ನಾವು ದೇಹ ಮತ್ತು ಮನಸ್ಸನ್ನು ವಿಂಗಡಿಸಿ ಪ್ರಜ್ಞಾಪೂರ್ವಕವಾಗಿ ತರಬೇತಿ ಕೊಡುತ್ತ ಹೋದರೆ ಯಾವ ವಿದ್ಯೆಯಲ್ಲಾದರೂ ತಡವಾದರೂ ಅತ್ಯುನ್ನತ ಪರಿಣಿತಿ ಹೊಂದಲು ಸಾಧ್ಯವಾಗುವುದು ಎನ್ನುತ್ತಾರೆ ಲೇಖಕ ಮಧು ವೈ ಎನ್ ಅವರು, ಆಂಗಿಕ ನೆನಪಿನಶಕ್ತಿ ಬಗ್ಗೆ ಸಾಕಷ್ಟು ವಿಷಯಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…
ಅಕಸ್ಮಾತ್ತಾಗಿ ದರೋಡೆಕರೋರರು ನನ್ನನ್ನು ಅಪಹರಣಗೈದು ಕಣ್ಣಿಗೆ ಬಟ್ಟೆಕಟ್ಟಿ ಖುರ್ಚಿಗೆ ಕಟ್ಟಿಹಾಕಿ “ಹೇಳು, ನಿನ್ನ ಪಾಸ್ವರ್ಡೇನಂತ ಹೇಳೂ ಇಲ್ಲಾಂದರೆ ಈಗಲೇ ಕೊಂದುಬಿಡ್ತೀವಿ” ಎಂದು ಹೊಟ್ಟೆಗೆ ಚೂರಿ ತಾಕಿಸಿಯೊ ಹಣೆಗೆ ಬಂದೂಕು ಹಿಡಿದೊ ಹೆದರಿಸಿದರೆ ನಾನು ಪಾಸ್ವರ್ಡ್ ಹೇಳುವುದಿಲ್ಲ. ನಂಗೇನೊ ಕಳ್ಳರನ್ನು ಎದುರುಹಾಕಿಕೊಳ್ಳುವ ಮಾಂತ್ರಿಕ ಶಕ್ತಿಯಿದೆ ಅಂತಲ್ಲ. ನನ್ನ ಪಾಸ್ವರ್ಡ್ ನನಗೂ ಸಹ ಬಾಯಲ್ಲಿ ಹೇಳಲು ಬರುವುದಿಲ್ಲ ಎಂದರ್ಥ! ಕಳ್ಳರು ಮಾಡಬೇಕಿರುವುದು ಕಟ್ಟಿದ ನನ್ನ ಕೈಗಳನ್ನು ಬಿಚ್ಚಿ ಲ್ಯಾಪಟಾಪು ಎದುರು ಹಿಡಿದು- “ಇಲ್ಲಿ ಟೈಪಿಸು” ಎಂದು ಗುಟುರಬೇಕು. ಅಪ್ಪಿತಪ್ಪಿ ನನ್ನ ಬೆರಳುಗಳನ್ನು ಕತ್ತರಿಸಿದಾನಂತರ ಪಾಸ್ವರ್ಡ್ ಕೇಳಿದರೆ ಮುಗಿಯಿತು ಕತೆ, ಜೀವಮಾನದಲ್ಲೆ ಆ ಪಾಸ್ವರ್ಡು ಅವರಿಗೆ ಸಿಗಲಾರದು. ನನಗೂ ಸಿಗದಂತೆ ಶಾಶ್ವತವಾಗಿ ಅಳಿಸಿಹಾಕಿರುತ್ತಾರೆ ಅವರು.ಇದನ್ನು ಮಸಲ್ ಮೆಮೊರಿ ಅನ್ನುತ್ತಾರೆ.
ನಿಮ್ಮ ಪಾಸ್ವರ್ಡು n0bodyCanBre@k1t ಎಂದಿದ್ದರೆ ಮಾಮೂಲಿ ನೆನಪಿನಶಕ್ತಿ ಪ್ರಕಾರ ಅದು ಮೆದುಳಿನಲ್ಲಿ n, 0, b ಹೀಗೆ ಯತಾವತ್ಥಾಗಿ ಶೇಖರಣೆಯಾಗಿರುತ್ತದೆ. ನೀವು ಇದನ್ನು ಒಂದೊಂದಾಗಿ ನೆನಪಿಸಿಕೊಂಡು ಟೈಪಿಸುತ್ತೀರಿ. ಆಂಗಿಕ ನೆನಪಿನಶಕ್ತಿಯಲ್ಲಿ ಇದು ನಿಮ್ಮ ಬೆರಳುಗಳ ಚಲನೆಯ ರೂಪದಲ್ಲಿ ಅಡಗಿರುತ್ತದೆ. ಅರ್ಥಾತ್ ಬೆರಳುಗಳನ್ನು ಚಲಿಸದೆ ನಿಮಗೆ ಪಾಸ್ವರ್ಡು ನೆನಪಿಗೆ ಬರುವುದಿಲ್ಲ! ಕಂಪ್ಯೂಟರಿನಲ್ಲಿ ಎಂಕೋಡಿಂಗ್ ಎಂಬ ತಂತ್ರವಿದೆ. ಅಣ್ವಸ್ತ್ರ ಪರೀಕ್ಷೆ ಯಶಸ್ವಿಯಾಯಿತು ಎಂಬ ಸಂದೇಶವನ್ನು “ಬುದ್ಧ ನಕ್ಕ” ಎನ್ನುವ ಮೂಲಕ ರವಾನಿಸಿದಂತೆ ನೀವು ಟೈಪಿಸುವ ಪಾಸ್ವರ್ಡು ಅಂತರ್ಜಾಲದ ಮೂಲಕ ಹೇಗಿದೆಯೊ ಹಾಗೆ ರವಾನೆಯಾಗದೆ ಮತ್ತೊಂದು ರೂಪದಲ್ಲಿ ಹೋಗುತ್ತದೆ. ದಾರಿ ನಡುವೆ ಕಳ್ಳರು ಕನ್ನ ಹಾಕಿದರೆ ಅದನ್ನು ಓದಲು ಬರದಿರಲಿ ಎಂದು ಮಾಡಿರುತ್ತಾರೆ. ಅದನ್ನೂ ಈ ಆಂಗಿಕ ನೆನಪಿನಶಕ್ತಿಯನ್ನೂ ಹೋಲಿಸಿನೋಡಿ. ಇದು ನಮ್ಮಲ್ಲಿರುವ ನೈಸರ್ಗಿಕ ಎಂಕೋಡಿಂಗ್ ಶಕ್ತಿ ಎಂದು ಹೊಳೆಯುತ್ತದೆ. ಏನು ಮಜಾ ಅಲ್ವಾ? ಇದು ನಿರಂತರ ಅಭ್ಯಾಸದಿಂದ ಬೆಳೆಯುವಂಥದು.

ಫೋಟೋ ಕೃಪೆ : sportzbusiness
ಇದೇನು ರಾಕೆಟ್ ಸೈನ್ಸ್ ಅಲ್ಲ. ಮನುಷ್ಯನಲ್ಲಿನ ಈ ನೈಸರ್ಗಿಕ ಶಕ್ತಿಯನ್ನು ನಾನು ಕಂಪ್ಯೂಟರಿನ ಉದಾಹರಣೆ ಮೂಲಕ ಹೇಳಿದೆ. ಇದು ಎಲ್ಲಾ ಕಡೆ ಇದೆ. ಇನ್ನೊಂದು ಉದಾಹರಣೆ ತಗೊಳ್ಳುವ. ಊರಿಗೆ ಹೊರಡುತ್ತೀರಿ ಕಾರು/ಬೈಕು ಹತ್ತುತ್ತೀರಿ. ಸಣ್ಣ ರಸ್ತೆ ಹಾದು ಮುಖ್ಯ ರಸ್ತೆಗೆ ಇಳಿಯುತ್ತೀರಿ. ಟಾಲ್ ಗೇಟ್ ಬರುತ್ತದೆ. ಟಾಲ್ ಕಟ್ಟಿ ಮುಂದೆ ಸಾಗುತ್ತೀರಿ. ರಸ್ತೆ ಅಗಲವಾಗುತ್ತದೆ. ಎದುರಿಗೆ ವಿಶಾಲ ಆಕಾಶ ತೆರೆದುಕೊಳ್ಳುತ್ತದೆ. ಆಚೀಚೆ ಕಟ್ಟಡಗಳು ಮಾಯವಾಗಿ ಹೊಲ ದಿನ್ನೆ ತೋಟಗಳು ಎದುರಾಗುತ್ತವೆ. ಮನಸು ವಿಹರಿಸತೊಡಗುತ್ತದೆ. ಸುಮಾರು ಹೊತ್ತಿನ ನಂತರ ವಾಸ್ತವಕ್ಕೆ ಮರಳಿರುತ್ತೀರಿ. ಆಗಲೇ ನಿಮ್ಮ ಮನೆ ಬಂದಿರುತ್ತದೆ. ಅರೆ ನಾ ಹೆಂಗೆ ಬಂದೆ, ಯಾವ ತಿರುವುಗಳನ್ನು ಬಳಸಿ ಬಂದೆ, ಯಾರನ್ನು ಹಿಂದೆ ಹಾಕಿದೆ, ಎಷ್ಟು ವೇಗದಲ್ಲಿದ್ದೆ- ಒಂದೂ ನೆನಪಿರಲ್ಲ. ವಾಹನ ಚಾಲನೆ ಬರದವರಿಗೆ ನೀವಿದನ್ನು ಹೇಳಿಬಿಟ್ಟರೆ ಅವರು ಎಂದೂ ನಿಮ್ಮ ಕಾರು/ಬೈಕು ಹತ್ತುವುದಿಲ್ಲ. ಈತ ನಮ್ಮನ್ನು ಎಲ್ಲಾದರೂ ಎತ್ತಿಹಾಕಿಬಿಡುತ್ತಾನೆ ಎಂದು.
ಇದೂ ಸಹ ಆಂಗಿನ ನೆನಪಿನಶಕ್ತಿಯ ಪ್ರತಿಫಲ. ಬಹುತೇಕ ಎಲ್ಲಾ ವಾಹನ ಚಾಲಕರಲ್ಲೂ ಇರುತ್ತದೆ. ಕಂಪ್ಯೂಟರಿನ ಉದಾಹರಣೆ ಅರ್ಥವಾಗಿರದಿದ್ದರೆ ಇದು ನಿಮ್ಮನ್ನು ನೇರ ತಲುಪಿರಬೇಕು. ಇಲ್ಲಿ ಏನಾಗುತ್ತದೆ ಎಂದರೆ ಶುರುವಿನಲ್ಲಿ ನೀವು ಬಹಳ ಎಚ್ಚರದಿಂದ ಸುತ್ತ ಮುತ್ತ ಗಮನಿಸಿಕೊಂಡು ಈಗ ಗೇರ್ ಒತ್ತುತ್ತಿರುವೆ ಈಗ ಸ್ಟೀರಿಂಗ್ ತಿರುಗಿಸುತ್ತಿರುವೆ ಈಗ ಬ್ರೇಕ್ ಒತ್ತುವೆ ಎಂದೆಲ್ಲ ಪ್ರಜ್ಞಾಪೂರ್ವಕವಾಗಿ ಓಡಿಸುತ್ತಿರುತ್ತೀರಿ. ಕ್ರಮೇಣ ರೂಢಿಯಾಗುತ್ತ ಅದು ಅಂಗಗಳ ನೆನಪಿನ ಭಾಗವಾಗಿ ಪರಿವರ್ತನೆಗೊಳ್ಳುತ್ತದೆ. ಈ ಪರಿವರ್ತನೆ ನಿಮಗೆ ಗೊತ್ತೇ ಆಗಿರುವುದಿಲ್ಲ.

ಫೋಟೋ ಕೃಪೆ :google
ಹಾಗಾದರೆ ಏನಪ ಇದು ಮಸಲ್ ಮೆಮೊರಿ ಅಂದರೆ? :
ನಮ್ಮ ಮಾಂಸಖಂಡಗಳಲ್ಲಿ ಬೆರಳುಗಳಲ್ಲಿ ಕೈಕಾಲುಗಳಲ್ಲಿ ನೆನಪಿನ ಶಕ್ತಿ ಇದೆಯಾ? ಇಲ್ಲ. ನಮ್ಮ ನೆನಪೆಲ್ಲವೂ ಮೆದುಳಿನಲ್ಲೇ ಇರುವುದು. ಹಿಂದೆ ಹೇಳಿದೆನಲ್ಲ ಎಂಕೋಡಿಂಗ್, ಇಲ್ಲಿ ಅದಾಗುತ್ತದೆ. ನಮ್ಮ ಮೆದುಳು ಈ ನೆನಪನ್ನು ಆಂಗಿಕ ಚಲನೆಯ ರೂಪದಲ್ಲಿ ಶೇಖರಿಸಿಕೊಳ್ಳುತ್ತದೆ. ಮೆದುಳಿನಲ್ಲಿ ಮೂರು ಮುಖ್ಯ ಅಂಗಗಳಿವೆ. ಸೆರಬ್ರಂ, ಸೆರಬೆಲ್ಲಂ, ಮತ್ತು ಸ್ಟೆಮ್. ಸೆರಬ್ರಂ ನಮ್ಮ ಇಡೀ ಮುಂದಲೆಯ ಭಾಗ, ಮೇಲ್ಮೆದುಳು. ಸೆರಬೆಲ್ಲಂ ನಮ್ಮ ಬೆನ್ನ ಮೇಲಿನ ಕುತ್ತಿಗೆ ಬಳಿಯಿರುವ ಅಂಗ, ಕಿರುಮೆದುಳು. ಸ್ಟೆಮ್ ಅಂದರೆ ಸೆರಬ್ರಂ ಮತ್ತು ಸೆರಬೆಲ್ಲಂಗಳನ್ನು ನಮ್ಮ ದೇಹದ ಇತರೆ ಭಾಗಗಳಿಗೆ ಕನೆಕ್ಟ್ ಮಾಡುವ ಅಂಗ. ನರಬಳ್ಳಿಗಳ ಮೂಲಕ. ಸೆರಬ್ರಂ ಅತಿದೊಡ್ಡ ಭಾಗ, ನಮ್ಮ ಇಂದ್ರಿಯಗಳು, ಮಾತು, ಭಾವನೆ, ಆಲೋಚನೆಗಳನ್ನು ನಿಯಂತ್ರಿಸುತ್ತದೆ. ಮನುಷ್ಯನ ಬುದ್ಧಿಭಾವಗಳ ಕೇಂದ್ರ. ಸೆರಬೆಲ್ಲಂ ಬಹಳ ಚಿಕ್ಕದು. ಇದು ನಮ್ಮ ದೇಹದ ಅಂಗಗಳನ್ನು ನಿಯಂತ್ರಿಸುತ್ತದೆ. ಕೈ, ಕಾಲು, ತಲೆ, ಸೊಂಟ ಎಲ್ಲವೂ, ನಖಶಿಂಖಾಂತ. ದೇಹದ ಮೆಕ್ಯಾನಿಕ್ಸ್ ಕೆಂದ್ರವಿದು. ಆದ್ದರಿಂದ ಆಂಗಿಕ ನೆನಪಿನಶಕ್ತಿ ಸೆರಬೆಲ್ಲಂ ವಲಯಕ್ಕೆ ಸೇರುತ್ತದೆ. ಇದೆಲ್ಲ ಹೇಗಾಗುತ್ತದೆ ಯಾಕಾಗುತ್ತದೆ ಎಂದು ವಿಜ್ಞಾನಿಗಳಿಗೂ ತಿಳಿಯದು. ಮೆದುಳಿನ ವಿಷಯಕ್ಕೆ ಬಂದರೆ ವಿಜ್ಞಾನಿಗಳಿಗೆ ಏನೊಂದೂ ತಿಳಿಯದು ಎಂದರೆ ತಪ್ಪೇನಲ್ಲ. ಹಾಗಾಗಿಯೆ ಮನುಷ್ಯನಿನ್ನೂ ನಿಗೂಢ. ನಮಗೆ ಹೃದಯ, ಕಿಡ್ನಿ ಶ್ವಾಸಕೋಶಗಳು ಅರ್ಥವಾದಂತೆ ಮೆದುಳು ಅರ್ಥವಾಗಿಬಿಟ್ಟಿದ್ದರೆ ಇಷ್ಟೊತ್ತಿಗೆ ಪ್ರಳಯವಾಗಿಬಿಡುತ್ತಿತ್ತು.
ಇಲ್ಲೊಂದು ಸೋಜಿಗದ ಸಂಗತಿಯಿದೆ. ನಮ್ಮ ಮೆದುಳು ಹೇಗೆಲ್ಲ ಕೆಲಸ ಮಾಡುತ್ತದೆ ಎಂದು ಅರಿಯುವುದು ಪುನಃ ನಮ್ಮ ಮೆದುಳುಶಕ್ತಿ ಮೇಲೆಯೆ ನಿಂತಿದೆ. ಮರದ ಸುತ್ತ ಓಡುತ್ತ ನಿಮ್ಮನ್ನು ನೀವು ಹಿಡಿಯಲು ಪ್ರಯತ್ನಿಸಿದಂತೆ. ನಿಮ್ಮ ಓಟ ಹೆಚ್ಚಾದಂತೆಲ್ಲ ನೀವು ನಿಮ್ಮಿಂದ ದೂರ ಓಡಿಹೋಗುತ್ತಿರುತ್ತೀರಿ. ಅರ್ಥಾತ್ ನೀವು ಮೆದುಳನ್ನು ಅರಿಯಲು ಪ್ರಯತ್ನಿಸಿದಂತೆಲ್ಲ ನಿಮ್ಮ ತಿಳಿವು ಕಗ್ಗಂಟಾಗುತ್ತ ಹೋಗುತ್ತದೆ. ಸೃಷ್ಟಿ ಇಂತಹ ಲೂಪ್ ಸೃಷ್ಟಿಸಿ ಮನುಷ್ಯನ ಕೊರಳಿಗೆ ನಾಯಿಬೆಲ್ಟ್ ಹಾಕಿಟ್ಟಿದೆ. ಹಾಗಾಗಿ ನಾನಿಲ್ಲಿ ವೈಜ್ಞಾನಿಕ ಥಿಯರಿಗಳನ್ನು ಹೇಳುವ ಪ್ರಯತ್ನ ಮಾಡುವುದಿಲ್ಲ. ಬದಲಾಗಿ ಸಾಮಾನ್ಯರಾದ ನಮಗೆ ಏನು ಮುಖ್ಯ ನೋಡೋಣ.

ಫೋಟೋ ಕೃಪೆ :google
ಆಂಗಿಕ ನೆನಪಿನಶಕ್ತಿಯಲ್ಲಿ ಮೂರು ಹಂತಗಳಿವೆ. ಶುರುವಿನ ಹಂತದ್ದು ತಾತ್ಕಾಲಿಕ. ಅಂದರೆ ಸ್ವಲ್ಪ ಕಾಲ ಇದ್ದು ಅಳಿಸಿಹೋಗುತ್ತದೆ. ಮತ್ತು ಇರುವುದೂ ಪಕ್ವವಾಗಿರಲ್ಲ. ಎಡರಾಬಡರಾ. ಯಾರಾದರೂ ಯಾವ ಕೆಲಸವನ್ನಾದರೂ ಅಶಿಸ್ತಿನಿಂದ ಬೇಜಾವ್ದಾರಿಯಿಂದ ಮಾಡುತ್ತಿದ್ದಾರೆಂದರೆ ಅವರು ಆ ಕೆಲಸದಲ್ಲಿ ಈ ಶುರುವಿನ ಹಂತದಲ್ಲಿದ್ದಾರೆ ಎಂದರ್ಥ. ಅರ್ಧ ಕತ್ತರಿ ಸೈಕಲ್ ಓಡಿಸುವವನು, ನಡುವಯಸಲ್ಲಿ ಚೂರುಚೂರೇ ಈಜು ಕಲಿತವನು- ಇವರು ಒಂದು ಆರು ತಿಂಗಳು ಬಿಡುವು ಕೊಟ್ಟು ತಿರಗ ಸೈಕಲ್ ಗೆ/ ನೀರಿಗಿಳಿದರೆ ಎಲ್ಲಿಂದ ಶುರು ಮಾಡಿದ್ದೆ ಕಳೆದ ಸಲ ಎಷ್ಟು ಕಲಿತಿದ್ದೆ ನೆನಪಿರುವುದಿಲ್ಲ. ಅಂದರೆ ದೇಹಕ್ಕೆ ನೆನಪಿರುವುದಿಲ್ಲ. ಅದು ಕಳೆದ ಸಲದ ಸಾಹಸಗಳನ್ನೆಲ್ಲ ಪುನರಾವರ್ತಿಸುತ್ತದೆ.
ಎರಡನೆಯ ಹಂತ : ಸುಧಾರಿತ ಹಂತ. ಇಲ್ಲಿ ಆ ನೆನಪು ನಿಮ್ಮಲ್ಲಿ ಶಾಶ್ವತವಾಗಿ ಕುಳಿತುಬಿಟ್ಟಿರುತ್ತದೆ. ಸಣ್ಣ ಹುಡುಗನಲ್ಲಿ ಈಜು ಕಲಿತಿದ್ದರೆ ನೀವು ಇನ್ನು ಇಪ್ಪತ್ತು ವರುಷ ಬಿಟ್ಟು ಧುಮುಕಿದರೂ ದೇಹ ತಂತಾನೆ ಈಜಾಡಲು ಶುರು ಮಾಡುತ್ತದೆ. ಸಣ್ಣ ವಯಸಿನಲ್ಲಿ ಹೂ ಕಟ್ಟಿದ್ದರೆ ಮುಂದ್ಯಾವತ್ತೊ ದೊಡ್ಡವಳಾದಾಗ ಮರುಪ್ರಯತ್ನಿಸಿದರೆ ಬೆರಳುಗಳು ತಂತಾನೆ ಅದ್ಭುತ ಗಂಟು ಹಾಕುತ್ತವೆ. ಇದನ್ನು ಕುಲಕಸುಬುಗಳಿಗೆ ವಿಸ್ತರಿಸಬಹುದು. ಹಿರಿಯರು ಒಂದು ಕಸುಬಿನಲ್ಲಿದ್ದು ಮಕ್ಕಳು ಚಿಕ್ಕವರಿದ್ದಾಗ ಅದಕ್ಕೆ ಎದುರಾಗಿದ್ದು ಕಾಲಾನಂತರ ಮಕ್ಕಳು ಶಿಕ್ಷಣ ಉದ್ಯೋಗವೆಂದು ಹೊರಹೋದರೂ ಅವರಲ್ಲಿ ಈ ಕಸುಬಿನ ಮೆಮೊರಿ ಉಳಿದುಕೊಂಡಿರುತ್ತದೆ.
ಕಡೆಯ ಹಂತ : ಮಾಸ್ತರಿಕೆ ಹಂತ. ಇಲ್ಲಿ ನಿಮಗೇ ಸೋಜಿಗವಾಗುವಂತೆ ನಿಮ್ಮ ದೇಹ ಕುಶಲಕರ್ಮಿತನ ತೋರಿಸುತ್ತಿರುತ್ತದೆ. ಕಲಾವಿದನ ಕುಂಚದ ಕೈಚಳಕ, ವೀಣೆ ನುಡಿಸುವವನ ಬೆರಳುಗಳ ಮಾಂತ್ರಿಕತೆ, ಶಿಲ್ಪಿಯ ಕರಾರುವಾಕ್ಕು, ಬ್ಯಾಟ್ಸ್ ಮನ್ ನ ಆಕರ್ಷಕ ಕವರ್ ಡ್ರೈವ್- ಪಟ್ಟಿ ಮಾಡುತ್ತ ಹೋಗಬಹುದು. ಇವರು ಯಾರೂ ಯೋಚಿಸಿ ಯೋಚಿಸಿ ಮಾಡುತ್ತಿರುವುದಿಲ್ಲ. ದೇಹದ ನೆನಪಿನಶಕ್ತಿ ಅವರಿಗೆ ಸಹಾಯ ಮಾಡುತ್ತಿರುತ್ತದೆ.
ಆಂಗಿಕ ನೆನಪಿನಶಕ್ತಿ ಬುದ್ದಿಭಾವಗಳಂತಲ್ಲ- ಒಂಥರ ಮೆಕ್ಯಾನಿಕಲ್. ಆದ್ದರಿಂದ ಅದು ಒಂದಾದ ನಂತರದ ಒಂದು ಎಂಬ ಕ್ರಮದಲ್ಲಿದ್ದರೆ ಮಾತ್ರ ಯಶಸ್ವಿಯಾಗಿ ಕೂರುತ್ತದೆ. ನೀವು ಟೈಪಿಂಗ್ ಕಲಿಯುತ್ತ ವೀಣೆಯನ್ನೂ ಕಲಿಯಲು ಆರಂಭಿಸಿದರೆ ಎರಡೂ ಕೆಡುತ್ತದೆ. ಎಲ್ಲರಿಗೂ ಗೊತ್ತಿರುವ ವಿಷಯ. ವಿಜ್ಞಾನ ಎಷ್ಟು ಕಾಮನ್ ಸೆನ್ಸ್ ಇದೆ ನೋಡಿ. ಟೈಪಿಂಗ್ ಸಂಪೂರ್ಣ ಕಲಿತು ಒಂದೆರಡು ದಿವಸಗಳಲ್ಲಿ ವೀಣೆ ಆರಂಭಿಸಿದರೂ ಬೆರಳು ಕೈಕೊಡುತ್ತವೆ. ಅದೇ ಟೈಪಿಂಗ್ ಕಲಿತು ಅದು ಆಂಗಿಕ ನೆನಪಾಗಿ ಎಂಕೋಡ್ ಆದ ನಂತರ ಒಂದು ವರುಷ ಬಿಟ್ಟು ವೀಣೆ ಶುರು ಮಾಡಿದರೆ- ಅದೂ ಇರುತ್ತದೆ ಇದೂ ಇರುತ್ತದೆ.

ಈ ಕಾರಣದಿಂದ ಮಕ್ಕಳಿಗೆ ಟೈಪಿಂಗು, ವೀಣೆ, ಕ್ರೀಡೆ- ಯಾವುದನ್ನೇ ಆಗಲಿ ಕಲಿಕೆ ಬೇಗ ಆರಂಭಿಸಿದರೆ ಅವರ ಒಟ್ಟಾರೆ ಆಂಗಿಕ ನೆನಪಿನಶಕ್ತಿ ವೃದ್ಧಿಯಾಗಲು ಅನುಕೂಲ. ಆಕ್ಚುವಲಿ ಇದನ್ನು ಇಂಗ್ಲೀಷಲ್ಲಿ ಮೋಟಾರ್ ಸ್ಕಿಲ್ಸ್ ಎಂದು ಕರೆಯುತ್ತಾರೆ. ಮೋಟಾರು ಓಡಿಸುವ ಕಲಿಕೆಯ ಹಿನ್ನೆಲೆಯಲ್ಲಿ ಈ ನೆನಪಿನ ಶಕ್ತಿಯನ್ನು ಅಧ್ಯಯನ ಮಾಡಿದ್ದರಿಂದ. ನೀವು ನೋಡಿರುತ್ತೀರಿ, ಕೆಲವರು ಈ ರೂಬಿಕ್ ಕ್ಯೂಬನ್ನು(ಬಣ್ಣದ ಚೌಕಟ್ಟುಗಳಿದ್ದು ಒಂದು ಬಣ್ಣದ ಚೌಕಳನ್ನೆಲ್ಲ ಒಂದೇ ಕಡೆಗೆ ಜೋಡಿಸುವ ಆಕೃತಿ) ಒಂದು ಸಲ ಕಲಿತ ನಂತರ ಹೆಂಗೆ ತಿರಗಾ ಮುರುಗಾ ಮಾಡಿಕೊಟ್ಟರೂ ಟಕಟಕಾಂತ ಜೋಡಿಸಿಬಿಡುತ್ತಾರೆ. ಅಲ್ಲೂ ಹಾಗೆ. ಅವರು ಪ್ರಜ್ಞಾಪೂರ್ವಕವಾಗಿ ಬುದ್ಧಿ ಓಡಿಸಿ ಜೋಡಿಸುತ್ತಿರಲ್ಲ. ಆಂಗಿಕ ನೆನಪನ್ನು ಬಳಸಿ ಪಟಪಟ ಜೋಡಿಸುತ್ತಿರುತ್ತಾರೆ. ಅದು ಅಪ್ರಜ್ಞಾಪೂರ್ವಕವಾಗಿ ಜರುಗುತ್ತಿರುತ್ತದೆ. ಎಲ್ಲಾ ಉತ್ಕೃಷ್ಟ ಕೌಶಲ್ಯ ಪ್ರದರ್ಶನಗಳೂ ಮೂಲತಃ ನೆನಪಿನ ಪ್ರದರ್ಶನಗಳೇ ಆಗಿರುತ್ತವೆ. ನಾವು ದೇಹ ಮತ್ತು ಮನಸ್ಸನ್ನು ವಿಂಗಡಿಸಿ ಪ್ರಜ್ಞಾಪೂರ್ವಕವಾಗಿ ತರಬೇತಿ ಕೊಡುತ್ತ ಹೋದರೆ ಯಾವ ವಿದ್ಯೆಯಲ್ಲಾದರೂ ತಡವಾದರೂ ಅತ್ಯುನ್ನತ ಪರಿಣಿತಿ ಹೊಂದಲು ಸಾಧ್ಯ.
ಕೊನೆಯದಾಗಿ :
ಹಿಂದೆ ಕುಲಕಸುಬು ಎಂದು ನೆನಪಿಸಿದ್ದೆ. ಆಂಗಿಕ ನೆನಪಿನಶಕ್ತಿ ಜೆನೆಟಿಕ್ಸ್ ನಲ್ಲಿ ಮಿಳಿತಗೊಂಡಿರಲು ಸಾಧ್ಯವಿದೆ. ಅಂದರೆ ಕೆಲವರಿಗೆ ಕೆಲವು ಪ್ರಾವೀಣ್ಯತೆ ರಕ್ತದಲ್ಲೇ ಬಂದಿದೆ ಅಂತಾರಲ್ಲ ಅದು. ಇಂದು ಬಹುತೇಕ ಗ್ರಾಮೀಣ ಕುಲಕಸುಬುಗಳು ಅಪ್ರಸ್ತುತವಾಗಿವೆ. ಮಡಿಕೆ ತಟ್ಟುವುದು, ಬಟ್ಟೆ ನೇಯುವುದು, ಹೊಲ ಗೇಯುವುದು ಮುಂತಾಗಿ. ಪ್ರಸ್ತುತವಿರುವ ಕುಲಕಸುಬುಗಳು ಇನ್ನಷ್ಟು ಉತ್ಕೃಷ್ಟಗೊಳ್ಳುತ್ತಿವೆ. ಇದು ಕೆಲವರಿಗೆ ಹಿನ್ನಡೆ ಕೆಲವರಿಗೆ ಮುನ್ನಡೆಯಾಗಿ ಪರಿಣಮಿಸಬಹುದು. ಅಂದರೆ ಕುಲಕಸುಬಾಗಿದ್ದ ಸಂಗೀತಕಾರರಿಗೆ, ಚಿತ್ರಗಾರರಿಗೆ, ನೃತ್ಯಪಟುಗಳಿಗೆ, ನಟರಿಗೆ ಆಂಗಿಕ ನೆನಪಿನಶಕ್ತಿ ಅನುಕೂಲಕರವಾಗಿ ಸಹಾಯವಾಗುತ್ತದೆ. ಆದರೆ ಅಪ್ರಸ್ತುತಗೊಂಡಿರುವ ಕುಲಕಸುಬಿನವರಿಗೆ ತಮ್ಮ ಜೆನೆಟಿಕ್ಸು ಸಹಾಯಕ್ಕೆ ಬರದು. ಆದ್ದರಿಂದ ಅವರ ಜೀವನದ ಪ್ರಗತಿ ಸಂಪೂರ್ಣ ಹೊಸ ಕಲಿಕೆಯ ಮೇಲೆ, ಶ್ರಮದ ಮೇಲೆ ಅವಲಂಬಿತವಾಗಿರುತ್ತದೆ. ಅವರು ತಮ್ಮ ಹೊಸ ಉದ್ಯೋಗದಲ್ಲಿ ಶ್ರೇಷ್ಠರಾಗಲು ಇತರರಿಗಿಂತ ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಇದಷ್ಟೇ ಅಲ್ಲ- ತಮ್ಮ ಮಕ್ಕಳಿಗೆ ಏನು ಹೇಳಿಕೊಡಬೇಕು ಕಲಿಸಬೇಕು ಎಂಬ ಗೊಂದಲವೂ ಎದುರಾಗುತ್ತದೆ. ಉದಾಹರಣೆಗೆ ಇವರು ಮಕ್ಕಳನ್ನು ಸಂಗೀತ ಶಾಲೆಗೆ ಕಳಿಸಿದರೂ ಕಲಿಕೆ ಓರ್ವ ಸಂಗೀತ ಕುಟುಂಬದ ಮಗುವಿನಷ್ಟು ಸುಲಭವಾಗಿರದಿರಬಹುದು. ಇದೊಂದು ವೈಜ್ಞಾನಿಕ ಸಂಗತಿ ಹೀಗಿದೆ ಎಂಬ ಪ್ರಜ್ಞೆಯಿದ್ದರೆ ಪೋಷಕರು ಯೋಚಿಸಿ ಸೂಕ್ತ ನಿರ್ಧಾರ ತಳೆಯಲು ಮಕ್ಕಳನ್ನು ಹಿಂಸಿಸದಿರಲು, ಸರಿಯಾದ ದಿಕ್ಕಿನಲ್ಲಿ ಪ್ರೋತ್ಸಾಹಿಸಲು ಸಹಾಯವಾಗುತ್ತದೆ. ಅಸಾಧ್ಯವೆಂದು ಹೇಳುತ್ತಿಲ್ಲ. ತಡವಾಗಬಹುದು, ಹೆಚ್ಚು ಶ್ರಮ ಬೇಡಬಹುದು ಎಂದು. ತನಗೆ ಅವರಷ್ಟು ಸುಲಭವಾಗಿ ಒಲಿಯುತ್ತಿಲ್ಲ ಎಂದು ಬೇಸರಪಟ್ಟುಕೊಳ್ಳದೆ.
- ಮಧು ವೈ ಎನ್ (ಲೇಖಕರು,ಚಿಂತಕರು)
