ನಿರ್ಣಯ – ಸುಮಾ ಉಮೇಶ್

ನಾಳೆ ಏನು ? …ಯಾವ ಕಡೆ ವಾಲಿದರೂ ನಿದ್ದೆ ಬರ್ತಿಲ್ಲ. ತಲೆ ಕೆಟ್ಟಿ ನಾಲ್ಕು ಹೋಳು ಆಗೋದು ಬಾಕಿ ಇತ್ತು. ನಾಳೆ ಏನ್ ಮಾಡ್ಲಿ?…ಹೀಗೆ ಪ್ರಶ್ನೆ ಚಿಂತೆ..ಅದಕ್ಕೆ ಯಜಮಾನ್ರು ಕೊಟ್ಟ ಉತ್ತರ ನಿರಾಳವಾಯಿತು. ಆ ಉತ್ತರ ಏನು ಅಂತ ಮುಂದೆ ಓದಿ…

ಅಬ್ಬಾ… ಏನು ಮಾಡಲಿ… ಹೇಗೆ ನಿರ್ಣಯ ತೆಗೆದುಕೊಳ್ಳಲಿ ಅಂತ ಗೊತ್ತಾಗದೇ ತಲೆ ಕೆಟ್ಟು ಮೊಸರಾಯಿತು.. ಇಂಥ ಸಂದಿಗ್ಧ ಯಾರಿಗೂ ಬಂದಿರಲಿಕ್ಕಿಲ್ಲ.

ತಲೆ ಅಕ್ಷರಶಃ ಸಿಡಿದು ಹೋಗುವ ಹಾಗಾಯಿತು. ಸುತ್ತಲೂ ಮೌನ ತುಂಬಿದ ಯಾವುದೇ ತೀರ್ಮಾನಕ್ಕೆ ಬರಲಾಗದ ಆ ರಾತ್ರಿ.. ಕಳೆಯಲೇ ಕಷ್ಟವಾಯಿತು. ಹೇಗೆ ಹೇಳಲಿ. ಯಾರಿಗೆ ಅಂತ ಸಮಾಧಾನ ಮಾಡಲಿ. ನಾನು ಈಗ ಏನೇ ನಿರ್ಣಯ ತೆಗೆದುಕೊಂಡರೂ ಅದು ಮತ್ತೊಬ್ಬರಿಗೆ ಬೇಸರವಾಗುವುದು ಖಂಡಿತಾ.

ವಿಶಾಲ ಮನಸ್ಸಿನವರು ನಾನು ತೆಗೆದುಕೊಂಡ ನಿರ್ಣಯ ಒಪ್ಪಿಕೊಳ್ಳಬಹುದು. ಆದರು ಮನಸ್ಸು ಯಾಕೋ ಚಡಪಡಿಸಿತು. ಕಾಣದ ದೇವರಿಗೆ ಕೈ ಮುಗಿದೆ. ಓ ಭಗವಂತ… ನನಗೇಕೆ ಇಂಥ ಪರೀಕ್ಷೆ ಒಡ್ಡಿದೇ.. ನಾನೇನು ಅಪರಾಧ ಎಸಗಿರುವೆ.. ನನ್ನ ಕಷ್ಟ ನಿನಗೆ ಕಾಣುವುದಿಲ್ಲವೇ.. ಎಲ್ಲರೂ ಹೇಳುವಂತೆ ನೀನು ಕಲ್ಲಾದೆಯಾ.. ಪಾರು ಮಾಡು ತಂದೆ.. ಎನ್ನುತ್ತ ಕೈ ಮುಗಿದೆ. ಎದೆಯಲ್ಲಿ ಏನೋ ಚಳಕು ಹೊಡೆದ ಹಾಗಾಗಿ ಮೈಯೆಲ್ಲಾ ಬೆವರಿತು. ಎದ್ದು ಗಟಗಟ ಎರಡು ಲೋಟ ನೀರು ಕುಡಿದು ಸ್ವಲ್ಪ ಸುಧಾರಿಸಿಕೊಂಡೆ.. ಕೈ ಕೈ ಹೊಸೆಯುತ್ತಾ ಅರ್ಧರಾತ್ರಿಯಲ್ಲಿ ಕೋಣೆಯ ತುಂಬಾ ಶತಪಥ ಒಂದೆರಡು ಹೆಜ್ಜೆ ಹಾಕಿ ಮತ್ತೆ ಬಂದು ಸ್ವಸ್ಥಾನದಲ್ಲಿ ಮಲಗಿ ತಾಯಿಗೆ ಫೋನ್ ಮಾಡಿ ಒಮ್ಮೆ ಮಾತನಾಡಲೇ ಎಂದು ಆಲೋಚಿಸಿ ನಂಬರ್ ತಿರುಗಿಸಿದೆ.. ತಕ್ಷಣ ಜ್ಞಾನೋದಯ ಆಗಿ ಮನಸ್ಸು ಎಚ್ಚರಿಸಿತು… ನಿನಗಿರುವ ತಲೆನೋವನ್ನು ವಯಸ್ಸಾದವರಿಗೆ ಅದು ಅರ್ಧರಾತ್ರಿಯಲ್ಲಿ ಫೋನ್ ಮಾಡಿ ಹೇಳುವುದು ಸರಿಯೇ ಎಂದು..ಹೋಗಲಿ.. ಜೊತೆಯಲ್ಲಿ ಇರುವ ಅತ್ತೆ ಮಾವನ ಬಳಿ ನನಗೆ ಒದಗಿರುವ ಈ ಸಂಧಿಗ್ಧತೆ ವಿವರಿಸಿ ಸಲಹೆ ಪಡೆಯಲೇ.. ಉಹೂಂ.. ಯಾಕೋ ಯಾವುದೂ ಉಚಿತವೆನಿಸಲಿಲ್ಲ. ಪಕ್ಕದಲ್ಲಿ ಸುಖ ನಿದ್ರೆಯಲ್ಲಿದ್ದ ನನ್ನವರ ನೋಡಿ ಒಂದು ಕ್ಷಣ ಅಸೂಯೆಯಾಯಿತು. ಆದರು ಅವರ ನಿದ್ರಾಭಂಗ ಮಾಡುವ ಮನಸ್ಸಾಗಲಿಲ್ಲ. ಆದರೆ ನನ್ನ ಮನದ ಬೇಗುದಿ ಇವರಲ್ಲದೇ ಇನ್ಯಾರು ಪರಿಹರಿಸಲು ಸಾಧ್ಯ ಅನ್ನಿಸಿತು. ನನ್ನ ಉಸಿರಾಟ ಜೋರಾಯಿತು. ಇವರ ಗಮನ ಸೆಳೆಯಲು ಮೆಲ್ಲಗೆ ಕೆಮ್ಮಿದೆ. ತಕ್ಷಣ ಎದ್ದು ಕೂತ ಇವರ ಹತ್ರ ಎಲ್ಲ ಹೇಳಿಬಿಟ್ಟೆ. ನಾನೆಣಿಸಿದಂತೆ ಬಹಳ ಮೇಧಾವಿಯಾದ ನನ್ನವರು ಸೂಕ್ತ ಸಲಹೆ ಕೊಟ್ಟು.. ಇನ್ನಾದರೂ ಹಾಯಾಗಿ ಮಲಗು ಅಂದರು.. ತಕ್ಷಣವೇ ನಾನು ಇವರು ಹೇಳಿದ ಸಲಹೆಯನ್ನು ಸ್ವೀಕರಿಸಿ ಬೆಳಿಗ್ಗೆ ಕಾರ್ಯಪ್ರವೃತ್ತಗೊಳಿಸಲು ನಿರ್ಧರಿಸಿ ಹಾಯಾಗಿ ಮಲಗಿದೆ.

ದೋಸೆ, ಇಡ್ಲಿ ,‌ ಪೂರಿ, ಚಪಾತಿ, ಉಪ್ಪಿಟ್ಟು, ಪೊಂಗಲ್, ರೊಟ್ಟಿ, ಶಾವಿಗೆ ಇನ್ನೂ ಅನೇಕ ತಿಂಡಿಗಳ ಸರದಿ ಮುಗಿದಿತ್ತು. 15 ದಿನದಲ್ಲಿ ಮತ್ತೊಮ್ಮೆ ರಿಪೀಟ್ ಆದ್ರೆ ಒಬ್ಬೊಬ್ಬರ ಮುಖ ಒಂದೊಂದು ಕಡೆ. ಮಾವನಿಗೆ ಪೂರಿ ಬೇಡವಂತೆ, ಇವರಿಗೆ ಉಪ್ಪಿಟ್ಟು ಬೇಡ, ನಮ್ ಅತ್ತೆಗೆ ಪಲಾವ್ ಬೇಡ…ನಂಗೆ ತಿಂಡಿ ಮಾಡೋದೇ ಬೇಡವಾಗಿತ್ತು. ನಾಳೆ ಹೋಟೆಲ್ ಇಂದ ತಂದು ತಿಂದರಾಯಿತು…ಸುಮ್ನೆ ಈಗ ಹಾಯಾಗಿ ಮಲಗು ಮಹರಾಯಿತಿ ಅಂತ ಇವರು ಹೇಳಿದ ಮೇಲೆ ನಿರಾಳ ಆಯ್ತು. ಇಷ್ಟು ಹೊತ್ತು ನಿಮ್ ತಲೆಯಲ್ಲಿ ಹುಳ ಬಿಟ್ಟಿದ್ದಕ್ಕೆ I AM SO SORRY


  • ಸುಮಾ ಉಮೇಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading