‘ನಿನ್ನ ಧ್ಯಾನದ ನೂರೊಂದು ಹಣತೆ’ ಪುಸ್ತಕ ಪರಿಚಯ

ವಾಸುದೇವ್ ನಾಡಿಗ್ ಅವರ ‘ನಿನ್ನ ಧ್ಯಾನದ ನೂರೊಂದು ಹಣತೆ’ ಪುಸ್ತಕದ ಕುರಿತು ಪಾರ್ವತಿ ಜಗದೀಶ್ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…

ಕೃತಿ ವಿಮರ್ಶೆ : ನಿನ್ನ ಧ್ಯಾನದ ನೂರೊಂದು ಹಣತೆ
ಲೇಖಕರು : ವಾಸುದೇವ್ ನಾಡಿಗ್
ಪ್ರಕಾಶಕರು : ವೀರಲೋಕ ಬುಕ್ಸ್ ಬೆಂಗಳೂರು.
ಬೆಲೆ : 170 ರೂಪಾಯಿ.

ನಿನ್ನ ಧ್ಯಾನದ ನೂರೊಂದು ಹಣತೆ.

ವಾಸುದೇವ್ ನಾಡಿಗ್ ಸರ್ ಅವರ ಕೃತಿ. ಇಲ್ಲಿ ಲೇಖಕರ ಹೃದಯದ ಮಾತು ಮತ್ತು ಆತ್ಮದ ಜಿಜ್ಞಾಸೆಗೆ ಕೂತು ವ್ಯವಹಾರಿಕ ಲೋಕದಲ್ಲಿ ವ್ಯವಧಾನ ಸಿಕ್ಕಿದಾಗ ಧ್ಯಾನಿಸಿದ ಹಣತೆಗಳೇ ಇವು ನಿನ್ನ ಧ್ಯಾನದ ನೂರೊಂದು ಹಣತೆ.ಭಾವಗಳ ಅನಾವರಣಗೊಳಿಸಲು ಕೃಷ್ಣ ಮತ್ತು ರಾಧೇಯರನ್ನು ಆಯ್ಕೆ ಮಾಡಿಕೊಂಡು ಆತ್ಮ ಸಾಕ್ಷಿ ಮುಂದಿಟ್ಟುಕ್ಕೊಂಡು, ಪ್ರೇಮ, ವಿರಹ, ಲೋಕ, ತಕರಾರು, ರಂಪ ರಗಳೆಗಳ ತೈಲ ಎರೆದು ಸಂವೇದಗಳನ್ನೇ ಜ್ವಲಿಸಿ ದೇದೀಪ್ಯಮಾನವಾಗಿ ಬೆಳಗಿದ ಹಣತೆಗಳ ಸಂಖ್ಯೆ ನೂರಾ ಒಂದು.

ಪ್ರತಿ ಹಣತೆ ಬೆಳಗುಸುವಲ್ಲಿ ಪ್ರೇಮದ ಪ್ರಖರತೆ ಹೆಚ್ಚಾಗಿ ಕಂಡು ಬಂದಿದೆ.ಪ್ರೀತಿ ಅನ್ನುವುದೇ ಹಾಗೇ.ಇಲ್ಲೊಂದು ಮುದ್ದು ರಾಮರ ಒಂದೆರೆಡು ಸಾಲುಗಳು ಸೂಚ್ಯವೆನಿಸುತ್ತವೆ.
” ಮನದ ಗೂಡಿನಲೊಂದು ಪ್ರೀತಿ ಹಣತೆ ಹಚ್ಚು ಘನದ ಎದುರಲಿ ನಿಂತು ನಯದಿ ತಲೆ ಬಾಗು ದಿನದ ಚಿಂತೆಯ ಮರೆತು ನಿಜಕೆ ಅಭಿಮುಖನಾಗು ಅನುನಯಕೆ ಶರಣಾಗು ಮುದ್ದು ರಾಮ.

ಇವೆ ಸಾಲುಗಳನ್ನೆ ಧ್ವನಿಸುತ್ತವೆ ನೂರೊಂದು ಹಣತೆಯ ಭಾವಗಳು.

ಹಣತೆ 12 ರಲ್ಲಿ ಆ ಇರುಳ ಯಮುನೆಯ ತುಂಬೆಲ್ಲ ಬೆಳಕು ಸಖಿ ನೀನು ಪಾದಗಳ ಇಳಿಬಿಟ್ಟು ದಡಕ್ಕೆ ಕೂತಿದ್ದೆ ಹಗಲೆಂದು ಭ್ರಮಿಸಿ ಕಕ್ಕಾ ಬಿಕ್ಕಿಯಾದವು ಮೀನುಗಳು.ಎಂತಹ ಹೋಲಿಕೆ,ರಾಧೇ ರಾತ್ರಿ ಇಳಿಬಿಟ್ಟ ಪಾದಗಳಿಂದ ಯಮುನೆಗೆ ಬೆಳಕು ಪಸರಿಸಿ,ರಾತ್ರಿಯೇ ಹಗಲೆಂದು ಭ್ರಮಿಸಿ ಮೀನುಗಳೂ ಕಕ್ಕಾ ಬಿಕ್ಕಿಯಾದಂತೆ.ಇಲ್ಲಿ ರಾಧೇಯ ಅನುಪಮ ಸೌಂದರ್ಯ ವರ್ಣನೆ ಮಾಡಿದರೆ,ಕೃಷ್ಣನ ಕೊಳಲಿಗೆ ಒಣ ಮರಗಳೂ ಚಿಗುರುವುದು ಉತ್ಸಾಹ ಸೂಚಕದಂತೆ ಅನಿಸುತ್ತೆ.

ಮನದ ಗೂಡಿನಲ್ಲೊಂದು ಪ್ರೀತಿ ಹಣತೆ ಹಚ್ಚು ಅನ್ನುವಲ್ಲಿ ಈ ಜಗತ್ತಿನಲ್ಲಿ ಎಲ್ಲದಕ್ಕೂ ಮೂಲವೇ ಪ್ರೀತಿ.ಪ್ರೀತಿಯಿಲ್ಲದ ಮೇಲೆ ಹೂವು ಅರಳಿತು ಹೇಗೆ? ಮೋಡ ಕಟ್ಟೀತು ಹೇಗೆ? ಅನ್ನುವ ಕವಿ ವಾಣಿಯಂತೆ ಎಲ್ಲರ ಅಭಿವೃದ್ಧಿಗೂ ಪ್ರೀತಿಯೇ ಕಾರಣ.ಹಾಗೇ ವಿನಾಶಕ್ಕೂ ಕಾರಣ. ಅದೇ ಹಣತೆಯ ಕೊನೆಯ ಸಾಲುಗಳಲ್ಲಿ ಹೀಗೆ ಹೇಳುತ್ತಾರೆ ಸಖಿ, ಹಣದ ಬೆನ್ನು ಹತ್ತಿದ ಜನ ವೃಥಾ ಒಳಗೇ ಉರಿಯುತ್ತಿದ್ದಾರೆ ದಡ ಸೇರದ ಹರಿಗೋಲು ಬರೀ ಗಿರಕಿ ಭಾವಕ್ಕೆ ತೊಡಿಸಿದ ಮಧುರ ಭವದ ವಸ್ತ್ರವು ನೀನು ನೀನಿಲ್ಲದೇ ಅತೀತವೂ ಅಪೂರ್ಣವೇ.

ಪ್ರೀತಿ ಎಂಬುದು ಬದುಕ ನಿತ್ಯ ಉಸಿರಾಗಬೇಕು ಉಸಿರಿಲ್ಲದಿದ್ದರೆ ಪ್ರಾಣವೂ ಇಲ್ಲ ಹಾಗೆಯೇ ಪ್ರೀತಿ ಇರದಿದ್ದಲ್ಲಿ ಬದುಕೇ ಇಲ್ಲ.ಇಲ್ಲಿ ಪ್ರೀತಿಗೆ ಅನ್ವರ್ಥ ಕವೇ ರಾಧೇ. ಹದಿಮೂರನೇ ಹಣತೆಯ ಕೋಟೆ ಕೊತ್ತಲಿಗಾಗಿ ಕುತ್ತಿಗೆ ಕೊಯ್ಯುವ ಹೊತ್ತಿನಲ್ಲೂ ಜೀವ ಪರಿಮಳದ ಹಾಡ ಬಿತ್ತಿದ್ದೇವೆ! ಸಾಲುಗಳು ಎಷ್ಟೊಂದು ಅರ್ಥ ಪೂರ್ಣ.

ಹಣತೆ 15 ರ ಸಾಲುಗಳು ನೀ ಬರುವ ಮುಂಚೆ ಜನರ ನಡುವೆಯೇ ಇದ್ದೆ ನೀ ಬಂದ ಮೇಲೆ ಒಂಟಿಯಾದೆ ಸಖಿ ಒಂಟಿತನವನ್ನು ನೀನೇ ಮರು ವ್ಯಾಖ್ಯಾನಿಸಿದೆ.ಈ ಸಾಲುಗಳಲ್ಲಿ ಪ್ರೀತಿಯ ಆಕರ್ಷಣೆ ಮತ್ತು ಲೌಕಿಕದಿಂದ ಬೇರ್ಪಟ್ಟು ಏಕಾಂತವನ್ನು ಆಸ್ವಾದನೆ ಮಾಡುವ ರೀತಿ ಅನಿಸುತ್ತೆ.

ಹಣತೆ 16 ರಲ್ಲಿಯ ಸಾಲುಗಳಂತೂ ಬಹಳ ಇಷ್ಟವಾದ ಸಾಲುಗಳು.ಸಂತೆಯ ಮದ್ಯೆಯೂ ಸಂತನ ಕಾಡಿ ಯಾಕೋ ಕಡುಗತ್ತಲೆಯಲ್ಲೇ ನಿನ್ನ ಧ್ಯಾನದ ಸೊಡರು ಸುರಿಸುತ್ತದೆ.ಆತ್ಮದ ಬೆಳಗ ಈ ನೆಲ,ಈ ನಗ, ಈ,ಹಗೆ ಎಂತಹ ಕ್ಷುಲ್ಲಕ ನಿನ್ನ ನಗೆಯೆದುರು!!

ಒಂದಕ್ಕಿಂತ ಒಂದು ಹಣತೆ ವಿಭಿನ್ನ,ವಿಶೇಷ ರೀತಿಯಲ್ಲಿ ಬೆಳಗಿಸಿದ್ದಾರೆ ಲೇಖಕರು.ಎಲ್ಲಾ ಹಣತೆಗಳ ಮೂಲ ತೈಲವೇ ಪ್ರೇಮ.ನಾನು ಎಂಬುದ ನೀಗಿಕೊಂಡು ನಾವು ಎಂಬುದ ಮನವರಿಕೆ ಮಾಡಿಕೊಂಡು,ನಾವು ಪ್ರೇಮ ಪರುಷ ರಾದರೇ ಆಜಾತರಾಗುತ್ತೇವೆ.ಅಜಾತರೆನಿಸಿದರೆ ಚಿರಂಜೀವಿಗಳೆನಿಸುತ್ತೇವೆ.ಸಾಯಬಹುದು ಆದರೇ ಸದಾ ನೆನೆದವರ ಮನದಲ್ಲಿಯೇ ಇರುತ್ತೇವೆ.ಹಾಗಾಗಿ ಪ್ರೇಮ ಸುಜ್ಞಾನ.ಇದೇ ಚಿರಂಜೀವತ್ವ ಪ್ರೇಮಿಸುವುದು ಅಂದರೆ ಸುವಿವೇಕಿಯಾಗಿರುವುದು ಎಂದರ್ಥ ಎಲ್ಲರೂ ಪರಮಾತ್ಮನ ಸೃಷ್ಠಿ,ಬೆಳಕಿನ ಬೆಳಗು,ಸೂರ್ಯನ ಕಿರಣ,ಪ್ರೇಮಿಸುವುದು ಎಂದರೆ ಅರಿವಿನ ಪಥವನ್ನರಿಯುವುದು. ಈ ಪಥ ಅನುಸರಿಸಿದಾಗ ಪರರು ಅನ್ನುವ ಭಾವ ತಳೆದು ಎಲ್ಲರೂ ನಮ್ಮವರು ಎಂದು ತಿಳಿದು ನೆಮ್ಮದಿಯ ಬದುಕ ಸಾಗಿಸುವುದೇ ಮನ,ವಚನ ಕಾಯ ಶುದ್ದಿಯ ಪ್ರದರ್ಶನ.

ಹೀಗೆಯೇ ಮೌನ,ಧ್ಯಾನ,ಆತ್ಮ,ಸಾವು,ವಿರಹ ವಿಭಿನ್ನ ವಿಷಯಗಳ ಆಧರಿಸಿ ಹಣತೆ ಹಚ್ಚುತ್ತಾ ಹೋಗಿದ್ದಾರೆ. ಮುಖ್ಯವಾಗಿ ಹೇಳಬೇಕು ಅಂದರೆ, ಇದನ್ನೆಲ್ಲ ಯಾವ ರೀತಿ ವಿಮರ್ಶೆ ಮಾಡಬೇಕು ಅನ್ನುವುದು ಗೊತ್ತಾಗಲ್ಲ. ವಿಮರ್ಶೆಗೂ ನಿಲುಕದ ಬರೀ ಆತ್ಮಾವಲೋಕನ ಮಾಡಿಕೊಳ್ಳುವಂತೆ ಇವೆ.ನೂರೊಂದು ಹಣತೆಗಳು ಆದ್ದರಿಂದ ನಾನೂ ಕೂಡ ವಿಮರ್ಶೆ ಮಾಡಲು ಸೋತೆ. ಒಂದೇ ಆಯಾಮದಲ್ಲಿ ಬರೆದ ಬರಹಗಳಲ್ಲ ಇವು ಬಹು ವಿಧ ಆಯಾಮದಲ್ಲೇ ಚಿಂತನೆ ಮಾಡುವಂತೆ ಇವೆ.

ಕೊನೆಯದಾಗಿ ನನಗೆ ಅತೀ ಇಷ್ಟವಾದ ಹಣತೆಯ ಪೂರ್ತಿ ಸಾಲುಗಳು ಹಣತೆ 45. ನೋಡು ನದಿಗಳೆಲ್ಲವೂ ಆಳವನು ಕಳೆದುಕೊಂಡಿವೆ ಸಖಿ ಈ ಪ್ರೀತಿಯಾಳಕೆ ಅಳುಕಿ ಸ್ಥಿರವೆಂದು ಭ್ರಮಿಸಿದ್ದ ಗಿರಿ ಶಿಖರಗಳೆಲ್ಲವೂ ಕನಲಿದ್ದಾವೆ.ಅರೆಕ್ಷಣ ನಿನ್ನ ಸಖ್ಯ ನನ್ನ ಅಲುಗಾಡಿಸಿರುವುದ ಕಂಡು ವಸಂತನ ಹೆಗಲೇರಿ ಹಾಡುವುದು ಮರೆತಿದ್ದಾವೆ ಹಕ್ಕಿಗಳು ಅರೆ ನೋಡಲ್ಲಿ ನಿನ್ನ ಕಂಗಳಲ್ಲಿ ನಾನು ಪಲ್ಲವಿಯಾಗಿರುವೆ ಬಾ ಪದಗಳ ಹಂಗು ಬೇಡ ಹೊದಿಸಿ ಬಿಡು ಮೌನದ ವಸ್ತ್ರ ಜಗಕ್ಕೆ ಕಲಿಸಿ ಕೊಡಬೇಕಾಗಿದೆ ಮಾತುಗಳು ಸೋಲುವ ಪಾಠವನ್ನು ಬಾ ಸಖಿ ಅಮರರಾಗೋಣ ಬರೆಯಲಾಗದ ಸಾಲುಗಳಲ್ಲಿ. ಪ್ರೇಮ,ಧ್ಯಾನ,ಮೌನ ಎಲ್ಲವೂ ಇದೆ ಇದರಲ್ಲಿ ಸೂಕ್ಷ್ಮವಾಗಿ ನಮ್ಮನ್ನು ನಾವೇ ಅವಲೋಕಿಸಿಕೊಳ್ಳಬೇಕಷ್ಟೆ.

ಇಂತಹದೆ ನೂರೊಂದು ಹಣತೆಗಳು ಇದ್ದಾವೆ ಇಂತವುಗಳಿಗೆ ವಿಮರ್ಶೆ ಮಾಡಿದಾಗ ಕವಿ ಭಾವಕ್ಕೆ ವ್ಯತ್ಯಾಸ ಬರುವ ಸಾಧ್ಯತೆಗಳು ಇರ್ತಾವೆ. ಹಾಗಾಗಿ ಕೃತಿಯನ್ನು ಓದಿಯೇ ಅಸ್ವಾದಿಸಬೇಕು ಅನ್ನುವುದು ನನ್ನ ಅಭಿಪ್ರಾಯ.

ಓದುಗರೆಲ್ಲರ ಹೃದಯದಲ್ಲಿಯೂ ನೂರೊಂದು ಹಣತೆ ದೇದೀಪ್ಯಮಾನವಾಗಿ ಪ್ರಜ್ವಲಿಸಲಿ ಅನ್ನುವ ಶುಭ ಹಾರೈಕೆಗಳೊಂದಿಗೆ……ನನ್ನರಿವಿಗೆ ದಕ್ಕಿದ ನಾಲ್ಕು ಸಾಲುಗಳನ್ನು ಬರೆಯುವ ಪುಟ್ಟ ಪ್ರಯತ್ನವಿದಷ್ಟೇ…. ಕವಿ ಭಾವಕ್ಕೆ ವ್ಯತ್ಯಾಸವಾದರೇ ಕ್ಷಮೆ ಇರಲಿ ಸರ್.


  • ಪಾರ್ವತಿ ಜಗದೀಶ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW