ನಿಮ್ಮ ಜೀವನದ ಅಮೂಲ್ಯ ನಿರ್ಧಾರಗಳನ್ನ ಮಾನ ಮರ್ಯಾದೆಗೆ ಅಂಜಿ ಆ ಸಮಯಕ್ಕೆ ತಗೆದುಕೊಳ್ಳದೆ ಸುಮ್ಮನೆ ಕೂಡಬೇಡಿ, ಧ್ವನಿಯಾಗಿ. ಬದುಕು ನಿಮ್ಮ ಕೈಯಲ್ಲಿದೆ ಅದನ್ನು ಮುಳಗಿಸುವುದು ಅಥವಾ ತೇಲಿಸುವುದು ನಿಮ್ಮ ನಿರ್ಧಾರದ ಮೇಲೆ ಬಿಟ್ಟದ್ದು, ತಪ್ಪದೆ ಮುಂದೆ ಓದಿ…
ಮದುವೆ ಮನೆಯಲ್ಲಿ ಕಳವಳದ ವಾತಾವರಣ ಕಾರಣ ಕೊಟ್ಟ ವರದಕ್ಷಿಣೆ ಕಡಿಮೆಯಾಯಿತೆಂದು ವರನು ಮಂಟಪಕ್ಕೆ ಬರಲು ನಿರಾಕರಿಸಿದ. ಈ ಸುದ್ದಿ ಮದು ಮಗಳಾಗಿ ಸಿಂಗಾರ ಮಾಡಿಸಿಕೊಳ್ಳುತಿದ್ದ ಹುಡುಗಿಯ ಕಿವಿಗೂ ಬಿತ್ತು.
ಅಂದರೆ ಇದಾಗಲೇ ಕೊಟ್ಟ ಮಾತಿನಂತೆ ಹತ್ತು ಲಕ್ಷ ಕ್ಯಾಶ್, ಇಪ್ಪತ್ತೈದು ಪವನು ಬಂಗಾರ, ಹೊಚ್ಚ ಹೊಸ ಬೈಕ್ ಎಲ್ಲವೂ ಕೊಟ್ಟರೂ ಇದೆಂತಹ ಹುಚ್ಚುತನ ಎಂದು ಯೋಚಿಸಿ, ಇಂತಹವನೊಂದಿಗೆ ( ಧನ ಪಿಶಾಚಿ) ತಾನು ಸಂತೋಷದಿಂದ ಇರಲು ಸಾಧ್ಯವೇ ಎಂದು ಯೋಚಿಸಿದಳು. ಪುಣ್ಯಕ್ಕೆ (ಒತ್ತಾಯಕ್ಕೆ ಮಣಿಯದೆ) ತನ್ನ ಕನ್ಯತ್ವ ಅರ್ಪಿಸದೆ. ಇದ್ದದ್ದು ಒಳಿತೇ ಆಯಿತು ಎಂದು ಯೋಚಿಸಿದವಳೇ ಚಂಡಿ ಚಾಮುಂಡಿಯಂತೆ ಮಂಟಪದ ಮುಂದೆ ನಿಂತೇ ಬಿಟ್ಟಳು. ಈಗಾಗಲೇ ಮಂಟಪದಲ್ಲಿ ಗುಸುಗುಸು ಆಗಲೇ ಶುರು ಆಗಿತ್ತು.
ಸಭೆಯನ್ನುದ್ದೇಶಿಸಿ ಆಕೆ ” ಬಂದವರೆಲ್ಲರೂ ದಯವಿಟ್ಟು ಊಟವನ್ನು ಮುಗಿಸಿ ಹೋಗಬೇಕು. ಇಂತಹ ಧನ ಪಿಶಾಚಿ ಜನರ ಮಧ್ಯೆ ನಾನು ಬಾಳಲಾರೆ ಅಥವಾ ಇವರು ನನ್ನನ್ನು ಬಾಳಲೂ ಬಿಡರು ಈ ಮದುವೆಯನ್ನು ನಾನೇ ರದ್ದು ಗೊಳಿಸುತ್ತೇನೆ ಎಂದು ಕುತ್ತಿಗೆಯಲ್ಲಿದ್ದ ಮಾಲೆಯನ್ನು ಕಿತ್ತು ಬಿಸಾಡಿದಳು.
ಕೂಡಲೇ ಹಿರಿಯರೊಬ್ಬರು ಎದ್ದು ನಿಂತು ಚಪ್ಪಾಳೆ ತಟ್ಟಿ ” ಮಗೂ, ನಿನ್ನ ನಿರ್ಧಾರ ಸರಿಯಾಗಿದೆ. ಸಮಾಜಕ್ಕೆ ಹೆದರಿ, ಮರ್ಯಾದೆಗೆ ಹೆದರಿ ಎಷ್ಟೋ ಹೆಣ್ಣು ಮಕ್ಕಳು ತಮ್ಮ ಅಮೂಲ್ಯ ಜೀವವನ್ನು ಕಳಕೊಂಡಿದ್ದಾರೆ. ನಿನ್ನ ಈ ನಿರ್ಧಾರ ಎಲ್ಲರಿಗೂ ಮಾದರಿಯಾಗಲಿ ನಾವು ಬದಲಾಗಬೇಕಾಗಿದೆ ” ಎಂದು ಹೇಳಿ ನಿಂತಲ್ಲಿಂದಲೆ ಸಭೆಯನ್ನು ನೋಡಿದರು.ಎಲ್ಲರೂ ಚಪ್ಪಾಳೆಯನ್ನು ತಟ್ಟಿ ನಿರ್ಧಾರವನ್ನು ಸ್ವಾಗತಿಸಿದರು.
- ವಸುಧಾ ಪ್ರಭು – ಮುಂಬೈ
