ವಿರಾಟ ದರ್ಶನ!

ಪ್ರವಾಸಿಗರನ್ನು ಕುಕ್ಕಿ ಕುಕ್ಕಿ ತಿನ್ನುವ ರಣಹದ್ದುಗಳು ಎಲ್ಲೆಲ್ಲೂ…

ಇದು ಏನೆಂದು ಕೇಳುತ್ತೀರಾ? ಕೇಳಿ. ಆಸೆಯೇ ದುಃಖಕ್ಕೆ ಮೂಲ ಎಂದು ಭಗವಾನ್ ಬುದ್ಧ ಹೇಳಿದ. ದಯವೇ ಧರ್ಮದ ಮೂಲ ಎಂದು ಬಸವಣ್ಣ ಹೇಳಿದ. ಕಾಯಕವೇ ಕೈಲಾಸವೆಂದು ಹನ್ನೆರಡನೇ ಶತಮಾನದ ಇಡೀ ಶರಣರು ನುಡಿದರು. ಕಾಯಕದಲ್ಲಿ ವಂಚನೆ, ವ್ಯಾಪಾರದಲ್ಲಿ ಮೋಸ, ನಡೆ-ನುಡಿಯಲ್ಲಿ ದ್ರೋಹ, ಅಪನಂಬಿಕೆ, ಸ್ವಾಗತದಲ್ಲಿ ನಯವಂಚನೆ ಇವು ಸಲ್ಲದು ಎಂದು ಭಾರತೀಯ ಪರಂಪರೆಯ ಅನುಭಾವಿಗಳು ಹೇಳಿದರು.

ಹೇಳುವವರು ಹೇಳುತ್ತ ಬಂದರು. ಕೇಳುವವರು ಕೇಳುತ್ತ ಬಂದರು. ಶತ- ಶತಮಾನಗಳಿಂದ ಹಾಗೇ ಬಂತು ಶಬ್ದಧಾರೆ. ಇವತ್ತಿನ ತನಕವೂ. ಕಾಯಾ- ವಾಚಾ- ಮನಸಾದಿಂದ ಅದನ್ನೇ ದೇವರು ಎಂದು ತಿಳಿದವರೂ ಇದ್ದಾರೆ. ಆದರೆ ಇದು ನುಡಿಯೊಂದು ಪರಿ. ನಡೆಯೊಂದು ಪರಿ ಅನ್ನೋ ಹಾಗಿದೆಯಲ್ಲ ಇಂದು. ಇದರ ಸ್ಯಾಂಪಲ್ಲು ಬೇಕೆಂದರೆ ಬನ್ನಿ. ಒಮ್ಮೆ ಉತ್ತರ ಭಾರತದತ್ತ ಒಂದು ಸಣ್ಣ ಪ್ರವಾಸ ಹೋಗಿ. ಅದು ಯಾತ್ರೆ ಅಂತಾದರೂ ಅನ್ನಿ. ಮೋಜಿನ ಪ್ರವಾಸ ಅಂತಾದರೂ ಅಂದುಕೊಳ್ಳಿ. ಯಾವುದಾದರೂ ಸರಿ. ಅನುಭವ ಒಂದೇ. ಸುಂದರ ತಾಣಗಳ ದರ್ಶನದೊಂದಿಗೆ ನಿಮಗಾಗುವ ನಯವಂಚನೆಯ ವಿರಾಟ್ ದರ್ಶನ, ಊಟದಿಂದ ಹಿಡಿದು, ಒಂದು ಕಪ್ ಟೀ ಬೇಕೆಂದರೂ ಅಲ್ಲಿ ನೀವು ಬ್ಲೆಡ್ ಗೆ ಜೇಬು ಕೊಟ್ಟಿದ್ದೀರಿ ಎಂತಲೇ ಅರ್ಥ. ಪ್ರವಾಸ ಹೋಗುವವರು ಒಂದಷ್ಟು ಎಚ್ಚರ ವಹಿಸದಿದ್ದರೆ ಅಲ್ಲಲ್ಲಿ ಸಿಗುವ ಗೈಡ್ ಗಳು, ವ್ಯಾಪಾರಸ್ಥರು, ವಾಹನದಾರರು, ಹೋಟೆಲಿನವರು, ಹೆಜ್ಜೆ ಹೆಜ್ಜೆಗೂ ಅಂಗಿ ಹಿಡಿದು ಜಗ್ಗುವ ಬರಿಮೈಯ ಮಕ್ಕಳು ಸಾಕಷ್ಟು ಕಿರಿಕಿರಿ ಮಾಡದೆ ಇರುವುದಿಲ್ಲ.

ಇತ್ತೀಚಿಗೆ ನಾವು ಟೂರ ಏಜನ್ಸಿಯ ಮೂಲಕ ಆಗ್ರಾ, ಫತೇಪುರ ಸಿಕ್ರಿ, ಜಯಪುರ, ಅಜಮೀರ, ಪುಷ್ಕರ ಪ್ರವಾಸ ಹೋಗಿದ್ದೆವು. ಮೂರು ದಿನ ನಾವಂತೂ ಇಂಥ ಪ್ರವಾಸಗಳಲ್ಲಿ ಆಗುವ ಸುಲಿಗೆಗಳಿಗೆ ಸಂಪೂರ್ಣ ತಲೆ ಕೊಟ್ಟೆವು. ದಾರಿಯುದ್ದಕ್ಕೂ ನಮ್ಮನ್ನು ಕರೆದೊಯ್ಯುವ ಚಾಲಕ ಹೇಳಿದ ಕಡೆಯಲ್ಲಿಯೇ ತಿಂಡಿ- ಊಟ ಮಾಡಬೇಕು. ಆ ಹೋಟೆಲಿನಲ್ಲಿನವರು ಹೇಳಿದ ದರವಾದರೂ ಏನಂತೀರಿ. ನಮ್ಮಲ್ಲಿ ಒಂದು ಬಾಟಲಿ ಬಿಸಲರಿ ನೀರಿಗೆ ಇಪ್ಪತ್ತು ರೂಪಾಯಿ. ಅದೇ ನೀರಿಗೆ ಇಂಥ ಅಂಗಡಿಯಲ್ಲಿ ಎಪ್ಪತ್ತು ರೂಪಾಯಿ. ಊಟ-ತಿಂಡಿ ಮಾಡುವುದಂತೂ ಅನಿವಾರ್ಯ. ಅದು ಗೊತ್ತಿದ್ದೇ ಪ್ರವಾಸಿಗರಿಗೆ ಸರಿಯಾಗಿ ಬ್ಲೇಡು ಹಾಕುತ್ತಾರೆ. ಅದು ಅಷ್ಟಕ್ಕೇ ನಿಲ್ಲುವುದಿಲ್ಲ. ಅವರಿಗೆ ಗೊತ್ತಿರುವ ಗೈಡ್ ನೇ ಮುಂದೆ ಇರಬೇಕು. ಆತ ನಮಗೆ ಗೈಡ್ ಮಾಡಿದ್ದರಲ್ಲಿ ಅದೆಷ್ಟು ಸತ್ಯ ಇರುತ್ತದೋ ಭಗವಂತನೇ ಬಲ್ಲ. ಈತ ತಾಣಗಳ ಗೈಡ್ ಅನ್ನುವುದಕ್ಕಿಂತಲೂ ತನಗೆ ಗೊತ್ತಿರುವ ಬಟ್ಟೆ ಅಂಗಡಿಗಳು, ಶೋ ರೂಮುಗಳು, ಹೋಟೆಲಗಳು ಇತ್ಯಾದಿಗಳ ಏಜಂಟನಾಗಿ ಕೆಲಸ ಮಾಡುತ್ತಾನೆ. ನಮಗೆ ಗೊತ್ತಾಗದಂತೆ ಇಂಥ ಕಡೆಗೆ ಕರೆದೊಯ್ಯುತ್ತಾನೆ. ಅಲ್ಲಿ ನಮ್ಮನ್ನು ಒಳಗೆ ಅಂಗಡಿಯವರ ಕೈಗೆ ಕೊಟ್ಟು ಆತ ತಕ್ಷಣ ಅಲ್ಲೆಲ್ಲೋ ಮರೆಯಾಗಿ ಬಿಡುತ್ತಾನೆ. ಅಲ್ಲೇ ಇದ್ದರೇ ಪ್ರವಾಸಿಗರು ವಾಪಸು ಹೋಗಲು ಒತ್ತಾಯಮಾಡುತ್ತಾರೆಂದು ಅವನಿಗೆ ಗೊತ್ತು.ಶೋರೂಮ್ ನೊಳಗೆ ಹೋದ ಪ್ರವಾಸಿಗರನ್ನು ಮುಂದೆ ಶೋರೂಮ್ ನೊಳಗೆ ಹೋದ ಪ್ರವಾಸಿಗರನ್ನು ಮುಂದೆ ಹ್ಯಾಂಡಲ್ ಮಾಡುವವರು ಅಂಗಡಿಯವರು. ಎಂಥ ಬಣ್ಣದ ಮಾತುಗಳು ಅವರದು ಅಂತೀರಿ. ಇಂಡಿಯಾದಲ್ಲಿ ಇದೊಂದೇ ಸತ್ಯವಂತನ ಅಂಗಡಿ ಇರೋದು ಎಂದು ನಿಮ್ಮನ್ನು ನಂಬಿಸಿ ಬಿಡುತ್ತಾರೆ. ಸರಿಯಾಗಿ ಲೆಕ್ಕ ಹಾಕಿದರೆ ಒಂದಕ್ಕೆ ಮೂರು ಪಟ್ಟು- ದರದಲ್ಲಿ ನಿಮಗೆ ಏನನ್ನಾದರೂ ತಗಲು ಹಾಕದೆ ಹೊರಗೆ ಕಳಿಸುವುದಿಲ್ಲ.

ಅಲ್ಲಿಂದ ಸ್ಥಳ ನೋಡಲು ಕರೆದೂಯ್ಯುವ ಗೈಡ್ ಅಲ್ಲಿಯೂ ಸುಮ್ಮನಿರುವುದಿಲ್ಲ. ಅಲ್ಲಿ ಇನ್ನೊಬ್ಬ ಮರಿ ಗೈಡ್ ಹತ್ತಿರ ಕರೆದೂಯ್ಯುತ್ತಾನೆ. ಮರಿ ಗೈಡ್ ಒಂದೊಂದು ಕಂಬಕ್ಕೆ ಒಂದೊಂದು ಕತೆ ಹೇಳುತ್ತ ಪ್ರತ್ಯೇಕವಾಗಿ ಹಣ ಕಿತ್ತುಕೊಳ್ಳುತ್ತಾನೆ. ಫತೇಪುರ ಸಿಕ್ರಿಯಲ್ಲಿ ಎಂಟು ವರ್ಷದ ಹುಡುಗನೊಬ್ಬ ಗಝಲ್ ಹೇಳುತ್ತೇನೆ ಕೇಳಿ ಎಂದು ದುಂಬಾಲು ಬಿದ್ದ. ನನಗೆ ಅಚ್ಚರಿ. ಇನ್ನೂ ಪ್ರೈಮರಿ ಓದುವ ಹುಡುಗ. ಗಝಲ್ ಹೇಳುವುದೇ? ಅದೂ ದುಡ್ಡಿಗಾಗಿ. ಎಲ್ಲ ಬಡತನದ ಕಾರಣಕ್ಕೆ ಎಂದು ಗೈಡ್ ಹೇಳಿದ. ಇಲ್ಲಿರುವ ಜನ ಅಕಬರನ ಕಾಲದಲ್ಲಿ ಸೈನಿಕರಾಗಿದ್ದವರ ವಂಶಸ್ಥರು. ಈಗ ಇವರಿಗೆ ಪ್ರವಾಸಿಗರೇ ಅನ್ನದಾತರು ಎಂದು ಆತ ಹೇಳಿದ. ನೀವು ಹತ್ತು ರೂಪಾಯಿ ಕೊಟ್ಟರೆ ಊಟ ಮಾಡುತ್ತಾರೆ ಎಂದ. ಅನುಕಂಪದ ಮಾತು ನಮ್ಮನ್ನು ಮಾತಾಡಲೂ ಬಿಡುತ್ತಿರಲಿಲ್ಲ. ಆದರೆ ಆ ಹುಡುಗರು ಪ್ರವಾಸಿಗರಿಗೆ ಕಿರಿಕಿರಿ ಮಾಡುವುದಂತೂ ನಿಜ. ಇದರ ಜತೆಗೆ ಅಸಹ್ಯ ತರುವಷ್ಟು ಪರಿಸರ ಗಲೀಜು. ತಿರುಗಿದ ದಿಕ್ಕಿಗೊಂದು ಎಂಟ್ರಿ ಫೀ ಎಂದು ಹಣ ಕಿತ್ತುಕೊಳ್ಳುವ ಇಲ್ಲಿಯ ಸಂಸ್ಥೆಗಳು ಪ್ರವಾಸಿಗರಿಗೆ ಸರಿಯಾದ ಮೂಲಭೂತ ಸೌಕರ್ಯವನ್ನೂ ಮಾಡಿಲ್ಲ. ಶೌಚಾಲಯಗಳು ಇವೆ ಅಷ್ಟೇ .

ನಾವು ಹೋದ ಕಡೆಗೆಲ್ಲ ಇಂಥದೇ ಹಣ ಕೀಳುವ ಸಂಗತಿಗಳೇ ಹೆಚ್ಚಿದ್ದವು. ಇವುಗಳ ನಡುವೆ ಭಿಕ್ಷೆ ಬೇಡುವವರು, ದುಡ್ಡಿಗಾಗಿ ಹಾಡುವವರು, ಜಾದೂ ಮಾಡುವವರು, ವೇಷ ಹಾಕಿ ಕುಣಿಯುವವರು, ಬಗಲಲ್ಲಿ ಕೂಸು ಇಟ್ಟುಕೊಂಡು ಹಣಕ್ಕಾಗಿ ಕೈ ಚಾಚುವವರು, ಗೈಡ್ ಪುಸ್ತಕ ಮಾರುವವರು, ಪ್ಯಾಕೆಟ್ ತಿಂಡಿ ಮಾರುವವರು ಪ್ರವಾಸಿಗರನ್ನು ಅಟ್ಟಿಸಿಕೊಂಡೇ ಬರುತ್ತಾರೇನೋ ಅನ್ನುವಂತೆ ಬೆನ್ನು ಹತ್ತುತ್ತಾರೆ. ಇದೆಲ್ಲವನ್ನು ಸಹಿಸಿಕೊಂಡು ಸ್ಥಳಗಳನ್ನು ನೋಡುವ ಪ್ರವಾಸಿಗನಿಗೆ ತನ್ನ ಜೇಬು, ಕೆಮರಾ, ಕೈ ಚೀಲ ಉಳಸಿಕೊಂಡರೆ ಸಾಕು ಅನಿಸದಿರದು. ಪ್ರವಾಸದಲ್ಲಿ ನಾನಾ ಅನುಭವಗಳು.

ಎಲ್ಲ ನೋಡಿದ ಮೇಲೆ ನೆನಪಲ್ಲಿ ಕಡೆತನಕ ಉಳಿಯುವುದು ಏನಂದರೆ ನಾವು ಎಲ್ಲೆಲ್ಲಿ ಮೋಸ ಹೋದೆವು ಎಂಬ ಲೆಕ್ಕ ಮಾತ್ರ. ನಂತರ ಸ್ಥಳದ ಬಗ್ಗೆ ತಿಳಿದಷ್ಟು ಮಾತಾಡುತ್ತೇವೆ. ಆದರೂ ಪ್ರವಾಸದ ಇಂಥ ಬಗೆ ಬಗೆಯ ಅನುಭವದ ಭಾರತದಲ್ಲೇ ದಟ್ಟವಾಗಿ ನೋಡಲು ಸಿಗಲು ಸಾಧ್ಯ. ನೀವೂ ಒಮ್ಮೆ ಹೋಗಿ ಬನ್ನಿ. ನಿಮ್ಮ ಅನುಭವದ ರಾಶಿಗೆ ಇನ್ನಷ್ಟು ಸೇರಲಿ. ಆದರೆ ಖರೀದಿ ಕ್ರೇಜ್ ಮಾತ್ರ ಇಟ್ಟುಕೊಳ್ಳಬೇಡಿ.

ಲೇಖನ – ಹೂಲಿ ಶೇಖರ್

cropped-30411-bf2fb3_598d7b8de0f44f1280cea3ca2b5e61demv2.jpg

 

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW