ನಾಳೆ ಯಾರೂ ಮನೆಯಲ್ಲಿ ಇಲ್ಲದಿದ್ದಾಗ ಇವನ ತಲೆ ಒಡೆದು ಮನೆ ದೋಚಕೊಂಡು ಹೋದ್ರೆ …..? ” ಎಂದು ತಮ್ಮ ಅಳುತ್ತಾನೆ. ಅವನು ಹೇಳುವುದು ಅವನ ಮಟ್ಟಿಗೆ ಸರಿ. ಇವನು ಹೇಳುವುದು ಇವನ ಮಟ್ಟಿಗೆ ಸರಿ. ರಾತ್ರೆಯ ಊಟವಾದ ಮೇಲೆ ಹೀಗೇ ಮಾತಿಗೆ ಮಾತು ಬೆಳೆದು ಅವರವರಿಗೇ ಅರಿವಿಲ್ಲದೇ ದನಿ ದೊಡ್ಡದಾಗಿ ಈಚೆ ಕೋಣೆಯಲ್ಲಿ ಮಲಗಿದ ರಾಮಣ್ಣನ ಕಿವಿ ಮಂದವಾಗಿಲ್ಲ. ಎಲ್ಲಾ ಕೇಳುತ್ತಲೇ ಇತ್ತು. “ನೀನೇನು ಮಗನಲ್ವಾ ? ನಿನ್ನ ಸಾಕಿಲ್ವಾ? ಓದಿಸಿಲ್ವಾ? ಅಮ್ಮನ್ನ ನಾನು ನೋಡ್ಕಳ್ಳಿಲ್ವಾ? ಈಗ ಅಪ್ಪನನ್ನಾದ್ರೂ ನೀನು ನೋಡ್ಕೋಬಾರ್ದಾ?”.
ದೊಡ್ಡವನಿಗೆ ಅಪ್ಪನನ್ನು ಸಾಗಹಾಕಬೇಕೆಂಬ ಒಂದೇ ಛಲ. ಸಣ್ಣವನಿಗೆ ಅದನ್ನು ಹೇಗಾದರೂ ಒದರಿಕೊಳ್ಳಬೇಕೆನ್ನುವ ಹಂಬಲ. ಕೇಳುತ್ತಾ- ಕೇಳುತ್ತಾ ರಾಮಣ್ಣನಿಗೆ ಹೊಟ್ಟೆ ತೊಳಸಿದಂತಾಗಿ ಹೊರಗಿನ ಯಾವ ಗದ್ದಲವೂ ಕಿವಿಗೆ ಬೀಳದಂತೆ ಕಿವಿಯ ಮೇಲೆ ಕಂಬಳಿ ಎಳೆದುಕೊಂಡು ಮಗ್ಗುಲು ಹೋಗಿ ತಿರುಗಿ ಮುದುರಿ ಮಲಗಿದ. ಎಷ್ಟೊಂದು ಪ್ರೀತಿಯಿಂದ ಹಾಲು, ಮೊಸರು ಉಣ್ಣಿಸಿ ಸಾಕಿದ ಮಕ್ಕಳು ಯಾರಲ್ಲಾದರೂ ಭೇದ ಮಾಡಿದ್ದಿತ್ತೇ ?. ಒಬ್ಬನು ಹೆಚ್ಚಲ್ಲ, ಇನ್ನೊಬ್ಬ ಕಡಿಮೆ ಅಲ್ಲ. ಮೂರಲ್ಲ ಇನ್ನು ಆರು ಜನ ಇದ್ದರೂ ಭೇದ ಮಾಡುತ್ತಿರಲಿಲ್ಲ. ಸಣ್ಣವರಿದ್ದಾಗ ಇವರಿಗೂ ಎಷ್ಟೊಂದು ಪ್ರೀತಿ. ‘ಅಮ್ಮಾ…’ ಎಂದು ಸೆರಗು ಹಿಡಿದು ಅಪ್ಪಾ ಎಂದು ಮೊಣಕಾಲು ತಬ್ಬಿ ಹಿಂದೆ- ಮುಂದೆ ನೆರಳಿನಂತೆ ತಿರುಗುತ್ತಿದ್ದರಲ್ಲವೇ?.
ಬುದ್ಧಿ ಬೆಳೆಯುತ್ತಿದ್ದಂತೆ, ರೆಕ್ಕೆ ಬಲಿಯುತ್ತಿದ್ದಂತೆ ಎಲ್ಲಿ ಹೋಯ್ತು ಆ ಮಮತೆ …?. ಹೆತ್ತವರೇ ಹೊರೆಯಾಗುವ ಈ ವೈಚಿತ್ರ್ಯಕ್ಕೆ ಏನು ಕಾರಣ ? ಹರೆಯಕ್ಕೆ ಯಾವಾಗಲೂ ಮುಪ್ಪು ಕಂಡರೆ ಮೊದಲಿಕೆಯೇ ? ತಾತ್ಸಾರವೇ ? ಅರೆ ಹೊಟ್ಟೆ ಉಂಡೂ ಹತ್ತು ಮಕ್ಕಳ ಹೆತ್ತವರು ಸಾಕ ಬಲ್ಲವರಾದರೆ , ಹತ್ತೂ ಮಕ್ಕಳು ಸೇರಿ ಅಪ್ಪ ಅಮ್ಮನನ್ನು ಯಾಕೆ ಸಾಕಲಾರರು ?? ಯಾಕೆ ಹೊಣೆ ಕಳಚಿಕೊಳ್ಳುವ ಧೂರ್ತತನ ? ಯಾಕೆ ? ಯಾಕೆ …?? ರಾಮಣ್ಣನ ತಲೆಯೊಳಗೆ ಉತ್ತರವಿಲ್ಲದ ಪ್ರಶ್ನೆಯ ಚಕ್ರ ಗಿರಗಿರನೆ ತಿರುಗುತ್ತಲೇ ಇತ್ತು. ಹೊಟ್ಟೆಯೊಳಗೆ ಸಂಕಟ ಏರುತ್ತಲೇ ಇತ್ತು …..
ಮುಗಿಯಿತು…
- ಪ್ರಭಾಕರ ತಾಮ್ರಗೌರಿ ( ಕತೆಗಾರರು ಮತ್ತು ಕವಿಗಳು )
