ಕ್ರಿಪ್ಟೋ ಕರೆನ್ಸಿಯ ವಿಷಯವನ್ನು ಅಡಿಪಾಯವಾಗಿಟ್ಟುಕೊಂಡು ಕನ್ನಡದಲ್ಲಿ ವಿಠಲ್ ಶೆಣೈ ಅವರು ಬರೆದ ಕಾದಂಬರಿಯೇ ʻನಿಗೂಢ ನಾಣ್ಯʼ. ಎಕನಾಮಿಕ್ಸ್ ನ್ನು ಸರಳವಾಗಿ ಹೇಳಿದ್ದಾರೆ, ಎಲ್ಲಿಯೂ ಬೋರ್ ಆಗದಂತೆ ನಾಜೂಕಾಗಿ ಓದುಗರನ್ನು ಓದಿಸಿಕೊಂಡು ಹೋಗುತ್ತದೆ…
ಕೆಲವು ವರ್ಷಗಳ ಕೆಳಗೆ, ಬೆಂಗಳೂರಿನ ಪ್ರತಿಷ್ಠಿತ ಮಾಲ್ ಒಂದರಲ್ಲಿ, ಸಮಾಜದ ಗಣ್ಯ ವ್ಯಕ್ತಿಗಳು ಎನ್ನಿಸಿಕೊಂಡವರ ಮಕ್ಕಳ ನಡೆವೆ ದೊಡ್ಡ ಹೊಡೆದಾಟ ನಡೆದುಹೋಯಿತು. ರಾಜಕಾರಣಿ ಪುತ್ರನೊಬ್ಬ, ಇನ್ನೊಬ್ಬ ರಾಜಕಾರಣಿಗಳಿಗೆ ಬೇಕಾದವರ ಮಗನಿಗೆ ಹೊಡೆದ ರೀತಿಗೆ ಬೆಂಗಳೂರೇ ತಬ್ಬಿಬ್ಬಾಗಿ ಹೋಗಿತ್ತು.
ಪೋಲಿಸರ ಹೇಳಿಕೆಯಾದ ʻಕಾಲು ತಾಗಿದ ವಿಷಯʼ ಈ ಹೊಡೆದಾಟಕ್ಕೆ ಕಾರಣ ಎನ್ನುವ ಹೇಳಿಕೆಯನ್ನು ನನ್ನೊಳಗಿದ್ದ ಮಾಜಿ #ಕ್ರೈಂ_ರಿಪೋರ್ಟರ್ ನಂಬಲಿಲ್ಲ. ರಾಜಕಾರಣಿಯೊಬ್ಬರ ತುಂಟ ಮಗನನ್ನು ನಾನು ತಮ್ಮ ಎಂದೇ ಕರೆಯುತ್ತಿದ್ದೆ. ಅವನಿಗೆ ಫೋನ್ ಮಾಡಿ, ʻಏನೋ ಇದು? ಹುಡುಗಿಯರ ಗಲಾಟೆನಾ?ʼ ಅಂತ ಕೇಳಿದೆ.
ʻಇಲ್ಲ ಅಣ್ಣ… ಹುಡುಗಿಯರಿಗೆ ತಲೆ ಕೆಡಿಸಿಕೊಳ್ಳೋ ಹುಡುಗರಲ್ಲ ಇವರು. ಬೇರೆಯದೇ ಇದೆ. ದೊಡ್ಡ ಬ್ಯುಸಿನೆಸ್ʼ ಎಂದ.
ʻಇಪ್ಪತೈದು ವರ್ಷ ದಾಟಿಲ್ಲ ಇವುಗಳಿಗೆ. ಅಪ್ಪಂದಿರು ಕೊಳೆಯುವಷ್ಟು ಮಾಡಿಟ್ಟಿದ್ದಾರೆ. ಇವರ್ಯಾವ ಬ್ಯುಸಿನೆಸ್ ಮಾಡ್ತಾರೆ ಮಾರಾಯ? ಶೋಕಿ ಮಾಡಿಕೊಂಡು ತಿರುಗ್ತಾರೆ ಅಷ್ಟೆ,ʼ ಎಂದೆ.
ʻಇಲ್ಲ ಅಣ್ಣ, ಸಿಕ್ಕಿ ಹೇಳ್ತೀನಿ. ಫೋನಲ್ಲಿ ಬೇಡ,ʼ ಎಂದ.
ಕುತೂಹಲ ತಾಳಲಾಗದೆ ಒಂದು ಘಂಟೆಯೊಳಗೆ ಅವನಿಗೆ ಸಿಕ್ಕಿದೆ. ʻಅಣ್ಣ, ಇದೆಲ್ಲ ಬಿಟ್ ಕಾಯಿನ್ ಗಾಗಿ ಆದ ಗಲಾಟೆ. ಈಗ ಹೊಡೆತ ತಿಂದನಲ್ಲ, ಅವನ ಅಪ್ಪ ಎಲ್ಲಾ ರಾಜಕಾರಣಿಗಳಿಗೆ ಬೇಕಾದವನು. ಬೆಂಗಳೂರಲ್ಲಿ ಒಬ್ಬ ʻ—ʼ ಅನ್ನೋ ಹೆಸರಿನ ಒಬ್ಬ ಹ್ಯಾಕರ್ ಇದ್ದಾನೆ. ಅವನಿಗೂ ಇವರಷ್ಟೇ ವಯಸ್ಸು. ಯಾವಾಗಲೂ ಗಾಂಜಾ ಸೇದಿಕೊಂಡು ಇರ್ತಾನೆ. ಒಂದು ಸಲ ಅವನನ್ನು ನೋಡಿದ್ದೇನೆ. ಹೆಚ್ಚಿನವರು ಅವನನ್ನು ನೋಡಿಲ್ಲ. ನೋಡಿದ್ದರೂ, ಇವನೇ ಅವನು ಅಂತ ಗೊತ್ತಿಲ್ಲ. ಅವನಿಗೆ ʻಘೋಸ್ಟ್ʼ ಅಂತ ಅಡ್ಡ ಹೆಸರಿದೆ.
ಯಾರೊಟ್ಟಿಗೂ ಮಾತನಾಡೋದಿಲ್ಲ, ಯಾರೊಟ್ಟಿಗೂ ಬೆರೆಯೋದಿಲ್ಲ. ಕೈಯಲ್ಲಿ ಮೊಬೈಲ್ ಫೋನ್ ಸಹ ಇರೋದಿಲ್ಲ. ಮಾತನಾಡುತ್ತಾ ಯಾರಾದರೂ ಫೋನ್ ಕೆಳಗಿಟ್ಟರೆ ಸಾಕು, ಅದನ್ನು ನೋಡುವಂತೆ ಎತ್ತಿಕೊಂಡು, ಒಂದು ನಿಮಿಷದಲ್ಲಿ ಹ್ಯಾಕ್ ಮಾಡಿ, ಅವನ ಕಂಟ್ರೋಲ್ ಸೆಂಟರ್ ಗೆ ಲಿಂಕ್ ಮಾಡಿಟ್ಟಿರುತ್ತಾನೆ. ಅದನ್ನೆಲ್ಲ ತಮಾಷೆಗಾಗಿ ಮಾಡ್ತಾನೆ ಹೊರತು, ಇಲ್ಲಿ ಯಾರಿಂದಲೂ ಅವನಿಗೆ ಏನೂ ಆಗಬೇಕಾಗಿಲ್ಲ.

(‘ನಿಗೂಢ ನಾಣ್ಯ’ ಕಾದಂಬರಿಯ ಲೇಖಕರಾದ ವಿಠಲ್ ಶೆಣೈ )
ಅವನು ಬಿಟ್ ಕಾಯಿನ್ ಮೈನಿಂಗ್ ಸಹ ಮಾಡ್ತಾನೆ.
ʻಘೋಸ್ಟ್ʼ ಈಗ ಹೊಡೆತ ತಿಂದ ಹುಡುಗನಿಗೆ ಬಹಳ ಕ್ಲೋಸ್. ಹಾಗಾಗಿ, ಇವನು ಬಿಟ್ ಕಾಯಿನ್ ನಲ್ಲಿ ಬಹಳಷ್ಟು ಹಣ ತೊಡಗಿಸಿದ್ದಾನೆ. ಈಗ ಹೊಡೆದನಲ್ಲ, ರಾಜಕಾರಣಿ ಮಗ, ಅವನೂ ಬಿಟ್ ಕಾಯಿನ್ ನಲ್ಲಿ ಹಣ ತೊಡಗಿಸಿಕೊಳ್ಳೋಕೆ ಓಡಾಡ್ತಾ ಇದ್ದಾನೆ, ಆದರೆ ಮೈನ್ ಮಾಡೋದು ಹೇಗೆ ಅಂತ ಗೊತ್ತಿಲ್ಲ. ಹಾಗಾಗಿ, ʻಘೋಸ್ಟ್ʼಅನ್ನು ಬಿಟ್ಟುಕೊಡು ಅಂತ ಕಾಡಿಸ್ತಿದ್ದ. ಯಾವಾಗ ಇವನು ಒಪ್ಪಲಿಲ್ಲವೋ, ನೆನ್ನೆ ರಾತ್ರಿ ಅವನಿಗೆ ಹೊಡೆದಿದ್ದಾನೆ,ʼ ಎಂದು ಹೇಳಿದ.
ʻಈ ಹುಡುಗರಿಗೇನಾಗಿದೆ ಮಾರಾಯ? ಬಿಟ್ ಕಾಯಿನ್ ಉಪಯೋಗಿಸೋದು ಡ್ರಗ್ ಡೀಲ್ ಮತ್ತೆ ಕಾರ್ಪೋರೇಟ್ ಹ್ಯಾಕಿಂಗ್ ನಲ್ಲಿ ರಾನ್ಸಮ್ ಗೋಸ್ಕರ. ಅದನ್ನ ತಗೊಂಡು ಇವರೇನು ಮಾಡ್ತಾರಂತೆ?ʼ ಎಂದು ಕೇಳಿದೆ.
ʻಇಲ್ಲ ಅಣ್ಣ. ನಿಮಗೆ ಬಿಟ್ ಕಾಯಿನ್ ಬಗ್ಗೆ ಪೂರ್ತಿ ಗೊತ್ತಿದ್ದ ಹಾಗಿಲ್ಲ. ನನಗೆ ತಿಳಿದಿರೋ ಮಟ್ಟಿಗೆ, ಅದೊಂದು ಒಳ್ಳೆ ಬಂಡವಾಳ ಹೂಡಿಕೆ. ಮುಂದೆ ಎಲ್ಲಾ ದುಡ್ಡುಗಳೂ ಬೆಲೆ ಕಳೆದುಕೊಂಡರೂ, ಬಿಟ್ ಕಾಯಿನ್ ಇರುತ್ತೆ ಅಂತ ಅನ್ನಿಸುತ್ತೆ. ವಿಚಾರಿಸಿ ನೋಡಿ,ʼ ಎಂದು ಹೇಳಿದ.
ಈ ʻತುಂಟ ಹುಡುಗʼ ಎಲ್ಲಾದರೂ ಪೂರ್ತಿ ದಾರಿ ತಪ್ಪಿದ್ದಾನಾ? ಅಂತ ಅನುಮಾನವಾಯ್ತು. ಮುಂದಿನ ದಿನಗಳಲ್ಲಿ ಬಿಟ್ ಕಾಯಿನ್ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದರೂ, ಸ್ವಲ್ಪ ಜಾಳುಜಾಳಾಗಿ ಅರ್ಥವಾಯಿತಷ್ಟೆ. ಆದರೆ, ಅದು ನಾನು ತಿಳಿದಷ್ಟು ಅನಾಹುತಕಾರಿ ಅಲ್ಲ ಅಂತ ಮಾತ್ರ ಅನ್ನಿಸಿತು.
ಹೋದ ವರ್ಷ, ಬೆಂಗಳೂರು ಪೋಲಿಸರು ಡ್ರಗ್ ಮಾಫಿಯಾ ವಿರುದ್ದ ಮುಗಿಬಿದ್ದಾಗ, ಸಿನಿಮಾ ನಟ, ನಟಿಯರ ಹೆಸರುಗಳು ಸಾಲು ಸಾಲಾಗಿ ಬಂದವು. ನನಗೆ ಡಾರ್ಕ್ ನೆಟ್ ಹೊಸ ಹೆಸರೇನಾಗಿರಲಿಲ್ಲ. ನಿಧಾನವಾಗಿ ಹೊಸ ಹೆಸರುಗಳು ಬಂಧಿತರ ಪಟ್ಟಿಗೆ ಸೇರಲಾರಂಭಿಸಿತು. ಒಂದು ಹೆಸರು ಬಂದ ತಕ್ಷಣ, ನನ್ನ ಮುಖದಲ್ಲಿ ಮುಗುಳ್ನಗು ಮೂಡಿತ್ತು. ಅವನೇ ʻಘೋಸ್ಟ್ʼ.
ʻಘೋಸ್ಟ್ʼ ಪೋಲಿಸರಿಗೆ ಯಾರು ಹಿಡಿದು ಕೊಟ್ಟಿರಬಹುದು ಎನ್ನುವ ಅರಿವು ನನಗಿತ್ತು. ನಾನು ಅವರನ್ನು ಭೇಟಿಯಾದೆ. ʻಈ ಘೋಸ್ಟ್ ಬಗ್ಗೆ ಬಹಳ ಮುಂಚಿನಿಂದಲೂ ಕಣ್ಣಿತ್ತು. ಇನ್ನೂ ನೋಡಿ, ಅವನ ಕಮ್ಯಾಂಡ್ ಸೆಂಟರ್ ಯಾವುದು ಅಂತ ಪತ್ತೆ ಹಚ್ಚೋಕೆ ಕಷ್ಟ ಆಗ್ತಿದೆ. ಎರಡು ಲ್ಯಾಪ್ ಟಾಪ್ ಇಟ್ಟುಕೊಂಡು ಇಷ್ಟೆಲ್ಲಾ ಮಾಡ್ತಾನೆ ಅಂದ್ರೆ, ಇಷ್ಟೊಂದು ಸರ್ವರ್ ಗಳನ್ನು ಇಟ್ಕೊಂಡು ನಾವೆಲ್ಲ ವೇಸ್ಟ್ ಅನ್ನಿಸುತ್ತೆ,ʼ ಎಂದರು.
ನನಗೆ ʻಘೋಸ್ಟ್ʼನ ಶಕ್ತಿ ಏನು ಎನ್ನುವುದು ಅಷ್ಟರಲ್ಲೇ ಅರ್ಥವಾಗಿತ್ತು. ನನಗೆ ಬೇಕಾಗಿದ್ದು ಬಿಟ್ ಕಾಯಿನ್ ಬಗ್ಗೆ ತಿಳುವಳಿಕೆ. ʻಇವನಿಗಾಗಿ ಏನೂ ಡಾರ್ಕ್ ನೆಟ್ ನಿಂದ ತರಿಸಿಕೊಂಡಿಲ್ಲ. ಆದರೆ, ಬಿಟ್ ಕಾಯಿನ್ ಮೂಲಕ ತರಿಸಿಕೊಂಡವರಿಗೆ, ಬಿಟ್ ಕಾಯಿನ್ ವರ್ಗಾವಣೆ ಇವನ ಮೂಲಕವೇ ಆಗಿದೆ,ʼ ಎಂದು ಹೇಳಿ, ಬಿಟ್ ಕಾಯಿನ್ ಬಗ್ಗೆ ನನಗೆ ಸವಿವರವಾಗಿ ಹೇಳಿದರು.
ಆಗಲೇ ನನಗೆ ಗೊತ್ತಾಗಿದ್ದು, ಬಿಟ್ ಕಾಯಿನ್ ಮೊದಲ ʻ#ಕ್ರಿಪ್ಟೋ_ಕರೆನ್ಸಿʼ ಮತ್ತು ಅದರ ನಂತರ ಬೇರೆ ಕೆಲವರು ಸಹ ಇಂತಹ ಕ್ರಿಪ್ಟೋ ಕರೆನ್ಸಿಗಳನ್ನು ಮಾಡುತ್ತಿದ್ದಾರೆ ಅಂತ. ಆದರೆ, ನಂಬಿಕಾರ್ಹತೆಯಲ್ಲಿ ಮೊದಲ ಸ್ಥಾನ ಇನ್ನೂ ಬಿಟ್ ಕಾಯಿನ್ ಉಳಿಸಿಕೊಂಡಿದೆ ಅಂತ. ಆಗಲೇ ನನಗೆ ಬ್ಲಾಕ್ ಚೈನ್ ಮತ್ತು ಸೈಡ್ ಚೈನ್ ಗಳ ಬಗ್ಗೆ ತಿಳುವಳಿಗೆ ಮೂಡಿದ್ದು ಕೂಡ. ಅಲ್ಲಿಂದಾಚೆ ನನಗೆ ಈ ಕ್ರಿಪ್ಟೋ ಕರೆನ್ಸಿ ನೆನಪಾಗಿದ್ದು ಕೇಂದ್ರ ವಿತ್ತೀಯ ಮಂತ್ರಿ ನಿರ್ಮಲಾ ಸೀತಾರಾಂ ಬಜೆಟ್ ಬಗ್ಗೆ ಚರ್ಚೆಯಲ್ಲಿ ಒಂದು ವಾಕ್ಯ ಹೇಳಿದಾಗ. ʻಭಾರತ ಸರ್ಕಾರ ಇನ್ನೂ ಕ್ರಿಪ್ಟೋ ಕರೆನ್ಸಿಯ ವ್ಯವಹಾರವನ್ನು ಮಾನ್ಯ ಮಾಡಿಲ್ಲ. ಆದರೆ, ಅದರ ಬಗ್ಗೆ ಚಿಂತನೆ ನಡೆಸಿದೆ,ʼ ಎಂದಾಗ. ಈ ಮಾನ್ಯ ಮಾಡಿಲ್ಲ ಮತ್ತು ನಿಷೇಧದ ನಡುವೆ ಬಹಳ ದೊಡ್ಡ ಅಂತರವಿದೆ. ಅದು ಸಾಧಾರಣವಾಗಿ ಪೋಲಿಸರಿಗೆ ಅರ್ಥವಾಗುವುದಿಲ್ಲ.
ಕಳೆದೊಂದು ತಿಂಗಳಿಂದ ಸಾಮಾಜಿಕ ತಾಣಕ್ಕೆ ಬೆಂಕಿ ಹಚ್ಚಿರುವ ʻಕ್ಲಬ್ ಹೌಸ್ʼ ಗೆ ನಾನೂ ಕುತೂಹಲದಿಂದ ಇಣುಕಿ ನೋಡುವಾಗ, ಯಾವುದೋ ಒಂದು ಕೋಣೆಯಲ್ಲಿ ʻಕ್ರಿಪ್ಟೋ ಕರೆನ್ಸಿʼ ಬಗ್ಗೆ ರಾಷ್ಟ್ರ ಮಟ್ಟದ ಚರ್ಚೆ ನಡೆಯುತ್ತಿತ್ತು. ನಾನೂ ಕುತೂಹಲದಿಂದ ಒಳಹೊಕ್ಕು ಕುಳಿತೆ. ಹನ್ನೆರೆಡು ಜನ ಮಾತನಾಡುತ್ತಿದ್ದರೆ, ನಾನೊಬ್ಬನೇ ಪ್ರೇಕ್ಷಕ. ನನ್ನನ್ನೂ ಮಾತನಾಡಲು ಆಹ್ವಾನಿಸಿದರೂ, ನಾನು ನಯವಾಗಿಯೇ ನಿರಾಕರಿಸಿ, ಕೇಳುತ್ತಾ ಕುಳಿತೆ. ಹನ್ನೆರೆಡು ಜನರೂ ಕ್ರಿಪ್ಟೋ ಕರೆನ್ಸಿ ಮತ್ತು ದೇಶದ ಅರ್ಥ ವ್ಯವಸ್ಥೆಯನ್ನು ಅರೆದು ಕುಡಿದಂತಿತ್ತು. ಆ ಒಂದು ಘಂಟೆ, ನನಗೆ ಕ್ರಿಪ್ಟೋ ಕರೆನ್ಸಿ ಬಗ್ಗೆ ಬಹಳಷ್ಟು ಮಾಹಿತಿ ಸಿಕ್ಕಿತು.

ಎರಡು ದಿನ ಕಳೆದು ಮೈಲ್ಯಾಂಗ್ ಪಬ್ಲಿಕೇಶನ್ ಮುಖ್ಯಸ್ಥ Vasant Shetty ಅವರು ಅದೇ ವಿಷಯದಲ್ಲಿ ಕನ್ನಡದಲ್ಲಿ ಒಂದು ಮಾತುಕತೆಯನ್ನು ಕ್ಲಬ್ ಹೌಸಿನಲ್ಲಿ ಏರ್ಪಡಿಸಿದಾಗ, ನನಗಂತೂ ಆಶ್ಚರ್ಯವಾಯಿತು. ಕುತೂಹಲದಿಂದ ಹೋಗಿ ಕುಳಿತಾಗ ಇನ್ನೂ ಆಶ್ಚರ್ಯವಾಯಿತು. ಹೋದ ವರ್ಷ ಮೇ ತಿಂಗಳಲ್ಲಿ, ವಿಠಲ್ ಶಣೈ ಎನ್ನುವವರು ಕ್ರಿಪ್ಟೋ ಕರೆನ್ಸಿಯ ವಿಷಯವಾಗಿ ಕನ್ನಡದಲ್ಲಿ ʻನಿಗೂಢ ನಾಣ್ಯʼ ಎನ್ನುವ ಕಾದಂಬರಿ ಬರೆದಿದ್ದಾರೆ ಎನ್ನುವುದನ್ನು ತಿಳಿದು. ನನ್ನ ಗಮನಕ್ಕೆ ಬಂದಿರಲಿಲ್ಲ ಅಷ್ಟೇ. ಮಾತುಕತೆಯಲ್ಲಿ ಭಾಗವಹಿಸಿದ ನಾನು, ಮೈಲ್ಯಾಂಗ್ ನಿಂದ ಪುಸ್ತಕವನ್ನು ತಕ್ಷಣವೇ ಡೌನ್ಲೋಡ್ ಮಾಡಿಕೊಂಡು, ಮಾರನೇ ದಿನವೇ ಓದಿ ಮುಗಿಸಿದೆ.
ಪುಸ್ತಕ ನನ್ನನ್ನು ಇನ್ನಷ್ಟು ಆಶ್ಚರ್ಯಕ್ಕೀಡು ಮಾಡಿತು. ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿದ್ದ ನನಗೆ, ಅರ್ಥಶಾಸ್ತ್ರವನ್ನು ಕನ್ನಡದಲ್ಲಿ ಇಷ್ಟು ಸರಳವಾಗಿ ಹೇಳಬಹುದು ಎಂದು ತಿಳಿಸಿಕೊಟ್ಟಿದ್ದೇ ಎಂಜಿನೀಯರ್ ಆಗಿರುವ ಶಣೈ ಅವರು. ಅಲ್ಲಿಯವರೆಗೆ ನನಗೆ ಗೊತ್ತಿರಲಿಲ್ಲ. ಎರಡನೆಯದಾಗಿ, ಬ್ಯಾಂಕಿಂಗ್ ವ್ಯವಸ್ಥೆಯ ಎಷ್ಟೋ ವಿಷಯಗಳ ವಿರೋಧಿಯಾಗಿದ್ದ ನನಗೆ, ಶಣೈ ಅವರ ಈ ಪುಸ್ತಕ ಇನ್ನಷ್ಟು ಸರಕುಗಳನ್ನು ಒದಗಿಸಿದ್ದು.
ನಾನು ಪುಸ್ತಕದ ಕಥೆಯನ್ನು ಇಲ್ಲಿ ವಿಶ್ಲೇಷಿಸಲು ಹೋಗುವುದಿಲ್ಲ. ಈ ಪುಸ್ತಕದಲ್ಲಿ ಪ್ರಪಂಚದ ಅರ್ಥವ್ಯವಸ್ಥೆಯ ವಿಕಾಸದ ಬಗ್ಗೆ ಇದೆ, ಬ್ಯಾಂಕಿಂಗ್ ಮತ್ತು ರಾಜಕೀಯದ ಅವ್ಯವಸ್ಥೆ ಮತ್ತು ನಾವು ಉಪಯೋಗಿಸುತ್ತಿರುವ ದುಡ್ಡು ಯಾವ ಕಾಲಮಾನದ್ದು ಎನ್ನುವುದನ್ನು ಸ್ವಾರಸ್ಯವಾಗಿಯೇ ವರ್ಣಿಸುತ್ತಾ, ಕ್ರಿಪ್ಟೋ ಕರೆನ್ಸಿ ಎನ್ನುವ ನಿಗೂಢ ನಾಣ್ಯದ ಸಾಧಕಗಳ ಬಗ್ಗೆ ಬಹಳಷ್ಟು ಬೆಳಕು ಚೆಲ್ಲಿದ್ದಾರೆ. ಆದರೆ, ಭಾಧಕಗಳನ್ನು ಹಾಗೆಯೇ ಮುಟ್ಟಿ, ಮುಂದಕ್ಕೆ ಹೋಗಿದ್ದಾರೆ.
ಇವಿಷ್ಟನ್ನೂ ಹೇಳಲು ಶಣೈ ಅವರು ಉಪಯೋಗಿಸಿರುವ ಸರಳ ಕನ್ನಡ ನನಗೆ ಬಹಳ ಇಷ್ಟವಾಯಿತು. ಎರಡನೆಯದಾಗಿ, ಇದೊಂದು ಕಥೆಯಂತೆ ಸಾಗುತ್ತದೆಯೇ ಹೊರತು, ʻಬೋರಿಂಗ್ ಎಕನಾಮಿಕ್ಸ್ ಲೆಕ್ಚರ್ʼ ತರ ಅಲ್ಲ. ಇಲ್ಲೊಬ್ಬ ರಿಯಲ್ ಎಸ್ಟೇಟ್ ಉದ್ಯಮಿ ಇದ್ದಾನೆ, ತೆರಿಗೆ ಅಧಿಕಾರಿಣಿ ಮತ್ತು ರಿಸರ್ವ್ ಬ್ಯಾಂಕ್ ಅಧಿಕಾರಿಯ ಪ್ರೇಮ ಕಥೆ ಇದೆ. ಪೋಲಿಸರಿದ್ದಾರೆ ಮತ್ತು ಜೀವನದಲ್ಲಿ ಮಹತ್ವಾಕಾಂಕ್ಷೆ ಹೊಂದಿರುವ, ಅಮೆರಿಕನ್ ರಿಟರ್ನ್ಡ್ ಯುವಕನಿದ್ದಾನೆ. ಕಥಾ ಹಂದರವೂ ಅಷ್ಟೇ ಸರಳವಾಗಿ, ಸುಂದರವಾಗಿ ಮೂಡಿದೆ.
ಕ್ರಿಪ್ಟೋ ಕರೆನ್ಸಿ ಬಗ್ಗೆ ಬಹಳಷ್ಟು ಜ್ಞಾನ ವಿತರಿಸಿದ ನಂತರ, ಪುಸ್ತಕದ ಕೊನೆಯಲ್ಲಿ, ಇನ್ನೂ ಹೆಚ್ಚಿನ ಮಾಹಿತಿ ಎಲ್ಲಿ ಸಿಗಬಹುದು ಎನ್ನುವುದರ ಲಿಂಕ್ ಗಳನ್ನೂ ಕೊಟ್ಟಿದ್ದಾರೆ. ಈ ಪುಸ್ತಕ, ನೂರೆಂಟು ಕನಸುಗಳನ್ನು ಹೊತ್ತು ಮುಂದೆ ಸಾಗುತ್ತಿರುವ ಯುವ ಜನಾಂಗಕ್ಕೆ ಮುಟ್ಟಿಸುವುದು ಬಹಳ ಮುಖ್ಯ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.
- ಮಾಕೋನಹಳ್ಳಿ ವಿನಯ್ ಮಾಧವ್
