ಜೀವನದಲ್ಲಿ ಸುಖ, ದುಃಖ ನಾಣ್ಯದ ಎರಡು ಮುಖವಿದ್ದಂತೆ, ಅದನ್ನು ಸರಿಯಾಗಿ ಅರಿತು ನಡೆದರೆ ಜೀವನ ಸುಂದರವಾಗಿರುತ್ತದೆ ಎಂದು ಜೀವನದ ಸಾರವನ್ನು ಲೇಖಕರಾದ ರೂಪೇಶ್ ಪುತ್ತೂರು ಓದುಗರಿಗೆ ತಿಳಿಸಿದ್ದಾರೆ…ಮುಂದೆ ಓದಿ…
ಒಂದು #ರೋಜಾ_ಹೂವು ಬೆಳಿಗ್ಗೆ ಮೊಗ್ಗಾಗಿರುತ್ತದೆ. ಮತ್ತೆ ಅರಳುತ್ತಾ ಹೋಗುತ್ತದೆ…. ಅರಳಿದಾಗ ಜೊತೆಗಿದ್ದ ಎಸೆಳುಗಳು ದೂರವಾಗುತ್ತಾ ಹೋಗುತ್ತದೆ. ಮೊಗಿನ ತೊಟ್ಟು (ತಳ) ಆ ಎಸೆಳುಗಳು ಒಂದೊಂದಾಗಿ ದೂರವಾಗಲು ಆಸ್ಪದ ಕೊಡುತ್ತದೆ. ಅದರಿಂದ ಹೂ ಅರಳುತ್ತಾ ಹೋಗಿ ಪ್ರಕೃತಿಯಲ್ಲಿ ತನ್ನ ಸಂಪೂರ್ಣ ಸೌಂದರ್ಯ ತೋರುತ್ತದೆ.
ಆದರೆ ಕೆಲ ಸಮಯದ ನಂತರ, ಸಂಜೆಯ ಹೊತ್ತಿಗೆ, ಆ ತೊಟ್ಟಿಗೆ ದೂರವಾಗುತ್ತಿರುವ ಎಸಳುಗಳನ್ನು ಜೊತೆಗೂಡಿಸಲು ಅಸಾಧ್ಯವಾಗಿ, ನಿಯಂತ್ರಣಾತೀತವಾಗುತ್ತದೆ. ಎಸಳುಗಳಿಗೂ ಮತ್ತೊಮ್ಮೆ ಆ ತೊಟ್ಟಿನೊಳಗೆ ಭದ್ರವಾಗಿ ಮಗದೊಮ್ಮೆ ಒಂದುಗೂಡಿ ಸೇರಿ ಮೊಗ್ಗಾಗಬೇಕೆಂಬ ಮೋಹ ಇದ್ದರೂ….. ಉದುರಿ ಭೂಮಿಯ ಮೇಲೆ ಬೀಳುತ್ತದೆ. ಬೇರಿರುವ ಗಿಡ, ಸಬಲ ಕಾಂಡ- ಗೆಲ್ಲು,ತೊಟ್ಟು ಎಲ್ಲವೂ ಅಸಹಾಯಕತೆಯಿಂದ ಕೈಚೆಲ್ಲಿ ನೋಡಿ ನಿಲ್ಲುತ್ತದೆ.
ಮನುಷ್ಯ ಜೀವನವೂ ಅಷ್ಟೇ, ಆದಿಯಿಂದ ಅಂತ್ಯದವರೆಗೆ ಕಳೆದುಕೊಳ್ಳುವುದು ಮಾತ್ರ.
ನಮ್ಮ ಪೂರ್ವಜ/ಅಜ್ಜಾ ,ಅಜ್ಜಿ ಎಂಬ ಬೇರುಗಳು, ರಕ್ತಸಂಬಂಧಗಳೆಂಬ ಕಾಂಡ-ಗೆಲ್ಲುಗಳು-, ತಂದೆ ತಾಯಿ ಎಂಬ ತೊಟ್ಟುಗಳು, ವಯಸ್ಸೆಂಬ ಎಸಳುಗಳು….. ಕೊನೆಗೆ ನಮ್ಮನ್ನು ನಾವು ಎಂದು ಕರೆಯುವ ದೇಹವನ್ನೂ ಇಲ್ಲಿ ಬಿಟ್ಟು ಹೋಗಬೇಕು.
ಈ ಕಳೆದು ಕೊಳ್ಳುವುದರಲ್ಲಿ,
ನಮ್ಮ ಕಾಯಕವನ್ನು ಆತ್ಮಸಾಕ್ಷಿಯಾಗಿ ಮಾಡುವುದರಲ್ಲಿ ಹಾಗೂ ನಮ್ಮ ಸೀಮಿತ ಇತಿ- ಮಿತಿಯೊಳಗೆ ಮಾಡುವ ಉಪಕಾರ/ ಪರೋಪಕಾರಗಳೇ —
ನಾವು ಮನಃಶಾಂತಿಗೆ ಪಡೆಯುವ ಸ್ವತ್ತುಗಳು.
ಅದೇ ನಮ್ಮ ಜೀವನದ ಲಾಭ.
ಆದ್ದರಿಂದ ….
#ಸುಖ – ಎಂಬುವುದು ತುಂಬಾ ಸಂತೋಷದ ತೃಪ್ತಿಯನ್ನೇನೂ ಕೊಡುವುದಿಲ್ಲ.
#ದುಃಖ – ಎಂಬುವುದು ತುಂಬಾ ಕಷ್ಟದ ಅತೃಪ್ತಿಯನ್ನೇನೂ ಕೊಡುವುದಿಲ್ಲ.
ಇವೆರಡನ್ನೂ ಅರಿತರೆ, ಜೀವನ ನಮಗೇನೂ ನಷ್ಟ ಕೊಡುವುದಿಲ್ಲ ಎಂದು ಗೊತ್ತಾಗುತ್ತದೆ.
ನಿಮ್ಮವ ನಲ್ಲ
ರೂಪು
- ಪ್ರೊ. ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಬೆಂಗಳೂರು)
