‘ನನ್ನ ಕೃತಿಗಳ ಆತ್ಮಚರಿತ್ರೆ’ ಪುಸ್ತಕ ಪರಿಚಯ

 

ಕೆ.ಸತ್ಯನಾರಾಯಣ ಅವರ ‘ನನ್ನ ಕೃತಿಗಳ ಆತ್ಮಚರಿತ್ರೆ’ ಕೃತಿಯ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ನನ್ನ ಕೃತಿಗಳ ಆತ್ಮಚರಿತ್ರೆ
ಲೇಖಕರು : ಕೆ.ಸತ್ಯನಾರಾಯಣ
ಪ್ರಕಾಶನ : ಯಾಜಿ ಪ್ರಕಾಶನ
ಖರೀದಿಗಾಗಿ :9448722800

ಇವರ ಇಲ್ಲಿಯವರೆಗೆ ವಿವಿಧ ಪ್ರಕಾರಗಳಲ್ಲಿ ಬರೆದ ಕೃತಿಗಳ ಪ್ರೇರಣೆ, ಪ್ರಕಾಶಕರು, ವಿಮರ್ಶಕರು, ಓದುಗರ ಪ್ರತಿಕ್ರಿಯೆಗಳನ್ನು ಇದರಲ್ಲಿ ವ್ಯವಸ್ಥಿತವಾಗಿ ದಾಖಲಿಸಿದ್ದಾರೆ.ಹಾಗಾಗಿ ಇದರಿಂದ ಇಲ್ಲಿಯವರೆಗೆ ಅವರ ಕೃತಿಗಳನ್ನು ಓದಿದವರಿಗೆ ಒಳನೋಟಗಳು, ಓದದೆ ಇರುವವರಿಗೆ ಪ್ರವೇಶ ಮಾಡಲು ಒಂದು ಹೆದ್ದಾರಿಯನ್ನು ಹಾಕಿ ಕೊಟ್ಟಂತೆ ಆಗಿದೆ. ಇತರರ ಕೃತಿಗಳನ್ನು ಕುರಿತು ಅವರು ಬರೆದ ಕೃತಿಗಳ , ಲೇಖನ ಗಳ ಉಲ್ಲೇಖ ಕೂಡ ಇಲ್ಲಿದೆ. ಅಲ್ಲದೆ ಅವುಗಳಿಗೆ ದೊರೆತ ಪ್ರತಿಕ್ರಿಯೆಗಳನ್ನು ಇಲ್ಲಿ ಪ್ರಾಮಾಣಿಕವಾಗಿ ದಾಖಲಿಸಿ, ಅವರ ಕುರಿತು ಇವರ ಗ್ರಹಿಕೆ ಒಂದು ಕಡೆ ದೊರೆಯುತ್ತದೆ.

ಹಿರಿಯ ತಲೆಮಾರಿನ ಕಾರಂತರ ಕೃತಿಗಳಲ್ಲಿ ದುಡಿಮೆ, ಕೋವಿಡ ದಿನಗಳಲ್ಲಿ ದುಡಿಯುವ ವರ್ಗದ ವಲಸೆಯಿಂದ ಹುಟ್ಟಿದರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕಥನ ಸ್ವರೂಪದ ಪ್ರಭಾವದಿಂದ ಮಹಾಕಥನದ ಮಾಸ್ತಿ, ಮಲೆಗಳಲ್ಲಿ ಮದುಮಗಳು ಬಿಡಿ ಮತ್ತು ಇಡೀ ಅಧ್ಯಯನದ ಫಲ ಚಿನ್ನಮ್ಮನ ಲಗ್ನ -ಈ ಬಗೆಯ ಕೃತಿಗಳು. ಇದು ಒಂದು ರೀತಿಯಲ್ಲಿ ಅವರಿಗೆ ಸಲ್ಲಿಸಿದ ಋಣ ಸಂದಾಯ ಕೂಡ. ಅಲ್ಲದೆ ಅವರ ಕುರಿತು ಇಲ್ಲಿಯವರೆಗೆ ಬಂದ ಅಧ್ಯಯನಗಳಿಗೆ, ಹೊಸ ಆಯಾಮಗಳನ್ನು ಸೇರಿಸುತ್ತದೆ. ಅದರಂತೆ ವಿವಾದಾತ್ಮಕ ಕೃತಿಗಳಾದ ಭೈರಪ್ಪನವರ ಆವರಣ, ಕವಲು, ಹಾಗೂ ದೇವನೂರು ಮಹಾದೇವ ಅವರ ಕುಸುಮ ಬಾಲೆ, ಎದೆಗೆ ಬಿದ್ದ ಅಕ್ಷರ ಕೃತಿಗಳನ್ನು ಕುರಿತು ನಿರ್ಭಿಡೆಯಿಂದ ಬರೆದಿದ್ದಾರೆ.

ಇವರ ಕೃತಿಗಳಿಗೆ ಮೊದಲ ತಲೆಮಾರಿನ ವಿಮರ್ಶಕರಾದ ಕೀರ್ತಿನಾಥ ಕುರ್ತಕೋಟಿ, ಜಿ.ಎಸ್.ಆಮೂರ, ಎರಡನೇ ತಲೆಮಾರಿನ ಕೆ.ವಿ.ನಾರಾಯಣ ಮತ್ತು ಹೆಚ್.ಎಸ್.ಆರ್ ಇವರ ಪ್ರೋತ್ಸಾಹ ಹಾಗೂ ನಂತರದ ತಲೆಮಾರಿನ ಜಿ.ರಾಜಶೇಖರ, ಜನಾರ್ದನ ಭಟ್,ಸುಧಾಕರ ದೇವಾಡಿಗ, ಮುಂತಾದವರ ಪ್ರತಿಕ್ರಿಯೆ ಮುನ್ನುಡಿ ,ಬೆನ್ನುಡಿ, ಸಮೀಕ್ಷೆಗಳ ರೂಪದಲ್ಲಿ ಪ್ರಕಟವಾಗಿ ಇವರನ್ನೆಲ್ಲಾ ಕೃತಜ್ಞತೆಯಿಂದ ಸ್ಮರಿಸುತ್ತಾರೆ.ಅಲ್ಲದೆ ಹೊರನಾಡಿನಲ್ಲಿ ಇದ್ದ, ಇವರ ಕೃತಿಗಳನ್ನು ಪ್ರಕಟಿಸುವ ಮೂಲಕ, ಪ್ರಚಾರಕ್ಕೆ ಕಾರಣಕರ್ತರಾದ ಪ್ರಕಾಶಕರಾದ ಮನೋಹರ ಗ್ರಂಥ ಮಾಲೆ, ಅಭಿನವ, ಗೀತಾಂಜಲಿ , ಮುಂತಾದವರ ಪ್ರೋತ್ಸಾಹಕ್ಕೆ ನೆನಕೆಗಳನ್ನು ಸಲ್ಲಿಸಿದ್ದಾರೆ. ಜೊತೆ ಜೊತೆಗೆ ದಿನ ಪತ್ರಿಕೆಗಳಾದ ಪ್ರಜಾವಾಣಿ , ಕನ್ನಡ ಪ್ರಭ ಸಂಪಾದಕ ಜಿ.ಎನ್.ಆರ್. ವೈ.ಎನ್. ಕೆ ಕೂಡ ಇವರ ಕತೆಗಳನ್ನು ಪ್ರಕಟಿಸಿ ಪ್ರೋತ್ಸಾಹ ನೀಡಿದರು ಎಂದು ದಾಖಲಿಸಿದ್ದಾರೆ. ಬರೆದಾದ ಮೇಲೆ ಅವನ್ನು ಸಮಕಾಲೀನರ ಕಣ್ಣಿಗೆ ಬೀಳುವಂತೆ ಮಾಡುವಲ್ಲಿ, ಇವರು ಎದುರಿಸಿದ ತಲ್ಲಣಗಳ ಅಭಿವ್ಯಕ್ತಿಗೆ ಇಲ್ಲಿ ಎಡೆ ದೊರೆತಿದೆ. ಇದು ಅವರ ಪ್ರಾಮಾಣಿಕತೆಯ ದ್ಯೋತಕವಾಗಿದೆ. ಇದರೊಂದಿಗೆ ಇವರಿಗೆ ಪ್ರೋತ್ಸಾಹ ನೀಡಿದ, ನಿರುತ್ಸಾಹ ತೋರಿದವರನ್ನು ಕೂಡ ಇವರ ಸಮಾನವಾಗಿ ಉಲ್ಲೇಖ ಮಾಡಿದ್ದಾರೆ. ಇವರು ವಿಮರ್ಶಕರ ಅಭಿಪ್ರಾಯಗಳಿಗೆ ಮಾತ್ರವಲ್ಲ, ನಮ್ಮಂತಹ ಸಾಮಾನ್ಯ ಓದುಗರಿಗೆ ಕೂಡ ಬೆಲೆ ಕೊಡುತ್ತಾರೆ ,ಎಂಬುದನ್ನು ನನ್ನ ಮತ್ತು ನನ್ನ ಸಂಗಾತಿ ಗಿರಿಜಾ ಶಾಸ್ತ್ರಿಯವರ ಹೆಸರುಗಳ ಉಲ್ಲೇಖದ ಮೂಲಕ ಕಾಣಬಹುದು.

ನನಗೆ ತಿಳಿದಂತೆ ಇಲ್ಲಿಯವರೆಗೆ ಯಾವ ಲೇಖಕ ಕೂಡ ,ತಮ್ಮ ‌ಕೃತಿಗಳ ಕುರಿತು ಆತ್ಮಚರಿತ್ರೆ ಪ್ರಕಟಿಸಿದಂತಿಲ್ಲ. ಕ್ವಚಿತ್ತಾಗಿ ತಮ್ಮ ಆತ್ಮಚರಿತ್ರೆಗಳಲ್ಲಿ ಅವರ ಕೃತಿಗಳ ಉಲ್ಲೇಖ ಬಂದಿದ್ದರೂ. ಈ ದೃಷ್ಟಿಯಿಂದ ಈ ಕೃತಿ ಕೂಡ ಲೇಖಕರ ಪ್ರಯೋಗಶೀಲತೆಗೆ ಸಾಕ್ಷಿ ಎಂದರೆ ಅದು ಖಂಡಿತ ಉತ್ಪ್ರೇಕ್ಷೆ ಅಲ್ಲ. ಕೃತಿಯನ್ನು ಓದಲು ಅವಕಾಶ ಕಲ್ಪಿಸುವ ಮೂಲಕ, ಅವರ ಕೃತಿಗಳ ಒಳನೋಟಗಳ ಗ್ರಹಿಕೆಗೆ ವಂದನೆ ಅಭಿನಂದನೆಗಳು.

ಹೊಸಪೇಟೆಯ ಯಾಜಿ ಪ್ರಕಾಶನದವರು ಪ್ರಕಟಿಸುತ್ತಿರುವ ಈ ಕೃತಿ ಜುಲ್ಯೆ ಕೊನೆವಾರದಲ್ಲಿ ಪ್ರಕಟವಾಗುವುದು.


  • ರಘುನಾಥ್ ಕೃಷ್ಣಮಾಚಾರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW