ಜಗತ್ತಿನ ಸಾಹಿತ್ಯದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದವರಲ್ಲಿ ಲಿಯೋ ಟಾಲ್‍ಸ್ಟಾಯ್, ಫ್ಯೋಡಾರ್ ದೊಸ್ತೋವಸ್ಕಿ ಮತ್ತು ಲಿಯೋ ಟಾಲ್‍ಸ್ಟಾಯ್ ಕುರಿತು ಲೇಖಕ ಹಾಗೂ ವಿಜ್ಞಾನಿ ಪ್ರಸನ್ನ ಸಂತೇಕಡೂರು ಅವರು ಬರೆದ ಕಿರುಲೇಖನ , ಮುಂದೆ ಓದಿ ….
ಜಗತ್ತಿನ ಸಾಹಿತ್ಯದಲ್ಲಿ ಮುಖ್ಯವಾಗಿ ಕೇಳಿಬರುವ ಮಹಾ ಲೇಖಕರುಗಳ ಹೆಸರಲ್ಲಿ ರಷ್ಯಾದ ಲಿಯೋ ಟಾಲ್‍ಸ್ಟಾಯ್ ಮತ್ತು ಫ್ಯೋಡಾರ್ ದೊಸ್ತೋವಸ್ಕಿಯ ಹೆಸರುಗಳನ್ನು ನಾವು ಆಗಾಗ ಕೇಳುತ್ತಿರುತ್ತೇವೆ.

ಲಿಯೋ ಟಾಲ್‍ಸ್ಟಾಯ್ (ಫೋಟೋ ಕೃಪೆ : thoughtco)
ಮೇರು ಲೇಖಕ ಟಾಲ್‍ಸ್ಟಾಯ್ ಭಾರತದಲ್ಲಿ ನಮ್ಮವನೇ ಆಗಿಬಿಟ್ಟಿದ್ದಾನೆ. ಸ್ವತಃ ಯುದ್ಧಭೂಮಿಯಲ್ಲಿ ಯೋಧನಾಗಿದ್ದ ಟಾಲ್‍ಸ್ಟಾಯ್ ಯುದ್ಧದ ಭೀಕರತೆಯ ಕುರಿತು “ವಾರ್ ಅಂಡ್ ಪೀಸ್ (ಯುದ್ಧ ಮತ್ತು ಶಾಂತಿ)” ಎಂಬ ಮಹಾ ಕಾದಂಬರಿ ಬರೆದು ಜಗತ್ತಿಗೆ ಶಾಂತಿಯ ಸಂದೇಶ ಸಾರಿದ. ಜಗತ್ತಿನ ರಾಜಕೀಯದಲ್ಲಿ ಸಮಾಜವಾದ ಎಂಬ ಹೊಸ ಚಳುವಳಿಗೆ ಮುನ್ನುಡಿ ಬರೆದ.

ಫ್ಯೋಡಾರ್ ದೊಸ್ತೋವಸ್ಕಿ (ಫೋಟೋ ಕೃಪೆ : thoughtco)
ಟಾಲ್‍ಸ್ಟಾಯ್ ಮನುಷ್ಯನಿಂದ ಬಾಹ್ಯ ಜಗತ್ತಿನಲ್ಲಿ ನಡೆಯುವ ಯುದ್ಧದ ಬಗ್ಗೆ ಬರೆದರೆ ದೊಸ್ತೋವಸ್ಕಿ ಮನುಷ್ಯನ ಅಂತರಂಗದಲ್ಲಿ ಮನೋಲೋಕದಲ್ಲಿ ಸದಾ ನಡೆಯುವ ಯುದ್ಧದ ಬಗ್ಗೆ ಬರೆದ. ಈ ದೊಸ್ತೋವಸ್ಕಿಗೆ ಸ್ಪೂರ್ತಿಯಾಗಿದ್ದ ಇನ್ನೊಬ್ಬ ಮಹಾಲೇಖಕ, ಆಗಿನ ರಷ್ಯಾದ ಈಗಿನ ಉಕ್ರೇನಿನ ನಿಕೋಲೈ ಗೊಗೊಲ್ (Nikolai Gogol).
ಈ ನಿಕೋಲೈ ಗೊಗೊಲ್ ಕೂಡ ಜಗತ್ತಿನ ಸಾಹಿತ್ಯದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾನೆ. ಈ ಗೊಗೊಲ್ ಬರೆದ “The Overcoat”, “The Nose”, ಕತೆಗಳು ಮತ್ತು ಅವನ ಪ್ರಖ್ಯಾತ “ಡೆಡ್ ಸೋಲ್ಸ್(dead souls)” ಅಥವಾ “ಸತ್ತ ಆತ್ಮಗಳು” ಎಂಬ ಕಾದಂಬರಿ ಭಾರತಲ್ಲೂ ತುಂಬಾ ಪ್ರಖ್ಯಾತವಾಗಿವೆ. ಈ “ಸತ್ತ ಆತ್ಮಗಳು” ಎಂಬ ಕಾದಂಬರಿಯನ್ನು ಗೊಗೊಲ್ ಬರೆದ ಉದ್ದೇಶ ಫ್ರೆಂಚರ ನೆಪೋಲಿಯನ್ ರಷ್ಯಾದ ಮೇಲೆ ದಾಳಿ ಮಾಡಿದ ನಂತರ ಸತ್ತಂತೆ ಜಡತ್ವಗೊಂಡ ರಷ್ಯಾದ ಸಮಾಜವನ್ನು ವಿಡಂಬನೆ ಮೂಲಕ ಟೀಕಿಸುವದಕ್ಕೋಸ್ಕರ ಎಂದು ಹೇಳಬಹುದು.

ಫೋಟೋ ಕೃಪೆ : Alamy
ಈಗ ನಿಕೋಲೈ ಗೊಗೊಲ್ ಸತ್ತು ನೂರಾ ಎಪ್ಪತ್ತು ವರ್ಷಗಳಾಗಿವೆ. ಇದೆ ರಷ್ಯಾದ ರಾಜಧಾನಿ ಮಾಸ್ಕೋದ ನೋವೊಡೆವಿಚ್ಯ್ ಸ್ಮಶಾಣದಿಂದ (Novodevichy Cemetery) ನಿಕೋಲೈ ಗೊಗೊಲ್ ನ ಆತ್ಮ ತನ್ನದೇ “ದಿ ಓವರ್ ಕೋಟ್” ಕತೆಯಲ್ಲಿ ಬರುವ Akaky Akakievich Bashmachkin ಆತ್ಮ ಹಾಗೆ ಎದ್ದು ಬಂದು ತನ್ನ ತಾಯಿನಾಡು ಉಕ್ರೇನನ್ನು ತನ್ನದೇ ಮತ್ತೇ ಸತ್ತಂತೆ ಜಡತ್ವಗೊಂಡಿರುವ ರಷ್ಯಾ ನಾಶ ಮಾಡುವುದನ್ನು ನೋಡಿ ಅಳುತ್ತಾ ತಿರುಗುತಿರಬಹುದು.
- ಪ್ರಸನ್ನ ಸಂತೇಕಡೂರು (ವಿಜ್ಞಾನಿಯಾಗಿ ಮ್ಯಾಸ್ಸಿ ಕ್ಯಾನ್ಸರ್ ಸೆಂಟರಿನಿಂದ ಎಕ್ಸೆಲೆನ್ಸ್ ಇನ್ ಕ್ಯಾನ್ಸರ್ ರಿಸರ್ಚ್ ಅವಾರ್ಡ್ ಪಡೆದಿದ್ದಾರೆ, ಸಾಹಿತಿಯಾಗಿ ವಿಜಯ ಕರ್ನಾಟಕ ಪತ್ರಿಕೆಯ 2021ನೇ ಅವ್ವ ಪ್ರಶಸ್ತಿ ಪುರಸ್ಕೃತರು ಆಗಿದ್ದಾರೆ)
