‘ಮುರಿದ ಕಡಲು’ ಕೃತಿ ಪರಿಚಯ

ಚಂದ್ರಶೇಖರ ಮದಭಾವಿ ಅವರ ‘ಮುರಿದ ಕಡಲು’ ಮುಖ ಪುಟದಲ್ಲಿರುವ ಹಡಗನ್ನು ನೋಡಿ ಈ ಕಥೆ ಕೂಡ ನಾವಿಕನೊಬ್ಬನ ಕಥೆ ಇರಬಹುದು ಎಂದು ಅನಿಸುವುದು ಸಾಮಾನ್ಯ. ಹೌದು ಇದರಲ್ಲಿ ನಾವಿಕನ ಪಾತ್ರವೂ ಇದೆ. ಈ ಕೃತಿಯ ಕುರಿತು ಲೇಖಕರಾದ ಎನ್.ವಿ.ರಘುರಾಂ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಕಾದಂಬರಿ: ಮುರಿದ ಕಡಲು.
ಹಿಂದಿಯ ಲೇಖಕರು: ಮನೋಜ್ ರೂಪ್ಡಾ
ಹಿಂದಿಯಿಂದ ಕನ್ನಡಕ್ಕೆ: ಚಂದ್ರಶೇಖರ ಮದಭಾವಿ.
ಪ್ರಕಾಶನ: ಛಂದ ಪುಸ್ತಕ.
ಬೆಲೆ: ೨೧೦ ಅಂಚೆ ವೆಚ್ಚ ಸೇರಿ.( ೯೯೪೫೯೩೯೪೩೬)

ಗಮನ ಸೆಳೆಯುವ ಶೀರ್ಷಿಕೆ, ಸಣ್ಣ ಹಡಗೊಂದು ಛಿದ್ರಗೊಂಡಿರುವ ಚಿತ್ರ ಹೊಂದಿರುವ ಮುಖಪುಟ, ಶ್ರೀ ವಸುಧೇಂದ್ರರವರ ಮುಖಪುಟದಲ್ಲಿ ಹಾಕಿದ್ದ ಶ್ರೀಮತಿ ಲಲಿತಾ ಸಿದ್ಧಬಸವಯ್ಯನವರ ಮುಟ್ಟಿ ನೋಡಿಕೊಳ್ಳವ ರೀತಿಯ ಅನಿಸಿಕೆ ಈ ಪುಸ್ತಕ ತೆಗೆದುಕೊಳ್ಳಲು ಮುಖ್ಯ ಕಾರಣ. ಪುಸ್ತಕ ಓದಿದ ನಂತರ ಇತ್ತೀಚಿನ ದಿನಗಳಲ್ಲಿ ನಾನು ಓದಿದ ಅತ್ಯುತ್ತಮ ಪುಸ್ತಕಗಳಲ್ಲಿ ಒಂದು ಅನಿಸಿತು. ಹಾಗಾಗಿ ಈ ಕಿರು ಪರಿಚಯ ಲೇಖನ.

“ಮುರಿದ ಕಡಲು ಮೂಡಿಸುವ ಪ್ರಕ್ಷುಬ್ಧ ಅಲೆಗಳು”

ಕಡಲನ್ನು ಪ್ರೀತಿಸದವರು ಯಾರು? ಕಡಲು ವಿಶಾಲತೆಗೆ, ನಿರಂತರ ಜೀವಂತಿಕೆಗೆ ಹೆಸರುವಾಸಿಯಾಗಿದೆ. ನಿರಂತರವಾಗಿ ಬರುವ ಅಲೆಗಳು, ತನ್ನೊಳಗೆ ಅಡಗಿಸಿಕೊಂಡಿರುವ ಜೀವರಾಶಿಗಳ ಜೊತೆಗೆ ಅಮೂಲ್ಯವಾದ ವಸ್ತುಗಳು ಒಂದು ಕಡೆಯಾದರೆ, ದೇಶಗಳನ್ನು ಮತ್ತು ಖಂಡಗಳನ್ನು ಸೇರಿಸುವ ಮಾಧ್ಯಮವಾದ ಈ ಕಡಲು ಎಲ್ಲರ ಮೇಲೆ ಪ್ರಭಾವ ಬೀರಿರುವುದರಲ್ಲಿ ಆಶ್ಚರ್ಯವೇನು ಇಲ್ಲ.

ಮುಖ ಪುಟದಲ್ಲಿರುವ ಹಡಗನ್ನು ನೋಡಿ ಈ ಕಥೆ ಕೂಡ ನಾವಿಕನೊಬ್ಬನ ಕಥೆ ಇರಬಹುದು ಎಂದು ಅನಿಸುವುದು ಸಾಮಾನ್ಯ. ಹೌದು ಇದರಲ್ಲಿ ನಾವಿಕನ ಪಾತ್ರವೂ ಇದೆ. ಆ ನಾವಿಕ ಸಮುದ್ರದಲ್ಲಿ ಹಡಗನ್ನು ನಡೆಯಿಸುವ ‘ಮೆರೈನ್ ಇಂಜನೀಯರ್’ ಮಾತ್ರ ಆಗಿರದೆ, ಭೂಮಿಯಲ್ಲಿ ಚಲಿಸುವ ಮತ್ತು ಜೀವಿಸುವ ಮನುಷ್ಯ ಕೂಡ ಆಗಿರುತ್ತಾನೆ. ಆತನು ಚಲಿಸುವ ದಾರಿಯಲ್ಲಿ ಬರುವ ಊರು, ಕಾಡು ಮತ್ತು ಕಡಲಿನ ಸುತ್ತ ನಡೆದ, ನಡೆಯುತ್ತಿರುವ ದೃಶ್ಯಗಳು ಕಥೆಯಲ್ಲಿ ಅನಾವರಣವಾಗುತ್ತಾ ಹೋಗುತ್ತದೆ. ವಿಶಿಷ್ಟವಾದ ನಿರೂಪಣೆಯಲ್ಲಿ ಸಾಗುವ ಕಥೆಯಲ್ಲಿ ನಾವು ಮೊದಲಿನ ಪುಟದಿಂದಲೇ ಆ ನಾವಿಕನ ಚಪ್ಪಲಿ ಹಾಕಿಕೊಂಡು, ಕಾಲುದಾರಿಯಲ್ಲಿ ಹೋಗುವಾಗ ಬಿದ್ದು, ಊರಿನಲ್ಲಿ ಓಡಾಡಿಕೊಂಡು, ರೈಲಿನಲ್ಲಿ ಪ್ರಯಾಣ ಮಾಡುತ್ತಾ, ಸಮುದ್ರದಲ್ಲಿ ತೇಲಿ ಹೋಗುವ ಅನುಭವ ಪಡೆಯುತ್ತೇವೆ. ಆಗ ದಾರಿಯಲ್ಲಿ ನಡೆಯುವ ಘಟನೆಗಳು, ಆ ಘಟನೆಗಳಿಗೆ ಕಾರಣವಾದ ಸಂಗತಿಗಳು ಅನಾವರಣವಾಗುತ್ತಾ ಹೋದಂತೆ ಕಡಲಿನಲ್ಲಿ ಬರುವಂತಹ ಅಲೆಗಳು ಮನದಲ್ಲಿ ಕೂಡ ಒಂದರ ಮೇಲೆ ಒಂದರಂತೆ ನಿರಂತರವಾಗಿ ಬರುತ್ತಾ ಹೋಗುತ್ತದೆ. ಕಾಡಿನಲ್ಲಿರುವಾಗ ಕೆಲವೊಮ್ಮೆ ದೊಡ್ಡ ಗುಡ್ಡದಿಂದ ಕೆಳಗೆ ಬಿದ್ದಂತೆ ಅನಿಸಿದರೆ, ಕೆಲವೊಮ್ಮೆ ಹುಣ್ಣಿಮೆಯ ದಿನ ಮಧ್ಯ ರಾತ್ರಿಯಲ್ಲಿ ಕಡಲಿನಲ್ಲಿ ಬರುವ ದೊಡ್ಡ ಅಲೆಗೆ ಸಿಕ್ಕಿ ತೀರಕ್ಕೆ ಎಸೆದಂತೆ ಅನಿಸುತ್ತದೆ.

ಕಾಲ ಯಾವುದೇ ಇರಲಿ, ಕಡಲಿನಲ್ಲಿ ಅಲೆಗಳು ಬರುವುದು ಹೇಗೆ ನಿಂತಿಲ್ಲವೋ ಹಾಗೆಯೇ ಎಲ್ಲಾ ಕಾಲದಲ್ಲೂ ಲಾಭವನ್ನು ಹೆಚ್ಚು ಮಾಡಿಕೊಳ್ಳುವ ಏಕೈಕ ಗುರಿಯಿಟ್ಟುಕೊಂಡು ಕೆಲಸ ಮಾಡುವ ವರ್ಗವೊಂದು ಇರುತ್ತದೆ. ಆ ವ್ಯಾಪಾರಿ ವರ್ಗದ ಜೊತೆಯಲ್ಲಿ ಸೇರಿ ಸಮುದ್ರದ ಆಳದಲ್ಲಿ ಕೂತು ಎಲ್ಲವನ್ನೂ ನಿಯಂತ್ರಿಸುವ ಆಡಳಿತ ವರ್ಗವೊಂದು ಕೂಡ ಇರುತ್ತದೆ. ಇವರುಗಳು ಸೇರಿ ಮಾಡುತ್ತಿರುವ ಎಲ್ಲ ರೀತಿಯ ಶೋಷಣೆಗಳನ್ನು ವಿರೋಧಿಸುವ ಜನರ ಸಣ್ಣ ಗುಂಪೊಂದು ಮೊದಲಿಗೆ ಕೆಲವು ಅಲೆಗಳನ್ನು ಹಿಂತಿರುಗಿಸಿ ಕಳುಹಿಸಿದಂತೆ ಕಂಡರೂ ಆಡಳಿತ ವರ್ಗ ಎಬ್ಬಿಸಿದ ದೊಡ್ಡ ಅಲೆಗಳಲ್ಲಿ ಒಂದು ಮೂಲೆಗೆ ತಳ್ಳಲ್ಪಟ್ಟಿರುವುದನ್ನು ಕೂಡ ಇಲ್ಲಿ ನೋಡಬಹುದು.

ಒಂದು ಸಮುದಾಯ ತಮ್ಮ ಸಾಂಪ್ರದಾಯಿಕ ಜೀವನ ಶೈಲಿಗೆ ಕುತ್ತು ಬಂದಾಗ ತೋರಿಸುವ ಆಕ್ರೋಶ, ಅದನ್ನು ಹತ್ತಿಕ್ಕಲು ಮಾಡುವ ಆಡಳಿತಶಾಹಿಯ ಪ್ರಯತ್ನದ ಕಥೆ ತೆರೆದುಕೊಂಡಿದೆ. ಹಾಗಾದರೆ ಇದೊಂದು ವರ್ಗ ಸಂಘರ್ಷದ ಕಥೆಯೇ ಎಂದು ಕೇಳಬಹುದು. ಆದರೆ ಈ ಕಥೆ ಅಷ್ಟಕ್ಕೆ ನಿಲ್ಲುವುದಿಲ್ಲ. ಒಂದು ಕಡೆ ‘ಕಾರ್ನಿವಲ್’ ಮಾಡಲು ಹೊರಟ ಜನರು ಕತ್ತಿ ಜಳಪಿಸಿ “ಬಲಿ” ತೆಗೆದುಕೊಳ್ಳುವ ರೀತಿ ಕ್ರೌರ್ಯ ಮೆರೆದರೆ, ಇನ್ನೊಂದೆಡೆ ಕತ್ತಿ ಹಿಡಿಯದೆ ದೇಶವೊಂದನ್ನು ಬರಡು ಮಾಡುವ ಸಂಗತಿ ಕೂಡ ಇಲ್ಲಿ ಇದೆ. ಇವೆರಡರ ಮಧ್ಯೆ ಭ್ರಾತೃತ್ವ ಮರೆತು ಮಾಡುವ ಕಾರ್ಯಗಳು ಹೃದಯವನ್ನು ಕಲಕುತ್ತದೆ. ಪ್ರತಿಯೊಂದು ಘಟನೆ ಮತ್ತು ಸಂಗತಿಗಳು ಆನಾವರಣವಾದಾಗ, ಮನದಲ್ಲಿ ಎದ್ದ ಪ್ರಕ್ಷುಬ್ಧ ಅಲೆಗಳು ಗಗನವನ್ನೇ ಮುಟ್ಟುತ್ತಿರುವ ಹಾಗೆ ಕಂಡು, ನಂತರ ಸಿನಿಮಾದಲ್ಲಿ ತೋರಿಸುವಂತೆ ಒಂದು ಕ್ಷಣ ಅಲ್ಲೇ ‘ಫ್ರೀಜ್’ ಆಗಿ, ನಂತರ ಡಬ್ಬ್ ಎಂದು ಕೆಳಗೆ ಬೀಳುತ್ತದೆ.

ಇಷ್ಟೇಲ್ಲಾ ನೋಡುವ ನಾವಿಕನ ಚಪ್ಪಲಿ ಧರಿಸಿರುವ ನಾವು “ತಣ್ಣಗೆ” ಇರಲು ಸಾಧ್ಯವೇ? ಸಾಕಿದ ದೊಡ್ಡ ಪ್ರಾಣಿಯೊಂದು ಕಾಡಿನ ಮಧ್ಯೆ ಹೋದಾಗ ಪಡುವ ಪಾಡು ಕಥೆಯ ಪ್ರಾರಂಭದಲ್ಲಿ ಬಂದು, ನಮ್ಮನ್ನು ಮುಂದಿನ ವಿಷಯಗಳನ್ನು ಅರಗಿಸಿಕೊಳ್ಳಲು ಮನೋ ಭೂಮಿಕೆಯನ್ನು ಸಿದ್ಧತೆ ಮಾಡುತ್ತದೆ. ದಾರಿಯಲ್ಲಿ ಹೋಗುವಾಗ ನಾವಿಕನ “ತಣ್ಣನೇ” ವ್ಯಕ್ತಿತ್ವದ ಕಾರಣ ಕೂಡ ಬಿಚ್ಚಿಕೊಳ್ಳುತ್ತದೆ.

ಹಾಗಾದರೆ ಹಡಗು ಅಲೆಯಿಂದ ದಡದ ಬಳಿಗೆ ತಳ್ಳಿದಾಗ ನಾವಿಕ ನಮ್ಮಿಂದ ಬೇರೆಯಾದನೆ? ಈ ಕಾದಂಬರಿಯಲ್ಲಿ ನಾಯಕಿ ಯಾರು? ಆಕೆ ಏನು ಮಾಡಿದಳು? ಇದು ಯಾವ ಕಾಲಘಟ್ಟದ ಕಥೆ? ಹಡಗು ಯಾವ ದೇಶಗಳಿಗೆ ಭೇಟಿ ಕೊಟ್ಟಿತ್ತು? ಕಾಡಿಗೆ ಹೋದ ಸಾಕಿದ ಪ್ರಾಣಿ ಯಾವುದು? ಇವರಿಗೆಲ್ಲಾ ಕೊನೆಯಲ್ಲಿ ಏನಾಯಿತು? ಮೊದಲಿಗೆ ಇದು ಯಾವ ರಾಜ್ಯದಲ್ಲಿ ನಡೆಯುವ ಕಥೆ? ಇನ್ನೂ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಪುಸ್ತಕದಲ್ಲಿ ಪಡೆದುಕೊಂಡರೆ ಚೆನ್ನ.

ಶ್ರೀಯುತ ಚಂದ್ರಶೇಖರ ಮದಭಾವಿಯವರು ವೃತ್ತಿಯಲ್ಲಿ ಐ.ಟಿ. ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕಾದಂಬರಿ ಶ್ರೀಯುತ ಮನೋಜ್ ರೂಪ್ಡಾರವರು ಬರೆದ ಹಿಂದಿ ಕಾದಂಬರಿ ”ಕಾಲೆ ಅಧ್ಯಾಯ’ ಪುಸ್ತಕದ ನೇರ ಭಾಷಾಂತರವಾಗಿದೆ. ಇವರ ಇನ್ನೊಂದು ಪುಸ್ತಕ ‘ಹನಿ ಕಣಜ’ – ಕಿರುಗವನಗಳ ಸಂಗ್ರಹವಾಗಿದೆ. ‘ವಾರೆನ್ ಬಫೆಟ್ – ಹೂಡಿಕೆ ಮಾಂತ್ರಿಕನ ತಂತ್ರಗಳು’ ಇವರ ಇನ್ನೊಂದು ಜನಪ್ರಿಯ ಪುಸ್ತಕ.

ಓದುಗರ ಮನದಲ್ಲಿ ಈ ಕಾದಂಬರಿ ಎಬ್ಬಿಸುವ ಅಲೆಗಳು ಬಹಳ ಕಾಲ ಮೇಲಿನಿಂದ ಮೇಲೆ ಮೂಡಿಬರುತ್ತಾ ಇದ್ದರೆ ಆಶ್ಚರ್ಯವಿಲ್ಲ.


  • ಎನ್.ವಿ.ರಘುರಾಂ – (ನಿವೃತ್ತ ಅಧೀಕ್ಷಕ ಅಭಯಂತರ(ವಿದ್ಯುತ್) ಕ.ವಿ.ನಿ.ನಿ)

One thought on “‘ಮುರಿದ ಕಡಲು’ ಕೃತಿ ಪರಿಚಯ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading