‘ನೆಹರು ನಡಿಗೆ’ ಪುಸ್ತಕದ ಮುನ್ನಡಿ ಬರಹ – ಬಿ ಕೆ ಹರಿಪ್ರಸಾದ್

“ನೆಹರು ನಡಿಗೆ” ಹೊತ್ತಿಗೆಯಲ್ಲಿ ಕುವೆಂಪು , ಸರ್ಧಾರ್ ವಲ್ಲಬಾಯಿ ಪಟೇಲ್, ನಾ ಸು ಹರ್ಡಿಕರ್, ಅಟಲ್‌ಬಿಹಾರಿ ವಾಜಪೇಯಿ ಸೇರಿದಂತೆ ಸಮಕಾಲೀನ ಚಿಂತಕರು ನೆಹರು ಅವರ ವ್ಯಕ್ತಿತ್ವ, ದೃಷ್ಟಿಕೋನ ಹಾಗು ಭಾರತಕ್ಕೆ ಅವರ ಕೊಡುಗೆ ಕುರಿತು ಬರೆದಿದ್ದಾರೆ. ವಿಧಾನ ಪರಿಷತ್‌ ವಿಪಕ್ಷ ನಾಯಕರಾದ ಬಿ ಕೆ ಹರಿಪ್ರಸಾದ್ ಅವರು ಬರೆದಿರುವ ಮುನ್ನುಡಿಯನ್ನು ತಪ್ಪದೆ ಮುಂದೆ ಓದಿ…

ಪುಸ್ತಕ: ನೆಹರು ನಡಿಗೆ
ಸಂಪಾದಕರು : ಸತೀಶ್ ನಾಯಕ್, ಮುರಳಿ ಮೋಹನ್ ಕಾಟಿ
ಪ್ರಕಾಶನ : ಕೌದಿ ಪ್ರಕಾಶನ
ಬೆಲೆ : ೧೭೦ .೦೦
ಖರೀದಿಸಲು – ೯೦೦೮೬೬೦೩೭೧

ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧಿ ಇಲ್ಲದ ವಿಮೋಚನಾ ಚಳುವಳಿಯ ಭಾರತವನ್ನ ಹಾಗೂ ನೆಹರೂ ಇಲ್ಲದ ಸ್ವಾತಂತ್ರ್ಯ ನಂತರದ ನವ ಭಾರತ ನಿರ್ಮಾಣವನ್ನ ಊಹಿಸಲಸಾಧ್ಯ. ಈ ಇಬ್ಬರೂ ವ್ಯಕ್ತಿತ್ವಗಳಲ್ಲಿ ಒಂದು ಭದ್ರ ಬುನಾದಿಯಾದರೇ ಇನ್ನೊಂದು ಮೌಲ್ಯಭರಿತ ಉತ್ತುಂಗದ ಶಿಖರ.

ಪಂಚ ವಾರ್ಷಿಕ ಯೋಜನೆಗಳ ಅಭಿವೃದ್ದಿಯ ಮುನ್ನೊಟ ಮತ್ತು ಪುರೋಗಾಮಿ‌ ಚಿಂತನೆಯ ಮೂಲಕ ಸ್ವಾತಂತ್ರ್ಯೋತ್ತರ ಭಾರತವನ್ನು ಕಟ್ಟಿ, ಜಾತ್ಯತೀತತೆಯ ಭದ್ರ‌ ಬುನಾದಿ ಹಾಕಿದ ನೆಹರೂ ಅವರ ಶ್ರಮ ಅಳತೆಗೆ ದಕ್ಕುವುದಿಲ್ಲ. ದೃಷ್ಟಾರ ದೇಶವನ್ನ ಮುನ್ನಡೆಸಲು ಮೊದಲ ಪ್ರಧಾನಿಯಾಗಿ ನೆಹರೂ ಅವರು ಅನುಸರಿಸಿದ ಮೌಲ್ಯಗಳು ಇಂದಿಗೂ ಆದರ್ಶವೂ ಆಗಿ, ಅನುಕರಣೀಯವೂ ಆಗಿ, ಹೆಚ್ಚೆಚ್ಚು ಪ್ರಸ್ತುತವಾಗುತ್ತಿದೆ. ಅದಕ್ಕೆ ತಾಜಾ ಉದಾಹರಣೆ, ಕೇಂದ್ರದಲ್ಲಿ ಸೈದ್ದಾಂತಿಕ ವಿರೋಧಿ ಪ್ರಭುತ್ವ ಇದ್ದರೂ ಇಂದಿಗೂ ನೆಹರೂ ಅವರು ಪ್ರತಿಪಾದಿಸಿದ ವಿದೇಶಾಂಗ ನೀತಿಗಳನ್ನೇ ಅನುಸರಿಸಬೇಕಿದೆ.

ಧರ್ಮದ ಹೆಸರಿನಲ್ಲಿ ದೇಶ ಇಬ್ಭಾಗವಾಗುವಾಗ ಧರ್ಮ ನಿರಪೇಕ್ಷತೆ ಸಿದ್ದಾಂತ ಪ್ರತಿಪಾದಿಸುವುದು, ಬಡವ-ಬಲ್ಲಿದ ಎಂಬ ತರತಮದ ಉತ್ತುಂಗದಲ್ಲಿ ಸಮಾನತೆಯ ತತ್ವ ಸಾರುವುದು, ನಿರುದ್ಯೋಗ ತಾಂಡವಾಡುವಾಗ ಸರ್ಕಾರಿ ಸಂಸ್ಥೆಗಳನ್ನ ಸ್ಥಾಪಿಸುವುದು, ಜಾತ್ಯಾತೀತ, ಭ್ರಾತೃತ್ವದ ಜೊತೆ ಜೊತೆಗೆ ವೈಜ್ಞಾನಿಕ, ವೈಚಾರಿಕ ಭಾರತ ನಿರ್ಮಿಸುವ ದಿಟ್ಟತನ ತೋರುವುದು ಅಸಾಮಾನ್ಯ ಸಂಗತಿ ಮಾತ್ರವಲ್ಲ, ಕಲ್ಪನೆಗೂ ಕೂಡ ಅಸಾಧ್ಯವೆಂದರೆ ಅತಿಶಯೋಕ್ತಿಯಾಗದು.

ಸರ್ವಧರ್ಮ ಸಹಿಷ್ಣುತೆ, ಭ್ರಾತೃತ್ವ, ಸಮಾನತೆ, ಸಮಾಜವಾದ ತಳಹದಿಯ ಜೊತೆ ಜೊತೆಗೆ ಸಂವಿಧಾನದ ಮೌಲ್ಯಗಳನ್ನ ಅನುಸರಿಸಿದ ನೆಹರೂ ಅವರ ಕಾಲಘಟ್ಟ ಹೂವಿನ ಹಾಸಿಗೆಯಾಗಿರಲಿಲ್ಲ, ಅದೊಂದು ಧಗ ಧಗಿಸಬಹುದಾದ ನಿಗಿ ನಿಗಿ ಕೆಂಡವಾಗಿತ್ತು. ಆದರೂ ತಮ್ಮ ನಿಲುವುಗಳಲ್ಲಿ ಎಂದೂ ರಾಜಿಯಾಗುವ ಸಂದರ್ಭಗಳನ್ನ ಸೃಷ್ಟಿಸಿಕೊಳ್ಳಲಿಲ್ಲ. ತಮ್ಮ ಬದ್ಧತೆ, ದೂರದೃಷ್ಟಿ, ಪ್ರಖರ ಆಲೋಚನೆಗಳಿದ್ದ ಕಾರವಾಗಿಯೇ ಬಹುಶಃ ಇಂದಿಗೂ ಅವರ ವ್ಯಕ್ತಿತ್ವ ಮಾಸುತ್ತಿಲ್ಲ.

ನೆಹರೂ ಅವರನ್ನ ಹೀಯಾಳಿಸುವ, ಹೀಗಳೆಯುವ, ಅಪಮಾನಿಸುವ, ಅವಮಾನಿಸುವ ಪ್ರವೃತ್ತಿಗೆ ಪ್ರಭುತ್ವದ ಜೊತೆ ಜೊತೆ ವಿಚ್ಛಿದ್ರಕಾರಿ ಶಕ್ತಿಗಳು ಕೈ ಜೊಡಿಸುತ್ತಿರುವುದು ತೆರೆಮರೆಯಾಗಿ ಉಳಿದಿಲ್ಲ. ಇದಕ್ಕೆ ನೆಹರೂ ಎಂಬ ವ್ಯಕ್ತಿ ಕಾರಣವಲ್ಲ, ಬದಲಾಗಿ ಅವರು ಪ್ರತಿಪಾದಿಸಿದ ವ್ಯಕ್ತಿತ್ವದ ಸಿದ್ದಾಂತ. ನೆಹರೂ ಅವರ ಮೇಲೆ ದಾಳಿ ನಡೆಸುವಾಗ, ಅವರು ಅನುಸರಿಸಿದ ಮೌಲ್ಯಗಳನ್ನ ಕ್ಷೀಣಿಸುವ ಷಡ್ಯಂತ್ರದ ಭಾಗವಿದು. ಇದನ್ನ ಒಂದು ಗುಂಪು ವ್ಯವಸ್ಥಿತವಾಗಿ ನಡೆಸುತ್ತಿರುವುದು ಗುಪ್ತಿಸೂಚಿಯ ಕಾರ್ಯತಂತ್ರದ ಭಾಗ.

ಸತೀಶ್ ನಾಯಕ್

ಈ ಪುಸ್ತಕದಲ್ಲಿ ಈ ನೆಲದ ವಿಶ್ವಕವಿ ಕುವೆಂಪು ಅವರು ನೆಹರೂ ಅವರನ್ನು ಕುರಿತು ಉಚ್ಛರಿಸಿದಂತೆ ಜಾತಿ,ಮತ,ಪಂಥ, ಧರ್ಮಗಳನ್ನೂ ಮೀರಿ ಸೆಳೆಯುವಂತಹ ಪಾರದರ್ಶಕ ಪ್ರಾಮಾಣಿಕತೆಯ ಮಾತುಗಳು ನೆಹರೂ ವ್ಯಕ್ತಿತ್ವಕ್ಕೆ ಹಿಡಿದ ಕೈ ಗನ್ನಡಿ. ದೇಶದ ಮಹನೀಯರಾದ ಪಟೇಲರು, ಶಾಸ್ತ್ರಿ ಸೇರಿದಂತೆ ಅನೇಕರು ನೆಹರು ವ್ಯಕ್ತಿಯಾಗಿ ನೋಡದೆ ಅವರ ಆದರ್ಶಮಯ ಬದುಕಿನ ವ್ಯಕ್ತಿತ್ವದ ಬಗ್ಗೆ ಧಾಖಲಿಸಿರುವುದನ್ನ ಇಂದಿನ ಯುವ ಜನತೆ ಅರ್ಥೈಸಿಕೊಳ್ಳಬೇಕಿದೆ.

ನನ್ನ ನಲವತ್ತೈದು ವರ್ಷಗಳ ರಾಜಕೀಯ ಸಣ್ಣ ಅನುಭವದಲ್ಲಿ ಸೈದ್ದಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೂ ರಾಜಕೀಯ ಮೀರಿದ ಗೆಳೆತನ, ವಿಸ್ವಾಸಕ್ಕೆ ಎಂದೂ ಕುತ್ತಾಗಿದ್ದು ನಾನು ನೋಡಿಲ್ಲ. ಪ್ರಸ್ತುತ ದಿನಗಳು ತೀರಾ ವ್ಯತಿರಿಕ್ತವಾಗಿ ದ್ವೇಷ ರಾಜಕಾರಣವೇ ಬಂಡವಾಳವಾಗಿರುವಾಗ ಮಾಜಿ ಪ್ರಧಾನಿ ವಾಜಪೇಯಿ ಅವರು ನೆಹರೂ ಅವರ ಬಗ್ಗೆ ಸಂಸತ್ತಿನಲ್ಲಿ ಮಾಡಿದ ಭಾಷಣ ಈ ಕಾಲಕ್ಕೆ ಹೆಚ್ಚು ಪ್ರಸ್ತುತವಾಗುತ್ತದೆ. ಈ ಪುಸ್ತಕದಲ್ಲಿ ಅಡಕವಾಗಿರುವ ವಾಜಪೇಯಿ ಅವರ ಮಾತುಗಳು ಓದುಗರಿಗೆ ಹೆಚ್ಚು ಕಾಡಬಹುದು.

ಮುರಳಿ ಮೋಹನ್ ಕಾಟಿ

ನೆಹರೂ ಮತ್ತು ಪಟೇಲ್ ನಡುವೆ ಹಲವು ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದು ಕೂಡ ಅದನ್ನೂ ಮೀರಿದ ಹೊಂದಾಣಿಕೆ, ರಾಷ್ಟ್ರಕ್ಕಾಗಿ ನಿಸ್ವಾರ್ಥವಾಗಿ ದುಡಿಯುವ ಉದ್ದೇಶದ ಸಹಮತ ಇತ್ತು. ಪಟೇಲ್ ಅವರು ನೆಹರೂ ಬಗ್ಗೆ ಇರುವ ಸಂಬಂಧ ಎಂತದ್ದೂ ಎಂದು ಅವರ ಮಾತುಗಳಿಗೆ ಕಿವಿಯಾಗಬೇಕು‌. ವಾಟ್ಸಪ್ ಯುನಿವರ್ಸಿಟಿ “ಪಿಹೆಚ್ ಡಿ ಪಂಡಿತರ” ಬಗ್ಗೆ ಸುಧೀಂದ್ರ ಕುಲಕರ್ಣಿ ಅವರ ಲೇಖನ ಓದಿಯೇ ತೀರ್ಮಾನಕ್ಕೆ ಬರುವುದು ಒಳಿತು. ನೆಹರೂ ಅವರ ವ್ಯಕ್ತಿತ್ವವೇ ಮುಕ್ತವಾಗಿ, ಪ್ರಾಮಾಣಿಕವಾಗಿ ತೆರೆದುಕೊಳ್ಳುವಂತದ್ದು, ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅದನ್ನ ಕಟ್ಟಿಕೊಟ್ಟಿದ್ದಾರೆ. ಒಟ್ಟಾರೆಯಾಗಿ ಇಡಿಯಾಗಿ ಸಂಪಾದಿಸಿರುವ ಎಲ್ಲಾ ಲೇಖನಗಳು ಹೊಸ ದಿಕ್ಕಿನಲ್ಲಿ ಆಲೋಚಿಸುವಂತೆ ಮಾಡುವುದರಲ್ಲಿ ಸಹಕಾರಿಯಾಗಲಿದೆ.

ಕಾಲ, ದೇಶ, ವರ್ತಮಾನದ ಜೊತೆಗೆ ಮುಖಾಮುಖಿಯಾಗದ ಸಿದ್ದಾಂತ ಸವಕಲು ಆಗುತ್ತದೆ. ಹೀಗಾಗಿಯೇ ಇಂದಿಗೂ ಗಾಂಧಿ, ಅಂಬೇಡ್ಕರ್, ಲೋಹಿಯಾ ಸಿದ್ದಾಂತಗಳು ಹೆಚ್ಚು ಚರ್ಚೆಯಾಗುತ್ತಿದೆ. ಇದರ ಜೊತೆಗೆ ಇಂದು ನೆಹರು ವಾದವೂ ಹೆಚ್ಚಾಗಿ ಚರ್ಚೆಯಾಗುತ್ತಿರುವುದು ನನ್ನ ಮಟ್ಟಿಗಂತೂ ಆಶಯದ ಬೆಳವಣಿಗೆ‌. ಈ ನಿಟ್ಟಿನಲ್ಲಿ “ನೆಹರೂ ನಡಿಗೆ” ಎಂಬ ಪುಸ್ತಕವನ್ನ ಪ್ರತಿಯೊಬ್ಬರೂ ಓದಿ ಪ್ರೋತ್ಸಾಹಿಸಬೇಕಿದೆ. ಈ ಪುಸ್ತಕದಲ್ಲಿ ಅಚ್ಚಗಿರುವ ಪ್ರತಿಯೊಬ್ಬರ ಲೇಖನಗಳು ಪೂರ್ವಗ್ರಹ ಪೀಡಿತ ಮನಸ್ಥಿತಿಗಳನ್ನ ಕಳಚಿಡಲಿದೆ. ಕೆಲವರ ಕಣ್ಣಿನ ಪೊರೆಗಳನ್ನಂತೂ ಅದಾಗಿಯೇ ತೆರೆದಿಡುವುದರಲ್ಲಿ ಅನುಮಾನವೇ ಇಲ್ಲ.ವಿಶೇಷವಾಗಿ ಈ ದುರಿತ ಕಾಲದಲ್ಲಿ ನೆಹರೂ ನಡಿಗೆ ಪುಸ್ತಕವನ್ನ ಹೊರ ತಂದಿರುವ ಮುರುಳಿ ಮೋಹನ್ ಕಾಟಿ ಹಾಗೂ ಸತೀಶ್ ನಾಯಕ್ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಕೊನೆಯದಾಗಿ ನಾನೊಬ್ಬ ರಾಜಕಾರಣಿಯಾಗಿ, ಕಾಂಗ್ರೆಸ್ಸಿಗನಾಗಿ ಸ್ವೀಕರಿಸುವುದಕ್ಕಿಂತ ರಾಜಕೀಯ ವಿದ್ಯಾರ್ಥಿಯಾಗಿ ಈ ಪುಸ್ತಕವನ್ನ ಅಪ್ಪಿಕೊಂಡಿದ್ದೇನೆ, ಒಪ್ಪಿಕೊಂಡಿದ್ದೇನೆ.


  • ಬಿ ಕೆ ಹರಿಪ್ರಸಾದ್, ವಿಪಕ್ಷ ನಾಯಕರು, ವಿಧಾನ ಪರಿಷತ್.

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW