ನಮ್ಮ ಮಕ್ಕಳು ಹೀಗೇಕೆ? : ಶೈಲಜಾ ಹಾಸನ

ಚಿಕ್ಕವಯಸ್ಸಿನಲ್ಲಿಯೇ ಒಳ್ಳೆಯ ಗುಣಗಳ ಬಗ್ಗೆ ತಿಳಿಯುವಂತೆ ಮಕ್ಕಳನ್ನು ಬೆಳೆಸಬೇಕು. ಸುವೇಗನ ವರ್ತನೆಯಿಂದ ಪಾಲಕರು ಬೇಸತ್ತು ಹೋಗಿದ್ದರು. ಅವನನ್ನು ಸರಿ ದಾರಿತರಲು ಶಿಕ್ಷಕಿ ಶೈಲಜಾ ಹಾಸನ ಅವರು ಯೋಚಿಸಿದ ರೀತಿ, ದಾರಿ ತಂದ ರೀತಿಯನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಮೊನ್ನೆ ನನ್ನ ವಿದ್ಯಾರ್ಥಿಯ ಪೋಷಕರೊಬ್ಬರು ಬಂದು ತಮ್ಮ ಮಗನ ಬಗ್ಗೆ ಹೇಳಿಕೊಂಡು ಕಣ್ಣಿರಿಡುತ್ತಾ ನೊಂದು ಹೇಳಿಕೊಂಡಾಗ ನನಗೆ ಶಾಕ್ ಆಗಿತ್ತು.” ಮೇಡಂ, ಬಾಯಲ್ಲಿ ಹೇಳ ಬಾರದು, ಅಂತಹ ಮಾತುಗಳೆನೆಲ್ಲ ಆಡುತ್ತಾನೆ, ಇವನು ನನ್ನ ಮಗನೊ, ದಾಯಾದಿನೋ ಅನ್ನೊ ಸಂದೇಹ ಬರೋ ಹಾಗೆ ಮಾತಾಡ್ತಾನೆ” ಅಂತ ಮಗ ಮಾತನಾಡಿದ್ದನ್ನು ತುಸು ಮೆಲ್ಲನೆ ಹೇಳಿದಾಗ, ನನಗೇ ಕೇಳಲು ಇರಿಸು ಮುರಿಸಾಯಿತು. ಛೇ..ಸ್ವಂತ ಮಗನಾಗಿದ್ದವನು ತಂದೆಯ ಬಳಿ ಮಾತನಾಡುವ ರೀತಿಯೇ ಇದು ಆ ವಿದ್ಯಾರ್ಥಿ ಬಗ್ಗೆ ಜುಗುಪ್ಸೆ ಹುಟ್ಟಿ, ಮುಂದೆ ಆ ಹುಡುಗ ತನ್ನ ಹೆತ್ತವರೊಂದಿಗೆ ಹೇಗೆ ಇರಬಹುದು ಅನ್ನೊದನ್ನು ಕಲ್ಪಿಸಿಕೊಂಡು ಆತಂಕವಾಯಿತು. ಅಪ್ಪ ಅನ್ನುವವರು ಮಗ ಕೇಳಿದುದನ್ನೇಲ್ಲ ಕೊಡಿಸಿ ಬಿಡಬೇಕು, ಅವರು ಏನು ಮಾಡಿದರೂ ತಂದೆಯಾಗಲಿ, ತಾಯಿಯಾಗಲಿ ಕೇಳಲೇ ಬಾರದು. ಬುದ್ದಿ ಮಾತು ಹೇಳಬಾರದು, ಮಕ್ಕಳು ತಪ್ಪು ಮಾಡಿದರೂ ಒಂದೂ ಮಾತೂ ಕೂಡಾ ಆಡಬಾರದು.

ಹೆತ್ತವರಾಗಿದ್ದರೂ ಮಕ್ಕಳನ್ನು ಸರಿದಾರಿಗೆ ತರಲು ಪ್ರಯತ್ನಿಸಲೆ ಬಾರದು. ಹಾಗೇನಾದರು ಮಾಡಿ ಬಿಟ್ಟರೆ ಆ ಅಪ್ಪ ಅಮ್ಮನ ಮೇಲೆ ಈ ಹದಿಹರೆಯದ ಮಕ್ಕಳಿಗೆ ಅಸಾಧ್ಯ ಕೋಪ ಬಂದು ಬಿಡುತ್ತದೆ. ಆ ಕೋಪದ ಭರದಲ್ಲಿ ತಾವೇನು ಮಾಡುತ್ತಿದ್ದೇವೆ, ತಾವೇನು ಮಾತನಾಡುತ್ತಿದ್ದೇವೆ ಅನ್ನೊ ಪರಿಜ್ಞಾನವಿಲ್ಲದೆ ಆಡಿ ಬಿಡುತ್ತಾರೆ, ಮಾಡಿ ಬಿಡುತ್ತಾರೆ. ಆದರೆ ಪರಿಣಾಮ ಅವರ ಹೆತ್ತವರ ಮೇಲಾಗುತ್ತದೆ ಅನ್ನೊದು ಆ ಮಕ್ಕಳಿಗೆ ತಿಳಿದಿರುವುದೇ ಇಲ್ಲ ಅಥವಾ ತಿಳಿದರೂ ಆ ವಯಸ್ಸಿನಲ್ಲಿ ಆ ಮಕ್ಕಳು ಲೆಕ್ಕಿಸುವ ಸ್ಥಿತಿಯಲ್ಲಿಯೂ ಇರುವುದಿಲ್ಲ. ನಮ್ಮ ಮಕ್ಕಳು ಹೀಗೇಕೆ ಅನ್ನೋ ಪ್ರಶ್ನೆ ಕಾಡುತ್ತದೆ.

ಇಲ್ಲಿ ಮಕ್ಕಳ ತಪ್ಪು ಮಾತ್ರ ಕಾಣದೆ ಅಲ್ಲಿ ಹೆತ್ತವರ ತಪ್ಪು ಇರಬಹುದು ಅಂತ ಮೊದಲ ನೋಟಕ್ಕೆ ಸ್ಪಷ್ಟವಾಗಿ ಗೋಚರಿಸುತ್ತದೆ. ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಲಂಕೂಷವಾಗಿ ಪರಿಶೀಲಿಸಿದಾಗ ಕಂಡು ಬಂದ ವಿಷಯವೆಂದರೆ ಸುವೇಗ ಇಬ್ಬರು ಹೆಣ್ಣು ಮಕ್ಕಳಾದ ಮೇಲೆ ಬಯಸಿ ಬಯಸಿ ಹುಟ್ಟಿದ ಒಬ್ಬನೇ ಗಂಡು ಮಗ. ಹಾಗೆಂದೇ ಮಗನ ಬಗ್ಗೆ ವಿಶೇಷ ಪ್ರೀತಿ, ಅತಿಶಯವಾದ ವಾತ್ಸಲ್ಯ, ಅಪರಿಮಿತವಾದ ಮುಚ್ಚಟೆ. ಮುದ್ದಿನ ಮಗ ಏನೂ ಮಾಡಿದರೂ ಚೆನ್ನ, ಅವನು ಬಯಸಿದ್ದವೆಲ್ಲಾ ಅವನ ಮುಂದೆ ಬಂದು ಬೀಳುತ್ತಿತ್ತು. ಮಗು ಇದ್ದಾಗ ಅವೆಲ್ಲ ಚಂದವಾಗಿಯೇ ಕಾಣುತ್ತಿತ್ತು. ಆದರೆ ಅವನು ಬೆಳೆದಂತೆಲ್ಲ ತಾನು ಏನು ಮಾಡಿದರೂ ಸರಿ ಅನ್ನೊ ಮನೋಭಾವನೆಯಿಂದ ದಂಡಿಸುವವರಿಲ್ಲದೆ ಬೆಳೆದು ಬಿಟ್ಟಿದ್ದಾನೆ. ತಾಯಿಗಂತೂ ಮಗ ಏನೂ ಮಾಡಿದರೂ ಚೆನ್ನ. ಮಗನ ಮೇಲೆ ಅತಿ ಪ್ರೀತಿ ಇಟ್ಟುಕೊಂಡ ತಾಯಿ ಅವನ ತಪ್ಪುಗಳನ್ನು ದಂಡಿಸಲು ಅವರ ಅಪ್ಪ ಪ್ರಯತ್ನಿಸಿದರೆ ಮಗನನ್ನು ವಹಿಸಕೊಂಡು ಬರುವ ತಾಯಿಯಿಂದಾಗಿ ಮಗ ಮತ್ತಷ್ಟು ಉದ್ದಟತನ ತೋರಿಸಲಾರಂಭಿಸಿದ. ಅದರ ಪರಿಣಾಮ ಈಗ ಅವನ ಹೆತ್ತವರಿಗೆ ಕಾಣಿಸುತ್ತದೆ. ಅವನ ಬೇಡಿಕೆಗಳು ದಿನ ದಿನಕ್ಕೆ ಜಾಸ್ತಿಯಾಗುತ್ತಿದೆ. ಆ ದೊಡ್ಡ ದೊಡ್ಡ ಬೇಡಿಕೆಗಳನ್ನು ತೀರಿಸಲಾರದೆ ಅವನ ತಂದೆ ಹೆಣಗಾಡುತ್ತಿದ್ದಾರೆ. ಬೇಡಿದೆಲ್ಲ ಬಂದು ಬೀಳುತ್ತಿದ್ದ ಕಾಲ ಬದಲಾದಂತೆ ಮಗನ ಸಿಡಿ ಮಿಡಿ ಹೆಚ್ಚುತ್ತಾ ಹೋಗಿದೆ. ಅಪ್ಪ ಅಮ್ಮ, ಅಕ್ಕ, ಅಜ್ಜಿ, ಅಜ್ಜ ಇವರೆಲ್ಲರ ಮೇಲೆ ಬಾಯಿಗೆ ಬಂದಂತೆ ಮಾತನಾಡುತ್ತಾನೆ. ಮನೆಯಲ್ಲಿ ದಿನಾ ಜಗಳ, ಮನಸ್ತಾಪ. ಪರಿಣಾಮ ಮನೆಯಲ್ಲಿ ಯಾರಿಗೂ ನೆಮ್ಮದಿ ಇಲ್ಲದಂತಾಗಿದೆ. ಇರುವ ಒಬ್ಬನೇ ಮಗ ಹೀಗಾದನಲ್ಲ ಅನ್ನೊ ನೋವು, ಅಪಾರ ಭರವಸೆ, ನಿರೀಕ್ಷೆ ಇಟ್ಟು ಕೊಂಡು ಸಾಕಿ ಬೆಳೆಸಿದ ಮಗ ಈಗಲೇ ಹೀಗಾಗಿದ್ದನಲ್ಲ ಮುಂದೆ ಹೇಗೆ ಎಂಬ ಚಿಂತೆಯಲ್ಲಿ ಹೆತ್ತವರು, ಮನೆಯವರು ಚಿಂತಿತರಾಗಿದ್ದಾರೆ. ಹಾಗಾಗಿ ನಮ್ಮ ಗಮನಕ್ಕೆ ಸುವೇಗನ ವಿಶಯವನ್ನು ತಂದಿದ್ದಾರೆ.

ಶಾಲೆಯಲ್ಲಿಯೂ ಇವನ ವರ್ತನೆ ಆಶಾದಾಯಕವಾಗೇನು ಇರಲಿಲ್ಲ. ಓದುವುದರಲ್ಲಿನೂ ಇವನು ಹಿಂದಿರಲಿಲ್ಲ. ಆದರೆ ನಡವಳಿಕೆಯೇನು ಅಂತಹ ಹೇಳಿಕೊಳ್ಳುವಂತಿರಲಿಲ್ಲ. ಮನೆಯಲ್ಲಿ ಶಾಲೆಗೆ ಹೋಗುತ್ತೆನೆ ಎಂದು ಹೇಳಿ, ಶಾಲೆಗೆ ತಪ್ಪಿಸಿಕೊಳ್ಳುವುದು, ಶಾಲೆಯಲ್ಲಿ ತುಂಟಾಟ ಮಾಡುವುದು, ಸುಳ್ಳು ಹೇಳುವುದು, ಶಾಲೆಯಲ್ಲಿ ಹೇಳಿದ ಕೆಲಸವನ್ನು ಮಾಡದೆ ಇರುವುದು ಹೀಗೆ ಅವಿಧೇಯ ವಿದ್ಯಾರ್ಥಿಯಾಗಿದ್ದ ಸುವೇಗ. ಇವನನ್ನು ಸರಿ ದಾರಿಗೆ ತರುವುದು ಹೇಗೆಂದು ಚಿಂತಿಸುವಂತಾಯಿತು. ಸುವೇಗನೇನು ಕೆಟ್ಟ ಹುಡುಗನಲ್ಲ, ದುಮಾರ್ಗಿಯಲ್ಲ, ಪೋಲಿಯಲ್ಲ. ಆದರೆ ಹದಿ ಹರೆಯದ ವಯಸ್ಸು, ಮನೆಯಲ್ಲಿ ಸಿಗುತ್ತಿರುವ ಒಬ್ಬನೆ ಮಗನೆಂಬ ಪ್ರಾಮುಖ್ಯತೆ , ಹೆತ್ತಮ್ಮನ ವಿಪರೀತ ಕಾಳಜಿ ಅವನನ್ನು ಕೊಂಚ ಕೆಟ್ಟ ಹುಡುಗನನ್ನಾಗಿ ಮಾಡಿದೆ, ಬುದ್ದಿಮಾತು ಹೇಳಿದರೆ ಸರಿಹೋಗ ಬಹುದೆಂದು ಭಾವಿಸಿ ಅವನೊಬ್ಬನನ್ನೇ ಏಕಾಂತವಾಗಿ ಕರೆದು ” ನೋಡು ಸುವೇಗ, ದೇವರು ತಾನು ಎಲ್ಲ ಕಡೆ ಸಿಗಲ್ಲ ಅಂತನೇ ತಂದೆ ತಾಯಿಯರನ್ನು ಸೃಷ್ಟಿಸಿದ್ದಾನೆ. ತಂದೆ ತಾಯಿ ಕಣ್ಣಿಗೆ ಕಾಣಿಸುವ ದೇವರುಗಳು. ಅದಕ್ಕೆಂದೇ ಮಾತೃ ದೇವೊಭವ, ಪಿತೃದೇವೊಭವ ಅಂತ ಹೇಳುತ್ತಾರೆ. ಅಂತಹ ದೇವರ ಸ್ಥಾನದಲ್ಲಿ ನಿಂತಿರೊ ತಂದೆ ತಾಯಿಯರನ್ನು ನಿಂದಿಸುವುದು, ಕೆಟ್ಟ ಕೆಟ್ಟ ಮಾತುಗಳನ್ನು ಆಡುವುದು ತಪ್ಪು. ನೀನು ಅವರ ಮಗ, ನೀನು ಚೆನ್ನಾಗಿರ ಬೇಕೆಂದು ಅವರು ಸದಾ ಬಯಸುತ್ತಾರೆ. ಅವರು ನಿನ್ನ ಒಳಿತಿಗಾಗಿಯೇ ದುಡಿಯುತ್ತಿದ್ದಾರೆ. ನಿನಗಾಗಿಯೇ ಬದುಕುತ್ತಿದ್ದಾರೆ. ಅಂತಹ ತಂದೆ ತಾಯಿಯರಿಗೆ ನೀನು ಗೌರವ ಕೊಡಬೇಕು, ಅವರು ಹೇಳಿದಂತೆ ನೀನು ಕೇಳ ಬೇಕು.  ಚೆನ್ನಾಗಿ ಓದಬೇಕು. ಈಗ ನೀನು ವಿಧೇಯ ವಿದ್ಯಾರ್ಥಿಯಾಗಿ, ಹೆತ್ತವರಿಗೆ ಒಳ್ಳೆಯ ಮಗನಾಗ ಬೇಕು” ಅಂತ ಅವನ ಮನಸ್ಸಿಗೆ ನಾಟುವಂತೆ ಹೇಳಿದೆ.

ನನ್ನ ಮಾತುಗಳು ಅವನ ಮೇಲೆ ಹೇಗೆ ಪರಿಣಾಮ ಬೀರುವುದೊ ಮುಂದೆ ನೋಡಬೇಕು. ಸುವೇಗನ ತಪ್ಪಿನಲ್ಲಿ ಅವನ ಪಾಲಕರ ತಪ್ಪಿರುವುದು ನನಗೆ ಮೊದಲ ನೋಟಕ್ಕೆ ಗೋಚರಿಸಿತ್ತು. ಯಾವುದೇ ಪಾಲಕರಾಗಲಿ, ಅತಿ ಪ್ರೀತಿ ತೋರಿ ಬೆಳೆಸುವುದು, ಅತೀ ಶಿಸ್ತಿನಿಂದ ಬೆಳೆಸುವುದೂ ಎರಡೂ ಕೂಡಾ ತಪ್ಪೆ. ಮಕ್ಕಳನ್ನು ಒಬ್ಬನೇ ಮಗನೆಂದು, ಒಬ್ಬಳೇ ಮಗಳೆಂದೊ ಅತಿ ಮುದ್ದು ಮಾಡಿ , ಅವರು ಕೇಳುವುದೆಲ್ಲವನ್ನೂ ಕೊಡಿಸುವುದರ ಮೂಲಕ ತಮ್ಮ ಪ್ರೀತಿಯನ್ನ ತೋರುವುದು, ಅವರು ತಪ್ಪು ಮಾಡಿದಾಗಲೆಲ್ಲ ಯಾರಾದರೊಬ್ಬರು ಅವರ ಪರ ವಹಿಸಿಕೊಂಡು ಅವರ ತಪ್ಪು ಅವರಿಗರಿವಾಗದಂತೆ ಮಾಡುವುದು ಇವೆಲ್ಲಾ ಆ ಮಕ್ಕಳ ಬೆಳವಣಿಗೆ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಸರಿ, ತಪ್ಪು ಯಾವುದೆಂದು ಮಕ್ಕಳಿಗೆ ತಿಳಿಸಿ ಹೇಳಿ ಅದನ್ನು ಅರ್ಥ ಮಾಡಿಕೊಳ್ಳುವಲ್ಲಿ ಹೆತ್ತವರು ಹೆಚ್ಚಿನ ಪಾತ್ರವಹಿಸಿ ಸಹಕರಿಸಬೇಕು. ಚಿಕ್ಕವಯಸ್ಸಿನಲ್ಲಿಯೇ ಒಳ್ಳೆಯ ಗುಣಗಳ ಬಗ್ಗೆ ತಿಳಿಯುವಂತೆ ಬೆಳೆಸಬೇಕು. ಆಗ ಮಾತ್ರವೇ ಸುವೇಗನ ರೀತಿಯ ಮಕ್ಕಳನ್ನು ಒಳ್ಳೆ ಹಾದಿಗೆ ತರಲು ಸಾಧ್ಯ. ಇದನ್ನು ಮೊದಲು ಹೆತ್ತವರು ಅರ್ಥಮಾಡಿಕೊಂಡು ತಮ್ಮ ಮಕ್ಕಳನ್ನು ಬೆಳೆಸಬೇಕು.


  • ಶೈಲಜಾ ಹಾಸನ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW