ನಿನ್ನಂಥ ಅಪ್ಪಾ ಇಲ್ಲಾ

ಈ ಅಪ್ಪಯ್ಯನ ಬಗ್ಗೆ ಹೇಳುವುದು ಬಹಳ ಇದೆ. ನಿಜ… ನಿನ್ನಂಥ ಅಪ್ಪ ಇಲ್ಲ. ಅಮ್ಮನ ಸಂಸ್ಕಾರ ಮಕ್ಕಳನ್ನು ರಕ್ಷಿಸಿದರೆ, ಅಪ್ಪನ ಹವ್ಯಾಸ ಮಕ್ಕಳ ಬೆಳವಣಿಗೆಗೆ ಸಹಕರಿಸುತ್ತದೆ. ಹೆಣ್ಣಿರಲಿ, ಗಂಡಿರಲಿ, ಮಕ್ಕಳ ಹೀರೋ, ಆದರ್ಶ ಯಾವತ್ತೂ ಅಪ್ಪನೇ……

“ಈಗಿಂದೀಗ S S Hegde sir( college principal) ಮನೆಗೆ ಹೋಗಿ ನಿನ್ನ resignation letter ನಾ ಕೊಟ್ಟಿಕ್ಕಿ ಬತ್ತೆ” ಅಂದ ಸಿಟ್ಟಲ್ಲಿ… ‘ಸರಿ ಹಾಗೇ ಮಾಡು ಅಂತ ಅಳೋ ದನಿಯಲ್ಲಿ ನನ್ನ ಉತ್ತರ… ಇದು ವಾರಕ್ಕೆ ಒಮ್ಮೆ ಅಪ್ಪ ಮಗಳ ಬೆಳಗಿನ ಚಕಮಕಿಯ ಮಾತುಗಳು… 😀.. ಏಳೂ ಮುಕ್ಕಾಲಿಗೆ ಬರೋ ಬಸ್ಸು ಹತ್ತಿ ಕುಮಟಾಕ್ಕೆ ಹೋಗಿ ಅಲ್ಲಿಂದ ಇನ್ನೊಂದು ಬಸ್ ಹತ್ತಿ ಹೊನ್ನಾವರ ಕಾಲೇಜು ತಲುಪಿ ಒಂಭತ್ತು ಗಂಟೆ ಕ್ಲಾಸ್ ಗೆ ರೆಡಿಯಾಗಬೇಕು. ಬೆಳಿಗ್ಗೆ ತೀರಾ ಐದು ಗಂಟೆಗೆಲ್ಲ ಎದ್ದೇ ಗೊತ್ತಿಲ್ಲ. Exam ಬರೆಯೊವಾಗಲೇ ಎದ್ದು ಗೊತ್ತಿಲ್ಲ, ಇನ್ನು job ಮಾಡೋವಾಗ… No chance… ಅಂತೂ ಆರ ಗಂಟೆ ಮೇಲೆ ಎದ್ದು ನಿತ್ಯ ಕರ್ಮ(ಖರ್ಮ) ನೆಲ್ಲಾ ಮುಗಿಸಿ ಇನ್ನು ಮುಂದಿನ ತಯಾರಿ ಸೀರೇ ಉಡುವ ಕಾರ್ಯಕ್ರಮ….

ಈ ಸೀರೆ ಕಾಲೇಜಿನಲ್ಲಿ compulsory. ಸೀರೆ ಉಡೋಕೆ ಬರಲ್ಲ ಅಂತಲ್ಲ. ಕಾಲೇಜು ಕಲಿಸಲು, ಬಸ್ಸಲ್ಲಿ ಓಡಾಡಲು ನಾವು ಮನೆಯ ಕಾರ್ಯಕ್ರಮಗಳಿಗೆ ಉಟ್ಟಂತೆ ಸೀರೆ ಉಡಲಾಗದು. ಒನಪು, ವಯ್ಯಾರಕ್ಕೆ ಉಡುವ ಸೀರೆನ ಗಾಂಭೀರ್ಯದ ಮಡಿಕೆಯಲ್ಲಿ ತೊಡುವುದು ಕಷ್ಟ ಕಷ್ಟ. ಈ ಪ್ರಯತ್ನದಲ್ಲಿ ದಿನಾ ಸೀರೆ ಉಡಲು ಸುಮಾರು ಅರ್ಧಕ್ಕಿಂತ ಜಾಸ್ತಿ ಸಮಯ ಬೇಕಾಗಿತ್ತು. ಒಮ್ಮೊಮ್ಮೆ ಅಳು ಬರ್ತಿತ್ತು. ಇದನ್ನೆಲ್ಲಾ ದಿನಾ ನೋಡುವ ಅಪ್ಪ, ವಾರದಲ್ಲಿ ಒಮ್ಮೆಯಾದರೂ ಸಹಸ್ರ ನಾಮ ಶುರು ಮಾಡ್ತಿದ್ದ. ಈ ಅಪ್ಪನ ಕಾಳಜಿಯೇ ಅಂಥದ್ದು. ಎಲ್ಲವೂ ಸಿಟ್ಟಲ್ಲೇ… ನಾನು job ಮಾಡುವಾಗಲೇ ಇಷ್ಟು ಸಿಟ್ಟು ಮಾಡ್ಕೋತಿದ್ದ ಅಪ್ಪ,ಇನ್ನು ನಾವು ಓದುವಾಗ ಹೇಗಿದ್ದಾನು.

aa1

ನಿಜ, ‘ಜಮದಗ್ನಿ ಕೋಪ ಬಿಟ್ಟಾಂಗೆ ಬಿಟ್ಟಿಕಿದೆ’ ಹೇಳಿ ನಗ್ತಾ ಈಗೂವಾ.. Agriculture assistant ಆಗಿ ಸರ್ಕಾರಿ ನೌಕರಿಯಲ್ಲಿದ್ದ ಅಪ್ಪ, ಮೊದಲು ಕೆಲಸ ಮಾಡಿದ್ದು ರಾಯಚೂರು ಜಿಲ್ಲೆಯಲ್ಲಿ. ನಂತರ ಸ್ವಂತ ಊರು ಕುಮಟಾಕ್ಕೆ ವರ್ಗಾವಣೆ, ನಾನು ಒಂದನೇ ತರಗತಿಯಲ್ಲಿದ್ದಾಗ. ಅಲ್ಲಿಂದ ಐದನೇ ತರಗತಿಯ ವರೆಗೆ ಕುಮಟಾ ವಾಸ, ನಂತರ ಭಟ್ಕಳವೆಂಬ ಭಟ್ಕಳ ಕ್ಕೆ ನಮ್ಮ ಕುಟುಂಬ ಶಿಫ್ಟ. ನಾವು ಮೂರು ಹೆಣ್ಣು ಮಕ್ಕಳು. ಅಯ್ಯೋ ಹೆಣ್ಣು ಮಕ್ಕಳು, ಹೇಗಿದ್ರೂ ಮದುವೆಯಾಗಿ ಹೋಗೋವ್ರು ಅಂತ ಯಾವತ್ತೂ ಅಂದುಕೊಳ್ಳದೇ ಕಡಕ್ ಶಿಸ್ತಿನಿಂದ ಬೆಳೆಸಿದ್ದಾರೆ ಅಪ್ಪ. ಕಿರಿಯ ತಂಗಿಗೆ ಒಂದೇ ಇರಬಹುದು, ಅಪ್ಪನ ಕೈಯ ಹೊಡೆತ ಬೀಳದ್ದು. ನಾನು ನನ್ನ ತಂಗಿ ಸರಿಯಾಗಿ ದಂಡಿಸಿಕೊಂಡಿದ್ದೇವೆ.

ಐದನೇ ತರಗತಿ ವರೆಗೆ ಒಟ್ಟು ಕುಟುಂಬದಲ್ಲಿ ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಎಲ್ಲ ರ ಜೊತೆ ನಮ್ಮ ಹುಟ್ಟೂರು ಕುಮಟಾ ದ ಹೊಲನಗದ್ದೆಯಲ್ಲಿ ಕಳೆಯಿತು. ಸಂಜೆ ಆರೂ ಮೂವತ್ತಕ್ಕೆ ಅಪ್ಪ ಮನೆಗೆ ತಲುಪುವ ಹೊತ್ತಿಗೆ ನಮ್ಮ ಆಟೋಟಗಳನ್ನೆಲ್ಲ ಮುಗಿಸಿ ಓದಲು ಕುಳಿತುಕೊಳ್ಳಬೇಕು. ಅಪ್ಪ ಆಯಿ ಜೊತೆ ಆ ದಿನದ ಬಾಯಿಪಾಠ, ಓದು ಬರಹ ಮುಗಿಸಿ, ಎಲ್ಲರೂ ಸೇರಿ ಯಾವುದಾದರೂ ಒಂದು indoor ಆಟ ಆಡಿ ಆಮೇಲೆ ಊಟ.. ನಿದ್ರೆ. ಇದು ನಮ್ಮ ದಿನಚರಿ. ನಾನು ಆರನೇ ತರಗತಿಯಲ್ಲಿದ್ದಾಗ ಅಪ್ಪನಿಗೆ ವರ್ಗಾವಣೆ. ನಮ್ಮ ಐದು ಮಂದಿಯ ಸಂಸಾರ ಭಟ್ಕಳಕ್ಕೆ ಶಿಫ್ಟ. ಈ ಭಟ್ಕಳದಲ್ಲಿ ನಾನು ಓದಿದ್ದು ಆರು ಮತ್ತು ಏಳನೇ ತರಗತಿ ಅಷ್ಟೇ. ನಾವು ಅಲ್ಲಿ ಇದ್ದದ್ದೂ ಎರಡೇ ವರ್ಷ. ಭಟ್ಕಳದ ಗಲಭೆಯ ಪ್ರತ್ಯಕ್ಷ ಸಾಕ್ಷಿಗಳೋ. ಅನುಭವಿಗಳೋ… ಆ ದಿನಗಳು ಈಗಲೂ ಕಣ್ಣ ಮುಂದೆ ಬಂದರೆ ನೆನಪಾಗುವುದು ಬ್ರಾಹ್ಮಣರ ಮನೆಯಲ್ಲಿರುವ ಆಯುಧ ಕಾಯಿ ಒಡೆಯುವ ಕತ್ತಿ… ಆ ಹದಿನೈದು ದಿನಗಳು ಅಂತ… ಇನ್ನೊಮ್ಮೆ ಬರೆಯುವೆ. ನಾವು ನಾಲ್ಕು ಹೆಣ್ಣು ಜೀವದ ಜವಾಬ್ದಾರಿ ಹೊತ್ತ ಅಪ್ಪನ ಕಥೆ ಒಮ್ಮೆ ಹೇಳಲೇಬೇಕು.

ಆದರೂ ನಾವು ಆ ಎರಡು ವರ್ಷ ಅಪ್ಪನ ಜೊತೆ ಕಳೆದ ದಿನಗಳು. Fond memories… ಸಂಜೆಯ ದಿನಚರಿಯಲ್ಲಿ ಸೇರ್ಪಡೆಯಾದದ್ದು ರೇಡಿಯೋ, ಟೇಪ್ ರೆಕಾರ್ಡರ್. ಸಿನಿಮಾದಿಂದ ಹಿಡಿದು ಸಂಸ್ಕೃತ ವಾರ್ತೆಯವರೆಗೆ ಎಲ್ಲವನ್ನೂ ರೇಡಿಯೋದ ಸುತ್ತ ಐವರೂ ಕುಳಿತು ಕೇಳುತ್ತಿದ್ದೆವು. ಟೇಪ್ ರೆಕಾರ್ಡರ್ ನಲ್ಲಂತೂ ಯಕ್ಷಗಾನ, ಯಕ್ಷಗಾನ, ಯಕ್ಷಗಾನ.ಶ್ರೀ ರಾಮ ನಿರ್ಯಾಣ ಕೇಳಿ ಅರ್ಥ ಆಗದ್ದನ್ನು ಅಪ್ಪನಲ್ಲಿ ಕೇಳಿ ತಿಳಿದು ಆ ಸಂಭಾಷಣೆಯಲ್ಲಿ ಮುಳುಗಿ ಅಳುತ್ತಿದ್ದೆವು. ಲಕ್ಷ್ಮಣಾ…… ಈ ಶಬ್ದ ಈಗಲೂ ಕಿವಿಯಲ್ಲಿ ಗುಯ್ ಗುಡುವಷ್ಟು ಆ ಯಕ್ಷಗಾನ ಕೇಳಿದ್ದೇವೆ. ಈ ಅಪ್ಪನ ರಿಪೇರಿ ಕಲೆನೇ ಅದ್ಭುತ. ಈ ರೇಡಿಯೋ, ಟೇಪ್, ಕ್ಯಾಸೆಟ್ ಗಳು ಎಲ್ಲಿಯಾದರೂ play ಆಗಿಲ್ಲ ಎಂದರೆ ಮುಗೀತು ಕಥೆ, ಅದನ್ನೆಲ್ಲ ಬಿಚ್ಚತಿದ್ದ. ಈ ಕಾರ್ಯಕ್ಕೆ first assistant ನನ್ನ ತಂಗಿ. ಬಿಚ್ಚಿದ್ದನ್ನೆಲ್ಲ ಸರಿಯಾಗಿ ಜೋಡಿಸಲು ಅವಳ guidance. ಇನ್ನು ಜೋಡಿಸಿದ ಮೇಲೆ ಅದು play ಆಗ್ಬೇಕು ಇಲ್ಲಾ ಬಿತ್ತು. ಅದು ತಂಗಿಗಲ್ಲಾ…. ಟೇಪ್ ರೆಕಾರ್ಡರ್ ಗೆ. ಎತ್ತಿ ಬಿಸಾಕ್ತಿದ್ದ. ಅದೇನೋ ಅದ್ಯಾವದೂ ಅಷ್ಟು ಬೇಗ ಪುಡಿಯಾಗ್ತಿರಲಿಲ್ಲ. ಆಮೇಲೆ switch on ಮಾಡಿದ್ರೆ ನೀಟಾಗಿ play ಆಗ್ತಿತ್ತು. ಅಪ್ಪ table fan ರಿಪೇರಿನೂ ಹೀಗೆ ಮಾಡ್ತಿದ್ದದ್ದು. ಈಗ್ಲೂ ಅಪ್ಪ, ಮೊಬೈಲ್ ಸಿಗ್ನಲ್ ಬರಲ್ಲ ಅಂತ ಹೇಳಿದ್ರೆ ನಾವು ಅವನಿಗೆ, ‘ ಒಂದು ಸತಿ ಎತ್ತ ಬಿಸಾಕು… ಸರಿ ಹೋಗ್ತು ಹೇಳಿ ಕಾಡಿಸ್ತೇವೆ.

amma.jpg1

ಹೀಗೆ ಹೇಳೋ ಧೈರ್ಯ ನಮಗೆ ಈಗೀಗ ಬಂದದ್ದು. ಆಗ ಏನಾದ್ರೂ ಹೀಂಗೆಲ್ಲ ಹೇಳಿದ್ರೇ ಅಷ್ಟೇ. ಒಮ್ಮೆ ಎಲ್ಲರೂ ಸಂಜೆ ಚಾ ಕುಡಿತಾ ಇರುವಾಗ ಏನೋ ತಮಾಷೆಗೆ ಮಾತಾಡ್ತಾ. ಅಪ್ಪನ ತೊಡೆಗೆ ನಗ್ತಾ ನಗ್ತಾ ಹೊಡೆದಳು ನನ್ನ ತಂಗಿ. ಅಷ್ಟೇ ನೋಡಿ ನಗು ಸಿಟ್ಟಲ್ಲಿ ತಿರುಗಿ ಅವಳಿಗೆ ಸಿಕ್ಕೇ ಬಿಡ್ತು punishment. ಇಪ್ಪತ್ತೈದು ಕೊಡ ನೀರು ಸೇದಿ ತೆಂಗಿನ ಮರಕ್ಕೆ ಮತ್ತು ಮನೆಯ ಹಂಡೆಗೆ ತುಂಬಿಸಬೇಕು ಅವಳೊಬ್ಬಳೇ. ಯಾರ ಸಹಾಯವೂ ಇಲ್ಲದೇ. ಅವಳು ಆಗ ಆರನೇ ಕ್ಲಾಸ್. ಕೊಡಪಾನ ದೊಡ್ಡದು. ಹೀಗೇ ಅಪ್ಪನ ಸಿಟ್ಟಿಗೆ ಸಿಟ್ಟೇ ಸಾಟಿ.

ನಾನು ಏಳನೇ ತರಗತಿಯಲ್ಲಿ ಓದುವಾಗ ನನ್ನ ಕನ್ನಡಕ ಶಾಲೆಯಲ್ಲಿ ಕಳುವಾಯ್ತು. ಮನೆಗೆ ಬಂದು ಹೇಳಿದರೆ ಅಪ್ಪ, ರೊಯ್ಯನೆ ಪಾಟಿ ಚೀಲ ತೆಗೆದು ಅಟ್ಟಕ್ಕೆ ಬಿಸಾಕಿದ. ಇನ್ನು ನಿನ್ನ ಶಾಲೆ ಬಂದ್…. ಮುಗೀತು. ಅಪ್ಪನ ಆಜ್ಞೆ ಯಾರೂ ಮೀರುವಂತಿಲ್ಲ. ನನ್ನ ಮೊದಲ ತಂಗಿ ಬಿಟ್ಟರೆ ಯಾರೂ ಏನೂ ಕುಂಯ್ ಅನ್ನುವ ಸಣ್ಣ ಧೈರ್ಯ ನೂ ಇಲ್ಲ. ಎರಡು ದಿನ ಕಳೆಯಿತು. ತಂಗಿ ಹೇಗಾದರೂ ಪಾಟಿಚೀಲ ತೆಗೆಯೋ ಸಾಹಸ ಮಾಡಿದಳು. ಅದು ತಿಳಿದ ಅಪ್ಪಯ್ಯ ಅವಳಿಗೆ ಬೈದು ಇನ್ನು ಒಂದು ಸಲ ಹೀಗಾದರೆ ನಿನ್ನ ಚೀಲನೂ ಅಲ್ಲಿಗೆ ಹೋಗ್ತು ಅಂದಬಿಟ್ಟ. ಮತ್ತೆ ನನ್ನ ಚೀಲ ಅಟ್ಟಕ್ಕೆ. ಶಾಲೆಯಲ್ಲಿ ಟೀಚರ್ ಗಳೆಲ್ಲ ವಿಚಾರಣೆ ಒಂದೂ ದಿನ ರಜೆ ಹಾಕದ ಹುಡುಗಿ ಎಲ್ಲಿ ಹೋದಳು ಅಂತ. ಐದು ದಿನ ತಂಗಿ, ಹೀಗೇ ಹುಶಾರಿಲ್ಲ ಅಂತ ಹೇಗೋ manage ಮಾಡಿದ್ಲು. ಕಡೆಗೆ ಅವಳಿಗೆ ತೀರಾ ಪ್ರೀತಿಯ ಅಕ್ಕೋರ ಹತ್ತಿರ ಸುಳ್ಳು ಹೇಳಲಾಗದೇ ಅಳುತ್ತಾ ನಡೆದುದೆಲ್ಲವನ್ನೂ ವಿವರಿಸಿದಳು. ಸುದ್ದಿ ಮುಖ್ಯೋಪಾಧ್ಯಾಯರವರೆಗೆ ಹೋಯಿತು. ಅವರು ಎಲ್ಲವನ್ನೂ ತಿಳಿದು ಅಪ್ಪನಿಗೆ ಒಂದು ಚೀಟಿ ಬರೆದು ಕಳುಹಿಸಿದರು. ‘ನಾಳೆ ಮಗಳನ್ನು ಶಾಲೆಗೆ ಕಳಿಸದಿದ್ದರೆ ನಾನೇ ಮನೆಗೆ ಬರುತ್ತೇನೆ ‘ ಎಂದು. ಅಂತೂ ತಂಗಿಯೇ ಅಟ್ಟ ಹತ್ತಿ ಚೀಲ ತೆಗೆದು ಕೊಟ್ಟಿದ್ದಾಯಿತು. ಹೀಗೇ ಅಪ್ಪ, ಈ ತರಹದ ಶಿಕ್ಷೆಗಳು ತುಂಬಾ ಇವೆ. ಈಗ ಅಪ್ಪ ಮನೆಗೆ ಬಂದಾಗ ನೆನಪಿಸಿಕೊಂಡು ನಗ್ತಾ ಇರ್ತೇವೆ. ಹಾಗಂತ ಅಪ್ಪ ಬರಿಯ ಸಿಟ್ಟನ್ನೊಂದೇ ತೋರಿದವರಲ್ಲ. ನಮಗೆ ಯಾವುದಕ್ಕೂ ಕೊರತೆಯಿಲ್ಲದಂತೆ ಬೆಳೆಸಿದವರು.

ಭಟ್ಕಳ ಟಾಕೀಸ್ ನಲ್ಲಿ ಬಂದ ವಿಷ್ಣುವರ್ಧನ್  ಯಾವ ಸಿನಿಮಾಗಳೂ miss ಆಗಿಲ್ಲ. ಯಕ್ಷಗಾನಗಳಂತೂ ಒಂದನ್ನೂ ಬಿಟ್ಟ ನೆನಪಿಲ್ಲ. ರಾಮಾಯಣ, ಮಹಾಭಾರತದ ಕಥೆಗಳನ್ನು ಬಹು ಸುಂದರವಾಗಿ ಹೇಳ್ತಾರೆ ಅಪ್ಪ. ಅದರಿಂದ ಜೀವನ ಪಾಠಗಳನ್ನು ಕಲಿಸಲು ಪ್ರಯತ್ನಿಸುತ್ತಿದ್ದ ಅಪ್ಪಯ್ಯ. ಸ್ವಲ್ಪ ಅತೀ ಎನಿಸುವಷ್ಟು ಶಿಸ್ತಿನ ಜೀವನದ ಜೊತೆಗೆ (ಈಗಿನ ಕಾಲಕ್ಕೆ ಹೋಲಿಸಿದರೆ) ಎಲ್ಲವನ್ನೂ ಅನುಭವಿಸಿದ್ದೇವೆ. ನಮ್ಮ ಬಾಲ್ಯದಲ್ಲಿ ಬಹು ಮುಖ್ಯವಾಗಿ ಅಪ್ಪ ಮತ್ತು ಆಯಿ ಕೇವಲ ಮಕ್ಕಳಿಗಾಗೇ ಮುಡಿಪಾಗಿಟ್ಟ ಜೀವನ. ಇಂದಿಗೂ ನಮಗೆ ಆದರ್ಶ. ನಮ್ಮ ಮಕ್ಕಳು ಬೆಳೆದು ನಿಂತ ಈ ಸಂದರ್ಭದಲ್ಲಿ ನಿಜವಾಗಿಯೂ ಇದರ ಮಹತ್ವ ಅರ್ಥವಾಗುತ್ತಿದೆ.

ಅಪ್ಪನ ವೃತ್ತಿ ಜೀವನದಲ್ಲೂ ಅಪ್ಪ ಹಾಗೆಯೇ ಶಿಸ್ತು. ಕ್ರಮಬದ್ಧ ಜೀವನ ನಡೆಸಿದವರು. ಭಟ್ಕಳದಲ್ಲಿ ಇದ್ದಾಗ ನಮಗೆ ಬಹುವಾಗಿ ಖುಷಿ ಕೊಟ್ಟಿದ್ದು, ಜನಗಣತಿ. ಮೂವತ್ತು ಜನಗಳಿಗಿಂತ ಜಾಸ್ತಿ ಇರುವ ಒಂದೊಂದು ಕುಟುಂಬಗಳು, ಅವರುಗಳ ಹೆಸರು ನಮಗೆ ನಗು ಬರಿಸುತ್ತಿತ್ತು. ಅದನ್ನೆಲ್ಲ ಕಚ್ಚಾ file ನಿಂದ ಪಕ್ಕಾ ಮಾಡಲು ನಾವು ಅಪ್ಪನಿಗೆ ಸಹಾಯ ಮಾಡುತ್ತಿದ್ದೆವು. ಅಪ್ಪ ಸಿಟ್ಟಿಗೆ ಹೆಸರಾದಂತೇ, ಅವರ ಧಾರಾಳತನಕ್ಕೂ ಬಹುವಾಗಿ ಪ್ರಖ್ಯಾತ. ಈಗಲೂ ಬಹುಶಃ ಸಂತೆಗೆ ತರಕಾರಿ ತರಲು ಹೋದರೆ ಯಾರಲ್ಲಿಯೂ ಐದು ಪೈಸೆ ಚೌಕಾಸಿ ಮಾಡುವುದು ಇರಲಿ, ಎರಡು ಚೇಂಜ್ ವಾಪಸ್ ಕೇಳದೇ ಬರ್ತಾನೆ. ಈ ನನ್ನ ಅಪ್ಪಯ್ಯ. ಯಾವ ತರಕಾರಿಗೆ ಎಷ್ಟು ರೇಟು ಅಂತ ಯಾವತ್ತೂ ಗೊತ್ತಿರುವುದಿಲ್ಲ ಇವನಿಗೆ. ಇನ್ನು ಬಸ್ಸಿನ ಟಿಕೆಟ್ ತೆಗೆಯುವ ರೂಢಿ ಇನ್ನೂ ಮಜ. ಅವನು ಹತ್ತಿದ ಬಸ್ ನಲ್ಲಿ ನಮ್ಮ ಊರಿನ ಬೇರೆ ಯಾರೂ ಟಿಕೆಟ್ ಗೆ ದುಡ್ಡು ತೆಗೆಯಲ್ಲ… ಎಲ್ಲೋ ಒಮ್ಮೆ ಪರಿಚಯವಾದ ಮುಖ ಕಂಡರೂ ಸಾಕು, ಅಪ್ಪಯ್ಯನೇ ಅವರ ಪ್ರಯಾಣಕ್ಕೂ ಜವಾಬ್ದಾರ.

aa1

ಮೂರು ಜನ ಹೆಣ್ಣು ಮಕ್ಕಳನ್ನು ಇಷ್ಟು ಓದಿಸಿದರೂ ಯಾರಾದರೂ ಅಪ್ಪನಲ್ಲಿ ಕೇಳಿ ನೋಡಿ ಕಾಲೇಜಿನ admission ಹೇಗೆ ಮಾಡೋದು ಅಂತ ಊಹ್ಞೂಂ…. ಖಂಡಿತ ಅಪ್ಪನಿಗೆ ಗೊತ್ತಿಲ್ಲ. ನಮ್ಮ ನಮ್ಮ ಕೆಲಸಗಳಿಗೆ ನಾವೇ ಜವಾಬ್ದಾರರು. ದೂರದ ಧಾರವಾಡದಲ್ಲಿ ಸ್ನಾತಕೋತ್ತರ ಪದವಿ admission, ಅಲ್ಲಿಯ ಹಾಸ್ಟೆಲ್ ಅಡ್ಮೀಶನ್ ಕೂಡ ನನ್ನ ಚಿಕ್ಕಪ್ಪನ ಸಹಾಯ ಪಡೆದು ಮಾಡಿಕೊಂಡಿದ್ದು ನಾನು. ಅದಕ್ಕೆ ಬೇಕಾದ ಹಣಕಾಸಿನ ವಿಷಯ ಮಾತ್ರ ಅಪ್ಪನ ಪರಿಧಿಯಲ್ಲಿ ಬರುವುದು. ಹೀಗೇ ನನ್ನ ಅಪ್ಪಯ್ಯ ಸ್ವಲ್ಪ ಭಿನ್ನ. ಈಗ ಎಲ್ಲಾದರೂ ಅವನು ಬಂದಾಗ ಬೇಜಾರು ಮಾಡಿಕೊಳ್ತಾನೆ. ನಾನು ತುಂಬಾ ಶಿಕ್ಷೆ ಕೊಟ್ಟಿದ್ದೇನೆ ನಿಮಗೆಲ್ಲಾ ಅಂತ. ನಾವು ಯಾವತ್ತೂ ಅದಕ್ಕೆ ಬೇಜಾರೇ ಮಾಡ್ಕೊಂಡಿಲ್ಲ ಅಪ್ಪಯ್ಯ ಅಂತೀವಿ. ನಿಜ. ಅವನು ಆಗ ಅಷ್ಟು ಅಚ್ಚುಕಟ್ಟಿನ ಜೀವನ ನಮಗೆ ಕಲಿಸಿ ಕೊಟ್ಟಿದ್ದು ಈಗಲೂ ನಮ್ಮನ್ನು ಕಾಪಾಡುತ್ತಿದೆ. ವಿದ್ಯೆಯ ಮಹತ್ವ, ಶಿಸ್ತು, ಪ್ರೀತಿ, ಸುಖ ದುಃಖ ಎಲ್ಲವೂ ಸಂಸಾರದ ಒಂದು ಭಾಗ.

ಎಲ್ಲವನ್ನೂ ಸಮನಾಗಿ ಎದುರಿಸಬೇಕೆಂಬುದನ್ನು ಅಪ್ಪ ಕಲಿಸಿ ಕೊಟ್ಟಿದ್ದಾರೆ. ಆದರೂ ಅಪ್ಪ ಮತ್ತು ಆಯಿ ಇಬ್ಬರೂ ಬಹುವಾಗಿ ಮಹತ್ವ ಕೊಟ್ಟಿದ್ದು ವಿದ್ಯೆಗೆ. ಮೂರೂ ಹೆಣ್ಣು ಮಕ್ಕಳಿಗೂ ಒಳ್ಳೆಯ ಶಿಕ್ಷಣ ಒದಗಿಸಿದರು. ಪರೀಕ್ಷೆಯಲ್ಲಿ 25ಕ್ಕೆ 24 ಮಾರ್ಕ್ಸ್ ಬಿದ್ದರೂ ಒಂದು ಅಂಕಕ್ಕಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ನಾನು puc ಎರಡನೇ ವರ್ಷ ತುಂಬಾ ಕಡಿಮೆ ಅಂಕ ಪಡೆದಾಗ ಬಹುಶಃ ಎರಡು ತಿಂಗಳ ಕಾಲ ಮಾತನ್ನೇ ಆಡಿಸಿರಲಲ್ಲಿ ಅಪ್ಪಯ್ಯ. ಡಿಗ್ರಿ ಓದಲು ಅನುಮತಿಯೂ ಕೊಟ್ಟಿರಲಿಲ್ಲ. ಆದರೂ ಅದು ಹೇಗೊ ಅದೃಷ್ಟ. ಡಿಗ್ರಿ ಮಾಡುವ ಅವಕಾಶ ಒದಗಿ ಬಂತು. ಆಮೇಲೆ ಡಿಗ್ರಿಯಲ್ಲಿ ಒಳ್ಳೆಯ percentage ಬಂದಾಗ ಅವರು ಪಟ್ಟ ಸಂಭ್ರಮ ಈಗಲೂ ಕಣ್ಣ ಮುಂದಿದೆ. ಆದರೆ ಕಾಲದ ಮಹಿಮೆ. ಬಾಲ್ಯದಿಂದ ಕೇವಲ ಶಿಕ್ಷಣಕ್ಕೇ ಮಹತ್ವ ಕೊಟ್ಟ ಅಪ್ಪಯ್ಯ. ಸ್ನಾತಕೋತ್ತರ ಪದವಿಯ ನಂತರ ಮುಂದೆ ಓದಲು ನಿರಾಕರಿಸಿದರು. ಅದು ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಇರುವ ಮದುವೆಯ ಪ್ರಾಮುಖ್ಯತೆಗೇ ಹೊರತೂ ಬೇರೇನಿಲ್ಲ. ಮನೆಯಲ್ಲಿ ಹಿರಿಯ ಮಗಳಾದ ಕಾರಣ ಅಪ್ಪಯ್ಯನ ಈ ನಿರ್ಧಾರಕ್ಕೆ ನಾನೂ ಸಮ್ಮತಿಯಿತ್ತು. ಕಾಲೇಜು ಲೆಕ್ಚರರ್ ಆಗಿ ಎರಡು ವರ್ಷ ಕೆಲಸ ಮಾಡಿದೆ. ಪ್ರತೀ ತಿಂಗಳೂ ಬರುವ ಪಗಾರು ಎಲ್ಲೂ ಸಾಲದೇ, ತಿಂಗಳ ಮಧ್ಯದಲ್ಲಿಯೇ ಅಪ್ಪನಲ್ಲಿ ಸಾಲ ಮಾಡಿ job ಮಾಡಿರುವ ಹಿರಿಮೆ ನನ್ನದು.

ತಿಂಗಳ ದ್ವಿತೀಯಾರ್ಧದಲ್ಲಿ ಚಾ- ತಿಂಡಿ, ಸೀರೆ ಎಲ್ಲ ಅಪ್ಪನ sponsorship. ಅಪ್ಪನ ಹತ್ರ ದುಡ್ಡ ಇಸಕೊಂದು job ಮಾಡಿದ ಧೀರ ಮಹಿಳೆ ನಾನು. ನಮ್ಮ ಮೂರು ಜನರ ಮದುವೆ, ಮೊಮ್ಮಕ್ಕಳು ಎಲ್ಲ ಜವಾಬ್ದಾರಿಗಳನ್ನೂ ಯಶಸ್ವಿಯಾಗಿ ನಿಭಾಯಿಸಿದ ಅಪ್ಪಯ್ಯ. ಈಗ ಊರಿನಲ್ಲಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ದಿನಕ್ಕೊಮ್ಮೆ ಫೋನ್ ಮಾಡಿ ಮಾತನಾಡಿಸುವುದು ರೂಢಿ. ಎರಡು
ತಿಂಗಳಿಗೊಮ್ಮೆಯಾದರೂ ಬಂದು ಹೋಗುತ್ತಿದ್ದರು. ಈಗ ಈ ಕೊರೋನಾ ಕೃಪೆ ಯಾವಾಗ ಮುಗಿಯುವುದೋ ಗೊತ್ತಿಲ್ಲ.

ಲೇಖನ : ಮಾಲತಿ ಗಣೇಶ ಭಟ್
amma

ಮಾಲತಿಯವರ ಹಿಂದಿನ ಲೇಖನ :

0 0 votes
Article Rating

Leave a Reply

1 Comment
Inline Feedbacks
View all comments
Jyothi

Super malathi
Keep writing
Appa always a hero

From.
Jyothi girish

Home
Search
All Articles
Videos
About
1
0
Would love your thoughts, please comment.x
()
x
%d bloggers like this:
Aakruti Kannada

FREE
VIEW