ನಾನು ಮತ್ತು ಕೋಣ – ಚೆನ್ನಕೇಶವ ಎಲ್.ಜಿ‘ಬಾಲ್ಯದ ಆ ಒಂದು ಹಾಸ್ಯ ಘಟನೆ ‘ನಾನು ಮತ್ತು ಕೋಣ’ದ ಜೊತೆ ನಡೆದ ಒಂದು ಸಣ್ಣ ಘಟನೆಯನ್ನು ನೆನೆದು ಮನೆಯಲ್ಲಿಈಗಲೂ ನಗ್ತಿರ್ತೀವಿ; – ಚೆನ್ನಕೇಶವ ಎಲ್ ಜಿ. ನೀವು ಕೂಡಾ ನಿಮ್ಮ ಬಾಲ್ಯದ ಸುಂದರ ನೆನಪುಗಳನ್ನ ನನ್ನೊಂದಿಗೆ ಕೊಳ್ಳಬಹುದು … 

ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮಾಸಿಲ್ಲ, ಬಾಲ್ಯದಲ್ಲಿ ಪ್ರತಿಯೊಬ್ಬರಿಗೂ ಭಾನುವಾರ ಬಂತೆಂದರೆ ಇನಿಲ್ಲದ ಖುಷಿ. ಪಡ್ಡೆ ಗ್ಯಾಂಗ್ ಕಟ್ಟಿಕೊಂಡು ಬೇಲಿಸಾಲ್ ಸುತ್ಕೊಂಡು ಕಾರೆ ಹಣ್ಣು, ನೇರಳೆ ಹಣ್ಣು, ಗಣಿಕೆ ಹಣ್ಣು ಇನ್ನೂ ಮುಂತಾದ ಹಣ್ಣುಗಳನ್ನು ಕಿತ್ಕಂಡ್ ತಿನ್ನೋದೇ ಮಜ.

ಈ ಮಜಾ ನನ್ನ ಜೀವನದಲ್ಲಿ ಬಹಳ ದಿನ ಉಳಿಲಿಲ್ಲ. ಭಾನುವಾರ ಬಂತೆಂದರೆ ತಾತನ ಮನೆಯಲ್ಲಿ ಓದುತ್ತಿದ್ದ ಕಾರಣ ಎಮ್ಮೆ ಕಾಯೋ ಸರದಿ. ನಮ್ಮತ್ತೆ ಮಕ್ಳು ಇಬ್ರು ಅವರಿಗೆ ಒಂದೊಂದು ಎಮ್ಮೆ ನನಗೆ ಬಲಿಷ್ಠವಾದ ಕೊಣ. ಸುತ್ತಳ್ಳಿಗೆ ಒಂದೆ ಕೋಣ ಬೇರೆಯವರು ಮೂರು ಮಂದಿ ಬಗ್ಸಿದ್ರು ಬಗ್ತಿರ್ಲಿಲ್ಲ, ಆದರೆ ನಂಜೊತೆ ತುಂಬಾ ಹೊಂದ್ಕೊಂಡಿತ್ತು. ನನಗಾಗ ಸುಮಾರು 12 ವರ್ಷ.
ಜೊತೆಗಾರರೆಲ್ಲ ಕ್ರಿಕೆಟ್, ಚಿನ್ನಿದಾಂಡು, ಕಲ್ಲು ಕುಟುಕುಟುಕು, ಟ್ರಿಕ್ಕಿ, ಬಚ್ಚೆ, ಕುರುಂಬ್ಲೇಟ್ ಐ ಪ್ಲಸ್ ಕಣ್ಣಾಮುಚ್ಚಾಲೆ, ಮೂರು ಬದ್ದು( ಗೋಲಿಗಳ ಆಟ) ಗೋಲಿ, ಆನೆಕಲ್ಲು, ಚೌಕಾಬಾರದಲ್ಲಿ ಮುಳುಗಿದ್ರೆ, ನಾವು ಮೂರುಜನ ಸಪ್ಪೆ ಮೋರೆ ಆಕಿಕೊಂಡು ಮೂರ್ ಎಮ್ಮೆ ಎಳ್ಕೊಂಡು ಹೋಗ್ತಿದ್ವಿ. ನನ್ನ ಕೋಣ ಬೇಗ ಬೇಗ ಮುಂದಕ್ಕೆ ಬರ್ತಿರ್ಲಿಲ್ಲ. ನಾನ್ ದರ ದರ ಎಳ್ಯೊದ್ ಬಿಡ್ತಿರ್ಲಿಲ್ಲ.

ಫೋಟೋ ಕೃಪೆ : google

ಅದೊಂದು ಭಾನುವಾರ ಎಂದಿನಂತೆ ಸಣ್ಣ ಹುಲ್ಲುಗಾವಲು ಎಮ್ಮೆ, ಕೋಣ ಮೇಯ್ಸುತ್ತಿದ್ವಿ, ನಾವು ಮೂರು ಜನ ಎಮ್ಮೆ ಕಡೆ ಜ್ಞಾನ ಮರೆತು ಅಲ್ಲೆ ಲಭ್ಯವಿದ್ದ ಕೌಟೆ ಹಣ್ಣು, ಕಾರೆ ಹಣ್ಣು ಹಾಗು ಸಣ್ಣ ಗಾತ್ರದ ಟೊಮೆಟೊ ಕಿತ್ತು ತಿನ್ನಲು ಮಗ್ನನಾಗಿದ್ವಿ. ಸ್ವಲ್ಪ ಸಮಯದ ನಂತರ ಬಂದು ನೋಡಿದ್ರೆ, ನನ್ನ ಕೋಣ ನಾಪತ್ತೆ ಮನೇಲಿ ನಮ್ಮ ತಾತನ ಭಯ ಎಲ್ಲಿ ಇಗ್ಗ ಮುಗ್ಗ ಬಾರ್ಸುತ್ತೊ ಅಂತ.
ಇಡೀ ಹುಲ್ಲುಗಾವಲು ಕೆರೆ ತೊರೆ ಹಳ್ಳ ಕೊಳ್ಳ ಎಲ್ಲಿ ಹುಡುಕಿದ್ರು ಕೋಣ ಕಾಣವಲ್ದು, ಹೋ… ಹೋ… ಇನ್ನೇನು ಬಿದ್ದು ಗೂಸು ಅನ್ನೋವಾಗ್ಲೆ ಪರಿಚಯದ ಹೆಂಗಸೊಬ್ಬರು, ಲೇ ಮಗ ನಿಮ್ ಕೋಣ ಯಾರ್ದೊ ಎಮ್ಮೆ ಅಟ್ಟಿಸಿಕೊಂಡು ಇತ್ತಗೋತ್ಕಳ್ಳ ಅಂದಿದ್ದೆ ತಡ ಓಡ್ದೆ ಓಡ್ದೆ ಸುಮಾರು ಐದ್ ಕಿಮೀ ಓಡಿದೆ ಪುಣ್ಯಕ್ಕೆ ಯಾವ್ದೊ ಎಮ್ಮೆ ಹಗ್ಗದ ಗುರುತು ನೆಲದ ಮೇಲೆ ನಂಗೆ ದಾರಿ ತೋರ್ಸ್ತಿತ್ತು. ಅದೇ ಜಾಡು ಇಡ್ಕಂಡ್ ಸಿಕ್ ಸಿಕ್ಕಿದವರನೆಲ್ಲ ಅಣ್ಣ ಇಕಡಿಕೊಂದ್ ಕೋಣ ಓಯ್ತಾ ಅಂತ ಕೇಳಿದ್ದು ಕೇಳಿದ್ದೆ, ಓಡಿದ್ದು ಓಡಿದ್ದೆ, ಇನ್ನೇನು ಯಾವ್ದೋ ಊರು ಸಿಕ್ತು ಅನ್ನುವಾಗ್ಲೆ ಅತ್ಲುಕಡೆಯಿಂದ ಒಂದ್ ಎಮ್ಮೆ ಜೋರಾಗಿ ಓಡಿ ಬರುವುದು ಕಾಣಿಸ್ತು, ಜೊತೇಲಿ ನನ್ನ ಕೋಣಾನು ಇತ್ತು, ಮನಸ್ಸಲ್ಲಿ ಬದುಕಿದೆಯಾ ಬಡಜೀವ ಅನ್ನುವಾಗ್ಲೆ, ಹಿಂದಿನಿಂದ ಯಾರೋ ಒಬ್ಬ ಅಲ್ಲ ಎಮ್ಮೆಯ ಮಾಲಿಕ ದೊಣ್ಣೆ ತಕಂಡ್ ನನ್ನ ಕಡಿಕೆ ಜೋರಾಗಿ ಓಡ್ ಬರ್ತಾವ್ನೆ, ಈಗ ನೋಡಿ ಶುರುವಾಯ್ತು ಎದೆ ಬಡಿತ, ಇತ್ತ ಮುಂದೆ ಎಮ್ಮೆ ,ಅದ್ರಿಂದೆ ನಮ್ ಕೋಣ, ಕೋಣ ನಿಂದೆ ನಾನು ನನ್ನಿಂದೆ ದೊಣ್ಣೆ ಇಡ್ಕಂಡ್ ಅವ್ನು.ಅವ್ನು ಹಿಡ್ಕಾ… ಹಿಡ್ಕಾ… ಅಂತಾವ್ನೆ ನಂಗೆ. ನಿಂತ್ಕಾ… ನಿಂತ್ಕಾ… ಅಂದಂಗೆ ಕೇಳುಸ್ತಾಯ್ತೆ. ಕೈಯಲ್ಲಿ ದೊಣ್ಣೆ ಬೇರೆ ಇಡ್ಕಂಡೌನೆ. ಈ ಕೋಣ ಬೇರೆ ಎಮ್ಮೆ ಹಿಂದೆ ಬಿದೈತೆ. ಮತ್ತೆ ಐದು ಕಿಮೀ ಹಿಂದಕ್ಕೆ ಓಡು… ಓಡು… ಓಡು…

ಕಡೆಗೆ ಎಮ್ಮೆ, ಕೋಣ ಎರಡು ಹೋಗಿ ಅಣೆಗೆ (ನೀರಿಗೆ ಅಡ್ಡಲಾಗಿ ಕಟ್ಟಿದ ಅಡೆ) ಬಿದ್ದು ನಾನು ಕೋಣನ್ನ ಹಿಡ್ಕಂಡೆ ಅ…. ಯಪ್ಪ… ಬಂದು ಎಮ್ಮೆ ಹಿಡ್ಕಂಡಾ ನಿಮ್ದಾ ಕೋಣ ಅಂದ ಹೂ ಅಂದೆ ನೀನೇನಾರ ಇಲ್ಲ ಅಂದಿದ್ರೆ, ನಿನ್ ಕೋಣನ್ನ ಪೀಸ್… ಪೀಸ್… ಮಾಡ್ತಿದ್ದೆ. ಮಗುಂದ್ ನನ್ನ ಹತ್ತು ಕಿಮೀ ಓಡ್ಸೈತೆ ಅಂದ. ನನಗೂ ಓಡಿ ಓಡಿ ಸುಸ್ತಾಗಿತ್ತು. ಅವಂಗೂ ನನಗಿಂತ ಡಬಲ್ ಸುಸ್ತಾಗಿತ್ತು. ಅವನಿಗೆ ಏನು ಮಾಡೋ ಶಕ್ತಿನೂ ಇರ್ಲಿಲ್ಲ. ಹಾಗೆ ಎಮ್ಮೆ ಕಟ್ಟಿ ಯಾವ್ದೋ ಮರದ ಬುಡಕ್ಕೆ ಕೂತ್ಕಂಡ. ನಾನು ಅದೇ ಖುಷಿಯಲ್ಲಿ ಕೋಣನ್ನ ಹೊಡ್ಕಂಡು ಮನೆ ಕಡೆ ಹೊರಟೆ.

ಮಾರನೆ ದಿನ ಏಳುವುದಕ್ಕೆ ಹೋದರೆ ಕಾಲು ಏಳುತ್ತಿಲ್ಲ. ಆ ಕೋಣನ ಕಾಲ್ ತರನೆ ನನ್ನ ಎರಡು ಊದ್ಕಂಡ್ ಬಿಟ್ಟಿದ್ವು, ಇದೊಂದು ಬಾಲ್ಯದ ಮರೆಯದ ಘಟನೆ ನಮ್ಮತ್ತೆ ಈಗ್ಲು ಈ ಕಥೆನಾ ಹೇಳಿಕೊಂಡು ನಗ್ತಿರ್ತಾರಾಂತೆ.


  • ಚೆನ್ನಕೇಶವ ಎಲ್.ಜಿ (ಕವಿಗಳು, ಲೇಖಕರು) ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW