ಸಿದ್ಧಿಧಾತ್ರಿಯು ಪಾರ್ವತಿ ದೇವಿಯ ಮೂಲ ರೂಪ. ಅಷ್ಟ ಸಿದ್ಧಿಗಳ ಒಡತಿಯು ಸಿದ್ಧಿಧಾತ್ರಿಯೇ ಅವಳು ಶಂಖ, ಚಕ್ರ, ಗದೆ ಮತ್ತು ಕಮಲವನ್ನು ಹಿಡಿದಿರುವ ನಾಲ್ಕು ಕೈಗಳನ್ನು ಹೊಂದಿದ್ದಾಳೆ. ನವದುರ್ಗೆಯರ ನವ ಸ್ವರೂಪವು ಸಂಪೂರ್ಣವಾದವು. ‘ಸಿದ್ಧಿಧಾತ್ರಿ’ ಮಹಿಮೆಯನ್ನು ಡಾ.ಮಲ್ಲಿಕಾರ್ಜುನ ಎಸ್ ಆಲಮೇಲ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಸಿದ್ಧ ಗಂಧರ್ವ ಯಕ್ಷಾದ್ಯೆರಸುರೈರಮರೈರಪಿ ।
ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ॥
ವಂದೇ ವಾಂಛಿತ ಮನೋರಥಾರ್ಥ ಚಂದ್ರಾರ್ಘಕೃತ ಶೇಖರಮ್ । ಕಮಲಸ್ಥಿತಾಂ ಚತುರ್ಭುಜಾ ಸಿದ್ಧಿದಾತ್ರೀ ಯಶಸ್ವನೀಮ್॥ ಸ್ವರ್ಣಾವರ್ಣ ನಿರ್ವಾಣಚಕ್ರಸ್ಥಿತಾಂ ನವಮ್ ದುರ್ಗಾ ತ್ರಿನೇತ್ರಮ್ । ಶಖ, ಚಕ್ರ, ಗದಾ, ಪದ, ಧರಂ ಸಿದ್ಧಿದಾತ್ರೀ ಭಜೇಮ್॥
ನವರಾತ್ರಿಯ ಒಂಬತ್ತನೆಯ ಅಂತಿಮ ದಿನವು ಜಗದಾತ್ರಿ- ಸಿದ್ಧಿಧಾತ್ರಿಯ ಉಪಾಸನೆ ( ಪೂಜೆ ) ಮಾಡಲಾಗುತ್ತದೆ, ಈ ದಿನ ಶಾಸ್ತ್ರೀಯ ವಿಧಿ – ವಿಧಾನಗಳಿಂದ, ಪರಿಪೂರ್ಣ ನಿಷ್ಠೆಯಿಂದ ಸಾಧನೆ ಮಾಡುವ ಸಾಧಕನಿಗೆ ಎಲ್ಲಾ ಸಿದ್ಧಿಗಳು ಪ್ರಾಪ್ತವಾಗುವದರಲ್ಲಿ ಸಂಶಯವಿಲ್ಲ, ಈ ಬ್ರಹ್ಮಾಂಡದಲ್ಲಿ, ಅವನಿಗೆ ಯಾವುದು ಅಗಮ್ಯವಾಗಿ ಉಳಿಯುವದಿಲ್ಲ, ಸರ್ವ ಕಾರ್ಯಗಳಲ್ಲೂ ದಿಗ್ವಿಜಯ ಸಾಧಿಸುವ ಸಾಮರ್ಥ್ಯ ಆತನಲ್ಲಿ ಅವಿಷ್ಕಾರವಾಗುತ್ತದೆ. ಪ್ರತಿಯೋರ್ವ ಮನುಜನು ಸಿದ್ಧಿದಾತ್ರಿಯ ಕೃಪೆಯನ್ನು ಪಡೆದು ಅವಿರತ ಭಕ್ತಿಯ ಧಾರೆ ಹರಿಸಿದರೆ, ಮಾತಾ ಕೃಪೆಯಿಂದ ತೀವ್ರ ದುಃಖರೂಪಿ ಸಂಸಾರದಿಂದಲೂ ನಿರ್ಲಿಪ್ತನಾಗಿ, ಜಗದೆಲ್ಲ ಸುಖಭೋಗಗಳನ್ನು ಭೋಗಿಸುತ್ತ ಮೋಕ್ಷ ಪಡೆಯಬಲ್ಲನು.
ಸಿದ್ಧಿಧಾತ್ರಿಯು ಪಾರ್ವತಿ ದೇವಿಯ ಮೂಲ ರೂಪ. ಅಷ್ಟ ಸಿದ್ಧಿಗಳ ಒಡತಿಯು ಸಿದ್ಧಿಧಾತ್ರಿಯೇ ಅವಳು ಶಂಖ, ಚಕ್ರ, ಗದೆ ಮತ್ತು ಕಮಲವನ್ನು ಹಿಡಿದಿರುವ ನಾಲ್ಕು ಕೈಗಳನ್ನು ಹೊಂದಿದ್ದಾಳೆ. ತಾಯಿಯು ಸಂಪೂರ್ಣವಾಗಿ ಅರಳಿದ ಕಮಲದ ಮೇಲೆ ಅಥವಾ ಸಿಂಹ ವಾಹಿನಿಯಾಗಿದ್ದಾಳೆ. ಭಗವಾನ್ ಶಿವನು ಸಿದ್ಧಿದಾತ್ರಿದೇವಿಯಿಂದ ಎಲ್ಲಾ ಎಂಟು ಶಕ್ತಿಗಳ ವರಪ್ರಸಾದ ಪಡೆದಿದ್ದಾನೆಂದು ಹೇಳಲಾಗುತ್ತದೆ. ಭಗವತಿಯ ಕೃಪಾಕಟಾಕ್ಷದಿಂದಲೇ ಭಗವಾನ್ ಶಿವನ ಅರ್ಧ ಶರೀರವು ದೇವಿಯದಾಗಿದ್ದು, ಇದೆ ಕಾರಣದಿ ಸಾಂಬಶಿವನು ‘ಅರ್ಧನಾರೇಶ್ವರ ‘ನೆಂದು ಜಗದಿ ಪ್ರಖ್ಯಾತಿ ಪಡೆದನೆಂದು ಹೇಳಲಾಗುತ್ತದೆ.

ಸಿದ್ಧಿಯೆಂದರೆ ಕೆಲಸ ಕೈಗೂಡುವುದು (ಕ್ರಿಯಾಸಿದ್ಧಿ). ಸಾಮಾನ್ಯವಾಗಿ ಈ ಮಾತನ್ನು ಅಲೌಕಿಕವಾಗಿರುವ ಕೌಶಲಗಳನ್ನು ಪಡೆಯುವುದಕ್ಕೆ ಬಳಸುತ್ತಾರೆ. ಸಿದ್ಧಿಯೆಂದರೆ ತುಂಬಾ ಚಮತ್ಕಾರದ ಅದ್ಭುತಶಕ್ತಿ. ತಪಶ್ಚರ್ಯೆಯಿಂದಲೋ ಮಂತ್ರ – ತಂತ್ರಗಳ ಅನುಸಂಧಾನದಿಂದಲೋ ದೈವಿಕ ಅನುಗ್ರಹದಿಂದಲೋ ಮನುಷ್ಯರು ಪಡೆಯುವ ವಿಶೇಷ ಸಾಮರ್ಥ್ಯವನ್ನು ಅಷ್ಟಸಿದ್ಧಿ ಎಂದು ಪರಿಗಣಿಸಲಾಗಿದೆ. ಹಿಂದೂ ಧರ್ಮದ ಪ್ರಕಾರ ಅಷ್ಟಸಿದ್ಧಿಗಳೆಂದರೆ
ಅಣಿಮಾ – ದೇಹವನ್ನು ಅತಿ ಚಿಕ್ಕ (ಪರಮಾಣುವಿನ) ಗಾತ್ರಕ್ಕೆ ಇಳಿಸುವುದು
ಲಘಿಮಾ – ಅತಿ ಕಡಿಮೆ (ಭಾರರಹಿತ) ಹಗುರಾಗುವುದು
ಮಹಿಮಾ – ದೇಹವನ್ನು ಅತಿ ದೊಡ್ಡ (ಅನಂತವಾದ) ಗಾತ್ರಕ್ಕೆ ಹೆಚ್ಚಿಸುವುದು
ಗರಿಮಾ – ಅತಿ (ಅನಂತದಷ್ಟು) ಭಾರವಾಗಿರುವುದು
ಪ್ರಾಪ್ತಿ – ಎಲ್ಲ ಸ್ಥಳಗಳಿಗೂ ಅನಿರ್ಬಂಧಿತವಾದ ಪ್ರವೇಶ ದೊರಕಿಸಿಕೊಳ್ಳುವದು
ಪ್ರಾಕಮ್ಯ – ಇಷ್ಟಪಟ್ಟಿದ್ದನ್ನು ದೊರಕಿಸಿಕೊಳ್ಳುವದು
ಈಶಿತ್ವ – ಎಲ್ಲದರ ಮೇಲೆ ಸಂಪೂರ್ಣವಾದ ಒಡೆತನ ಹೊಂದುವುದು
ವಶಿತ್ವ – ಎಲ್ಲವನ್ನು ಜಯಿಸುವ ಶಕ್ತಿ ಹೊಂದುವುದು
ಜಗನ್ಮಾತೆಯನ್ನು ಏಕನಿಷ್ಠೆಯಿಂದ ಪೂಜಿಸುತ್ತ ಯೋಗಮಾರ್ಗದಲ್ಲಿ ಹಠಯೋಗವನ್ನು ಹಿಡಿದವರು ಈ ಸಿದ್ಧಿಗಳನ್ನು ಪಡೆಯುತ್ತಾರೆನ್ನುವದು ನಿಶ್ಚಿತವಾಗಿದೆ. ಹನುಮಾನ್ ಚಾಲೀಸ ಅನುಕ್ಷಣ ಪಠಿಸುವವರಿಗೆ ಈ ಅಷ್ಟಸಿದ್ಧಿಗಳನ್ನು ಪವನಸುತ ಹನುಮಂತ ನೀಡುವನೆನ್ನುವ ನಂಬಿಕೆಯು ಇದೆ. ಇನ್ನು ಬ್ರಹ್ಮವೈವರ್ತ ಪುರಾಣದ, ಶ್ರೀಕೃಷ್ಣ ಜನ್ಮಖಂಡದಲ್ಲಿ, ಈ ಸಿದ್ಧಿಗಳ ಸಂಖ್ಯೆ ಹದಿನೆಂಟು ಎಂದು ಹೇಳಲಾಗಿದೆ.
ಅವು ಯಾವೆಂದ್ರೆ ಅಣಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ,ಮಹಿಮಾ, ಈಶಿತ್ವ -ವಶಿತ್ವ ಸರ್ವಕಾಮವಸಾಯಿತಾ, ಸರ್ವಜ್ಞತ್ವ, ದೂರ ಶ್ರವಣ, ಪರಕಾಯಪ್ರವೇಶ, ವಾಕ್ಸಿದ್ಧೀ, ಕಲ್ಪವೃಕ್ಷತ್ವ, ಸೃಷ್ಟಿ, ಸಂಹಾರಕರಣ ಸಾಮರ್ಥ್ಯ, ಅಮರತ್ವ, ಸರ್ವನ್ಯಾಯಕತ್ವ, ಭಾವನಾ, ಸಿದ್ದಿ. ಲೋಕಮಾತೆಯು ಈ ಎಲ್ಲಾ ಸಿದ್ದಿಗಳನ್ನು ಭಕ್ತರಿಗೆ,ಸಾಧಕನಿಗೆ, ಏಕನಿಷ್ಠೆಯ ಉಪಾಸಕನಿಗೆ, ಕೊಡುವಳೆನ್ನಲಾಗಿದೆ.
ನವರಾತ್ರಿ ಆರಂಭದಿಂದ ಅಷ್ಟ ದಿನಗಳು ಅಷ್ಟ ದುರ್ಗಾ ಮಾತೆಯರ ಪೂಜಾ -ಉಪಾಸನೆಯನ್ನು ಪರಿಶುದ್ಧ ಭಕ್ತಿಯಿಂದ, ಶಾಸ್ತ್ರೀಯ ವಿಧಿ – ವಿಧಾನದಂತೆ ಮಾಡುತ್ತ ನವಮಿ ದಿನ ಸಿದ್ಧಿದಾತ್ರಿ ಉಪಾಸನೆಯಲ್ಲಿ ಪ್ರವೃತ್ತರಾಗಿ, ಮಹಾಶಕ್ತಿ ದೇವತೆಯ ಉಪಾಸನೆಯನ್ನು ಪರಿಪೂರ್ಣಗೊಳಿಸಿದ, ಬಳಿಕ, ಭಕ್ತರ, ಸಾಧಕರ, ಲೌಕಿಕ – ಪಾರಲೌಕಿಕದ ಎಲ್ಲಾ ಕಾಮನೆಗಳು ಸಂಪನ್ನವಾಗುತ್ತವೆ.ಅವನು ಸಾಂಸಾರಿಕ ಇಚ್ಛೆಗಳಿಂದ ಮೇಲೆಕೆದ್ದು, ಮಾನಸಿಕವಾಗಿ ಭಗವತಿಯ ದಿವ್ಯ ಲೋಕಗಳಲ್ಲಿ ವಿಹರಿಸುತ್ತಾ ಮಾತೆಯ ಕೃಪಾ ರಸ – ಪೀಯೂಷವನ್ನು ಪಾನಮಾಡುತ್ತ, ವಿಷಯ ಶೂನ್ಯನಾಗುತ್ತಾನೆ. ಜನನಿ ಭಗವತಿಯ ಪರಮ ಸಾನಿಧ್ಯವೇ ಅವನ ಸರ್ವಸ್ವವಾಗುತ್ತದೆ. ಈ ಪರಮ ಪದವನ್ನು ಪಡೆದ ಆತನಿಗೆ ಪ್ರಪಂಚದ ಬೇರಾವುದರ ಅವಶ್ಯಕತೆ ಉಳಿಯುವದಿಲ್ಲ, ಭವಾನಿ ಸಿದ್ಧಿದಾತ್ರಿಯ ಚರಣ ಸಾನಿಧ್ಯವನ್ನು ಪಡೆಯಲು ನಾವು – ನೀವುಗಳೆಲ್ಲ ಅನವರತ ನಿಯಮ, ನಿಷ್ಠೆಯಿಂದ ಉಪಾಸನೆ ಮಾಡಿದರೆ, ಸಂಸಾರದ ಕನಿಷ್ಠ ಅಸಾರತೆಯು ನೀಗಿ ಪರಮ ಸುಶಾಂತಿದಾಯಕ ಅಮೃತ ಪದ ಪ್ರಾಪ್ತವಾಗುತ್ತದೆ.
ಇಲ್ಲಿಗೆ ನವದುರ್ಗೆಯರ ನವ ಸ್ವರೂಪವು ಸಂಪೂರ್ಣವಾದವು. ಇಲ್ಲಿಯವರೆಗೂ ನನ್ನ ಲೇಖನವನ್ನು ಪ್ರತಿದಿನವು ಆತ್ಮೀಯತೆಯಿಂದ ಓದಿ, ಮೆಚ್ಚುಗೆ ವ್ಯಕ್ತಪಡಿಸುವದರ ಜೊತೆಗೆ ಸಲಹೆ ಸೂಚನೆಯನ್ನು ತಮಗೆ ಧನ್ಯವಾದಗಳು ಹಾಗು ಲೇಖನಗಳನ್ನ ಪ್ರಕಟಿಸಿದ ಸಹೃದಯ ಸಂಪಾದಕರಿಗೂ ಹೃತ್ಪೂರ್ವಕ ಧನ್ಯವಾದಗಳು.
ವಿಜಯದಶಮಿ ದಿನ ಜಗನ್ಮಾತೆಯ ವಿಶೇಷ ಲೇಖನ ಪ್ರಕಟವಾಗಲಿದೆ ನಿರೀಕ್ಷಿಸಿ…
ದುರ್ಗೆಯ ಮಹಿಮೆ ಹಿಂದಿನ ಸಂಚಿಕೆಗಳು :
- ನವದುರ್ಗೆಯರಲ್ಲಿ ಮೊದಲನೆಯ ಶಕ್ತಿ ಶೈಲಪುತ್ರಿ
- ನವದುರ್ಗೆಯ ಎರಡನೇಯ ಸ್ವರೂಪ ಬ್ರಹ್ಮಚಾರಿಣಿ
- ಆದಿಶಕ್ತಿಯ ಮೂರನೇ ಸ್ವರೂಪ ಚಂದ್ರಘಂಟಾ ದೇವಿ
- ಚಿಚ್ಛಕ್ತಿ ದುರ್ಗೆಯ ನಾಲ್ಕನೇ ಸ್ವರೂಪ ಕೂಷ್ಮಾಂಡಾದೇವಿ
- ಮಹಾದೇವಿಯ ಪಂಚಮ ಸ್ವರೂಪ ಸ್ಕಂದಮಾತಾ
- ದಾನವ ಘಾತಿನಿ ಜಗದಂಬೆಯ ಆರನೇ ಸ್ವರೂಪವೇ ‘ಕಾತ್ಯಾಯಿನಿ’
- ಭಗವತಿ ಭವಾನಿಯ ಸಪ್ತಮ ಸ್ವರೂಪವೇ ಭಯಂಕರ ‘ಕಾಲರಾತ್ರಿ’
- ದೇವಿಯ ಎಂಟನೇ ಸ್ವರೂಪವೇ ಅಪೂರ್ವ ಲತಾಂಗಿ ‘ಮಹಾಗೌರಿ’
- ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ – ಯಡ್ರಾಮಿ ಜಿಲ್ಲಾ, ಕಲ್ಬುರ್ಗಿ.
