ಭಕ್ತಿಗೀತೆ, ಭಾವಗೀತೆ, ಜನಪದಗೀತೆಗಳನ್ನ ಕೇಳಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯನ್ನು ತನ್ನತ್ತ ಸೆಳೆಯುತ್ತಿರುವ ರಾಪ್ ಸಂಗೀತವು ನಮ್ಮಂತಹ ಗೃಹಿಣಿಯರಿಗೆ ಹೊಸದೇ ಇರಬಹುದು. ಆದರೆ ರಾಪ್ ಎನ್ನುವ ಮಾಯಾ ಸಂಗೀತವನ್ನು ತಿಳಿದುಕೊಳ್ಳಬೇಕೆನ್ನುವ ಹಂಬಲ ನನ್ನಲ್ಲೂ ಮೂಡಿದ್ದು ಸಹಜ. ಅದಕ್ಕಾಗಿ ಕನ್ನಡದಲ್ಲಿ ರಾಪ್ ಹುಚ್ಚು ಹಿಡಿಸಿದ ಚಂದನ್ ಶೆಟ್ಟಿಯವರ ಹಾಡನ್ನು ಅರಸುತ್ತಾ ಹೋದೆ. ಆಗ ನನಗೆ ಸಿಕ್ಕಿದ್ದು ಚಂದನವರೇ ಬರೆದು, ಹಾಡಿದ ‘ಮೂರೇ… ಮೂರೂ… ಪೆಗ್ಗಿಗೆ…. ‘ ಪಾರ್ಟಿ ಹಾಡು. ಈ ಹಾಡಿಗೆ ಒಂದು ಕೋಟಿ ಜನರ ಲೈಕ್ಸ್ ಸಿಕ್ಕಿದೆ. ಸಮಾಜದ ಮಡಿವಂಥಕೆಯ ಹೆಣ್ಣುಮಗಳಾಗಿ ನಾನು ಸಹ ಅವರ ಹಾಡಿಗೆ ಲೈಕ್ಸ್ ಕೊಟ್ಟಿದ್ದೇನೆ.
ಚಂದನವರು ‘ಬಿಗ ಬಾಸ್ ರಿಯಾಲಿಟಿ ಶೋ’ ಬರುವ ಮೊದಲು ತಮ್ಮದೇ ನಿರ್ದಿಷ್ಟ ಫ್ಯಾನಗಳಿಗೆ ಮಾತ್ರ ಸೀಮಿತವಾಗಿದ್ದರು. ಆದರೆ ಸಾಮಾನ್ಯ ಜನರಿಗೆ ಇವರ ಬಗ್ಗೆ ಅಷ್ಟಾಗಿ ಏನೂ ತಿಳಿದಿರಲಿಲ್ಲ. ಬಿಗ ಬಾಸ್ ಒಂದೊಂದು ಸಂಚಿಕೆ ಕಳೆಯುತ್ತಿದ್ದಂತೆ ಚಂದನವರ ಬಗ್ಗೆ ಕುತೂಹಲ ಹೆಚ್ಚುತ್ತಾ ಹೋಯಿತು. ಹೆಚ್ಚಿನ ಸಿನಿಮಾಗಳಲ್ಲಿ ಹಾಡಿದ್ದಾರೆ ಎನ್ನುವ ಸತ್ಯವಂಶ ತಿಳಿಯಿತು. ಅವರ ಹಾಡಿಗೆ ಸಂಭಾವನೆ ಸಿಕ್ಕಿದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ಅವರು ಸಿನಿಮಾಗಳಿಗೆ ಹಾಡಿದ ಹಾಡು ಮಾತ್ರ ಒಂದರ ಮೇಲೊಂದರಂತೆ ಸೂಪರ ಹಿಟ್ ಆಗಿವೆ. ಬಿಗ್ ಬಾಸ್ ರಿಯಾಲಿಟಿ ಶೋ ನಂತಹ ದೊಡ್ಡವೇದಿಕೆಯಲ್ಲಿ ಸಾಮಾನ್ಯ ವ್ಯಕ್ತಿಯಂತೆ ಕಾಣುವ ಈ ಚಂದನ ಶೆಟ್ಟಿ ಯಾವುದೇ ಸೆಲೆಬ್ರೆಟಿ ಪಟ್ಟವಿಲ್ಲದೆ ತಮ್ಮ ಸಹಜ ಸ್ವಭಾವದಿಂದ ಎಲ್ಲರ ಮನಗೆದಿದ್ದಾರೆ.
ಬಿಗ್ ಬಾಸ್ ಸ್ಪರ್ಧಿಯಾದ ಸಂಯುಕ್ತಾ ಹೆಗ್ಡೆಯವರು ತಮ್ಮ ಇನ್ನೊಬ್ಬ ಸ್ಪರ್ಧಿ ಸಮೀರ ಆಚಾರ್ಯರ ಮೇಲೆ ಹಲ್ಲೆ ನಡೆಸಿದ ಸಂದರ್ಭದಲ್ಲಿ, ಸೆಲೆಬ್ರೆಟಿ ಎನ್ನಿಸಿಕೊಂಡ ಕೆಲವರು ಸಂಭಂದವಿಲ್ಲದಂತೆ ದೂರವಿದ್ದರು. ಆದರೆ ‘ಕಾಮನ್ ಮ್ಯಾನ್’ ನಲ್ಲಿ ಒಬ್ಬರಾದ ದಿವಾಕರ ಹಾಗೂ ಚಂದನವರು ಸಮೀರ ಆಚಾರ್ಯ ಪರವಾಗಿ ಧನಿ ಎತ್ತಿದ್ದು ಅವರ ಮೇಲಿದ್ದ ಗೌರವ ಇಮ್ಮಡಿಗೊಳಿಸಿತು.
ಸಂದರ್ಭಗಳಿಗೆ ತಕ್ಕಂತೆ ಹಾಡು ರಚಿಸಿ, ಅದಕ್ಕೆ ಸೂಕ್ತ ರಾಗ ಹಾಕಿ ನೋಡುಗರಿಗೆ ಖುಷಿ ಹಾಗೂ ಅಚ್ಚರಿ ಮೂಡಿಸುವ ಈ ಚಂದನ ಶೆಟ್ಟಿ ಇಷ್ಟು ದಿನ ೩೦೦ ಕೋಟಿ ಕನ್ನಡಿಗರಲ್ಲಿ ಎಲ್ಲಿ ಅಡಗಿ ಕುಳಿತ್ತಿದ್ದರೋ ನಾನು ಕಾಣೆ. ಮುಖದಲ್ಲಿ ಯಾವ ಹಾವ – ಭಾವ ಬೀರದೆ ತಮ್ಮ ಮಾತಿನ ಚಟಾಕಿಯಿಂದ ನಗಿಸುವ ಇವರು, ತನ್ನಲ್ಲಿ ಇನ್ನೊಬ್ಬ ಕಲಾವಿದನಿದ್ದಾನೆ ಎಂದು ನಮ್ಮಗೆಲ್ಲಾ ತೋರಿಸಿಕೊಟ್ಟಿದ್ದಾರೆ.
ಇನ್ನು ಮುಂದೆ ಅವರ ಹಾಡುಗಳು ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡುವ ನಿಟ್ಟಿನಲ್ಲಿ ರಚಿತವಾಗಲಿ ಎಂದು ಹಾರೈಸುತ್ತೇವೆ.
ಕೋಗಿಲೆ ಹಾಡಿದರೆ ಚಂದ, ನವಿಲು ಕುಣಿದರೆ ಚಂದ … ಅದಲು-ಬದಲಾದರೆ ನೋಡುಗರಿಗೆ ಕಷ್ಟ. ನನ್ನ ಮಾತಿನ ಅರ್ಥ ನೀವು ನಟನೆಯತ್ತ ವಾಲುವುದರಕ್ಕಿಂತ ಹಾಡಿನಲ್ಲೇ ಏನಾದರೂ ಸಾಧಿಸಿದರೆ ಒಳ್ಳೆಯದು.
- ಶಾಲಿನಿ ಹೂಲಿ ಪ್ರದೀಪ್