‘ನಳಚರಿತೆ’ ಕೃತಿ ಪರಿಚಯ : ಲಕ್ಷ್ಮೀ ವಿ ಭಟ್

ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ‘ನಳಚರಿತೆ’ (ಖಂಡಕಾವ್ಯ) ಕೃತಿಯ ಕುರಿತು ಲಕ್ಷ್ಮೀ ವಿ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಕೃತಿ: ನಳಚರಿತೆ (ಖಂಡಕಾವ್ಯ)
ಕೃತಿಕಾರರು: ಚನ್ನಕೇಶವ ಜಿ ಲಾಳನಕಟ್ಟೆ
ಪ್ರಕಾಶಕರು: ಸುಮಾ ಪ್ರಕಾಶನ
ಬೆಲೆ: 180.00
ಸಂಪರ್ಕ ಸಂಖ್ಯೆ:9731111234

‘ಅರಿವಂ ಪೊಸತಾಯಿಸುವುದೇ ಧರ್ಮಂ’ ಇದು ಮಹಾಕವಿ ಪಂಪನ ಮಾತು. ಅರಿವೇ ಗುರು, ನುಡಿ ಜ್ಯೋತಿರ್ಲಿಂಗ. ಇಂತಹ ಅರಿವು ನವನವೋನ್ಮೇಶಶಾಲಿನಿಯಾಗಿರಬೇಕು ಎಂಬುದು ಕವಿಮಹಾಶಯರ ಆಶಯ.

ಮಾನವನಿಗೆ ರಸಾನಂದ ನೀಡಲು ಅಗತ್ಯವಾದುದೆಲ್ಲವೂ ಸಾಹಿತ್ಯವೆನಿಸುತ್ತದೆ. ಸಾಹಿತ್ಯವನ್ನು ಸೃಜಿಸುವ ಕವಿಯೂ ಕೂಡ ಋಷಿಸದೃಶನಾಗಿರುತ್ತಾನೆ. ‘ನಾನೃಷಿ ಕುರುತೇ ಕಾವ್ಯಂ’ ಅಂದರೆ ಕಾವ್ಯಕೃಷಿ ಮಾಡುವವ ಋಷಿಯೇ ಆಗಿರುತ್ತಾನೆ. ಕಾವ್ಯಕೃಷಿ ಮಾಡದವ ಎಂದೂ ಋಷಿಯಾಗಲಾರ.

ಜಯಕೀರ್ತಿಯ ಛಂದೋನುಶಾಸನದಲ್ಲಿ ,

ಛಂದಶ್ಶಾಸ್ತ್ರಂ ವಹಿತ್ರಂ ತದ್ವಿವಿಕ್ಷೋ ಕಾವ್ಯಸಾಗರಂ
ಛಂದೋಭಾಗ್ ವಾಙ್ಮಯಂ ಸರ್ವಂ ನ ಕಿಂಚಿಚ್ಛಂದಸಾ ವಿನಾ||

ಕಾವ್ಯ ಸಾಗರವನ್ನು ದಾಟುವ ಬಯಕೆಯುಳ್ಳವನಿಗೆ ಛಂದಸ್ ಶಾಸ್ತ್ರವೇ ನೌಕೆ. ಎಲ್ಲ ವಾಙ್ಮಯವೂ ಛಂದೋಬದ್ಧವಾದ್ದು; ಛಂದೋರಹಿತವಾದ್ದು ಯಾವುದೂ ಇಲ್ಲ. ಎಂದಿದ್ದಾರೆ.

ಭಾಷೆಗೆ ಸಂಸ್ಕಾರವನ್ನುಂಟುಮಾಡುವ ನಿಯಮಗಳಿಗೆ ವ್ಯಾಕರಣವೆಂದು ಹೆಸರು. ಸಾಹಿತ್ಯಕ್ಕೆ ವ್ಯಾಕರಣವೇ ಶೋಭೆ. ಛಂದಸ್ಸು, ಪದ್ಯವನ್ನು ರಚಿಸುವ ನಿಯಮಗಳನ್ನು ತಿಳಿಸುವ ಶಾಸ್ತ್ರ. ಛಂದಸ್ ಶಾಸ್ತ್ರದ ಪ್ರಕಾರ ರಚಿತವಾದ ಪದ್ಯವನ್ನು ಛಂದೋಬದ್ಧ ಪದ್ಯ ಎನ್ನುವರು. ವಚನಯುಗದ ಬಳಿಕ ದಾಸಯುಗದಲ್ಲಿ ಸುಲಲಿತವಾಗಿ ಹಾಡುವಂತಹ ಭಕ್ತಿ ಗೀತೆಗಳು ಹೇರಳವಾಗಿ ರಚಿಸಲ್ಪಟ್ಟವು. ಇದು ಇಂದಿಗೂ ತನ್ನ ಮೌಲ್ಯವನ್ನು ಕಾಯ್ದುಕೊಂಡು ಉಚ್ಛ್ರಾಯ ಸ್ಥಿತಿಯಲ್ಲಿರುವುದನ್ನು ನಾವು ಕಾಣಬಹುದು. ಆ ಕಾಲಘಟ್ಟದಲ್ಲಿಯೇ ನಡುಗನ್ನಡ ಷಟ್ಪದಿಗಳೂ ಉಗಮಿಸಿದವು. ಕನಕದಾಸ, ಕುಮಾರವ್ಯಾಸ, ರಾಘವಾಂಕ, ಲಕ್ಷ್ಮೀಶ, ನರಹರಿ( ಕುಮಾರ ವಾಲ್ಮೀಕಿ) ಷಡಕ್ಷರದೇವ ಮುಂತಾದವರು ವಿಶೇಷವಾಗಿ ನಡುಗನ್ನಡ ಸಾಹಿತ್ಯ/ ಷಟ್ಪದಿ ರಚನೆಗೈದು ಗುರುತಿಸಿಕೊಂಡರು.

ಇವುಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಷಟ್ಪದಿಗಳೆಂದರೆ ಭಾಮಿನಿ ಮತ್ತು ವಾರ್ಧಕ. ಇತರ ಷಟ್ಪದಿಗಳು ಸಮಗ್ರವಾಗಿ ಕಾಣಸಿಗದೇ ಹೋದರೂ ಅಲ್ಲಲ್ಲಿ ಕೆಲವು ಪದ್ಯಗಳು ಕಾಣಸಿಗುತ್ತವೆ. ಹರಿದಾಸರ ಪದ್ಯಸಾರದಲ್ಲಿ ಶರಷಟ್ಪದಿಯ ಪ್ರಯೋಗಗಳನ್ನು ಕಾಣಬಹುದು. ಅಂತೆಯೇ ಕುಸುಮ, ಭೋಗ ಹಾಗೂ ಪರಿವರ್ಧಿನಿ ಷಟ್ಪದಿಯಲ್ಲಿನ ರಚನೆಗಳೂ ವಿರಳ.
ಪ್ರಸ್ತುತ ಹೊಸಗನ್ನಡ ಕಾಲಘಟ್ಟದಲ್ಲಿ ನವ್ಯ , ಬಂಡಾಯ ಸಾಹಿತ್ಯಗಳು ವಿಜೃಂಭಿಸುತಿದ್ದರೂ ಛಂದೋಬದ್ಧ ರಚನೆಗಳು ಹಿಂದೆಬಿದ್ದಿಲ್ಲ. ಹೊಸ ತಲೆಮಾರಿನ ಅನೇಕ ಕವಿಗಳು ಇಷ್ಟಪಟ್ಟು ತಮ್ಮದೇ ಛಾಪು ಮೂಡಿಸುತ್ತಾ ಛಂದೋಬದ್ಧ ರಚನೆಗಳನ್ನು ಬೆಳೆಸುತ್ತಿರುವುದು ಗಮನಿಸಬೇಕಾದ ಸಂಗತಿ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದವರು ಪ್ರಕ್ರಿಯ ಆಸ್ಪತ್ರೆ- ಬೆಂಗಳೂರು ಇಲ್ಲಿ ಮ್ಯಾನೇಜರ್ ಆಗಿ ವೈದ್ಯಕೀಯ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಚನ್ನಕೇಶವ ಜಿ ಲಾಳನಕಟ್ಟೆಯವರು.

ಇವರು ಈಗಾಗಲೇ ಹಲವು ಕೃತಿಗಳನ್ನು ಬರೆದು ವಿದ್ವಜ್ಜನರ, ಪ್ರಾಜ್ಞರ ಮನ್ನಣೆಗೆ ಸತ್ಪಾತ್ರರಾಗಿದ್ದಾರೆ. ಅಸಾಧಾರಣ ಪ್ರತಿಭೆ ಹೊಂದಿದ ಚನ್ನಕೇಶವರು ಛಂದೋಬದ್ಧ ಕೃತಿಗಳನ್ನು ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಷಟ್ಪದಿ, ವೃತ್ತ, ರಗಳೆ, ಸಾಂಗತ್ಯ, ತ್ರಿಪದಿ ಮಾತ್ರವಲ್ಲದೆ ಭಾವಗೀತೆ ರಚಿಸಿ ಈಗಾಗಲೇ ತನ್ನ ಛಾಪು ಮೂಡಿಸಿ ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಇವರನ್ನು ಅರಸುತ್ತ ಹಲವು ಪ್ರಶಸ್ತಿಗಳೂ ಬಂದಿರುತ್ತವೆ. ‘ನಳ ಚರಿತ್ರೆ’ ಒಂದು ಅಭೂತ ಪೂರ್ವ ಕೃತಿ.

ಕಳೆದುಹೋದ ಕಾಲ ಘಟ್ಟದಲ್ಲಿ ನಳ ಮಹಾರಾಜನ ಕಥೆಯನ್ನು ಮೊದಲು ಸೂತಮಹಾಮುನಿಗಳು ಅಗಸ್ತ್ಯರಿಗೂ ಹಾಗು ಇತರ ಮುನಿಗಳಿಗೂ ತಿಳಿಸಿದರು. ಶ್ರೀರಾಮನು ಕಷ್ಟದಲ್ಲಿದ್ದಾಗ ಅಗಸ್ತ್ಯರು ನಳ ಚರಿತ್ರೆಯನ್ನು ಹೇಳುವ ಮೂಲಕ ರಾಮನಿಗೆ ಧೈರ್ಯ ತುಂಬಿದರು. ಹಾಗೆಯೇ ದ್ವಾಪರ ಯುಗದಲ್ಲಿ ಧರ್ಮರಾಯನು ತನ್ನ ಸಹೋದರ ಅರ್ಜುನನು ಸುರಲೋಕದಿಂದ ಮರಳಿ ಬರದಿದ್ದಾಗ ಚಿಂತಿತನಾಗುತ್ತಾನೆ ಆಗ ರೋಮಶ ಮುನಿಗಳು ಧರ್ಮರಾಯನಿಗೆ ನಳ ಚರಿತ್ರೆಯನ್ನು ತಿಳಿಸಿದರು.

ಈ ಕಥೆಯೇ ಪ್ರಸ್ತುತ ಕಾವ್ಯದ ವಸ್ತು. ನಳ ಚರಿತೆ ಮುಂದಿನ ಕಾಲಘಟ್ಟಕ್ಕೂ ಶಾಶ್ವತವಾಗಿ ಉಳಿಯಬೇಕೆಂಬುದೇ ಕವಿಯ ಉತ್ಕಟವಾದ ಬಯಕೆ. ಇದರಲ್ಲಿ ೩೫೬ ಷಟ್ಪದಿಗಳಿವೆ. ಸರ್ವರಿಗೂ ಓದಲು ಅನುಕೂಲವಾಗುವಂತೆ ಸರಳ ಭಾಷೆಯಲ್ಲಿ ಈ ಕಾವ್ಯವನ್ನು ರಚಿಸಿರುವರು.

ಕನಕದಾಸರು ಭಾಮಿನಿ ಷಟ್ಪದಿಯಲ್ಲಿ ರಚಿಸಿದ ‘ನಳಚರಿತ್ರೆ’ಯ ಕಥಾ ಸಾರವನ್ನು ಓದಿ ಅರ್ಥೈಸಿ, ತನ್ನದೇ ಬಗೆಯ ಭಾವಗಳನ್ನು ತುಂಬಿ ಶರಷಟ್ಪದಿಯಲ್ಲಿ ರಚಿಸಿದ ಹೆಗ್ಗಳಿಕೆ ಚೆನ್ನಕೇಶವ ಜಿ ಲಾಳನ ಕಟ್ಟೆಯವರದು. ಇಂತಹ ಸಮಗ್ರ ರಚನೆಯೊಂದು ಈ ಕಾಲಘಟ್ಟದಲ್ಲಿ ರಚನೆಯಾಗಿರುವುದು ಹೊಸಗನ್ನಡ ಸಾಹಿತ್ಯ ಕ್ಷೇತ್ರದ ದಿಕ್ಕನ್ನು ಸೂಚಿಸುವ ದಿಕ್ಸೂಚಿ ಅಥವಾ ಒಂದು ಮೈಲುಗಲ್ಲು ಎನ್ನಬಹುದು. ಅತ್ಯಂತ ಕನಿಷ್ಠ ಪದಗಳಲ್ಲಿ ಗರಿಷ್ಠ ವಿಷಯಗಳನ್ನು ತುಂಬಿ ಬರೆಯುವ ಸಾಹಸ ಮಾಡಿದುದು ಕನ್ನಡ ಸಾಹಿತ್ಯ ಲೋಕಕ್ಕೆ ಮಿಂಚಿನ ಹೊಳಪನ್ನ ತಂದಿದೆ ಎಂದೇ ಹೇಳಬಹುದು. ಛಂದೋಬದ್ಧ ಬರೆಹಗಳಿಂದ ವಿಮುಖರಾಗಿ ನವ್ಯ ಬಂಡಾಯ ಸಾಹಿತ್ಯಗಳು ಉತ್ತುಂಗ ಶೃಂಗದಲ್ಲಿ ವಿಜೃಂಭಿಸುವ ಸಂದರ್ಭದಲ್ಲಿ ಚನ್ನಕೇಶವರಂತಹ ಕವಿಗಳ ರಚನೆಗಳಿಂದ ಸ್ಫೂರ್ತಿ ಪಡೆದು ಮತ್ತೆ ಛಂದೋಬದ್ಧದ ಕಡೆಗೆ ವಾಲುವಂತೆ ಮಾಡಿರುವುದು ನಮ್ಮ ಸೌಭಾಗ್ಯ.

ಒಂದೊಮ್ಮೆ ಕೃತಿ ಲೋಕಾರ್ಪಣೆಗೈಯುತ್ತಿರುವ ಸಂದರ್ಭದಲ್ಲಿ ವಿದ್ವಾಂಸರೊಡನೆ ಶ್ರೋತೃಗಳೊಬ್ಬರು “ಕವನ ಬರೆಯಲು ಛಂದಸ್ಸೇಕೆ ಬೇಕು?” ಎಂದು ಕೇಳಿದರಂತೆ. ಅದಕ್ಕೆ ಅವರು ಬೇಕೆಂದೇನಿಲ್ಲ, ಯುಗಾದಿಯ ದಿನ ಒಬ್ಬಟ್ಟು ಮಾಡುವ ಸಂಪ್ರದಾಯವಿದೆ. ಕೆಲವರಿಗೆ ಒಬ್ಬಟ್ಟಿನ ಬದಲು ಹೂರಣವೇ ಇಷ್ಟ. ಅದೇ ಛಂದೋವಿಹೀನ ಕವನ. ಕೆಲವರಿಗೆ ಹೂರಣವನ್ನು ಕಣಕದಲ್ಲಿಟ್ಟು ಬೇಯಿಸಿ ತಿನ್ನುವುದು ಇಷ್ಟ. ಅದು ಪ್ರಾಸಭರಿತ ಕವನ. ಹಾಗೆ ಬೇಯಿಸಿದ ಒಬ್ಬಟ್ಟಿಗೆ ತುಪ್ಪ ಹಾಕಿಕೊಂಡು ತಿಂದರೆ ಸೊಗಸು. ಅದು ಪ್ರಾಸ ಮಾತ್ರೆಗಳುಳ್ಳ ಕವನ. ತುಪ್ಪದ ಜೊತೆಗೆ ಹಾಲನ್ನೂ ಹಾಕಿ ಬೆರೆಸಿಕೊಂಡು ತಿಂದರೆ ಮತ್ತಷ್ಟು ರುಚಿ. ಅದು ಛಂದಸ್ಸಿನ ಸರ್ವಗುಣಗಳುಳ್ಳ ಕವನ. ನನಗೆ ಒಬ್ಬಟ್ಟಿಗೆ ಹಾಲು, ತುಪ್ಪ ಬೆರೆಸಿಕೊಂಡು ತಿನ್ನೋದು ಇಷ್ಟವೆನಿಸುತ್ತದೆ. ನಿಮಗೆ ಹೂರಣವೇ ಇಷ್ಟವಿದ್ದರೆ ಅದನ್ನೇ ತಿನ್ನಿ ಎನ್ನುತ್ತ ಗಹನವಾದುದನ್ನು ಸರಳವಾಗಿ ವಿವರಿಸಿದರು. ಅವರು ಮತ್ತಾರೂಅಲ್ಲ; ಕನ್ನಡದ ಏಕೈಕ ಶತಾವಧಾನಿಗಳಾದ ಆರ್ ಗಣೇಶ್ ಅವರು. ಎಷ್ಟೊಂದು ಅರ್ಥಗರ್ಭಿತ ಮಾತಲ್ಲವೇ? ಈ ಪ್ರಾಜ್ಞರಿಗೆ ಶಿರಸಾ ವಂದಿಸಲೇಬೇಕು. ಅವರ ಮಾತುಗಳು ಇಲ್ಲಿ ಉಲ್ಲೇಖಾರ್ಹವೆನ್ನಿಸಿತು. ಚನ್ನಕೇಶವರ ಇಲ್ಲಿನ ಬರೆಹ ಹೋಳಿಗೆಗೆ ತುಪ್ಪ, ಹಾಲು ಬೆರೆಸಿ, ನಿಧಾನವಾಗಿ ಸವಿದಾಗ ಉಂಟಾಗುವ ಆಹ್ಲಾದಕರವಾದ ಅನುಭವವನ್ನು ತಂದುಕೊಡುವುದಂತೂ ಖಚಿತ.

ಸರಸತಿಯಬ್ಬೆಯು
ಕರಪಿಡಿಯುತ್ತಲಿ
ಬರೆಸುತಲೆನ್ನನು ಪೊರೆದಿಹಳು
ತರತರ ಕಾವ್ಯವ
ಹರಿಸುತಲೆನ್ನೊಳು
ಹರಸುತಲೆನ್ನನು ಪೋಷಿಪಳು ||

ಎಂದು ವಿನಮ್ರವಾಗಿ ವಾಗ್ದೇವಿ ಶಾರದೆಯು ಅನುಗ್ರಹಿಸಿದ ಶಬ್ದ ಸಂಪತ್ತಿನ ಫಲವೇ ಕಾವ್ಯ ಸ್ಪುರಣಕ್ಕೆ ಕಾರಣ ಎಂದು ಕೃತಕೃತ್ಯರಾಗಿ ನುಡಿದಿದ್ದಾರೆ ಚನ್ನಕೇಶವ ಜಿ ಲಾಳನಕಟ್ಟೆಯವರು.

ಸಂಪ್ರದಾಯಬದ್ಧರಾಗಿ ವಿಘ್ನನಿವಾರಕನಾದ ಗಣಪತಿಯನ್ನು ಮರೆಯದೆ ನುತಿಸಿ ಕಾವ್ಯಾರಂಭಕ್ಕೆ ನಾಂದಿಹಾಡಿದ್ದಾರೆ. ಮಾತ್ರವಲ್ಲದೆ

ಗುರುಗಳ ನೆರಳಡಿ
ಬರೆವುದು ಕಲಿತೆನು
ಮರೆಯದೆ ದಿನ ನಾ ವಂದಿಸುವೆ
ಅರಿತೆನು ಬರೆಯಲು
ತರತರ ಕಾವ್ಯವ
ಸುರಿಸುತ ಭಾವ ವಿಭಿನ್ನದೊಳು

ಚಿತ್ತದೊಳೆನ್ನೊಳು
ಬಿತ್ತುತ ಛಂದವ
ಕೆತ್ತಿದ ಶಿಲ್ಪಿಯು ಚೋಂದಮ್ಮ
ಮೆತ್ತನೆ ಮಡಿಲೊಳ
ಗೆತ್ತುತ ನನ್ನೊಳ-
ಗೊತ್ತಿಹ ಜ್ಞಾನಕೆ ಶರಣೆಂಬೆ.

ಛಂದಸ್ಸು ಕಲಿಕೆಯಲ್ಲಿ ಸಹಾಯ ಮಾಡಿದ ಗುರು ಚೋಂದಮ್ಮರಿಗೆ ಕಾವ್ಯಪುಷ್ಪಾರ್ಚನೆ ಗೈದು ಕೃತಜ್ಞತೆ ಸಲ್ಲಿಸಿರುವ ವೈಖರಿ ಅನನ್ಯ. ಕವಿಭಾವಸಂಪತ್ತು ಎಷ್ಟು ಶ್ರೀಮಂತವಾಗಿದೆ ಎಂಬುದು ಇಲ್ಲಿ ವೇದ್ಯವಾಗುತ್ತದೆ.

ನಳಚರಿತೆ ಮೇಲ್ನೋಟಕ್ಕೆ ನಳದಮಯಂತಿಯರ ರಮ್ಯ ಪ್ರೇಮದ ಉಜ್ವಲ ಕಥೆಯನ್ನು ಹೇಳುವಂತಿದ್ದರೂ ಕಥೆಗೆ ಇರುವ ಇತರ ಆಯಾಮಗಳನ್ನೂ ಕಥೆಯ ಒಟ್ಟು ಸ್ವರೂಪವನ್ನೂ ಕವಿ ಲಾಳನಕಟ್ಟೆಯವರು ಸಂಗ್ರಹಿಸಿದ್ದಾರೆ. ಜೂಜಿನಲ್ಲಿ ಸಕಲ ಸಾಮ್ರಾಜ್ಯವನ್ನು ಸೋತು ಕಂಗಾಲಾಗಿರುವ ಧರ್ಮರಾಯನನ್ನು ಸಮಾಧಾನಪಡಿಸಲು ರೋಮಶ ಮಹಾಮನಿಗಳು ನಳಮಹಾರಾಜನ ಈ ಕಥೆಯನ್ನು ವಿವರಿಸುವ ಮೂಲಕ ನಳಚರಿತ್ರೆಯು ಆರಂಭವಾಗುತ್ತದೆ.

ಅಡವಿಯ ನಡುವಲಿ
ಮಡದಿಯ ತೊರೆಯುತ
ನಡೆದಿಹನಿರುವನೆ ಸಭೆಯೊಳಗೆ
ನುಡಿದಿರೆ ವಿಪ್ರರು
ಗುಡುಗಿನ ದನಿಯೊಳು
ನುಡಿದನು ಬಾಹುಕ ತಕ್ಷಣವೆ ||

ತೊರೆಯುತ ಸತಿಯನು
ಮರೆತಿಹ ರಮಣನು
ನರರೊಳಗಧಮ ಬಹಿಷ್ಕೃತನು
ಅರಿಯದ ಹೆಣ್ಣಲಿ
ತರಿಸುತ ಕಂಬನಿ
ನೆರಳಾಗಿರದವ ಪತಿಯಲ್ಲ ||292||

ಬಾಹುಕನನ್ನು ಭೇಟಿ ಮಾಡಿ ‘ಕಾಡಿನಲ್ಲಿ ಒಬ್ಬಂಟಿಯಾದ ಹೆಂಡತಿಯನ್ನು ಅರ್ಧ ಬಟ್ಟೆಯಲ್ಲಿ ಬಿಟ್ಟು ಹೋದವರು ಇಲ್ಲಿ ಯಾರಾದರೂ ಇದ್ದಾರೆಯೆ? ಇದು ಯಾವ ಗಂಡಸಿಗಾದರೂ ಸಮ್ಮತವಾದ ನಡತೆಯೇ?’ ಎಂಬ ಪ್ರಶ್ನೆಯನ್ನು ಕೇಳಲು ಹೇಳಿ ಉತ್ತರ ನೀಡುವ ವ್ಯಕ್ತಿಯ ಮುಖಭಾವವನ್ನು ಗಮನಿಸಲು ಸೂಚಿಸುತ್ತಾಳೆ. ಸೇವಕರು ಈ ಪ್ರಶ್ನೆಯನ್ನು ಬಾಹುಕನಿಗೆ ಕೇಳಿದಾಗ ಅವನು ವಿಚಲಿತಗೊಂಡು ತೀವ್ರ ಕಸಿವಿಸಿಗೆ ಒಳಗಾಗುತ್ತಾನೆ. ಇದಲ್ಲದೆ ಸೇವಕರ ಪ್ರಶ್ನೆಗೆ ‘ಅದು ಹೆಂಡತಿಗೆ ಮಾಡಿದ ವಂಚನೆಯಲ್ಲ. ಮೂಲತಃ ಅದು ಗಂಡನ ಕೊರತೆಯೇ’ ಎಂದು ಉತ್ತರಿಸುತ್ತಾನೆ. ಈ ಮಾತುಗಳನ್ನು ಕೇಳಿದ ಅವನು ನಳನೇ ಇರಬೇಕೆಂದು ಊಹಿಸಿ, ತನ್ನ ಪುನರ್‍ ಸ್ವಯಂವರವನ್ನು ಏರ್ಪಡಿಸಿಕೊಂಡು ಅದಕ್ಕೆ ಋತುಪರ್ಣ ರಾಜನನ್ನು ಆಹ್ವಾನಿಸುತ್ತಾಳೆ. ರಾಜ ಋತುಪರ್ಣನೊಂದಿಗೆ ಬಾಹುಕನೂ ಸಾರಥಿಯಾಗಿ ಸ್ವಯಂವರಕ್ಕೆ ಬರುತ್ತಾನೆ. ಆಗ ದಮಯಂತಿ ತನ್ನ ಮಕ್ಕಳನ್ನು ತೋರಿಸಿದಾಗ ಅವರನ್ನು ಕಂಡು ನಳ ಕಣ್ಣೀರ್ಗರೆಯುತ್ತಾನೆ. ಆಗ ದಮಯಂತಿಗೆ ಅವನು ನಳನೇ ಎಂಬುದು ಖಚಿತವಾಗುತ್ತದೆ. ಹೀಗೆ ಅವರ ಪುನರ್‍ಮಿಲನವಾಗಿ ನಂತರ ನಳ ಪುಷ್ಕರನನ್ನು ಸೋಲಿಸಿ ರಾಜ್ಯವನ್ನು ಪಡೆದು ಸುಖವಾಗಿ ಬಾಳುತ್ತಾನೆ.

ಒಂದಿಷ್ಟು ಹೃನ್ಮನ ತಣಿಸುವ ಪದಲಾಲಿತ್ಯದ ಚರಣಗಳು ನನ್ನ ಮನದಾಳವನ್ನು ಅತಿಯಾಗಿ ಸೆಳೆದವು.

ನಿನ್ನಯ ತವರೆಡೆ
ನಿನ್ನನು ಕಳಿಸುವೆ
ಮನ್ನಿಸು ನನ್ನನು ದಮಯಂತಿ
ತನ್ನೊಡನಿರುವಾ
ಹೊನ್ನಿನ ರಾಜ್ಯವ
ನನ್ನ ವಿನೋದಕೆ ಕಳೆದಿಹೆನು||೧೩೭||

ನೀವೆಲ್ಲಿರುವಿರೊ
ತಾವದೆ ಸಗ್ಗವು
ನೋವನು ಸುಖವೆಂದುಣ್ಣುವೆನು
ಭಾವದಿ ಪೇಳುವೆ
ಸಾವಿಗೆ ಹೆದರೆನು
ನೀವಿರೆ ನಾಕವೆ ಬಾಳೊಳಗೆ ||೧೫೫||

ಪತಿ ನಳನಾಡಿದ
ಧೃತಿಗೆಡಿಸುವ ನುಡಿ
ಸತಿ ತಾ ಕೇಳುತ ಮರುಗಿದಳು
ಪತಿ ಜೊತೆಗಿರುವುದೆ
ಸತಿ ನಿಜ ಧರ್ಮವು
ಜೊತೆಗಿರುವೆನು ತಾನೆಂದಿಹಳು||೧೩೮||

ಅರಸನು ಚಣದಲೆ
ಭರವಸೆಯಿಂದಲಿ
ತರಿಸಿದ ಹೊಸದೊಂದಶ್ವವನು
ಕರೆಯುತ ಬಾಹುಕ
ಬೆರಗಿನೊಳೇರಿದ
ಶರವೇಗದಲೋಡಿತು ತುರಗ||೨೫೩||

ಪಡದಿರು ಕಳವಳ
ನುಡಿಯಂ ಪೇಳುವೆ
ಬಿಡು ತಿಳಿಗೇಡಿಯ ತನವನ್ನು
ಕೆಡುಕಿನ ಮಾತ್ರಕೆ
ಕಡಿದೆನೆ ನಿನ್ನನು?
ನಡೆ ನಿನಗಿದು ವರ ತಿಳಿನೃಪನೆ ||೨೩೭||

ಕಳವಳ ಪಡದಿರು
ನಳನೃಪಗುಪಕರಿ-
ಸಲು ವಿಷವನು ನಾ ನೀಡಿದೆನು
ಅನಲವು, ರೋಗವು,
ಸಲಿಲವು ಶರ ದಾಂ-
ದಲೆ ಮಾಡವು ನಿನಗೆಂದೆಂದೂ||೨೩೮||

ಪ್ರತಿ ಚರಣದ ಪ್ರತಿ ಪದವು ಮುಂದಿನ ಚರಣಕ್ಕೆ ಉತ್ಸುಕತೆಯನ್ನು ಉಂಟುಮಾಡುತ್ತದೆ.

ಲಾಳನಕಟ್ಟೆಯು
ಕಾಳಜಿಯಿಂದಲಿ
ಸಾಲಲಿ ಪೋಣಿಸೆ ನಳಚರಿತೆ
ನಾಳಿನ ಜನರಿಗೆ
ಬಾಳಿನ ಹಾದಿಗೆ
ಮೇಲಿನ ಪಂಕ್ತಿಯ ಕವಿಸರಿತೆ||

ಹೊನ್ನುಡಿ ಬರೆಹದಿ
ಚನ್ನನ ಕಾವ್ಯವು
ಮನ್ನಣೆ ಪಡೆಯಲು ಸಂತಸವು
ಮುನ್ನುಡಿ ಬರೆಯುತ
ಬೆನ್ನನು ತಟ್ಟಲು
ಕನ್ನಡ ತಾಯಿಗೆ ಭುಜಬಲವು||

ನಳಚರಿತ್ರೆ ಎಂಬ ಪೌರಾಣಿಕ ಉಪಕಥೆಯನ್ನು ಆಯ್ದು ೩೫೫ ಷಟ್ಪದಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಮರ್ಪಿಸಿದ ಶ್ರೀ ಚನ್ನಕೇಶವ ಲಾಳನಕಟ್ಟೆಯವರ ಹೆಸರು ಆಚಂದ್ರಾರ್ಕವಾಗಿ ಉಳಿಯಲಿ. ಕೃತಿ ಜನಪ್ರಿಯತೆ ಗಳಿಸಲಿ. ಪ್ರತಿಯೊಬ್ಬರೂ ಕೊಂಡು ಓದಿ ಆನಂದಿಸುವಂತಾಗಲಿ ಎಂದು ಹಾರೈಸುತ್ತೇನೆ.

ನಳಚರಿತ್ರೆ ಕೃತಿ ಪರಿಚಯಗಳು :


  • ಲಕ್ಷ್ಮೀ ವಿ ಭಟ್ – ಮಂಜೇಶ್ವರ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW