ಗ್ಯಾಸ್ಟ್ರಿಕ್ ಟ್ರಬಲ್ ಗೆ ನೀಡುವ ಔಷಧಿಗಳು ಅನೇಕ ವಿಧಗಳು

ಗ್ಯಾಸ್ಟ್ರಿಕ್ ಟ್ರಬಲ್ ಗೆ ನೀಡುವ ಔಷಧಿಗಳಲ್ಲಿ ಅನೇಕ ವಿಧಗಳಿದ್ದು, ಔಷಧಿಗಳು ನಮ್ಮ ಪಾಲಿನ ಅಮೃತವಾಗಬೇಕು ಹೊರತು ಅದೇ ವಿಷವಾಗಿ ನಮ್ಮೊಳಗೇ ಸೇರಬಾರದು, ಗ್ರಾಸ್ಟ್ರಿಕ್ ಸಮಸ್ಯೆಯ ಕುರಿತು ಸುದರ್ಶನ್ ಪ್ರಸಾದ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಎದೆಯುರಿ, ಹೊಟ್ಟೆ ಉಬ್ಬರ, ಹುಳಿತೇಗು, ಅಜೀರ್ಣ ಮುಂತಾದ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಜನ ಗ್ಯಾಸ್ಟ್ರಿಕ್ ಆಗಿದೆ ಎಂದು ಹೇಳುವುದು ಕೇಳಿರುತ್ತೇವೆ. ಗ್ಯಾಸ್ಟ್ರಿಕ್ ಟ್ರಬಲ್ ಎನ್ನುವುದು ಇಂದು ಎಷ್ಟೊಂದು ಕಾಮನ್ ಆಗಿಬಿಟ್ಟಿದೆ ಎಂದರೆ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರನ್ನೂ ಒಂದಲ್ಲಾ ಒಂದು ದಿನ ಕಾಡದೇ ಹೋಗದು. ಹೀಗೆ ಲಕ್ಷಣಗಳು ಕಂಡೊಡನೆ ಮನೆ ಮದ್ದಿನ ಮೊರೆ ಹೋಗುವವರು ಒಂದಿಷ್ಟು ಜನರಾದರೆ ಮಾತ್ರೆಗಳ ಮೊರೆ ಹೋಗುವವರು ಇನ್ನೊಂದಿಷ್ಟು ಜನ. ಅದರಲ್ಲೂ ಗ್ಯಾಸ್ಟ್ರಿಕ್ ಮಾತ್ರೆಗಳು OTC (ಓವರ್ ದಿ ಕೌಂಟರ್) ಪ್ರಾಡಕ್ಟ್ಸ್ ಆಗಿರುವುದರಿಂದ ಮನಸೋ ಇಚ್ಛೆ ಸೇವಿಸುವುದು ಕೆಲವರ ಖಯಾಲಿ. ಅತಿಯಾದರೆ ಅಮೃತವೂ ವಿಷ ಎಂಬಂತೆ ಈ ಮಾತ್ರೆಗಳೂ ಆರೋಗ್ಯಕ್ಕೆ ಮಾರಕವಾಗಬಹುದು. ಆದ್ದರಿಂದ ಗ್ಯಾಸ್ಟ್ರಿಕ್ ಮಾತ್ರೆಗಳು ಎಂದರೆ ಯಾವುವು? ಅವುಗಳಲ್ಲಿ ಎಷ್ಟು ವಿಧ? ಅವುಗಳ ಸಾಧಕ ಬಾಧಕಗಳೇನು ಎಂಬ ಒಂದಿಷ್ಟು ಮಾಹಿತಿ ಎಲ್ಲರಿಗೂ ತಿಳಿದಿದ್ದರೆ ಒಳಿತು.

ನಮ್ಮ ದೇಹದ ಜೀರ್ಣಾಂಗ ವ್ಯೂಹವನ್ನು ಒಟ್ಟಾರೆಯಾಗಿ ಗ್ಯಾಸ್ಟ್ರೋಇಂಟಸ್ಟೈನಲ್ ಟ್ರಾಕ್ಟ್ ಎಂದು ಕರೆಯುತ್ತಾರೆ. ಇದರಲ್ಲಿ ಬರುವ ಗ್ಯಾಸ್ಟ್ರಿಕ್ ಭಾಗವು ನಮ್ಮ ಹೊಟ್ಟೆ ಅಥವಾ ಜಠರವನ್ನು ಪ್ರತಿನಿಧಿಸುತ್ತದೆ. ನಾವು ತಿಂದ ಆಹಾರ ಲಾಲಾರಸದೊಂದಿಗೆ ಬೆರೆತು ನೇರವಾಗಿ ತಲುಪುವುದು ಇದೇ ಗ್ಯಾಸ್ಟ್ರಿಕ್ ಭಾಗಕ್ಕೆ. ಅಲ್ಲಿ ಆಹಾರವನ್ನು ಜೀರ್ಣ ಮಾಡುವ ಕೆಲಸ ಡೈಲ್ಯೂಟ್ ಹೈಡ್ರೋಕ್ಲೋರಿಕ್ ಆಸಿಡ್ (HCl) ನದ್ದು. ಜಠರದ ಪೆರೈಟಲ್ ಜೀವಕೋಶಗಳಿಂದ ಬಿಡುಗಡೆಯಾಗುವ ಈ ಆಮ್ಲ (Acid) ಅದೆಷ್ಟು ಶಕ್ತಿಶಾಲಿ ಎಂದರೆ ಉಕ್ಕಿನ ಚಿಕ್ಕ ತುಂಡನ್ನೂ ಸಹಾ ಕರಿಗಿಸಬಲ್ಲದು. ಅಷ್ಟು ಶಕ್ತಿಶಾಲಿ ಆಮ್ಲದಿಂದ ನಮ್ಮ ಜಠರದ ಗೋಡೆಯನ್ನು ರಕ್ಷಿಸುವ ಕೆಲಸ ಮ್ಯೂಕಸ್ ಮೆಂಬ್ರೇನ್ ಎಂಬ ಪದರದ್ದು. ಈ ಪದರ ಮ್ಯೂಕಸ್ ಎಂಬ ಪ್ರತ್ಯಾಮ್ಲ (Alkaline) ದ್ರವವನ್ನು ಬಿಡುಗಡೆ ಮಾಡಿ ಆಮ್ಲದ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಹೀಗೆ ಬಿಡುಗಡೆಯಾಗುವ ಎರಡು ದ್ರವಗಳ ವ್ಯತ್ಯಾಸವೇ ಗ್ಯಾಸ್ಟ್ರಿಕ್ ಟ್ರಬಲ್. ಅತಿಯಾದ ಆಮ್ಲ ಶೇಕರಣೆಯಿಂದ ಅಸಿಡಿಟಿ ಉಂಟಾಗಿ ಹುಳಿತೇಗು, ಹೊಟ್ಟೆ ಉಬ್ಬರ, ಎದೆಯುರಿ ಕಾಣಿಸಿಕೊಂಡರೆ ಅತಿಯಾದ ಪ್ರತ್ಯಾಮ್ಲ ಬಿಡುಗಡೆಯಿಂದ ಅಜೀರ್ಣ ಮುಂತಾದವು ಕಾಣಿಸಿಕೊಳ್ಳುತ್ತವೆ.

ಹಾಗಾದರೆ ಇಷ್ಟೆಲ್ಲಾ ಪ್ರಕ್ರಿಯೆಯನ್ನು ಸರಿದೂಗಿಸಲು ಒಂದೇ ರೀತಿಯ ಔಷಧಿ ಇದೆಯೇ? ಎಂದರೆ ಖಂಡಿತಾ ಇಲ್ಲ. ಗ್ಯಾಸ್ಟ್ರಿಕ್ ಟ್ರಬಲ್ ಗೆ ನೀಡುವ ಔಷಧಿಗಳಲ್ಲಿ ಅನೇಕ ವಿಧಗಳಿದ್ದು ಅವುಗಳನ್ನು ಒಂದೊಂದಾಗಿ ನೋಡುವುದಾದರೆ..

ಫೋಟೋ ಕೃಪೆ : google

1. Antacids: ಇವು ಪ್ರತ್ಯಾಮ್ಲೀಯ ಗುಣ ಹೊಂದಿರುವ ಔಷಧಿಗಳು. ನೇರವಾಗಿ ಜಠರದ ಆಮ್ಲದೊಂದಿಗೆ ಪ್ರತಿಕ್ರಿಯಿಸಿ ತೀವ್ರತೆ ಕಡಿಮೆ ಮಾಡುವುದು ಇವುಗಳ ಕೆಲಸ. ಟ್ಯಾಬ್ಲೆಟ್, ಲಿಕ್ವಿಡ್, ಮತ್ತು ಗ್ರಾನ್ಯುಲ್ಸ್ ರೂಪದಲ್ಲಿ ಸಿಗುವ ಇವುಗಳನ್ನು ಸಾಮಾನ್ಯವಾಗಿ ಊಟದ ನಂತರ ಸೇವಿಸಲು ಶಿಫಾರಸ್ಸು ಮಾಡಲಾಗುತ್ತದೆ. ಲೈಮ್ ಸೋಡಾ, ಜೀರಾ ಸೋಡ ಮುಂತಾದ ಪಾನೀಯಗಳು ಸಹಾ ಇದೇ ಮಾದರಿಯಲ್ಲಿ ಕೆಲಸ ಮಾಡುವವಾಗಿದ್ದು ಕೆಲವರು ಅದನ್ನೇ ಗ್ಯಾಸ್ಟ್ರಿಕ್ ಟ್ರಬಲ್ ಉಪಶಮನಕ್ಕೆ ಬಳಸುತ್ತಾರೆ. Eno ಸಹಾ ಇದೇ ವಿಧದ ಗ್ರಾನ್ಯುಲ್ಸ್ ಆಗಿದ್ದು ನೀರಿನಲ್ಲಿ ಬೆರೆಸಿದಾಗ Tartaric acid ಮತ್ತು Sodium bicarbonate ಗಳ ಮಿಶ್ರಣದಿಂದ ಉತ್ಪತ್ತಿಯಾಗುವ ಕಾರ್ಬನ್ ಡೈಆಕ್ಸೈಡ್ ಬಳಸಿ ಹೊಟ್ಟೆಯಲ್ಲಿರುವ ಗ್ಯಾಸನ್ನು ಹೊರಹಾಕುತ್ತದೆ. ಆಂಟಾಸಿಡ್ ವಿಧದ ಔಷಧಿಗಳಿಗೆ ಉದಾಹರಣೆಯಾಗಿ Aluminium hydroxide, Magnesium hydroxide, Calcium carbonate ಮುಂತಾದವುಗಳನ್ನು ನೀಡಬಹುದು.

2. H2 Receptor Antagonists: ಈಗಾಗಲೇ ಮೇಲೆ ಹೇಳಿದ Parietal cell ಗಳು ಗ್ಯಾಸ್ಟ್ರಿಕ್ ಆಸಿಡ್ ಬಿಡುಗಡೆಗೊಳಿಸುವ ಮೊದಲು ಅವುಗಳಲ್ಲಿರುವ Histamine 2 receptor ಗಳು ಮೆದುಳಿನಿಂದ ಬರುವ ಸೂಚನೆಗಳಿಂದ ಪ್ರಚೋದನೆಗೆ ಒಳಪಡಬೇಕಾಗುತ್ತದೆ. ಅಂತಹಾ H2 receptor ಗಳಿಗೆ ಅಂಟಿಕೊಳ್ಳುವ ಈ ವಿಧದ ಔಷಧಿಗಳು ಅವುಗಳನ್ನು ಬಂಧಿಸಿ ಗ್ಯಾಸ್ಟ್ರಿಕ್ ಆಸಿಡ್ ಬಿಡುಗಡೆಯನ್ನು ಕಡಿಮೆ ಮಾಡಿ ತನ್ಮೂಲಕ ಗ್ಯಾಸ್ಟ್ರಿಕ್ ಟ್ರಬಲ್ ಸಮಸ್ಯೆಯನ್ನು ನಿವಾರಿಸುತ್ತವೆ. Ranitidine, Cimetidine, Famotidine ಮುಂತಾದವು ಈ ವಿಧದ ಔಷಧಿಗೆ ಉದಾಹರಣೆಗಳು.

3. Proton Pump Inhibitors: ಗ್ಯಾಸ್ಟ್ರಿಕ್ ಆಸಿಡ್ ಬಿಡುಗಡೆಯಾಗಲು H⁺/K⁺ ATPase proton pump ಎಂಬ ಪ್ರಕ್ರಿಯೆ ನಡೆಯಬೇಕಾಗುತ್ತದೆ. ಈ ಪ್ರೋಟಾನ್ ಪಂಪ್ ಗಳನ್ನು ನಿಷ್ಕ್ರಿಗೊಳಿಸಿ ಗ್ಯಾಸ್ಟ್ರಿಕ್ ಆಸಿಡ್ ಬಿಡುಗಡೆಯನ್ನು ತಡೆಯುವುದು ಈ ವಿಧದ ಔಷಧಿಗಳ ಕಾರ್ಯವಿಧಾನ. ಅತೀ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವ ಇವು ಅತಿ ಹೆಚ್ಚು ಸಮಯದವರೆಗೂ ಗ್ಯಾಸ್ಟ್ರಿಕ್ ಆಸಿಡ್ ಬಿಡುಗಡೆಯನ್ನು ತಡೆ ಹಿಡಿಯುವುದರಿಂದ ಇವುಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ. ಇವುಗಳಿಗೆ ಉದಾಹರಣೆಯಾಗಿ Pantoprazole, Omeprazole, Lansoprazole ಮುಂತಾದ ಔಷಧಿಗಳನ್ನು ನೀಡಬಹುದು.

4. Promotility Agents: ಜೀರ್ಣಾಂಗ ವ್ಯೂಹದಲ್ಲಿರುವ ಆಹಾರವನ್ನು ವೇಗವಾಗಿ ಮುಂದೂಡುವ ಮುಖಾಂತರ ಜಠರದ ಮೇಲಿನ ಒತ್ತಡವನ್ನು ಕಡಿಮೆ ಮಾಡಿ ಗ್ಯಾಸ್ಟ್ರಿಕ್ ಟ್ರಬಲ್ ಗೆ ಪರಿಹಾರ ನೀಡುವುದು ಇವುಗಳ ಕೆಲಸ. ಇದಕ್ಕೆ ಉದಾಹರಣೆಯಾಗಿ Metoclopramide ಮೊದಲಾದ ಔಷಧಿಗಳನ್ನು ನೀಡಬಹುದು. ಜಠರದ ಸ್ನಾಯುಗಳನ್ನು ಪ್ರಚೋದಿಸಿ, ಸಂಕುಚನ ಕ್ರಿಯೆಯನ್ನು ಉತ್ತೇಜಿಸುವ ಇವು ಕರುಳಿನ ಮೇಲೆಯೂ ಪ್ರಭಾವ ಬೀರುವುದರಿಂದ ಆಹಾರವು ವೇಗವಾಗಿ ಹೊರಹಾಕಲ್ಪಡುತ್ತದೆ. ಇದರಿಂದ ಅಜೀರ್ಣವಾದ ಆಹಾರ ಜಠರಕ್ಕೆ ತೊಂದರೆ ನೀಡುವುದು ತಪ್ಪುತ್ತದೆ.

5. Prostaglandins: ಕೆಲವೊಂದು ಪ್ಲೋಸ್ಟಾಗ್ಲಾಂಡಿನ್ ಔಷಧಿಗಳಾದ Misoprostol ಮುಂತಾದವು ಜಠರದ ಪೆರೈಟಲ್ ಜೀವಕೋಶಗಳ ಮೇಲೆ ಪರಿಣಾಮ ಬೀರಿ ಗ್ಯಾಸ್ಟ್ರಿಕ್ ಆಸಿಡ್ ಉತ್ಪಾದನೆಗೆ ಬೇಕಾಗುವ cyclic AMP ಎಂಬ ರಸಾಯನಿಯದ ಬಿಡುಗಡೆಯನ್ನು ಕಡಿಮೆಗೊಳಿಸುತ್ತವೆ. ಅಷ್ಟೇ ಅಲ್ಲದೇ ಮ್ಯೂಕಸ್ ಮೆಂಬ್ರೇನ್ ಮೇಲೆ ಪರಿಣಾಮ ಬೀರುವ ಇವು ಪ್ರತ್ಯಾಮ್ಲೀಯ ಮ್ಯೂಕಸ್ ನ ಅತಿಯಾದ ಬಿಡುಗಡೆಗೆ ಕಾರಣವಾಗಿ ಆಮ್ಲೀಯತೆಯನ್ನು ಕಡಿಮೆ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.

ಫೋಟೋ ಕೃಪೆ : google

ಗ್ಯಾಸ್ಟ್ರಿಕ್ ಟ್ರಬಲ್ ನ ಪರಿಹಾರ ಇಷ್ಟೆಲ್ಲ ವಿಧದ ಪ್ರಕ್ರಿಯೆಗಳನ್ನು ಒಳಗೊಂಡಿದ್ದು ಯಾವುದೇ ಲಕ್ಷಣಗಳು ಕಂಡು ಬಂದ ತಕ್ಷಣ ಪೆಪ್ಪರ್ ಮಿಂಟ್ ತಿಂದ ಹಾಗೆ ಔಷಧಿ ಸೇವಿಸುವುದು ತಪ್ಪಾಗುತ್ತದೆ.

  • ಗ್ಯಾಸ್ಟ್ರಿಕ್ ಟ್ರಬಲ್ ಗೆ ಮೂಲ ಕಾರಣ ತಿಳಿಯದೇ ಔಷಧಿ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ವೈದ್ಯರು, ಫಾರ್ಮಸಿಸ್ಟ್ ಅಥವಾ ನರ್ಸಿಂಗ್ ಸಿಬ್ಬಂದಿಯ ಸಲಹೆ ಇಲ್ಲದೇ ಔಷಧಿಗಳ ಸೇವನೆ ಅಹಿತಕರ.
  • ಇವುಗಳ ಅತಿಯಾದ ಸೇವನೆಯಿಂದ ಮಲಬದ್ಧತೆ ಅಥವಾ ಡಯೇರಿಯಾ ಸಹಾ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು ಎಚ್ಚರಿಕೆಯಿಂದ ಮುಂದುವರೆಯುವುದು ಅವಶ್ಯಕ.
  • ಕೆಲವು ಗ್ಯಾಸ್ಟ್ರಿಕ್ ಮಾತ್ರೆಗಳು ದೇಹಕ್ಕೆ ಒಗ್ಗಿಕೊಂಡು ನಂತರ ಪರಿಣಾಮ ಬೀರದೇ ಇರುವ ಸಾಧ್ಯತೆ ಇರುವುದರಿಂದ ನಿರಂತರವಾಗಿ ಸೇವಿಸಬಾರದು.
  • ಕೆಲವೊಂದು ಔಷಧಿಗಳೊಂದಿಗೆ ಅದರಲ್ಲೂ ಮುಖ್ಯವಾಗಿ ಆಂಟಿಬಯೋಟಿಕ್ ಜೊತೆಗೆ ಗ್ಯಾಸ್ಟ್ರಿಕ್ ಮಾತ್ರೆಗಳನ್ನು ನೀಡಿರುತ್ತಾರೆ. ಆಗ ಅವುಗಳನ್ನು ತಪ್ಪದೇ ತೆಗೆದುಕೊಳ್ಳಬೇಕಾಗುತ್ತದೆ.
  • ಗ್ಯಾಸ್ಟ್ರಿಕ್ ಮಾತ್ರೆಯ ವಿಧದ ಆಧಾರದಲ್ಲಿ ಊಟದ ಮೊದಲು ಅಥವಾ ನಂತರ ಎನ್ನುವುದು ನಿರ್ಧಾರವಾಗುತ್ತದೆ. ಆದ್ದರಿಂದ ವೈದ್ಯಕೀಯ ಸಿಬ್ಬಂದಿಯ ಸೂಚನೆ ಅತ್ಯವಶ್ಯಕ.
  • ಅಲೋಪತಿ ಔಷಧಿಗಳ ಹೊರತಾಗಿ ಬೇರೆ ಔಷಧಿಗಳನ್ನು ಸೇವಿಸುತ್ತಿದ್ದಲ್ಲಿ ಸಂಬಂಧಪಟ್ಟ ಎಲ್ಲಾ ವೈದ್ಯರ ಸಲಹೆ ಪಡೆಯುವುದು ಸುರಕ್ಷಿತ.

ಔಷಧಿ ನಮ್ಮ ಪಾಲಿನ ಅಮೃತವಾಗಬೇಕು ಹೊರತು ಅದೇ ವಿಷವಾಗಿ ನಮ್ಮೊಳಗಿನ ಶಕ್ತಿಯನ್ನು ಕುಂದಿಸಬಾರದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಚಿಸಿ ಜಾಣ್ಮೆಯಿಂದ ಹೆಜ್ಜೆ ಇಡುತ್ತಾರೆ ಎಂಬ ಆಶಾವಾದ ವೈದ್ಯಕೀಯ ಲೋಕದ್ದು. ಒಳಿತನ್ನೇ ಆರಿಸಿಕೊಳ್ಳಿ, ಒಳಿತಾಗಲಿ…


  •  ಸುದರ್ಶನ್ ಪ್ರಸಾದ್

5 1 vote
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW